ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಅಂಬೋಽಪಾಖ್ಯಾನ ಪರ್ವ
ಅಧ್ಯಾಯ 178
ಸಾರ
ಪರಶುರಾಮನು ಭೀಷ್ಮನನ್ನು ಕರೆಯಿಸಿ ಅವನು ಅಂಬೆಯನ್ನು ಸ್ವೀಕರಿಸಬೇಕೆಂದು ಆಜ್ಞಾಪಿಸಲು ಭೀಷ್ಮನು ತನ್ನ ಪ್ರತಿಜ್ಞೆಯನ್ನು ನೆನಪಿಸಿಕೊಟ್ಟು ಅಂಬೆಯನ್ನು ಮದುವೆಯಾಗಲು ನಿರಾಕರಿಸಿದುದು (1-11). ಆಗ ಪರಶುರಾಮನು “ನನ್ನ ಮಾತಿನಂತೆ ಮಾಡದೇ ಇದ್ದರೆ ಇಂದೇ ಅಮಾತ್ಯರೊಂದಿಗೆ ನಿನ್ನನ್ನು ಕೊಲ್ಲುತ್ತೇನೆ” ಎಂದು ಹೇಳಲು ಅವನನ್ನು ಪ್ರೀತಿಯ ಮಾತುಗಳಿಂದ ಭೀಷ್ಮನು ಯಾಚಿಸಿದರೂ ಶಾಂತನಾಗದಿರಲು ಯುದ್ಧವನ್ನು ನಿಶ್ಚಯಿಸಿದುದು (12-38).
05178001 ಭೀಷ್ಮ ಉವಾಚ।
05178001a ತತಸ್ತೃತೀಯೇ ದಿವಸೇ ಸಮೇ ದೇಶೇ ವ್ಯವಸ್ಥಿತಃ।
05178001c ಪ್ರೇಷಯಾಮಾಸ ಮೇ ರಾಜನ್ಪ್ರಾಪ್ತೋಽಸ್ಮೀತಿ ಮಹಾವ್ರತಃ।।
ಭೀಷ್ಮನು ಹೇಳಿದನು: “ರಾಜನ್! ಸಮ ಪ್ರದೇಶದಲ್ಲಿ ನೆಲೆಸಿದ ಮೂರನೆಯ ದಿವಸದಲ್ಲಿ ಆ ಮಹಾವ್ರತನು ನಾನು ಬಂದಿದ್ದೇನೆ ಎಂದು ಸಂದೇಶವನ್ನು ನನಗೆ ಕಳುಹಿಸಿದನು.
05178002a ತಮಾಗತಮಹಂ ಶ್ರುತ್ವಾ ವಿಷಯಾಂತಂ ಮಹಾಬಲಂ।
05178002c ಅಭ್ಯಗಚ್ಚಂ ಜವೇನಾಶು ಪ್ರೀತ್ಯಾ ತೇಜೋನಿಧಿಂ ಪ್ರಭುಂ।।
05178003a ಗಾಂ ಪುರಸ್ಕೃತ್ಯ ರಾಜೇಂದ್ರ ಬ್ರಾಹ್ಮಣೈಃ ಪರಿವಾರಿತಃ।
05178003c ಋತ್ವಿಗ್ಭಿರ್ದೇವಕಲ್ಪೈಶ್ಚ ತಥೈವ ಚ ಪುರೋಹಿತೈಃ।।
ರಾಜೇಂದ್ರ! ನಮ್ಮ ದೇಶದ ಗಡಿಗೆ ಆ ಮಹಾಬಲ ತೇಜೋನಿಧಿ ಪ್ರಭುವು ಬಂದಿದ್ದಾನೆಂದು ಕೇಳಿ ನಾನು ಪ್ರೀತಿಯಿಂದ ಗೋವುಗಳನ್ನು ಮುಂದಿರಿಸಿಕೊಂಡು ಬ್ರಾಹ್ಮಣರು, ಮತ್ತು ದೇವಕಲ್ಪ ಋತ್ವಿಗರು ಹಾಗೂ ಪುರೋಹಿತರಿಂದ ಸುತ್ತುವರೆಯಲ್ಪಟ್ಟು ಅವನಲ್ಲಿಗೆ ಹೋದೆನು.
