ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಅಂಬೋಽಪಾಖ್ಯಾನ ಪರ್ವ
ಅಧ್ಯಾಯ 176
ಸಾರ
ಅಕೃತವ್ರಣ ಅಂಬೆಯರು ಚರ್ಚೆಮಾಡಿ ಭೀಷ್ಮನನ್ನೇ ಶಿಕ್ಷಿಸಬೇಕೆಂದು ನಿರ್ಧರಿಸಿದುದು (1-14). ಮರುದಿನ ಬೆಳಿಗ್ಗೆ ಆಗಮಿಸಿದ ಪರಶುರಾಮನಲ್ಲಿ ಅಂಬೆಯ ಕಷ್ಟಗಳನ್ನು ನಿವೇದಿಸಿದುದು (15-42).
05176001 ಅಕೃತವ್ರಣ ಉವಾಚ।
05176001a ದುಃಖದ್ವಯಮಿದಂ ಭದ್ರೇ ಕತರಸ್ಯ ಚಿಕೀರ್ಷಸಿ।
05176001c ಪ್ರತಿಕರ್ತವ್ಯಮಬಲೇ ತತ್ತ್ವಂ ವತ್ಸೇ ಬ್ರವೀಹಿ ಮೇ।।
ಅಕೃತವ್ರಣನು ಹೇಳಿದನು: “ಭದ್ರೇ! ಇಲ್ಲಿ ಎರಡು ದುಃಖಗಳಿವೆ. ಯಾವುದನ್ನು ಹೋಗಲಾಡಿಸಲು ಬಯಸುವೆ? ಯಾವುದರ ಪ್ರತೀಕಾರವನ್ನು ಬಯಸುತ್ತೀಯೆ? ಸತ್ಯವನ್ನು ನನಗೆ ಹೇಳು ವತ್ಸೇ!
05176002a ಯದಿ ಸೌಭಪತಿರ್ಭದ್ರೇ ನಿಯೋಕ್ತವ್ಯೋ ಮತೇ ತವ।
05176002c ನಿಯೋಕ್ಷ್ಯತಿ ಮಹಾತ್ಮಾ ತಂ ರಾಮಸ್ತ್ವದ್ಧಿತಕಾಮ್ಯಯಾ।।
ಭದ್ರೇ! ಒಂದುವೇಳೆ ಸೌಭಪತಿಯನ್ನು ಸೇರಬೇಕೆಂದು ನಿನ್ನ ಮನಸ್ಸಿದ್ದರೆ ಮಹಾತ್ಮ ರಾಮನು ನಿನಗೋಸ್ಕರವಾಗಿ ಅವನ ಮೇಲೆ ನಿಬಂಧನೆಯನ್ನು ಹಾಕಬಲ್ಲನು.
05176003a ಅಥಾಪಗೇಯಂ ಭೀಷ್ಮಂ ತಂ ರಾಮೇಣೇಚ್ಚಸಿ ಧೀಮತಾ।
05176003c ರಣೇ ವಿನಿರ್ಜಿತಂ ದ್ರಷ್ಟುಂ ಕುರ್ಯಾತ್ತದಪಿ ಭಾರ್ಗವಃ।।
ಅಥವಾ ಆಪಗೇಯ ಭೀಷ್ಮನನ್ನು ರಣದಲ್ಲಿ ಸೋಲುವುದನ್ನು ನೋಡಬೇಕೆಂದು ಇಚ್ಛಿಸಿದರೆ ಆ ಧೀಮತ ಭಾರ್ಗವ ರಾಮನು ಅದನ್ನೂ ಮಾಡಬಲ್ಲನು.
05176004a ಸೃಂಜಯಸ್ಯ ವಚಃ ಶ್ರುತ್ವಾ ತವ ಚೈವ ಶುಚಿಸ್ಮಿತೇ।
05176004c ಯದತ್ರಾನಂತರಂ ಕಾರ್ಯಂ ತದದ್ಯೈವ ವಿಚಿಂತ್ಯತಾಂ।।
ಶುಚಿಸ್ಮಿತೇ! ನಿನ್ನ ಮತ್ತು ಸೃಂಜಯನ ಮಾತನ್ನು ಕೇಳಿ ಅನಂತರ ಯಾವುದನ್ನು ಮಾಡಬೇಕೆಂದು ಯೋಚಿಸೋಣ.”
