149 ಕುರುಕ್ಷೇತ್ರಪ್ರವೇಶಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಸೇನಾನಿರ್ಯಾಣ ಪರ್ವ

ಅಧ್ಯಾಯ 149

ಸಾರ

ಯುಧಿಷ್ಠಿರನು ತನ್ನ ಏಳು ಅಕ್ಷೋಹಿಣೀ ಸೇನೆಗಳ ನೇತಾರನು ಯಾರಾಗಬಹುದೆಂದು ತಮ್ಮಂದಿರಲ್ಲಿ ಕೇಳಲು (1-8) ಸಹದೇವನು ವಿರಾಟನನ್ನೂ (9-10), ನಕುಲನು ದ್ರುಪದನನ್ನೂ (11-17), ಅರ್ಜುನನು ಧೃಷ್ಟದ್ಯುಮ್ನನನ್ನೂ (18-28), ಭೀಮನು ಶಿಖಂಡಿಯನ್ನೂ (29-32) ಸೂಚಿಸುವುದು. ಆಗ ಯುಧಿಷ್ಠಿರನು ಕೃಷ್ಣನನ್ನು ಕೇಳಲು (33-37), “ಸಾರವತ್ತಾದ, ದುಷ್ಪ್ರಧರ್ಷವಾದ, ದುರಾಸದವಾದ ನಮ್ಮ ಬಲವು ಯುದ್ಧದಲ್ಲಿ ಧಾರ್ತರಾಷ್ಟ್ರನ ಬಲವನ್ನು ವಧಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.” ಎಂದು ಕೃಷ್ಣನು ನುಡಿದುದು (38-46). ಪಾಂಡವ ಸೇನೆಯು ಕುರುಕ್ಷೇತ್ರಕ್ಕೆ ಪ್ರಯಾಣಿಸಿದುದು (47-66). ಕುರುಕ್ಷೇತ್ರದಲ್ಲಿ ಸೇನೆಯು ಬೀಡುಬಿಟ್ಟಿದುದು (67-84).

05149001 ವೈಶಂಪಾಯನ ಉವಾಚ।
05149001a ಜನಾರ್ದನವಚಃ ಶ್ರುತ್ವಾ ಧರ್ಮರಾಜೋ ಯುಧಿಷ್ಠಿರಃ।
05149001c ಭ್ರಾತೄನುವಾಚ ಧರ್ಮಾತ್ಮಾ ಸಮಕ್ಷಂ ಕೇಶವಸ್ಯ ಹ।।

ವೈಶಂಪಾಯನನು ಹೇಳಿದನು: “ಜನಾರ್ದನನ ಮಾತನ್ನು ಕೇಳಿ ಧರ್ಮರಾಜ ಯುಧಿಷ್ಠಿರನು ಕೇಶವನ ಸಮಕ್ಷಮದಲ್ಲಿಯೇ ಧರ್ಮಾತ್ಮಾ ಸಹೋದರರಿಗೆ ಹೇಳಿದನು:

05149002a ಶ್ರುತಂ ಭವದ್ಭಿರ್ಯದ್ವೃತ್ತಂ ಸಭಾಯಾಂ ಕುರುಸಂಸದಿ।
05149002c ಕೇಶವಸ್ಯಾಪಿ ಯದ್ವಾಕ್ಯಂ ತತ್ಸರ್ವಮವಧಾರಿತಂ।।

“ನೀವು ಕುರುಸಂಸದಿಯ ಸಭೆಯಲ್ಲಿ ಏನಾಯಿತೆಂದು ಕೇಳಿದಿರಿ. ಕೇಶವನೂ ಕೂಡ ಅವನ ಮಾತಿನಲ್ಲಿ ಅವೆಲ್ಲವನ್ನೂ ವರದಿಮಾಡಿದ್ದಾನೆ.