05178004a ಸ ಮಾಮಭಿಗತಂ ದೃಷ್ಟ್ವಾ ಜಾಮದಗ್ನ್ಯಃ ಪ್ರತಾಪವಾನ್।
05178004c ಪ್ರತಿಜಗ್ರಾಹ ತಾಂ ಪೂಜಾಂ ವಚನಂ ಚೇದಮಬ್ರವೀತ್।।
ನಾನು ಬಂದಿದುದನ್ನು ನೋಡಿ ಪ್ರತಾಪವಾನ್ ಜಾಮದಗ್ನಿಯು ಆ ಪೂಜೆಯನ್ನು ಸ್ವೀಕರಿಸಿ ಈ ಮಾತುಗಳನ್ನಾಡಿದನು:
05178005a ಭೀಷ್ಮ ಕಾಂ ಬುದ್ಧಿಮಾಸ್ಥಾಯ ಕಾಶಿರಾಜಸುತಾ ತ್ವಯಾ।
05178005c ಅಕಾಮೇಯಮಿಹಾನೀತಾ ಪುನಶ್ಚೈವ ವಿಸರ್ಜಿತಾ।।
“ಭೀಷ್ಮ! ಯಾವ ಬುದ್ಧಿಯನ್ನು ಬಳಸಿ ನೀನು ಮೊದಲು ಬಯಸದೇ ಇದ್ದ ಕಾಶಿರಾಜಸುತೆಯನ್ನು ಕರೆದುಕೊಂಡು ಹೋದೆ, ಮತ್ತು ನಂತರ ಅವಳನ್ನು ವಿಸರ್ಜಿಸಿದೆ?
05178006a ವಿಭ್ರಂಶಿತಾ ತ್ವಯಾ ಹೀಯಂ ಧರ್ಮಾವಾಪ್ತೇಃ ಪರಾವರಾತ್।
05178006c ಪರಾಮೃಷ್ಟಾಂ ತ್ವಯಾ ಹೀಮಾಂ ಕೋ ಹಿ ಗಂತುಮಿಹಾರ್ಹತಿ।।
ನಿನ್ನ ಕಾರಣದಿಂದ ಇವಳು ಧರ್ಮದ ಮೇಲ್ಮಟ್ಟದಿಂದ ಕೀಳುಮಟ್ಟಕ್ಕೆ ತಳ್ಳಲ್ಪಟ್ಟಿದ್ದಾಳೆ. ಏಕೆಂದರೆ ನಿನ್ನಿಂದ ಮುಟ್ಟಲ್ಪಟ್ಟ ಇವಳೊಂದಿಗೆ ಯಾರು ತಾನೇ ಹೋಗಲು ಬರುತ್ತದೆ?
05178007a ಪ್ರತ್ಯಾಖ್ಯಾತಾ ಹಿ ಶಾಲ್ವೇನ ತ್ವಯಾ ನೀತೇತಿ ಭಾರತ।
05178007c ತಸ್ಮಾದಿಮಾಂ ಮನ್ನಿಯೋಗಾತ್ಪ್ರತಿಗೃಹ್ಣೀಷ್ವ ಭಾರತ।।
ಭಾರತ! ನಿನ್ನಿಂದ ಕರೆದುಕೊಂಡು ಹೋದವಳೆಂದು ಶಾಲ್ವನೂ ಕೂಡ ಇವಳನ್ನು ಹಿಂದೆ ಕಳುಹಿಸಿದ್ದಾನೆ. ಆದುದರಿಂದ ಭಾರತ! ನನ್ನ ನಿಯೋಗದಂತೆ ಇವಳನ್ನು ನೀನು ಸ್ವೀಕರಿಸು.
05178008a ಸ್ವಧರ್ಮಂ ಪುರುಷವ್ಯಾಘ್ರ ರಾಜಪುತ್ರೀ ಲಭತ್ವಿಯಂ।
05178008c ನ ಯುಕ್ತಮವಮಾನೋಽಯಂ ಕರ್ತುಂ ರಾಜ್ಞಾ ತ್ವಯಾನಘ।।
ಪುರುಷವ್ಯಾಘ್ರ! ಈ ರಾಜಪುತ್ರಿಯು ಸ್ವಧರ್ಮವನ್ನು ಪಡೆಯಲಿ. ಅನಘ! ರಾಜನಾದ ನೀನು ಇವಳನ್ನು ಅಪಮಾನಿಸುವುದು ಸರಿಯಲ್ಲ.”
05178009a ತತಸ್ತಂ ನಾತಿಮನಸಂ ಸಮುದೀಕ್ಷ್ಯಾಹಮಬ್ರುವಂ।
05178009c ನಾಹಮೇನಾಂ ಪುನರ್ದದ್ಯಾಂ ಭ್ರಾತ್ರೇ ಬ್ರಹ್ಮನ್ಕಥಂ ಚನ।।
ಅವನು ತುಂಬಾ ಕುಪಿತನಾಗಿಲ್ಲವೆಂದು ಗ್ರಹಿಸಿ ನಾನು ಹೇಳಿದೆನು: “ಬ್ರಹ್ಮನ್! ಇವಳನ್ನು ನಾನು ಪುನಃ ನನ್ನ ತಮ್ಮನಿಗೆ ಏನು ಮಾಡಿದರೂ ಕೊಡಲಾರೆ.