05176005 ಅಂಬೋವಾಚ।
05176005a ಅಪನೀತಾಸ್ಮಿ ಭೀಷ್ಮೇಣ ಭಗವನ್ನವಿಜಾನತಾ।
05176005c ನ ಹಿ ಜಾನಾತಿ ಮೇ ಭೀಷ್ಮೋ ಬ್ರಹ್ಮಂ ಶಾಲ್ವಗತಂ ಮನಃ।।
ಅಂಬೆಯು ಹೇಳಿದಳು: “ಭಗವನ್! ಭೀಷ್ಮನು ತಿಳಿಯದೆಯೇ ನನ್ನನ್ನು ಅಪಹರಿಸಿದನು. ಏಕೆಂದರೆ ಬ್ರಹ್ಮನ್! ಭೀಷ್ಮನಿಗೆ ನನ್ನ ಮನಸ್ಸು ಶಾಲ್ವನಿಗೆ ಹೋಗಿತ್ತೆಂದು ತಿಳಿದಿರಲಿಲ್ಲ.
05176006a ಏತದ್ವಿಚಾರ್ಯ ಮನಸಾ ಭವಾನೇವ ವಿನಿಶ್ಚಯಂ।
05176006c ವಿಚಿನೋತು ಯಥಾನ್ಯಾಯಂ ವಿಧಾನಂ ಕ್ರಿಯತಾಂ ತಥಾ।।
ಈ ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಂಡು ಯಥಾನ್ಯಾಯವಾದ ಉಪಾಯವನ್ನು ನೀವೇ ನಿಶ್ಚಯಿಸಬೇಕು ಮತ್ತು ಅದರಂತೆ ಮಾಡಬೇಕು.
05176007a ಭೀಷ್ಮೇ ವಾ ಕುರುಶಾರ್ದೂಲೇ ಶಾಲ್ವರಾಜೇಽಥ ವಾ ಪುನಃ।
05176007c ಉಭಯೋರೇವ ವಾ ಬ್ರಹ್ಮನ್ಯದ್ಯುಕ್ತಂ ತತ್ಸಮಾಚರ।।
ಬ್ರಹ್ಮನ್! ಕುರುಶಾರ್ದೂಲ ಭೀಷ್ಮ ಅಥವಾ ಶಾಲ್ವರಾಜ ಇಬ್ಬರಲ್ಲಿ ಒಬ್ಬರ ಮೇಲೆ ಅಥವಾ ಇಬ್ಬರ ಮೇಲೂ, ಯಾವುದು ಸರಿಯೋ, ಅದನ್ನು ಮಾಡು.
05176008a ನಿವೇದಿತಂ ಮಯಾ ಹ್ಯೇತದ್ದುಃಖಮೂಲಂ ಯಥಾತಥಂ।
05176008c ವಿಧಾನಂ ತತ್ರ ಭಗವನ್ಕರ್ತುಮರ್ಹಸಿ ಯುಕ್ತಿತಃ।।
ಭಗವನ್! ನನ್ನ ದುಃಖದ ಮೂಲವನ್ನು ಯಥಾವತ್ತಾಗಿ ಹೇಳಿದ್ದೇನೆ. ಭಗವನ್! ಅದರ ಕುರಿತು ಯಾವುದು ಸರಿಯೋ ಅದನ್ನು ಮಾಡಬೇಕು.”
05176009 ಅಕೃತವ್ರಣ ಉವಾಚ।
05176009a ಉಪಪನ್ನಮಿದಂ ಭದ್ರೇ ಯದೇವಂ ವರವರ್ಣಿನಿ।
05176009c ಧರ್ಮಂ ಪ್ರತಿ ವಚೋ ಬ್ರೂಯಾಃ ಶೃಣು ಚೇದಂ ವಚೋ ಮಮ।।
ಅಕೃತವ್ರಣನು ಹೇಳಿದನು: “ಭದ್ರೇ! ವರವರ್ಣಿನಿ! ನೀನು ಹೇಳಿದುದೆಲ್ಲವೂ ಧರ್ಮದ ಪ್ರಕಾರವೇ ಇವೆ. ಇನ್ನು ನನ್ನ ಮಾತನ್ನೂ ಕೇಳು.
05176010a ಯದಿ ತ್ವಾಮಾಪಗೇಯೋ ವೈ ನ ನಯೇದ್ಗಜಸಾಹ್ವಯಂ।
05176010c ಶಾಲ್ವಸ್ತ್ವಾಂ ಶಿರಸಾ ಭೀರು ಗೃಹ್ಣೀಯಾದ್ರಾಮಚೋದಿತಃ।।
ಒಂದುವೇಳೆ ಆಪಗೇಯನು ನಿನ್ನನ್ನು ಗಜಸಾಹ್ವಯಕ್ಕೆ ಕರೆದುಕೊಂಡು ಹೋಗದೇ ಇದ್ದಿದ್ದರೆ ಭೀರು! ರಾಮನ ಹೇಳಿಕೆಯನ್ನು ತಲೆಯಲ್ಲಿ ಹೊತ್ತು ಶಾಲ್ವನು ನಿನ್ನನ್ನು ಸ್ವೀಕರಿಸುತ್ತಿದ್ದನು.
