ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ರಥಾಥಿರಥಸಂಖ್ಯ ಪರ್ವ
ಅಧ್ಯಾಯ 169
ಸಾರ
ಪಾಂಡವರ ಸೇನೆಯಲ್ಲಿರುವ ಕುಂತಿಭೋಜ, ಘಟೋತ್ಕಚ ಮತ್ತು ಇತರರ ಪರಾಕ್ರಮವನ್ನು ವರ್ಣಿಸಿ ಭೀಷ್ಮನು ಶಿಖಂಡಿಯನ್ನು ನೋಡಿ ಅವನನ್ನು ಕೊಲ್ಲುವುದಿಲ್ಲ ಎನ್ನುವುದು (1-21).
05169001 ಭೀಷ್ಮ ಉವಾಚ।
05169001a ರೋಚಮಾನೋ ಮಹಾರಾಜ ಪಾಂಡವಾನಾಂ ಮಹಾರಥಃ।
05169001c ಯೋತ್ಸ್ಯತೇಽಮರವತ್ಸಂಖ್ಯೇ ಪರಸೈನ್ಯೇಷು ಭಾರತ।।
ಭೀಷ್ಮನು ಹೇಳಿದನು: “ಭಾರತ! ಮಹಾರಾಜ! ಪಾಂಡವರ ಮಹಾರಥಿ ರೋಚಮಾನನು ರಣದಲ್ಲಿ ಶತ್ರುಸೇನೆಯೊಂದಿಗೆ ಅಮರನಂತೆ ಹೋರಾಡುತ್ತಾನೆ.
05169002a ಪುರುಜಿತ್ಕುಂತಿಭೋಜಶ್ಚ ಮಹೇಷ್ವಾಸೋ ಮಹಾಬಲಃ।
05169002c ಮಾತುಲೋ ಭೀಮಸೇನಸ್ಯ ಸ ಚ ಮೇಽತಿರಥೋ ಮತಃ।।
ಮಹೇಷ್ವಾಸ, ಮಹಾಬಲಿ, ಭೀಮಸೇನನ ಸೋದರಮಾವ, ಪುರುಜಿತ್ ಕುಂತಿಭೋಜನು ಅತಿರಥನೆಂದು ನನ್ನ ಅಭಿಪ್ರಾಯ.
05169003a ಏಷ ವೀರೋ ಮಹೇಷ್ವಾಸಃ ಕೃತೀ ಚ ನಿಪುಣಶ್ಚ ಹ।
05169003c ಚಿತ್ರಯೋಧೀ ಚ ಶಕ್ತಶ್ಚ ಮತೋ ಮೇ ರಥಪುಂಗವಃ।।
ಈ ಮಹೇಷ್ವಾಸನು ವೀರ, ಅನುಭವಿ ಮತ್ತು ನಿಪುಣ, ಚಿತ್ರಯೋಧಿ, ಶಕ್ತ ಮತ್ತು ರಥಪುಂಗವನೆಂದು ನನ್ನ ಅಭಿಪ್ರಾಯ.
05169004a ಸ ಯೋತ್ಸ್ಯತಿ ಹಿ ವಿಕ್ರಮ್ಯ ಮಘವಾನಿವ ದಾನವೈಃ।
05169004c ಯೋಧಾಶ್ಚಾಸ್ಯ ಪರಿಖ್ಯಾತಾಃ ಸರ್ವೇ ಯುದ್ಧವಿಶಾರದಾಃ।।
ಮಘವತನು ದಾನವರೊಂದಿಗೆ ಹೇಗೋ ಹಾಗೆ ಅವನು ವಿಕ್ರಮದಿಂದ ಯುದ್ಧಮಾಡುತ್ತಾನೆ. ಅವನ ಯೋಧರೆಲ್ಲರೂ ವಿಖ್ಯಾತರು ಮತ್ತು ಯುದ್ಧ ವಿಶಾರದರು.
05169005a ಭಾಗಿನೇಯಕೃತೇ ವೀರಃ ಸ ಕರಿಷ್ಯತಿ ಸಂಗರೇ।
05169005c ಸುಮಹತ್ಕರ್ಮ ಪಾಂಡೂನಾಂ ಸ್ಥಿತಃ ಪ್ರಿಯಹಿತೇ ನೃಪಃ।।
ತನ್ನ ತಂಗಿಗೆ ಒಳಿತನ್ನು ಮಾಡಲು, ಪಾಂಡವರ ಪ್ರಿಯಹಿತನಿರತನಾಗಿರುವ ಆ ವೀರ ನೃಪನು ಸಂಗರದಲ್ಲಿ ಮಹಾಕಾರ್ಯಗಳನ್ನೆಸಗುತ್ತಾನೆ.
