164

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ರಥಾಥಿರಥಸಂಖ್ಯ ಪರ್ವ

ಅಧ್ಯಾಯ 164

ಸಾರ

ಶಕುನಿಯು ಏಕರಥನೆಂದೂ, ಜೀವವನ್ನು ಅತಿಯಾಗಿ ಇಚ್ಛಿಸುವ ಅಶ್ವತ್ಥಾಮನು ರಥನೂ ಅಲ್ಲ ಅತಿರಥನೂ ಅಲ್ಲವೆಂದು ಭೀಷ್ಮನು ಹೇಳಿ ಅಶ್ವತ್ಥಾಮನ ಗುಣಗಳನ್ನು ವರ್ಣಿಸಿದುದು (1-21). ಪೌರವ, ಕರ್ಣಪುತ್ರ ವೃಷಷೇಣ, ಮಾಗಧ ಜಲಸಂಧ, ಬಾಹ್ಲೀಕ, ಸತ್ಯವಾನ, ರಾಕ್ಷಸ ಅಲಾಯುಧ, ಭಗದತ್ತ, ಇವರು ಮಹಾರಥರೆಂದು ಭೀಷ್ಮನು ವರ್ಣಿಸಿದುದು (22-38).

05164001 ಭೀಷ್ಮ ಉವಾಚ।
05164001a ಶಕುನಿರ್ಮಾತುಲಸ್ತೇಽಸೌ ರಥ ಏಕೋ ನರಾಧಿಪ।
05164001c ಪ್ರಸಜ್ಯ ಪಾಂಡವೈರ್ವೈರಂ ಯೋತ್ಸ್ಯತೇ ನಾತ್ರ ಸಂಶಯಃ।।

ಭೀಷ್ಮನು ಹೇಳಿದನು: “ನರಾಧಿಪ! ನಿನ್ನ ಸೋದರಮಾವ ಶಕುನಿಯು ಏಕರಥ. ಅವನು ಪಾಂಡವರೊಂದಿಗಿನ ವೈರವನ್ನು ಮುಂದಿಟ್ಟುಕೊಂಡು ಯುದ್ಧಮಾಡುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.

05164002a ಏತಸ್ಯ ಸೈನ್ಯಾ ದುರ್ಧರ್ಷಾಃ ಸಮರೇಽಪ್ರತಿಯಾಯಿನಃ।
05164002c ವಿಕೃತಾಯುಧಭೂಯಿಷ್ಠಾ ವಾಯುವೇಗಸಮಾ ಜವೇ।।

ಇವನ ಸೇನೆಗಳು ಗೆಲ್ಲಲಸಾಧ್ಯವಾದವುಗಳು. ಸಮರದಲ್ಲಿ ಹಿಂಜರಿಯದವುಗಳು. ವಿಕೃತಾಯುಧಗಳನ್ನು ಹೊಂದಿ ಅವು ವೇಗದಲ್ಲಿ ವಾಯುವೇಗಕ್ಕೆ ಸಮನಾದವುಗಳು.

05164003a ದ್ರೋಣಪುತ್ರೋ ಮಹೇಷ್ವಾಸಃ ಸರ್ವೇಷಾಮತಿ ಧನ್ವಿನಾಂ।
05164003c ಸಮರೇ ಚಿತ್ರಯೋಧೀ ಚ ದೃಢಾಸ್ತ್ರಶ್ಚ ಮಹಾರಥಃ।।

ದ್ರೋಣಪುತ್ರನು ಮಹೇಷ್ವಾಸ, ಸರ್ವ ಧನ್ವಿಗಳನ್ನು ಮೀರಿಸಿದವನು. ಸಮರದಲ್ಲಿ ಚಿತ್ರಯೋಧೀ. ದೃಢಾಸ್ತ್ರ ಮತ್ತು ಮಹಾರಥ.

