158 ಉಲೂಕವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಉಲೂಕದೂತಾಗಮನ ಪರ್ವ

ಅಧ್ಯಾಯ 158

ಸಾರ

ಉಲೂಕನು ಯುಧಿಷ್ಠಿರನಿಗೂ (1-21), ಅರ್ಜುನನಿಗೂ (22-41) ದುರ್ಯೋಧನನ ಸಂದೇಶವನ್ನು ಹೇಳುವುದು.

05158001 ಸಂಜಯ ಉವಾಚ।
05158001a ಸೇನಾನಿವೇಶಂ ಸಂಪ್ರಾಪ್ಯ ಕೈತವ್ಯಃ ಪಾಂಡವಸ್ಯ ಹ।
05158001c ಸಮಾಗತಃ ಪಾಂಡವೇಯೈರ್ಯುಧಿಷ್ಠಿರಮಭಾಷತ।।

ಸಂಜಯನು ಹೇಳಿದನು: “ಪಾಂಡವರ ಸೇನಾನಿವೇಶನವನ್ನು ತಲುಪಿ ಕೈತವ್ಯನು ಪಾಂಡವ ಯುಧಿಷ್ಠಿರನನ್ನು ಭೇಟಿಮಾಡಿ ಹೀಗೆ ಹೇಳಿದನು:

05158002a ಅಭಿಜ್ಞೋ ದೂತವಾಕ್ಯಾನಾಂ ಯಥೋಕ್ತಂ ಬ್ರುವತೋ ಮಮ।
05158002c ದುರ್ಯೋಧನಸಮಾದೇಶಂ ಶ್ರುತ್ವಾ ನ ಕ್ರೋದ್ಧುಮರ್ಹಸಿ।।

“ದೂತವಾಕ್ಯವನ್ನು ಹೇಗೆ ಹೇಳಬೇಕೆಂದು ನನಗೆ ತಿಳಿದಿಲ್ಲ. ದುರ್ಯೋಧನನ ಸಂದೇಶವನ್ನು ಹೇಳುತ್ತೇನೆ. ಕೇಳಿ ಕ್ರೋಧಿತನಾಗಬಾರದು.”

05158003 ಯುಧಿಷ್ಠಿರ ಉವಾಚ।
05158003a ಉಲೂಕ ನ ಭಯಂ ತೇಽಸ್ತಿ ಬ್ರೂಹಿ ತ್ವಂ ವಿಗತಜ್ವರಃ।
05158003c ಯನ್ಮತಂ ಧಾರ್ತರಾಷ್ಟ್ರಸ್ಯ ಲುಬ್ಧಸ್ಯಾದೀರ್ಘದರ್ಶಿನಃ।।

ಯುಧಿಷ್ಠಿರನು ಹೇಳಿದನು: “ಉಲೂಕ! ನೀನು ಭಯಪಡಬೇಕಾಗಿಲ್ಲ. ಅ ಲುಬ್ಧನೂ ದೂರದೃಷ್ಟಿಯಿಲ್ಲದವನೂ ಆದ ಧಾರ್ತರಾಷ್ಟ್ರನ ಮತವೇನೆನ್ನುವುದನ್ನು ಭಯಪಟ್ಟುಕೊಳ್ಳದೇ ಹೇಳು.””

05158004 ಸಂಜಯ ಉವಾಚ।
05158004a ತತೋ ದ್ಯುತಿಮತಾಂ ಮಧ್ಯೇ ಪಾಂಡವಾನಾಂ ಮಹಾತ್ಮನಾಂ।
05158004c ಸೃಂಜಯಾನಾಂ ಚ ಸರ್ವೇಷಾಂ ಕೃಷ್ಣಸ್ಯ ಚ ಯಶಸ್ವಿನಃ।।
05158005a ದ್ರುಪದಸ್ಯ ಸಪುತ್ರಸ್ಯ ವಿರಾಟಸ್ಯ ಚ ಸನ್ನಿಧೌ।
05158005c ಭೂಮಿಪಾನಾಂ ಚ ಸರ್ವೇಷಾಂ ಮಧ್ಯೇ ವಾಕ್ಯಂ ಜಗಾದ ಹ।।

ಸಂಜಯನು ಹೇಳಿದನು: “ಆಗ ಮಹಾತ್ಮ ಪಾಂಡವರ, ಸೃಂಜಯರ ಮತ್ತು ಯಶಸ್ವಿ ಕೃಷ್ಣ ಈ ಎಲ್ಲ ದ್ಯುತಿಮತರ ಮಧ್ಯೆ, ಪುತ್ರರೊಂದಿಗಿದ್ದ ದ್ರುಪದ ಮತ್ತು ವಿರಾಟರ ಸನ್ನಿಧಿಯಲ್ಲಿ, ಎಲ್ಲ ಭೂಮಿಪರ ಮಧ್ಯೆ ಅವನು ಈ ಮಾತನ್ನಾಡಿದನು:

05158006a ಇದಂ ತ್ವಾಮಬ್ರವೀದ್ರಾಜಾ ಧಾರ್ತರಾಷ್ಟ್ರೋ ಮಹಾಮನಾಃ।
05158006c ಶೃಣ್ವತಾಂ ಕುರುವೀರಾಣಾಂ ತನ್ನಿಬೋಧ ನರಾಧಿಪ।।

“ರಾಜ ಮಹಾಮನಸ್ವಿ ಧಾರ್ತರಾಷ್ಟ್ರನು ಕುರುವೀರರು ಕೇಳಿಸಿಕೊಳ್ಳುವಂತೆ ನಿನಗೆ ಇದನ್ನು ಹೇಳಿದ್ದಾನೆ. ನರಾಧಿಪ! ಕೇಳು!

