ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಅಂಬೋಽಪಾಖ್ಯಾನ ಪರ್ವ
ಅಧ್ಯಾಯ 170
ಸಾರ
ಶಿಖಂಡಿಯನ್ನು ನೀನು ಏಕೆ ಕೊಲ್ಲುವುದಿಲ್ಲವೆಂದು ದುರ್ಯೋಧನನು ಕೇಳಲು, ಭೀಷ್ಮನು ಎಲ್ಲ ನೃಪರ ಸಮಕ್ಷಮದಲ್ಲಿ ಕಾರಣವನ್ನು ಹೇಳಲು ಪ್ರಾರಂಭಿಸಿದುದು (1-3). ತಮ್ಮ ವಿಚಿತ್ರವೀರ್ಯನಿಗೆ ವಿವಾಹಮಾಡಲು ಬಯಸಿ ಭೀಷ್ಮನು ಕಾಶೀರಾಜಕುಮಾರಿಯರ ಸ್ವಯಂವರಕ್ಕೆ ಹೋಗಿ ಅಂಬೆ, ಅಂಬಿಕೆ, ಅಂಬಾಲಿಕೆಯರನ್ನು ರಥದ ಮೇಲೆ ಕುಳ್ಳಿರಿಸಿಕೊಂಡು ಎದುರಿಸಿದ ರಾಜರನ್ನೆಲ್ಲ ಏಕರಥನಾಗಿ ಸೋಲಿಸಿ ಹಸ್ತಿನಾಪುರಕ್ಕೆ ಮರಳಿದುದು (4-22).
05170001 ದುರ್ಯೋಧನ ಉವಾಚ।
05170001a ಕಿಮರ್ಥಂ ಭರತಶ್ರೇಷ್ಠ ನ ಹನ್ಯಾಸ್ತ್ವಂ ಶಿಖಂಡಿನಂ।
05170001c ಉದ್ಯತೇಷುಮಥೋ ದೃಷ್ಟ್ವಾ ಸಮರೇಷ್ವಾತತಾಯಿನಂ।।
ದುರ್ಯೋಧನನು ಹೇಳಿದನು: “ಭರತಶ್ರೇಷ್ಠ! ಸಮರದಲ್ಲಿ ಬಾಣಗಳನ್ನು ಗುರಿಯಿಟ್ಟು ನಿನ್ನನ್ನು ಕೊಲ್ಲಲು ಬರುವ ಶಿಖಂಡಿಯನ್ನು ನೋಡಿಯೂ ಅವನನ್ನು ನೀನು ಕೊಲ್ಲದೇ ಇರಲು ಕಾರಣವೇನು?
05170002a ಪೂರ್ವಮುಕ್ತ್ವಾ ಮಹಾಬಾಹೋ ಪಾಂಡವಾನ್ಸಹ ಸೋಮಕೈಃ।
05170002c ವಧಿಷ್ಯಾಮೀತಿ ಗಾಂಗೇಯ ತನ್ಮೇ ಬ್ರೂಹಿ ಪಿತಾಮಹ।।
ಮಹಾಬಾಹೋ! ಮೊದಲು ನೀನು ಹೇಳಿದ್ದೆ – ಸೋಮಕರೊಂದಿಗೆ ಪಾಂಡವರನ್ನು ವಧಿಸುತ್ತೇನೆಂದು. ಗಾಂಗೇಯ! ಪಿತಾಮಹ! ಅದನ್ನು ನನಗೆ ಹೇಳು.”
05170003 ಭೀಷ್ಮ ಉವಾಚ।
05170003a ಶೃಣು ದುರ್ಯೋಧನ ಕಥಾಂ ಸಹೈಭಿರ್ವಸುಧಾಧಿಪೈಃ।
05170003c ಯದರ್ಥಂ ಯುಧಿ ಸಂಪ್ರೇಕ್ಷ್ಯ ನಾಹಂ ಹನ್ಯಾಂ ಶಿಖಂಡಿನಂ।।
ಭೀಷ್ಮನು ಹೇಳಿದನು: “ದುರ್ಯೋಧನ! ಏಕೆ ನಾನು ಯುದ್ಧದಲ್ಲಿ ಎದುರಾದ ಶಿಖಂಡಿಯನ್ನು ಕೊಲ್ಲುವುದಿಲ್ಲವೆನ್ನುವುದನ್ನು ವಸುಧಾಧಿಪರೊಂದಿಗೆ ಕೇಳು.
