166 ಪಾಂಡವರಥಾಥಿರಥಸಂಖ್ಯಾ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ರಥಾಥಿರಥಸಂಖ್ಯ ಪರ್ವ

ಅಧ್ಯಾಯ 166

ಸಾರ

ಕರ್ಣನನ್ನು ಭೀಷ್ಮನು ಪುನಃ ನಿಂದಿಸಲು (1-9), ದುರ್ಯೋಧನನು ಪ್ರಸ್ತುತ ಕಾರ್ಯದ ಬಗ್ಗೆ ಭೀಷ್ಮನ ಗಮನವನ್ನು ಸೆಳೆದುದು (10-13). ಭೀಷ್ಮನು ಪಾಂಡವರ ಸೇನೆಯಲ್ಲಿದ್ದ ಯುಧಿಷ್ಠಿರನು ರಥೋದಾರನೆಂದೂ, ಭೀಮಸೇನನು ೮ ರಥರಿಗೆ ಸಮಾನನೆಂದೂ, ಯಮಳರಿಬ್ಬರೂ ರಥರೆಂದೂ, ಅರ್ಜುನನ ಸರಿಸಮನಾದವರು ಎರಡೂ ಸೇನೆಗಳಲ್ಲಿ ಇಲ್ಲ ಎಂದು ಹೇಳಿ ಅವರ ಪರಾಕ್ರಮವನ್ನು ವರ್ಣಿಸಿದುದು (14-39).

05166001 ಭೀಷ್ಮ ಉವಾಚ।
05166001a ಸಮುದ್ಯತೋಽಯಂ ಭಾರೋ ಮೇ ಸುಮಹಾನ್ಸಾಗರೋಪಮಃ।
05166001c ಧಾರ್ತರಾಷ್ಟ್ರಸ್ಯ ಸಂಗ್ರಾಮೇ ವರ್ಷಪೂಗಾಭಿಚಿಂತಿತಃ।।

ಭೀಷ್ಮನು ಹೇಳಿದನು: “ಸಾಗರದಂತೆ ಬಹುಭಾರವಾಗಿರುವ ಧಾರ್ತರಾಷ್ಟ್ರನ ಈ ಸಂಗ್ರಾಮವು ನನ್ನ ಮೇಲೆ ಬಿದ್ದಿದೆ. ಇದರ ಚಿಂತೆ ಬಹಳ ವರ್ಷಗಳಿಂದ ನನಗಿತ್ತು.

05166002a ತಸ್ಮಿನ್ನಭ್ಯಾಗತೇ ಕಾಲೇ ಪ್ರತಪ್ತೇ ಲೋಮಹರ್ಷಣೇ।
05166002c ಮಿಥೋಭೇದೋ ನ ಮೇ ಕಾರ್ಯಸ್ತೇನ ಜೀವಸಿ ಸೂತಜ।।

ರೋಮಾಂಚನಗೊಳಿಸುವ ಆ ಕಾಲವು ಪ್ರಾಪ್ತವಾಗಿರುವಾಗ ಈಗ ಭೇದವನ್ನುಂಟುಮಾಡುವ ಕಾರ್ಯವು ನನ್ನಿಂದಾಗಬಾರದು. ಸೂತಜ! ಈ ಕಾರಣದಿಂದ ನೀನು ಜೀವಿಸಿದ್ದೀಯೆ.

05166003a ನ ಹ್ಯಹಂ ನಾದ್ಯ ವಿಕ್ರಮ್ಯ ಸ್ಥವಿರೋಽಪಿ ಶಿಶೋಸ್ತವ।
05166003c ಯುದ್ಧಶ್ರದ್ಧಾಂ ರಣೇ ಚಿಂದ್ಯಾಂ ಜೀವಿತಸ್ಯ ಚ ಸೂತಜ।।

ಸೂತಜ! ಇಲ್ಲದಿದ್ದರೆ ನಾನು ವೃದ್ಧನಾಗಿದ್ದರೂ ನೀನು ಶಿಶುವಂತಿದ್ದರೂ ರಣಯುದ್ಧದಲ್ಲಿ ನಿನಗಿರುವ ಶ್ರದ್ಧೆಯನ್ನು ಅಡಗಿಸಿ ಜೀವಿತವನ್ನು ಪುಡಿಮಾಡುತ್ತಿದ್ದೆ.

05166004a ಜಾಮದಗ್ನ್ಯೇನ ರಾಮೇಣ ಮಹಾಸ್ತ್ರಾಣಿ ಪ್ರಮುಂಚತಾ।
05166004c ನ ಮೇ ವ್ಯಥಾಭವತ್ಕಾ ಚಿತ್ತ್ವಂ ತು ಮೇ ಕಿಂ ಕರಿಷ್ಯಸಿ।।

ಜಾಮದಗ್ನಿ ರಾಮನು ಬಿಟ್ಟ ಮಹಾಸ್ತ್ರಗಳು ನನ್ನನ್ನು ಅಲುಗಾಡಿಸಲಿಲ್ಲ1. ಇನ್ನು ನೀನೇನು ನನಗೆ ಮಾಡುತ್ತೀಯೆ?

