ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಅಂಬೋಽಪಾಖ್ಯಾನ ಪರ್ವ
ಅಧ್ಯಾಯ 180
ಸಾರ
ಪರಶುರಾಮ-ಭೀಷ್ಮರ ಮೊದಲನೆಯ ದಿನದ ಯುದ್ಧ (1-39).
05180001 ಭೀಷ್ಮ ಉವಾಚ।
05180001a ತಮಹಂ ಸ್ಮಯನ್ನಿವ ರಣೇ ಪ್ರತ್ಯಭಾಷಂ ವ್ಯವಸ್ಥಿತಂ।
05180001c ಭೂಮಿಷ್ಠಂ ನೋತ್ಸಹೇ ಯೋದ್ಧುಂ ಭವಂತಂ ರಥಮಾಸ್ಥಿತಃ।।
ಭೀಷ್ಮನು ಹೇಳಿದನು: “ರಣದಲ್ಲಿ ನಿಂತಿದ್ದ ಅವನಿಗೆ ನಗುತ್ತಾ ಹೇಳಿದೆನು: “ರಥದ ಮೇಲೆ ನಿಂತು ನೆಲದ ಮೇಲೆ ನಿಂತಿರುವ ನಿನ್ನೊಂದಿಗೆ ಯುದ್ಧಮಾಡಲು ಉತ್ಸಾಹವಾಗುತ್ತಿಲ್ಲ.
05180002a ಆರೋಹ ಸ್ಯಂದನಂ ವೀರ ಕವಚಂ ಚ ಮಹಾಭುಜ।
05180002c ಬಧಾನ ಸಮರೇ ರಾಮ ಯದಿ ಯೋದ್ಧುಂ ಮಯೇಚ್ಚಸಿ।।
ವೀರ! ಮಹಾಭುಜ! ರಣದಲ್ಲಿ ನನ್ನೊಂದಿಗೆ ಯುದ್ಧಮಾಡಲು ಬಯಸುವೆಯಾದರೆ ರಥವನ್ನೇರು! ಕವಚವನ್ನು ಧರಿಸು!”
05180003a ತತೋ ಮಾಮಬ್ರವೀದ್ರಾಮಃ ಸ್ಮಯಮಾನೋ ರಣಾಜಿರೇ।
05180003c ರಥೋ ಮೇ ಮೇದಿನೀ ಭೀಷ್ಮ ವಾಹಾ ವೇದಾಃ ಸದಶ್ವವತ್।।
ಆಗ ಆ ರಣದಲ್ಲಿ ರಾಮನು ನಗುತ್ತಾ ನನಗೆ ಹೇಳಿದನು: “ಭೀಷ್ಮ! ಮೇದಿನಿಯೇ ನನ್ನ ರಥ. ವೇದಗಳು ನಡೆಸುವ ಅಶ್ವಗಳಂತೆ.
05180004a ಸೂತೋ ಮೇ ಮಾತರಿಶ್ವಾ ವೈ ಕವಚಂ ವೇದಮಾತರಃ।
05180004c ಸುಸಂವೀತೋ ರಣೇ ತಾಭಿರ್ಯೋತ್ಸ್ಯೇಽಹಂ ಕುರುನಂದನ।।
ಗಾಳಿಯು ನನ್ನ ಸಾರಥಿ. ವೇದಮಾತರೆಯು ನನ್ನ ಕವಚ. ಕುರುನಂದನ! ಇವುಗಳಿಂದ ಸುರಕ್ಷಿತನಾಗಿ ನಾನು ರಣದಲ್ಲಿ ನಿನ್ನೊಂದಿಗೆ ಯುದ್ಧ ಮಾಡುತ್ತೇನೆ.”
05180005a ಏವಂ ಬ್ರುವಾಣೋ ಗಾಂಧಾರೇ ರಾಮೋ ಮಾಂ ಸತ್ಯವಿಕ್ರಮಃ।
05180005c ಶರವ್ರಾತೇನ ಮಹತಾ ಸರ್ವತಃ ಪರ್ಯವಾರಯತ್।।
ಗಾಂಧಾರೇ! ಹೀಗೆ ಹೇಳಿ ಸತ್ಯವಿಕ್ರಮಿ ರಾಮನು ನನ್ನನ್ನು ಮಹಾ ಶರಗಳ ಮಳೆಯಿಂದ ಎಲ್ಲ ಕಡೆಯಿಂದಲೂ ಮುಚ್ಚಿದನು.
