ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಸೇನಾನಿರ್ಯಾಣ ಪರ್ವ
ಅಧ್ಯಾಯ 150
ಸಾರ
ಕೃಷ್ಣನು ಹೊರಟುಹೋದ ನಂತರ ದುರ್ಯೋಧನನು ಯುದ್ಧದ ತಯಾರಿ ನಡೆಸಿ ಮರುದಿನವೇ ಸೇನೆಯು ಕುರುಕ್ಷೇತ್ರಕ್ಕೆ ಹೊರಡಬೇಕೆಂದು ಆಜ್ಞಾಪಿಸಿದುದು (1-16). ಹಸ್ತಿನಾಪುರದಲ್ಲಿ ನಡೆದ ಯುದ್ಧ ಸಿದ್ಧತೆ (17-27).
05150001 ಜನಮೇಜಯ ಉವಾಚ।
05150001a ಯುಧಿಷ್ಠಿರಂ ಸಹಾನೀಕಮುಪಯಾಂತಂ ಯುಯುತ್ಸಯಾ।
05150001c ಸಂನಿವಿಷ್ಟಂ ಕುರುಕ್ಷೇತ್ರೇ ವಾಸುದೇವೇನ ಪಾಲಿತಂ।।
05150002a ವಿರಾಟದ್ರುಪದಾಭ್ಯಾಂ ಚ ಸಪುತ್ರಾಭ್ಯಾಂ ಸಮನ್ವಿತಂ।
05150002c ಕೇಕಯೈರ್ವೃಷ್ಣಿಭಿಶ್ಚೈವ ಪಾರ್ಥಿವೈಃ ಶತಶೋ ವೃತಂ।।
05150003a ಮಹೇಂದ್ರಮಿವ ಚಾದಿತ್ಯೈರಭಿಗುಪ್ತಂ ಮಹಾರಥೈಃ।
05150003c ಶ್ರುತ್ವಾ ದುರ್ಯೋಧನೋ ರಾಜಾ ಕಿಂ ಕಾರ್ಯಂ ಪ್ರತ್ಯಪದ್ಯತ।।
ಜನಮೇಜಯನು ಹೇಳಿದನು: “ವಾಸುದೇವನಿಂದ ಪಾಲಿತನಾಗಿ, ವಿರಾಟ-ದ್ರುಪದರು ಮತ್ತು ಅವರ ಮಕ್ಕಳೊಡಗೂಡಿ, ಮಹೇಂದ್ರನು ಆದಿತ್ಯರಿಂದ ಕಾಯಲ್ಪಡುವಂತೆ ಕೇಕಯ-ವೃಷ್ಣಿಗಳ ನೂರಾರು ಮಹಾರಥ ಪಾರ್ಥಿವರಿಂದ ಸುತ್ತುವರೆಯಲ್ಪಟ್ಟು, ಯುಧಿಷ್ಠಿರನು ಯುದ್ಧಮಾಡಲು ತನ್ನ ಸೇನೆಯೊಂದಿಗೆ ಬಂದು ಕುರುಕ್ಷೇತ್ರದಲ್ಲಿ ಬೀಡುಬಿಟ್ಟಿದ್ದಾನೆ ಎಂದು ಕೇಳಿ ರಾಜಾ ದುರ್ಯೋಧನನು ಏನು ಮಾಡಿದನು?
05150004a ಏತದಿಚ್ಚಾಮ್ಯಹಂ ಶ್ರೋತುಂ ವಿಸ್ತರೇಣ ತಪೋಧನ।
05150004c ಸಂಭ್ರಮೇ ತುಮುಲೇ ತಸ್ಮಿನ್ಯದಾಸೀತ್ಕುರುಜಾಂಗಲೇ।।
ತಪೋಧನ! ಕುರುಜಾಂಗಲದಲ್ಲಿ ನಡೆದ ತುಮುಲ-ಸಂಭ್ರಮಗಳನ್ನು ವಿಸ್ತಾರವಾಗಿ ಕೇಳಲು ಬಯಸುತ್ತೇನೆ.