05164004a ಏತಸ್ಯ ಹಿ ಮಹಾರಾಜ ಯಥಾ ಗಾಂಡೀವಧನ್ವನಃ।
05164004c ಶರಾಸನಾದ್ವಿನಿರ್ಮುಕ್ತಾಃ ಸಂಸಕ್ತಾ ಯಾಂತಿ ಸಾಯಕಾಃ।।

ಮಹಾರಾಜ! ಗಾಂಡೀವಧನುಸ್ಸನ್ನು ಹಿಡಿದವನಂತೆ ಇವನ ಧನುಸ್ಸಿನಿಂದ ಹೊರಟ ಬಾಣಗಳೂ ಕೂಡ ಒಂದಕ್ಕೊಂದು ತಾಗಿ ಒಂದೇ ಸಾಲಿನಲ್ಲಿ ಸಾಗುತ್ತವೆ.

05164005a ನೈಷ ಶಕ್ಯೋ ಮಯಾ ವೀರಃ ಸಂಖ್ಯಾತುಂ ರಥಸತ್ತಮಃ।
05164005c ನಿರ್ದಹೇದಪಿ ಲೋಕಾಂಸ್ತ್ರೀನಿಚ್ಚನ್ನೇಷ ಮಹಾಯಶಾಃ।।

ಈ ಮಹಾಯಶನು ಇಚ್ಛಿಸಿದರೆ ಮೂರು ಲೋಕಗಳನ್ನೂ ಸುಡಬಲ್ಲವನಾದರೂ ಈ ವೀರನನ್ನು ರಥಸತ್ತಮರ ಲೆಖ್ಕಕ್ಕೆ ಸೇರಿಸಲು ಬರುವುದಿಲ್ಲ.

05164006a ಕ್ರೋಧಸ್ತೇಜಶ್ಚ ತಪಸಾ ಸಂಭೃತೋಽಶ್ರಮವಾಸಿನಾ।
05164006c ದ್ರೋಣೇನಾನುಗೃಹೀತಶ್ಚ ದಿವ್ಯೈರಸ್ತ್ರೈರುದಾರಧೀಃ।।

ಆಶ್ರಮವಾಸಿಯಾಗಿದ್ದಾಗ ಇವನು ಸಾಕಷ್ಟು ಕ್ರೋಧ ಮತ್ತು ತೇಜಸ್ಸುಗಳನ್ನು ಬೆಳೆಸಿಕೊಂಡಿದ್ದಾನೆ. ದ್ರೋಣನಿಂದ ಅನುಗೃಹೀತನಾಗಿ ಈ ಉದಾರಧಿಯು ದಿವ್ಯಾಸ್ತ್ರಗಳನ್ನು ಪಡೆದಿದ್ದಾನೆ.

05164007a ದೋಷಸ್ತ್ವಸ್ಯ ಮಹಾನೇಕೋ ಯೇನೈಷ ಭರತರ್ಷಭ।
05164007c ನ ಮೇ ರಥೋ ನಾತಿರಥೋ ಮತಃ ಪಾರ್ಥಿವಸತ್ತಮ।।

ಭರತರ್ಷಭ! ಪಾರ್ಥಿವಸತ್ತಮ! ಇವನಲ್ಲಿ ಒಂದೇ ಒಂದು ಮಹಾ ದೋಷವಿರುವ ಕಾರಣದಿಂದ ಅವನು ರಥ ಅಥವಾ ಅತಿರಥನೆಂದು ನನಗನಿಸುವುದಿಲ್ಲ.

05164008a ಜೀವಿತಂ ಪ್ರಿಯಮತ್ಯರ್ಥಮಾಯುಷ್ಕಾಮಃ ಸದಾ ದ್ವಿಜಃ।
05164008c ನ ಹ್ಯಸ್ಯ ಸದೃಶಃ ಕಶ್ಚಿದುಭಯೋಃ ಸೇನಯೋರಪಿ।।

ಜೀವವು ಅವನಿಗೆ ಅತ್ಯಂತ ಪ್ರಿಯವಾದುದು. ಆ ದ್ವಿಜನು ಸದಾ ಬದುಕಿರಲು ಬಯಸುತ್ತಾನೆ1. ಎರಡೂ ಸೇನೆಗಳಲ್ಲಿ ಅವನ ಸದೃಶರಾದವರು ಯಾರೂ ಇಲ್ಲ.

