177 ಪರಶುರಾಮಭೀಷ್ಮಯೋಃ ಕುರುಕ್ಷೇತ್ರಾವತರಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಅಂಬೋಽಪಾಖ್ಯಾನ ಪರ್ವ

ಅಧ್ಯಾಯ 177

ಸಾರ

“ಒಂದುವೇಳೆ ರಣಶ್ಲಾಘೀ ಭೀಷ್ಮನು ನನ್ನ ಮಾತಿನಂತೆ ಮಾಡದಿದ್ದರೆ ಆ ಉದ್ರಿಕ್ತನನ್ನು ಕೊಲ್ಲುತ್ತೇನೆ.” ಎಂದು ಹೇಳಿ ಪರಶುರಾಮನು ಅಂಬೆಯನ್ನೊಡಗೂಡಿ ತನ್ನ ಶಿಷ್ಯರು ಮಿತ್ರರೊಂದಿಗೆ ಕುರುಕ್ಷೇತ್ರದಲ್ಲಿ ಬೀಡು ಬಿಟ್ಟಿದುದು (1-24).

05177001 ಭೀಷ್ಮ ಉವಾಚ।
05177001a ಏವಮುಕ್ತಸ್ತದಾ ರಾಮೋ ಜಹಿ ಭೀಷ್ಮಮಿತಿ ಪ್ರಭೋ।
05177001c ಉವಾಚ ರುದತೀಂ ಕನ್ಯಾಂ ಚೋದಯಂತೀಂ ಪುನಃ ಪುನಃ।।

ಭೀಷ್ಮನು ಹೇಳಿದನು: “ಪ್ರಭೋ! ಹೀಗೆ ಭೀಷ್ಮನನ್ನು ಕೊಲ್ಲು! ಎಂದು ಅವಳು ಹೇಳಲು ರಾಮನು ರೋದಿಸುತ್ತಿರುವ ಆ ಕನ್ಯೆಯನ್ನು ಒತ್ತಾಯಿಸುತ್ತಾ ಪುನಃ ಪುನಃ ಹೇಳಿದನು:

05177002a ಕಾಶ್ಯೇ ಕಾಮಂ ನ ಗೃಹ್ಣಾಮಿ ಶಸ್ತ್ರಂ ವೈ ವರವರ್ಣಿನಿ।
05177002c ಋತೇ ಬ್ರಹ್ಮವಿದಾಂ ಹೇತೋಃ ಕಿಮನ್ಯತ್ಕರವಾಣಿ ತೇ।।

“ಕಾಶ್ಯೇ! ವರವರ್ಣಿನೀ! ಬ್ರಹ್ಮವಿದರ ಕಾರಣಕ್ಕಲ್ಲದೇ ನಾನು ಇಷ್ಟಪಟ್ಟು ಶಸ್ತ್ರಗಳನ್ನು ಹಿಡಿಯುವುದಿಲ್ಲ. ನಾನು ನಿನಗಾಗಿ ಇನ್ನೇನು ಮಾಡಬೇಕು?

05177003a ವಾಚಾ ಭೀಷ್ಮಶ್ಚ ಶಾಲ್ವಶ್ಚ ಮಮ ರಾಜ್ಞೈ ವಶಾನುಗೌ।
05177003c ಭವಿಷ್ಯತೋಽನವದ್ಯಾಂಗಿ ತತ್ಕರಿಷ್ಯಾಮಿ ಮಾ ಶುಚಃ।।

ಅನವದ್ಯಾಂಗೀ! ಭೀಷ್ಮ ಮತ್ತು ಶಾಲ್ವ ಇಬ್ಬರು ರಾಜರೂ ನನ್ನ ಇಚ್ಛೆಯಂತೆ ನಡೆದುಕೊಳ್ಳುತ್ತಾರೆ. ಅದನ್ನು ನಾನು ಮಾಡುತ್ತೇನೆ. ಶೋಕಿಸಬೇಡ!

05177004a ನ ತು ಶಸ್ತ್ರಂ ಗ್ರಹೀಷ್ಯಾಮಿ ಕಥಂ ಚಿದಪಿ ಭಾಮಿನಿ।
05177004c ಋತೇ ನಿಯೋಗಾದ್ವಿಪ್ರಾಣಾಮೇಷ ಮೇ ಸಮಯಃ ಕೃತಃ।।

ಭಾಮಿನಿ! ಆದರೆ ಬ್ರಾಹ್ಮಣರ ನಿಯೋಗವಿಲ್ಲದೇ ಶಸ್ತ್ರಗಳನ್ನು ಎಂದೂ ಹಿಡಿಯುವುದಿಲ್ಲ. ಅದು ನಾನು ಮಾಡಿದ ಪ್ರತಿಜ್ಞೆ.”