05166005a ಕಾಮಂ ನೈತತ್ಪ್ರಶಂಸಂತಿ ಸಂತೋಽತ್ಮಬಲಸಂಸ್ತವಂ।
05166005c ವಕ್ಷ್ಯಾಮಿ ತು ತ್ವಾಂ ಸಂತಪ್ತೋ ನಿಹೀನ ಕುಲಪಾಂಸನ।।

ಆತ್ಮಬಲವನ್ನು ಹೊಗಳಿಕೊಳ್ಳುವವರನ್ನು ಸಂತರು ಮೆಚ್ಚುವುದಿಲ್ಲ. ಕುಲಪಾಂಸನ! ಕುಪಿತನಾಗಿ ನನ್ನ ಬಗ್ಗೆ ಹೇಳಿಕೊಳ್ಳುತ್ತಿದ್ದೇನೆ.

05166006a ಸಮೇತಂ ಪಾರ್ಥಿವಂ ಕ್ಷತ್ರಂ ಕಾಶಿರಾಜ್ಞಾಃ ಸ್ವಯಂವರೇ।
05166006c ನಿರ್ಜಿತ್ಯೈಕರಥೇನೈವ ಯತ್ಕನ್ಯಾಸ್ತರಸಾ ಹೃತಾಃ।।

ಕಾಶಿರಾಜನ ಸ್ವಯಂವರದಲ್ಲಿ ಸೇರಿದ್ದ ಪಾರ್ಥಿವ ಕ್ಷತ್ರಿಯರನ್ನು ಒಟ್ಟಿಗೇ ಒಂದೇ ರಥದಲ್ಲಿ ಸೋಲಿಸಿ ಕನ್ಯೆಯರರನ್ನು ಅಪಹರಿಸಿದ್ದೆನು2.

05166007a ಈದೃಶಾನಾಂ ಸಹಸ್ರಾಣಿ ವಿಶಿಷ್ಟಾನಾಮಥೋ ಪುನಃ।
05166007c ಮಯೈಕೇನ ನಿರಸ್ತಾನಿ ಸಸೈನ್ಯಾನಿ ರಣಾಜಿರೇ।।

ಹಾಗೆ ಸಹಸ್ರಾರು ವಿಶಿಷ್ಟರನ್ನು ಸೈನ್ಯಗಳೊಂದಿಗೆ ಆ ರಣದಲ್ಲಿ ಪುನಃ ನಾನು ಒಬ್ಬನೇ ಹೊಡೆದೋಡಿಸಿದೆನು.

05166008a ತ್ವಾಂ ಪ್ರಾಪ್ಯ ವೈರಪುರುಷಂ ಕುರೂಣಾಮನಯೋ ಮಹಾನ್।
05166008c ಉಪಸ್ಥಿತೋ ವಿನಾಶಾಯ ಯತಸ್ವ ಪುರುಷೋ ಭವ।।

ಕುರುಗಳಲ್ಲಿ ವೈರಪುರುಷನಾದ ನಿನ್ನನ್ನು ಸೇರಿ ಇವರು ಮಹಾ ವಿನಾಶಕ್ಕೆ ಉಪಸ್ಥಿತರಾಗಿದ್ದಾರೆ. ಪ್ರಯತ್ನಿಸಿ ಪುರುಷನಾಗು.

05166009a ಯುಧ್ಯಸ್ವ ಪಾರ್ಥಂ ಸಮರೇ ಯೇನ ವಿಸ್ಪರ್ಧಸೇ ಸಹ।
05166009c ದ್ರಕ್ಷ್ಯಾಮಿ ತ್ವಾಂ ವಿನಿರ್ಮುಕ್ತಮಸ್ಮಾದ್ಯುದ್ಧಾತ್ಸುದುರ್ಮತೇ।।

ದುರ್ಮತೇ! ಯಾರೊಂದಿಗೆ ಸ್ಪರ್ಧಿಸುತ್ತಿರುವೆಯೋ ಆ ಪಾಂಡವರೊಂದಿಗೆ ಸಮರದಲ್ಲಿ ಯುದ್ಧಮಾಡು. ನಮ್ಮ ಯುದ್ಧದಿಂದ ನೀನು ಓಡಿ ಹೋಗುವುದನ್ನೂ ನೋಡುತ್ತೇನೆ.””