05164009a ಹನ್ಯಾದೇಕರಥೇನೈವ ದೇವಾನಾಮಪಿ ವಾಹಿನೀಂ।
05164009c ವಪುಷ್ಮಾಂಸ್ತಲಘೋಷೇಣ ಸ್ಫೋಟಯೇದಪಿ ಪರ್ವತಾನ್।।

ಇವನೊಬ್ಬನೇ ರಥದಲ್ಲಿ ದೇವತೆಗಳ ಸೇನೆಯನ್ನೂ ಸದೆಬಡಿಯ ಬಲ್ಲನು. ಈ ಸುಂದರನು ಕೈ ಚಪ್ಪಾಳೆಯ ಘೋಷದಿಂದ ಪರ್ವತಗಳನ್ನೂ ಸ್ಪೋಟಿಸಬಲ್ಲನು.

05164010a ಅಸಂಖ್ಯೇಯಗುಣೋ ವೀರಃ ಪ್ರಹರ್ತಾ ದಾರುಣದ್ಯುತಿಃ।
05164010c ದಂಡಪಾಣಿರಿವಾಸಹ್ಯಃ ಕಾಲವತ್ಪ್ರಚರಿಷ್ಯತಿ।।

ಅಸಂಖ್ಯ ಗುಣಗಳುಳ್ಳ ಈ ದಾರುಣದ್ಯುತಿ, ಪ್ರಹರ್ತ ವೀರನು ದಂಡಪಾಣಿ ಕಾಲನಂತೆ ಸಹಿಸಲಸಾಧ್ಯನಾಗಿ ಸುತ್ತಾಡುತ್ತಾನೆ.

05164011a ಯುಗಾಂತಾಗ್ನಿಸಮಃ ಕ್ರೋಧೇ ಸಿಂಹಗ್ರೀವೋ ಮಹಾಮತಿಃ।
05164011c ಏಷ ಭಾರತ ಯುದ್ಧಸ್ಯ ಪೃಷ್ಟಂ ಸಂಶಮಯಿಷ್ಯತಿ।।

ಭಾರತ! ಕ್ರೋಧದಲ್ಲಿ ಯುಗಾಂತದ ಅಗ್ನಿಯ ಸಮನಾದ ಈ ಸಿಂಹಗ್ರೀವ ಮಹಾಮತಿಯು ಯುದ್ಧದ ಬೆನ್ನು ಮುರಿಯುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.

05164012a ಪಿತಾ ತ್ವಸ್ಯ ಮಹಾತೇಜಾ ವೃದ್ಧೋಽಪಿ ಯುವಭಿರ್ವರಃ।
05164012c ರಣೇ ಕರ್ಮ ಮಹತ್ಕರ್ತಾ ತತ್ರ ಮೇ ನಾಸ್ತಿ ಸಂಶಯಃ।।

ಇವನ ತಂದೆ, ವೃದ್ಧನಾದರೂ ಯುವಕರಿಗಿಂತ ಶ್ರೇಷ್ಠನಾಗಿರುವ ಮಹಾತೇಜಸ್ವಿಯು ರಣದಲ್ಲಿ ಮಹಾಕಾರ್ಯಗಳನ್ನು ಎಸಗುತ್ತಾನೆ ಎನ್ನುವುದರಲ್ಲಿ ನನಗೆ ಸಂಶಯವಿಲ್ಲ.

05164013a ಅಸ್ತ್ರವೇಗಾನಿಲೋದ್ಧೂತಃ ಸೇನಾಕಕ್ಷೇಂಧನೋತ್ಥಿತಃ।
05164013c ಪಾಂಡುಪುತ್ರಸ್ಯ ಸೈನ್ಯಾನಿ ಪ್ರಧಕ್ಷ್ಯತಿ ಜಯೇ ಧೃತಃ।।

ಅಸ್ತ್ರವೇಗಗಳ ಗಾಳಿಯಿಂದ ಉರಿಸಲ್ಪಟ್ಟು, ಒಣ ಕಟ್ಟಿಗೆಯಂತಿರುವ ಸೇನೆಯಿಂದ ಮೇಲೆದ್ದ ಬೆಂಕಿಯಿಂದ ಜಯದಲ್ಲಿ ಧೃತನಾಗಿರುವ ಇವನು ಪಾಂಡುಪುತ್ರರ ಸೇನೆಯನ್ನು ಸುಟ್ಟುಹಾಕುತ್ತಾನೆ.