05170004a ಮಹಾರಾಜೋ ಮಮ ಪಿತಾ ಶಂತನುರ್ಭರತರ್ಷಭಃ।
05170004c ದಿಷ್ಟಾಂತಂ ಪ್ರಾಪ ಧರ್ಮಾತ್ಮಾ ಸಮಯೇ ಪುರುಷರ್ಷಭ।।
ಪುರುಷರ್ಷಭ! ನನ್ನ ತಂದೆ ಭರತರ್ಷಭ ಧರ್ಮಾತ್ಮ ಮಹಾರಾಜಾ ಶಂತನುವು ಸಮಯದಲ್ಲಿ ದೈವನಿಶ್ಚಿತ ಅಂತ್ಯವನ್ನು ಸೇರಿದನು.
05170005a ತತೋಽಹಂ ಭರತಶ್ರೇಷ್ಠ ಪ್ರತಿಜ್ಞಾಂ ಪರಿಪಾಲಯನ್।
05170005c ಚಿತ್ರಾಂಗದಂ ಭ್ರಾತರಂ ವೈ ಮಹಾರಾಜ್ಯೇಽಭ್ಯಷೇಚಯಂ।।
ಆಗ ಭರತಶ್ರೇಷ್ಠ! ನಾನು ಪ್ರತಿಜ್ಞೆಯನ್ನು ಪರಿಪಾಲಿಸಿ ತಮ್ಮ ಚಿತ್ರಾಂಗದನನ್ನು ಮಹಾರಾಜನನ್ನಾಗಿ ಅಭಿಷೇಕಿಸಿದೆನು.
05170006a ತಸ್ಮಿಂಶ್ಚ ನಿಧನಂ ಪ್ರಾಪ್ತೇ ಸತ್ಯವತ್ಯಾ ಮತೇ ಸ್ಥಿತಃ।
05170006c ವಿಚಿತ್ರವೀರ್ಯಂ ರಾಜಾನಮಭ್ಯಷಿಂಚಂ ಯಥಾವಿಧಿ।।
ಅವನು ನಿಧನವನ್ನು ಹೊಂದಲು ಸತ್ಯವತಿಯ ಸಲಹೆಯಂತೆ ನಡೆದುಕೊಂಡು ಯಥಾವಿಧಿಯಾಗಿ ವಿಚಿತ್ರವೀರ್ಯನನ್ನು ರಾಜನನ್ನಾಗಿ ಅಭಿಷೇಕಿಸಲಾಯಿತು.
05170007a ಮಯಾಭಿಷಿಕ್ತೋ ರಾಜೇಂದ್ರ ಯವೀಯಾನಪಿ ಧರ್ಮತಃ।
05170007c ವಿಚಿತ್ರವೀರ್ಯೋ ಧರ್ಮಾತ್ಮಾ ಮಾಮೇವ ಸಮುದೈಕ್ಷತ।।
ರಾಜೇಂದ್ರ! ಇನ್ನೂ ಚಿಕ್ಕವನಾಗಿದ್ದರೂ ವಿಚಿತ್ರವೀರ್ಯನನ್ನು ಧರ್ಮತಃ ನಾನು ಅಭಿಷೇಕಿಸಿದೆನು. ಆ ಧರ್ಮಾತ್ಮನಾದರೋ ಸಲಹೆಗಳಿಗೆ ನನ್ನನ್ನೇ ನೋಡುತ್ತಿದ್ದನು.
05170008a ತಸ್ಯ ದಾರಕ್ರಿಯಾಂ ತಾತ ಚಿಕೀರ್ಷುರಹಮಪ್ಯುತ।
05170008c ಅನುರೂಪಾದಿವ ಕುಲಾದಿತಿ ಚಿಂತ್ಯ ಮನೋ ದಧೇ।।
ಮಗೂ! ಅವನಿಗೆ ವಿವಾಹ ಮಾಡಲು ಬಯಸಿ ನಾನು ಅನುರೂಪವಾದ ಕುಲವ್ಯಾವುದೆಂದು ಮನಸ್ಸಿನಲ್ಲಿಯೇ ಚಿಂತಿಸತೊಡಗಿದೆನು.