05166010 ಸಂಜಯ ಉವಾಚ।
05166010a ತಮುವಾಚ ತತೋ ರಾಜಾ ಧಾರ್ತರಾಷ್ಟ್ರೋ ಮಹಾಮನಾಃ।
05166010c ಮಾಮವೇಕ್ಷಸ್ವ ಗಾಂಗೇಯ ಕಾರ್ಯಂ ಹಿ ಮಹದುದ್ಯತಂ।।

ಸಂಜಯನು ಹೇಳಿದನು: “ಆಗ ಮಹಾಮನಸ್ವಿ ರಾಜಾ ಧಾರ್ತರಾಷ್ಟ್ರನು ಹೇಳಿದನು: “ಗಾಂಗೇಯ! ನನ್ನನ್ನು ನೋಡು! ಏಕೆಂದರೆ ಮಹಾ ಕಾರ್ಯವನ್ನೆಸಗಬೇಕಾಗಿದೆ.

05166011a ಚಿಂತ್ಯತಾಮಿದಮೇವಾಗ್ರೇ ಮಮ ನಿಃಶ್ರೇಯಸಂ ಪರಂ।
05166011c ಉಭಾವಪಿ ಭವಂತೌ ಮೇ ಮಹತ್ಕರ್ಮ ಕರಿಷ್ಯತಃ।।

ಎಲ್ಲಕ್ಕಿಂತ ಮೊದಲು ನನಗೆ ಪರಮ ಶ್ರೇಯಸ್ಕರವಾದುದನ್ನು ಯೋಚಿಸಿ. ನೀವಿಬ್ಬರೂ ನನಗೆ ಮಹಾ ಕಾರ್ಯಗಳನ್ನು ಮಾಡುತ್ತೀರಿ.

05166012a ಭೂಯಶ್ಚ ಶ್ರೋತುಮಿಚ್ಚಾಮಿ ಪರೇಷಾಂ ರಥಸತ್ತಮಾನ್।
05166012c ಯೇ ಚೈವಾತಿರಥಾಸ್ತತ್ರ ತಥೈವ ರಥಯೂಥಪಾಃ।।

ಇನ್ನು ನಾನು ಶತ್ರುಗಳ ರಥಸತ್ತಮರ, ಅವರ ಅತಿರಥರ ಮತ್ತು ರಥಯೂಥಪರ ಕುರಿತು ಕೇಳಬಯಸುತ್ತೇನೆ.

05166013a ಬಲಾಬಲಮಮಿತ್ರಾಣಾಂ ಶ್ರೋತುಮಿಚ್ಚಾಮಿ ಕೌರವ।
05166013c ಪ್ರಭಾತಾಯಾಂ ರಜನ್ಯಾಂ ವೈ ಇದಂ ಯುದ್ಧಂ ಭವಿಷ್ಯತಿ।।

ಕೌರವ! ಶತ್ರುಗಳ ಬಲಾಬಲಗಳನ್ನು ಕೇಳಲು ಬಯಸುತ್ತೇನೆ. ರಾತ್ರಿ ಕಳೆದು ಬೆಳಗಾದರೆ ಯುದ್ಧ ನಡೆಯಲಿದೆ!”

05166014 ಭೀಷ್ಮ ಉವಾಚ।
05166014a ಏತೇ ರಥಾಸ್ತೇ ಸಂಖ್ಯಾತಾಸ್ತಥೈವಾತಿರಥಾ ನೃಪ।
05166014c ಯ ಚಾಪ್ಯರ್ಧರಥಾ ರಾಜನ್ಪಾಂಡವಾನಾಮತಃ ಶೃಣು।।
05166015a ಯದಿ ಕೌತೂಹಲಂ ತೇಽದ್ಯ ಪಾಂಡವಾನಾಂ ಬಲೇ ನೃಪ।
05166015c ರಥಸಂಖ್ಯಾಂ ಮಹಾಬಾಹೋ ಸಹೈಭಿರ್ವಸುಧಾಧಿಪೈಃ।।

ಭೀಷ್ಮನು ಹೇಳಿದನು: “ನೃಪ! ರಾಜನ್! ನಾನು ಇಲ್ಲಿರುವ ರಥರನ್ನು, ಅತಿರಥರನ್ನು ಮತ್ತು ಅರ್ಧರಥರನ್ನೂ ಎಣಿಸಿದ್ದೇನೆ. ನೃಪ! ಮಹಾಬಾಹೋ! ಈಗ ನಿನಗೆ ಕುತೂಹಲವಿದ್ದರೆ ಪಾಂಡವರಲ್ಲಿದ್ದವರ ಕುರಿತು, ಪಾಂಡವರ ಬಲದಲ್ಲಿರುವ ರಥರ ಎಣಿಕೆಯನ್ನು ವಸುಧಾಧಿಪರೊಂದಿಗೆ ಕೇಳು.