05180006a ತತೋಽಪಶ್ಯಂ ಜಾಮದಗ್ನ್ಯಂ ರಥೇ ದಿವ್ಯೇ ವ್ಯವಸ್ಥಿತಂ।
05180006c ಸರ್ವಾಯುಧಧರೇ ಶ್ರೀಮತ್ಯದ್ಭುತೋಪಮದರ್ಶನೇ।।
ಆಗ ನಾನು ಜಾಮದಗ್ನ್ಯನನ್ನು ದಿವ್ಯ ರಥದ ಮೇಲೆ ಸರ್ವಾಯುಧಧರನಾಗಿ, ಶ್ರೀಮತ್ ಅದ್ಭುತ ಸುಂದರನಾಗಿ ವ್ಯವಸ್ಥಿತನಾಗಿದ್ದುದು ಕಂಡುಬಂದಿತು.
05180007a ಮನಸಾ ವಿಹಿತೇ ಪುಣ್ಯೇ ವಿಸ್ತೀರ್ಣೇ ನಗರೋಪಮೇ।
05180007c ದಿವ್ಯಾಶ್ವಯುಜಿ ಸನ್ನದ್ಧೇ ಕಾಂಚನೇನ ವಿಭೂಷಿತೇ।।
ಅವನ ಪುಣ್ಯ ಮನಸ್ಸಿನಿಂದ ನಿರ್ಮಿಸಿದ ರಥವು ನಗರದಂತೆ ವಿಸ್ತೀರ್ಣವಾಗಿತ್ತು. ಕಾಂಚನ ವಿಭೂಷಿತ ದಿವ್ಯಾಶ್ವಗಳನ್ನು ಕಟ್ಟಲಾಗಿತ್ತು. ಸನ್ನದ್ಧವಾಗಿತ್ತು.
05180008a ಧ್ವಜೇನ ಚ ಮಹಾಬಾಹೋ ಸೋಮಾಲಂಕೃತಲಕ್ಷ್ಮಣಾ।
05180008c ಧನುರ್ಧರೋ ಬದ್ಧತೂಣೋ ಬದ್ಧಗೋಧಾಂಗುಲಿತ್ರವಾನ್।।
ಆ ಮಹಾಬಾಹುವುವಿನ ಧ್ವಜವು ಸೋಮಾಲಂಕೃತ ಲಕ್ಷಣದ್ದಾಗಿತ್ತು. ಆ ಧನುರ್ಧರನು ತೂಣೀರಗಳನ್ನು ಕಟ್ಟಿಕೊಂಡಿದ್ದನು. ಉಗುರುಗಳಿಗೆ ಗೋಧಗಳನ್ನು ಕಟ್ಟಿಕೊಂಡಿದ್ದನು.
05180009a ಸಾರಥ್ಯಂ ಕೃತವಾಂಸ್ತತ್ರ ಯುಯುತ್ಸೋರಕೃತವ್ರಣಃ।
05180009c ಸಖಾ ವೇದವಿದತ್ಯಂತಂ ದಯಿತೋ ಭಾರ್ಗವಸ್ಯ ಹ।।
ಆ ಯೋಧನಿಗೆ ಭಾರ್ಗವನ ಅತ್ಯಂತ ಪ್ರಿಯ ಸಖ, ವೇದವಿದ ಅಕೃತವ್ರಣನು ಸಾರಥ್ಯವನ್ನು ಮಾಡುತ್ತಿದ್ದನು.
05180010a ಆಹ್ವಯಾನಃ ಸ ಮಾಂ ಯುದ್ಧೇ ಮನೋ ಹರ್ಷಯತೀವ ಮೇ।
05180010c ಪುನಃ ಪುನರಭಿಕ್ರೋಶನ್ನಭಿಯಾಹೀತಿ ಭಾರ್ಗವಃ।।
ಮನಸ್ಸಿನಲ್ಲಿ ಅತೀವ ಹರ್ಷಗೊಂಡು ಭಾರ್ಗವನು ಯುದ್ಧದಲ್ಲಿ ನನ್ನನ್ನು ಮುಂದೆ ಬಾ ಎಂದು ಪುನಃ ಪುನಃ ಕೂಗಿ ಕರೆಯುತ್ತಿದ್ದನು.
