ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಭೀಷ್ಮಾಭಿಷೇಚನ ಪರ್ವ
ಅಧ್ಯಾಯ 156
ಸಾರ
“ದೋಷಗಳೆಲ್ಲವನ್ನೂ ದುರ್ಯೋಧನನ ಮೇಲೆ ಹಾಕುವುದು ಸರಿಯಲ್ಲ” ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದುದು (1-15).
05156001 ಜನಮೇಜಯ ಉವಾಚ।
05156001a ತಥಾ ವ್ಯೂಢೇಷ್ವನೀಕೇಷು ಕುರುಕ್ಷೇತ್ರೇ ದ್ವಿಜರ್ಷಭ।
05156001c ಕಿಮಕುರ್ವಂತ ಕುರವಃ ಕಾಲೇನಾಭಿಪ್ರಚೋದಿತಾಃ।।
ಜನಮೇಜಯನು ಹೇಳಿದನು: “ದ್ವಿಜರ್ಷಭ! ಹೀಗೆ ಕುರುಕ್ಷೇತ್ರದಲ್ಲಿ ಯುದ್ಧಕ್ಕೆ ಸೇನೆಗಳು ಸೇರಲು ಕಾಲದಿಂದ ಪ್ರಚೋದಿತರಾದ ಕೌರವರು ಏನು ಮಾಡಿದರು?”
05156002 ವೈಶಂಪಾಯನ ಉವಾಚ।
05156002a ತಥಾ ವ್ಯೂಢೇಷ್ವನೀಕೇಷು ಯತ್ತೇಷು ಭರತರ್ಷಭ।
05156002c ಧೃತರಾಷ್ಟ್ರೋ ಮಹಾರಾಜ ಸಂಜಯಂ ವಾಕ್ಯಮಬ್ರವೀತ್।।
ವೈಶಂಪಾಯನನು ಹೇಳಿದನು: “ಭರತರ್ಷಭ! ಹೋರಾಡಲು ಸೇನೆಗಳು ಸೇರಿರಲು ಮಹಾರಾಜ ಧೃತರಾಷ್ಟ್ರನು ಸಂಜಯನಿಗೆ ಹೇಳಿದನು:
05156003a ಏಹಿ ಸಂಜಯ ಮೇ ಸರ್ವಮಾಚಕ್ಷ್ವಾನವಶೇಷತಃ।
05156003c ಸೇನಾನಿವೇಶೇ ಯದ್ವೃತ್ತಂ ಕುರುಪಾಂಡವಸೇನಯೋಃ।।
“ಸಂಜಯ! ಬಾ! ಕುರುಪಾಂಡವ ಸೇನೆಗಳಲ್ಲಿ ಸೇನಾ ನಿವೇಶನಗಳಲ್ಲಿ ಏನೆಲ್ಲ ನಡೆಯಿತೋ ಅವೆಲ್ಲವನ್ನೂ ಏನನ್ನೂ ಬಿಡದೇ ನನಗೆ ಹೇಳು.
05156004a ದಿಷ್ಟಮೇವ ಪರಂ ಮನ್ಯೇ ಪೌರುಷಂ ಚಾಪ್ಯನರ್ಥಕಂ।
05156004c ಯದಹಂ ಜಾನಮಾನೋಽಪಿ ಯುದ್ಧದೋಷಾನ್ ಕ್ಷಯೋದಯಾನ್।।
ದೈವವೇ ಹೆಚ್ಚಿನದು ಮತ್ತು ಪುರುಷಪ್ರಯತ್ನಗಳು ಅನರ್ಥಕವೆಂದು ತಿಳಿದುಕೊಂಡಿದ್ದೇನೆ. ಕ್ಷಯವನ್ನು ಪ್ರಾರಂಭಿಸುವ ಯುದ್ಧದ ದೋಷಗಳನ್ನೂ ತಿಳಿದುಕೊಂಡಿದ್ದೇನೆ.
05156005a ತಥಾಪಿ ನಿಕೃತಿಪ್ರಜ್ಞಾಂ ಪುತ್ರಂ ದುರ್ದ್ಯೂತದೇವಿನಂ।
05156005c ನ ಶಕ್ನೋಮಿ ನಿಯಂತುಂ ವಾ ಕರ್ತುಂ ವಾ ಹಿತಮಾತ್ಮನಃ।।
ಆದರೂ ಕೆಟ್ಟ ಪ್ರಜ್ಞೆಯುಳ್ಳ, ಮೋಸದ ದ್ಯೂತವನ್ನಾಡುವ ಪುತ್ರನನ್ನು ನಿಯಂತ್ರಿಸಲು ಮತ್ತು ನನ್ನ ಹಿತದಲ್ಲಿರುವಂತೆ ಮಾಡಲೂ ಅಶಕ್ತನಾಗಿದ್ದೇನೆ.