05178010a ಶಾಲ್ವಸ್ಯಾಹಮಿತಿ ಪ್ರಾಹ ಪುರಾ ಮಾಮಿಹ ಭಾರ್ಗವ।
05178010c ಮಯಾ ಚೈವಾಭ್ಯನುಜ್ಞಾತಾ ಗತಾ ಸೌಭಪುರಂ ಪ್ರತಿ।।
ಭಾರ್ಗವ! ಇವಳು ಮೊದಲು “ನಾನು ಶಾಲ್ವನವಳು” ಎಂದು ನನಗೆ ಹೇಳಿದಳು. ಆದರ ನಂತರವೇ ನಾನು ಸೌಭಪುರಕ್ಕೆ ಹೋಗಲು ಅನುಮತಿಯನ್ನು ಕೂಡ ಕೊಟ್ಟೆ.
05178011a ನ ಭಯಾನ್ನಾಪ್ಯನುಕ್ರೋಶಾನ್ನ ಲೋಭಾನ್ನಾರ್ಥಕಾಮ್ಯಯಾ।
05178011c ಕ್ಷತ್ರಧರ್ಮಮಹಂ ಜಹ್ಯಾಮಿತಿ ಮೇ ವ್ರತಮಾಹಿತಂ।।
ಭಯದಿಂದಾಗಲೀ, ಅನುಕ್ರೋಶದಿಂದಾಗಲೀ, ಅರ್ಥ-ಕಾಮಗಳ ಲೋಭದಿಂದಾಗಲೀ ಕ್ಷತ್ರ ಧರ್ಮವನ್ನು ತೊರೆಯುವುದಿಲ್ಲ. ಇದು ನಾನು ನಡೆಸಿಕೊಂಡು ಬಂದಿರುವ ವ್ರತ.”
05178012a ಅಥ ಮಾಮಬ್ರವೀದ್ರಾಮಃ ಕ್ರೋಧಪರ್ಯಾಕುಲೇಕ್ಷಣಃ।
05178012c ನ ಕರಿಷ್ಯಸಿ ಚೇದೇತದ್ವಾಕ್ಯಂ ಮೇ ಕುರುಪುಂಗವ।।
05178013a ಹನಿಷ್ಯಾಮಿ ಸಹಾಮಾತ್ಯಂ ತ್ವಾಮದ್ಯೇತಿ ಪುನಃ ಪುನಃ।
ಆಗ ಕ್ರೋಧದಿಂದ ಕಣ್ಣುಗಳನ್ನು ತಿರುಗಿಸುತ್ತಾ ರಾಮನು ನನಗೆ “ಕುರುಪುಂಗವ! ನನ್ನ ಮಾತಿನಂತೆ ಮಾಡದೇ ಇದ್ದರೆ ಇಂದೇ ಅಮಾತ್ಯರೊಂದಿಗೆ ನಿನ್ನನ್ನು ಕೊಲ್ಲುತ್ತೇನೆ” ಎಂದು ಪುನಃ ಪುನಃ ಹೇಳಿದನು.
05178013c ಸಂರಂಭಾದಬ್ರವೀದ್ರಾಮಃ ಕ್ರೋಧಪರ್ಯಾಕುಲೇಕ್ಷಣಃ।।
05178014a ತಮಹಂ ಗೀರ್ಭಿರಿಷ್ಟಾಭಿಃ ಪುನಃ ಪುನರರಿಂದಮಂ।
05178014c ಅಯಾಚಂ ಭೃಗುಶಾರ್ದೂಲಂ ನ ಚೈವ ಪ್ರಶಶಾಮ ಸಃ।।
ರಾಮನು ಹೀಗೆ ಕ್ರೋಧದಿಂದ ಕಣ್ಣುಗಳನ್ನು ತಿರುಗಿಸುತ್ತಾ ಆವೇಶದಲ್ಲಿ ಹೇಳಿದನು. ನಾನು ಪುನಃ ಪುನಃ ಆ ಅರಿಂದಮನನ್ನು ಪ್ರೀತಿಯ ಮಾತುಗಳಿಂದ ಯಾಚಿಸಿದೆ. ಆದರೂ ಭೃಗುಶಾರ್ದೂಲನು ಶಾಂತನಾಗಲಿಲ್ಲ.
05178015a ತಮಹಂ ಪ್ರಣಮ್ಯ ಶಿರಸಾ ಭೂಯೋ ಬ್ರಾಹ್ಮಣಸತ್ತಮಂ।
05178015c ಅಬ್ರುವಂ ಕಾರಣಂ ಕಿಂ ತದ್ಯತ್ತ್ವಂ ಯೋದ್ಧುಮಿಹೇಚ್ಚಸಿ।।
ಆಗ ನಾನು ಆ ಬ್ರಹ್ಮಣಸತ್ತಮನಿಗೆ ಇನ್ನೊಮ್ಮೆ ಶಿರಸಾ ನಮಸ್ಕರಿಸಿ ಕೇಳಿದೆನು: “ಯಾವ ಕಾರಣಕ್ಕಾಗಿ ನೀನು ನನ್ನೊಡನೆ ಯುದ್ಧ ಮಾಡಲು ಬಯಸುತ್ತೀಯೆ?