05176011a ತೇನ ತ್ವಂ ನಿರ್ಜಿತಾ ಭದ್ರೇ ಯಸ್ಮಾನ್ನೀತಾಸಿ ಭಾಮಿನಿ।
05176011c ಸಂಶಯಃ ಶಾಲ್ವರಾಜಸ್ಯ ತೇನ ತ್ವಯಿ ಸುಮಧ್ಯಮೇ।।
ಆದರೆ ಭದ್ರೇ! ಭಾಮಿನೀ! ಸುಮಧ್ಯಮೇ! ನಿನ್ನನ್ನು ಅವನು ಗೆದ್ದು ಅಪಹರಿಸಿಕೊಂಡು ಹೋದುದರಿಂದ ಶಾಲ್ವರಾಜನಿಗೆ ನಿನ್ನ ಮೇಲೆ ಸಂಶಯ ಬಂದಿದೆ.
05176012a ಭೀಷ್ಮಃ ಪುರುಷಮಾನೀ ಚ ಜಿತಕಾಶೀ ತಥೈವ ಚ।
05176012c ತಸ್ಮಾತ್ಪ್ರತಿಕ್ರಿಯಾ ಯುಕ್ತಾ ಭೀಷ್ಮೇ ಕಾರಯಿತುಂ ತ್ವಯಾ।।
ಭೀಷ್ಮನು ಪೌರುಷದ ಸೊಕ್ಕಿನಲ್ಲಿದ್ದಾನೆ. ಗೆದ್ದ ಜಂಬದಲ್ಲಿದ್ದಾನೆ. ಆದುದರಿಂದ ನೀನು ಭೀಷ್ಮನಿಗೆ ಪ್ರತಿಕ್ರಿಯೆ ಮಾಡಿಸುವುದು ಯುಕ್ತವಾಗಿದೆ.”
05176013 ಅಂಬೋವಾಚ।
05176013a ಮಮಾಪ್ಯೇಷ ಮಹಾನ್ಬ್ರಹ್ಮನ್ ಹೃದಿ ಕಾಮೋಽಭಿವರ್ತತೇ।
05176013c ಘಾತಯೇಯಂ ಯದಿ ರಣೇ ಭೀಷ್ಮಮಿತ್ಯೇವ ನಿತ್ಯದಾ।।
ಅಂಬೆಯು ಹೇಳಿದಳು: “ಬ್ರಹ್ಮನ್! ಒಂದುವೇಳೆ ನಾನು ರಣದಲ್ಲಿ ಭೀಷ್ಮನನ್ನು ಕೊಲ್ಲಬಹುದಾಗಿದ್ದರೆ ಎನ್ನುವ ಮಹಾ ಕಾಮವು ನಿತ್ಯವೂ ನನ್ನ ಹೃದಯದಲ್ಲಿ ಬೆಳೆಯುತ್ತಿದೆ.
05176014a ಭೀಷ್ಮಂ ವಾ ಶಾಲ್ವರಾಜಂ ವಾ ಯಂ ವಾ ದೋಷೇಣ ಗಚ್ಚಸಿ।
05176014c ಪ್ರಶಾಧಿ ತಂ ಮಹಾಬಾಹೋ ಯತ್ಕೃತೇಽಹಂ ಸುದುಃಖಿತಾ।।
ದೋಷವು ಭೀಷ್ಮನ ಮೇಲಾದರೂ ಅಥವಾ ಶಾಲ್ವರಾಜನ ಮೇಲಾದರೂ ಹೋಗಲಿ. ಆದರೆ ಮಹಾಬಾಹೋ! ಯಾರ ಕೃತ್ಯದಿಂದ ನಾನು ತುಂಬಾ ದುಃಖಿತಳಾಗಿದ್ದೇನೋ ಅವನನ್ನು ಶಿಕ್ಷಿಸಬೇಕು.””
05176015 ಭೀಷ್ಮ ಉವಾಚ।
05176015a ಏವಂ ಕಥಯತಾಮೇವ ತೇಷಾಂ ಸ ದಿವಸೋ ಗತಃ।
05176015c ರಾತ್ರಿಶ್ಚ ಭರತಶ್ರೇಷ್ಠ ಸುಖಶೀತೋಷ್ಣಮಾರುತಾ।।
ಭೀಷ್ಮನು ಹೇಳಿದನು: “ಭರತಶ್ರೇಷ್ಠ! ಈ ರೀತಿ ಅವರು ಮಾತನಾಡಿಕೊಳ್ಳುತ್ತಿರುವಾಗ ದಿನವು ಕಳೆಯಿತು. ಮತ್ತು ಸುಖ ಶೀತೋಷ್ಣ ಮಾರುತವು ಬೀಸಿ ರಾತ್ರಿಯೂ ಕಳೆಯಿತು.