05158007a ಪರಾಜಿತೋಽಸಿ ದ್ಯೂತೇನ ಕೃಷ್ಣಾ ಚಾನಾಯಿತಾ ಸಭಾಂ।
05158007c ಶಕ್ಯೋಽಮರ್ಷೋ ಮನುಷ್ಯೇಣ ಕರ್ತುಂ ಪುರುಷಮಾನಿನಾ।।

“ದ್ಯೂತದಲ್ಲಿ ನೀನು ಸೋತೆ. ಸಭೆಗೆ ಕೃಷ್ಣೆಯನ್ನು ತರಲಾಯಿತು. ಇಷ್ಟೇ ಮನುಷ್ಯನು, ಪುರುಷ ಮಾನಿನಿಯು ಸಿಟ್ಟಾಗುವಂತೆ ಮಾಡಲು ಶಕ್ಯ.

05158008a ದ್ವಾದಶೈವ ತು ವರ್ಷಾಣಿ ವನೇ ಧಿಷ್ಣ್ಯಾದ್ವಿವಾಸಿತಾಃ।
05158008c ಸಂವತ್ಸರಂ ವಿರಾಟಸ್ಯ ದಾಸ್ಯಮಾಸ್ಥಾಯ ಚೋಷಿತಾಃ।।

ಹನ್ನೆರಡು ವರ್ಷಗಳು ಹೊರಗಟ್ಟಲ್ಪಟ್ಟು ವನದಲ್ಲಿ ವಾಸಿಸಿದಿರಿ. ಒಂದು ವರ್ಷವನ್ನು ವಿರಾಟನ ದಾಸರಾಗಿದ್ದುಕೊಂಡು ಕಳೆದಿರಿ.

05158009a ಅಮರ್ಷಂ ರಾಜ್ಯಹರಣಂ ವನವಾಸಂ ಚ ಪಾಂಡವ।
05158009c ದ್ರೌಪದ್ಯಾಶ್ಚ ಪರಿಕ್ಲೇಶಂ ಸಂಸ್ಮರನ್ಪುರುಷೋ ಭವ।।

ಪಾಂಡವ! ಕ್ರೂರವಾದ ರಾಜ್ಯಹರಣ, ವನವಾಸ, ಮತ್ತು ದ್ರೌಪದಿಯ ಪರಿಕ್ಲೇಶಗಳನ್ನು ಸ್ಮರಿಸಿಕೊಂಡು ಪುರುಷರಾಗಿರಿ.

05158010a ಅಶಕ್ತೇನ ಚ ಯಚ್ಚಪ್ತಂ ಭೀಮಸೇನೇನ ಪಾಂಡವ।
05158010c ದುಃಶಾಸನಸ್ಯ ರುಧಿರಂ ಪೀಯತಾಂ ಯದಿ ಶಕ್ಯತೇ।।

ಅಶಕ್ತತೆಯಿಂದ ಶಪಿಸಿದ ಪಾಂಡವ ಭೀಮಸೇನನು ಸಾಧ್ಯವಾದರೆ ದುಃಶಾಸನನ ರಕ್ತವನ್ನು ಕುಡಿಯಲಿ!

05158011a ಲೋಹಾಭಿಹಾರೋ ನಿರ್ವೃತ್ತಃ ಕುರುಕ್ಷೇತ್ರಮಕರ್ದಮಂ।
05158011c ಸಮಃ ಪಂಥಾ ಭೃತಾ ಯೋಧಾಃಽಶ್ವೋ ಯುಧ್ಯಸ್ವ ಸಕೇಶವಃ।।

ಆಯುಧಗಳು ಸಿದ್ಧವಾಗಿವೆ, ಕುರುಕ್ಷೇತ್ರವು ಅಕರ್ದಮವಾಗಿದೆ. ರಸ್ತೆಗಳು ಸಮನಾಗಿವೆ, ಯೋಧರೂ-ಕುದುರೆಗಳೂ ಸಿದ್ಧವಾಗಿವೆ. ಕೇಶವನನ್ನೊಡಗೂಡಿ ಯುದ್ಧಮಾಡು.