05178016a ಇಷ್ವಸ್ತ್ರಂ ಮಮ ಬಾಲಸ್ಯ ಭವತೈವ ಚತುರ್ವಿಧಂ।
05178016c ಉಪದಿಷ್ಟಂ ಮಹಾಬಾಹೋ ಶಿಷ್ಯೋಽಸ್ಮಿ ತವ ಭಾರ್ಗವ।।
ಮಹಾಬಾಹೋ! ಬಾಲಕನಾಗಿರುವಾಗಲೇ ನನಗೆ ಚತುರ್ವಿಧದ ಅಸ್ತ್ರಗಳನ್ನು ನೀನು ಉಪದೇಶಿಸಿದ್ದೆ. ನಾನು ನಿನ್ನ ಶಿಷ್ಯ ಭಾರ್ಗವ!”
05178017a ತತೋ ಮಾಮಬ್ರವೀದ್ರಾಮಃ ಕ್ರೋಧಸಂರಕ್ತಲೋಚನಃ।
05178017c ಜಾನೀಷೇ ಮಾಂ ಗುರುಂ ಭೀಷ್ಮ ನ ಚೇಮಾಂ ಪ್ರತಿಗೃಹ್ಣಸೇ।
05178017e ಸುತಾಂ ಕಾಶ್ಯಸ್ಯ ಕೌರವ್ಯ ಮತ್ಪ್ರಿಯಾರ್ಥಂ ಮಹೀಪತೇ।।
ಆಗ ರಾಮನು ಕ್ರೋಧದಿಂದ ರಕ್ತಲೋಚನನಾಗಿ ನನಗೆ ಹೇಳಿದನು: “ಭೀಷ್ಮ! ನಾನು ನಿನ್ನ ಗುರುವೆಂದು ನೀನು ತಿಳಿದಿದ್ದೀಯೆ. ಕೌರವ! ಮಹೀಪತೇ! ಆದರೂ ನೀನು ನನ್ನ ಪ್ರೀತಿಗಾಗಿ ಈ ಕಾಶಿಸುತೆಯನ್ನು ಹಿಂದೆ ತೆಗೆದುಕೊಳ್ಳುತ್ತಿಲ್ಲವಲ್ಲ!
05178018a ನ ಹಿ ತೇ ವಿದ್ಯತೇ ಶಾಂತಿರನ್ಯಥಾ ಕುರುನಂದನ।
05178018c ಗೃಹಾಣೇಮಾಂ ಮಹಾಬಾಹೋ ರಕ್ಷಸ್ವ ಕುಲಮಾತ್ಮನಃ।
05178018e ತ್ವಯಾ ವಿಭ್ರಂಶಿತಾ ಹೀಯಂ ಭರ್ತಾರಂ ನಾಭಿಗಚ್ಚತಿ।।
ಕುರುನಂದನ! ಅನ್ಯಥಾ ನಿನಗೆ ಶಾಂತಿಯಿಲ್ಲವೆಂದು ತಿಳಿದುಕೋ! ಮಹಾಬಾಹೋ! ಇವಳನ್ನು ಸ್ವೀಕರಿಸಿ ನಿನ್ನ ಕುಲವನ್ನು ರಕ್ಷಿಸು. ನಿನ್ನಿಂದ ಕೀಳುಸ್ಥಾನಕ್ಕೆ ತಳ್ಳಲ್ಪಟ್ಟ ಅವಳು ಭರ್ತಾರನನ್ನು ಪಡೆಯುವುದಿಲ್ಲ.”
05178019a ತಥಾ ಬ್ರುವಂತಂ ತಮಹಂ ರಾಮಂ ಪರಪುರಂಜಯಂ।
05178019c ನೈತದೇವಂ ಪುನರ್ಭಾವಿ ಬ್ರಹ್ಮರ್ಷೇ ಕಿಂ ಶ್ರಮೇಣ ತೇ।।
ಹೀಗೆ ಹೇಳುತ್ತಿರುವ ಪರಪುರಂಜಯ ರಾಮನಿಗೆ ನಾನು ಹೇಳಿದೆನು: “ಬ್ರಹ್ಮರ್ಷೇ! ಇದು ಹೀಗೆ ಆಗುವುದೇ ಇಲ್ಲ. ನೀನು ಏಕೆ ಸುಮ್ಮನೆ ಶ್ರಮಪಡುತ್ತೀಯೆ?