05176016a ತತೋ ರಾಮಃ ಪ್ರಾದುರಾಸೀತ್ಪ್ರಜ್ವಲನ್ನಿವ ತೇಜಸಾ।
05176016c ಶಿಷ್ಯೈಃ ಪರಿವೃತೋ ರಾಜಂ ಜಟಾಚೀರಧರೋ ಮುನಿಃ।।
ಆಗ ರಾಜನ್! ಶಿಷ್ಯರಿಂದ ಪರಿವೃತನಾಗಿ ಜಟಾಚೀರಧರ ಮುನಿ ರಾಮನು ಪ್ರಜ್ವಲಿಸುವ ತೇಜಸ್ಸಿನೊಂದಿಗೆ ಆಗಮಿಸಿದನು.
05176017a ಧನುಷ್ಪಾಣಿರದೀನಾತ್ಮಾ ಖಡ್ಗಂ ಬಿಭ್ರತ್ಪರಶ್ವಧೀ।
05176017c ವಿರಜಾ ರಾಜಶಾರ್ದೂಲ ಸೋಽಭ್ಯಯಾತ್ಸೃಂಜಯಂ ನೃಪಂ।।
ರಾಜಶಾರ್ದೂಲ! ಕೈಯಲ್ಲಿ ಧನುಸ್ಸು, ಖಡ್ಗ ಮತ್ತು ಪರಶುಗಳನ್ನು ಹಿಡಿದು ಧೂಳಿಲ್ಲದೇ ಹೊಳೆಯುತ್ತಾ ಅವನು ಸೃಂಜಯರ ನೃಪನನ್ನು ಸಮೀಪಿಸಿದನು.
05176018a ತತಸ್ತಂ ತಾಪಸಾ ದೃಷ್ಟ್ವಾ ಸ ಚ ರಾಜಾ ಮಹಾತಪಾಃ।
05176018c ತಸ್ಥುಃ ಪ್ರಾಂಜಲಯಃ ಸರ್ವೇ ಸಾ ಚ ಕನ್ಯಾ ತಪಸ್ವಿನೀ।।
ಆಗ ಆ ತಾಪಸನನ್ನು ನೋಡಿ ಆ ರಾಜ ಮಹಾತಪಸ್ವಿ, ಆ ತಪಸ್ವಿನಿ ಕನ್ಯೆ ಮತ್ತು ಎಲ್ಲರೂ ಕೈಮುಗಿದು ನಿಂತುಕೊಂಡರು.
05176019a ಪೂಜಯಾಮಾಸುರವ್ಯಗ್ರಾ ಮಧುಪರ್ಕೇಣ ಭಾರ್ಗವಂ।
05176019c ಅರ್ಚಿತಶ್ಚ ಯಥಾಯೋಗಂ ನಿಷಸಾದ ಸಹೈವ ತೈಃ।।
ಭಾರ್ಗವನನ್ನು ಮಧುಪರ್ಕದಿಂದ ಪೂಜಿಸಿದರು. ಯಥಾಯೋಗವಾಗಿ ಪೂಜಿಸಲ್ಪಟ್ಟು ಅವನು ಅವರೊಂದಿಗೆ ಕುಳಿತುಕೊಂಡನು.
05176020a ತತಃ ಪೂರ್ವವ್ಯತೀತಾನಿ ಕಥಯೇತೇ ಸ್ಮ ತಾವುಭೌ।
05176020c ಸೃಂಜಯಶ್ಚ ಸ ರಾಜರ್ಷಿರ್ಜಾಮದಗ್ನ್ಯಶ್ಚ ಭಾರತ।।
ಭಾರತ! ಆಗ ರಾಜರ್ಷಿ ಸೃಂಜಯ ಮತ್ತು ಜಾಮದಗ್ನಿ ಇಬ್ಬರೂ ಹಿಂದೆ ನಡೆದುದರ ಕುರಿತು ಮಾತುಕಥೆಯನ್ನಾಡಿದರು.