05158012a ಅಸಮಾಗಮ್ಯ ಭೀಷ್ಮೇಣ ಸಂಯುಗೇ ಕಿಂ ವಿಕತ್ಥಸೇ।
05158012c ಆರುರುಕ್ಷುರ್ಯಥಾ ಮಂದಃ ಪರ್ವತಂ ಗಂಧಮಾದನಂ।।

ಯುದ್ಧದಲ್ಲಿ ಬೀಷ್ಮನನ್ನು ಇನ್ನೂ ಎದುರಾಗದೇ, ಗಂಧಮಾದನ ಪರ್ವತವನ್ನು ಏರಬಲ್ಲೆ ಎಂದು ಹೇಳಿಕೊಳ್ಳುವ ಮಂದನಂತೆ ಏಕೆ ಕೊಚ್ಚಿಕೊಳ್ಳುತ್ತಿದ್ದೀಯೆ?

05158013a ದ್ರೋಣಂ ಚ ಯುಧ್ಯತಾಂ ಶ್ರೇಷ್ಠಂ ಶಚೀಪತಿಸಮಂ ಯುಧಿ।
05158013c ಅಜಿತ್ವಾ ಸಂಯುಗೇ ಪಾರ್ಥ ರಾಜ್ಯಂ ಕಥಮಿಹೇಚ್ಚಸಿ।।

ಪಾರ್ಥ! ಯುದ್ಧದಲ್ಲಿ ಶಚೀಪತಿಯ ಸಮನಾಗಿರುವ ಶ್ರೇಷ್ಠ ದ್ರೋಣನೊಂದಿಗೆ ಯುದ್ಧಮಾಡಿ ಸಂಯುಗದಲ್ಲಿ ಗೆಲ್ಲದೇ ಹೇಗೆ ತಾನೇ ರಾಜ್ಯವನ್ನು ಬಯಸುತ್ತೀಯೆ?

05158014a ಬ್ರಾಹ್ಮೇ ಧನುಷಿ ಚಾಚಾರ್ಯಂ ವೇದಯೋರಂತರಂ ದ್ವಯೋಃ।
05158014c ಯುಧಿ ಧುರ್ಯಮವಿಕ್ಷೋಭ್ಯಮನೀಕಧರಮಚ್ಯುತಂ।।

ಬ್ರಹ್ಮ ಮತ್ತು ಧನುರ್ವಿದ್ಯೆ ಇವೆರಡರ ಕೊನೆಯನ್ನೂ ಆಚಾರ್ಯನು ತಲುಪಿದ್ದಾನೆ. ಯುದ್ಧದಲ್ಲಿ ಅವನು ಗೆಲ್ಲಲಸಾಧ್ಯನು, ಅಕ್ಷೋಭ್ಯನು, ಅನೀಕಧರನು ಮತ್ತು ಅಚ್ಯುತನು.

05158015a ದ್ರೋಣಂ ಮೋಹಾದ್ಯುಧಾ ಪಾರ್ಥ ಯಜ್ಜಿಗೀಷಸಿ ತನ್ಮೃಷಾ।
05158015c ನ ಹಿ ಶುಶ್ರುಮ ವಾತೇನ ಮೇರುಮುನ್ಮಥಿತಂ ಗಿರಿಂ।।

ಪಾರ್ಥ! ಅಂಥಹ ದ್ರೋಣನನ್ನು ಯುದ್ಧದಲ್ಲಿ ಗೆಲ್ಲುತ್ತೇನೆ ಎನ್ನುವ ಒಣ ಮೋಹವನ್ನು ಹೊಂದಿರುವೆಯಲ್ಲ ಅದಾಗುವುದು ಸುಳ್ಳು. ಗಾಳಿಯಿಂದ ಮೇರುಪರ್ವತವು ಪುಡಿಯಾಯಿತೆಂದು ನಾವು ಕೇಳಿಲ್ಲವಲ್ಲ!

05158016a ಅನಿಲೋ ವಾ ವಹೇನ್ಮೇರುಂ ದ್ಯೌರ್ವಾಪಿ ನಿಪತೇನ್ಮಹೀಂ।
05158016c ಯುಗಂ ವಾ ಪರಿವರ್ತೇತ ಯದ್ಯೇವಂ ಸ್ಯಾದ್ಯಥಾತ್ಥ ಮಾಂ।।

ಆದರೆ ನೀನು ಹೇಳುವುದು ಸತ್ಯವಾದರೆ ಗಾಳಿಯೂ ಮೇರುವನ್ನು ಹಾರಿಸಿದ್ದೀತು, ಆಕಾಶವು ಭೂಮಿಯ ಮೇಲೆ ಬಿದ್ದೀತು, ಯುಗವು ಬದಲಾದೀತು.