05180011a ತಮಾದಿತ್ಯಮಿವೋದ್ಯಂತಮನಾಧೃಷ್ಯಂ ಮಹಾಬಲಂ।
05180011c ಕ್ಷತ್ರಿಯಾಂತಕರಂ ರಾಮಮೇಕಮೇಕಃ ಸಮಾಸದಂ।।
ಆಗ ಆದಿತ್ಯನಂತೆ ಬೆಳಗುತ್ತಿದ್ದ, ಅನಾದೃಷ್ಯನಾದ, ಮಹಾಬಲ ಕ್ಷತ್ರಿಯಾಂತಕ ರಾಮನನ್ನು ಏಕನಾಗಿ ಏಕನನ್ನು ಎದುರಿಸಿದೆನು.
05180012a ತತೋಽಹಂ ಬಾಣಪಾತೇಷು ತ್ರಿಷು ವಾಹಾನ್ನಿಗೃಹ್ಯ ವೈ।
05180012c ಅವತೀರ್ಯ ಧನುರ್ನ್ಯಸ್ಯ ಪದಾತಿರೃಷಿಸತ್ತಮಂ।।
ಅವನು ಮೂರು ಬಾಣಗಳನ್ನು ಬಿಟ್ಟು ನನ್ನ ಕುದುರೆಗಳನ್ನು ತಡೆದಾಗ ನಾನು ರಥದಿಂದ ಕೆಳಗಿಳಿದು ಧನುಸ್ಸನ್ನು ಆ ಋಷಿಸತ್ತಮನ ಪಾದಗಳಲ್ಲಿಟ್ಟೆನು.
05180013a ಅಭ್ಯಗಚ್ಚಂ ತದಾ ರಾಮಮರ್ಚಿಷ್ಯನ್ದ್ವಿಜಸತ್ತಮಂ।
05180013c ಅಭಿವಾದ್ಯ ಚೈನಂ ವಿಧಿವದಬ್ರುವಂ ವಾಕ್ಯಮುತ್ತಮಂ।।
ಆಗ ದ್ವಿಜಸತ್ತಮ ರಾಮನನ್ನು ಅರ್ಚಿಸಿ ವಿಧಿವತ್ತಾಗಿ ಅಭಿವಂದಿಸಿ ಈ ಉತ್ತಮ ವಾಕ್ಯಗಳನ್ನು ಹೇಳಿದೆನು:
05180014a ಯೋತ್ಸ್ಯೇ ತ್ವಯಾ ರಣೇ ರಾಮ ವಿಶಿಷ್ಟೇನಾಧಿಕೇನ ಚ।
05180014c ಗುರುಣಾ ಧರ್ಮಶೀಲೇನ ಜಯಮಾಶಾಸ್ಸ್ವ ಮೇ ವಿಭೋ।।
“ರಾಮ! ನನಗಿಂತ ನೀನು ವಿಶಿಷ್ಟನಾಗಿದ್ದೀಯೆ. ಮತ್ತು ಅಧಿಕನಾಗಿದ್ದೀಯೆ. ಆದರೂ ಗುರು ಧರ್ಮಶೀಲನಾದ ನಿನ್ನೊಂದಿಗೆ ಯುದ್ಧ ಮಾಡುತ್ತಿದ್ದೇನೆ. ವಿಭೋ! ನನಗೆ ಜಯವನ್ನು ಆಶೀರ್ವದಿಸು!”
05180015 ರಾಮ ಉವಾಚ।
05180015a ಏವಮೇತತ್ಕುರುಶ್ರೇಷ್ಠ ಕರ್ತವ್ಯಂ ಭೂತಿಮಿಚ್ಚತಾ।
05180015c ಧರ್ಮೋ ಹ್ಯೇಷ ಮಹಾಬಾಹೋ ವಿಶಿಷ್ಟೈಃ ಸಹ ಯುಧ್ಯತಾಂ।।
ರಾಮನು ಹೇಳಿದನು: “ಮಹಾಬಾಹೋ! ಕುರುಶ್ರೇಷ್ಠ! ಒಳ್ಳೆಯದನ್ನು ಬಯಸುವವನಿಗೆ ಇದೇ ಕರ್ತವ್ಯ. ತಮಗಿಂತಲೂ ವಿಶಿಷ್ಟವಾಗಿರುವವರೊಂದಿಗೆ ಯುದ್ಧಮಾಡುವವರ ಧರ್ಮವೇ ಇದು.