05176021a ತತಃ ಕಥಾಂತೇ ರಾಜರ್ಷಿರ್ಭೃಗುಶ್ರೇಷ್ಠಂ ಮಹಾಬಲಂ।
05176021c ಉವಾಚ ಮಧುರಂ ಕಾಲೇ ರಾಮಂ ವಚನಮರ್ಥವತ್।।
ಆಗ ಮಾತಿನ ಕೊನೆಯಲ್ಲಿ ಮಧುರ ಕಾಲದಲ್ಲಿ ರಾಜರ್ಷಿಯು ಮಹಾಬಲ ಭೃಗುಶ್ರೇಷ್ಠ ರಾಮನಿಗೆ ಅರ್ಥವತ್ತಾದ ಈ ಮಾತುಗಳನ್ನಾಡಿದನು:
05176022a ರಾಮೇಯಂ ಮಮ ದೌಹಿತ್ರೀ ಕಾಶಿರಾಜಸುತಾ ಪ್ರಭೋ।
05176022c ಅಸ್ಯಾಃ ಶೃಣು ಯಥಾತತ್ತ್ವಂ ಕಾರ್ಯಂ ಕಾರ್ಯವಿಶಾರದ।।
“ರಾಮ! ಪ್ರಭೋ! ಇವಳು ನನ್ನ ಮಗಳ ಮಗಳು, ಕಾಶಿರಾಜಸುತೆ. ಕಾರ್ಯವಿಶಾರದ! ಇವಳನ್ನು ಕೇಳಿ ಹೇಗೆ ತಿಳಿಯುತ್ತದೆಯೋ ಹಾಗೆ ಮಾಡು.”
05176023a ಪರಮಂ ಕಥ್ಯತಾಂ ಚೇತಿ ತಾಂ ರಾಮಃ ಪ್ರತ್ಯಭಾಷತ।
05176023c ತತಃ ಸಾಭ್ಯಗಮದ್ರಾಮಂ ಜ್ವಲಂತಮಿವ ಪಾವಕಂ।।
“ಆಗಲಿ. ಹೇಳು!” ಎಂದು ರಾಮನು ಅವಳಿಗೆ ಹೇಳಲು ಅವಳು ಬೆಂಕಿಯಂತ ಕಣ್ಣೀರನ್ನು ಸುರಿಸುತ್ತಾ ರಾಮನಲ್ಲಿಗೆ ಬಂದಳು.
05176024a ಸಾ ಚಾಭಿವಾದ್ಯ ಚರಣೌ ರಾಮಸ್ಯ ಶಿರಸಾ ಶುಭಾ।
05176024c ಸ್ಪೃಷ್ಟ್ವಾ ಪದ್ಮದಲಾಭಾಭ್ಯಾಂ ಪಾಣಿಭ್ಯಾಮಗ್ರತಃ ಸ್ಥಿತಾ।।
ಆ ಶುಭೆಯು ರಾಮನ ಚರಣಗಳಿಗೆ ಶಿರಸಾ ನಮಸ್ಕರಿಸಿ, ಪದ್ಮದಲಗಳಂತಿರುವ ಕೈಗಳಿಂದ ಮುಟ್ಟಿ, ನಿಂತುಕೊಂಡಳು.
05176025a ರುರೋದ ಸಾ ಶೋಕವತೀ ಬಾಷ್ಪವ್ಯಾಕುಲಲೋಚನಾ।
05176025c ಪ್ರಪೇದೇ ಶರಣಂ ಚೈವ ಶರಣ್ಯಂ ಭೃಗುನಂದನಂ।।
ಕಣ್ಣೀರುತುಂಬಿದ ಕಣ್ಣುಗಳ ಆ ಶೋಕವತಿಯು ರೋದಿಸಿದಳು. ಶರಣ್ಯ ಭೃಗುನಂದನನ ಶರಣು ಹೊಕ್ಕಳು.
05176026 ರಾಮ ಉವಾಚ।
05176026a ಯಥಾಸಿ ಸೃಂಜಯಸ್ಯಾಸ್ಯ ತಥಾ ಮಮ ನೃಪಾತ್ಮಜೇ।
05176026c ಬ್ರೂಹಿ ಯತ್ತೇ ಮನೋದುಃಖಂ ಕರಿಷ್ಯೇ ವಚನಂ ತವ।।
ರಾಮನು ಹೇಳಿದನು: “ನೃಪಾತ್ಮಜೇ! ಸೃಂಜಯನಿಗೆ ನೀನು ಹೇಗೋ ಹಾಗೆ ನನಗೂ ಕೂಡ. ನಿನ್ನ ಮನೋದುಃಖವೇನೆಂದು ಹೇಳು. ನಿನ್ನ ಮಾತನ್ನು ಮಾಡಿಕೊಡುತ್ತೇನೆ.”