05158017a ಕೋ ಹ್ಯಾಭ್ಯಾಂ ಜೀವಿತಾಕಾಂಕ್ಷೀ ಪ್ರಾಪ್ಯಾಸ್ತ್ರಮರಿಮರ್ದನಂ।
05158017c ಗಜೋ ವಾಜೀ ನರೋ ವಾಪಿ ಪುನಃ ಸ್ವಸ್ತಿ ಗೃಹಾನ್ವ್ರಜೇತ್।।

ಆ ಅಸ್ತ್ರಧಾರೀ ಅರಿಮರ್ದನನನ್ನು ಎದುರಿಸಿ ಜೀವಿತಾಕಾಂಕ್ಷಿಯಾದ ಯಾರು ತಾನೆ, ಆನೆಯಿರಲಿ, ಕುದುರೆಯಾಗಿರಲಿ ಅಥವಾ ಮನುಷ್ಯನಾಗಿರಲೀ ಪುನಃ ಒಳ್ಳೆಯದಾಗಿದ್ದುಕೊಂಡು ಮನೆಗೆ ಹಿಂದಿರುಗುತ್ತಾನೆ?

05158018a ಕಥಮಾಭ್ಯಾಮಭಿಧ್ಯಾತಃ ಸಂಸೃಷ್ಟೋ ದಾರುಣೇನ ವಾ।
05158018c ರಣೇ ಜೀವನ್ವಿಮುಚ್ಯೇತ ಪದಾ ಭೂಮಿಮುಪಸ್ಪೃಶನ್।।

ಭೂಮಿಯ ಮೇಲೆ ನಡೆಯುವ ಯಾರುತಾನೇ ಹೇಗೆ ಅವರಿಬ್ಬರನ್ನೂ ಎದುರಿಸಿ ದಾರುಣವಾದ ರಣದಿಂದ ಜೀವಂತನಾಗಿ ಬಿಡುಗಡೆ ಹೊಂದುತ್ತಾನೆ?

05158019a ಕಿಂ ದರ್ದುರಃ ಕೂಪಶಯೋ ಯಥೇಮಾಂ ನ ಬುಧ್ಯಸೇ ರಾಜಚಮೂಂ ಸಮೇತಾಂ।
05158019c ದುರಾಧರ್ಷಾಂ ದೇವಚಮೂಪ್ರಕಾಶಾಂ ಗುಪ್ತಾಂ ನರೇಂದ್ರೈಸ್ತ್ರಿದಶೈರಿವ ದ್ಯಾಂ।।

ಬಾವಿಯಲ್ಲಿರುವ ಕಪ್ಪೆಯಂತೆ ಏಕೆ ನೀನು ಸೇರಿರುವ ರಾಜರ ಗುಂಪನ್ನು – ದುರಾಧರ್ಷರಾದ, ದೇವಸೇನೆಯಂತೆ ಪ್ರಕಾಶಿತರಾದ, ದಿವಿಯಲ್ಲಿ ರಕ್ಷಿಸಲ್ಪಟ್ಟಿರುವ ತ್ರಿದಶರಂತಿರುವ ನರೇಂದ್ರರನ್ನು ಅರ್ಥಮಾಡಿಕೊಳ್ಳುತ್ತಿಲ್ಲ?

05158020a ಪ್ರಾಚ್ಯೈಃ ಪ್ರತೀಚ್ಯೈರಥ ದಾಕ್ಷಿಣಾತ್ಯೈರ್ ಉದೀಚ್ಯಕಾಂಬೋಜಶಕೈಃ ಖಶೈಶ್ಚ।
05158020c ಶಾಲ್ವೈಃ ಸಮತ್ಸ್ಯೈಃ ಕುರುಮಧ್ಯದೇಶೈರ್ ಮ್ಲೇಚ್ಚೈಃ ಪುಲಿಂದೈರ್ದ್ರವಿಡಾಂಧ್ರಕಾಂಚ್ಯೈಃ।।

ಪೂರ್ವದಿಂದ, ಪಶ್ಚಿಮದಿಂದ, ದಕ್ಷಿಣದಿಂದ, ಉತ್ತರದಿಂದ ಬಂದಿರುವ ಕಾಂಬೋಜರು, ಶಕರು, ಖಶರು, ಶಾಲ್ವರು, ಮತ್ಸ್ಯರು, ಕುರುಗಳು, ಮಧ್ಯದೇಶದವರು, ಮ್ಲೇಚ್ಛರು, ಪುಲಿಂದರು, ದ್ರವಿಡರು, ಆಂದ್ರರು ಮತ್ತು ಕಾಂಚಿಯವರು.

05158021a ನಾನಾಜನೌಘಂ ಯುಧಿ ಸಂಪ್ರವೃದ್ಧಂ ಗಾಂಗಂ ಯಥಾ ವೇಗಮವಾರಣೀಯಂ।
05158021c ಮಾಂ ಚ ಸ್ಥಿತಂ ನಾಗಬಲಸ್ಯ ಮಧ್ಯೇ ಯುಯುತ್ಸಸೇ ಮಂದ ಕಿಮಲ್ಪಬುದ್ಧೇ।।

ಯುದ್ಧದಲ್ಲಿ ಸೊಕ್ಕಿ ಬೆಳೆಯುವ ಈ ನಾನಾ ಜನೌಘವು ವೇಗವಾಗಿ ಹರಿಯುವ ಗಂಗೆಯಂತೆ ದಾಟಲಸಾಧ್ಯವಾದುದು. ಅಲ್ಪಬುದ್ಧೇ! ಮಂದ! ಆನೆಗಳ ಸೇನೆಗಳ ಮಧ್ಯ ನಿಂತಿರುವ ನನ್ನನ್ನು ಹೇಗೆ ಹೋರಾಡುತ್ತೀಯೆ?””

