174 ಹೋತ್ರವಾಹನಾಂಬಾಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಅಂಬೋಽಪಾಖ್ಯಾನ ಪರ್ವ

ಅಧ್ಯಾಯ 174

ಸಾರ

ತಾಪಸರು ಅಂಬೆಗೆ ತನ್ನ ತಂದೆಯ ಮನೆಗೆ ಹಿಂದಿರುಗಲು ಹಲವಾರು ಕಾರಣಗಳನ್ನಿತ್ತು ಒತ್ತಾಯಿಸಿದರೂ ಅಂಬೆಯು ತಾನು ತಪಸ್ಸನ್ನೇ ತಪಿಸುತ್ತೇನೆ ಎಂದು ಹಠಹಿಡಿದುದು (1-13). ಅಲ್ಲಿಗೆ ಆಗಮಿಸಿದ್ದ ಅಂಬೆಯ ತಾಯಿಯ ತಂದೆ ರಾಜರ್ಷಿ ಹೋತ್ರವಾಹನನು ಅವಳ ಪರಿಸ್ಥಿತಿಯನ್ನು ತಿಳಿದುಕೊಂಡು ತಂದೆಯಮನೆಗೆ ಹೋಗಬೇಡವೆಂದೂ, ಪರಶುರಾಮನು ಅವಳಿಗೆ ಸಹಾಯಮಾಡುತ್ತಾನೆಂದೂ ಹೇಳಿದುದು (14-26).

05174001 ಭೀಷ್ಮ ಉವಾಚ।
05174001a ತತಸ್ತೇ ತಾಪಸಾಃ ಸರ್ವೇ ಕಾರ್ಯವಂತೋಽಭವಂಸ್ತದಾ।
05174001c ತಾಂ ಕನ್ಯಾಂ ಚಿಂತಯಂತೋ ವೈ ಕಿಂ ಕಾರ್ಯಮಿತಿ ಧರ್ಮಿಣಃ।।

ಭೀಷ್ಮನು ಹೇಳಿದನು: “ಆಗ ಆ ಎಲ್ಲ ತಾಪಸರೂ ಆ ಕನ್ಯೆಗೆ ಧರ್ಮವತ್ತಾದ ಯಾವ ಕಾರ್ಯವನ್ನು ಮಾಡಬೇಕೆಂದು ಚಿಂತಿಸುತ್ತಾ ಕಾರ್ಯವಂತರಾದರು.

05174002a ಕೇ ಚಿದಾಹುಃ ಪಿತುರ್ವೇಶ್ಮ ನೀಯತಾಮಿತಿ ತಾಪಸಾಃ।
05174002c ಕೇ ಚಿದಸ್ಮದುಪಾಲಂಭೇ ಮತಿಂ ಚಕ್ರುರ್ದ್ವಿಜೋತ್ತಮಾಃ।।

ಕೆಲವು ತಾಪಸರು ಅವಳನ್ನು ತಂದೆಯ ಮನೆಗೆ ಕಳುಹಿಸಬೇಕೆಂದು ಹೇಳಿದರು. ಕೆಲವು ದ್ವಿಜೋತ್ತಮರು ನಮ್ಮನ್ನೇ ದೂರುವ ಮನಸ್ಸುಮಾಡಿದರು.

05174003a ಕೇ ಚಿಚ್ಚಾಲ್ವಪತಿಂ ಗತ್ವಾ ನಿಯೋಜ್ಯಮಿತಿ ಮೇನಿರೇ।
05174003c ನೇತಿ ಕೇ ಚಿದ್ವ್ಯವಸ್ಯಂತಿ ಪ್ರತ್ಯಾಖ್ಯಾತಾ ಹಿ ತೇನ ಸಾ।।

ಕೆಲವರು ಶಾಲ್ಪಪತಿಯ ಬಳಿ ಹೋಗಿ ಅವನನ್ನು ಒಪ್ಪಿಸಬೇಕೆಂದು ಅಭಿಪ್ರಾಯಪಟ್ಟರು. ಇನ್ನು ಕೆಲವರು ಅವಳನ್ನು ಅವನು ತ್ಯಜಿಸಿದುದರಿಂದ ಬೇಡ ಎಂದರು.