05156006a ಭವತ್ಯೇವ ಹಿ ಮೇ ಸೂತ ಬುದ್ಧಿರ್ದೋಷಾನುದರ್ಶಿನೀ।
05156006c ದುರ್ಯೋಧನಂ ಸಮಾಸಾದ್ಯ ಪುನಃ ಸಾ ಪರಿವರ್ತತೇ।।
ಸೂತ! ದುರ್ಯೋಧನನ ಬಳಿಯಿರುವಾಗ ನನ್ನ ಬುದ್ಧಿಯು ದೋಷಗಳನ್ನು ಕಾಣುವುದಿಲ್ಲ. ಆದರೆ ಅವನಿಲ್ಲದಿರುವಾಗ ಪುನಃ ಅದು ಹಿಂದಿನ ಸ್ಥಿತಿಗೆ ಬರುತ್ತದೆ.
05156007a ಏವಂ ಗತೇ ವೈ ಯದ್ಭಾವಿ ತದ್ಭವಿಷ್ಯತಿ ಸಂಜಯ।
05156007c ಕ್ಷತ್ರಧರ್ಮಃ ಕಿಲ ರಣೇ ತನುತ್ಯಾಗೋಽಭಿಪೂಜಿತಃ।।
ಸಂಜಯ! ಆಗಬೇಕಾದುದು ಆಗಿಯೇ ಆಗುತ್ತದೆ. ಹಾಗಿರುವಾಗ ರಣದಲ್ಲಿ ದೇಹವನ್ನು ತ್ಯಾಗಿಸುವುದು ಪೂಜಿತವಾದ ಕ್ಷತ್ರಿಯಧರ್ಮವಲ್ಲವೇ?”
05156008 ಸಂಜಯ ಉವಾಚ।
05156008a ತ್ವದ್ಯುಕ್ತೋಽಯಮನುಪ್ರಶ್ನೋ ಮಹಾರಾಜ ಯಥಾರ್ಹಸಿ।
05156008c ನ ತು ದುರ್ಯೋಧನೇ ದೋಷಮಿಮಮಾಸಕ್ತುಮರ್ಹಸಿ।
05156008e ಶೃಣುಷ್ವಾನವಶೇಷೇಣ ವದತೋ ಮಮ ಪಾರ್ಥಿವ।।
ಸಂಜಯನು ಹೇಳಿದನು: “ಮಹಾರಾಜ! ನೀನು ಕೇಳಿರುವ ಈ ಪ್ರಶ್ನೆಯು ಯುಕ್ತವಾದುದೇ. ನಿನಗೆ ತಕ್ಕುದೇ ಆಗಿದೆ. ಆದರೆ ದೋಷಗಳನ್ನೆಲ್ಲವನ್ನೂ ದುರ್ಯೋಧನನ ಮೇಲೆ ಹಾಕುವುದು ಸರಿಯಲ್ಲ. ಪಾರ್ಥಿವ! ಇದರ ಕುರಿತು ನಾನು ಹೇಳುವ ಮಾತುಗಳನ್ನು ಸಂಪೂರ್ಣವಾಗಿ ಕೇಳು.
05156009a ಯ ಆತ್ಮನೋ ದುಶ್ಚರಿತಾದಶುಭಂ ಪ್ರಾಪ್ನುಯಾನ್ನರಃ।
05156009c ಏನಸಾ ನ ಸ ದೈವಂ ವಾ ಕಾಲಂ ವಾ ಗಂತುಮರ್ಹತಿ।।
ತನ್ನದೇ ಕೆಟ್ಟ ನಡತೆಯಿಂದ ಅಶುಭವನ್ನು ಪಡೆದ ನರನು ದೈವವನ್ನಾಗಲೀ ಕಾಲವನ್ನಾಗಲೀ ನಿಂದಿಸುವುದು ಸರಿಯಲ್ಲ.
05156010a ಮಹಾರಾಜ ಮನುಷ್ಯೇಷು ನಿಂದ್ಯಂ ಯಃ ಸರ್ವಮಾಚರೇತ್।
05156010c ಸ ವಧ್ಯಃ ಸರ್ವಲೋಕಸ್ಯ ನಿಂದಿತಾನಿ ಸಮಾಚರನ್।।
ಮಹಾರಾಜ! ಸರ್ವ ದುಷ್ಟಪ್ರವೃತ್ತಿಯನ್ನು ಮುಂದುವರಿಸಿಕೊಂಡು ಹೋಗುವ ಮನುಷ್ಯನನ್ನು ನಿಂದನೀಯವಾದುಗಳನ್ನು ಮುಂದುವರೆಸಿಕೊಂಡು ಹೋಗಿದ್ದುದಕ್ಕೆ ಸರ್ವಲೋಕದಲ್ಲಿಯೂ ವಧ್ಯನಾಗುತ್ತಾನೆ.