05158022a ಇತ್ಯೇವಮುಕ್ತ್ವಾ ರಾಜಾನಂ ಧರ್ಮಪುತ್ರಂ ಯುಧಿಷ್ಠಿರಂ।
05158022c ಅಭ್ಯಾವೃತ್ಯ ಪುನರ್ಜಿಷ್ಣುಮುಲೂಕಃ ಪ್ರತ್ಯಭಾಷತ।।

ರಾಜ ಧರ್ಮಪುತ್ರ ಯುಧಿಷ್ಠಿರನಿಗೆ ಹೀಗೆ ಹೇಳಿ ಉಲೂಕನು ಪುನಃ ಜಿಷ್ಣುವಿನ ಕಡೆ ತಿರುಗಿ ಹೇಳಿದನು:

05158023a ಅಕತ್ಥಮಾನೋ ಯುಧ್ಯಸ್ವ ಕತ್ಥಸೇಽರ್ಜುನ ಕಿಂ ಬಹು।
05158023c ಪರ್ಯಾಯಾತ್ಸಿದ್ಧಿರೇತಸ್ಯ ನೈತತ್ಸಿಧ್ಯತಿ ಕತ್ಥನಾತ್।।

““ಅರ್ಜುನ! ಕೊಚ್ಚಿಕೊಳ್ಳದೆಯೇ ಯುದ್ಧಮಾಡು! ಅಷ್ಟೇಕೆ ಕೊಚ್ಚಿಕೊಳ್ಳುತ್ತಿದ್ದೀಯೆ? ಉಪಾಯದಿಂದ ಸಿದ್ಧಿ ದೊರೆಯುತ್ತದೆಯೇ ಹೊರತು ಕೊಚ್ಚಿಕೊಳ್ಳುವುದರಿಂದ ಸಿದ್ಧಿಯು ದೊರೆಯುವುದಿಲ್ಲ.

05158024a ಯದೀದಂ ಕತ್ಥನಾತ್ಸಿಧ್ಯೇತ್ಕರ್ಮ ಲೋಕೇ ಧನಂಜಯ।
05158024c ಸರ್ವೇ ಭವೇಯುಃ ಸಿದ್ಧಾರ್ಥಾ ಬಹು ಕತ್ಥೇತ ದುರ್ಗತಃ।।

ಧನಂಜಯ! ಜಂಬ ಕೊಚ್ಚಿಕೊಳ್ಳುವುದರಿಂದಲೇ ಲೋಕದಲ್ಲಿ ಕರ್ಮಗಳು ಫಲವನ್ನು ಕೊಡುತ್ತವೆಯಂತಾಗಿದ್ದರೆ ಎಲ್ಲರೂ ಬಹುವಾಗಿ ಕೊಚ್ಚಿಕೊಳ್ಳುವ ಕೆಟ್ಟ ದಾರಿಯಲ್ಲಿ ಹೋಗಿ ಯಶಸ್ವಿಗಳಾಗುತ್ತಿದ್ದರು.

05158025a ಜಾನಾಮಿ ತೇ ವಾಸುದೇವಂ ಸಹಾಯಂ ಜಾನಾಮಿ ತೇ ಗಾಂಡಿವಂ ತಾಲಮಾತ್ರಂ।
05158025c ಜಾನಾಮ್ಯೇತತ್ತ್ವಾದೃಶೋ ನಾಸ್ತಿ ಯೋದ್ಧಾ ರಾಜ್ಯಂ ಚ ತೇ ಜಾನಮಾನೋ ಹರಾಮಿ।।

ನಿನಗೆ ವಾಸುದೇವನ ಸಹಾಯವಿದೆಯೆಂದು ಬಲ್ಲೆ. ನಿನ್ನ ಗಾಂಡೀವವು ಆರು ಅಡಿ ಉದ್ದವಿದೆಯೆಂದು ಬಲ್ಲೆ. ನಿನ್ನ ಸದೃಶನಾದ ಯೋದ್ಧನು ಇಲ್ಲ ಎನ್ನುವುದನ್ನೂ ಬಲ್ಲೆ. ಆದರೂ ನಿನ್ನ ರಾಜ್ಯವನ್ನು ನಿನಗೆ ಅರಿವಿದ್ದಂತೆಯೇ ಅಪಹರಿಸಿಕೊಂಡಿದ್ದೇನೆ!