05150005a ವ್ಯಥಯೇಯುರ್ಹಿ ದೇವಾನಾಂ ಸೇನಾಮಪಿ ಸಮಾಗಮೇ।
05150005c ಪಾಂಡವಾ ವಾಸುದೇವಶ್ಚ ವಿರಾಟದ್ರುಪದೌ ತಥಾ।।
05150006a ಧೃಷ್ಟದ್ಯುಮ್ನಶ್ಚ ಪಾಂಚಾಲ್ಯಃ ಶಿಖಂಡೀ ಚ ಮಹಾರಥಃ।
05150006c ಯುಯುಧಾನಶ್ಚ ವಿಕ್ರಾಂತೋ ದೇವೈರಪಿ ದುರಾಸದಃ।।
ದೇವಸೇನೆಯೊಂದಿಗೆ ದೇವತೆಗಳೂ ಈ ದುರಾಸದ ಪಾಂಡವರು, ವಾಸುದೇವ, ವಿರಾಟ, ದ್ರುಪದ, ಪಾಂಚಾಲ್ಯ ಧೃಷ್ಟದ್ಯುಮ್ನ, ಮಹಾರಥಿ ಶಿಖಂಡೀ ಮತ್ತು ವಿಕ್ರಾಂತ ಯುಯುಧಾನರನ್ನು ಸಮರದಲ್ಲಿ ಎದುರಿಸುವ ಮೊದಲು ತತ್ತರಿಸಿಯಾರು.
05150007a ಏತದಿಚ್ಚಾಮ್ಯಹಂ ಶ್ರೋತುಂ ವಿಸ್ತರೇಣ ತಪೋಧನ।
05150007c ಕುರೂಣಾಂ ಪಾಂಡವಾನಾಂ ಚ ಯದ್ಯದಾಸೀದ್ವಿಚೇಷ್ಟಿತಂ।।
ತಪೋದನ! ಕುರು ಮತ್ತು ಪಾಂಡವರು ಆಗ ಮಾಡಿದುದನ್ನು ವಿಸ್ತಾರವಾಗಿ ಕೇಳಲು ಬಯಸುತ್ತೇನೆ.”
05150008 ವೈಶಂಪಾಯನ ಉವಾಚ।
05150008a ಪ್ರತಿಯಾತೇ ತು ದಾಶಾರ್ಹೇ ರಾಜಾ ದುರ್ಯೋಧನಸ್ತದಾ।
05150008c ಕರ್ಣಂ ದುಃಶಾಸನಂ ಚೈವ ಶಕುನಿಂ ಚಾಬ್ರವೀದಿದಂ।।
ವೈಶಂಪಾಯನನು ಹೇಳಿದನು: “ದಾಶಾರ್ಹನು ಹೊರಟು ಹೋದ ನಂತರ ರಾಜಾ ದುರ್ಯೋಧನನು ಕರ್ಣ, ದುಃಶಾಸನ ಮತ್ತು ಶಕುನಿಯರಿಗೆ ಹೇಳಿದನು:
05150009a ಅಕೃತೇನೈವ ಕಾರ್ಯೇಣ ಗತಃ ಪಾರ್ಥಾನಧೋಕ್ಷಜಃ।
05150009c ಸ ಏನಾನ್ಮನ್ಯುನಾವಿಷ್ಟೋ ಧ್ರುವಂ ವಕ್ಷ್ಯತ್ಯಸಂಶಯಂ।।
“ಅಧೋಕ್ಷಜನು ಕಾರ್ಯವು ನಡೆಯಲಿಲ್ಲವೆಂದು ಪಾರ್ಥರಲ್ಲಿಗೆ ಹೋಗಿ ಸಿಟ್ಟಿನಿಂದ ಖಂಡಿತವಾಗಿಯೂ ಮಾತನಾಡಿರುತ್ತಾನೆ. ಇದರಲ್ಲಿ ಸಂಶಯವಿಲ್ಲ.
