171 ಅಂಬಾವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಅಂಬೋಽಪಾಖ್ಯಾನ ಪರ್ವ

ಅಧ್ಯಾಯ 171

ಸಾರ

ರಾಜಕುಮಾರಿಯರೊಡನೆ ವಿಚಿತ್ರವೀರ್ಯನ ವಿವಾಹವನ್ನು ಏರ್ಪಡಿಸುವಾಗ, ಹಿರಿಯ ರಾಜಕುಮಾರಿ ಅಂಬೆಯು ತಾನು ಶಾಲ್ವಪತಿಯನ್ನು ಮನಸಾರೆ ವರಿಸಿದ್ದರಿಂದ ಅವನ ಬಳಿ ಹೋಗಲು ಅನುಮತಿಯನ್ನು ಕೇಳಿದುದು (1-9).

05171001 ಭೀಷ್ಮ ಉವಾಚ।
05171001a ತತೋಽಹಂ ಭರತಶ್ರೇಷ್ಠ ಮಾತರಂ ವೀರಮಾತರಂ।
05171001c ಅಭಿಗಮ್ಯೋಪಸಂಗೃಹ್ಯ ದಾಶೇಯೀಮಿದಮಬ್ರುವಂ।।

ಭೀಷ್ಮನು ಹೇಳಿದನು: “ಭರತಶ್ರೇಷ್ಠ! ಆಗ ನಾನು ತಾಯಿ, ವೀರರ ತಾಯಿ, ದಾಶೇಯಿಯ ಬಳಿಹೋಗಿ ನಮಸ್ಕರಿಸಿ ಹೇಳಿದೆನು:

05171002a ಇಮಾಃ ಕಾಶಿಪತೇಃ ಕನ್ಯಾ ಮಯಾ ನಿರ್ಜಿತ್ಯ ಪಾರ್ಥಿವಾನ್।
05171002c ವಿಚಿತ್ರವೀರ್ಯಸ್ಯ ಕೃತೇ ವೀರ್ಯಶುಲ್ಕಾ ಉಪಾರ್ಜಿತಾಃ।।

“ಪಾರ್ಥಿವರನ್ನು ಸೋಲಿಸಿ ವೀರ್ಯ ಶುಲ್ಕವಾಗಿ ಈ ಕಾಶೀಪತಿಯ ಕನ್ಯೆಯರನ್ನು ವಿಚಿತ್ರವೀರ್ಯನಿಗೆಂದು ಗಳಿಸಿದ್ದೇನೆ.”

05171003a ತತೋ ಮೂರ್ಧನ್ಯುಪಾಘ್ರಾಯ ಪರ್ಯಶ್ರುನಯನಾ ನೃಪ।
05171003c ಆಹ ಸತ್ಯವತೀ ಹೃಷ್ಟಾ ದಿಷ್ಟ್ಯಾ ಪುತ್ರ ಜಿತಂ ತ್ವಯಾ।।

ನೃಪ! ಆಗ ನೆತ್ತಿಯನ್ನು ಆಘ್ರಾಣಿಸಿ ಕಣ್ಣಲ್ಲಿ ನೀರನ್ನು ತುಂಬಿಸಿಕೊಂಡು ಸತ್ಯವತಿಯು ಹೇಳಿದಳು: “ಪುತ್ರ! ನೀನು ಗೆದ್ದು ಬಂದುದು ಒಳ್ಳೆಯದಾಯಿತು. ಹರ್ಷವಾಯಿತು.”

05171004a ಸತ್ಯವತ್ಯಾಸ್ತ್ವನುಮತೇ ವಿವಾಹೇ ಸಮುಪಸ್ಥಿತೇ।
05171004c ಉವಾಚ ವಾಕ್ಯಂ ಸವ್ರೀಡಾ ಜ್ಯೇಷ್ಠಾ ಕಾಶಿಪತೇಃ ಸುತಾ।।

ಸತ್ಯವತಿಯ ಅನುಮತಿಯಂತೆ ವಿವಾಹವನ್ನಿಟ್ಟುಕೊಳ್ಳಲಾಯಿತು. ಆಗ ಕಾಶಿಪತಿಯ ಹಿರಿಯ ಮಗಳು ನಾಚಿಕೊಂಡು ಈ ಮಾತನ್ನಾಡಿದಳು:

05171005a ಭೀಷ್ಮ ತ್ವಮಸಿ ಧರ್ಮಜ್ಞಾಃ ಸರ್ವಶಾಸ್ತ್ರವಿಶಾರದಃ।
05171005c ಶ್ರುತ್ವಾ ಚ ಧರ್ಮ್ಯಂ ವಚನಂ ಮಹ್ಯಂ ಕರ್ತುಮಿಹಾರ್ಹಸಿ।।

“ಭೀಷ್ಮ! ನೀನು ಧರ್ಮಜ್ಞನಾಗಿದ್ದೀಯೆ. ಸರ್ವಶಾಸ್ತ್ರವಿಶಾರದನಾಗಿದ್ದೀಯೆ. ನನ್ನ ಈ ಧರ್ಮದ ಮಾತುಗಳನ್ನು ಕೇಳಿ ಅಗತ್ಯವಾದುದನ್ನು ಮಾಡಬೇಕು.