05166016a ಸ್ವಯಂ ರಾಜಾ ರಥೋದಾರಃ ಪಾಂಡವಃ ಕುಂತಿನಂದನಃ।
05166016c ಅಗ್ನಿವತ್ಸಮರೇ ತಾತ ಚರಿಷ್ಯತಿ ನ ಸಂಶಯಃ।।

ಸ್ವಯಂ ರಾಜಾ ಪಾಂಡವ ಕುಂತಿನಂದನನು ರಥೋದಾರನು. ಮಗೂ! ಅವನು ಸಮರದಲ್ಲಿ ಅಗ್ನಿಯಂತೆ ಸಂಚರಿಸುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.

05166017a ಭೀಮಸೇನಸ್ತು ರಾಜೇಂದ್ರ ರಥೋಽಷ್ಟಗುಣಸಮ್ಮಿತಃ।
05166017c ನಾಗಾಯುತಬಲೋ ಮಾನೀ ತೇಜಸಾ ನ ಸ ಮಾನುಷಃ।।

ರಾಜೇಂದ್ರ! ಭೀಮಸೇನನು ಎಂಟು ರಥರ ಗುಣಸಮ್ಮಿತನಾಗಿದ್ದಾನೆ. ಸಾವಿರ ಆನೆಗಳ ಬಲವನ್ನುಳ್ಳ ಆ ಮಾನೀ ತೇಜಸ್ವಿಯು ಮನುಷ್ಯನಲ್ಲ.

05166018a ಮಾದ್ರೀಪುತ್ರೌ ತು ರಥಿನೌ ದ್ವಾವೇವ ಪುರುಷರ್ಷಭೌ।
05166018c ಅಶ್ವಿನಾವಿವ ರೂಪೇಣ ತೇಜಸಾ ಚ ಸಮನ್ವಿತೌ।।

ಇಬ್ಬರು ಮಾದ್ರೀಪುತ್ರರೂ ರಥರು. ಈ ಪುರುಷರ್ಷಭರಿಬ್ಬರೂ ಅಶ್ವಿನಿಯರಂತೆ ರೂಪ ಮತ್ತು ತೇಜಸ್ಸುಗಳಿಂದ ಸಮನ್ವಿತರಾಗಿದ್ದಾರೆ.

05166019a ಏತೇ ಚಮೂಮುಖಗತಾಃ ಸ್ಮರಂತಃ ಕ್ಲೇಶಮಾತ್ಮನಃ।
05166019c ರುದ್ರವತ್ಪ್ರಚರಿಷ್ಯಂತಿ ತತ್ರ ಮೇ ನಾಸ್ತಿ ಸಂಶಯಃ।।

ತಮ್ಮ ಕ್ಲೇಶಗಳನ್ನು ಸ್ಮರಿಸಿಕೊಳ್ಳುತ್ತಾ ಇವರು ಸೇನೆಗಳ ಮುಂಭಾಗದಲ್ಲಿ ರುದ್ರರಂತೆ ಸಂಚರಿಸುತ್ತಾರೆ ಎನ್ನುವುದರಲ್ಲಿ ನನಗೆ ಸಂಶಯವಿಲ್ಲ.

05166020a ಸರ್ವ ಏವ ಮಹಾತ್ಮಾನಃ ಶಾಲಸ್ಕಂಧಾ ಇವೋದ್ಗತಾಃ।
05166020c ಪ್ರಾದೇಶೇನಾಧಿಕಾಃ ಪುಂಭಿರನ್ಯೈಸ್ತೇ ಚ ಪ್ರಮಾಣತಃ।।

ಈ ಎಲ್ಲ ಮಹಾತ್ಮರೂ ಶಾಲಸ್ಕಂಧಗಳಂತೆ ಎತ್ತರವಾಗಿದ್ದಾರೆ. ಪ್ರಮಾಣದಲ್ಲಿ ಅವರು ಉಳಿದ ಪುರುಷರಿಗಿಂತ ಒಂದು ಅಳತೆ ಹೆಚ್ಚಿನವರು.

05166021a ಸಿಂಹಸಂಹನನಾಃ ಸರ್ವೇ ಪಾಂಡುಪುತ್ರಾ ಮಹಾಬಲಾಃ।
05166021c ಚರಿತಬ್ರಹ್ಮಚರ್ಯಾಶ್ಚ ಸರ್ವೇ ಚಾತಿತಪಸ್ವಿನಃ।।

ಎಲ್ಲಾ ಪಾಂಡುಪುತ್ರರೂ ಮಹಾಬಲರು, ಸಿಂಹಸಂಹನನರು. ಎಲ್ಲರೂ ಬ್ರಹ್ಮಚರ್ಯವನ್ನು ಪಾಲಿಸುವವರು, ತಪಸ್ವಿಗಳು ಕೂಡ.