05150010a ಇಷ್ಟೋ ಹಿ ವಾಸುದೇವಸ್ಯ ಪಾಂಡವೈರ್ಮಮ ವಿಗ್ರಹಃ।
05150010c ಭೀಮಸೇನಾರ್ಜುನೌ ಚೈವ ದಾಶಾರ್ಹಸ್ಯ ಮತೇ ಸ್ಥಿತೌ।।
ಏಕೆಂದರೆ ವಾಸುದೇವನು ಪಾಂಡವರು ಮತ್ತು ನನ್ನ ನಡುವೆ ಯುದ್ಧವಾಗಲೆಂದೇ ಇಷ್ಟಪಡುತ್ತಾನೆ. ಭೀಮಾರ್ಜುನರೂ ಕೂಡ ದಾಶಾರ್ಹನ ಅಭಿಮತವನ್ನು ಒಪ್ಪಿಕೊಳ್ಳುತ್ತಾರೆ.
05150011a ಅಜಾತಶತ್ರುರಪ್ಯದ್ಯ ಭೀಮಾರ್ಜುನವಶಾನುಗಃ।
05150011c ನಿಕೃತಶ್ಚ ಮಯಾ ಪೂರ್ವಂ ಸಹ ಸರ್ವೈಃ ಸಹೋದರೈಃ।।
ಅಜಾತಶತ್ರುವು ಇಂದು ಭೀಮಾರ್ಜುನರ ವಶದಲ್ಲಿ ಬಂದು ಅವರನ್ನು ಅನುಸರಿಸುತ್ತಾನೆ. ನಾನು ಹಿಂದೆ ಆ ಎಲ್ಲ ಸಹೋದರರೊಂದಿಗೆ ಕೆಟ್ಟದ್ದಾಗಿ ವ್ಯವಹರಿಸಿದ್ದೇನೆ.
05150012a ವಿರಾಟದ್ರುಪದೌ ಚೈವ ಕೃತವೈರೌ ಮಯಾ ಸಹ।
05150012c ತೌ ಚ ಸೇನಾಪ್ರಣೇತಾರೌ ವಾಸುದೇವವಶಾನುಗೌ।।
ವಿರಾಟ-ದ್ರುಪದರಿಗೂ ಕೂಡ ನನ್ನ ಮೇಲೆ ವೈರವಿತ್ತು. ಆ ಇಬ್ಬರು ಸೇನಾಪ್ರಣೇತಾರರೂ ವಾಸುದೇವನ ವಶಾನುಗರು.
05150013a ಭವಿತಾ ವಿಗ್ರಹಃ ಸೋಽಯಂ ತುಮುಲೋ ಲೋಮಹರ್ಷಣಃ।
05150013c ತಸ್ಮಾತ್ಸಾಂಗ್ರಾಮಿಕಂ ಸರ್ವಂ ಕಾರಯಧ್ವಮತಂದ್ರಿತಾಃ।।
ತುಮುಲವೂ ಲೋಮಹರ್ಷಣವೂ ಆದ ಯುದ್ಧವಾಗಲಿದೆ. ಆದುದರಿಂದ ತೆರವಿಲ್ಲದ ಎಲ್ಲ ಸಿದ್ಧತೆಗಳೂ ನಡೆಯಲಿ.