05158026a ನ ತು ಪರ್ಯಾಯಧರ್ಮೇಣ ಸಿದ್ಧಿಂ ಪ್ರಾಪ್ನೋತಿ ಭೂಯಸೀಂ।
05158026c ಮನಸೈವ ಹಿ ಭೂತಾನಿ ಧಾತಾ ಪ್ರಕುರುತೇ ವಶೇ।।

ಕೇವಲ ಪರ್ಯಾಯಧರ್ಮದಿಂದ ಜೀವಿಗಳು ಸಿದ್ಧಿಯನ್ನು ಪಡೆಯುವುದಿಲ್ಲ. ಧಾತಾರನೇ ಭೂತಗಳ ಮನಸ್ಸನ್ನು ದಾಸನನ್ನಾಗಿ ಅಥವಾ ಒಡೆಯನನ್ನಾಗಿ ಮಾಡುತ್ತಾನೆ.

05158027a ತ್ರಯೋದಶ ಸಮಾ ಭುಕ್ತಂ ರಾಜ್ಯಂ ವಿಲಪತಸ್ತವ।
05158027c ಭೂಯಶ್ಚೈವ ಪ್ರಶಾಸಿಷ್ಯೇ ನಿಹತ್ಯ ತ್ವಾಂ ಸಬಾಂಧವಂ।।

ಈ ಹದಿಮೂರು ವರ್ಷಗಳು ನೀನು ಅಳುತ್ತಿರುವಾಗ ನಾನು ರಾಜ್ಯವನ್ನು ಭೋಗಿಸಿದೆ. ಬಾಂಧವರೊಂದಿಗೆ ನಿನ್ನನ್ನು ಸಂಹರಿಸಿ ನಾನು ಮುಂದೆಯೂ ಕೂಡ ಪ್ರಶಾಸನ ಮಾಡುತ್ತೇನೆ.

05158028a ಕ್ವ ತದಾ ಗಾಂಡಿವಂ ತೇಽಭೂದ್ಯತ್ತ್ವಂ ದಾಸಪಣೇ ಜಿತಃ।
05158028c ಕ್ವ ತದಾ ಭೀಮಸೇನಸ್ಯ ಬಲಮಾಸೀಚ್ಚ ಫಲ್ಗುನ।।

ಫಲ್ಗುನ! ಪಣದಲ್ಲಿ ಗೆದ್ದು ನಿನ್ನನ್ನು ದಾಸನನ್ನಾಗಿ ಮಾಡಿದಾಗ ನಿನ್ನ ಗಾಂಡೀವವು ಎಲ್ಲಿತ್ತು? ಆಗ ಭೀಮಸೇನನ ಬಲವಾದರೂ ಎಲ್ಲಿತ್ತು?

05158029a ಸಗದಾದ್ಭೀಮಸೇನಾಚ್ಚ ಪಾರ್ಥಾಚ್ಚೈವ ಸಗಾಂಡಿವಾತ್।
05158029c ನ ವೈ ಮೋಕ್ಷಸ್ತದಾ ವೋಽಭೂದ್ವಿನಾ ಕೃಷ್ಣಾಮನಿಂದಿತಾಂ।।

ಆಗ ನಿಮಗೆ ಮೋಕ್ಷವು ಭೀಮಸೇನನ ಗದೆಯಿಂದಾಗಲೀ ಪಾರ್ಥನ ಗಾಂಡೀವದಿಂದಾಗಲೀ ದೊರೆಯಲಿಲ್ಲ. ಅನಿಂದಿತೆ ಕೃಷ್ಣೆಯಿಂದಾಯಿತು!

05158030a ಸಾ ವೋ ದಾಸ್ಯಂ ಸಮಾಪನ್ನಾನ್ಮೋಕ್ಷಯಾಮಾಸ ಭಾಮಿನೀ।
05158030c ಅಮಾನುಷ್ಯಸಮಾಯುಕ್ತಾನ್ದಾಸ್ಯಕರ್ಮಣ್ಯವಸ್ಥಿತಾನ್।।

ಆ ಭಾಮಿನಿಯು ದಾಸ್ಯಕರ್ಮಗಳಲ್ಲಿ ವ್ಯವಸ್ಥಿತರಾಗಿದ್ದ, ಅಮಾನುಷರಾಗಿದ್ದ ನಿಮ್ಮ ದಾಸತ್ವವನ್ನು ಕೊನೆಗೊಳಿಸಿ ಬಿಡಿಸಿದಳು.

05158031a ಅವೋಚಂ ಯತ್ಷಂಡತಿಲಾನಹಂ ವಸ್ತಥ್ಯಮೇವ ತತ್।
05158031c ಧೃತಾ ಹಿ ವೇಣೀ ಪಾರ್ಥೇನ ವಿರಾಟನಗರೇ ತದಾ।।

ಆಗ ನಾನು ನಿಮ್ಮನ್ನು ಷಂಡತಿಲಕ್ಕೆ ಹೋಲಿಸಿ ಮಾತನಾಡಿದ್ದೆ. ಅದರಂತೆಯೇ ಪಾರ್ಥನು ವಿರಾಟನಗರದಲ್ಲಿ ಜಡೆಯನ್ನು ಕಟ್ಟಲಿಲ್ಲವೇ?