05176027 ಅಂಬೋವಾಚ।
05176027a ಭಗವಂ ಶರಣಂ ತ್ವಾದ್ಯ ಪ್ರಪನ್ನಾಸ್ಮಿ ಮಹಾವ್ರತ।
05176027c ಶೋಕಪಂಕಾರ್ಣವಾದ್ಘೋರಾದುದ್ಧರಸ್ವ ಚ ಮಾಂ ವಿಭೋ।।
ಅಂಬೆಯು ಹೇಳಿದಳು: “ಮಹಾವ್ರತ! ಭಗವನ್! ಇಂದು ನಿನ್ನ ಶರಣು ಹೊಕ್ಕಿದ್ದೇನೆ. ವಿಭೋ! ನನ್ನನ್ನು ಘೋರವಾದ ಈ ಶೋಕದ ಕೆಸರು-ಕೂಪದಿಂದ ಉದ್ಧರಿಸು.””
05176028 ಭೀಷ್ಮ ಉವಾಚ।
05176028a ತಸ್ಯಾಶ್ಚ ದೃಷ್ಟ್ವಾ ರೂಪಂ ಚ ವಯಶ್ಚಾಭಿನವಂ ಪುನಃ।
05176028c ಸೌಕುಮಾರ್ಯಂ ಪರಂ ಚೈವ ರಾಮಶ್ಚಿಂತಾಪರೋಽಭವತ್।।
ಭೀಷ್ಮನು ಹೇಳಿದನು: “ಅವಳ ರೂಪ, ವಯಸ್ಸು, ಅಭಿನವ ಮತ್ತು ಪರಮ ಸೌಕುಮಾರ್ಯವನ್ನು ನೋಡಿ ರಾಮನು ಚಿಂತಾಪರನಾದನು.
05176029a ಕಿಮಿಯಂ ವಕ್ಷ್ಯತೀತ್ಯೇವಂ ವಿಮೃಶನ್ಭೃಗುಸತ್ತಮಃ।
05176029c ಇತಿ ದಧ್ಯೌ ಚಿರಂ ರಾಮಃ ಕೃಪಯಾಭಿಪರಿಪ್ಲುತಃ।।
“ಇವಳು ಏನನ್ನು ಹೇಳಲಿದ್ದಾಳೆ?” ಎಂದು ವಿಮರ್ಶಿಸಿ ಭೃಗುಸತ್ತಮ ರಾಮನು ಒಂದು ಕ್ಷಣ ಯೋಚಿಸಿ ಕೃಪೆಯಿಂದ ಅವಳನ್ನು ನೋಡಿದನು.
05176030a ಕಥ್ಯತಾಮಿತಿ ಸಾ ಭೂಯೋ ರಾಮೇಣೋಕ್ತಾ ಶುಚಿಸ್ಮಿತಾ।
05176030c ಸರ್ವಮೇವ ಯಥಾತತ್ತ್ವಂ ಕಥಯಾಮಾಸ ಭಾರ್ಗವೇ।।
“ಹೇಳು!” ಎಂದು ಪುನಃ ರಾಮನು ಹೇಳಲು ಶುಚಿಸ್ಮಿತೆಯು ಭಾರ್ಗವನಿಗೆ ನಡೆದುದೆಲ್ಲವನ್ನೂ ಹೇಳಿದಳು.
05176031a ತಚ್ಚ್ರುತ್ವಾ ಜಾಮದಗ್ನ್ಯಸ್ತು ರಾಜಪುತ್ರ್ಯಾ ವಚಸ್ತದಾ।
05176031c ಉವಾಚ ತಾಂ ವರಾರೋಹಾಂ ನಿಶ್ಚಿತ್ಯಾರ್ಥವಿನಿಶ್ಚಯಂ।।
ರಾಜಪುತ್ರಿಯ ಆ ಮಾತುಗಳನ್ನು ಕೇಳಿ ಜಾಮದಗ್ನಿಯು ನಿಶ್ಚಿತಾರ್ಥವನ್ನು ಆ ವರಾರೋಹೆಗೆ ತಿಳಿಸಿದನು.
05176032a ಪ್ರೇಷಯಿಷ್ಯಾಮಿ ಭೀಷ್ಮಾಯ ಕುರುಶ್ರೇಷ್ಠಾಯ ಭಾಮಿನಿ।
05176032c ಕರಿಷ್ಯತಿ ವಚೋ ಧರ್ಮ್ಯಂ ಶ್ರುತ್ವಾ ಮೇ ಸ ನರಾಧಿಪಃ।।
“ಭಾಮಿನೀ! ಕುರುಶ್ರೇಷ್ಠ ಭೀಷ್ಮನಿಗೆ ಹೇಳಿ ಕಳುಹಿಸುತ್ತೇನೆ. ಆ ನರಾಧಿಪನು ನನ್ನ ಮಾತುಗಳನ್ನು ಕೇಳಿ ಧರ್ಮಯುಕ್ತವಾದುದನ್ನು ಮಾಡುತ್ತಾನೆ.