05150014a ಶಿಬಿರಾಣಿ ಕುರುಕ್ಷೇತ್ರೇ ಕ್ರಿಯಂತಾಂ ವಸುಧಾಧಿಪಾಃ।
05150014c ಸುಪರ್ಯಾಪ್ತಾವಕಾಶಾನಿ ದುರಾದೇಯಾನಿ ಶತ್ರುಭಿಃ।।
05150015a ಆಸನ್ನಜಲಕಾಷ್ಠಾನಿ ಶತಶೋಽಥ ಸಹಸ್ರಶಃ।
05150015c ಅಚ್ಚೇದ್ಯಾಹಾರಮಾರ್ಗಾಣಿ ರತ್ನೋಚ್ಚಯಚಿತಾನಿ ಚ।।
05150015e ವಿವಿಧಾಯುಧಪೂರ್ಣಾನಿ ಪತಾಕಾಧ್ವಜವಂತಿ ಚ।।
ಶತ್ರುಗಳು ಸುಲಭವಾಗಿ ಆಕ್ರಮಣಿಸಲು ಅವಕಾಶವಿಲ್ಲದಂತೆ ವಸುಧಾಧಿಪರು ಕುರುಕ್ಷೇತ್ರದಲ್ಲಿ ಶಿಬಿರಗಳನ್ನು ನಿರ್ಮಿಸಿಕೊಳ್ಳಲಿ. ನೂರಾರು ಸಹಸ್ರಾರು ನೀರು-ಕಟ್ಟಿಗೆಗಳ ಸೌಕರ್ಯವಾಗಲಿ. ರತ್ನಗಳು, ಸಂಪತ್ತು, ವಿವಿಧ ಆಯುಧಗಳು, ಪತಾಕ-ಧ್ವಜಗಳನ್ನು ತಲುಪಿಸುವ ಅವಿಚ್ಛಿನ್ನ ಮಾರ್ಗವು ತಯಾರಿಸಲ್ಪಡಲಿ.
05150016a ಸಮಾಶ್ಚ ತೇಷಾಂ ಪಂಥಾನಃ ಕ್ರಿಯಂತಾಂ ನಗರಾದ್ಬಹಿಃ।
05150016c ಪ್ರಯಾಣಂ ಘುಷ್ಯತಾಮದ್ಯ ಶ್ವೋಭೂತ ಇತಿ ಮಾಚಿರಂ।।
ನಗರದಿಂದ ಹೊರಗೆ ಹೋಗುವ ದಾರಿಗಳನ್ನು ಸಮಮಾಡಲಿ. ನಾಳೆಯೇ ಪ್ರಯಾಣವೆಂದು ಘೋಷಿಸಿರಿ.”
05150017a ತೇ ತಥೇತಿ ಪ್ರತಿಜ್ಞಾಯ ಶ್ವೋಭೂತೇ ಚಕ್ರಿರೇ ತಥಾ।
05150017c ಹೃಷ್ಟರೂಪಾ ಮಹಾತ್ಮಾನೋ ವಿನಾಶಾಯ ಮಹೀಕ್ಷಿತಾಂ।।
“ಹಾಗೆಯೇ ಮಾಡುತ್ತೇವೆ!” ಎಂದು ಭರವಸೆಯನ್ನು ನೀಡಿ ಅವರು ಕಾರ್ಯನಿರತರಾದರು. ಮರುದಿನ ಹೃಷ್ಟರೂಪರಾಗಿ ಆ ಮಹಾತ್ಮರು ಮಹೀಕ್ಷಿತರ ವಿನಾಶಕ್ಕೆ ಹೊರಟರು.