05174004a ಏವಂ ಗತೇ ಕಿಂ ನು ಶಕ್ಯಂ ಭದ್ರೇ ಕರ್ತುಂ ಮನೀಷಿಭಿಃ।
05174004c ಪುನರೂಚುಶ್ಚ ತೇ ಸರ್ವೇ ತಾಪಸಾಃ ಸಂಶಿತವ್ರತಾಃ।।

ಹೀಗೆ ಕೆಲ ಸಮಯವು ಕಳೆಯಲು ಎಲ್ಲ ಸಂಶಿತವ್ರತ ತಾಪಸರೂ ಅವಳಿಗೆ ಪುನಃ ಹೇಳಿದರು: “ಭದ್ರೇ! ಮನೀಷಿಗಳು ಈ ವಿಷಯದಲ್ಲಿ ಏನು ತಾನೇ ಮಾಡಬಲ್ಲರು?

05174005a ಅಲಂ ಪ್ರವ್ರಜಿತೇನೇಹ ಭದ್ರೇ ಶೃಣು ಹಿತಂ ವಚಃ।
05174005c ಇತೋ ಗಚ್ಚಸ್ವ ಭದ್ರಂ ತೇ ಪಿತುರೇವ ನಿವೇಶನಂ।।

ಭದ್ರೇ! ಈ ರೀತಿ ಅಲೆದಾಡುವುದನ್ನು ಬಿಡು. ಹಿತವಚನವನ್ನು ಕೇಳು. ನಿನ್ನ ತಂದೆಯ ಮನೆಗೆ ಹೋಗುವುದು ನಿನಗೆ ಒಳ್ಳೆಯದು.

05174006a ಪ್ರತಿಪತ್ಸ್ಯತಿ ರಾಜಾ ಸ ಪಿತಾ ತೇ ಯದನಂತರಂ।
05174006c ತತ್ರ ವತ್ಸ್ಯಸಿ ಕಲ್ಯಾಣಿ ಸುಖಂ ಸರ್ವಗುಣಾನ್ವಿತಾ।
05174006e ನ ಚ ತೇಽನ್ಯಾ ಗತಿರ್ನ್ಯಾಯ್ಯಾ ಭವೇದ್ಭದ್ರೇ ಯಥಾ ಪಿತಾ।।

ನಿನ್ನ ತಂದೆ ರಾಜನು ಅನಂತರ ಏನು ಮಾಡಬೇಕೋ ಅದನ್ನು ಮಾಡುತ್ತಾನೆ. ಕಲ್ಯಾಣಿ! ಅಲ್ಲಿ ನೀನು ಸರ್ವ ಗುಣಗಳಿಂದ ಸುತ್ತುವರೆಯಲ್ಪಟ್ಟು ಸುಖದಿಂದ ವಾಸಿಸುವೆ. ಭದ್ರೇ! ತಂದೆಯಂತಹ ಗತಿಯು ನಾರಿಗೆ ಬೇರೆ ಯಾರೂ ಇಲ್ಲ.

05174007a ಪತಿರ್ವಾಪಿ ಗತಿರ್ನಾರ್ಯಾಃ ಪಿತಾ ವಾ ವರವರ್ಣಿನಿ।
05174007c ಗತಿಃ ಪತಿಃ ಸಮಸ್ಥಾಯಾ ವಿಷಮೇ ತು ಪಿತಾ ಗತಿಃ।।

ವರವರ್ಣಿನೀ! ನಾರಿಗೆ ಪತಿ ಅಥವ ಪಿತರೇ ಗತಿಯು. ಸುಖದಲ್ಲಿರುವಾಗ ಪತಿಯು ಗತಿಯಾದರೆ ಕಷ್ಟದಲ್ಲಿರುವಾಗ ಪಿತನು ಗತಿ.

05174008a ಪ್ರವ್ರಜ್ಯಾ ಹಿ ಸುದುಃಖೇಯಂ ಸುಕುಮಾರ್ಯಾ ವಿಶೇಷತಃ।
05174008c ರಾಜಪುತ್ರ್ಯಾಃ ಪ್ರಕೃತ್ಯಾ ಚ ಕುಮಾರ್ಯಾಸ್ತವ ಭಾಮಿನಿ।।

ವಿಶೇಷವಾಗಿ ಸುಕುಮಾರಿಯಾಗಿರುವ ನಿನಗೆ ಪರಿವ್ರಾಜಕತ್ವವು ತುಂಬಾ ದುಃಖಕರವಾದುದು. ಭಾಮಿನಿ! ರಾಜಪುತ್ರಿಯಾಗಿರುವ ನೀನು ಪ್ರಕೃತಿಯಲ್ಲಿಯೇ ಕುಮಾರಿಯಾಗಿರುವೆ.