05176033a ನ ಚೇತ್ಕರಿಷ್ಯತಿ ವಚೋ ಮಯೋಕ್ತಂ ಜಾಹ್ನವೀಸುತಃ।
05176033c ಧಕ್ಷ್ಯಾಮ್ಯೇನಂ ರಣೇ ಭದ್ರೇ ಸಾಮಾತ್ಯಂ ಶಸ್ತ್ರತೇಜಸಾ।।
ಭದ್ರೇ! ನಾನು ಹೇಳಿದ ಮಾತಿನಂತೆ ನಡೆದುಕೊಳ್ಳದೇ ಇದ್ದರೆ ನಾನು ಅಸ್ತ್ರತೇಜಸ್ಸಿನಿಂದ ಅಮಾತ್ಯರೊಂದಿಗೆ ಜಾಹ್ನವೀಸುತನನ್ನು ರಣದಲ್ಲಿ ಸುಟ್ಟುಹಾಕುತ್ತೇನೆ.
05176034a ಅಥ ವಾ ತೇ ಮತಿಸ್ತತ್ರ ರಾಜಪುತ್ರಿ ನಿವರ್ತತೇ।
05176034c ತಾವಚ್ಚಾಲ್ವಪತಿಂ ವೀರಂ ಯೋಜಯಾಮ್ಯತ್ರ ಕರ್ಮಣಿ।।
ಅಥವಾ ರಾಜಪುತ್ರಿ! ನಿನಗೆ ಆ ಕಡೆ ಮನಸ್ಸು ತಿರುಗಿದರೆ ಮೊದಲು ನಾನು ವೀರ ಶಾಲ್ವಪತಿಯನ್ನು ಕಾರ್ಯಗತನಾಗುವಂತೆ ಮಾಡುತ್ತೇನೆ.”
05176035 ಅಂಬೋವಾಚ।
05176035a ವಿಸರ್ಜಿತಾಸ್ಮಿ ಭೀಷ್ಮೇಣ ಶ್ರುತ್ವೈವ ಭೃಗುನಂದನ।
05176035c ಶಾಲ್ವರಾಜಗತಂ ಚೇತೋ ಮಮ ಪೂರ್ವಂ ಮನೀಷಿತಂ।।
ಅಂಬೆಯು ಹೇಳಿದಳು: “ಭೃಗುನಂದನ! ಮೊದಲೇ ನನ್ನ ಮನಸ್ಸು ಶಾಲ್ವರಾಜನ ಮೇಲೆ ಹೋಗಿದೆ ಎಂದು ತಿಳಿದಕೂಡಲೇ ಭೀಷ್ಮನು ನನ್ನನ್ನು ಬಿಟ್ಟುಬಿಟ್ಟಿದ್ದಾನೆ.
05176036a ಸೌಭರಾಜಮುಪೇತ್ಯಾಹಮಬ್ರುವಂ ದುರ್ವಚಂ ವಚಃ।
05176036c ನ ಚ ಮಾಂ ಪ್ರತ್ಯಗೃಹ್ಣಾತ್ಸ ಚಾರಿತ್ರಪರಿಶಂಕಿತಃ।।
ಸೌಭರಾಜನಲ್ಲಿಗೆ ಹೋಗಿ ಅವನಿಗೆ ನನ್ನ ಕಷ್ಟದ ಮಾತುಗಳನ್ನಾಡಿದೆನು. ಅವನಾದರೋ ನನ್ನ ಚಾರಿತ್ರವನ್ನು ಶಂಕಿಸಿ ನನ್ನನ್ನು ಸ್ವೀಕರಿಸಲಿಲ್ಲ.
05176037a ಏತತ್ಸರ್ವಂ ವಿನಿಶ್ಚಿತ್ಯ ಸ್ವಬುದ್ಧ್ಯಾ ಭೃಗುನಂದನ।
05176037c ಯದತ್ರೌಪಯಿಕಂ ಕಾರ್ಯಂ ತಚ್ಚಿಂತಯಿತುಮರ್ಹಸಿ।।
ಭೃಗುನಂದನ! ಇವೆಲ್ಲವನ್ನೂ ಸ್ವಬುದ್ಧಿಯಿಂದ ವಿಮರ್ಶಿಸಿ ಈ ವಿಷಯದಲ್ಲಿ ಏನನ್ನು ಮಾಡಬೇಕೆನ್ನುವುದನ್ನು ಚಿಂತಿಸಬೇಕಾಗಿದೆ.