05150018a ತತಸ್ತೇ ಪಾರ್ಥಿವಾಃ ಸರ್ವೇ ತಚ್ಚ್ರುತ್ವಾ ರಾಜಶಾಸನಂ।
05150018c ಆಸನೇಭ್ಯೋ ಮಹಾರ್ಹೇಭ್ಯ ಉದತಿಷ್ಠನ್ನಮರ್ಷಿತಾಃ।।
05150019a ಬಾಹೂನ್ಪರಿಘಸಂಕಾಶಾನ್ಸಂಸ್ಪೃಶಂತಃ ಶನೈಃ ಶನೈಃ।
05150019c ಕಾಂಚನಾಂಗದದೀಪ್ತಾಂಶ್ಚ ಚಂದನಾಗರುಭೂಷಿತಾನ್।।
ಆ ರಾಜಶಾಸನವನ್ನು ಕೇಳಿ ಪಾರ್ಥಿವರೆಲ್ಲರೂ ಉತ್ಸಾಹದಿಂದ ಬೆಲೆಬಾಳುವ ಆಸನಗಳಿಂದ ಮೇಲೆದ್ದು, ನಿಧಾನವಾಗಿ ಪರಿಘಗಳಂತಿದ್ದ ಕಾಂಚನ ಅಂಗದಗಳನ್ನು ಧರಿಸಿದ್ದ, ಚಂದನ ಅಗರುಗಳಿಂದ ಭೂಷಿತವಾದ ತಮ್ಮ ಬಾಹುಗಳನ್ನು ಮುಟ್ಟಿಕೊಂಡರು.
05150020a ಉಷ್ಣೀಷಾಣಿ ನಿಯಚ್ಚಂತಃ ಪುಂಡರೀಕನಿಭೈಃ ಕರೈಃ।
05150020c ಅಂತರೀಯೋತ್ತರೀಯಾಣಿ ಭೂಷಣಾನಿ ಚ ಸರ್ವಶಃ।।
ಪುಂಡರೀಕಗಳಂತಿದ್ದ ತಮ್ಮ ಕೈಗಳಿಂದ ಮುಂಡಾಸುಗಳನ್ನು ಕಟ್ಟಿಕೊಂಡು, ಅಂತರೀಯ-ಉತ್ತರೀಯಗಳನ್ನೂ ಎಲ್ಲ ಭೂಷಣಗಳನ್ನೂ ತೊಟ್ಟುಕೊಂಡರು.
05150021a ತೇ ರಥಾನ್ರಥಿನಃ ಶ್ರೇಷ್ಠಾ ಹಯಾಂಶ್ಚ ಹಯಕೋವಿದಾಃ।
05150021c ಸಜ್ಜಯಂತಿ ಸ್ಮ ನಾಗಾಂಶ್ಚ ನಾಗಶಿಕ್ಷಾಸು ನಿಷ್ಠಿತಾಃ।।
ಅವರ ಸಾರಥಿ ಶ್ರೇಷ್ಠರು ರಥಗಳನ್ನೂ, ಹಯಕೋವಿದರು ಕುದುರೆಗಳನ್ನೂ, ನಿಷ್ಠೆಯುಳ್ಳ ಮಾವುತರು ಆನೆಗಳನ್ನೂ ಸಜ್ಜುಗೊಳಿಸಿದರು.
05150022a ಅಥ ವರ್ಮಾಣಿ ಚಿತ್ರಾಣಿ ಕಾಂಚನಾನಿ ಬಹೂನಿ ಚ।
05150022c ವಿವಿಧಾನಿ ಚ ಶಸ್ತ್ರಾಣಿ ಚಕ್ರುಃ ಸಜ್ಜಾನಿ ಸರ್ವಶಃ।।
ಅನಂತರ ಬಹಳಷ್ಟು ಬಣ್ಣ ಬಣ್ಣದ ಕಾಂಚನ ಕವಚಗಳನ್ನು ಮತ್ತು ಎಲ್ಲ ವಿವಿಧ ಶಸ್ತ್ರಗಳನ್ನೂ ಸಜ್ಜುಗೊಳಿಸಿದರು.
05150023a ಪದಾತಯಶ್ಚ ಪುರುಷಾಃ ಶಸ್ತ್ರಾಣಿ ವಿವಿಧಾನಿ ಚ।
05150023c ಉಪಜಹ್ರುಃ ಶರೀರೇಷು ಹೇಮಚಿತ್ರಾಣ್ಯನೇಕಶಃ।।
ಪದಾತಿ ಪುರುಷರು ವಿವಿಧ ಶಸ್ತ್ರಗಳನ್ನೂ ಬಂಗಾರದ ಚಿತ್ರಗಳನ್ನುಳ್ಳ ಕವಚಗಳನ್ನೂ ಧರಿಸಿದರು.