05164014a ರಥಯೂಥಪಯೂಥಾನಾಂ ಯೂಥಪಃ ಸ ನರರ್ಷಭಃ।
05164014c ಭಾರದ್ವಾಜಾತ್ಮಜಃ ಕರ್ತಾ ಕರ್ಮ ತೀವ್ರಂ ಹಿತಾಯ ವಃ।।

ರಥಯೂಥಪಯೂಥರ ಯೂಥಪನಾಗಿರುವ ಆ ನರಷರ್ಷಭ ಭರದ್ವಾಜಾತ್ಮಜನು ನಿನ್ನ ಹಿತದಲ್ಲಿ ತೀವ್ರ ಕರ್ಮಗಳನ್ನು ಮಾಡುತ್ತಾನೆ.

05164015a ಸರ್ವಮೂರ್ಧಾಭಿಷಿಕ್ತಾನಾಮಾಚಾರ್ಯಃ ಸ್ಥವಿರೋ ಗುರುಃ।
05164015c ಗಚ್ಚೇದಂತಂ ಸೃಂಜಯಾನಾಂ ಪ್ರಿಯಸ್ತ್ವಸ್ಯ ಧನಂಜಯಃ।।

ಮೂರ್ಧಾಭಿಷಿಕ್ತರಾದ ಎಲ್ಲರ ಆಚಾರ್ಯ, ಈ ವೃದ್ಧ ಗುರುವು ಸೃಂಜಯರನ್ನು ಕೊನೆಗೊಳಿಸುತ್ತಾನೆ. ಆದರೆ ಧನಂಜಯನು ಇವನಿಗೆ ಪ್ರಿಯನಾದವನು.

05164016a ನೈಷ ಜಾತು ಮಹೇಷ್ವಾಸಃ ಪಾರ್ಥಮಕ್ಲಿಷ್ಟಕಾರಿಣಂ।
05164016c ಹನ್ಯಾದಾಚಾರ್ಯಕಂ ದೀಪ್ತಂ ಸಂಸ್ಮೃತ್ಯ ಗುಣನಿರ್ಜಿತಂ।।

ತನ್ನ ಆಚಾರ್ಯತ್ವದ ಗುಣಗಳಿಂದ ಗೆದ್ದ ಈ ದೀಪವನ್ನು ನೆನಪಿನಲ್ಲಿಟ್ಟುಕೊಂಡು ಈ ಮಹೇಷ್ವಾಸನು ಅಕ್ಲಿಷ್ಟಕಾರಿ ಪಾರ್ಥನನ್ನು ಕೊಲ್ಲುವುದಿಲ್ಲ.

05164017a ಶ್ಲಾಘತ್ಯೇಷ ಸದಾ ವೀರಃ ಪಾರ್ಥಸ್ಯ ಗುಣವಿಸ್ತರೈಃ।
05164017c ಪುತ್ರಾದಭ್ಯಧಿಕಂ ಚೈವ ಭಾರದ್ವಾಜೋಽನುಪಶ್ಯತಿ।।

ಭಾರದ್ವಾಜನು ಯಾವಾಗಲೂ ವೀರ ಪಾರ್ಥನ ಗುಣಗಳನ್ನು ವಿಸ್ತರಿಸಿ ಹೊಗಳುತ್ತಾನೆ. ತನ್ನ ಮಗನಿಗಿಂತಲೂ ಹೆಚ್ಚಾಗಿ ಇವನನ್ನು ಕಾಣುತ್ತಾನೆ.

05164018a ಹನ್ಯಾದೇಕರಥೇನೈವ ದೇವಗಂಧರ್ವದಾನವಾನ್।
05164018c ಏಕೀಭೂತಾನಪಿ ರಣೇ ದಿವ್ಯೈರಸ್ತ್ರೈಃ ಪ್ರತಾಪವಾನ್।।

ಈ ಪ್ರತಾಪವಂತನು ಒಂದೇ ರಥದಲ್ಲಿ ದಿವ್ಯಾಸ್ತ್ರಗಳಿಂದ ರಣದಲ್ಲಿ ಒಂದಾಗಿ ಬಂದರೂ ದೇವ-ಗಂಧರ್ವ-ದಾನವರನ್ನು ಸಂಹರಿಸಬಲ್ಲನು.

