157 ದುರ್ಯೋಧನವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಉಲೂಕದೂತಾಗಮನ ಪರ್ವ

ಅಧ್ಯಾಯ 157

ಸಾರ

ದುರ್ಯೋಧನನು ಶಕುನಿಯ ಮಗ ಉಲೂಕನ ಮೂಲಕ ಪಾಂಡವರಿಗೆ ಅಪಮಾನಕಾರಕ ಸಂದೇಶವನ್ನು ಹೇಳಿ ಕಳುಹಿಸಿದುದು (1-18).

05157001 ಸಂಜಯ ಉವಾಚ।
05157001a ಹಿರಣ್ವತ್ಯಾಂ ನಿವಿಷ್ಟೇಷು ಪಾಂಡವೇಷು ಮಹಾತ್ಮಸು।
05157001c ದುರ್ಯೋಧನೋ ಮಹಾರಾಜ ಕರ್ಣೇನ ಸಹ ಭಾರತ।।
05157002a ಸೌಬಲೇನ ಚ ರಾಜೇಂದ್ರ ತಥಾ ದುಃಶಾಸನೇನ ಚ।
05157002c ಆಹೂಯೋಪಹ್ವರೇ ರಾಜನ್ನುಲೂಕಮಿದಮಬ್ರವೀತ್।।

ಸಂಜಯನು ಹೇಳಿದನು: “ಭಾರತ! ರಾಜನ್! ಹಿರಣ್ವತೀ ತೀರದಲ್ಲಿ ಮಹಾತ್ಮ ಪಾಂಡವರು ಬೀಡು ಬಿಟ್ಟಿರಲು ಮಹಾರಾಜ ದುರ್ಯೋಧನನು ಕರ್ಣನೊಂದಿಗೆ, ರಾಜೇಂದ್ರ ಸೌಬಲನೊಂದಿಗೆ ಮತ್ತು ದುಃಶಾಸನನೊಂದಿಗೆ ಇರುವಾಗ ಉಲೂಕನನ್ನು ಕರೆಯಿಸಿ ಹೀಗೆಂದನು:

05157003a ಉಲೂಕ ಗಚ್ಚ ಕೈತವ್ಯ ಪಾಂಡವಾನ್ಸಹಸೋಮಕಾನ್।
05157003c ಗತ್ವಾ ಮಮ ವಚೋ ಬ್ರೂಹಿ ವಾಸುದೇವಸ್ಯ ಶೃಣ್ವತಃ।।

“ಉಲೂಕ! ಕೈತವ್ಯ1! ಸೋಮಕರೊಂದಿಗಿರುವ ಪಾಂಡವರಲ್ಲಿಗೆ ಹೋಗು! ಹೋಗಿ ವಾಸುದೇವನು ಕೇಳುವಂತೆ ನನ್ನ ಮಾತುಗಳನ್ನು ಹೇಳು.

05157004a ಇದಂ ತತ್ಸಮನುಪ್ರಾಪ್ತಂ ವರ್ಷಪೂಗಾಭಿಚಿಂತಿತಂ।
05157004c ಪಾಂಡವಾನಾಂ ಕುರೂಣಾಂ ಚ ಯುದ್ಧಂ ಲೋಕಭಯಂಕರಂ।।

“ಬಹಳ ವರ್ಷಗಳಿಂದ ಕಾದುಕೊಂಡಿರುವ ಲೋಕಭಯಂಕರವಾದ, ಪಾಂಡವರ ಮತ್ತು ಕುರುಗಳ ನಡುವಿನ ಯುದ್ಧವು ಬಂದೊದಗಿದೆ.

05157005a ಯದೇತತ್ಕತ್ಥನಾವಾಕ್ಯಂ ಸಂಜಯೋ ಮಹದಬ್ರವೀತ್।
05157005c ಮಧ್ಯೇ ಕುರೂಣಾಂ ಕೌಂತೇಯ ತಸ್ಯ ಕಾಲೋಽಯಮಾಗತಃ।
05157005e ಯಥಾ ವಃ ಸಂಪ್ರತಿಜ್ಞಾತಂ ತತ್ಸರ್ವಂ ಕ್ರಿಯತಾಮಿತಿ।।

ಕೌಂತೇಯ! ಕುರುಗಳ ಮಧ್ಯೆ ಸಂಜಯನು ಹೇಳಿದ ನೀವು ಜೋರಾಗಿ ಕೊಚ್ಚಿಕೊಂಡಿರುವವುಗಳನ್ನು ತೋರಿಸುವ ಕಾಲವು ಬಂದೊದಗಿದೆ. ನೀವು ಹೇಗೆ ಪ್ರತಿಜ್ಞೆ ಮಾಡಿದ್ದಿರೋ ಅವೆಲ್ಲವನ್ನೂ ಮಾಡಿತೋರಿಸಿ.