05169006a ಭೈಮಸೇನಿರ್ಮಹಾರಾಜ ಹೈಡಿಂಬೋ ರಾಕ್ಷಸೇಶ್ವರಃ।
05169006c ಮತೋ ಮೇ ಬಹುಮಾಯಾವೀ ರಥಯೂಥಪಯೂಥಪಃ।।
ಮಹಾರಾಜ! ಭೀಮಸೇನನ ಮಗ ಹೈಡಿಂಬಿ ರಾಕ್ಷಸೇಶ್ವರನು ಬಹುಮಾಯಾವಿಯೂ ಕೂಡ. ಅವನು ರಥಯೂಥಪಯೂಥಪ.
05169007a ಯೋತ್ಸ್ಯತೇ ಸಮರೇ ತಾತ ಮಾಯಾಭಿಃ ಸಮರಪ್ರಿಯಃ।
05169007c ಯೇ ಚಾಸ್ಯ ರಾಕ್ಷಸಾಃ ಶೂರಾಃ ಸಚಿವಾ ವಶವರ್ತಿನಃ।।
ಮಗೂ! ಆ ಸಮರಪ್ರಿಯನು ಸಮರದಲ್ಲಿ ಮಾಯೆಯಿಂದ ಯುದ್ಧಮಾಡುತ್ತಾನೆ. ಅವನ ವಶವರ್ತಿ ಸಚಿವ ರಾಕ್ಷಸರೂ ಕೂಡ ಶೂರರು.
05169008a ಏತೇ ಚಾನ್ಯೇ ಚ ಬಹವೋ ನಾನಾಜನಪದೇಶ್ವರಾಃ।
05169008c ಸಮೇತಾಃ ಪಾಂಡವಸ್ಯಾರ್ಥೇ ವಾಸುದೇವಪುರೋಗಮಾಃ।।
ಇವರು ಮತ್ತು ಇತರ ನಾನಾ ಜನಪದೇಶ್ವರರು ಬಹುಸಂಖ್ಯೆಗಳಲ್ಲಿ ವಾಸುದೇವನ ನಾಯಕತ್ವದಲ್ಲಿ ಪಾಂಡವರಿಗಾಗಿ ಸೇರಿದ್ದಾರೆ.
05169009a ಏತೇ ಪ್ರಾಧಾನ್ಯತೋ ರಾಜನ್ಪಾಂಡವಸ್ಯ ಮಹಾತ್ಮನಃ।
05169009c ರಥಾಶ್ಚಾತಿರಥಾಶ್ಚೈವ ಯೇ ಚಾಪ್ಯರ್ಧರಥಾ ಮತಾಃ।।
ರಾಜನ್! ಇವರು ಮಹಾತ್ಮ ಪಾಂಡವರ ಪ್ರಧಾನ ರಥಿಗಳು, ಅತಿರಥಿಗಳು, ಅರ್ಧರಥಿಗಳು ಎಂದು ಎನಿಸಿಕೊಂಡವರು.
05169010a ನೇಷ್ಯಂತಿ ಸಮರೇ ಸೇನಾಂ ಭೀಮಾಂ ಯೌಧಿಷ್ಠಿರೀಂ ನೃಪ।
05169010c ಮಹೇಂದ್ರೇಣೇವ ವೀರೇಣ ಪಾಲ್ಯಮಾನಾಂ ಕಿರೀಟಿನಾ।।
ನೃಪ! ಇವರು ಮಹೇಂದ್ರನಂತಿರುವ ವೀರ ಕಿರೀಟಿಯಿಂದ ಪಾಲಿಸಲ್ಪಟ್ಟ ಯುಧಿಷ್ಠಿರನ ಭಯಂಕರ ಸೇನೆಯನ್ನು ನಡೆಸುವರು.
05169011a ತೈರಹಂ ಸಮರೇ ವೀರ ತ್ವಾಮಾಯದ್ಭಿರ್ಜಯೈಷಿಭಿಃ।
05169011c ಯೋತ್ಸ್ಯಾಮಿ ಜಯಮಾಕಾಂಕ್ಷನ್ನಥ ವಾ ನಿಧನಂ ರಣೇ।।
ವೀರ! ನಿನ್ನ ವಿರುದ್ಧ ಜಯವನ್ನು ಬಯಸಿ ಸಮರಕ್ಕೆ ಬಂದಿರುವ ಇವರೊಂದಿಗೆ ನಾನು ನಿನಗಾಗಿ ರಣದಲ್ಲಿ ಜಯವನ್ನು ಅಥವಾ ಮರಣವನ್ನು ಬಯಸಿ ಹೋರಾಡುತ್ತೇನೆ.