05166022a ಹ್ರೀಮಂತಃ ಪುರುಷವ್ಯಾಘ್ರಾ ವ್ಯಾಘ್ರಾ ಇವ ಬಲೋತ್ಕಟಾಃ।
05166022c ಜವೇ ಪ್ರಹಾರೇ ಸಮ್ಮರ್ದೇ ಸರ್ವ ಏವಾತಿಮಾನುಷಾಃ।
05166022e ಸರ್ವೇ ಜಿತಮಹೀಪಾಲಾ ದಿಗ್ಜಯೇ ಭರತರ್ಷಭ।।

ವಿನೀತರಾಗಿದ್ದರೂ ಈ ಪುರುಷವ್ಯಾಘ್ರರು ವ್ಯಾಘ್ರದಂತೆ ಬಲೋತ್ಕಟರು. ಎಲ್ಲರೂ ವೇಗದಲ್ಲಿ, ಎಸೆಯುವುದರಲ್ಲಿ ಮತ್ತು ಹೋರಾಡುವುದರಲ್ಲಿ ಅತಿಮಾನುಷರು. ಭರತರ್ಷಭ! ದಿಗ್ವಿಜಯದ ಸಮಯದಲ್ಲಿ ಎಲ್ಲರೂ ಮಹೀಪಾಲರನ್ನು ಗೆದ್ದವರು.

05166023a ನ ಚೈಷಾಂ ಪುರುಷಾಃ ಕೇ ಚಿದಾಯುಧಾನಿ ಗದಾಃ ಶರಾನ್।
05166023c ವಿಷಹಂತಿ ಸದಾ ಕರ್ತುಮಧಿಜ್ಯಾನ್ಯಪಿ ಕೌರವ।
05166023e ಉದ್ಯಂತುಂ ವಾ ಗದಾಂ ಗುರ್ವೀಂ ಶರಾನ್ವಾಪಿ ಪ್ರಕರ್ಷಿತುಂ।।

ಕೌರವ! ಯಾವ ಪುರುಷನೂ ಅವರ ಆಯುಧಗಳನ್ನು, ಗದೆಗಳನ್ನು ಮತ್ತು ಶರಗಳನ್ನು ಬಳಸಲಾರ. ಅವರ ಧನುಸ್ಸನ್ನೂ ಕಟ್ಟಲಾರರು. ಅವರ ಗದೆಯನ್ನು ಎತ್ತಲಾರರು. ಬಾಣಗಳನ್ನು ತಡೆಹಿಡಿಯಲಾರರು.

05166024a ಜವೇ ಲಕ್ಷ್ಯಸ್ಯ ಹರಣೇ ಭೋಜ್ಯೇ ಪಾಂಸುವಿಕರ್ಷಣೇ।
05166024c ಬಾಲೈರಪಿ ಭವಂತಸ್ತೈಃ ಸರ್ವ ಏವ ವಿಶೇಷಿತಾಃ।।

ಬಾಲಕರಾಗಿದ್ದಾಗ ಕೂಡ ವೇಗದಲ್ಲಿ, ಗುರಿಯಿಡುವುದರಲ್ಲಿ, ಅಪಹರಿಸಿಕೊಂಡು ಹೋಗುವುದರಲ್ಲಿ, ತಿನ್ನುವುದರಲ್ಲಿ, ಮತ್ತು ಸೆಣಸಾಡುವುದರಲ್ಲಿ ಅವರೆಲ್ಲರೂ ನಿಮಗಿಂತ ವಿಶಿಷ್ಟರಾಗಿದ್ದರು.

05166025a ತೇ ತೇ ಸೈನ್ಯಂ ಸಮಾಸಾದ್ಯ ವ್ಯಾಘ್ರಾ ಇವ ಬಲೋತ್ಕಟಾಃ।
05166025c ವಿಧ್ವಂಸಯಿಷ್ಯಂತಿ ರಣೇ ಮಾ ಸ್ಮ ತೈಃ ಸಹ ಸಂಗಮಃ।।

ವ್ಯಾಘ್ರರಂತೆ ಬಲೋತ್ಕಟರಾದ ಅವರು ರಣದಲ್ಲಿ ನಿನ್ನ ಸೈನ್ಯವನ್ನು ಎದುರಿಸಿ ವಿಧ್ವಂಸಗೊಳಿಸುತ್ತಾರೆ. ಅವರನ್ನು ಎದುರಿಸುವ ಸಾಹಸ ಮಾಡಬೇಡ!