05157006a ಅಮರ್ಷಂ ರಾಜ್ಯಹರಣಂ ವನವಾಸಂ ಚ ಪಾಂಡವ।
05157006c ದ್ರೌಪದ್ಯಾಶ್ಚ ಪರಿಕ್ಲೇಶಂ ಸಂಸ್ಮರನ್ಪುರುಷೋ ಭವ।।

ಪಾಂಡವ! ಕ್ರೂರವಾದ ರಾಜ್ಯಹರಣ, ವನವಾಸ, ಮತ್ತು ದ್ರೌಪದಿಯ ಪರಿಕ್ಲೇಶಗಳನ್ನು ಸ್ಮರಿಸಿಕೊಂಡು ಪುರುಷರಾಗಿರಿ.

05157007a ಯದರ್ಥಂ ಕ್ಷತ್ರಿಯಾ ಸೂತೇ ಗರ್ಭಂ ತದಿದಮಾಗತಂ।
05157007c ಬಲಂ ವೀರ್ಯಂ ಚ ಶೌರ್ಯಂ ಚ ಪರಂ ಚಾಪ್ಯಸ್ತ್ರಲಾಘವಂ।
05157007e ಪೌರುಷಂ ದರ್ಶಯನ್ ಯುದ್ಧೇ ಕೋಪಸ್ಯ ಕುರು ನಿಷ್ಕೃತಿಂ।।

ಒಂದುವೇಳೆ ಕ್ಷತ್ರಿಯ ಗರ್ಭದಿಂದ ಹುಟ್ಟಿ ಬಂದಿರುವುದೇ ಆಗಿದ್ದರೆ ಬಲವನ್ನೂ, ಶೌರ್ಯವನ್ನೂ, ಉತ್ತಮ ಅಸ್ತ್ರಲಾಘವವನ್ನೂ, ಪೌರುಷವನ್ನೂ ಪ್ರದರ್ಶಿಸಿ ಕೋಪಕ್ಕೆ ಮುಕ್ತಾಯವನ್ನು ಮಾಡು.

05157008a ಪರಿಕ್ಲಿಷ್ಟಸ್ಯ ದೀನಸ್ಯ ದೀರ್ಘಕಾಲೋಷಿತಸ್ಯ ಚ।
05157008c ನ ಸ್ಫುಟೇದ್ಧೃದಯಂ ಕಸ್ಯ ಐಶ್ವರ್ಯಾದ್ಭ್ರಂಶಿತಸ್ಯ ಚ।।

ಐಶ್ವರ್ಯದಿಂದ ಭ್ರಂಶಿತನಾಗಿ ದೀರ್ಘಕಾಲದವರೆಗೆ ದೀನನಾಗಿ, ಪರಿಕ್ಲಿಷ್ಟಗಳನ್ನು ಅನುಭವಿಸಿರುವ ಯಾರ ಹೃದಯವು ತಾನೇ ಒಡೆಯುವುದಿಲ್ಲ?

05157009a ಕುಲೇ ಜಾತಸ್ಯ ಶೂರಸ್ಯ ಪರವಿತ್ತೇಷು ಗೃಧ್ಯತಃ।
05157009c ಆಚ್ಚಿನ್ನಂ ರಾಜ್ಯಮಾಕ್ರಮ್ಯ ಕೋಪಂ ಕಸ್ಯ ನ ದೀಪಯೇತ್।।

ಉತ್ತಮ ಕುಲದಲ್ಲಿ ಜನಿಸಿ, ಪರರ ವಿತ್ತವನ್ನು ಬಯಸುವವನು ರಾಜ್ಯವನ್ನೇ ಚೂರುಮಾಡಿ ಆಕ್ರಮಿಸಿರುವಾಗ ಯಾರು ತಾನೇ ಕೋಪದಿಂದ ಉರಿಯುವುದಿಲ್ಲ?