05174009a ಭದ್ರೇ ದೋಷಾ ಹಿ ವಿದ್ಯಂತೇ ಬಹವೋ ವರವರ್ಣಿನಿ।
05174009c ಆಶ್ರಮೇ ವೈ ವಸಂತ್ಯಾಸ್ತೇ ನ ಭವೇಯುಃ ಪಿತುರ್ಗೃಹೇ।।

ಭದ್ರೇ! ವರವರ್ಣಿನೀ! ಆಶ್ರಮವಾಸದಲ್ಲಿ ಬಹಳ ದೋಷಗಳಿವೆಯೆಂದು ತಿಳಿದಿದ್ದೇವೆ. ಇವ್ಯಾವುದೂ ನಿನ್ನ ತಂದೆಯ ಮನೆಯಲ್ಲಿ ಇರುವುದಿಲ್ಲ.”

05174010a ತತಸ್ತು ತೇಽಬ್ರುವನ್ವಾಕ್ಯಂ ಬ್ರಾಹ್ಮಣಾಸ್ತಾಂ ತಪಸ್ವಿನೀಂ।
05174010c ತ್ವಾಮಿಹೈಕಾಕಿನೀಂ ದೃಷ್ಟ್ವಾ ನಿರ್ಜನೇ ಗಹನೇ ವನೇ।
05174010e ಪ್ರಾರ್ಥಯಿಷ್ಯಂತಿ ರಾಜೇಂದ್ರಾಸ್ತಸ್ಮಾನ್ಮೈವಂ ಮನಃ ಕೃಥಾಃ।।

ಆಗ ಆ ಬ್ರಾಹ್ಮಣರು ತಪಸ್ವಿನಿಗೆ ಈ ಮಾತನ್ನೂ ಹೇಳಿದರು: “ನಿರ್ಜನವಾದ ಗಹನ ವನದಲ್ಲಿ ಏಕಾಂಗಿಯಾರುವ ನಿನ್ನನ್ನು ನೋಡಿ ರಾಜೇಂದ್ರರು ನಿನ್ನನ್ನು ಬಯಸುತ್ತಾರೆ. ಆದುದರಿಂದ ಆ ಮಾರ್ಗದಲ್ಲಿ ಹೋಗಲು ಮನಸ್ಸು ಮಾಡಬೇಡ!”

05174011 ಅಂಬೋವಾಚ।
05174011a ನ ಶಕ್ಯಂ ಕಾಶಿನಗರೀಂ ಪುನರ್ಗಂತುಂ ಪಿತುರ್ಗೃಹಾನ್।
05174011c ಅವಜ್ಞಾತಾ ಭವಿಷ್ಯಾಮಿ ಬಾಂಧವಾನಾಂ ನ ಸಂಶಯಃ।।

ಅಂಬೆಯು ಹೇಳಿದಳು: “ಕಾಶೀನಗರದಲ್ಲಿ ತಂದೆಯ ಮನೆಗೆ ಪುನಃ ಹೋಗಲು ಶಕ್ಯವಿಲ್ಲ. ಬಾಂಧವರಿಗೆ ನಾನು ಗೊತ್ತಿಲ್ಲದವಳಾಗಿಬಿಟ್ಟಿದ್ದೇನೆ ಎನ್ನುವುದರಲ್ಲಿ ಸಂಶಯವಿಲ್ಲ.

05174012a ಉಷಿತಾ ಹ್ಯನ್ಯಥಾ ಬಾಲ್ಯೇ ಪಿತುರ್ವೇಶ್ಮನಿ ತಾಪಸಾಃ।
05174012c ನಾಹಂ ಗಮಿಷ್ಯೇ ಭದ್ರಂ ವಸ್ತತ್ರ ಯತ್ರ ಪಿತಾ ಮಮ।
05174012e ತಪಸ್ತಪ್ತುಮಭೀಪ್ಸಾಮಿ ತಾಪಸೈಃ ಪರಿಪಾಲಿತಾ।।

ತಾಪಸರೇ! ಏಕೆಂದರೆ ನಾನು ಬಾಲ್ಯದಲ್ಲಿ ತಂದೆಯ ಮನೆಯಲ್ಲಿ ವಾಸಿಸಿದ್ದುದು ಬೇರೆಯಾಗಿತ್ತು. ನನ್ನ ತಂದೆಯಿರುವಲ್ಲಿಗೆ ಹೋಗಿ ಅಲ್ಲಿ ವಾಸಿಸುವುದಿಲ್ಲ. ನಿಮಗೆ ಮಂಗಳವಾಗಲಿ. ತಾಪಸರಿಂದ ಪರಿಪಾಲಿತಳಾಗಿ ತಪಸ್ಸನ್ನು ತಪಿಸಲು ಬಯಸುತ್ತೇನೆ.