05169012a ಪಾರ್ಥಂ ಚ ವಾಸುದೇವಂ ಚ ಚಕ್ರಗಾಂಡೀವಧಾರಿಣೌ।
05169012c ಸಂಧ್ಯಾಗತಾವಿವಾರ್ಕೇಂದೂ ಸಮೇಷ್ಯೇ ಪುರುಷೋತ್ತಮೌ।।
ಚಕ್ರ-ಗಾಂಡೀವಧಾರಿಗಳಾದ ಪುರುಷೋತ್ತಮರಾದ ಪಾರ್ಥ-ವಾಸುದೇವರನ್ನು ಸಂಧ್ಯಾಸಮಯದಲ್ಲಿ ಸೂರ್ಯ-ಚಂದ್ರರನ್ನು ಎದುರಾಗುವಂತೆ ಎದುರಿಸುತ್ತೇನೆ.
05169013a ಯೇ ಚೈವ ತೇ ರಥೋದಾರಾಃ ಪಾಂಡುಪುತ್ರಸ್ಯ ಸೈನಿಕಾಃ।
05169013c ಸಹಸೈನ್ಯಾನಹಂ ತಾಂಶ್ಚ ಪ್ರತೀಯಾಂ ರಣಮೂರ್ಧನಿ।।
ಸೇನೆಯೊಂದಿಗೆ ನಿನ್ನ ರಣದ ಮೂರ್ಧನಿಯಲ್ಲಿದ್ದುಕೊಂಡು ರಥೋದಾರ ಪಾಂಡುಪುತ್ರರ ಸೈನಿಕರನ್ನು ಎದುರಿಸುತ್ತೇನೆ.
05169014a ಏತೇ ರಥಾಶ್ಚಾತಿರಥಾಶ್ಚ ತುಭ್ಯಂ
ಯಥಾಪ್ರಧಾನಂ ನೃಪ ಕೀರ್ತಿತಾ ಮಯಾ।
05169014c ತಥಾ ರಾಜನ್ನರ್ಧರಥಾಶ್ಚ ಕೇ ಚಿತ್
ತಥೈವ ತೇಷಾಮಪಿ ಕೌರವೇಂದ್ರ।।
ಕೌರವೇಂದ್ರ! ನೃಪ! ಪ್ರಧಾನರಾದ ಈ ರಥ-ಅತಿರಥರ ಕುರಿತು ನಾನು ನಿನಗೆ ಹೇಳಿದ್ದೇನೆ. ರಾಜನ್! ಅರ್ಧರಥರೆನಿಸಿಕೊಂಡಿರುವ ಕೆಲವರ ಕುರಿತೂ ಕೂಡ ನಿನಗೆ ಹೇಳಿದ್ದೇನೆ.
05169015a ಅರ್ಜುನಂ ವಾಸುದೇವಂ ಚ ಯೇ ಚಾನ್ಯೇ ತತ್ರ ಪಾರ್ಥಿವಾಃ।
05169015c ಸರ್ವಾನಾವಾರಯಿಷ್ಯಾಮಿ ಯಾವದ್ದ್ರಕ್ಷ್ಯಾಮಿ ಭಾರತ।।
ಭಾರತ! ಅರ್ಜುನ, ವಾಸುದೇವ ಮತ್ತು ಅಲ್ಲಿರುವ ಅನ್ಯ ಪಾರ್ಥಿವರೆಲ್ಲರನ್ನೂ ತಡೆದು ನಿನ್ನ ಸೇನೆಯನ್ನು ರಕ್ಷಿಸುತ್ತೇನೆ.
05169016a ಪಾಂಚಾಲ್ಯಂ ತು ಮಹಾಬಾಹೋ ನಾಹಂ ಹನ್ಯಾಂ ಶಿಖಂಡಿನಂ।
05169016c ಉದ್ಯತೇಷುಮಭಿಪ್ರೇಕ್ಷ್ಯ ಪ್ರತಿಯುಧ್ಯಂತಮಾಹವೇ।।
ಮಹಾಬಾಹೋ! ಆದರೆ ಬಾಣಗಳನ್ನು ಹಿಡಿದು ನನ್ನನ್ನು ಎದುರಿಸಿ ಬರುವ ಪಾಂಚಾಲ್ಯ ಶಿಖಂಡಿಯನ್ನು ನೋಡಿ ನಾನು ಅವನನ್ನು ಕೊಲ್ಲುವುದಿಲ್ಲ.
05169017a ಲೋಕಸ್ತದ್ವೇದ ಯದಹಂ ಪಿತುಃ ಪ್ರಿಯಚಿಕೀರ್ಷಯಾ।
05169017c ಪ್ರಾಪ್ತಂ ರಾಜ್ಯಂ ಪರಿತ್ಯಜ್ಯ ಬ್ರಹ್ಮಚರ್ಯೇ ಧೃತವ್ರತಃ।।
ತಂದೆಗೆ ಪ್ರಿಯವಾದುದನ್ನು ಮಾಡಲೋಸುಗ ಹೇಗೆ ನಾನು ರಾಜ್ಯಪ್ರಾಪ್ತಿಯನ್ನು ಪರಿತ್ಯಜಿಸಿ ಬ್ರಹ್ಮಚರ್ಯದಲ್ಲಿ ಧೃತವ್ರತನಾದೆ ಎಂದು ಲೋಕಕ್ಕೇ ತಿಳಿದಿದೆ.