05177005 ಅಂಬೋವಾಚ।
05177005a ಮಮ ದುಃಖಂ ಭಗವತಾ ವ್ಯಪನೇಯಂ ಯತಸ್ತತಃ।
05177005c ತತ್ತು ಭೀಷ್ಮಪ್ರಸೂತಂ ಮೇ ತಂ ಜಹೀಶ್ವರ ಮಾಚಿರಂ।।

ಅಂಬೆಯು ಹೇಳಿದಳು: “ಹೇಗಾದರೂ ಮಾಡಿ ಭೀಷ್ಮನಿಂದುಂಟಾದ ನನ್ನ ಈ ದುಃಖವನ್ನು ಹೋಗಲಾಡಿಸು. ಈಶ್ವರ! ಬೇಗನೇ ಅವನನ್ನು ಕೊಲ್ಲು!”

05177006 ರಾಮ ಉವಾಚ।
05177006a ಕಾಶಿಕನ್ಯೇ ಪುನರ್ಬ್ರೂಹಿ ಭೀಷ್ಮಸ್ತೇ ಚರಣಾವುಭೌ।
05177006c ಶಿರಸಾ ವಂದನಾರ್ಹೋಽಪಿ ಗ್ರಹೀಷ್ಯತಿ ಗಿರಾ ಮಮ।।

ರಾಮನು ಹೇಳಿದನು: “ಕಾಶಿಕನ್ಯೇ! ಇನ್ನೊಮ್ಮೆ ಹೇಳು. ಬೇಕಾದರೆ ಭೀಷ್ಮನು ನಿನ್ನ ಚರಣಗಳಿಗೆ ಶಿರಸಾ ವಂದಿಸಿಯಾನು. ಅವನು ನನ್ನ ಮಾತನ್ನು ಸ್ವೀಕರಿಸುತ್ತಾನೆ.”

05177007 ಅಂಬೋವಾಚ।
05177007a ಜಹಿ ಭೀಷ್ಮಂ ರಣೇ ರಾಮ ಮಮ ಚೇದಿಚ್ಚಸಿ ಪ್ರಿಯಂ।
05177007c ಪ್ರತಿಶ್ರುತಂ ಚ ಯದಿ ತತ್ಸತ್ಯಂ ಕರ್ತುಮಿಹಾರ್ಹಸಿ।।

ಅಂಬೆಯು ಹೇಳಿದಳು: “ರಾಮ! ನನಗೆ ಪ್ರಿಯವಾದುದನ್ನು ಮಾಡಲು ಬಯಸುವೆಯಾದರೆ ರಣದಲ್ಲಿ ಭೀಷ್ಮನನ್ನು ಸಂಹರಿಸು. ನೀನು ಭರವಸೆಯಿತ್ತುದನ್ನು ಸತ್ಯವಾಗಿಸಬೇಕು!””

05177008 ಭೀಷ್ಮ ಉವಾಚ।
05177008a ತಯೋಃ ಸಂವದತೋರೇವಂ ರಾಜನ್ರಾಮಾಂಬಯೋಸ್ತದಾ।
05177008c ಅಕೃತವ್ರಣೋ ಜಾಮದಗ್ನ್ಯಮಿದಂ ವಚನಮಬ್ರವೀತ್।।

ಭೀಷ್ಮನು ಹೇಳಿದನು: “ರಾಜನ್! ರಾಮ ಮತ್ತು ಅಂಬೆಯರು ಈ ರೀತಿ ಮಾತನಾಡಿಕೊಳ್ಳುತ್ತಿರಲು ಅಕೃತವ್ರಣನು ಜಾಮದಗ್ನಿಗೆ ಈ ಮಾತನ್ನಾಡಿದನು:

05177009a ಶರಣಾಗತಾಂ ಮಹಾಬಾಹೋ ಕನ್ಯಾಂ ನ ತ್ಯಕ್ತುಮರ್ಹಸಿ।
05177009c ಜಹಿ ಭೀಷ್ಮಂ ರಣೇ ರಾಮ ಗರ್ಜಂತಮಸುರಂ ಯಥಾ।।

“ಮಹಾಬಾಹೋ! ಶರಣಾಗತಳಾಗಿರುವ ಕನ್ಯೆಯನ್ನು ತ್ಯಜಿಸಬಾರದು. ರಾಮ! ಅಸುರನಂತೆ ಗರ್ಜಿಸುತ್ತಿರುವ ಭೀಷ್ಮನನ್ನು ರಣದಲ್ಲಿ ಕೊಲ್ಲು.