05178020a ಗುರುತ್ವಂ ತ್ವಯಿ ಸಂಪ್ರೇಕ್ಷ್ಯ ಜಾಮದಗ್ನ್ಯ ಪುರಾತನಂ।
05178020c ಪ್ರಸಾದಯೇ ತ್ವಾಂ ಭಗವಂಸ್ತ್ಯಕ್ತೈಷಾ ಹಿ ಪುರಾ ಮಯಾ।।
ಜಾಮದಗ್ನಿ! ನನ್ನ ಪುರಾತನ ಗುರುವೆಂದು ನಿನ್ನಲ್ಲಿ ಪ್ರಸಾದವನ್ನು ಬೇಡುತ್ತಿದ್ದೇನೆ. ಭಗವನ್! ಇವಳನ್ನು ನಾನು ಹಿಂದೆಯೇ ತ್ಯಜಿಸಿಯಾಗಿದೆ.
05178021a ಕೋ ಜಾತು ಪರಭಾವಾಂ ಹಿ ನಾರೀಂ ವ್ಯಾಲೀಮಿವ ಸ್ಥಿತಾಂ।
05178021c ವಾಸಯೇತ ಗೃಹೇ ಜಾನನ್ ಸ್ತ್ರೀಣಾಂ ದೋಷಾನ್ಮಹಾತ್ಯಯಾನ್।।
ಸ್ತ್ರೀಯರ ಮಹಾದೋಷಗಳನ್ನು ತಿಳಿದಿರುವ ಯಾರುತಾನೇ ಇನ್ನೊಬ್ಬನಲ್ಲಿ ಪ್ರೀತಿಯನ್ನಿಟ್ಟುಕೊಂಡಿರುವವಳನ್ನು ಹಾವಿನಂತೆ ತನ್ನ ಮನೆಯಲ್ಲಿ ಇರಿಸಿಕೊಳ್ಳುತ್ತಾನೆ?
05178022a ನ ಭಯಾದ್ವಾಸವಸ್ಯಾಪಿ ಧರ್ಮಂ ಜಹ್ಯಾಂ ಮಹಾದ್ಯುತೇ।
05178022c ಪ್ರಸೀದ ಮಾ ವಾ ಯದ್ವಾ ತೇ ಕಾರ್ಯಂ ತತ್ಕುರು ಮಾಚಿರಂ।।
ವಾಸವನ ಭಯದಿಂದಲೂ ನಾನು ಧರ್ಮವನ್ನು ತೊರೆಯುವುದಿಲ್ಲ ಮಹಾದ್ಯುತೇ! ನನ್ನ ಮೇಲೆ ಕರುಣೆ ತೋರು. ಅಥವಾ ನನಗೇನು ಮಾಡಬೇಕೋ ಅದನ್ನು ಬೇಗನೇ ಮಾಡು.
05178023a ಅಯಂ ಚಾಪಿ ವಿಶುದ್ಧಾತ್ಮನ್ಪುರಾಣೇ ಶ್ರೂಯತೇ ವಿಭೋ।
05178023c ಮರುತ್ತೇನ ಮಹಾಬುದ್ಧೇ ಗೀತಃ ಶ್ಲೋಕೋ ಮಹಾತ್ಮನಾ।।
ವಿಶುದ್ಧಾತ್ಮನ್! ವಿಭೋ! ಮಹಾಬುದ್ಧಿ ಮಹಾತ್ಮ ಮರುತ್ತನು ಪುರಾಣಗಳಲ್ಲಿ ಈ ಗೀತ ಶ್ಲೋಕವನ್ನು ಹೇಳಿದ್ದಾನೆ:
05178024a ಗುರೋರಪ್ಯವಲಿಪ್ತಸ್ಯ ಕಾರ್ಯಾಕಾರ್ಯಮಜಾನತಃ।
05178024c ಉತ್ಪಥಪ್ರತಿಪನ್ನಸ್ಯ ಕಾರ್ಯಂ ಭವತಿ ಶಾಸನಂ।।
“ಗುರುವು ಬಯಸಿದುದನ್ನು ಮಾಡಬೇಕು. ಅವನು ತಿಳಿಯದೇ ಇದ್ದಿರಬಹುದು. ತಪ್ಪು-ಸರಿಗಳನ್ನು ಅರಿಯದೇ ಇದ್ದಿರಬಹುದು. ಅಥವಾ ಧರ್ಮದ ದಾರಿಯನ್ನು ತಪ್ಪಿರಬಹುದು.”