05158032a ಸೂದಕರ್ಮಣಿ ಚ ಶ್ರಾಂತಂ ವಿರಾಟಸ್ಯ ಮಹಾನಸೇ।
05158032c ಭೀಮಸೇನೇನ ಕೌಂತೇಯ ಯಚ್ಚ ತನ್ಮಮ ಪೌರುಷಂ।।

ವಿರಾಟನ ಅಡುಗೆಮನೆಯಲ್ಲಿ ಅಡುಗೆ ಮಾಡುತ್ತ ಭೀಮಸೇನನು ಸೋತುಹೋಗಿದ್ದ. ಕೌಂತೇಯ! ಇದೂ ಕೂಡ ನಿನ್ನ ಪೌರುಷವನ್ನು ಎತ್ತಿ ತೋರಿಸುತ್ತದೆ!

05158033a ಏವಮೇವ ಸದಾ ದಂಡಂ ಕ್ಷತ್ರಿಯಾಃ ಕ್ಷತ್ರಿಯೇ ದಧುಃ।
05158033c ಶ್ರೇಣ್ಯಾಂ ಕಕ್ಷ್ಯಾಂ ಚ ವೇಣ್ಯಾಂ ಚ ಸಂಯುಗೇ ಯಃ ಪಲಾಯತೇ।।

ಹೋರಾಟದಲ್ಲಿ ಜಡೆಯನ್ನು ಕಟ್ಟಿ, ಸೊಂಟಬಂದಿಯನ್ನು ಕಟ್ಟಿ, ಪಲಾಯನ ಮಾಡಿದ್ದೆಯಲ್ಲ! ಇದೇ ಕ್ಷತ್ರಿಯರು ಕ್ಷತ್ರಿಯರಿಗೆ ಸದಾ ನೀಡುವ ದಂಡ!

05158034a ನ ಭಯಾದ್ವಾಸುದೇವಸ್ಯ ನ ಚಾಪಿ ತವ ಫಲ್ಗುನ।
05158034c ರಾಜ್ಯಂ ಪ್ರತಿಪ್ರದಾಸ್ಯಾಮಿ ಯುಧ್ಯಸ್ವ ಸಹಕೇಶವಃ।।

ವಾಸುದೇವನ ಭಯದಿಂದಾಗಲೀ ಫಲ್ಗುನ! ನಿನ್ನ ಭಯದಿಂದಾಗಲೀ ನಾನು ರಾಜ್ಯವನ್ನು ಹಿಂದಿರುಗಿಸುವುದಿಲ್ಲ. ಕೇಶವನೊಂದಿಗೆ ಯುದ್ಧ ಮಾಡು.

05158035a ನ ಮಾಯಾ ಹೀಂದ್ರಜಾಲಂ ವಾ ಕುಹಕಾ ವಾ ವಿಭೀಷಣೀ।
05158035c ಆತ್ತಶಸ್ತ್ರಸ್ಯ ಮೇ ಯುದ್ಧೇ ವಹಂತಿ ಪ್ರತಿಗರ್ಜನಾಃ।।

ಮಾಯೆಯಾಗಲೀ, ಇಂದ್ರಜಾಲವಾಗಲೀ ಅಥವಾ ಕುಹಕವಾಗಲೀ ಶಸ್ತ್ರವನ್ನು ಹಿಡಿದು ಯುದ್ಧಮಾಡುವವನನ್ನು ಬೆದರಿಸಲಾರದು. ಅದು ಅವನ ಕೋಪವನ್ನು ಮಾತ್ರ ಹೆಚ್ಚಿಸಬಲ್ಲದು.

05158036a ವಾಸುದೇವಸಹಸ್ರಂ ವಾ ಫಲ್ಗುನಾನಾಂ ಶತಾನಿ ವಾ।
05158036c ಆಸಾದ್ಯ ಮಾಮಮೋಘೇಷುಂ ದ್ರವಿಷ್ಯಂತಿ ದಿಶೋ ದಶ।।

ಸಹಸ್ರ ವಾಸುದೇವರಾಗಲೀ ನೂರು ಫಲ್ಗುನಿಗಳಾಗಲೀ ನನ್ನ ರಭಸಕ್ಕೆ ಸಿಲುಕಿ ದಿಕ್ಕು ದಿಕ್ಕುಗಳಲ್ಲಿ ಹಾರಿ ಹೋಗುತ್ತಾರೆ.

05158037a ಸಂಯುಗಂ ಗಚ್ಚ ಭೀಷ್ಮೇಣ ಭಿಂಧಿ ತ್ವಂ ಶಿರಸಾ ಗಿರಿಂ।
05158037c ಪ್ರತರೇಮಂ ಮಹಾಗಾಧಂ ಬಾಹುಭ್ಯಾಂ ಪುರುಷೋದಧಿಂ।।

ಯುದ್ದದಲ್ಲಿ ಭೀಷ್ಮನನ್ನು ಎದುರಿಸು. ತಲೆಕುಟ್ಟಿ ಗಿರಿಯನ್ನು ಒಡೆ. ಎರಡು ಬಾಹುಗಳಿಂದ ಮಹಾ ಆಳವಾದ ಪುರುಷರ ಸಾಗರವನ್ನು ದಾಟಲು ಪ್ರಯತ್ನಿಸು.