05149003a ತಸ್ಮಾತ್ಸೇನಾವಿಭಾಗಂ ಮೇ ಕುರುಧ್ವಂ ನರಸತ್ತಮಾಃ।
05149003c ಅಕ್ಷೌಹಿಣ್ಯಸ್ತು ಸಪ್ತೈತಾಃ ಸಮೇತಾ ವಿಜಯಾಯ ವೈ।।

ಆದುದರಿಂದ ನರಸತ್ತಮರೇ! ನಮ್ಮ ವಿಜಯಕ್ಕಾಗಿ ಸೇರಿರುವ ಏಳು ಅಕ್ಷೌಹಿಣೀ ಸೇನೆಗಳ ವಿಭಾಗಗಳನ್ನು ಮಾಡಿ.

05149004a ತಾಸಾಂ ಮೇ ಪತಯಃ ಸಪ್ತ ವಿಖ್ಯಾತಾಸ್ತಾನ್ನಿಬೋಧತ।
05149004c ದ್ರುಪದಶ್ಚ ವಿರಾಟಶ್ಚ ಧೃಷ್ಟದ್ಯುಮ್ನಶಿಖಂಡಿನೌ।।
05149005a ಸಾತ್ಯಕಿಶ್ಚೇಕಿತಾನಶ್ಚ ಭೀಮಸೇನಶ್ಚ ವೀರ್ಯವಾನ್।

ಅವುಗಳ ಏಳು ವಿಖ್ಯಾತ ನಾಯಕರನ್ನು ತಿಳಿದುಕೊಳ್ಳಿ – ದ್ರುಪದ, ವಿರಾಟ, ಧೃಷ್ಟದ್ಯುಮ್ನ, ಶಿಖಂಡಿ, ಸಾತ್ಯಕಿ, ಚೇಕಿತಾನ ಮತ್ತು ವೀರ್ಯವಾನ್ ಭೀಮಸೇನ.

05149005c ಏತೇ ಸೇನಾಪ್ರಣೇತಾರೋ ವೀರಾಃ ಸರ್ವೇ ತನುತ್ಯಜಃ।।
05149006a ಸರ್ವೇ ವೇದವಿದಃ ಶೂರಾಃ ಸರ್ವೇ ಸುಚರಿತವ್ರತಾಃ।
05149006c ಹ್ರೀಮಂತೋ ನೀತಿಮಂತಶ್ಚ ಸರ್ವೇ ಯುದ್ಧವಿಶಾರದಾಃ।
05149006e ಇಷ್ವಸ್ತ್ರಕುಶಲಾಶ್ಚೈವ ತಥಾ ಸರ್ವಾಸ್ತ್ರಯೋಧಿನಃ।।

ಇವರೆಲ್ಲ ಸೇನಾಪ್ರಣೇತಾರರು ವೀರರು. ದೇಹವನ್ನು ತ್ಯಜಿಸಿದವರು. ಎಲ್ಲರೂ ವೇದವಿದರು. ಶೂರರು. ಎಲ್ಲರೂ ಸುಚರಿತವ್ರತರು. ವಿನಯಿಗಳು. ನೀತಿವಂತರು. ಎಲ್ಲರೂ ಯುದ್ಧ ವಿಶಾರದರು. ಇಷ್ಟ ಅಸ್ತ್ರಗಳಲ್ಲಿ ಕುಶಲರು ಹಾಗೂ ಸರ್ವಾಸ್ತ್ರಯೋಧರು.

05149007a ಸಪ್ತಾನಾಮಪಿ ಯೋ ನೇತಾ ಸೇನಾನಾಂ ಪ್ರವಿಭಾಗವಿತ್।
05149007c ಯಃ ಸಹೇತ ರಣೇ ಭೀಷ್ಮಂ ಶರಾರ್ಚಿಃಪಾವಕೋಪಮಂ।।
05149008a ತ್ವಂ ತಾವತ್ಸಹದೇವಾತ್ರ ಪ್ರಬ್ರೂಹಿ ಕುರುನಂದನ।
05149008c ಸ್ವಮತಂ ಪುರುಷವ್ಯಾಘ್ರ ಕೋ ನಃ ಸೇನಾಪತಿಃ ಕ್ಷಮಃ।।

ಕುರುನಂದನ ಸಹದೇವ! ಸೇನಗಳ ಪ್ರವಿಭಾಗಗಳನ್ನು ತಿಳಿದಿರುವ, ಪಾವಕನಂತಿರುವ ಬಾಣಗಳನ್ನುಳ್ಳ ಬೀಷ್ಮನೊಡನೆ ರಣದಲ್ಲಿ ಹೋರಾಡಬಲ್ಲ, ಈ ಏಳೂ ಸೇನೆಗಳ ನೇತಾರನಾಗಬಲ್ಲ, ನಮ್ಮ ಸಮರ್ಥ ಸೇನಾಪತಿಯು ಯಾರಾಗಬಲ್ಲನೆಂಬ ನಿನ್ನ ಅಭಿಪ್ರಾಯವನ್ನು ಹೇಳು.”