05157010a ಯತ್ತದುಕ್ತಂ ಮಹದ್ವಾಕ್ಯಂ ಕರ್ಮಣಾ ತದ್ವಿಭಾವ್ಯತಾಂ।
05157010c ಅಕರ್ಮಣಾ ಕತ್ಥಿತೇನ ಸಂತಃ ಕುಪುರುಷಂ ವಿದುಃ।।

ನೀನು ಹೇಳುವ ಮಹಾವಾಕ್ಯವನ್ನು ಕರ್ಮದ ಮೂಲಕ ಮಾಡಿ ತೋರಿಸು! ಕೆಲಸಮಾಡದೇ ಜಂಬಕೊಚ್ಚಿಕೊಳ್ಳುವವನನ್ನು ಸಂತರು ಕುಪುರುಷನೆಂದು ತಿಳಿಯುತ್ತಾರೆ.

05157011a ಅಮಿತ್ರಾಣಾಂ ವಶೇ ಸ್ಥಾನಂ ರಾಜ್ಯಸ್ಯ ಚ ಪುನರ್ಭವಃ।
05157011c ದ್ವಾವರ್ಥೌ ಯುಧ್ಯಮಾನಸ್ಯ ತಸ್ಮಾತ್ಕುರುತ ಪೌರುಷಂ।।

ಯುದ್ದಮಾಡುವವರು ಈ ಎರಡಕ್ಕಾಗಿ ಯುದ್ಧಮಾಡುತ್ತಾರೆ - ಶತ್ರುಗಳಿಂದ ಸ್ಥಾನವನ್ನು ಪಶಪಡಿಸಿಕೊಳ್ಳಲು ಮತ್ತು ರಾಜ್ಯವನ್ನು ಪುನಃ ಪಡೆದುಕೊಳ್ಳಲು. ಆದುದರಂತೆ ಪುರುಷನಂತೆ ನಡೆದುಕೋ.

05157012a ಅಸ್ಮಾನ್ವಾ ತ್ವಂ ಪರಾಜಿತ್ಯ ಪ್ರಶಾಧಿ ಪೃಥಿವೀಮಿಮಾಂ।
05157012c ಅಥ ವಾ ನಿಹತೋಽಸ್ಮಾಭಿರ್ವೀರಲೋಕಂ ಗಮಿಷ್ಯಸಿ।।

ನಾವು ಅಥವಾ ನೀನು ಗೆದ್ದು ಈ ಪೃಥ್ವಿಯನ್ನು ಆಳೋಣ. ಅಥವಾ ನಮ್ಮಿಂದ ಕೊಲ್ಲಲ್ಪಟ್ಟು ವೀರಸ್ವರ್ಗಕ್ಕೆ ಹೋಗುತ್ತೀಯೆ.

05157013a ರಾಷ್ಟ್ರಾತ್ಪ್ರವ್ರಾಜನಂ ಕ್ಲೇಶಂ ವನವಾಸಂ ಚ ಪಾಂಡವ।
05157013c ಕೃಷ್ಣಾಯಾಶ್ಚ ಪರಿಕ್ಲೇಶಂ ಸಂಸ್ಮರನ್ಪುರುಷೋ ಭವ।।

ಪಾಂಡವ! ರಾಷ್ಟ್ರದಿಂದ ಹೊರಗಟ್ಟಿದುದನ್ನು, ವನವಾಸದ ಕ್ಲೇಶವನ್ನು, ಕೃಷ್ಣೆಯ ಪರಿಕ್ಲೇಶವನ್ನು ನೆನಪಿಸಿಕೊಂಡು ಪುರುಷನಾಗು.

05157014a ಅಪ್ರಿಯಾಣಾಂ ಚ ವಚನೇ ಪ್ರವ್ರಜತ್ಸು ಪುನಃ ಪುನಃ।
05157014c ಅಮರ್ಷಂ ದರ್ಶಯಾದ್ಯ ತ್ವಮಮರ್ಷೋ ಹ್ಯೇವ ಪೌರುಷಂ।।

ಪುನಃ ಪುನಃ ಬಂದು ಚುಚ್ಚುವ ಅಪ್ರಿಯರ ವಚನಗಳಿಗೆ ಸಿಟ್ಟನ್ನು ತೋರಿಸು. ಏಕೆಂದರೆ ಸಿಟ್ಟೇ ಪೌರುಷದ ಲಕ್ಷಣ.