05158038a ಶಾರದ್ವತಮಹೀಮಾನಂ ವಿವಿಂಶತಿಝಷಾಕುಲಂ।
05158038c ಬೃಹದ್ಬಲಸಮುಚ್ಚಾಲಂ ಸೌಮದತ್ತಿತಿಮಿಂಗಿಲಂ।।

ಶಾರದ್ವತನು ಅದರ ದೊಡ್ಡ ಮೀನು. ವಿವಿಂಶತಿಯು ಸಣ್ಣ ಮೀನುಗಳ ಸಂಕುಲ. ಬೃಹದ್ಬಲನು ಅಲೆಗಳು. ಮತ್ತು ಸೌಮದತ್ತಿಯು ತಿಮಿಂಗಿಲ.

05158039a ದುಃಶಾಸನೌಘಂ ಶಲಶಲ್ಯಮತ್ಸ್ಯಂ ಸುಷೇಣಚಿತ್ರಾಯುಧನಾಗನಕ್ರಂ।
05158039c ಜಯದ್ರಥಾದ್ರಿಂ ಪುರುಮಿತ್ರಗಾಧಂ ದುರ್ಮರ್ಷಣೋದಂ ಶಕುನಿಪ್ರಪಾತಂ।।

ದುಃಶಾಸನನು ಭಿರುಗಾಳಿ. ಶಲ್ಯನು ಮೀನು. ಚಿತ್ರಾಯುಧಗಳ ಸುಷೇಣನು ನಾಗ. ಜಯದ್ರಥನು ಗಿರಿ. ಪುರುಮಿತ್ರನು ಗಾಧ. ದುರ್ಮರ್ಷಣನು ನೀರು. ಶಕುನಿಯು ಪ್ರಪಾತ.

05158040a ಶಸ್ತ್ರೌಘಮಕ್ಷಯ್ಯಮತಿಪ್ರವೃದ್ಧಂ ಯದಾವಗಾಹ್ಯ ಶ್ರಮನಷ್ಟಚೇತಾಃ।
05158040c ಭವಿಷ್ಯಸಿ ತ್ವಂ ಹತಸರ್ವಬಾಂಧವಸ್ ತದಾ ಮನಸ್ತೇ ಪರಿತಾಪಮೇಷ್ಯತಿ।।

ಅಕ್ಷಯ ಶಸ್ತ್ರಗಳ ಭಿರುಗಾಳಿಯಿಂದ ಮೇಲೇಳುವ ಈ ಸಮುದ್ರದಲ್ಲಿ ನೀನು ಬೀಳಲು ಆಯಾಸಗೊಂಡು ಚೇತನವನ್ನು ಕಳೆದುಕೊಳ್ಳುತ್ತೀಯೆ. ಸರ್ವ ಬಾಂಧವರನ್ನೂ ಕಳೆದುಕೊಂಡು ನೀನು ಆಗ ಪರಿತಾಪ ಪಡುತ್ತೀಯೆ.

05158041a ತದಾ ಮನಸ್ತೇ ತ್ರಿದಿವಾದಿವಾಶುಚೇರ್ ನಿವರ್ತತಾಂ ಪಾರ್ಥ ಮಹೀಪ್ರಶಾಸನಾತ್।
05158041c ರಾಜ್ಯಂ ಪ್ರಶಾಸ್ತುಂ ಹಿ ಸುದುರ್ಲಭಂ ತ್ವಯಾ ಬುಭೂಷತಾ ಸ್ವರ್ಗ ಇವಾತಪಸ್ವಿನಾ।।

ಆಗ ಅಶುಚಿಯ ಮನಸ್ಸು ತ್ರಿದಿವದಿಂದ ಹೇಗೆ ಹಿಂದೆಸರಿಯುತ್ತದೆಯೋ ಹಾಗೆ ನಿನ್ನ ಮನಸ್ಸು ಭೂಮಿಯನ್ನು ಆಳಬೇಕೆನ್ನುವುದರಿಂದ ಹಿಂದೆ ಸರಿಯುತ್ತದೆ. ತಪಸ್ವಿಯಲ್ಲದವನಿಗೆ ಸ್ವರ್ಗವು ಹೇಗೋ ಹಾಗೆ ರಾಜ್ಯ ಪ್ರಶಾಸನೆಯು ನಿನಗೆ ದುರ್ಲಭವಾಗುತ್ತದೆ.”””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಉಲೂಕದೂತಾಗಮನ ಪರ್ವಣಿ ಉಲೂಕವಾಕ್ಯೇ ಅಷ್ಟಪಂಚಾಶದಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಉಲೂಕದೂತಾಗಮನ ಪರ್ವದಲ್ಲಿ ಉಲೂಕವಾಕ್ಯದಲ್ಲಿ ನೂರಾಐವತ್ತೆಂಟನೆಯ ಅಧ್ಯಾಯವು.