05180016a ಶಪೇಯಂ ತ್ವಾಂ ನ ಚೇದೇವಮಾಗಚ್ಚೇಥಾ ವಿಶಾಂ ಪತೇ।
05180016c ಯುಧ್ಯಸ್ವ ತ್ವಂ ರಣೇ ಯತ್ತೋ ಧೈರ್ಯಮಾಲಂಬ್ಯ ಕೌರವ।।
ವಿಶಾಂಪತೇ! ಈ ರೀತಿ ಬರದೇ ಇದ್ದಿದ್ದರೆ ನಾನು ನಿನ್ನನ್ನು ಶಪಿಸುತ್ತಿದ್ದೆನು1. ಈಗ ಹೋಗು! ನಿನ್ನಲ್ಲಿರುವ ಬಲವನ್ನು ಅವಲಂಬಿಸಿ ರಣದಲ್ಲಿ ಯುದ್ಧಮಾಡು.
05180017a ನ ತು ತೇ ಜಯಮಾಶಾಸೇ ತ್ವಾಂ ಹಿ ಜೇತುಮಹಂ ಸ್ಥಿತಃ।
05180017c ಗಚ್ಚ ಯುಧ್ಯಸ್ವ ಧರ್ಮೇಣ ಪ್ರೀತೋಽಸ್ಮಿ ಚರಿತೇನ ತೇ।।
ಆದರೆ ನಾನು ನಿನಗೆ ಜಯವನ್ನು ಬಯಸುವುದಿಲ್ಲ. ಏಕೆಂದರೆ ನಿನ್ನನ್ನು ಗೆಲ್ಲಲೇ ನಾನು ಇಲ್ಲಿ ನಿಂತಿದ್ದೇನೆ. ಹೋಗು! ಧರ್ಮದಿಂದ ಯುದ್ಧಮಾಡು! ನಿನ್ನ ನಡತೆಯನ್ನು ಮೆಚ್ಚಿದ್ದೇನೆ.””
05180018 ಭೀಷ್ಮ ಉವಾಚ।
05180018a ತತೋಽಹಂ ತಂ ನಮಸ್ಕೃತ್ಯ ರಥಮಾರುಹ್ಯ ಸತ್ವರಃ।
05180018c ಪ್ರಾಧ್ಮಾಪಯಂ ರಣೇ ಶಂಖಂ ಪುನರ್ಹೇಮವಿಭೂಷಿತಂ।।
ಭೀಷ್ಮನು ಹೇಳಿದನು: “ಆಗ ನಾನು ಅವನನ್ನು ನಮಸ್ಕರಿಸಿ ಬೇಗನೇ ರಥವನ್ನೇರಿದೆನು. ಇನ್ನೊಮ್ಮೆ ಹೇಮ ವಿಭೂಷಿತ ಶಂಖವನ್ನು ರಣದಲ್ಲಿ ಊದಿದೆನು.
05180019a ತತೋ ಯುದ್ಧಂ ಸಮಭವನ್ಮಮ ತಸ್ಯ ಚ ಭಾರತ।
05180019c ದಿವಸಾನ್ಸುಬಹೂನ್ರಾಜನ್ಪರಸ್ಪರಜಿಗೀಷಯಾ।।
ಭಾರತ! ರಾಜನ್! ಆಗ ಪರಸ್ಪರರನ್ನು ಗೆಲ್ಲಲು ಬಯಸಿದ ಅವನ ಮತ್ತು ನನ್ನ ನಡುವೆ ಬಹಳ ದಿನಗಳ ಮಹಾ ಯುದ್ಧವು ನಡೆಯಿತು.