05169018a ಚಿತ್ರಾಂಗದಂ ಕೌರವಾಣಾಮಹಂ ರಾಜ್ಯೇಽಭ್ಯಷೇಚಯಂ।
05169018c ವಿಚಿತ್ರವೀರ್ಯಂ ಚ ಶಿಶುಂ ಯೌವರಾಜ್ಯೇಽಭ್ಯಷೇಚಯಂ।।
ಚಿತ್ರಾಂಗದನನ್ನು ಕೌರವರ ರಾಜ್ಯಕ್ಕೆ ಅಭಿಷೇಕಿಸಿ, ಬಾಲಕ ವಿಚಿತ್ರವೀರ್ಯನನ್ನು ಯುವರಾಜನಾಗಿ ಅಭಿಷೇಕಿಸಿದೆನು.
05169019a ದೇವವ್ರತತ್ವಂ ವಿಖ್ಯಾಪ್ಯ ಪೃಥಿವ್ಯಾಂ ಸರ್ವರಾಜಸು।
05169019c ನೈವ ಹನ್ಯಾಂ ಸ್ತ್ರಿಯಂ ಜಾತು ನ ಸ್ತ್ರೀಪೂರ್ವಂ ಕಥಂ ಚನ।।
ಪೃಥ್ವಿಯಲ್ಲಿ ಎಲ್ಲ ರಾಜರುಗಳಲ್ಲಿ ನನ್ನ ದೇವವ್ರತತ್ವವನ್ನು ಪಸರಿಸಿ ನಾನು ಸ್ತ್ರೀಯನ್ನು ಅಥವಾ ಹಿಂದೆ ಸ್ತ್ರೀಯಾಗಿದ್ದನೆಂದು ತಿಳಿದಿರುವವನನ್ನು ಎಂದೂ ಕೊಲ್ಲುವುದಿಲ್ಲ.
05169020a ಸ ಹಿ ಸ್ತ್ರೀಪೂರ್ವಕೋ ರಾಜಂ ಶಿಖಂಡೀ ಯದಿ ತೇ ಶ್ರುತಃ।
05169020c ಕನ್ಯಾ ಭೂತ್ವಾ ಪುಮಾಂ ಜಾತೋ ನ ಯೋತ್ಸ್ಯೇ ತೇನ ಭಾರತ।।
ಭಾರತ! ರಾಜನ್! ಶಿಖಂಡಿಯು ಮೊದಲು ಹೆಣ್ಣಾಗಿದ್ದ ಎಂದು ನೀನು ಕೇಳಿರಬಹುದು. ಹೆಣ್ಣಾಗಿ ಹುಟ್ಟಿ ನಂತರ ಗಂಡಾದ ಅವನೊಡನೆ ನಾನು ಯುದ್ಧಮಾಡುವುದಿಲ್ಲ.
05169021a ಸರ್ವಾಂಸ್ತ್ವನ್ಯಾನ್ ಹನಿಷ್ಯಾಮಿ ಪಾರ್ಥಿವಾನ್ಭರತರ್ಷಭ।
05169021c ಯಾನ್ಸಮೇಷ್ಯಾಮಿ ಸಮರೇ ನ ತು ಕುಂತೀಸುತಾನ್ನೃಪ।।
ಭರತರ್ಷಭ! ನೃಪ! ಕುಂತೀಸುತರನ್ನು ಬಿಟ್ಟು ಸಮರದಲ್ಲಿ ಎದುರಾಗುವ ಅನ್ಯ ಎಲ್ಲ ಪಾರ್ಥಿವರನ್ನೂ ಸಂಹರಿಸುತ್ತೇನೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ರಥಾಥಿರಥಸಂಖ್ಯಾನ ಪರ್ವಣಿ ಏಕೋನಸಪ್ತತ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ರಥಾಥಿರಥಸಂಖ್ಯಾನ ಪರ್ವದಲ್ಲಿ ನೂರಾಅರವತ್ತೊಂಭತ್ತನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ರಥಾಥಿರಥಸಂಖ್ಯಾನ ಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ರಥಾಥಿರಥಸಂಖ್ಯಾನ ಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-4/18, ಉಪಪರ್ವಗಳು-59/100, ಅಧ್ಯಾಯಗಳು-832/1995, ಶ್ಲೋಕಗಳು-27019/73784