05178025a ಸ ತ್ವಂ ಗುರುರಿತಿ ಪ್ರೇಮ್ಣಾ ಮಯಾ ಸಮ್ಮಾನಿತೋ ಭೃಶಂ।
05178025c ಗುರುವೃತ್ತಂ ನ ಜಾನೀಷೇ ತಸ್ಮಾದ್ಯೋತ್ಸ್ಯಾಮ್ಯಹಂ ತ್ವಯಾ।।
ನೀನು ಗುರುವೆಂಬ ಪ್ರೇಮದಿಂದ ನಾನು ನಿನ್ನನ್ನು ತುಂಬಾ ಸಮ್ಮಾನಿಸುತ್ತೇನೆ. ಗುರುವಿನ ನಡತೆಯು ನಿನಗೆ ತಿಳಿದಿಲ್ಲ. ಆದುದರಿಂದ ನಾನು ನಿನ್ನೊಂದಿಗೆ ಯುದ್ಧ ಮಾಡುತ್ತೇನೆ.
05178026a ಗುರುಂ ನ ಹನ್ಯಾಂ ಸಮರೇ ಬ್ರಾಹ್ಮಣಂ ಚ ವಿಶೇಷತಃ।
05178026c ವಿಶೇಷತಸ್ತಪೋವೃದ್ಧಮೇವಂ ಕ್ಷಾಂತಂ ಮಯಾ ತವ।।
ಆದರೆ ಸಮರದಲ್ಲಿ ಗುರುವನ್ನು, ಅದರಲ್ಲೂ ವಿಶೇಷವಾಗಿ ಬ್ರಾಹ್ಮಣನನ್ನು, ನಾನು ಕೊಲ್ಲುವುದಿಲ್ಲ. ತಪೋವೃದ್ಧನಾದ ನಿನ್ನಲ್ಲಿ ನನಗೆ ವಿಶೇಷವಾದ ಕ್ಷಾಂತಿಯಿದೆ.
05178027a ಉದ್ಯತೇಷುಮಥೋ ದೃಷ್ಟ್ವಾ ಬ್ರಾಹ್ಮಣಂ ಕ್ಷತ್ರಬಂಧುವತ್।
05178027c ಯೋ ಹನ್ಯಾತ್ಸಮರೇ ಕ್ರುದ್ಧೋ ಯುಧ್ಯಂತಮಪಲಾಯಿನಂ।
05178027e ಬ್ರಹ್ಮಹತ್ಯಾ ನ ತಸ್ಯ ಸ್ಯಾದಿತಿ ಧರ್ಮೇಷು ನಿಶ್ಚಯಃ।।
ಆದರೆ ಆಯುಧವನ್ನು ಹಿಡಿದೆತ್ತಿ ಹೋರಾಡುವ ಅಥವಾ ಯುದ್ಧದಲ್ಲಿ ಪಲಾಯನ ಮಾಡದೇ ಇದ್ದ ಬ್ರಾಹ್ಮಣನನ್ನು ಕ್ಷತ್ರಿಯನಾದವನು ಕೊಂದರೆ ಅವನಿಗೆ ಬ್ರಹ್ಮಹತ್ಯಾ ದೋಷವಿಲ್ಲವೆಂದು ಧರ್ಮನಿಶ್ಚಯವಿದೆ.
05178028a ಕ್ಷತ್ರಿಯಾಣಾಂ ಸ್ಥಿತೋ ಧರ್ಮೇ ಕ್ಷತ್ರಿಯೋಽಸ್ಮಿ ತಪೋಧನ।
05178028c ಯೋ ಯಥಾ ವರ್ತತೇ ಯಸ್ಮಿಂಸ್ತಥಾ ತಸ್ಮಿನ್ಪ್ರವರ್ತಯನ್।
05178028e ನಾಧರ್ಮಂ ಸಮವಾಪ್ನೋತಿ ನರಃ ಶ್ರೇಯಶ್ಚ ವಿಂದತಿ।।
ತಪೋಧನ! ಕ್ಷತ್ರಿಯರ ಧರ್ಮದಲ್ಲಿರುವ ಕ್ಷತ್ರಿಯನು ನಾನು. ಇನ್ನೊಬ್ಬನು ಹೇಗೆ ವರ್ತಿಸುತ್ತಾನೋ ಅದರ ಪ್ರಕಾರ ಪ್ರವರ್ತಿಸಿದರೆ ಅವನು ಅಧರ್ಮವನ್ನು ಪಡೆಯುವುದಿಲ್ಲ. ಅಂಥಹ ನರನು ಶ್ರೇಯಸ್ಸನ್ನು ಪಡೆಯುತ್ತಾನೆ.
05178029a ಅರ್ಥೇ ವಾ ಯದಿ ವಾ ಧರ್ಮೇ ಸಮರ್ಥೋ ದೇಶಕಾಲವಿತ್।
05178029c ಅನರ್ಥಸಂಶಯಾಪನ್ನಃ ಶ್ರೇಯಾನ್ನಿಃಸಂಶಯೇನ ಚ।।
ಅರ್ಥ, ಧರ್ಮ, ಅಥವಾ ದೇಶಕಾಲಗಳಲ್ಲಿ ಸಮರ್ಥನಾದವನು ಅವನಿಗಾಗುವ ಲಾಭಗಳ ಕುರಿತು ಸಂಶಯವಿದ್ದರೆ ಆ ಸಂಶಯವನ್ನು ಹೋಗಲಾಡಿಸಿಕೊಂಡರೆ ಒಳ್ಳೆಯದು.