05177010a ಯದಿ ಭೀಷ್ಮಸ್ತ್ವಯಾಹೂತೋ ರಣೇ ರಾಮ ಮಹಾಮುನೇ।
05177010c ನಿರ್ಜಿತೋಽಸ್ಮೀತಿ ವಾ ಬ್ರೂಯಾತ್ಕುರ್ಯಾದ್ವಾ ವಚನಂ ತವ।।

ರಾಮ! ಮಹಾಮುನೇ! ಒಂದುವೇಳೆ ನೀನು ಭೀಷ್ಮನನ್ನು ರಣಕ್ಕೆ ಕರೆದರೆ ಅವನು ಸೋತಿದ್ದೇನೆಂದು ಅಥವಾ ನಿನ್ನ ಮಾತಿನಂತೆ ಮಾಡುತ್ತೇನೆ ಎಂದು ಹೇಳುತ್ತಾನೆ.

05177011a ಕೃತಮಸ್ಯಾ ಭವೇತ್ಕಾರ್ಯಂ ಕನ್ಯಾಯಾ ಭೃಗುನಂದನ।
05177011c ವಾಕ್ಯಂ ಸತ್ಯಂ ಚ ತೇ ವೀರ ಭವಿಷ್ಯತಿ ಕೃತಂ ವಿಭೋ।।

ಭೃಗುನಂದನ! ಆಗ ಈ ಕನ್ಯೆಯ ಕಾರ್ಯವನ್ನು ಮಾಡಿಕೊಟ್ಟಾದ ಹಾಗಾಗುತ್ತದೆ ಮತ್ತು ವೀರ! ವಿಭೋ! ನಿನ್ನ ಮಾತನ್ನೂ ಸತ್ಯವಾಗಿಸಿದಂತಾಗುತ್ತದೆ.

05177012a ಇಯಂ ಚಾಪಿ ಪ್ರತಿಜ್ಞಾ ತೇ ತದಾ ರಾಮ ಮಹಾಮುನೇ।
05177012c ಜಿತ್ವಾ ವೈ ಕ್ಷತ್ರಿಯಾನ್ಸರ್ವಾನ್ಬ್ರಾಹ್ಮಣೇಷು ಪ್ರತಿಶ್ರುತಂ।।

ರಾಮ! ಮಹಾಮುನೇ! ಕ್ಷತ್ರಿಯರೆಲ್ಲರನ್ನೂ ಗೆದ್ದು ನೀನು ಬ್ರಾಹ್ಮಣರಿಗೆ ಕೇಳಿಸುವಂತೆ ಈ ಪ್ರತಿಜ್ಞೆಯನ್ನೂ ಮಾಡಿದ್ದೆ.

05177013a ಬ್ರಾಹ್ಮಣಃ ಕ್ಷತ್ರಿಯೋ ವೈಶ್ಯಃ ಶೂದ್ರಶ್ಚೈವ ರಣೇ ಯದಿ।
05177013c ಬ್ರಹ್ಮದ್ವಿಡ್ಭವಿತಾ ತಂ ವೈ ಹನಿಷ್ಯಾಮೀತಿ ಭಾರ್ಗವ।।

ಭಾರ್ಗವ! ರಣದಲ್ಲಿ ಬ್ರಾಹ್ಮಣನಾಗಲೀ, ಕ್ಷತ್ರಿಯನಾಗಲೀ, ವೈಶ್ಯನಾಗಲೀ, ಶೂದ್ರನಾಗಲೀ ಬ್ರಹ್ಮದ ವಿರುದ್ಧರಾದವರನ್ನು ಕೊಲ್ಲುತ್ತೇನೆ ಎಂದು.

05177014a ಶರಣಂ ಹಿ ಪ್ರಪನ್ನಾನಾಂ ಭೀತಾನಾಂ ಜೀವಿತಾರ್ಥಿನಾಂ।
05177014c ನ ಶಕ್ಷ್ಯಾಮಿ ಪರಿತ್ಯಾಗಂ ಕರ್ತುಂ ಜೀವನ್ಕಥಂ ಚನ।।

ಜೀವದ ಆಸೆಯಿಂದ ಭೀತರಾಗಿ ಶರಣು ಬಂದ ಪ್ರಪನ್ನರನ್ನು ನಾನು ಜೀವಂತವಿರುವಾಗ ಎಂದೂ ಪರಿತ್ಯಜಿಸಲಾರೆ.