05164019a ಪೌರವೋ ರಾಜಶಾರ್ದೂಲಸ್ತವ ರಾಜನ್ಮಹಾರಥಃ।
05164019c ಮತೋ ಮಮ ರಥೋ ವೀರ ಪರವೀರರಥಾರುಜಃ।।

ರಾಜನ್! ವೀರ! ರಾಜಶಾರ್ದೂಲ ನಿನ್ನ ಮಹಾರಥಿ ಪೌರವನು, ಪರವೀರರ ರಥಗಳನ್ನು ಸದೆಬಡಿಯಬಲ್ಲ ರಥನೆಂದು ನನ್ನ ಮತ.

05164020a ಸ್ವೇನ ಸೈನ್ಯೇನ ಸಹಿತಃ ಪ್ರತಪಂ ಶತ್ರುವಾಹಿನೀಂ।
05164020c ಪ್ರಧಕ್ಷ್ಯತಿ ಸ ಪಾಂಚಾಲಾನ್ಕಕ್ಷಂ ಕೃಷ್ಣಗತಿರ್ಯಥಾ।।

ತನ್ನ ಸೇನೆಯೊಂದಿಗೆ ಶತ್ರುವಾಹಿನಿಯನ್ನು ಸುಡುವ ಅವನು ಒಣಹುಲ್ಲನ್ನು ಬೆಂಕಿಯು ಹತ್ತಿ ಸುಡುವಂತೆ ಪಾಂಚಾಲರನ್ನು ಸುಟ್ಟುಹಾಕುತ್ತಾನೆ.

05164021a ಸತ್ಯವ್ರತೋ ರಥವರೋ ರಾಜಪುತ್ರೋ ಮಹಾರಥಃ।
05164021c ತವ ರಾಜನ್ ರಿಪುಬಲೇ ಕಾಲವತ್ಪ್ರಚರಿಷ್ಯತಿ।।

ರಾಜನ್! ಆ ಸತ್ಯವ್ರತ, ರಥವರ, ರಾಜಪುತ್ರ, ಮಹಾರಥನು ನಿನ್ನ ಶತ್ರುಬಲದಲ್ಲಿ ಕಾಲನಂತೆ ಸಂಚರಿಸುತ್ತಾನೆ.

05164022a ಏತಸ್ಯ ಯೋಧಾ ರಾಜೇಂದ್ರ ವಿಚಿತ್ರಕವಚಾಯುಧಾಃ।
05164022c ವಿಚರಿಷ್ಯಂತಿ ಸಂಗ್ರಾಮೇ ನಿಘ್ನಂತಃ ಶಾತ್ರವಾಂಸ್ತವ।।

ರಾಜೇಂದ್ರ! ಈ ವಿಚಿತ್ರಕವಚಾಯುಧ ಯೋಧನು ಸಂಗ್ರಾಮದಲ್ಲಿ ನಿನ್ನ ಶತ್ರುಗಳನ್ನು ಸಂಹರಿಸುತ್ತಾ ತಿರುಗಾಡುತ್ತಾನೆ.

05164023a ವೃಷಸೇನೋ ರಥಾಗ್ರ್ಯಸ್ತೇ ಕರ್ಣಪುತ್ರೋ ಮಹಾರಥಃ।
05164023c ಪ್ರಧಕ್ಷ್ಯತಿ ರಿಪೂಣಾಂ ತೇ ಬಲಾನಿ ಬಲಿನಾಂ ವರಃ।।

ನಿನ್ನ ರಥದ ಮುಂದಿರುವ ಕರ್ಣಪುತ್ರ ಮಹಾರಥಿ ಬಲಶಾಲಿಗಳಲ್ಲಿ ಶ್ರೇಷ್ಠ ವೃಷಸೇನನು ನಿನ್ನ ರಿಪುಗಳ ಬಲವನ್ನು ಸುಟ್ಟುಹಾಕುತ್ತಾನೆ.