05174013a ಯಥಾ ಪರೇಽಪಿ ಮೇ ಲೋಕೇ ನ ಸ್ಯಾದೇವಂ ಮಹಾತ್ಯಯಃ।
05174013c ದೌರ್ಭಾಗ್ಯಂ ಬ್ರಾಹ್ಮಣಶ್ರೇಷ್ಠಾಸ್ತಸ್ಮಾತ್ತಪ್ಸ್ಯಾಮ್ಯಹಂ ತಪಃ।।

ಬ್ರಾಹ್ಮಣಶ್ರೇಷ್ಠರೇ! ಇದರ ನಂತರದ ಲೋಕದಲ್ಲಿ ನನಗೆ ಈ ರೀತಿಯ ದೌರ್ಭಾಗ್ಯವಾಗಲೀ ಆಪತ್ತಾಗಲೀ ಬರದಿರಲೆಂದು ನಾನು ತಪಸ್ಸನ್ನು ತಪಿಸುತ್ತೇನೆ.””

05174014 ಭೀಷ್ಮ ಉವಾಚ।
05174014a ಇತ್ಯೇವಂ ತೇಷು ವಿಪ್ರೇಷು ಚಿಂತಯತ್ಸು ತಥಾ ತಥಾ।
05174014c ರಾಜರ್ಷಿಸ್ತದ್ವನಂ ಪ್ರಾಪ್ತಸ್ತಪಸ್ವೀ ಹೋತ್ರವಾಹನಃ।।

ಭೀಷ್ಮನು ಹೇಳಿದನು: “ಹೀಗೆ ಆ ವಿಪ್ರರು ಅದು ಇದು ಎಂದು ಯೋಚಿಸುತ್ತಿರುವಾಗ ಆ ವನಕ್ಕೆ ರಾಜರ್ಷಿ ತಪಸ್ವೀ ಹೋತ್ರವಾಹನನು ಆಗಮಿಸಿದನು.

05174015a ತತಸ್ತೇ ತಾಪಸಾಃ ಸರ್ವೇ ಪೂಜಯಂತಿ ಸ್ಮ ತಂ ನೃಪಂ।
05174015c ಪೂಜಾಭಿಃ ಸ್ವಾಗತಾದ್ಯಾಭಿರಾಸನೇನೋದಕೇನ ಚ।।

ಆಗ ತಾಪಸರೆಲ್ಲರೂ ಆ ನೃಪನನ್ನು ಪೂಜಿಸಿದರು. ಪೂಜೆ, ಆಸನ, ಉದಕಗಳನ್ನಿತ್ತು ಸ್ವಾಗತಿಸಿದರು.

05174016a ತಸ್ಯೋಪವಿಷ್ಟಸ್ಯ ತತೋ ವಿಶ್ರಾಂತಸ್ಯೋಪಶೃಣ್ವತಃ।
05174016c ಪುನರೇವ ಕಥಾಂ ಚಕ್ರುಃ ಕನ್ಯಾಂ ಪ್ರತಿ ವನೌಕಸಃ।।

ಅವನು ಕುಳಿತುಕೊಂಡು ವಿಶ್ರಾಂತಿಯನ್ನು ಪಡೆದು ಪರಸ್ಪರರನ್ನು ಕೇಳಿದ ನಂತರ ವನೌಕಸರು ಮಾತುಕಥೆಯನ್ನು ಪುನಃ ಕನ್ಯೆಯ ಕಡೆ ನಡೆಸಿದರು.

05174017a ಅಂಬಾಯಾಸ್ತಾಂ ಕಥಾಂ ಶ್ರುತ್ವಾ ಕಾಶಿರಾಜ್ಞಾಶ್ಚ ಭಾರತ।
05174017c ಸ ವೇಪಮಾನ ಉತ್ಥಾಯ ಮಾತುರಸ್ಯಾಃ ಪಿತಾ ತದಾ।
05174017e ತಾಂ ಕನ್ಯಾಮಂಕಮಾರೋಪ್ಯ ಪರ್ಯಾಶ್ವಾಸಯತ ಪ್ರಭೋ।।

ಭಾರತ! ಪ್ರಭೋ! ಕಾಶೀರಾಜನ ಅಂಬೆಯ ಆ ಕಥೆಯನ್ನು ಕೇಳಿ ಅವಳ ತಾಯಿಯ ತಂದೆಯಾದ ಅವನು ನಡುಗುತ್ತಾ ಮೇಲೆದ್ದು, ಕನ್ಯೆಯನ್ನು ತೊಡೆಯ ಮೇಲೇರಿಸಿಕೊಂಡು ಸಮಾಧಾನಗೊಳಿಸಿದನು.

