162

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ರಥಾಥಿರಥಸಂಖ್ಯ ಪರ್ವ

ಅಧ್ಯಾಯ 162

ಸಾರ

ಭೀಷ್ಮನು ದುರ್ಯೋಧನನ ಸೇನಾಪತ್ಯವನ್ನು ಸ್ವೀಕರಿಸಿ ಆಶ್ವಾಸನೆ ನೀಡುವುದು (1-11). ಶತ್ರುಗಳಲ್ಲಿರುವ ಮತ್ತು ತಮ್ಮಲ್ಲಿರುವ ರಥಾತಿರಥರ ಕುರಿತು ದುರ್ಯೋಧನನು ಭೀಷ್ಮನಲ್ಲಿ ಕೇಳುವುದು (12-33).

05162001 ಧೃತರಾಷ್ಟ್ರ ಉವಾಚ।
05162001a ಪ್ರತಿಜ್ಞಾತೇ ಫಲ್ಗುನೇನ ವಧೇ ಭೀಷ್ಮಸ್ಯ ಸಂಜಯ।
05162001c ಕಿಮಕುರ್ವಂತ ಮೇ ಮಂದಾಃ ಪುತ್ರಾ ದುರ್ಯೋಧನಾದಯಃ।।

ಧೃತರಾಷ್ಟ್ರನು ಹೇಳಿದನು: “ಸಂಜಯ! ಫಲ್ಗುನನು ಭೀಷ್ಮನ ವಧೆಯ ಪ್ರತಿಜ್ಞೆಯನ್ನು ಮಾಡಲು ನನ್ನ ಪುತ್ರರಾದ ದುರ್ಯೋಧನಾದಿಗಳು ಏನು ಮಾಡಿದರು?

05162002a ಹತಮೇವ ಹಿ ಪಶ್ಯಾಮಿ ಗಾಂಗೇಯಂ ಪಿತರಂ ರಣೇ।
05162002c ವಾಸುದೇವಸಹಾಯೇನ ಪಾರ್ಥೇನ ದೃಢಧನ್ವನಾ।।

ವಾಸುದೇವನ ಸಹಾಯದಿಂದ ದೃಢಧನ್ವಿ ಪಾರ್ಥನು ರಣದಲ್ಲಿ ಅಜ್ಜ ಗಾಂಗೇಯನನ್ನು ಕೊಂದಾಯಿತೆಂದೇ ತೋರುತ್ತಿದೆ.

05162003a ಸ ಚಾಪರಿಮಿತಪ್ರಜ್ಞಾಸ್ತಚ್ಚ್ರುತ್ವಾ ಪಾರ್ಥಭಾಷಿತಂ।
05162003c ಕಿಮುಕ್ತವಾನ್ಮಹೇಷ್ವಾಸೋ ಭೀಷ್ಮಃ ಪ್ರಹರತಾಂ ವರಃ।।

ಪಾರ್ಥನು ಹೇಳಿದುದನ್ನು ಕೇಳಿ ಆ ಅಮಿತಪ್ರಾಜ್ಞ, ಮಹೇಷ್ವಾಸ, ಪ್ರಹರಿಗಳಲ್ಲಿ ಶ್ರೇಷ್ಠ ಭೀಷ್ಮನು ಏನು ಹೇಳಿದನು?

05162004a ಸೇನಾಪತ್ಯಂ ಚ ಸಂಪ್ರಾಪ್ಯ ಕೌರವಾಣಾಂ ಧುರಂಧರಃ।
05162004c ಕಿಮಚೇಷ್ಟತ ಗಾಂಗೇಯೋ ಮಹಾಬುದ್ಧಿಪರಾಕ್ರಮಃ।।

ಕೌರವರ ಸೇನಾಪತ್ಯವನ್ನು ಪಡೆದು ಆ ಧುರಂಧರ, ಮಹಾಬುದ್ಧಿ ಪರಾಕ್ರಮಿ ಗಾಂಗೇಯನು ಏನು ಮಾಡಿದನು?””