05171006a ಮಯಾ ಶಾಲ್ವಪತಿಃ ಪೂರ್ವಂ ಮನಸಾಭಿವೃತೋ ವರಃ।
05171006c ತೇನ ಚಾಸ್ಮಿ ವೃತಾ ಪೂರ್ವಂ ರಹಸ್ಯವಿದಿತೇ ಪಿತುಃ।।

ಹಿಂದೆಯೇ ನಾನು ಶಾಲ್ವಪತಿಯನ್ನು ಮನಸಾರೆ ವರನೆಂದು ಆರಿಸಿಕೊಂಡಿದ್ದೆ. ಅವನೂ ಕೂಡ ನನ್ನನ್ನು ಹಿಂದೆ ವರಿಸಿದ್ದನು. ಆದರೆ ಇದು ತಂದೆಗೆ ತಿಳಿಯದೇ ರಹಸ್ಯವಾಗಿಯೇ ಇತ್ತು.

05171007a ಕಥಂ ಮಾಮನ್ಯಕಾಮಾಂ ತ್ವಂ ರಾಜಂ ಶಾಸ್ತ್ರಮಧೀತ್ಯ ವೈ।
05171007c ವಾಸಯೇಥಾ ಗೃಹೇ ಭೀಷ್ಮ ಕೌರವಃ ಸನ್ವಿಶೇಷತಃ।।

ಭೀಷ್ಮ! ರಾಜನ್! ಶಾಸ್ತ್ರಗಳನ್ನು ತಿಳಿದಿರುವ ನೀನು ಹೇಗೆ ತಾನೇ ಇನ್ನೊಬ್ಬನನ್ನು ಬಯಸುವವಳನ್ನು ಮನೆಯಲ್ಲಿ, ವಿಶೇಷವಾಗಿ ಕೌರವರ ಮನೆಯಲ್ಲಿ, ವಾಸಿಸಲು ಬಿಡಬಲ್ಲೆ?

05171008a ಏತದ್ಬುದ್ಧ್ಯಾ ವಿನಿಶ್ಚಿತ್ಯ ಮನಸಾ ಭರತರ್ಷಭ।
05171008c ಯತ್ಕ್ಷಮಂ ತೇ ಮಹಾಬಾಹೋ ತದಿಹಾರಬ್ಧುಮರ್ಹಸಿ।।

ಭರತರ್ಷಭ! ಮಹಾಬಾಹೋ! ಇದನ್ನು ತಿಳಿದು ಯೋಚಿಸಿ ನಿಶ್ಚಯಿಸಿ ಮಾಡಬೇಕಾದುದನ್ನು ಮಾಡಬೇಕು.

05171009a ಸ ಮಾಂ ಪ್ರತೀಕ್ಷತೇ ವ್ಯಕ್ತಂ ಶಾಲ್ವರಾಜೋ ವಿಶಾಂ ಪತೇ।
05171009c ಕೃಪಾಂ ಕುರು ಮಹಾಬಾಹೋ ಮಯಿ ಧರ್ಮಭೃತಾಂ ವರ।
05171009e ತ್ವಂ ಹಿ ಸತ್ಯವ್ರತೋ ವೀರ ಪೃಥಿವ್ಯಾಮಿತಿ ನಃ ಶ್ರುತಂ।।

ವಿಶಾಂಪತೇ! ಶಾಲ್ವರಾಜನು ನನಗೆ ನಿಶ್ಚಿತನಾದವನೆಂದು ತೋರುತ್ತದೆ. ಹೋಗಲು ಬಿಡು! ಮಹಾಬಾಹೋ! ಧರ್ಮಭೃತರಲ್ಲಿ ಶ್ರೇಷ್ಠ! ನನ್ನ ಮೇಲೆ ಕೃಪೆ ಮಾಡು. ನೀನು ಭೂಮಿಯಲ್ಲಿಯೇ ಸತ್ಯವ್ರತನೂ ವೀರನೂ ಎಂದು ನಾನು ಕೇಳಿದ್ದೇನೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಅಂಬಾವಾಕ್ಯೇ ಏಕಸಪ್ತತ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಅಂಬಾವಾಕ್ಯದಲ್ಲಿ ನೂರಾಎಪ್ಪತ್ತತ್ತೊಂದನೆಯ ಅಧ್ಯಾಯವು.