05177015a ಯಶ್ಚ ಕ್ಷತ್ರಂ ರಣೇ ಕೃತ್ಸ್ನಂ ವಿಜೇಷ್ಯತಿ ಸಮಾಗತಂ।
05177015c ದೃಪ್ತಾತ್ಮಾನಮಹಂ ತಂ ಚ ಹನಿಷ್ಯಾಮೀತಿ ಭಾರ್ಗವ।।

ಭಾರ್ಗವ! ಯಾರಾದರೂ ರಣದಲ್ಲಿ ಸೇರಿರುವ ಎಲ್ಲ ಕ್ಷತ್ರಿಯರನ್ನು ಜಯಿಸಿದರೂ ಆ ಸೊಕ್ಕಿನವನನ್ನು ನಾನು ಕೊಲ್ಲುತ್ತೇನೆ ಎಂದು.

05177016a ಸ ಏವಂ ವಿಜಯೀ ರಾಮ ಭೀಷ್ಮಃ ಕುರುಕುಲೋದ್ವಹಃ।
05177016c ತೇನ ಯುಧ್ಯಸ್ವ ಸಂಗ್ರಾಮೇ ಸಮೇತ್ಯ ಭೃಗುನಂದನ।।

ರಾಮ! ಇದೇ ರೀತಿ ಕುರುಕುಲೋದ್ವಹ ಭೀಷ್ಮನು ವಿಜಯವನ್ನು ಸಾಧಿಸಿದ್ದಾನೆ. ಭೃಗುನಂದನ! ಸಂಗ್ರಾಮದಲ್ಲಿ ಅವನನ್ನು ಎದುರಿಸಿ ಯುದ್ಧ ಮಾಡು!”

05177017 ರಾಮ ಉವಾಚ।
05177017a ಸ್ಮರಾಮ್ಯಹಂ ಪೂರ್ವಕೃತಾಂ ಪ್ರತಿಜ್ಞಾಮೃಷಿಸತ್ತಮ।
05177017c ತಥೈವ ಚ ಕರಿಷ್ಯಾಮಿ ಯಥಾ ಸಾಮ್ನೈವ ಲಪ್ಸ್ಯತೇ।।

ರಾಮನು ಹೇಳಿದನು: “ಋಷಿಸತ್ತಮ! ಹಿಂದೆ ಮಾಡಿದ ಪ್ರತಿಜ್ಞೆಯನ್ನು ನಾನು ನೆನಪಿಸಿಕೊಳ್ಳುತ್ತಿದ್ದೇನೆ. ಸಾಮದಿಂದ ಏನು ದೊರೆಯುತ್ತದೆಯೋ ಅದನ್ನು ಮಾಡುತ್ತೇನೆ.

05177018a ಕಾರ್ಯಮೇತನ್ಮಹದ್ಬ್ರಹ್ಮನ್ಕಾಶಿಕನ್ಯಾಮನೋಗತಂ।
05177018c ಗಮಿಷ್ಯಾಮಿ ಸ್ವಯಂ ತತ್ರ ಕನ್ಯಾಮಾದಾಯ ಯತ್ರ ಸಃ।।

ಬ್ರಹ್ಮನ್! ಕಾಶಿಕನ್ಯೆಯ ಮನಸ್ಸಿನಲ್ಲಿರುವುದು ಮಹಾ ಕಾರ್ಯವು. ಕನ್ಯೆಯನ್ನು ಕರೆದುಕೊಂಡು ಸ್ವಯಂ ನಾನೇ ಅವನಿರುವಲ್ಲಿಗೆ ಹೋಗುತ್ತೇನೆ.

05177019a ಯದಿ ಭೀಷ್ಮೋ ರಣಶ್ಲಾಘೀ ನ ಕರಿಷ್ಯತಿ ಮೇ ವಚಃ।
05177019c ಹನಿಷ್ಯಾಮ್ಯೇನಮುದ್ರಿಕ್ತಮಿತಿ ಮೇ ನಿಶ್ಚಿತಾ ಮತಿಃ।।

ಒಂದುವೇಳೆ ರಣಶ್ಲಾಘೀ ಭೀಷ್ಮನು ನನ್ನ ಮಾತಿನಂತೆ ಮಾಡದಿದ್ದರೆ ಆ ಉದ್ರಿಕ್ತನನ್ನು ಕೊಲ್ಲುತ್ತೇನೆ. ಇದು ನನ್ನ ನಿಶ್ಚಯ.