05166026a ಏಕೈಕಶಸ್ತೇ ಸಂಗ್ರಾಮೇ ಹನ್ಯುಃ ಸರ್ವಾನ್ಮಹೀಕ್ಷಿತಃ।
05166026c ಪ್ರತ್ಯಕ್ಷಂ ತವ ರಾಜೇಂದ್ರ ರಾಜಸೂಯೇ ಯಥಾಭವತ್।।

ಒಬ್ಬೊಬ್ಬರನ್ನಾಗಿ ಅವರು ಸಂಗ್ರಾಮದಲ್ಲಿ ಎಲ್ಲ ಮಹೀಕ್ಷಿತರನ್ನು ಕೊಲ್ಲಬಲ್ಲರು. ರಾಜೇಂದ್ರ! ರಾಜಸೂಯದಲ್ಲಿ ಏನಾಯಿತೆನ್ನುವುದನ್ನು ಪ್ರತ್ಯಕ್ಷವಾಗಿ ನೀನು ನೋಡಿದ್ದೀಯೆ.

05166027a ದ್ರೌಪದ್ಯಾಶ್ಚ ಪರಿಕ್ಲೇಶಂ ದ್ಯೂತೇ ಚ ಪರುಷಾ ಗಿರಃ।
05166027c ತೇ ಸಂಸ್ಮರಂತಃ ಸಂಗ್ರಾಮೇ ವಿಚರಿಷ್ಯಂತಿ ಕಾಲವತ್।।

ದ್ಯೂತದಲ್ಲಿ ದ್ರೌಪದಿಗಾದ ಪರಿಕ್ಲೇಶವನ್ನು ಮತ್ತು ಹೀಯಾಳಿಸಿದ ಮಾತುಗಳನ್ನು ಸ್ಮರಿಸಿಕೊಂಡು ಅವರು ಸಂಗ್ರಾಮದಲ್ಲಿ ಕಾಲರಂತೆ ಸಂಚರಿಸುತ್ತಾರೆ.

05166028a ಲೋಹಿತಾಕ್ಷೋ ಗುಡಾಕೇಶೋ ನಾರಾಯಣಸಹಾಯವಾನ್।
05166028c ಉಭಯೋಃ ಸೇನಯೋರ್ವೀರ ರಥೋ ನಾಸ್ತೀಹ ತಾದೃಶಃ।।

ವೀರ! ನಾರಾಯಣನ ಸಹಾಯವನ್ನು ಪಡೆದಿರುವ ಲೋಹಿತಾಕ್ಷ ಗುಡಾಕೇಶನ ಸದೃಶನಾಗಿರುವ ರಥನು ಎರಡೂ ಸೇನೆಗಳಲ್ಲಿ ಕಂಡುಬರುವುದಿಲ್ಲ.

05166029a ನ ಹಿ ದೇವೇಷು ವಾ ಪೂರ್ವಂ ದಾನವೇಷೂರಗೇಷು ವಾ।
05166029c ರಾಕ್ಷಸೇಷ್ವಥ ಯಕ್ಷೇಷು ನರೇಷು ಕುತ ಏವ ತು।।
05166030a ಭೂತೋಽಥ ವಾ ಭವಿಷ್ಯೋ ವಾ ರಥಃ ಕಶ್ಚಿನ್ಮಯಾ ಶ್ರುತಃ।
05166030c ಸಮಾಯುಕ್ತೋ ಮಹಾರಾಜ ಯಥಾ ಪಾರ್ಥಸ್ಯ ಧೀಮತಃ।।

ಮಹಾರಾಜ! ಹಿಂದೆ ದೇವತೆಗಳಲ್ಲಿಯಾಗಲೀ, ದಾನವರಲ್ಲಿಯಾಗಲೀ, ಉರಗರಲ್ಲಿಯಾಗಲೀ, ರಾಕ್ಷಸರಲ್ಲಿಯಾಗಲೀ, ಯಕ್ಷರಲ್ಲಿಯಾಗಲೀ, ಇನ್ನು ನರರಲ್ಲೇನು ಧೀಮಂತ ಪಾರ್ಥನಂತೆ ಸಮಾಯುಕ್ತನಾಗಿರುವ ರಥನನ್ನು ಭೂತದಲ್ಲಿಯಾಗಲೀ ಅಥವಾ ಭವಿಷ್ಯದಲ್ಲಿಯಾಗಲೀ ಇರುವರೆಂದು ನಾನು ಕೇಳಿಲ್ಲ.

05166031a ವಾಸುದೇವಶ್ಚ ಸಮ್ಯಂತಾ ಯೋದ್ಧಾ ಚೈವ ಧನಂಜಯಃ।
05166031c ಗಾಂಡೀವಂ ಚ ಧನುರ್ದಿವ್ಯಂ ತೇ ಚಾಶ್ವಾ ವಾತರಂಹಸಃ।।

ವಾಸುದೇವನು ಸಾರಥಿ. ಧನಂಜಯನು ಯೋದ್ಧ. ಗಾಂಡೀವವು ದಿವ್ಯ ಧನುಸ್ಸು. ಕುದುರೆಗಳು ಗಾಳಿಯಂತೆ ಹೋಗಬಲ್ಲವುಗಳು.