05162005 ವೈಶಂಪಾಯನ ಉವಾಚ।
05162005a ತತಸ್ತತ್ಸಂಜಯಸ್ತಸ್ಮೈ ಸರ್ವಮೇವ ನ್ಯವೇದಯತ್।
05162005c ಯಥೋಕ್ತಂ ಕುರುವೃದ್ಧೇನ ಭೀಷ್ಮೇಣಾಮಿತತೇಜಸಾ।।

ವೈಶಂಪಾಯನನು ಹೇಳಿದನು: “ಆಗ ಸಂಜಯನು ಅವನಿಗೆ ಕುರುವೃದ್ಧ, ಅಮಿತ ತೇಜಸ್ವಿ ಭೀಷ್ಮನು ಹೇಳಿದುದೆಲ್ಲವನ್ನೂ ನಿವೇದಿಸಿದನು.

05162006 ಸಂಜಯ ಉವಾಚ।
05162006a ಸೇನಾಪತ್ಯಮನುಪ್ರಾಪ್ಯ ಭೀಷ್ಮಃ ಶಾಂತನವೋ ನೃಪ।
05162006c ದುರ್ಯೋಧನಮುವಾಚೇದಂ ವಚನಂ ಹರ್ಷಯನ್ನಿವ।।

ಸಂಜಯನು ಹೇಳಿದನು: “ನೃಪ! ಸೇನಾಪತ್ಯವನ್ನು ಪಡೆದು ಶಾಂತನವ ಭೀಷ್ಮನು ಸಂತೋಷದಿಂದ ದುರ್ಯೋಧನನಿಗೆ ಈ ಮಾತುಗಳನ್ನಾಡಿದನು:

05162007a ನಮಸ್ಕೃತ್ವಾ ಕುಮಾರಾಯ ಸೇನಾನ್ಯೇ ಶಕ್ತಿಪಾಣಯೇ।
05162007c ಅಹಂ ಸೇನಾಪತಿಸ್ತೇಽದ್ಯ ಭವಿಷ್ಯಾಮಿ ನ ಸಂಶಯಃ।।

“ಸೇನಾನಿ ಶಕ್ತಿಪಾಣಿ ಕುಮಾರನನ್ನು ನಮಸ್ಕರಿಸಿ ನಾನು ಇಂದು ಸೇನಾಪತಿಯಾಗುತ್ತೇನೆನ್ನುವುದರಲ್ಲಿ ಸಂಶಯವಿಲ್ಲ.

05162008a ಸೇನಾಕರ್ಮಣ್ಯಭಿಜ್ಞೋಽಸ್ಮಿ ವ್ಯೂಹೇಷು ವಿವಿಧೇಷು ಚ।
05162008c ಕರ್ಮ ಕಾರಯಿತುಂ ಚೈವ ಭೃತಾನಪ್ಯಭೃತಾಂಸ್ತಥಾ।।

ಸೇನಾಕರ್ಮಗಳನ್ನೂ ವಿವಿಧ ವ್ಯೂಹಗಳನ್ನೂ, ಭೃತ್ಯರ ಮತ್ತು ಭೃತ್ಯರಲ್ಲದವರಿಂದ ಮಾಡಿಸಬೇಕಾದ ಕೆಲಸಗಳನ್ನೂ ಕೂಡ ನಾನು ತಿಳಿದುಕೊಂಡಿದ್ದೇನೆ.

05162009a ಯಾತ್ರಾಯಾನೇಷು ಯುದ್ಧೇಷು ಲಬ್ಧಪ್ರಶಮನೇಷು ಚ।
05162009c ಭೃಶಂ ವೇದ ಮಹಾರಾಜ ಯಥಾ ವೇದ ಬೃಹಸ್ಪತಿಃ।।

ಮಹಾರಾಜ! ಯಾತ್ರಾಯಾನಗಳಲ್ಲಿ, ಯುದ್ಧಗಳಲ್ಲಿ, ಲಬ್ಧಪ್ರಶಮನಗಳಲ್ಲಿ ಬೃಹಸ್ಪತಿಯು ತಿಳಿದಂತೆ ಚೆನ್ನಾಗಿ ತಿಳಿದುಕೊಂಡಿದ್ದೇನೆ.