05164024a ಜಲಸಂಧೋ ಮಹಾತೇಜಾ ರಾಜನ್ರಥವರಸ್ತವ।
05164024c ತ್ಯಕ್ಷ್ಯತೇ ಸಮರೇ ಪ್ರಾಣಾನ್ಮಾಗಧಃ ಪರವೀರಹಾ।।

ರಾಜನ್! ನಿನ್ನ ರಥವರ್ಯ ಮಹಾತೇಜಸ್ವಿ, ಪರವೀರಹ, ಮಾಗಧ ಜಲಸಂಧನು ಸಮರದಲ್ಲಿ ಪ್ರಾಣಗಳನ್ನು ತೆಗೆದುಕೊಳ್ಳುತ್ತಾನೆ.

05164025a ಏಷ ಯೋತ್ಸ್ಯತಿ ಸಂಗ್ರಾಮೇ ಗಜಸ್ಕಂಧವಿಶಾರದಃ।
05164025c ರಥೇನ ವಾ ಮಹಾಬಾಹುಃ ಕ್ಷಪಯಂ ಶತ್ರುವಾಹಿನೀಂ।।

ಗಜಸ್ಕಂಧವಿಶಾರದನಾದ ಈ ಮಹಾಬಾಹುವು ಸಂಗ್ರಾಮದಲ್ಲಿ ರಥದ ಮೇಲೆ ಹೋರಾಡಿ ಶತ್ರುವಾಹಿನಿಯನ್ನು ಕಡಿಮೆಮಾಡುತ್ತಾನೆ.

05164026a ರಥ ಏಷ ಮಹಾರಾಜ ಮತೋ ಮಮ ನರರ್ಷಭಃ।
05164026c ತ್ವದರ್ಥೇ ತ್ಯಕ್ಷ್ಯತಿ ಪ್ರಾಣಾನ್ಸಹ ಸೈನ್ಯೋ ಮಹಾರಣೇ।।

ಮಹಾರಾಜ! ಈ ನರರ್ಷಭನು ರಥನೆಂದು ನನ್ನ ಅಭಿಪ್ರಾಯ. ಇವನು ನಿನಗೋಸ್ಕರ ಮಹಾರಣದಲ್ಲಿ ಪ್ರಾಣಗಳನ್ನೂ ಸಹ ತೊರೆಯುತ್ತಾನೆ.

05164027a ಏಷ ವಿಕ್ರಾಂತಯೋಧೀ ಚ ಚಿತ್ರಯೋಧೀ ಚ ಸಂಗರೇ।
05164027c ವೀತಭೀಶ್ಚಾಪಿ ತೇ ರಾಜನ್ ಶಾತ್ರವೈಃ ಸಹ ಯೋತ್ಸ್ಯತೇ।।

ರಾಜನ್! ಸಂಗರದಲ್ಲಿ ಇವನು ವಿಕ್ರಾಂತಯೋಧೀ ಮತ್ತು ಚಿತ್ರಯೋಧೀ. ಇವನು ಭಯವನ್ನು ತೊರೆದು ನಿನ್ನ ಶತ್ರುಗಳೊಂದಿಗೆ ಹೋರಾಡುತ್ತಾನೆ.

05164028a ಬಾಹ್ಲೀಕೋಽತಿರಥಶ್ಚೈವ ಸಮರೇ ಚಾನಿವರ್ತಿತಾ।
05164028c ಮಮ ರಾಜನ್ಮತೋ ಯುದ್ಧೇ ಶೂರೋ ವೈವಸ್ವತೋಪಮಃ।।

ಸಮರದಲ್ಲಿ ಹಿಂದೆ ಸರಿಯದ ಬಾಹ್ಲೀಕನೂ ಅತಿರಥನೇ. ರಾಜನ್! ನನ್ನ ಅಭಿಪ್ರಾಯದಲ್ಲಿ ಆ ಶೂರನು ಯುದ್ಧದಲ್ಲಿ ವೈವಸ್ವತನಂತೆ.

05164029a ನ ಹ್ಯೇಷ ಸಮರಂ ಪ್ರಾಪ್ಯ ನಿವರ್ತೇತ ಕಥಂ ಚನ।
05164029c ಯಥಾ ಸತತಗೋ ರಾಜನ್ನಾಭಿಹತ್ಯ ಪರಾನ್ರಣೇ।।

ರಾಜನ್! ಇವನು ಸಮರವನ್ನು ಸೇರಿ, ಶತ್ರುಗಳನ್ನು ರಣದಲ್ಲಿ ಕೊಲ್ಲದೇ ಸತತವಾಗಿ ಎಂದೂ ಹಿಂದಿರುಗುವುದಿಲ್ಲ.

