ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ರಥಾಥಿರಥಸಂಖ್ಯ ಪರ್ವ
ಅಧ್ಯಾಯ 163
ಸಾರ
ಭೀಷ್ಮನು ದುರ್ಯೋಧನನ ಸೇನೆಯಲ್ಲಿರುವ ಕಾಂಬೋಜದ ಸುದಕ್ಷಿಣ, ಮಾಹಿಷ್ಮತಿಯ ನೀಲ, ಅವಂತಿಯ ವಿಂದಾನುವಿಂದರು, ಐವರು ತ್ರಿಗರ್ತ ಸಹೋದರರು, ದುರ್ಯೋಧನನ ಮಗ ಲಕ್ಷ್ಮಣ, ದುಃಶಾಸನನ ಮಗ, ರಾಜ ದಂಡಧಾರ, ಕೋಸಲದ ಬೃಹದ್ಬಲ, ಮತ್ತು ಕೃಪರು ರಥರೆಂದು ಹೇಳುವುದು (1-22).
05163001 ಭೀಷ್ಮ ಉವಾಚ।
05163001a ಸುದಕ್ಷಿಣಸ್ತು ಕಾಂಬೋಜೋ ರಥ ಏಕಗುಣೋ ಮತಃ।
05163001c ತವಾರ್ಥಸಿದ್ಧಿಮಾಕಾಂಕ್ಷನ್ಯೋತ್ಸ್ಯತೇ ಸಮರೇ ಪರೈಃ।।
ಭೀಷ್ಮನು ಹೇಳಿದನು: “ನನ್ನ ಅಭಿಪ್ರಾಯದಲ್ಲಿ ಕಾಂಬೋಜ ಸುದಕ್ಷಿಣನು ಒಬ್ಬ ರಥನಿಗೆ ಸಮ. ನಿನ್ನ ಉದ್ದೇಶ ಸಿದ್ಧಿಯನ್ನು ಬಯಸಿ ಅವನು ಸಮರದಲ್ಲಿ ಶತ್ರುಗಳೊಡನೆ ಹೋರಾಡುತ್ತಾನೆ.
05163002a ಏತಸ್ಯ ರಥಸಿಂಹಸ್ಯ ತವಾರ್ಥೇ ರಾಜಸತ್ತಮ।
05163002c ಪರಾಕ್ರಮಂ ಯಥೇಂದ್ರಸ್ಯ ದ್ರಕ್ಷ್ಯಂತಿ ಕುರವೋ ಯುಧಿ।।
ರಾಜಸತ್ತಮ! ಯುದ್ಧದಲ್ಲಿ ನಿನಗಾಗಿ ಹೋರಾಡುವ ಇಂದ್ರನಂತಿರುವ ಈ ರಥಸಿಂಹನ ಪರಾಕ್ರಮವನ್ನು ಕುರುಗಳು ನೋಡುತ್ತಾರೆ.
05163003a ಏತಸ್ಯ ರಥವಂಶೋ ಹಿ ತಿಗ್ಮವೇಗಪ್ರಹಾರಿಣಾಂ।
05163003c ಕಾಂಬೋಜಾನಾಂ ಮಹಾರಾಜ ಶಲಭಾನಾಮಿವಾಯತಿಃ।।
ಮಹಾರಾಜ! ತಿಗ್ಮವೇಗಪ್ರಹಾರಿಗಳಾದ ಕಾಂಬೋಜರ ರಥಸೇನೆಯು ಕೀಟಗಳ ಗುಂಪಿನಂತೆ ಬಂದು ಮುತ್ತುತ್ತವೆ.
05163004a ನೀಲೋ ಮಾಹಿಷ್ಮತೀವಾಸೀ ನೀಲವರ್ಮಧರಸ್ತವ।
05163004c ರಥವಂಶೇನ ಶತ್ರೂಣಾಂ ಕದನಂ ವೈ ಕರಿಷ್ಯತಿ।।
ಮಾಹಿಷ್ಮತೀವಾಸಿ, ನೀಲಿ ಕವಚವನ್ನು ತೊಡುವ ನೀಲನು ನಿನ್ನ ರಥರಲ್ಲಿ ಒಬ್ಬ. ಅವನು ಸೇನೆಯೊಂದಿಗೆ ಶತ್ರುಗಳೊಡನೆ ಕಾದಾಡುತ್ತಾನೆ.
05163005a ಕೃತವೈರಃ ಪುರಾ ಚೈವ ಸಹದೇವೇನ ಪಾರ್ಥಿವಃ।
05163005c ಯೋತ್ಸ್ಯತೇ ಸತತಂ ರಾಜಂಸ್ತವಾರ್ಥೇ ಕುರುಸತ್ತಮ।।
ರಾಜನ್! ಕುರುಸತ್ತಮ! ಹಿಂದೆ ಸಹದೇವನೊಂದಿಗೆ ವೈರವನ್ನು ಕಟ್ಟಿಕೊಂಡಿದ್ದ ಆ ಪಾರ್ಥಿವನು ನಿನಗಾಗಿ ಸತತವೂ ಹೋರಾಡುತ್ತಾನೆ.