05174018a ಸ ತಾಮಪೃಚ್ಚತ್ಕಾರ್ತ್ಸ್ನ್ಯೆನ ವ್ಯಸನೋತ್ಪತ್ತಿಮಾದಿತಃ।
05174018c ಸಾ ಚ ತಸ್ಮೈ ಯಥಾವೃತ್ತಂ ವಿಸ್ತರೇಣ ನ್ಯವೇದಯತ್।।

ಅವನು ಅವಳ ವ್ಯಸನದ ಮೂಲವನ್ನು ಸಂಪೂರ್ಣವಾಗಿ ಕೇಳಲು ಅವಳೂ ಕೂಡ ಅವನಿಗೆ ನಡೆದುದೆಲ್ಲವನ್ನೂ ವಿಸ್ತಾರದಿಂದ ನಿವೇದಿಸಿದಳು.

05174019a ತತಃ ಸ ರಾಜರ್ಷಿರಭೂದ್ದುಃಖಶೋಕಸಮನ್ವಿತಃ।
05174019c ಕಾರ್ಯಂ ಚ ಪ್ರತಿಪೇದೇ ತನ್ಮನಸಾ ಸುಮಹಾತಪಾಃ।।

ಆಗ ಆ ರಾಜರ್ಷಿಯು ತುಂಬಾ ದುಃಖಶೋಕಸಮನ್ವಿತನಾದನು. ಏನು ಮಾಡಬೇಕೆಂದು ಆ ಸುಮಹಾತಪಸ್ವಿಯು ಯೋಚಿಸಿದನು.

05174020a ಅಬ್ರವೀದ್ವೇಪಮಾನಶ್ಚ ಕನ್ಯಾಮಾರ್ತಾಂ ಸುದುಃಖಿತಃ।
05174020c ಮಾ ಗಾಃ ಪಿತೃಗೃಹಂ ಭದ್ರೇ ಮಾತುಸ್ತೇ ಜನಕೋ ಹ್ಯಹಂ।।

ಕಂಪಿಸುತ್ತಾ ಅವನು ಆರ್ತಳೂ ಸುದುಃಖಿತಳೂ ಆಗಿದ್ದ ಕನ್ಯೆಗೆ ಹೇಳಿದನು: “ಭದ್ರೇ! ತಂದೆಯ ಮನೆಗೆ ಹೋಗಬೇಡ! ನಿನ್ನ ತಾಯಿಯ ತಂದೆ ನಾನು.

05174021a ದುಃಖಂ ಚೇತ್ಸ್ಯಾಮಿ ತೇಽಹಂ ವೈ ಮಯಿ ವರ್ತಸ್ವ ಪುತ್ರಿಕೇ।
05174021c ಪರ್ಯಾಪ್ತಂ ತೇ ಮನಃ ಪುತ್ರಿ ಯದೇವಂ ಪರಿಶುಷ್ಯಸಿ।।

ನಾನು ನಿನ್ನ ದುಃಖವನ್ನು ಕಳೆಯುತ್ತೇನೆ. ಮಗಳೇ! ನನ್ನಲ್ಲಿ ವಿಶ್ವಾಸವಿಡು. ನಿನ್ನ ಮನಸ್ಸನ್ನು ಒಣಗಿಸುತ್ತಿರುವ ಬಯಕೆಯನ್ನು ನಾನು ಪೂರೈಸಿಕೊಡುತ್ತೇನೆ.