05164030a ಸೇನಾಪತಿರ್ಮಹಾರಾಜ ಸತ್ಯವಾಂಸ್ತೇ ಮಹಾರಥಃ।
05164030c ರಣೇಷ್ವದ್ಭುತಕರ್ಮಾ ಚ ರಥಃ ಪರರಥಾರುಜಃ।।

ಮಹಾರಾಜ! ನಿನ್ನ ಸೇನಾಪತಿ ಸತ್ಯವಾನನು ಮಹಾರಥ. ರಣದಲ್ಲಿ ಅದ್ಭುತಕರ್ಮಗಳನ್ನು ಮಾಡುತ್ತಾನೆ. ಆ ರಥನು ಪರರ ರಥವನ್ನು ಪುಡಿಮಾಡುತ್ತಾನೆ.

05164031a ಏತಸ್ಯ ಸಮರಂ ದೃಷ್ಟ್ವಾ ನ ವ್ಯಥಾಸ್ತಿ ಕಥಂ ಚನ।
05164031c ಉತ್ಸ್ಮಯನ್ನಭ್ಯುಪೈತ್ಯೇಷ ಪರಾನ್ರಥಪಥೇ ಸ್ಥಿತಾನ್।।

ಇವನು ಸಮರವನ್ನು ನೋಡಿ ಎಂದೂ ವ್ಯಥೆಪಡುವುದಿಲ್ಲ. ತನ್ನ ರಥದ ಮಾರ್ಗದಲ್ಲಿ ನಿಲ್ಲುವ ಶತ್ರುಗಳನ್ನು ಎದುರಿಸಿ ಅವರ ಮೇಲೆ ಬೀಳುತ್ತಾನೆ.

05164032a ಏಷ ಚಾರಿಷು ವಿಕ್ರಾಂತಃ ಕರ್ಮ ಸತ್ಪುರುಷೋಚಿತಂ।
05164032c ಕರ್ತಾ ವಿಮರ್ದೇ ಸುಮಹತ್ತ್ವದರ್ಥೇ ಪುರುಷೋತ್ತಮಃ।।

ಸತ್ಪುರುಷರಿಗೆ ಉಚಿತವಾದ ವಿಕ್ರಾಂತ ಕರ್ಮಗಳನ್ನು ಮಾಡಿ ಈ ಪುರುಷೋತ್ತಮನು ನಿನಗಾಗಿ ಸುಮಹತ್ತರ ಯುದ್ಧವನ್ನು ಮಾಡುತ್ತಾನೆ.

05164033a ಅಲಾಯುಧೋ ರಾಕ್ಷಸೇಂದ್ರಃ ಕ್ರೂರಕರ್ಮಾ ಮಹಾಬಲಃ।
05164033c ಹನಿಷ್ಯತಿ ಪರಾನ್ರಾಜನ್ಪೂರ್ವವೈರಮನುಸ್ಮರನ್।।

ರಾಜನ್! ರಾಕ್ಷಸೇಂದ್ರ, ಕ್ರೂರಕರ್ಮಿ, ಮಹಾಬಲಿ ಅಲಾಯುಧನು ಹಿಂದಿನ ವೈರವನ್ನು ನೆನಪಿಸಿಕೊಂಡು ಶತ್ರುಗಳನ್ನು ಸಂಹರಿಸುತ್ತಾನೆ.

05164034a ಏಷ ರಾಕ್ಷಸಸೈನ್ಯಾನಾಂ ಸರ್ವೇಷಾಂ ರಥಸತ್ತಮಃ।
05164034c ಮಾಯಾವೀ ದೃಢವೈರಶ್ಚ ಸಮರೇ ವಿಚರಿಷ್ಯತಿ।।

ಇವನು ರಾಕ್ಷಸ ಸೇನೆಯ ಎಲ್ಲರಲ್ಲಿ ರಥಸತ್ತಮನು. ಈ ಮಾಯಾವಿ ದೃಢವೈರಿಯು ಸಮರದಲ್ಲಿ ಸಂಚರಿಸುತ್ತಾನೆ.