05170009a ತಥಾಶ್ರೌಷಂ ಮಹಾಬಾಹೋ ತಿಸ್ರಃ ಕನ್ಯಾಃ ಸ್ವಯಂವರೇ।
05170009c ರೂಪೇಣಾಪ್ರತಿಮಾಃ ಸರ್ವಾಃ ಕಾಶಿರಾಜಸುತಾಸ್ತದಾ।
05170009e ಅಂಬಾ ಚೈವಾಂಬಿಕಾ ಚೈವ ತಥೈವಾಂಬಾಲಿಕಾಪರಾ।
ಆಗ ಮಹಾಬಾಹೋ! ರೂಪದಲ್ಲಿ ಅಪ್ರತಿಮರಾದ, ಎಲ್ಲ ಮೂವರು ಕಾಶೀರಾಜ ಸುತೆ ಕನ್ಯೆಯರ - ಅಂಬಾ, ಅಂಬಿಕಾ ಮತ್ತು ಇನ್ನೊಬ್ಬಳು ಅಂಬಾಲಿಕಾ - ಸ್ವಯಂವರವೆಂದು ಕೇಳಿದೆನು.
05170010a ರಾಜಾನಶ್ಚ ಸಮಾಹೂತಾಃ ಪೃಥಿವ್ಯಾಂ ಭರತರ್ಷಭ।
05170010c ಅಂಬಾ ಜ್ಯೇಷ್ಠಾಭವತ್ತಾಸಾಮಂಬಿಕಾ ತ್ವಥ ಮಧ್ಯಮಾ।
05170010e ಅಂಬಾಲಿಕಾ ಚ ರಾಜೇಂದ್ರ ರಾಜಕನ್ಯಾ ಯವೀಯಸೀ।।
ಭರತರ್ಷಭ! ಪೃಥ್ವಿಯ ಎಲ್ಲ ರಾಜರನ್ನೂ ಆಹ್ವಾನಿಸಲಾಗಿತ್ತು. ಹಿರಿಯವಳು ಅಂಬಾ. ಅಂಬಿಕೆಯು ಮಧ್ಯದವಳು. ರಾಜೇಂದ್ರ! ರಾಜಕನ್ಯೆ ಅಂಬಾಲಿಕೆಯು ಕಿರಿಯವಳು.
05170011a ಸೋಽಹಮೇಕರಥೇನೈವ ಗತಃ ಕಾಶಿಪತೇಃ ಪುರೀಂ।
05170011c ಅಪಶ್ಯಂ ತಾ ಮಹಾಬಾಹೋ ತಿಸ್ರಃ ಕನ್ಯಾಃ ಸ್ವಲಂಕೃತಾಃ।
05170011e ರಾಜ್ಞಾಶ್ಚೈವ ಸಮಾವೃತ್ತಾನ್ಪಾರ್ಥಿವಾನ್ಪೃಥಿವೀಪತೇ।।
ಆಗ ನಾನು ಒಬ್ಬನೇ ರಥದಲ್ಲಿ ಕಾಶೀಪತಿಯ ಪುರಿಗೆ ಹೋದೆನು. ಮಹಾಬಾಹೋ! ಪೃಥಿವೀಪತೇ! ಅಲ್ಲಿ ಸ್ವಲಂಕೃತರಾದ ಮೂವರು ಕನ್ಯೆಯರನ್ನೂ, ಸುತ್ತುವರೆದಿದ್ದ ಪಾರ್ಥಿವ ರಾಜರನ್ನೂ ನೋಡಿದೆನು.
05170012a ತತೋಽಹಂ ತಾನ್ನೃಪಾನ್ಸರ್ವಾನಾಹೂಯ ಸಮರೇ ಸ್ಥಿತಾನ್।
05170012c ರಥಮಾರೋಪಯಾಂ ಚಕ್ರೇ ಕನ್ಯಾಸ್ತಾ ಭರತರ್ಷಭ।।
ಭರತರ್ಷಭ! ಆಗ ನಾನು ನಿಂತ ಆ ನೃಪರೆಲ್ಲರನ್ನೂ ಸಮರಕ್ಕೆ ಆಹ್ವಾನಿಸಿ, ಆ ಕನ್ಯೆಯರನ್ನು ರಥದ ಮೇಲೇರಿಸಿಕೊಂಡೆನು.