05157015a ಕ್ರೋಧೋ ಬಲಂ ತಥಾ ವೀರ್ಯಂ ಜ್ಞಾನಯೋಗೋಽಸ್ತ್ರಲಾಘವಂ।
05157015c ಇಹ ತೇ ಪಾರ್ಥ ದೃಶ್ಯಂತಾಂ ಸಂಗ್ರಾಮೇ ಪುರುಷೋ ಭವ।।

ಪಾರ್ಥ! ಸಂಗ್ರಾಮದಲ್ಲಿ ನಿನ್ನ ಕ್ರೋಧ, ಬಲ, ವೀರ್ಯ, ಜ್ಞಾನಯೋಗ ಮತ್ತು ಅಸ್ತ್ರಲಾಘವವನ್ನು ತೋರಿಸು. ಪುರುಷನಾಗು.”

05157016a ತಂ ಚ ತೂಬರಕಂ ಮೂಢಂ ಬಹ್ವಾಶಿನಮವಿದ್ಯಕಂ।
05157016c ಉಲೂಕ ಮದ್ವಚೋ ಬ್ರೂಯಾ ಅಸಕೃದ್ ಭೀಮಸೇನಕಂ।।

ಉಲೂಕ! ಆ ಶಂಡ, ಮೂಢ, ತುಂಬಾ ತಿನ್ನುವ, ಅವಿದ್ಯಕ ಭೀಮಸೇನನಿಗೆ ನನ್ನ ಮಾತುಗಳನ್ನು ಮತ್ತೊಮ್ಮೆ ಹೇಳು.

05157017a ಅಶಕ್ತೇನೈವ ಯಚ್ಚಪ್ತಂ ಸಭಾಮಧ್ಯೇ ವೃಕೋದರ।
05157017c ದುಃಶಾಸನಸ್ಯ ರುಧಿರಂ ಪೀಯತಾಂ ಯದಿ ಶಕ್ಯತೇ।।

“ವೃಕೋದರ! ಅಶಕ್ತನಂತೆ ಸಭಾಮಧ್ಯದಲ್ಲಿ ಶಪಿಸಿರುವಂತೆ, ಒಂದುವೇಳೆ ಶಕ್ಯನಾದರೆ ದುಃಶಾಸನನ ರಕ್ತವನ್ನು ಕುಡಿ!

05157018a ಲೋಹಾಭಿಹಾರೋ ನಿರ್ವೃತ್ತಃ ಕುರುಕ್ಷೇತ್ರಮಕರ್ದಮಂ।
05157018c ಪುಷ್ಟಾಸ್ತೇಽಶ್ವಾ ಭೃತಾ ಯೋಧಾಃಽಶ್ವೋ ಯುಧ್ಯಸ್ವ ಸಕೇಶವಃ।।

ಆಯುಧಗಳಿಗೆ ಅರಕವಿಟ್ಟಾಗಿದೆ, ನಿನ್ನ ಸೈನಿಕರು ಮತ್ತು ಕುದುರೆಗಳು ದಷ್ಟಪುಷ್ಟವಾಗಿವೆ. ಕೇಶವನೊಂದಿಗೆ ಕುರುಕ್ಷೇತ್ರಕ್ಕೆ ಬಂದು ಯುದ್ಧಮಾಡು!”””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಉಲೂಕದೂತಾಗಮನ ಪರ್ವಣಿ ದುರ್ಯೋಧನವಾಕ್ಯೇ ಸಪ್ತಪಂಚಾಶದಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಉಲೂಕದೂತಾಗಮನ ಪರ್ವದಲ್ಲಿ ದುರ್ಯೋಧನವಾಕ್ಯದಲ್ಲಿ ನೂರಾಐವತ್ತೇಳನೆಯ ಅಧ್ಯಾಯವು.


  1. ಜೂಜಾಡುವುದರಲ್ಲಿ ಕುಶಲನಾದವನ ಮಗ ↩︎