05156011a ನಿಕಾರಾ ಮನುಜಶ್ರೇಷ್ಠ ಪಾಂಡವೈಸ್ತ್ವತ್ಪ್ರತೀಕ್ಷಯಾ।
05156011c ಅನುಭೂತಾಃ ಸಹಾಮಾತ್ಯೈರ್ನಿಕೃತೈರಧಿದೇವನೇ।।
ಮನುಜಶ್ರೇಷ್ಠ! ಮೋಸದಿಂದ ದ್ಯೂತದಲ್ಲಿ ಸೋಲಿಸಲ್ಪಟ್ಟ ಪಾಂಡವರು ಅಮಾತ್ಯರೊಂದಿಗೆ ನಿನ್ನ ಮುಖವನ್ನೇ ನೋಡಿಕೊಂಡು ಎಲ್ಲ ದುಃಖಗಳನ್ನೂ ಸಹಿಸಿಕೊಂಡರು.
05156012a ಹಯಾನಾಂ ಚ ಗಜಾನಾಂ ಚ ರಾಜ್ಞಾಂ ಚಾಮಿತತೇಜಸಾಂ।
05156012c ವೈಶಸಂ ಸಮರೇ ವೃತ್ತಂ ಯತ್ತನ್ಮೇ ಶೃಣು ಸರ್ವಶಃ।।
ಸಮರದಲ್ಲಿ ಕುದುರೆಗಳ, ಆನೆಗಳ, ಅಮಿತತೇಜಸ ರಾಜರ ಸಂಹಾರವು ನಡೆಯುವುದೆಲ್ಲವನ್ನೂ ನನ್ನಿಂದ ಕೇಳು.
05156013a ಸ್ಥಿರೋ ಭೂತ್ವಾ ಮಹಾರಾಜ ಸರ್ವಲೋಕಕ್ಷಯೋದಯಂ।
05156013c ಯಥಾಭೂತಂ ಮಹಾಯುದ್ಧೇ ಶ್ರುತ್ವಾ ಮಾ ವಿಮನಾ ಭವ।।
ಮಹಾರಾಜ! ಸ್ಥಿರವಾಗಿದ್ದುಕೊಂಡು ಸರ್ವಲೋಕಗಳ ಕ್ಷಯವನ್ನು ತರುವ ಮಹಾಯುದ್ಧವು ಹೇಗೆ ನಡೆಯಿತೆನ್ನುವುದನ್ನು ನನ್ನಿಂದ ಕೇಳಿ ವಿಮನಸ್ಕನಾಗು.
05156014a ನ ಹ್ಯೇವ ಕರ್ತಾ ಪುರುಷಃ ಕರ್ಮಣೋಃ ಶುಭಪಾಪಯೋಃ।
05156014c ಅಸ್ವತಂತ್ರೋ ಹಿ ಪುರುಷಃ ಕಾರ್ಯತೇ ದಾರುಯಂತ್ರವತ್।।
ಪುರುಷನು ಶುಭ ಅಥವಾ ಅಶುಭ ಯಾವ ಕರ್ಮಗಳ ಕರ್ತಾರನೂ ಅಲ್ಲ. ಅಸ್ವತಂತ್ರನಾಗಿರುವ ಪುರುಷನು ದಾರಕ್ಕೆ ಕಟ್ಟಿದ ಯಂತ್ರದಂತೆ ಕರ್ಮಗಳನ್ನು ಮಾಡುತ್ತಾನೆ.
05156015a ಕೇ ಚಿದೀಶ್ವರನಿರ್ದಿಷ್ಟಾಃ ಕೇ ಚಿದೇವ ಯದೃಚ್ಚಯಾ।
05156015c ಪೂರ್ವಕರ್ಮಭಿರಪ್ಯನ್ಯೇ ತ್ರೈಧಮೇತದ್ವಿಕೃಷ್ಯತೇ।।
ಕೆಲವರು ಈಶ್ವರನು ನಿರ್ಧರಿಸುತ್ತಾನೆ ಎಂದೂ ಕೆಲವರು ನಡೆಯುವುದೆಲ್ಲವೂ ನಮ್ಮ ಸ್ವ-ಇಚ್ಛೆಯಿಂದ ಆಗುವುದೆಂದೂ ಮತ್ತು ಅನ್ಯರು ಪೂರ್ವಕರ್ಮಗಳಿಂದ ಎಲ್ಲವೂ ನಡೆಯುವವೆಂದು - ಹೀಗೆ ಮೂರು ರೀತಿಯ ಅಭಿಪ್ರಾಯಗಳಿವೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭೀಷ್ಮಾಭಿಷೇಚನ ಪರ್ವಣಿ ಸಂಜಯವಾಕ್ಯೇ ಷಟ್ಪಂಚಾಶದಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭೀಷ್ಮಾಭಿಷೇಚನ ಪರ್ವದಲ್ಲಿ ಸಂಜಯವಾಕ್ಯದಲ್ಲಿ ನೂರಾಐವತ್ತಾರನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭೀಷ್ಮಾಭಿಷೇಚನ ಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭೀಷ್ಮಾಭಿಷೇಚನ ಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-4/18, ಉಪಪರ್ವಗಳು-57/100, ಅಧ್ಯಾಯಗಳು-819/1995, ಶ್ಲೋಕಗಳು-26687/73784.