05162010a ವ್ಯೂಹಾನಪಿ ಮಹಾರಂಭಾನ್ದೈವಗಾಂಧರ್ವಮಾನುಷಾನ್।
05162010c ತೈರಹಂ ಮೋಹಯಿಷ್ಯಾಮಿ ಪಾಂಡವಾನ್ವ್ಯೇತು ತೇ ಜ್ವರಃ।।

ದೇವಗಂಧರ್ವಮಾನುಷರ ಮಹಾರಂಭಗೊಳ್ಳುವ ವ್ಯೂಹಗಳನ್ನೂ ನಾನು ಭೇದಿಸಬಲ್ಲೆ. ಪಾಂಡವರ ಮೇಲಿರುವ ನಿನ್ನ ಉದ್ವೇಗವನ್ನು ನಾನು ಬಿಡಿಸುತ್ತೇನೆ.

05162011a ಸೋಽಹಂ ಯೋತ್ಸ್ಯಾಮಿ ತತ್ತ್ವೇನ ಪಾಲಯಂಸ್ತವ ವಾಹಿನೀಂ।
05162011c ಯಥಾವಚ್ಚಾಸ್ತ್ರತೋ ರಾಜನ್ವ್ಯೇತು ತೇ ಮಾನಸೋ ಜ್ವರಃ।।

ಶಾಸ್ತ್ರಗಳಲ್ಲಿ ಹೇಳಿರುವಂತೆ ನಾನು ತತ್ವದಿಂದ ಹೋರಾಡುತ್ತೇನೆ. ನಿನ್ನ ವಾಹಿನಿಯನ್ನು ಪಾಲಿಸುತ್ತೇನೆ. ರಾಜನ್! ನಿನ್ನ ಮನಸ್ಸಿನ ಜ್ವರವನ್ನು ತೆಗೆದು ಹಾಕು.”

05162012 ದುರ್ಯೋಧನ ಉವಾಚ।
05162012a ನ ವಿದ್ಯತೇ ಮೇ ಗಾಂಗೇಯ ಭಯಂ ದೇವಾಸುರೇಷ್ವಪಿ।
05162012c ಸಮಸ್ತೇಷು ಮಹಾಬಾಹೋ ಸತ್ಯಮೇತದ್ಬ್ರವೀಮಿ ತೇ।।

ದುರ್ಯೋಧನನು ಹೇಳಿದನು: “ಗಾಂಗೇಯ! ಮಹಾಬಾಹೋ! ನನಗೆ ದೇವಾಸುರರೇ ಇರಲಿ ಸಮಸ್ತರಲ್ಲಿ ಭಯವೆನ್ನುವುದಿಲ್ಲ. ನಿನಗೆ ಸತ್ಯವನ್ನು ಹೇಳುತ್ತಿದ್ದೇನೆ.

05162013a ಕಿಂ ಪುನಸ್ತ್ವಯಿ ದುರ್ಧರ್ಷೇ ಸೇನಾಪತ್ಯೇ ವ್ಯವಸ್ಥಿತೇ।
05162013c ದ್ರೋಣೇ ಚ ಪುರುಷವ್ಯಾಘ್ರೇ ಸ್ಥಿತೇ ಯುದ್ಧಾಭಿನಂದಿನಿ।।

ದುರ್ಧರ್ಷನಾದ ನೀನು ಸೇನಾಪತ್ಯವನ್ನು ವಹಿಸಿರಲು ಮತ್ತು ಪುರುಷವ್ಯಾಘ್ರ ದ್ರೋಣನು ಇಷ್ಟಪಟ್ಟು ಯುದ್ಧಕ್ಕೆ ನಿಂತಿರಲು ಇನ್ನೇನು?

05162014a ಭವದ್ಭ್ಯಾಂ ಪುರುಷಾಗ್ರ್ಯಾಭ್ಯಾಂ ಸ್ಥಿತಾಭ್ಯಾಂ ವಿಜಯೋ ಮಮ।
05162014c ನ ದುರ್ಲಭಂ ಕುರುಶ್ರೇಷ್ಠ ದೇವರಾಜ್ಯಮಪಿ ಧ್ರುವಂ।।

ಕುರುಶ್ರೇಷ್ಠ! ನೀವಿಬ್ಬರೂ ಪುರುಷಾಗ್ರರು ನಿಂತಿರುವಾಗ ನನಗೆ ವಿಜಯವು ದುರ್ಲಭವೇ ಅಲ್ಲ. ದೇವರಾಜ್ಯವೂ ಕೂಡ ನಿಶ್ಚಯಿಸಿದ್ದೇ.