05180020a ಸ ಮೇ ತಸ್ಮಿನ್ರಣೇ ಪೂರ್ವಂ ಪ್ರಾಹರತ್ಕಂಕಪತ್ರಿಭಿಃ।
05180020c ಷಷ್ಟ್ಯಾ ಶತೈಶ್ಚ ನವಭಿಃ ಶರಾಣಾಮಗ್ನಿವರ್ಚಸಾಂ।।
ರಣದಲ್ಲಿ ಮೊದಲು ಅವನು ನನ್ನನ್ನು ಒಂಬೈನೂರಾ ಅರವತ್ತು ಅಗ್ನಿವರ್ಚಸ ಕಂಕಪತ್ರಿ ಬಾಣಗಳಿಂದ ಹೊಡೆದನು.
05180021a ಚತ್ವಾರಸ್ತೇನ ಮೇ ವಾಹಾಃ ಸೂತಶ್ಚೈವ ವಿಶಾಂ ಪತೇ।
05180021c ಪ್ರತಿರುದ್ಧಾಸ್ತಥೈವಾಹಂ ಸಮರೇ ದಂಶಿತಃ ಸ್ಥಿತಃ।।
ವಿಶಾಂಪತೇ! ನನ್ನ ನಾಲ್ಕು ಕುದುರೆಗಳು ಮತ್ತು ಸೂತನು ತಡೆಹಿಡಿಯಲ್ಪಟ್ಟರು. ಆದರೆ ನಾನು ಸಮರದಲ್ಲಿ ಕವಚಗಳಿಂದ ರಕ್ಷಿತನಾಗಿ ನಿಂತೆನು.
05180022a ನಮಸ್ಕೃತ್ಯ ಚ ದೇವೇಭ್ಯೋ ಬ್ರಾಹ್ಮಣೇಭ್ಯಶ್ಚ ಭಾರತ।
05180022c ತಮಹಂ ಸ್ಮಯನ್ನಿವ ರಣೇ ಪ್ರತ್ಯಭಾಷಂ ವ್ಯವಸ್ಥಿತಂ।।
ಭಾರತ! ದೇವತೆಗಳಿಗೂ ಬ್ರಾಹ್ಮಣರಿಗೂ ನಮಸ್ಕರಿಸಿ ನಾನು ನಗುತ್ತಾ ರಣದಲ್ಲಿ ನಿಂತಿದ್ದ ಅವನಿಗೆ ಹೇಳಿದೆನು:
05180023a ಆಚಾರ್ಯತಾ ಮಾನಿತಾ ಮೇ ನಿರ್ಮರ್ಯಾದೇ ಹ್ಯಪಿ ತ್ವಯಿ।
05180023c ಭೂಯಸ್ತು ಶೃಣು ಮೇ ಬ್ರಹ್ಮನ್ಸಂಪದಂ ಧರ್ಮಸಂಗ್ರಹೇ।।
“ನೀನು ಮರ್ಯಾದೆಗಳನ್ನು ದಾಟಿದರೂ ಆಚಾರ್ಯನೆಂದು ಗೌರವಿಸಿದೆ. ಬ್ರಹ್ಮನ್! ಧರ್ಮಸಂಗ್ರಹದ ಮಾರ್ಗವೇನೆಂದು ಇನ್ನೊಮ್ಮೆ ನನ್ನನ್ನು ಕೇಳು.
05180024a ಯೇ ತೇ ವೇದಾಃ ಶರೀರಸ್ಥಾ ಬ್ರಾಹ್ಮಣ್ಯಂ ಯಚ್ಚ ತೇ ಮಹತ್।
05180024c ತಪಶ್ಚ ಸುಮಹತ್ತಪ್ತಂ ನ ತೇಭ್ಯಃ ಪ್ರಹರಾಮ್ಯಹಂ।।
ನಿನ್ನ ದೇಹದಲ್ಲಿ ನೆಲೆಸಿರುವ ವೇದಗಳನ್ನು, ಬ್ರಾಹ್ಮಣ್ಯವನ್ನು ಮತ್ತು ಸುಮಹತ್ತರವಾಗಿ ತಪಿಸಿದ ತಪವನ್ನು ನಾನು ಹೊಡೆಯಲಾರೆನು.