05166032a ಅಭೇದ್ಯಂ ಕವಚಂ ದಿವ್ಯಮಕ್ಷಯ್ಯೌ ಚ ಮಹೇಷುಧೀ।
05166032c ಅಸ್ತ್ರಗ್ರಾಮಶ್ಚ ಮಾಹೇಂದ್ರೋ ರೌದ್ರಃ ಕೌಬೇರ ಏವ ಚ।।
05166033a ಯಾಮ್ಯಶ್ಚ ವಾರುಣಶ್ಚೈವ ಗದಾಶ್ಚೋಗ್ರಪ್ರದರ್ಶನಾಃ।
05166033c ವಜ್ರಾದೀನಿ ಚ ಮುಖ್ಯಾನಿ ನಾನಾಪ್ರಹರಣಾನಿ ವೈ।।

ಅವನ ದಿವ್ಯ ಕವಚವು ಅಭೇದ್ಯವಾದುದು. ಎರಡು ಮಹಾ ಭತ್ತಳಿಕೆಗಳು ಅಕ್ಷಯವಾದವುಗಳು. ಅವನ ಅಸ್ತ್ರಗುಚ್ಛಗಳು ಮಹೇಂದ್ರನದು, ರುದ್ರನದು, ಕುಬೇರನದು, ಯಮನದು, ವರುಣನದು. ಅವನ ಗದೆಯು ನೋಡಲು ಉಗ್ರವಾದುದು. ಅವನಲ್ಲಿ ಮುಖ್ಯವಾಗಿ ವಜ್ರಾದಿ ನಾನಾ ಪ್ರಹರಣಗಳಿವೆ.

05166034a ದಾನವಾನಾಂ ಸಹಸ್ರಾಣಿ ಹಿರಣ್ಯಪುರವಾಸಿನಾಂ।
05166034c ಹತಾನ್ಯೇಕರಥೇನಾಜೌ ಕಸ್ತಸ್ಯ ಸದೃಶೋ ರಥಃ।।

ಒಂದೇ ರಥದಲ್ಲಿ ಸಹಸ್ರಾರು ಹಿರಣ್ಯಪುರವಾಸಿನಿ ದಾನವರನ್ನು ಸಂಹರಿಸಿದನು3. ಇವನ ಸದೃಶರಾದ ರಥರು ಯಾರಿದ್ದಾರೆ?

05166035a ಏಷ ಹನ್ಯಾದ್ಧಿ ಸಂರಂಭೀ ಬಲವಾನ್ಸತ್ಯವಿಕ್ರಮಃ।
05166035c ತವ ಸೇನಾಂ ಮಹಾಬಾಹುಃ ಸ್ವಾಂ ಚೈವ ಪರಿಪಾಲಯನ್।।

ಈ ಸಂರಂಭೀ, ಬಲವಾನ್, ಸತ್ಯವಿಕ್ರಮಿ ಮಹಾಬಾಹುವು ತನ್ನ ಸೇನೆಯನ್ನು ರಕ್ಷಿಸಿಕೊಂಡು ನಿನ್ನ ಸೇನೆಯನ್ನು ಹೊಡೆದುರುಳಿಸಬಲ್ಲನು.

05166036a ಅಹಂ ಚೈನಂ ಪ್ರತ್ಯುದಿಯಾಮಾಚಾರ್ಯೋ ವಾ ಧನಂಜಯಂ।
05166036c ನ ತೃತೀಯೋಽಸ್ತಿ ರಾಜೇಂದ್ರ ಸೇನಯೋರುಭಯೋರಪಿ।।

ಧನಂಜಯನನ್ನು ನಾನು ಅಥವಾ ಆಚಾರ್ಯನು ಎದುರಿಸಬಲ್ಲೆವು. ರಾಜೇಂದ್ರ! ಎರಡೂ ಸೇನೆಗಳಲ್ಲಿ ಮೂರನೆಯವರು ಯಾರೂ ಇಲ್ಲ.

05166036e ಯ ಏನಂ ಶರವರ್ಷಾಣಿ ವರ್ಷಂತಮುದಿಯಾದ್ರಥೀ।
05166037a ಜೀಮೂತ ಇವ ಘರ್ಮಾಂತೇ ಮಹಾವಾತಸಮೀರಿತಃ।।

ಆ ರಥಿಯು ಬಾಣಗಳ ಮಳೆಯನ್ನು ಸುರಿಸಿ ಬೇಸಿಗೆಯ ಕೊನೆಯಲ್ಲಿ ಮಹಾ ಭಿರುಗಾಳಿಯಿಂದ ಎಬ್ಬಿಸಲ್ಪಟ್ಟ ಮೋಡಗಳಂತೆ ಮೇಲೇರುತ್ತಾನೆ.