05162015a ರಥಸಂಖ್ಯಾಂ ತು ಕಾರ್ತ್ಸ್ನ್ಯೆನ ಪರೇಷಾಮಾತ್ಮನಸ್ತಥಾ।
05162015c ತಥೈವಾತಿರಥಾನಾಂ ಚ ವೇತ್ತುಮಿಚ್ಚಾಮಿ ಕೌರವ।।

ಕೌರವ! ಶತ್ರುಗಳಲ್ಲಿರುವ ಮತ್ತು ನಮ್ಮಲ್ಲಿ ಒಟ್ಟು ಎಷ್ಟು ಮಂದಿ ರಥರು ಮತ್ತು ಅತಿರಥರಿದ್ದಾರೆ ಎನ್ನುವುದನ್ನು ತಿಳಿಯಲು ಬಯಸುತ್ತೇನೆ.

05162016a ಪಿತಾಮಹೋ ಹಿ ಕುಶಲಃ ಪರೇಷಾಮಾತ್ಮನಸ್ತಥಾ।
05162016c ಶ್ರೋತುಮಿಚ್ಚಾಮ್ಯಹಂ ಸರ್ವೈಃ ಸಹೈಭಿರ್ವಸುಧಾಧಿಪೈಃ।।

ಏಕೆಂದರ ಪಿತಾಮಹನು ಶತ್ರುಗಳ ಮತ್ತು ನಮ್ಮ ಕುರಿತು ಚೆನ್ನಾಗಿ ತಿಳಿದುಕೊಂಡಿದ್ದಾನೆ. ಈ ಎಲ್ಲ ವಸುಧಾಧಿಪರೊಂದಿಗೆ ಅದನ್ನು ಕೇಳಲು ಬಯಸುತ್ತೇನೆ.”

05162017 ಭೀಷ್ಮ ಉವಾಚ।
05162017a ಗಾಂಧಾರೇ ಶೃಣು ರಾಜೇಂದ್ರ ರಥಸಂಖ್ಯಾಂ ಸ್ವಕೇ ಬಲೇ।
05162017c ಯೇ ರಥಾಃ ಪೃಥಿವೀಪಾಲ ತಥೈವಾತಿರಥಾಶ್ಚ ಯೇ।।

ಭೀಷ್ಮನು ಹೇಳಿದನು: “ಗಾಂಧಾರೇ! ರಾಜೇಂದ್ರ! ಪೃಥಿವೀಪಾಲ! ನಿನ್ನ ಬಲದಲ್ಲಿರುವ ರಥರ ಸಂಖ್ಯೆಯನ್ನು, ಯಾರು ರಥರು ಮತ್ತು ಯಾರು ಅತಿರಥರು ಎನ್ನುವುದನ್ನು ಕೇಳು.

05162018a ಬಹೂನೀಹ ಸಹಸ್ರಾಣಿ ಪ್ರಯುತಾನ್ಯರ್ಬುದಾನಿ ಚ।
05162018c ರಥಾನಾಂ ತವ ಸೇನಾಯಾಂ ಯಥಾಮುಖ್ಯಂ ತು ಮೇ ಶೃಣು।।

ನಿನ್ನ ಸೇನೆಯಲ್ಲಿ ಸಹಸ್ರ, ಹತ್ತುಸಾವಿರ, ಹತ್ತು ಲಕ್ಷಗಟ್ಟಲೆ ರಥರಿದ್ದಾರೆ. ಅವರಲ್ಲಿ ಮುಖ್ಯರಾದವರನ್ನು ಕೇಳು.

05162019a ಭವಾನಗ್ರೇ ರಥೋದಾರಃ ಸಹ ಸರ್ವೈಃ ಸಹೋದರೈಃ।
05162019c ದುಃಶಾಸನಪ್ರಭೃತಿಭಿರ್ಭ್ರಾತೃಭಿಃ ಶತಸಮ್ಮಿತೈಃ।।

ನಿನ್ನ ಎಲ್ಲ ಸಹೋದರರೊಂದಿಗೆ ನೀನು ರಥೋದಾರರಲ್ಲಿ ಅಗ್ರನಾಗಿದ್ದೀಯೆ. ದುಃಶಾಸನನೇ ಮೊದಲಾಗಿ ಒಟ್ಟು ನೂರು ಸಹೋದರರು.