05170013a ವೀರ್ಯಶುಲ್ಕಾಶ್ಚ ತಾ ಜ್ಞಾತ್ವಾ ಸಮಾರೋಪ್ಯ ರಥಂ ತದಾ।
05170013c ಅವೋಚಂ ಪಾರ್ಥಿವಾನ್ಸರ್ವಾನಹಂ ತತ್ರ ಸಮಾಗತಾನ್।
05170013e ಭೀಷ್ಮಃ ಶಾಂತನವಃ ಕನ್ಯಾ ಹರತೀತಿ ಪುನಃ ಪುನಃ।।
ಅವರನ್ನು ವೀರ್ಯಶುಲ್ಕವೆಂದು ತಿಳಿದು ರಥದ ಮೇಲೇರಿಸಿಕೊಂಡು ಅಲ್ಲಿ ಸಮಾಗತರಾಗಿದ್ದ ಸರ್ವ ಪಾರ್ಥಿವರಿಗೆ ಕೂಗಿ “ಭೀಷ್ಮ ಶಾಂತನವನು ಕನ್ಯೆಯರನ್ನು ಅಪಹರಿಸುತ್ತಿದ್ದಾನೆ” ಎಂದು ಪುನಃ ಪುನಃ ಹೇಳಿದೆನು.
05170014a ತೇ ಯತಧ್ವಂ ಪರಂ ಶಕ್ತ್ಯಾ ಸರ್ವೇ ಮೋಕ್ಷಾಯ ಪಾರ್ಥಿವಾಃ।
05170014c ಪ್ರಸಹ್ಯ ಹಿ ನಯಾಮ್ಯೇಷ ಮಿಷತಾಂ ವೋ ನರಾಧಿಪಾಃ।।
“ಸರ್ವ ಪಾರ್ಥಿವರೇ! ಪರಮ ಶಕ್ತಿಯನ್ನುಪಯೋಗಿಸಿ ಇವರನ್ನು ನೀವು ಬಿಡಿಸಿಕೊಳ್ಳಿ! ನರಾಧಿಪರೇ! ನಿಮ್ಮ ಕಣ್ಣೆದುರಿಗೇ ನಾನು ಇವರನ್ನು ಬಲಾತ್ಕಾರವಾಗಿ ಕೊಂಡೊಯ್ಯುತ್ತಿದ್ದೇನೆ!”
05170015a ತತಸ್ತೇ ಪೃಥಿವೀಪಾಲಾಃ ಸಮುತ್ಪೇತುರುದಾಯುಧಾಃ।
05170015c ಯೋಗೋ ಯೋಗ ಇತಿ ಕ್ರುದ್ಧಾಃ ಸಾರಥೀಂಶ್ಚಾಪ್ಯಚೋದಯನ್।।
ಆಗ ಪೃಥಿವೀಪಾಲರು ಕೃದ್ಧರಾಗಿ ಆಯುಧಗಳನ್ನು ಹಿಡಿದೆತ್ತಿ “ರಥಗಳನ್ನು ಹೂಡಿ! ಹೂಡಿ!” ಎಂದು ಸಾರಥಿಗಳನ್ನು ಪ್ರಚೋದಿಸಿದರು.
05170016a ತೇ ರಥೈರ್ಮೇಘಸಂಕಾಶೈರ್ಗಜೈಶ್ಚ ಗಜಯೋಧಿನಃ।
05170016c ಪೃಷ್ಠ್ಯೈಶ್ಚಾಶ್ವೈರ್ಮಹೀಪಾಲಾಃ ಸಮುತ್ಪೇತುರುದಾಯುಧಾಃ।।
ಮೇಘಗಳಂತೆ ಗರ್ಜಿಸುವ ರಥಗಳ ಮೇಲೆ, ಗಜಗಳ ಮೇಲೆ ಗಜಯೋದ್ಧರು, ಇತರ ಮಹೀಪಾಲರು ರಥಗಳ ಮೇಲೆ ಆಯುಧಗಳನ್ನು ಎತ್ತಿ ಹಿಡಿದು ಆಕ್ರಮಣಿಸಿದರು.
05170017a ತತಸ್ತೇ ಮಾಂ ಮಹೀಪಾಲಾಃ ಸರ್ವ ಏವ ವಿಶಾಂ ಪತೇ।
05170017c ರಥವ್ರಾತೇನ ಮಹತಾ ಸರ್ವತಃ ಪರ್ಯವಾರಯನ್।।
ವಿಶಾಂಪತೇ! ಆಗ ಆ ಮಹೀಪಾಲರೆಲ್ಲರೂ ರಥಗಳ ಮಹಾ ಸಮೂಹದೊಂದಿಗೆ ಎಲ್ಲ ಕಡೆಯಿಂದ ನನ್ನನ್ನು ಸುತ್ತುವರೆದರು.