05150024a ತದುತ್ಸವ ಇವೋದಗ್ರಂ ಸಂಪ್ರಹೃಷ್ಟನರಾವೃತಂ।
05150024c ನಗರಂ ಧಾರ್ತರಾಷ್ಟ್ರಸ್ಯ ಭಾರತಾಸೀತ್ಸಮಾಕುಲಂ।।
ಭಾರತ! ಧಾರ್ತರಾಷ್ಟ್ರನ ಆ ನಗರವು ಉತ್ಸವದ ತಯಾರಿಯಲ್ಲಿರುವ ಸಂಪ್ರಹೃಷ್ಟ ಜನಸಂದಣಿಯಿಂದ ತುಂಬಿಹೋಗಿತ್ತು.
05150025a ಜನೌಘಸಲಿಲಾವರ್ತೋ ರಥನಾಗಾಶ್ವಮೀನವಾನ್।
05150025c ಶಂಖದುಂದುಭಿನಿರ್ಘೋಷಃ ಕೋಶಸಂಚಯರತ್ನವಾನ್।।
05150026a ಚಿತ್ರಾಭರಣವರ್ಮೋರ್ಮಿಃ ಶಸ್ತ್ರನಿರ್ಮಲಫೇನವಾನ್।
05150026c ಪ್ರಾಸಾದಮಾಲಾದ್ರಿವೃತೋ ರಥ್ಯಾಪಣಮಹಾಹ್ರದಃ।।
05150027a ಯೋಧಚಂದ್ರೋದಯೋದ್ಭೂತಃ ಕುರುರಾಜಮಹಾರ್ಣವಃ।
05150027c ಅದೃಶ್ಯತ ತದಾ ರಾಜಂಶ್ಚಂದ್ರೋದಯ ಇವಾರ್ಣವಃ।।
ರಾಜನ್! ಕುರುರಾಜ! ಜನಸಂದಣಿಯೆಂಬ ನೀರಿನಿಂದ, ರಥ-ಆನೆಗಳೆಂಬ ಮೀನುಗಳಿಂದ, ಶಂಖದುಂದುಭಿಗಳ ನಿರ್ಘೋಷದಿಂದ, ಕೋಶಸಂಚಯ ರತ್ನಗಳಿಂದ, ಚಿತ್ರಾಭರಣಗಳೆಂಬ ಅಲೆಗಳಿಂದ, ಶುಭ್ರ ಶಸ್ತ್ರಗಳೆಂಬ ನೊರೆಯಿಂದ, ಕರಾವಳಿಯ ಪರ್ವತಗಳಂತಿರುವ ಕಟ್ಟಡಗಳ ಸರಮಾಲೆಯಿಂದ ಆವೃತವಾಗಿ, ರಸ್ತೆ-ಮಾರುಕಟ್ಟೆಗಳ ಮಹಾಹ್ರದಗಳಿಂದ, ಉದಯಿಸುತ್ತಿರುವ ಚಂದ್ರನಂತಿರುವ ಯೋಧರಿಂದ ಅದು ಚಂದ್ರೋದಯದ ಸಮಯದಲ್ಲಿನ ಮಹಾಸಾಗರದಂತೆ ಕಂಡುಬಂದಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸೇನಾನಿರ್ಯಾಣ ಪರ್ವಣಿ ದುರ್ಯೋಧನಸೈನ್ಯಸಜ್ಜನಕರಣೇ ಪಂಚಾಶದಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸೇನಾನಿರ್ಯಾಣ ಪರ್ವದಲ್ಲಿ ದುರ್ಯೋಧನಸೈನ್ಯಸಜ್ಜನಕರಣದಲ್ಲಿ ನೂರಾಐವತ್ತನೆಯ ಅಧ್ಯಾಯವು.