05149009 ಸಹದೇವ ಉವಾಚ।
05149009a ಸಮ್ಯುಕ್ತ ಏಕದುಃಖಶ್ಚ ವೀರ್ಯವಾಂಶ್ಚ ಮಹೀಪತಿಃ।
05149009c ಯಂ ಸಮಾಶ್ರಿತ್ಯ ಧರ್ಮಜ್ಞಾಂ ಸ್ವಮಂಶಮನುಯುಂಜ್ಮಹೇ।।
05149010a ಮತ್ಸ್ಯೋ ವಿರಾಟೋ ಬಲವಾನ್ಕೃತಾಸ್ತ್ರೋ ಯುದ್ಧದುರ್ಮದಃ।
05149010c ಪ್ರಸಹಿಷ್ಯತಿ ಸಂಗ್ರಾಮೇ ಭೀಷ್ಮಂ ತಾಂಶ್ಚ ಮಹಾರಥಾನ್।।

ಸಹದೇವನು ಹೇಳಿದನು: “ನಮ್ಮ ದುಃಖದಲ್ಲಿ ಒಂದಾಗಿ ಸೇರಿಕೊಂಡ, ನಮಗೆ ಹತ್ತಿರದ ನೆಂಟನಾದ, ವೀರ್ಯವಾನ ಮಹೀಪತಿ, ಯಾರನ್ನು ಆಶ್ರಯಿಸಿ ನಮ್ಮ ಅಂಶವನ್ನು ಮರಳಿ ಪಡೆಯಬಹುದೋ ಆ ಧರ್ಮಜ್ಞ ಬಲವಾನ್, ಕೃತಾಸ್ತ್ರ, ಯುದ್ಧ ದುರ್ಮದ, ಮತ್ಸ್ಯ ವಿರಾಟನು ಸಂಗ್ರಾಮದಲ್ಲಿ ಭೀಷ್ಮ ಮತ್ತು ಆ ಮಹಾರಥಿಗಳನ್ನು ಸದೆಬಡಿಯಬಲ್ಲನು.””

05149011 ವೈಶಂಪಾಯನ ಉವಾಚ।
05149011a ತಥೋಕ್ತೇ ಸಹದೇವೇನ ವಾಕ್ಯೇ ವಾಕ್ಯವಿಶಾರದಃ।
05149011c ನಕುಲೋಽನಂತರಂ ತಸ್ಮಾದಿದಂ ವಚನಮಾದದೇ।।

ವೈಶಂಪಾಯನನು ಹೇಳಿದನು: “ವಾಕ್ಯವಿಶಾರದ ಸಹದೇವನು ಈ ವಾಕ್ಯಗಳಲ್ಲಿ ಹೇಳಲು, ನಕುಲನು ಈ ಮಾತುಗಳನ್ನು ಆಡಿದನು:

05149012a ವಯಸಾ ಶಾಸ್ತ್ರತೋ ಧೈರ್ಯಾತ್ಕುಲೇನಾಭಿಜನೇನ ಚ।
05149012c ಹ್ರೀಮಾನ್ಕುಲಾನ್ವಿತಃ ಶ್ರೀಮಾನ್ಸರ್ವಶಾಸ್ತ್ರವಿಶಾರದಃ।।
05149013a ವೇದ ಚಾಸ್ತ್ರಂ ಭರದ್ವಾಜಾದ್ದುರ್ಧರ್ಷಃ ಸತ್ಯಸಂಗರಃ।
05149013c ಯೋ ನಿತ್ಯಂ ಸ್ಪರ್ಧತೇ ದ್ರೋಣಂ ಭೀಷ್ಮಂ ಚೈವ ಮಹಾಬಲಂ।।
05149014a ಶ್ಲಾಘ್ಯಃ ಪಾರ್ಥಿವಸಂಘಸ್ಯ ಪ್ರಮುಖೇ ವಾಹಿನೀಪತಿಃ।
05149014c ಪುತ್ರಪೌತ್ರೈಃ ಪರಿವೃತಃ ಶತಶಾಖ ಇವ ದ್ರುಮಃ।।
05149015a ಯಸ್ತತಾಪ ತಪೋ ಘೋರಂ ಸದಾರಃ ಪೃಥಿವೀಪತಿಃ।
05149015c ರೋಷಾದ್ದ್ರೋಣವಿನಾಶಾಯ ವೀರಃ ಸಮಿತಿಶೋಭನಃ।।
05149016a ಪಿತೇವಾಸ್ಮಾನ್ಸಮಾಧತ್ತೇ ಯಃ ಸದಾ ಪಾರ್ಥಿವರ್ಷಭಃ।
05149016c ಶ್ವಶುರೋ ದ್ರುಪದೋಽಸ್ಮಾಕಂ ಸೇನಾಮಗ್ರೇ ಪ್ರಕರ್ಷತು।।

ವಯಸ್ಸಿನಲ್ಲಿ, ಶಾಸ್ತ್ರದಲ್ಲಿ, ಧೈರ್ಯದಲ್ಲಿ, ಕುಲದಲ್ಲಿ, ಅಭಿಜನರಲ್ಲಿ ಹಿರಿಯವನಾದ; ಕುಲಾನ್ವಿತ, ಸರ್ವಶಾಸ್ತ್ರವಿಶಾರದ, ಭರಧ್ವಾಜನಿಂದ ಅಸ್ತ್ರಗಳನ್ನು ಕಲಿತ, ದುರ್ಧರ್ಷ, ಸತ್ಯಸಂಗರ; ಯಾರು ನಿತ್ಯವೂ ಮಹಾಬಲಿ ದ್ರೋಣ-ಭೀಷ್ಮರೊಡನೆ ಸ್ಪರ್ಧಿಸುತ್ತಾನೋ; ಶ್ಲಾಘನೀಯ, ಪಾರ್ಥಿವ ಸಂಘದ ಪ್ರಮುಖ, ವಾಹಿನೀಪತಿ; ನೂರು ಶಾಖೆಗಳಿರುವ ವೃಕ್ಷದಂತೆ ಪುತ್ರಪೌತ್ರರಿಂದ ಪರಿವೃತನಾದ; ರೋಷದಿಂದ ದ್ರೋಣವಿನಾಶಕ್ಕಾಗಿ ಪತ್ನಿಯೊಡನೆ ಘೋರ ತಪಸ್ಸನ್ನು ತಪಿಸಿದ ಮಹೀಪತಿ; ಸಮಿತಿಗಳಿಗೆ ಶೋಭೆಯನ್ನು ತರುವ; ಸದಾ ನಮ್ಮ ತಂದೆಯ ಸಮನಾಗಿರುವ ಪಾರ್ಥಿವರ್ಷಭ, ನಮ್ಮೆಲ್ಲರ ಮಾವ ದ್ರುಪದನು ನಮ್ಮ ಸೇನೆಯ ಅಗ್ರಸ್ಥಾನದಲ್ಲಿ ಪ್ರಕಾಶಿಸುತ್ತಾನೆ.

05149017a ಸ ದ್ರೋಣಭೀಷ್ಮಾವಾಯಾಂತೌ ಸಹೇದಿತಿ ಮತಿರ್ಮಮ।
05149017c ಸ ಹಿ ದಿವ್ಯಾಸ್ತ್ರವಿದ್ರಾಜಾ ಸಖಾ ಚಾಂಗಿರಸೋ ನೃಪಃ।।

ಅವನು ಕೊನೆಯವರೆಗೂ ದ್ರೋಣ-ಭೀಷ್ಮರನ್ನು ಸಹಿಸುತ್ತಾನೆ ಎಂದು ನನ್ನ ಅಭಿಪ್ರಾಯ. ರಾಜಾ! ಏಕೆಂದರೆ ಆ ನೃಪನು ದಿವ್ಯಾಸ್ತ್ರಗಳನ್ನು ತಿಳಿದಿದ್ದಾನೆ. ಮತ್ತು ಆಂಗಿರಸನ ಸಖನಾಗಿದ್ದಾನೆ.”