05180025a ಪ್ರಹರೇ ಕ್ಷತ್ರಧರ್ಮಸ್ಯ ಯಂ ತ್ವಂ ರಾಮ ಸಮಾಸ್ಥಿತಃ।
05180025c ಬ್ರಾಹ್ಮಣಃ ಕ್ಷತ್ರಿಯತ್ವಂ ಹಿ ಯಾತಿ ಶಸ್ತ್ರಸಮುದ್ಯಮಾತ್।।
ರಾಮ! ನೀನು ಸಮಾಸ್ಥಿತನಾಗಿರುವ ಕ್ಷತ್ರಧರ್ಮಕ್ಕೆ ಹೊಡೆಯುತ್ತೇನೆ. ಏಕೆಂದರೆ ಶಸ್ತ್ರಗಳನ್ನು ಹಿಡಿದು ಬ್ರಾಹ್ಮಣನು ಕ್ಷತ್ರಿಯತ್ವವನ್ನು ಪಡೆಯುತ್ತಾನೆ.
05180026a ಪಶ್ಯ ಮೇ ಧನುಷೋ ವೀರ್ಯಂ ಪಶ್ಯ ಬಾಹ್ವೋರ್ಬಲಂ ಚ ಮೇ।
05180026c ಏಷ ತೇ ಕಾರ್ಮುಕಂ ವೀರ ದ್ವಿಧಾ ಕುರ್ಮಿ ಸಸಾಯಕಂ।।
ನನ್ನ ಧನುಸ್ಸಿನ ವೀರ್ಯವನ್ನು ನೋಡು! ನನ್ನ ಬಾಹುಗಳ ಬಲವನ್ನು ನೋಡು! ವೀರ! ನಾನು ನಿನ್ನ ಬಿಲ್ಲು ಬಾಣಗಳನ್ನು ತುಂಡರಿಸುತ್ತೇನೆ!”
05180027a ತಸ್ಯಾಹಂ ನಿಶಿತಂ ಭಲ್ಲಂ ಪ್ರಾಹಿಣ್ವಂ ಭರತರ್ಷಭ।
05180027c ತೇನಾಸ್ಯ ಧನುಷಃ ಕೋಟಿಶ್ಚಿನ್ನಾ ಭೂಮಿಮಥಾಗಮತ್।।
ಭರತರ್ಷಭ! ಆಗ ನಾನು ಹರಿತಾದ ಭಲ್ಲವನ್ನು ಅವನ ಮೇಲೆ ಎಸೆಯಲು ಅದು ಅವನ ಧನುಸ್ಸಿನ ತುದಿಯನ್ನು ತುಂಡುಮಾಡಿ ನೆಲಕ್ಕೆ ಬೀಳಿಸಿತು.
05180028a ನವ ಚಾಪಿ ಪೃಷತ್ಕಾನಾಂ ಶತಾನಿ ನತಪರ್ವಣಾಂ।
05180028c ಪ್ರಾಹಿಣ್ವಂ ಕಂಕಪತ್ರಾಣಾಂ ಜಾಮದಗ್ನ್ಯರಥಂ ಪ್ರತಿ।।
ಜಾಮದಗ್ನಿಯ ರಥದ ಮೇಲೆ ಒಂಭೈನೂರು ನೇರ ಕಂಕಪತ್ರಿ ಬಾಣಗಳನ್ನು ಪ್ರಯೋಗಿಸಿದೆನು.
05180029a ಕಾಯೇ ವಿಷಕ್ತಾಸ್ತು ತದಾ ವಾಯುನಾಭಿಸಮೀರಿತಾಃ।
05180029c ಚೇಲುಃ ಕ್ಷರಂತೋ ರುಧಿರಂ ನಾಗಾ ಇವ ಚ ತೇ ಶರಾಃ।।
ಅವನ ದೇಹಕ್ಕೆ ಗುರಿಯಾಗಿಟ್ಟ, ಗಾಳಿಯಿಂದ ವೇಗವಾಗಿ ಹೋದ ಆ ಶರಗಳು ರಕ್ತಕಾರುವ ನಾಗಗಳಂತೆ ಹಾರಿಹೋದವು.