05174022a ಗಚ್ಚ ಮದ್ವಚನಾದ್ರಾಮಂ ಜಾಮದಗ್ನ್ಯಂ ತಪಸ್ವಿನಂ।
05174022c ರಾಮಸ್ತವ ಮಹದ್ದುಃಖಂ ಶೋಕಂ ಚಾಪನಯಿಷ್ಯತಿ।
05174022e ಹನಿಷ್ಯತಿ ರಣೇ ಭೀಷ್ಮಂ ನ ಕರಿಷ್ಯತಿ ಚೇದ್ವಚಃ।।

ನನ್ನ ಮಾತಿನಂತೆ ಜಾಮದಗ್ನಿ ತಪಸ್ವಿ ರಾಮನಲ್ಲಿಗೆ ಹೋಗು. ರಾಮನು ನಿನ್ನ ಮಹಾ ದುಃಖ-ಶೋಕಗಳನ್ನು ನಿವಾರಿಸುತ್ತಾನೆ. ಅವನ ಮಾತಿನಂತೆ ನಡೆದುಕೊಳ್ಳದೇ ಇದ್ದರೆ ಭೀಷ್ಮನನ್ನು ಅವನು ರಣದಲ್ಲಿ ಕೊಲ್ಲುತ್ತಾನೆ.

05174023a ತಂ ಗಚ್ಚ ಭಾರ್ಗವಶ್ರೇಷ್ಠಂ ಕಾಲಾಗ್ನಿಸಮತೇಜಸಂ।
05174023c ಪ್ರತಿಷ್ಠಾಪಯಿತಾ ಸ ತ್ವಾಂ ಸಮೇ ಪಥಿ ಮಹಾತಪಾಃ।।

ಕಾಲಾಗ್ನಿಸಮನಾದ ತೇಜಸ್ಸುಳ್ಳ ಆ ಭಾರ್ಗವಶ್ರೇಷ್ಠನಲ್ಲಿಗೆ ಹೋಗು. ಆ ಮಹಾತಪಸ್ವಿಯು ನಿನ್ನನ್ನು ಸಮ ಮಾರ್ಗದಲ್ಲಿ ನೆಲೆಸುತ್ತಾನೆ.”

05174024a ತತಸ್ತು ಸಸ್ವರಂ ಬಾಷ್ಪಮುತ್ಸೃಜಂತೀ ಪುನಃ ಪುನಃ।
05174024c ಅಬ್ರವೀತ್ಪಿತರಂ ಮಾತುಃ ಸಾ ತದಾ ಹೋತ್ರವಾಹನಂ।।

ಆಗ ಒಂದೇಸಮನೆ ಕಣ್ಣೀರು ಸುರಿಸುತ್ತಿದ್ದ ಅವಳು ತನ್ನ ತಾಯಿಯ ತಂದೆ ಹೋತ್ರವಾನನನಿಗೆ ಪುನಃ ಪುನಃ ಹೇಳಿದಳು:

05174025a ಅಭಿವಾದಯಿತ್ವಾ ಶಿರಸಾ ಗಮಿಷ್ಯೇ ತವ ಶಾಸನಾತ್।
05174025c ಅಪಿ ನಾಮಾದ್ಯ ಪಶ್ಯೇಯಮಾರ್ಯಂ ತಂ ಲೋಕವಿಶ್ರುತಂ।।

“ತಲೆಬಾಗಿ ನಮಸ್ಕರಿಸಿ ನಿನ್ನ ಶಾಸನದಂತೆ ಹೋಗುತ್ತೇನೆ. ಆದರೆ ಲೋಕವಿಶ್ರುತನಾದ ಆ ಅರ್ಯನನ್ನು ಇಂದು ನಾನು ಕಾಣಬಲ್ಲೆನೇ?

05174026a ಕಥಂ ಚ ತೀವ್ರಂ ದುಃಖಂ ಮೇ ಹನಿಷ್ಯತಿ ಸ ಭಾರ್ಗವಃ।
05174026c ಏತದಿಚ್ಚಾಮ್ಯಹಂ ಶ್ರೋತುಮಥ ಯಾಸ್ಯಾಮಿ ತತ್ರ ವೈ।।

ಭಾರ್ಗವನು ಹೇಗೆ ನನ್ನ ಈ ತೀವ್ರ ದುಃಖವನ್ನು ಕೊನೆಗೊಳಿಸಬಲ್ಲನು? ಇದನ್ನು ಕೇಳಲು ಬಯಸುತ್ತೇನೆ. ನಂತರ ಅಲ್ಲಿಗೆ ಹೋಗುತ್ತೇನೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಹೋತ್ರವಾಹನಾಂಬಾಸಂವಾದೇ ಚತುಃಸಪ್ತತ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಹೋತ್ರವಾಹನಾಂಬಾಸಂವಾದದಲ್ಲಿ ನೂರಾಎಪ್ಪತ್ನಾಲ್ಕನೆಯ ಅಧ್ಯಾಯವು.