05178030a ಯಸ್ಮಾತ್ಸಂಶಯಿತೇಽರ್ಥೇಽಸ್ಮಿನ್ಯಥಾನ್ಯಾಯಂ ಪ್ರವರ್ತಸೇ।
05178030c ತಸ್ಮಾದ್ಯೋತ್ಸ್ಯಾಮಿ ಸಹಿತಸ್ತ್ವಯಾ ರಾಮ ಮಹಾಹವೇ।
05178030e ಪಶ್ಯ ಮೇ ಬಾಹುವೀರ್ಯಂ ಚ ವಿಕ್ರಮಂ ಚಾತಿಮಾನುಷಂ।।
ಅಸಂಶಯವಾಗಿದ್ದುದನ್ನು ನ್ಯಾಯವೆಂದು ನಿರ್ಣಯಿಸಿ ನೀನು ವರ್ತಿಸುತ್ತಿರುವುದರಿಂದ ನಾನು ನಿನ್ನೊಂದಿಗೆ ಮಹಾರಣದಲ್ಲಿ ಯುದ್ಧಮಾಡುತ್ತೇನೆ. ನನ್ನ ಬಾಹುವೀರ್ಯವನ್ನೂ ಅತಿಮಾನುಷ ವಿಕ್ರಮವನ್ನೂ ನೋಡು!
05178031a ಏವಂ ಗತೇಽಪಿ ತು ಮಯಾ ಯಚ್ಚಕ್ಯಂ ಭೃಗುನಂದನ।
05178031c ತತ್ಕರಿಷ್ಯೇ ಕುರುಕ್ಷೇತ್ರೇ ಯೋತ್ಸ್ಯೇ ವಿಪ್ರ ತ್ವಯಾ ಸಹ।
05178031e ದ್ವಂದ್ವೇ ರಾಮ ಯಥೇಷ್ಟಂ ತೇ ಸಜ್ಜೋ ಭವ ಮಹಾಮುನೇ।।
ಭೃಗುನಂದನ! ಇಲ್ಲಿಯ ವರೆಗೆ ಬಂದೂ ನನಗೆ ಏನು ಶಕ್ಯವಾಗುತ್ತದೆಯೋ ಅದನ್ನು ಮಾಡುತ್ತೇನೆ. ವಿಪ್ರ! ನಿನ್ನೊಂದಿಗೆ ಕುರುಕ್ಷೇತ್ರದಲ್ಲಿ ಹೋರಾಡುತ್ತೇನೆ. ರಾಮ! ಇಷ್ಟವಾದಷ್ಟೂ ದ್ವಂದ್ವಯುದ್ಧ ಮಾಡು! ಮಹಾಮುನೇ! ಸಿದ್ಧನಾಗು!
05178032a ತತ್ರ ತ್ವಂ ನಿಹತೋ ರಾಮ ಮಯಾ ಶರಶತಾಚಿತಃ।
05178032c ಲಪ್ಸ್ಯಸೇ ನಿರ್ಜಿತಾಽಲ್ಲೋಕಾಂ ಶಸ್ತ್ರಪೂತೋ ಮಹಾರಣೇ।।
ರಾಮ! ಅಲ್ಲಿ ನಿನ್ನನ್ನು ಕೊಲ್ಲುತ್ತೇನೆ. ನನ್ನ ನೂರಾರು ಶರಗಳಿಂದ ಹೊಡೆಯಲ್ಪಟ್ಟು ಮಹಾರಣದಲ್ಲಿ ನನ್ನ ಶಸ್ತ್ರಗಳಿಂದ ಪುನೀತನಾಗಿ ಗೆದ್ದ ಲೋಕಗಳನ್ನು ಸೇರುತ್ತೀಯೆ!
05178033a ಸ ಗಚ್ಚ ವಿನಿವರ್ತಸ್ವ ಕುರುಕ್ಷೇತ್ರಂ ರಣಪ್ರಿಯ।
05178033c ತತ್ರೈಷ್ಯಾಮಿ ಮಹಾಬಾಹೋ ಯುದ್ಧಾಯ ತ್ವಾಂ ತಪೋಧನ।।
ಆದುದರಿಂದ ರಣಪ್ರಿಯ! ಹೋಗಿ ಕುರುಕ್ಷೇತ್ರಕ್ಕೆ ಹಿಂದಿರುಗು. ತಪೋಧನ! ಮಹಾಬಾಹೋ! ಅಲ್ಲಿಯೇ ನಿನ್ನನ್ನು ಯುದ್ಧದಲ್ಲಿ ಭೇಟಿಯಾಗುತ್ತೇನೆ.