05163006a ವಿಂದಾನುವಿಂದಾವಾವಂತ್ಯೌ ಸಮೇತೌ ರಥಸತ್ತಮೌ।
05163006c ಕೃತಿನೌ ಸಮರೇ ತಾತ ದೃಢವೀರ್ಯಪರಾಕ್ರಮೌ।।
ಅವಂತಿಯ ವಿಂದಾನುವಿಂದರು ಇಬ್ಬರೂ ರಥಸತ್ತಮರು. ಮಗೂ! ಸಮರದಲ್ಲಿ ಇಬ್ಬರೂ ಪಳಗಿದವರು ಮತ್ತು ದೃಢವೀರ್ಯಪರಾಕ್ರಮಿಗಳು.
05163007a ಏತೌ ತೌ ಪುರುಷವ್ಯಾಘ್ರೌ ರಿಪುಸೈನ್ಯಂ ಪ್ರಧಕ್ಷ್ಯತಃ।
05163007c ಗದಾಪ್ರಾಸಾಸಿನಾರಾಚೈಸ್ತೋಮರೈಶ್ಚ ಭುಜಚ್ಯುತೈಃ।।
ಇವರಿಬ್ಬರು ಪುರುಷವ್ಯಾಘ್ರರೂ ನಿನ್ನ ರಿಪುಸೇನೆಯನ್ನು ಭುಜಗಳಿಂದ ಪ್ರಯೋಗಿಸುವ ಗದೆ, ಪ್ರಾಸ, ಖಡ್ಗ, ನಾರಾಚ, ತೋಮರಗಳಿಂದ ಸುಟ್ಟು ಬಿಡುತ್ತಾರೆ.
05163008a ಯುದ್ಧಾಭಿಕಾಮೌ ಸಮರೇ ಕ್ರೀಡಂತಾವಿವ ಯೂಥಪೌ।
05163008c ಯೂಥಮಧ್ಯೇ ಮಹಾರಾಜ ವಿಚರಂತೌ ಕೃತಾಂತವತ್।।
ಮಹಾರಾಜ! ಹಿಂಡಿನಲ್ಲಿ ಆಡುವ ಆನೆಗಳಂತೆ ಯುದ್ಧೋತ್ಸುಕರಾಗಿ ಸೇನೆಯಮಧ್ಯದಲ್ಲಿ ಇವರಿಬ್ಬರೂ ಯಮನಂತೆ ಸಂಚರಿಸುತ್ತಾರೆ.
05163009a ತ್ರಿಗರ್ತಾ ಭ್ರಾತರಃ ಪಂಚ ರಥೋದಾರಾ ಮತಾ ಮಮ।
05163009c ಕೃತವೈರಾಶ್ಚ ಪಾರ್ಥೇನ ವಿರಾಟನಗರೇ ತದಾ।।
ನನ್ನ ಅಭಿಪ್ರಾಯದಲ್ಲಿ ರಥರೆಂದೆನಿಸಿಕೊಂಡ ಐವರು ತ್ರಿಗರ್ತ ಸಹೋದರರು ಅಂದು ವಿರಾಟನಗರದಲ್ಲಿ ಪಾರ್ಥನೊಂದಿಗೆ ವೈರ ಕಟ್ಟಿಕೊಂಡರು.
05163010a ಮಕರಾ ಇವ ರಾಜೇಂದ್ರ ಸಮುದ್ಧತತರಂಗಿಣೀಂ।
05163010c ಗಂಗಾಂ ವಿಕ್ಷೋಭಯಿಷ್ಯಂತಿ ಪಾರ್ಥಾನಾಂ ಯುಧಿ ವಾಹಿನೀಂ।।
ರಾಜೇಂದ್ರ! ಗಂಗೆಯಲ್ಲಿ ಅಲೆಗಳನ್ನು ಅನುಸರಿಸಿ ಹೋಗುವ ಮೊಸಳೆಗಳಂತೆ ಅವರು ಯುದ್ಧದಲ್ಲಿ ಪಾರ್ಥರ ಸೇನೆಯನ್ನು ವಿಕ್ಷೋಭಗೊಳಿಸುತ್ತಾರೆ.