05149018a ಮಾದ್ರೀಸುತಾಭ್ಯಾಮುಕ್ತೇ ತು ಸ್ವಮತೇ ಕುರುನಂದನಃ।
05149018c ವಾಸವಿರ್ವಾಸವಸಮಃ ಸವ್ಯಸಾಚ್ಯಬ್ರವೀದ್ವಚಃ।।

ಮಾದ್ರೀಸುತರೀರ್ವರು ಹೀಗೆ ಹೇಳಲು ಕುರುನಂದನ ವಾಸವ ಸಮ ವಾಸವಿ ಸವ್ಯಸಾಚಿಯು ತನ್ನ ಅಭಿಪ್ರಾಯವನ್ನು ಹೇಳಿದನು:

05149019a ಯೋಽಯಂ ತಪಃಪ್ರಭಾವೇನ ಋಷಿಸಂತೋಷಣೇನ ಚ।
05149019c ದಿವ್ಯಃ ಪುರುಷ ಉತ್ಪನ್ನೋ ಜ್ವಾಲಾವರ್ಣೋ ಮಹಾಬಲಃ।।
05149020a ಧನುಷ್ಮಾನ್ಕವಚೀ ಖಡ್ಗೀ ರಥಮಾರುಹ್ಯ ದಂಶಿತಃ।
05149020c ದಿವ್ಯೈರ್ಹಯವರೈರ್ಯುಕ್ತಮಗ್ನಿಕುಂಡಾತ್ಸಮುತ್ಥಿತಃ।।
05149021a ಗರ್ಜನ್ನಿವ ಮಹಾಮೇಘೋ ರಥಘೋಷೇಣ ವೀರ್ಯವಾನ್।
05149021c ಸಿಂಹಸಂಹನನೋ ವೀರಃ ಸಿಂಹವಿಕ್ರಾಂತವಿಕ್ರಮಃ।।
05149022a ಸಿಂಹೋರಸ್ಕೋ ಮಹಾಬಾಹುಃ ಸಿಂಹವಕ್ಷಾ ಮಹಾಬಲಃ।
05149022c ಸಿಂಹಪ್ರಗರ್ಜನೋ ವೀರಃ ಸಿಂಹಸ್ಕಂಧೋ ಮಹಾದ್ಯುತಿಃ।।
05149023a ಸುಭ್ರೂಃ ಸುದಂಷ್ಟ್ರಃ ಸುಹನುಃ ಸುಬಾಹುಃ ಸುಮುಖೋಽಕೃಶಃ।
05149023c ಸುಜತ್ರುಃ ಸುವಿಶಾಲಾಕ್ಷಃ ಸುಪಾದಃ ಸುಪ್ರತಿಷ್ಠಿತಃ।।
05149024a ಅಭೇದ್ಯಃ ಸರ್ವಶಸ್ತ್ರಾಣಾಂ ಪ್ರಭಿನ್ನ ಇವ ವಾರಣಃ।
05149024c ಜಜ್ಞೇ ದ್ರೋಣವಿನಾಶಾಯ ಸತ್ಯವಾದೀ ಜಿತೇಂದ್ರಿಯಃ।।
05149025a ಧೃಷ್ಟದ್ಯುಮ್ನಮಹಂ ಮನ್ಯೇ ಸಹೇದ್ಭೀಷ್ಮಸ್ಯ ಸಾಯಕಾನ್।
05149025c ವಜ್ರಾಶನಿಸಮಸ್ಪರ್ಶಾನ್ದೀಪ್ತಾಸ್ಯಾನುರಗಾನಿವ।।
05149026a ಯಮದೂತಸಮಾನ್ವೇಗೇ ನಿಪಾತೇ ಪಾವಕೋಪಮಾನ್।
05149026c ರಾಮೇಣಾಜೌ ವಿಷಹಿತಾನ್ವಜ್ರನಿಷ್ಪೇಷದಾರುಣಾನ್।।