05162020a ಸರ್ವೇ ಕೃತಪ್ರಹರಣಾಶ್ಚೇದ್ಯಭೇದ್ಯವಿಶಾರದಾಃ।
05162020c ರಥೋಪಸ್ಥೇ ಗಜಸ್ಕಂಧೇ ಗದಾಯುದ್ಧೇಽಸಿಚರ್ಮಣಿ।।
05162021a ಸಮ್ಯಂತಾರಃ ಪ್ರಹರ್ತಾರಃ ಕೃತಾಸ್ತ್ರಾ ಭಾರಸಾಧನಾಃ।
05162021c ಇಷ್ವಸ್ತ್ರೇ ದ್ರೋಣಶಿಷ್ಯಾಶ್ಚ ಕೃಪಸ್ಯ ಚ ಶರದ್ವತಃ।।

ಎಲ್ಲರೂ ಪ್ರಹರಣದಲ್ಲಿ ಕುಶಲರು, ಭೇದಿಸುವುದರಲ್ಲಿ ವಿಶಾರದರು. ರಥದಲ್ಲಿ ನಿಂತು, ಆನೆಯ ಮೇಲೆ ನಿಂತು, ಗದಾಯುದ್ಧ ಅಥವಾ ಖಡ್ಗಯುದ್ಧವನ್ನು ಮಾಡಬಲ್ಲರು. ಸಮ್ಯಂತಾರರು, ಪ್ರಹರ್ತಾರರು, ಭಾರಸಾಧನಗಳಲ್ಲಿ ಕೃತಾಸ್ತ್ರರು. ಎಲ್ಲರೂ ಅಸ್ತ್ರಗಳಲ್ಲಿ ದ್ರೋಣನ ಮತ್ತು ಶರದ್ವತ ಕೃಪನ ಶಿಷ್ಯರು.

05162022a ಏತೇ ಹನಿಷ್ಯಂತಿ ರಣೇ ಪಾಂಚಾಲಾನ್ಯುದ್ಧದುರ್ಮದಾನ್।
05162022c ಕೃತಕಿಲ್ಬಿಷಾಃ ಪಾಂಡವೇಯೈರ್ಧಾರ್ತರಾಷ್ಟ್ರಾ ಮನಸ್ವಿನಃ।।

ಪಾಂಡವರಿಂದ ತಪ್ಪಿತಸ್ಥರೆಂದು ಮಾಡಲ್ಪಟ್ಟ ಈ ಮನಸ್ವೀ ಧಾರ್ತರಾಷ್ಟ್ರರು ಯುದ್ಧದುರ್ಮದರಾದ ಪಾಂಚಾಲರನ್ನು ರಣದಲ್ಲಿ ಸಂಹರಿಸುತ್ತಾರೆ.

05162023a ತತೋಽಹಂ ಭರತಶ್ರೇಷ್ಠ ಸರ್ವಸೇನಾಪತಿಸ್ತವ।
05162023c ಶತ್ರೂನ್ವಿಧ್ವಂಸಯಿಷ್ಯಾಮಿ ಕದರ್ಥೀಕೃತ್ಯ ಪಾಂಡವಾನ್।
05162023e ನ ತ್ವಾತ್ಮನೋ ಗುಣಾನ್ವಕ್ತುಮರ್ಹಾಮಿ ವಿದಿತೋಽಸ್ಮಿ ತೇ।।

ಭರತಶ್ರೇಷ್ಠ! ನಂತರ ನಿನ್ನ ಸೇನಾಪತಿಯಾದ ನಾನಿದ್ದೇನೆ. ನಾನು ಪಾಂಡವರನ್ನು ಪುಡಿಮಾಡಿ ಶತ್ರುಗಳನ್ನು ವಿಧ್ವಂಸ ಮಾಡುತ್ತೇನೆ. ನನ್ನದೇ ಗುಣಗಳನ್ನು ಹೊಗಳಿಕೊಳ್ಳುವುದು ಸರಿಯಲ್ಲ. ನಾನು ನಿನಗೆ ಗೊತ್ತು.

05162024a ಕೃತವರ್ಮಾ ತ್ವತಿರಥೋ ಭೋಜಃ ಪ್ರಹರತಾಂ ವರಃ।
05162024c ಅರ್ಥಸಿದ್ಧಿಂ ತವ ರಣೇ ಕರಿಷ್ಯತಿ ನ ಸಂಶಯಃ।।

ಪ್ರಹಾರ ಮಾಡುವವರಲ್ಲಿ ಶ್ರೇಷ್ಠನಾದ ಭೋಜ ಕೃತವರ್ಮನು ಅತಿರಥ. ರಣದಲ್ಲಿ ನಿನ್ನ ಉದ್ದೇಶವನ್ನು ಸಿದ್ಧಿಗೊಳಿಸುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.