05163011a ತೇ ರಥಾಃ ಪಂಚ ರಾಜೇಂದ್ರ ಯೇಷಾಂ ಸತ್ಯರಥೋ ಮುಖಂ।
05163011c ಏತೇ ಯೋತ್ಸ್ಯಂತಿ ಸಮರೇ ಸಂಸ್ಮರಂತಃ ಪುರಾ ಕೃತಂ।।
05163012a ವ್ಯಲೀಕಂ ಪಾಂಡವೇಯೇನ ಭೀಮಸೇನಾನುಜೇನ ಹ।
05163012c ದಿಶೋ ವಿಜಯತಾ ರಾಜನ್ ಶ್ವೇತವಾಹೇನ ಭಾರತ।।
ರಾಜೇಂದ್ರ! ಭಾರತ! ರಾಜನ್! ಸತ್ಯರಥನ ನಾಯಕತ್ವದಲ್ಲಿರುವ ಈ ಐವರು ರಥರು ಹಿಂದೆ ದಿಕ್ಕುಗಳನ್ನು ಗೆಲ್ಲುವ ಸಮಯದಲ್ಲಿ ಭೀಮಸೇನಾನುಜ ಶ್ವೇತವಾಹನ ಪಾಂಡವನು ಅವರಿಗೆ ಮಾಡಿದುದನ್ನು ಸ್ಮರಿಸಿಕೊಂಡು ಸಮರದಲ್ಲಿ ಯುದ್ಧಮಾಡುತ್ತಾರೆ.
05163013a ತೇ ಹನಿಷ್ಯಂತಿ ಪಾರ್ಥಾನಾಂ ಸಮಾಸಾದ್ಯ ಮಹಾರಥಾನ್।
05163013c ವರಾನ್ವರಾನ್ಮಹೇಷ್ವಾಸಾನ್ ಕ್ಷತ್ರಿಯಾಣಾಂ ಧುರಂಧರಾಃ।।
ಕ್ಷತ್ರಿಯರ ಧುರಂಧರರಾದ ಅವರು ಪಾರ್ಥರ ಮಹಾರಥಿಗಳನ್ನು ಎದುರಿಸಿ ಅವರಲ್ಲಿರುವ ಶೇಷ್ಠ ಶ್ರೇಷ್ಠರಾದ ಮಹೇಷ್ವಾಸರನ್ನು ಕೊಲ್ಲುತ್ತಾರೆ.
05163014a ಲಕ್ಷ್ಮಣಸ್ತವ ಪುತ್ರಸ್ತು ತಥಾ ದುಃಶಾಸನಸ್ಯ ಚ।
05163014c ಉಭೌ ತೌ ಪುರುಷವ್ಯಾಘ್ರೌ ಸಂಗ್ರಾಮೇಷ್ವನಿವರ್ತಿನೌ।।
ನಿನ್ನ ಮಗ ಲಕ್ಷ್ಮಣ ಮತ್ತು ದುಃಶಾಸನನ ಮಗ ಇಬ್ಬರು ಪುರುಷವ್ಯಾಘ್ರರೂ ಸಂಗ್ರಾಮದಿಂದ ಹಿಂದೆ ಸರಿಯುವವರಲ್ಲ.
05163015a ತರುಣೌ ಸುಕುಮಾರೌ ಚ ರಾಜಪುತ್ರೌ ತರಸ್ವಿನೌ।
05163015c ಯುದ್ಧಾನಾಂ ಚ ವಿಶೇಷಜ್ಞೌ ಪ್ರಣೇತಾರೌ ಚ ಸರ್ವಶಃ।।
05163016a ರಥೌ ತೌ ರಥಶಾರ್ದೂಲ ಮತೌ ಮೇ ರಥಸತ್ತಮೌ।
05163016c ಕ್ಷತ್ರಧರ್ಮರತೌ ವೀರೌ ಮಹತ್ಕರ್ಮ ಕರಿಷ್ಯತಃ।।
ಈ ಇಬ್ಬರು ತರುಣ, ಸುಕುಮಾರ, ತರಸ್ವೀ ರಾಜಪುತ್ರರೂ ಯುದ್ಧಗಳ ವಿಶೇಷಜ್ಞರು, ಎಲ್ಲದರಲ್ಲಿ ಪ್ರಣೇತಾರರು. ರಥಶಾರ್ದೂಲ! ನನ್ನ ಅಭಿಪ್ರಾಯದಲ್ಲಿ ಅವರಿಬ್ಬರು ರಥಸತ್ತಮರು. ಕ್ಷತ್ರಧರ್ಮರತರಾದ ವೀರರಿಬ್ಬರೂ ಮಹಾ ಕರ್ಮಗಳನ್ನು ಮಾಡುತ್ತಾರೆ.