05177020a ನ ಹಿ ಬಾಣಾ ಮಯೋತ್ಸೃಷ್ಟಾಃ ಸಜ್ಜಂತೀಹ ಶರೀರಿಣಾಂ।
05177020c ಕಾಯೇಷು ವಿದಿತಂ ತುಭ್ಯಂ ಪುರಾ ಕ್ಷತ್ರಿಯಸಂಗರೇ।।

ಏಕೆಂದರೆ ನಾನು ಬಿಟ್ಟ ಬಾಣಗಳು ಶರೀರಿಗಳ ದೇಹವನ್ನು ಹೊಗುವುದಿಲ್ಲ. ಇದನ್ನು ನೀನು ಹಿಂದೆ ಕ್ಷತ್ರಿಯರೊಂದಿಗಿನ ಸಂಗರದಲ್ಲಿ ತಿಳಿದುಕೊಂಡಿದ್ದೀಯೆ.””

05177021 ಭೀಷ್ಮ ಉವಾಚ।
05177021a ಏವಮುಕ್ತ್ವಾ ತತೋ ರಾಮಃ ಸಹ ತೈರ್ಬ್ರಹ್ಮವಾದಿಭಿಃ।
05177021c ಪ್ರಯಾಣಾಯ ಮತಿಂ ಕೃತ್ವಾ ಸಮುತ್ತಸ್ಥೌ ಮಹಾಮನಾಃ।।

ಭೀಷ್ಮನು ಹೇಳಿದನು: “ಹೀಗೆ ಹೇಳಿ ರಾಮನು ಮಹಾಮನಸ್ವಿ ಬ್ರಹ್ಮವಾದಿಗಳೊಂದಿಗೆ ಪ್ರಯಾಣದ ಮನಸ್ಸು ಮಾಡಿ ಮೇಲೆದ್ದನು.

05177022a ತತಸ್ತೇ ತಾಮುಷಿತ್ವಾ ತು ರಜನೀಂ ತತ್ರ ತಾಪಸಾಃ।
05177022c ಹುತಾಗ್ನಯೋ ಜಪ್ತಜಪ್ಯಾಃ ಪ್ರತಸ್ಥುರ್ಮಜ್ಜಿಘಾಂಸಯಾ।।

ರಾತ್ರಿಯನ್ನು ಅಲ್ಲಿಯೇ ಕಳೆದು, ತಾಪಸರು ಅಗ್ನಿಗಳಲ್ಲಿ ಆಹುತಿಗಳನ್ನಿತ್ತು, ಜಪಗಳನ್ನು ಜಪಿಸಿ, ನನ್ನನ್ನು ಕೊಲ್ಲಲೋಸುಗ ಹೊರಟರು.

05177023a ಅಭ್ಯಗಚ್ಚತ್ತತೋ ರಾಮಃ ಸಹ ತೈರ್ಬ್ರಾಹ್ಮಣರ್ಷಭೈಃ।
05177023c ಕುರುಕ್ಷೇತ್ರಂ ಮಹಾರಾಜ ಕನ್ಯಯಾ ಸಹ ಭಾರತ।।

ಮಹಾರಾಜ! ಭಾರತ! ಆಗ ರಾಮನು ಆ ಬ್ರಾಹ್ಮಣರ್ಷಭರೊಂದಿಗೆ ಮತ್ತು ಕನ್ಯೆಯೊಂದಿಗೆ ಕುರುಕ್ಷೇತ್ರಕ್ಕೆ ಆಗಮಿಸಿದನು.

05177024a ನ್ಯವಿಶಂತ ತತಃ ಸರ್ವೇ ಪರಿಗೃಹ್ಯ ಸರಸ್ವತೀಂ।
05177024c ತಾಪಸಾಸ್ತೇ ಮಹಾತ್ಮಾನೋ ಭೃಗುಶ್ರೇಷ್ಠಪುರಸ್ಕೃತಾಃ।।

ಮಹಾತ್ಮ ಭೃಗುಶ್ರೇಷ್ಠನ ನಾಯಕತ್ವದಲ್ಲಿ ಎಲ್ಲ ತಾಪಸರೂ ಸರಸ್ವತೀ ತೀರದಲ್ಲಿ ಬೀಡುಬಿಟ್ಟರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಪರಶುರಾಮಭೀಷ್ಮಯೋಃ ಕುರುಕ್ಷೇತ್ರಾವತರಣೇ ಸಪ್ತಸಪ್ತತ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಪರಶುರಾಮಭೀಷ್ಮರ ಕುರುಕ್ಷೇತ್ರಾವತರಣದಲ್ಲಿ ನೂರಾಎಪ್ಪತ್ತೇಳನೆಯ ಅಧ್ಯಾಯವು.