05166037c ಸಮಾಯುಕ್ತಸ್ತು ಕೌಂತೇಯೋ ವಾಸುದೇವಸಹಾಯವಾನ್।
05166037e ತರುಣಶ್ಚ ಕೃತೀ ಚೈವ ಜೀರ್ಣಾವಾವಾಮುಭಾವಪಿ।।

ಆದರೆ ವಾಸುದೇವನ ಸಹಾಯವನ್ನು ಪಡೆದ ಕೌಂತೇಯನು ತರುಣ ಮತ್ತು ಕೌಶಲಿ. ನಾವಿಬ್ಬರೂ ವಯಸ್ಸಾದವರು, ಜೀರ್ಣರಾದವರು.””

05166038 ಸಂಜಯ ಉವಾಚ।
05166038a ಏತಚ್ಚ್ರುತ್ವಾ ತು ಭೀಷ್ಮಸ್ಯ ರಾಜ್ಞಾಂ ದಧ್ವಂಸಿರೇ ತದಾ।
05166038c ಕಾಂಚನಾಂಗದಿನಃ ಪೀನಾ ಭುಜಾಶ್ಚಂದನರೂಷಿತಾಃ।।
05166039a ಮನೋಭಿಃ ಸಹ ಸಾವೇಗೈಃ ಸಂಸ್ಮೃತ್ಯ ಚ ಪುರಾತನಂ।
05166039c ಸಾಮರ್ಥ್ಯಂ ಪಾಂಡವೇಯಾನಾಂ ಯಥಾಪ್ರತ್ಯಕ್ಷದರ್ಶನಾತ್।।

ಸಂಜಯನು ಹೇಳಿದನು: “ಭೀಷ್ಮನ ಈ ಮಾತುಗಳನ್ನು ಕೇಳಿ, ಪಾಂಡವೇಯರ ಪುರಾತನ ಸಾಮರ್ಥ್ಯವನ್ನು ತಮ್ಮ ಕಣ್ಮುಂದೆಯೇ ನಡೆಯಿತೋ ಎನ್ನುವಂತೆ ನೆನಪಿಸಿಕೊಂಡು, ಆವೇಗ ಚಿಂತೆಗಳಿಂದ ಕೂಡಿ ರಾಜರ ಕಾಂಚನಾಂಗದಿ, ಚಂದನ ರೂಷಿತ, ತುಂಬಿದ ಬಾಹುಗಳು ಸಡಿಲವಾಗಿ ಜೋತುಬಿದ್ದವು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ರಥಾಥಿರಥಸಂಖ್ಯಾನ ಪರ್ವಣಿ ಪಾಂಡವರಥಾಥಿರಥಸಂಖ್ಯಾಯಾಂ ಷಡ್‌ಷಷ್ಟ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ರಥಾಥಿರಥಸಂಖ್ಯಾನ ಪರ್ವದಲ್ಲಿ ಪಾಂಡವರಥಾಥಿರಥಸಂಖ್ಯೆಯಲ್ಲಿ ನೂರಾಅರವತ್ತಾರನೆಯ ಅಧ್ಯಾಯವು.


  1. ಅಂಬೆಯ ಕಾರಣದಿಂದಾಗಿ ಭೀಷ್ಮ ಮತ್ತು ಪರಶುರಾಮರ ನಡುವೆ ನಡೆದ ಯುದ್ಧದ ಕುರಿತು ಮುಂದೆ ಇದೇ ಉದ್ಯೋಗ ಪರ್ವದ ಅಂಬೋಪಾಖ್ಯಾನ ಪರ್ವದಲ್ಲಿ ಭೀಷ್ಮನೇ ದುರ್ಯೋಧನನಿಗೆ ವರ್ಣಿಸುತ್ತಾನೆ. ↩︎

  2. ಈ ಪ್ರಕರಣದ ವರ್ಣನೆಯು ಹಿಂದೆ ಆದಿ ಪರ್ವದ ಅಧ್ಯಾಯ 96ರಲ್ಲಿ ಬಂದಿದೆ. ಪುನಃ ಇದರ ವರ್ಣನೆಯನ್ನು ಉದ್ಯೋಗ ಪರ್ವದ ಅಧ್ಯಾಯ 120ರಲ್ಲಿ ಭೀಷ್ಮನು ದುರ್ಯೋಧನನಿಗೆ ನೀಡುತ್ತಾನೆ. ↩︎

  3. ಅರ್ಜುನನು ಹಿರಣ್ಯಪುರಿಯನ್ನು ನಾಶಪಡಿಸಿದ ಪ್ರಕರಣದ ವರ್ಣನೆಯು ಹಿಂದೆ ಅರಣ್ಯಕ ಪರ್ವದ ಅಧ್ಯಾಯ 170ರಲ್ಲಿ ಬಂದಿದೆ. ↩︎