05163017a ದಂಡಧಾರೋ ಮಹಾರಾಜ ರಥ ಏಕೋ ನರರ್ಷಭಃ।
05163017c ಯೋತ್ಸ್ಯತೇ ಸಮರಂ ಪ್ರಾಪ್ಯ ಸ್ವೇನ ಸೈನ್ಯೇನ ಪಾಲಿತಃ।।
ಮಹಾರಾಜ! ನರರ್ಷಭ ದಂಡಧಾರನು ಏಕ ರಥ. ತನ್ನ ಸೇನೆಯಿಂದ ಪಾಲಿತನಾದ ಅವನು ಸಮರವನ್ನು ಸೇರಿ ಯುದ್ಧವನ್ನು ಮಾಡುತ್ತಾನೆ.
05163018a ಬೃಹದ್ಬಲಸ್ತಥಾ ರಾಜಾ ಕೌಸಲ್ಯೋ ರಥಸತ್ತಮಃ।
05163018c ರಥೋ ಮಮ ಮತಸ್ತಾತ ದೃಢವೇಗಪರಾಕ್ರಮಃ।।
ಅಯ್ಯಾ! ಕೋಸಲ ರಾಜ ಬೃಹದ್ಬಲನು ರಥಸತ್ತಮ. ಆ ದೃಢವೇಗಪರಾಕ್ರಮಿಯು ರಥನೆಂದು ನನಗನಿಸುತ್ತದೆ.
05163019a ಏಷ ಯೋತ್ಸ್ಯತಿ ಸಂಗ್ರಾಮೇ ಸ್ವಾಂ ಚಮೂಂ ಸಂಪ್ರಹರ್ಷಯನ್।
05163019c ಉಗ್ರಾಯುಧೋ ಮಹೇಷ್ವಾಸೋ ಧಾರ್ತರಾಷ್ಟ್ರಹಿತೇ ರತಃ।।
ಈ ಉಗ್ರಾಯುಧ, ಮಹೇಷ್ವಾಸ, ಧಾರ್ತರಾಷ್ಟ್ರಹಿತರತನು ತನ್ನ ಸೇನೆಯನ್ನು ಹರ್ಷಗೊಳಿಸುತ್ತಾ ಸಂಗ್ರಾಮದಲ್ಲಿ ಹೋರಾಡುತ್ತಾನೆ.
05163020a ಕೃಪಃ ಶಾರದ್ವತೋ ರಾಜನ್ರಥಯೂಥಪಯೂಥಪಃ।
05163020c ಪ್ರಿಯಾನ್ಪ್ರಾಣಾನ್ಪರಿತ್ಯಜ್ಯ ಪ್ರಧಕ್ಷ್ಯತಿ ರಿಪೂಂಸ್ತವ।।
ರಾಜನ್! ರಥಯೂಥಪಯೂಥಪನಾದ ಶಾರದ್ವತ ಕೃಪನು ಪ್ರಿಯ ಪ್ರಾಣವನ್ನು ಪರಿತ್ಯಜಿಸಿ ನಿನ್ನ ಶತ್ರುಗಳನ್ನು ಸುಟ್ಟುಬಿಡುತ್ತಾನೆ.
05163021a ಗೌತಮಸ್ಯ ಮಹರ್ಷೇರ್ಯ ಆಚಾರ್ಯಸ್ಯ ಶರದ್ವತಃ।
05163021c ಕಾರ್ತ್ತಿಕೇಯ ಇವಾಜೇಯಃ ಶರಸ್ತಂಬಾತ್ಸುತೋಽಭವತ್।।
ಆರ್ಯ! ಆ ಮಹರ್ಷಿ ಆಚಾರ್ಯ ಅಜೇಯನು ಕಾರ್ತಿಕೇಯನಂತೆ ಶರಸ್ತಂಭದಲ್ಲಿ ಶರದ್ವತ ಗೌತಮನಲ್ಲಿ ಜನಿಸಿದನು.
05163022a ಏಷ ಸೇನಾಂ ಬಹುವಿಧಾಂ ವಿವಿಧಾಯುಧಕಾರ್ಮುಕಾಂ।
05163022c ಅಗ್ನಿವತ್ಸಮರೇ ತಾತ ಚರಿಷ್ಯತಿ ವಿಮರ್ದಯನ್।।
ಅಯ್ಯಾ! ಇವನು ಸಮರದಲ್ಲಿ ಅಗ್ನಿಯಂತೆ ಸಂಚರಿಸಿ ವಿವಿಧ ಆಯುಧಗಳಿಂದ ಕೂಡಿದ ಬಹುವಿಧದ ಸೇನೆಗಳನ್ನು ಧ್ವಂಸಗೊಳಿಸುತ್ತಾನೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ರಥಾಥಿರಥಸಂಖ್ಯಾನ ಪರ್ವಣಿ ತ್ರಿಷಷ್ಟ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ರಥಾಥಿರಥಸಂಖ್ಯಾನ ಪರ್ವದಲ್ಲಿ ನೂರಾಅರವತ್ಮೂರನೆಯ ಅಧ್ಯಾಯವು.