05170018a ತಾನಹಂ ಶರವರ್ಷೇಣ ಮಹತಾ ಪ್ರತ್ಯವಾರಯಂ।
05170018c ಸರ್ವಾನ್ನೃಪಾಂಶ್ಚಾಪ್ಯಜಯಂ ದೇವರಾಡಿವ ದಾನವಾನ್।।
ನಾನು ಮಹಾ ಶರವರ್ಷದಿಂದ, ದೇವರಾಜನು ದಾನವರನ್ನು ಹೇಗೋ ಹಾಗೆ ಆ ಎಲ್ಲ ನೃಪರನ್ನೂ ಸೋಲಿಸಿ ತಡೆದೆನು.
05170019a ತೇಷಾಮಾಪತತಾಂ ಚಿತ್ರಾನ್ಧ್ವಜಾನ್ ಹೇಮಪರಿಷ್ಕೃತಾನ್।
05170019c ಏಕೈಕೇನ ಹಿ ಬಾಣೇನ ಭೂಮೌ ಪಾತಿತವಾನಹಂ।।
ಒಂದೊಂದೇ ಬಾಣಗಳಿಂದ ಅವರ ಬಣ್ಣಬಣ್ಣದ ಬಂಗಾರದಿಂದ ಪರಿಷ್ಕೃತಗೊಂಡಿದ್ದ ಧ್ವಜಗಳನ್ನು ನಾನು ಭೂಮಿಯ ಮೇಲೆ ಬೀಳಿಸಿದೆನು.
05170020a ಹಯಾಂಶ್ಚೈಷಾಂ ಗಜಾಂಶ್ಚೈವ ಸಾರಥೀಂಶ್ಚಾಪ್ಯಹಂ ರಣೇ।
05170020c ಅಪಾತಯಂ ಶರೈರ್ದೀಪ್ತೈಃ ಪ್ರಹಸನ್ಪುರುಷರ್ಷಭ।।
ಪುರುಷರ್ಷಭ! ರಣದಲ್ಲಿ ನಗುತ್ತಾ, ಉರಿಯುವ ಶರಗಳಿಂದ ಅವರ ಕುದುರೆಗಳನ್ನು, ಆನೆಗಳನ್ನು ಮತ್ತು ಸಾರಥಿಗಳನ್ನೂ ಕೆಳಗುರುಳಿಸಿದೆನು.
05170021a ತೇ ನಿವೃತ್ತಾಶ್ಚ ಭಗ್ನಾಶ್ಚ ದೃಷ್ಟ್ವಾ ತಲ್ಲಾಘವಂ ಮಮ।
05170021c ಅಥಾಹಂ ಹಾಸ್ತಿನಪುರಮಾಯಾಂ ಜಿತ್ವಾ ಮಹೀಕ್ಷಿತಃ।।
ನನ್ನ ಲಾಘವವನ್ನು ನೋಡಿ ಅವರು ಭಗ್ನರಾಗಿ ನಿವೃತ್ತರಾದರು. ಮಹೀಕ್ಷಿತರನ್ನು ಗೆದ್ದು ನಾನು ಹಸ್ತಿನಾಪುರಕ್ಕೆ ಬಂದೆನು.
05170022a ಅತೋಽಹಂ ತಾಶ್ಚ ಕನ್ಯಾ ವೈ ಭ್ರಾತುರರ್ಥಾಯ ಭಾರತ।
05170022c ತಚ್ಚ ಕರ್ಮ ಮಹಾಬಾಹೋ ಸತ್ಯವತ್ಯೈ ನ್ಯವೇದಯಂ।।
ಭಾರತ! ಮಹಾಬಾಹೋ! ಅಲ್ಲಿ ನಾನು ಸತ್ಯವತಿಗೆ ತಮ್ಮನಿಗಾಗಿ ತಂದ ಆ ಕನ್ಯೆಯರ ಮತ್ತು ನಡೆದ ಕಾರ್ಯಗಳ ಕುರಿತು ನಿವೇದಿಸಿದೆನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಕನ್ಯಾಹರಣೇ ಸಪ್ತತ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಕನ್ಯಾಹರಣದಲ್ಲಿ ನೂರಾಎಪ್ಪತ್ತನೆಯ ಅಧ್ಯಾಯವು.