05164035a ಪ್ರಾಗ್ಜ್ಯೋತಿಷಾಧಿಪೋ ವೀರೋ ಭಗದತ್ತಃ ಪ್ರತಾಪವಾನ್।
05164035c ಗಜಾಂಕುಶಧರಶ್ರೇಷ್ಠೋ ರಥೇ ಚೈವ ವಿಶಾರದಃ।।

ಪ್ರಾಗ್ಜೋತಿಷಾಧಿಪ ವೀರ ಭಗದತ್ತನು ಪ್ರತಾಪವಂತನು. ಈ ಗಜಾಂಕುಶಧರಶ್ರೇಷ್ಠನು ರಥದಲ್ಲಿಯೂ ವಿಶಾರದನು.

05164036a ಏತೇನ ಯುದ್ಧಮಭವತ್ಪುರಾ ಗಾಂಡೀವಧನ್ವನಃ।
05164036c ದಿವಸಾನ್ಸುಬಹೂನ್ರಾಜನ್ನುಭಯೋರ್ಜಯಗೃದ್ಧಿನೋಃ।।

ರಾಜನ್! ಹಿಂದೆ ಇವನೊಂದಿಗೆ ಗಾಂಡೀವಧನ್ವಿಯು ಯುದ್ಧ ಮಾಡಿದ್ದನು. ವಿಜಯವನ್ನು ಬಯಸಿದ್ದ ಇಬ್ಬರ ನಡುವೆ ಬಹುದಿನಗಳ ಯುದ್ಧ ನಡೆದಿತ್ತು2.

05164037a ತತಃ ಸಖಾಯಂ ಗಾಂಧಾರೇ ಮಾನಯನ್ಪಾಕಶಾಸನಂ।
05164037c ಅಕರೋತ್ಸಂವಿದಂ ತೇನ ಪಾಂಡವೇನ ಮಹಾತ್ಮನಾ।।

ಆಗ ಗಾಂಧಾರೇ! ಪಾಕಶಾಸನನನ್ನು ಸಖನೆಂದು ಮನ್ನಿಸಿ ಮಹಾತ್ಮ ಪಾಂಡವನೊಂದಿಗೆ ಅವನು ಸಂಧಿ ಮಾಡಿಕೊಂಡನು.

05164038a ಏಷ ಯೋತ್ಸ್ಯತಿ ಸಂಗ್ರಾಮೇ ಗಜಸ್ಕಂಧವಿಶಾರದಃ।
05164038c ಐರಾವತಗತೋ ರಾಜಾ ದೇವಾನಾಮಿವ ವಾಸವಃ।।

ಈ ಗಜಸ್ಕಂಧ ವಿಶಾರದನು ಐರಾವತವನ್ನೇರಿ ದೇವತೆಗಳ ರಾಜ ವಾಸವನಂತೆ ಸಂಗ್ರಾಮದಲ್ಲಿ ಯುದ್ಧ ಮಾಡುತ್ತಾನೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ರಥಾಥಿರಥಸಂಖ್ಯಾನ ಪರ್ವಣಿ ಚತುಃಷಷ್ಟ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ರಥಾಥಿರಥಸಂಖ್ಯಾನ ಪರ್ವದಲ್ಲಿ ನೂರಾಅರವತ್ನಾಲ್ಕನೆಯ ಅಧ್ಯಾಯವು.


  1. ಅಶ್ವತ್ಥಾಮನಿಗೆ ಚಿರಂಜೀವಿಯಾಗಿರುವ ವರ/ಶಾಪವನ್ನು ಮುಂದೆ ಯುದ್ಧದ ಕೊನೆಯಲ್ಲಿ ಕೃಷ್ಣನು ಕೊಡುವವನಿದ್ದಾನೆ (ಸೌಪ್ತಿಕ ಪರ್ವ, ಅಧ್ಯಾಯ 16). ↩︎

  2. ದಿಗ್ವಿಜಯದ ಸಮಯದಲ್ಲಿ ಅರ್ಜುನನು ಭಗದತ್ತನೊಡನೆ ಎಂಟು ದಿನಗಳ ಯುದ್ಧವನ್ನು ಮಾಡಿದ್ದನು (ಸಭಾಪರ್ವ, ಅಧ್ಯಾಯ 23). ↩︎