05176038a ಮಮಾತ್ರ ವ್ಯಸನಸ್ಯಾಸ್ಯ ಭೀಷ್ಮೋ ಮೂಲಂ ಮಹಾವ್ರತಃ।
05176038c ಯೇನಾಹಂ ವಶಮಾನೀತಾ ಸಮುತ್ಕ್ಷಿಪ್ಯ ಬಲಾತ್ತದಾ।।
ಅಲ್ಲಿ ನನ್ನನ್ನು ವಶಮಾಡಿಕೊಂಡು ಬಲಾತ್ಕಾರವಾಗಿ ಎತ್ತಿಕೊಂಡು ಹೋದ ಮಹಾವ್ರತ ಭೀಷ್ಮನೇ ನನ್ನ ಈ ವ್ಯಸನದ ಮೂಲ.
05176039a ಭೀಷ್ಮಂ ಜಹಿ ಮಹಾಬಾಹೋ ಯತ್ಕೃತೇ ದುಃಖಮೀದೃಶಂ।
05176039c ಪ್ರಾಪ್ತಾಹಂ ಭೃಗುಶಾರ್ದೂಲ ಚರಾಮ್ಯಪ್ರಿಯಮುತ್ತಮಂ।।
ಮಹಾಬಾಹೋ! ಭೃಗುಶಾರ್ದೂಲ! ಈ ರೀತಿಯ ದುಃಖವನ್ನು ನನಗೆ ತಂದೊದಗಿಸಿದ, ಯಾರಿಂದ ಈ ಮಹಾ ದುಃಖವನ್ನು ಹೊತ್ತು ತಿರುಗುತ್ತಿದ್ದೇನೋ ಆ ಭೀಷ್ಮನನ್ನು ಕೊಲ್ಲು!
05176040a ಸ ಹಿ ಲುಬ್ಧಶ್ಚ ಮಾನೀ ಚ ಜಿತಕಾಶೀ ಚ ಭಾರ್ಗವ।
05176040c ತಸ್ಮಾತ್ಪ್ರತಿಕ್ರಿಯಾ ಕರ್ತುಂ ಯುಕ್ತಾ ತಸ್ಮೈ ತ್ವಯಾನಘ।।
ಭಾರ್ಗವ! ಅವನು ಲುಬ್ಧ, ಸೊಕ್ಕಿನವ, ವಿಜಯಶಾಲಿಯೆಂದು ಜಂಬವಿದೆ. ಅನಘ! ಆದುದರಿಂದ ಅವನೊಂದಿಗೆ ಸೇಡು ತೀರಿಸಿಕೊಳ್ಳುವುದು ಯುಕ್ತವಾಗಿದೆ.
05176041a ಏಷ ಮೇ ಹ್ರಿಯಮಾಣಾಯಾ ಭಾರತೇನ ತದಾ ವಿಭೋ।
05176041c ಅಭವದ್ಧೃದಿ ಸಂಕಲ್ಪೋ ಘಾತಯೇಯಂ ಮಹಾವ್ರತಂ।।
ವಿಭೋ! ಭಾರತನು ನನ್ನನ್ನು ಅಪಹರಿಸಿಕೊಂಡು ಹೋಗುತ್ತಿರುವಾಗ ಆ ಮಹಾವ್ರತನನ್ನು ಕೊಲ್ಲಬೇಕೆನ್ನುವ ಸಂಕಲ್ಪವು ನನ್ನ ಹೃದಯದಲ್ಲಿ ಬಂದಿತ್ತು.
05176042a ತಸ್ಮಾತ್ಕಾಮಂ ಮಮಾದ್ಯೇಮಂ ರಾಮ ಸಂವರ್ತಯಾನಘ।
05176042c ಜಹಿ ಭೀಷ್ಮಂ ಮಹಾಬಾಹೋ ಯಥಾ ವೃತ್ರಂ ಪುರಂದರಃ।।
ರಾಮ! ಅನಘ! ಮಹಾಬಾಹೋ! ನನ್ನ ಬಯಕೆಯನ್ನು ಪೂರೈಸು. ಪುರಂದರನು ವೃತ್ರನನ್ನು ಹೇಗೋ ಹಾಗೆ ಭೀಷ್ಮನನ್ನು ಸಂಹರಿಸು!””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ರಾಮಾಂಬಾಸಂವಾದೇ ಷಡ್ಸಪ್ತತ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ರಾಮಾಂಬಾಸಂವಾದದಲ್ಲಿ ನೂರಾಎಪ್ಪತ್ತಾರನೆಯ ಅಧ್ಯಾಯವು.