ತಪಃಪ್ರಭಾವದಿಂದ, ಋಷಿಗಳ ಸಂತೋಷದಿಂದ ಹುಟ್ಟಿದ ದಿವ್ಯಪುರುಷ - ಜ್ವಾಲವರ್ಣಿ, ಮಹಾಬಲ; ಧನ್ನುಸ್ಸನ್ನು ಹಿಡಿದು, ಕವಚವನ್ನು ಧರಿಸಿ, ದಿವ್ಯ ಶ್ರೇಷ್ಠ ಕುದುರೆಗಳನ್ನು ಕಟ್ಟಿದ ರಥವನ್ನೇರಿ, ಮಹಾಮೇಘದಂತೆ ಘರ್ಜಿಸುತ್ತಾ, ರಥಘೋಷಗಳೊಂದಿಗೆ ಅಗ್ನಿಕುಂಡದಿಂದ ಮೇಲೆದ್ದು ಬಂದ; ವೀರ್ಯವಾನ, ವೀರ, ಸಿಂಹಸಂಹನನ, ಸಿಂಹವಿಕ್ರಾಂತ, ವಿಕ್ರಮಿ, ಸಂಹೋರಸ್ಕ, ಮಹಾಬಾಹು, ಸಿಂಹವಕ್ಷ, ಮಹಾಬಲ, ಸಿಂಹಪ್ರಗರ್ಜನ, ವೀರ, ಸಿಂಹಸ್ಕಂಧ, ಮಹಾದ್ಯುತಿ, ಸುಂದರ ಹುಬ್ಬುಳ್ಳವನು, ಸುಂದರ ಹಲ್ಲುಳ್ಳವನು, ಸುಹನು, ಸುಬಾಹು, ಸುಮುಖ, ಅಕೃಶ, ಸುಜತ್ರು, ಸುವಿಶಾಲಾಕ್ಷ, ಸುಪಾದ, ಸುಪ್ರತಿಷ್ಠಿತ, ಅಭೇದ್ಯ, ಸರ್ವಶಸ್ತ್ರಗಳನ್ನು ಕತ್ತರಿಸಿ ತಡೆಯ ಬಲ್ಲ; ದ್ರೋಣನ ವಿನಾಶಕ್ಕೆ ಜನಿಸಿದ, ಜಿತೇಂದ್ರಿಯ ಧೃಷ್ಟದ್ಯುಮ್ನನು ಭೀಷ್ಮನ ವಜ್ರ ಪ್ರಭಾವೀ, ಬೆಂಕಿಯನ್ನು ಉಗುಳುವ ಸರ್ಪಗಳಂತಿರುವ, ವೇಗದಲ್ಲಿ ಯಮದೂತರ ಸಮನಾಗಿರುವ, ಬೆಂಕಿಯಂತೆ ಬೀಳುವ, ಒಮ್ಮೆ ರಾಮನೇ ಎದುರಿಸಿದ, ಸಿಡಿಲುಬಡಿಯುವಂತೆ ದಾರುಣವಾದ ಬಾಣಗಳನ್ನು ಸಹಿಸಬಲ್ಲ ಎಂದು ನನಗನ್ನಿಸುತ್ತದೆ.

05149027a ಪುರುಷಂ ತಂ ನ ಪಶ್ಯಾಮಿ ಯಃ ಸಹೇತ ಮಹಾವ್ರತಂ।
05149027c ಧೃಷ್ಟದ್ಯುಮ್ನಮೃತೇ ರಾಜನ್ನಿತಿ ಮೇ ಧೀಯತೇ ಮತಿಃ।।

ರಾಜನ್! ಧೃಷ್ಟದ್ಯುಮ್ನನನ್ನು ಬಿಟ್ಟು ಆ ಮಹಾವ್ರತ ಪುರುಷನನ್ನು ಸಹಿಸುವ ಬೇರೆ ಯಾರನ್ನೂ ನಾನು ಕಾಣುವುದಿಲ್ಲ. ಇದು ನನ್ನ ಬುದ್ಧಿಗೆ ಬಂದಿರುವ ಅಭಿಪ್ರಾಯ.