05162025a ಅಸ್ತ್ರವಿದ್ಭಿರನಾಧೃಷ್ಯೋ ದೂರಪಾತೀ ದೃಢಾಯುಧಃ।
05162025c ಹನಿಷ್ಯತಿ ರಿಪೂಂಸ್ತುಭ್ಯಂ ಮಹೇಂದ್ರೋ ದಾನವಾನಿವ।।

ಅಸ್ತ್ರವಿದರಿಂದ ಅನಾಧೃಷನಾದ, ಅತಿ ದೂರದವರೆಗೆ ಆಯುಧಗಳನ್ನು ಎಸೆಯಬಲ್ಲ, ದೃಢಾಯುಧನಾದ ಅವನು ಮಹೇಂದ್ರನು ದಾನವರನ್ನು ಹೇಗೋ ಹಾಗೆ ನಿನ್ನ ರಿಪುಗಳನ್ನು ಸಂಹರಿಸುತ್ತಾನೆ.

05162026a ಮದ್ರರಾಜೋ ಮಹೇಷ್ವಾಸಃ ಶಲ್ಯೋ ಮೇಽತಿರಥೋ ಮತಃ।
05162026c ಸ್ಪರ್ಧತೇ ವಾಸುದೇವೇನ ಯೋ ವೈ ನಿತ್ಯಂ ರಣೇ ರಣೇ।।

ಮಹೇಷ್ವಾಸ ಮದ್ರರಾಜ ಶಲ್ಯನು ನನ್ನ ಅಭಿಪ್ರಾಯದಲ್ಲಿ ಅತಿರಥ. ಪ್ರತಿಯೊಂದು ರಣದಲ್ಲಿಯೂ ನಿತ್ಯವೂ ವಾಸುದೇವನೊಂದಿಗೆ ಸ್ಪರ್ಧಿಸುತ್ತಾನೆ.

05162027a ಭಾಗಿನೇಯಾನ್ನಿಜಾಂಸ್ತ್ಯಕ್ತ್ವಾ ಶಲ್ಯಸ್ತೇ ರಥಸತ್ತಮಃ।
05162027c ಏಷ ಯೋತ್ಸ್ಯತಿ ಸಂಗ್ರಾಮೇ ಕೃಷ್ಣಂ ಚಕ್ರಗದಾಧರಂ।।
05162028a ಸಾಗರೋರ್ಮಿಸಮೈರ್ವೇಗೈಃ ಪ್ಲಾವಯನ್ನಿವ ಶಾತ್ರವಾನ್।

ತಂಗಿಯ ಮಕ್ಕಳನ್ನು ತೊರೆದು ರಥಸತ್ತಮ ಶಲ್ಯನು ನಿನ್ನವನಾಗಿದ್ದಾನೆ. ಇವನು ಸಂಗ್ರಾಮದಲ್ಲಿ ಚಕ್ರ-ಗದಾಧರ ಕೃಷ್ಣನನ್ನು ಎದುರಿಸುತ್ತಾನೆ. ಅವನು ಸಾಗರದ ಅಲೆಗಳಂತೆ ವೇಗವಾಗಿ ಬಾಣಗಳನ್ನು ಪ್ರಯೋಗಿಸಿ ಶತ್ರುಗಳನ್ನು ಹೂಳುತ್ತಾನೆ.

05162028c ಭೂರಿಶ್ರವಾಃ ಕೃತಾಸ್ತ್ರಶ್ಚ ತವ ಚಾಪಿ ಹಿತಃ ಸುಹೃತ್।।
05162029a ಸೌಮದತ್ತಿರ್ಮಹೇಷ್ವಾಸೋ ರಥಯೂಥಪಯೂಥಪಃ।
05162029c ಬಲಕ್ಷಯಮಮಿತ್ರಾಣಾಂ ಸುಮಹಾಂತಂ ಕರಿಷ್ಯತಿ।।

ಕೃತಾಸ್ತ್ರರಾದ ಭೂರಿಶ್ರವನೂ ನಿನ್ನ ಹಿತದಲ್ಲಿರುವ ಸುಹೃದಯಿಯು. ಮಹೇಷ್ವಾಸ ಸೌಮದತ್ತಿಯು ರಥಯೂಥಪರಲ್ಲಿ ಯೂಥಪನು. ಅಮಿತ್ರರ ಮಹಾ ಬಲಕ್ಷಯವನ್ನು ಮಾಡುತ್ತಾನೆ.