05178034a ಅಪಿ ಯತ್ರ ತ್ವಯಾ ರಾಮ ಕೃತಂ ಶೌಚಂ ಪುರಾ ಪಿತುಃ।
05178034c ತತ್ರಾಹಮಪಿ ಹತ್ವಾ ತ್ವಾಂ ಶೌಚಂ ಕರ್ತಾಸ್ಮಿ ಭಾರ್ಗವ।।
ಭಾರ್ಗವ! ಹಿಂದೆ ಎಲ್ಲಿ ನೀನು ನಿನ್ನ ಪಿತೃಗಳಿಗೆ ಪವಿತ್ರವಾಗಿದ್ದೆಯೋ ಅಲ್ಲಿಯೇ ನಿನ್ನನ್ನು ಕೊಂದು ನಾನು ಶೌಚವನ್ನು ಮಾಡುತ್ತೇನೆ.
05178035a ತತ್ರ ಗಚ್ಚಸ್ವ ರಾಮ ತ್ವಂ ತ್ವರಿತಂ ಯುದ್ಧದುರ್ಮದ।
05178035c ವ್ಯಪನೇಷ್ಯಾಮಿ ತೇ ದರ್ಪಂ ಪೌರಾಣಂ ಬ್ರಾಹ್ಮಣಬ್ರುವ।।
ಯುದ್ಧದುರ್ಮದ ರಾಮ! ಅಲ್ಲಿ ಬೇಗ ಹೋಗು. ಹಿಂದಿನಿಂದ ನಿನಗಿರುವ ಈ ಬ್ರಾಹ್ಮಣನೆಂಬ ದರ್ಪವನ್ನು ಕಳೆಯುತ್ತೇನೆ.
05178036a ಯಚ್ಚಾಪಿ ಕತ್ಥಸೇ ರಾಮ ಬಹುಶಃ ಪರಿಷತ್ಸು ವೈ।
05178036c ನಿರ್ಜಿತಾಃ ಕ್ಷತ್ರಿಯಾ ಲೋಕೇ ಮಯೈಕೇನೇತಿ ತಚ್ಚೃಣು।।
ರಾಮ! ನಾನೊಬ್ಬನೇ ಲೋಕದ ಕ್ಷತ್ರಿಯರನ್ನು ಸೋಲಿಸಿದೆ ಎಂದು ಬಹಳಷ್ಟು ಪರಿಷತ್ತುಗಳಲ್ಲಿ ಕೊಚ್ಚಿಕೊಳ್ಳುತ್ತಾ ಬಂದಿದ್ದೀಯೆ! ನನ್ನನ್ನು ಕೇಳು!
05178037a ನ ತದಾ ಜಾಯತೇ ಭೀಷ್ಮೋ ಮದ್ವಿಧಃ ಕ್ಷತ್ರಿಯೋಽಪಿ ವಾ।
05178037c ಯಸ್ತೇ ಯುದ್ಧಮಯಂ ದರ್ಪಂ ಕಾಮಂ ಚ ವ್ಯಪನಾಶಯೇತ್।।
ಆ ಸಮಯದಲ್ಲಿ ಭೀಷ್ಮನು ಹುಟ್ಟಿರಲಿಲ್ಲ. ಅಥವಾ ಯುದ್ಧದಲ್ಲಿ ನಿನಗಿರುವ ದರ್ಪ ಮತ್ತು ಆಸೆಯನ್ನು ಕಳೆಯುವ ನನ್ನಂಥಹ ಕ್ಷತ್ರಿಯನೂ ಕೂಡ ಇರಲಿಲ್ಲ.
05178038a ಸೋಽಹಂ ಜಾತೋ ಮಹಾಬಾಹೋ ಭೀಷ್ಮಃ ಪರಪುರಂಜಯಃ।
05178038c ವ್ಯಪನೇಷ್ಯಾಮಿ ತೇ ದರ್ಪಂ ಯುದ್ಧೇ ರಾಮ ನ ಸಂಶಯಃ।
ಮಹಾಬಾಹೋ! ಈಗ ನಾನು - ಪರಪುರಂಜಯ ಭೀಷ್ಮನು - ಹುಟ್ಟಿದ್ದೇನೆ. ರಾಮ! ಯುದ್ಧದಲ್ಲಿ ನಿನ್ನ ದರ್ಪವನ್ನು ಮುರಿಯುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಪರಶುರಾಮಭೀಷ್ಮಯೋಃ ಕುರುಕ್ಷೇತ್ರಾವತರಣೇ ಅಷ್ಟಸಪ್ತತ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಪರಶುರಾಮಭೀಷ್ಮರ ಕುರುಕ್ಷೇತ್ರಾವತರಣದಲ್ಲಿ ನೂರಾಎಪ್ಪತ್ತೆಂಟನೆಯ ಅಧ್ಯಾಯವು.