05180030a ಕ್ಷತಜೋಕ್ಷಿತಸರ್ವಾಂಗಃ ಕ್ಷರನ್ಸ ರುಧಿರಂ ವ್ರಣೈಃ।
05180030c ಬಭೌ ರಾಮಸ್ತದಾ ರಾಜನ್ಮೇರುರ್ಧಾತೂನಿವೋತ್ಸೃಜನ್।।
ರಾಜನ್! ಅವನ ಇಡೀ ದೇಹವು ಗಾಯಗಳಿಂದ ಒದ್ದೆಯಾಗಿ ರಕ್ತವು ಸುರಿಯಲು ರಾಮನು ಧಾತುಗಳನ್ನು ಸುರಿಸುತ್ತಿದ್ದ ಮೇರು ಪರ್ವತದಂತೆ ತೋರಿದನು.
05180031a ಹೇಮಂತಾಂತೇಽಶೋಕ ಇವ ರಕ್ತಸ್ತಬಕಮಂಡಿತಃ।
05180031c ಬಭೌ ರಾಮಸ್ತದಾ ರಾಜನ್ಕ್ವ ಚಿತ್ಕಿಂಶುಕಸಮ್ನಿಭಃ।।
ರಾಜನ್! ಹೇಮಂತ ಋತುವಿನ ಅಂತ್ಯದಲ್ಲಿ ಕೆಂಪು ಹೂವುಗಳಿಂದ ತುಂಬಿದ ಅಶೋಕದಂತೆ ಅಥವಾ ಕಿಂಶುಕವೃಕ್ಷದಂತೆ ರಾಮನು ಕಾಣಿಸಿದನು.
05180032a ತತೋಽನ್ಯದ್ಧನುರಾದಾಯ ರಾಮಃ ಕ್ರೋಧಸಮನ್ವಿತಃ।
05180032c ಹೇಮಪುಂಖಾನ್ಸುನಿಶಿತಾಂ ಶರಾಂಸ್ತಾನ್ ಹಿ ವವರ್ಷ ಸಃ।।
ಆಗ ಕ್ರೋಧಸಮನ್ವಿತನಾಗಿ ರಾಮನು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಹೇಮಪುಂಖಗಳ, ಹರಿತ ಬಾಣಗಳ ಮಳೆಯನ್ನು ಸುರಿಸಿದನು.
05180033a ತೇ ಸಮಾಸಾದ್ಯ ಮಾಂ ರೌದ್ರಾ ಬಹುಧಾ ಮರ್ಮಭೇದಿನಃ।
05180033c ಅಕಂಪಯನ್ಮಹಾವೇಗಾಃ ಸರ್ಪಾನಲವಿಷೋಪಮಾಃ।।
ಆ ರೌದ್ರ ಮರ್ಮಭೇದೀ ಸರ್ಪಾನಲವಿಷಗಳಂತಿರುವ ಬಹು ಬಾಣಗಳು ನನ್ನನ್ನು ಹೊಡೆದು ತತ್ತರಿಸುವಂತೆ ಮಾಡಿದವು.
05180034a ತತೋಽಹಂ ಸಮವಷ್ಟಭ್ಯ ಪುನರಾತ್ಮಾನಮಾಹವೇ।
05180034c ಶತಸಂಖ್ಯೈಃ ಶರೈಃ ಕ್ರುದ್ಧಸ್ತದಾ ರಾಮಮವಾಕಿರಂ।।
ಆಗ ನಾನು ಯುದ್ಧದಲ್ಲಿ ಪುನಃ ಚೇತರಿಸಿಕೊಂಡು ಕೋಪದಿಂದ ರಾಮನನ್ನು ನೂರಾರು ಬಾಣಗಳಿಂದ ಹೊಡೆದೆನು.
05180035a ಸ ತೈರಗ್ನ್ಯರ್ಕಸಂಕಾಶೈಃ ಶರೈರಾಶೀವಿಷೋಪಮೈಃ।
05180035c ಶಿತೈರಭ್ಯರ್ದಿತೋ ರಾಮೋ ಮಂದಚೇತಾ ಇವಾಭವತ್।।
ಆ ಅಗ್ನಿ-ಅರ್ಕ ಸಂಕಾಶ, ವಿಷಗಳಂತಿದ್ದ ಹರಿತ ಬಾಣಗಳ ರಾಶಿಯಿಂದ ಹೊಡೆತ ತಿಂದು ರಾಮನು ಮೂರ್ಛೆಗೊಂಡಂತಾದನು.