05162030a ಸಿಂಧುರಾಜೋ ಮಹಾರಾಜ ಮತೋ ಮೇ ದ್ವಿಗುಣೋ ರಥಃ।
05162030c ಯೋತ್ಸ್ಯತೇ ಸಮರೇ ರಾಜನ್ವಿಕ್ರಾಂತೋ ರಥಸತ್ತಮಃ।।

ಮಹಾರಾಜ! ನನ್ನ ಪ್ರಕಾರ ಸಿಂಧುರಾಜನು ದ್ವಿಗುಣ ರಥ. ರಾಜನ್! ಆ ರಥಸತ್ತಮನು ಸಮರದಲ್ಲಿ ವಿಕ್ರಾಂತನಾಗಿ ಹೋರಾಡುತ್ತಾನೆ.

05162031a ದ್ರೌಪದೀಹರಣೇ ಪೂರ್ವಂ ಪರಿಕ್ಲಿಷ್ಟಃ ಸ ಪಾಂಡವೈಃ।
05162031c ಸಂಸ್ಮರಂಸ್ತಂ ಪರಿಕ್ಲೇಶಂ ಯೋತ್ಸ್ಯತೇ ಪರವೀರಹಾ।।

ಹಿಂದೆ ದ್ರೌಪದೀಹರಣದಲ್ಲಿ ಪಾಂಡವರಿಂದ ಕಷ್ಟಕ್ಕೊಳಗಾಗಿದ್ದನು. ಆ ಪರಿಕ್ಲೇಶವನ್ನು ನೆನಪಿಸಿಕೊಂಡು ಆ ಪರವೀರಹನು ಯುದ್ಧ ಮಾಡುತ್ತಾನೆ.

05162032a ಏತೇನ ಹಿ ತದಾ ರಾಜಂಸ್ತಪ ಆಸ್ಥಾಯ ದಾರುಣಂ।
05162032c ಸುದುರ್ಲಭೋ ವರೋ ಲಬ್ಧಃ ಪಾಂಡವಾನ್ಯೋದ್ಧುಮಾಹವೇ।।

ರಾಜನ್! ಆಗ ಇವನೇ ದಾರುಣ ತಪಸ್ಸನ್ನು ಆಚರಿಸಿ ಯುದ್ಧದಲ್ಲಿ ಪಾಂಡವರನ್ನು ಎದುರಿಸುವ ದುರ್ಲಭ ವರವನ್ನು ಪಡೆದಿದ್ದಾನೆ.

05162033a ಸ ಏಷ ರಥಶಾರ್ದೂಲಸ್ತದ್ವೈರಂ ಸಂಸ್ಮರನ್ರಣೇ।
05162033c ಯೋತ್ಸ್ಯತೇ ಪಾಂಡವಾಂಸ್ತಾತ ಪ್ರಾಣಾಂಸ್ತ್ಯಕ್ತ್ವಾ ಸುದುಸ್ತ್ಯಜಾನ್।।

ಅಯ್ಯಾ! ಈ ರಥಶಾರ್ದೂಲನು ಆ ವೈರವನ್ನು ನೆನಪಿಸಿಕೊಂಡು ತ್ಯಜಿಸಲು ಕಷ್ಟವಾದ ಪ್ರಾಣವನ್ನು ತೊರೆದು ರಣದಲ್ಲಿ ಪಾಂಡವರೊಂದಿಗೆ ಹೋರಾಡುತ್ತಾನೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ರಥಾಥಿರಥಸಂಖ್ಯಾನ ಪರ್ವಣಿ ದ್ವಿಷಷ್ಟ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ರಥಾಥಿರಥಸಂಖ್ಯಾನ ಪರ್ವದಲ್ಲಿ ನೂರಾಅರವತ್ತೆರಡನೆಯ ಅಧ್ಯಾಯವು.