05180036a ತತೋಽಹಂ ಕೃಪಯಾವಿಷ್ಟೋ ವಿನಿಂದ್ಯಾತ್ಮಾನಮಾತ್ಮನಾ।
05180036c ಧಿಗ್ಧಿಗಿತ್ಯಬ್ರುವನ್ಯುದ್ಧಂ ಕ್ಷತ್ರಂ ಚ ಭರತರ್ಷಭ।।
ಭರತರ್ಷಭ! ಆಗ ನಾನು ಕೃಪಾವಿಷ್ಟನಾಗಿ “ಕ್ಷತ್ರಧರ್ಮಕ್ಕೆ ಧಿಕ್ಕಾರ! ಯುದ್ಧಕ್ಕೆ ಧಿಕ್ಕಾರ!” ಎಂದು ಹೇಳಿ ನನ್ನನ್ನು ನಾನೇ ನಿಂದಿಸಿಕೊಂಡೆನು.
05180037a ಅಸಕೃಚ್ಚಾಬ್ರುವಂ ರಾಜಂ ಶೋಕವೇಗಪರಿಪ್ಲುತಃ।
05180037c ಅಹೋ ಬತ ಕೃತಂ ಪಾಪಂ ಮಯೇದಂ ಕ್ಷತ್ರಕರ್ಮಣಾ।।
ರಾಜನ್! ಶೋಕವೇಗಪರಿಪ್ಲುತನಾಗಿ ತಪ್ಪಾಯಿತೆಂದು ಹೇಳಿದೆನು: “ಅಹೋ! ಕ್ಷತ್ರನಾಗಿ ನಾನು ಇಂದು ಈ ಪಾಪವನ್ನು ಮಾಡಿದೆನು.
05180038a ಗುರುರ್ದ್ವಿಜಾತಿರ್ಧರ್ಮಾತ್ಮಾ ಯದೇವಂ ಪೀಡಿತಃ ಶರೈಃ।
05180038c ತತೋ ನ ಪ್ರಾಹರಂ ಭೂಯೋ ಜಾಮದಗ್ನ್ಯಾಯ ಭಾರತ।।
ನನ್ನ ಗುರು, ಧರ್ಮಾತ್ಮಾ ಬ್ರಾಹ್ಮಣನನ್ನು ಈ ರೀತಿಯಾಗಿ ಬಾಣಗಳಿಂದ ಪೀಡಿಸಿದೆನಲ್ಲ!” ಭಾರತ! ಆಗ ನಾನು ಜಾಮದಗ್ನಿಗೆ ಇನ್ನು ಹೊಡೆಯಲಿಲ್ಲ!
05180039a ಅಥಾವತಾಪ್ಯ ಪೃಥಿವೀಂ ಪೂಷಾ ದಿವಸಸಂಕ್ಷಯೇ।
05180039c ಜಗಾಮಾಸ್ತಂ ಸಹಸ್ರಾಂಶುಸ್ತತೋ ಯುದ್ಧಮುಪಾರಮತ್।।
ಅಷ್ಟರಲ್ಲಿಯೇ ಸಹಸ್ರಾಂಶುವು ಪೃಥ್ವಿಯನ್ನು ಬೆಳಗಿಸಿ ದಿವಸಕ್ಷಯದಲ್ಲಿ ಅಸ್ತಮವಾಗಲು ನಮ್ಮ ಯುದ್ಧವೂ ನಿಂತಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ರಾಮಭೀಷ್ಮಯುದ್ಧೇ ಅಶೀತ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ರಾಮಭೀಷ್ಮಯುದ್ಧದಲ್ಲಿ ನೂರಾಎಂಭತ್ತನೆಯ ಅಧ್ಯಾಯವು.
-
ಮುಂದೆ ಮಹಾಭಾರತ ಯುದ್ಧದ ಅರಂಭದಲ್ಲಿ ಯುಧಿಷ್ಠಿರನು ಭೀಷ್ಮನನ್ನು ನಮಸ್ಕರಿಸಲು ಹೋದಾಗ ಭೀಷ್ಮನು ಅವನಿಗೆ ಇದೇ ಮಾತನ್ನಾಡುತ್ತಾನೆ (ಭೀಷ್ಮ ಪರ್ವ, ಅಧ್ಯಾಯ 22). ↩︎