05149028a ಕ್ಷಿಪ್ರಹಸ್ತಶ್ಚಿತ್ರಯೋಧೀ ಮತಃ ಸೇನಾಪತಿರ್ಮಮ।
05149028c ಅಭೇದ್ಯಕವಚಃ ಶ್ರೀಮಾನ್ಮಾತಂಗ ಇವ ಯೂಥಪಃ।।

ಹಿಂಡನ್ನು ನಡೆಸಿಕೊಂಡು ಹೋಗುವ ಮಾತಂಗದಂತೆ ಆ ಕ್ಷಿಪ್ರಹಸ್ತ, ಚಿತ್ರಯೋಧೀ, ಅಭೇದ್ಯಕವಚನು ಸೇನಾಪತಿಯಾಗಬಹುದೆಂದು ನನ್ನ ಮತ.”

05149029 ಭೀಮ ಉವಾಚ।
05149029a ವಧಾರ್ಥಂ ಯಃ ಸಮುತ್ಪನ್ನಃ ಶಿಖಂಡೀ ದ್ರುಪದಾತ್ಮಜಃ।
05149029c ವದಂತಿ ಸಿದ್ಧಾ ರಾಜೇಂದ್ರ ಋಷಯಶ್ಚ ಸಮಾಗತಾಃ।।
05149030c ರೂಪಂ ದ್ರಕ್ಷ್ಯಂತಿ ಪುರುಷಾ ರಾಮಸ್ಯೇವ ಮಹಾತ್ಮನಃ।।
05149031a ನ ತಂ ಯುದ್ಧೇಷು ಪಶ್ಯಾಮಿ ಯೋ ವಿಭಿಂದ್ಯಾಚ್ಚಿಖಂಡಿನಂ।
05149031c ಶಸ್ತ್ರೇಣ ಸಮರೇ ರಾಜನ್ಸಮ್ನದ್ಧಂ ಸ್ಯಂದನೇ ಸ್ಥಿತಂ।।
05149032a ದ್ವೈರಥೇ ವಿಷಹೇನ್ನಾನ್ಯೋ ಭೀಷ್ಮಂ ರಾಜನ್ಮಹಾವ್ರತಂ।
05149032c ಶಿಖಂಡಿನಮೃತೇ ವೀರಂ ಸ ಮೇ ಸೇನಾಪತಿರ್ಮತಃ।।

ಭೀಮನು ಹೇಳಿದನು: “ರಾಜೇಂದ್ರ! ಸೇರಿರುವ ಸಿದ್ಧರು ಋಷಿಗಳು ಶಿಖಂಡಿಯು ಭೀಷ್ಮನ ವಧೆಗಾಗಿಯೇ ಉತ್ಪನ್ನನಾದನೆಂದು ಹೇಳುತ್ತಾರೆ. ಶಿಖಂಡಿಯು ಸಂಗ್ರಾಮಮಧ್ಯದಲ್ಲಿ ದಿವ್ಯ ಅಸ್ತ್ರವನ್ನು ಪ್ರಯೋಗಿಸುವಾಗ ಅವನಲ್ಲಿ ಪುರುಷರು ಮಹಾತ್ಮ ರಾಮನ ರೂಪವನ್ನೇ ಕಾಣುತ್ತಾರೆ. ರಾಜನ್! ಯುದ್ಧದಲ್ಲಿ ಆಯುಧಪಾಣಿಯಾಗಿ ನಿಂತ ಶಿಖಂಡಿಯನ್ನು ಶಸ್ತ್ರಗಳಿಂದ ಭೇದಿಸುವ ಯಾರನ್ನೂ ನಾನು ಕಂಡಿಲ್ಲ. ಮಹಾವ್ರತ ಬೀಷ್ಮನನ್ನು ವೀರ ಶಿಖಂಡಿಯ ಹೊರತಾಗಿ ಬೇರೆ ಯಾರೂ ಎದುರಿಸಲಾರರು. ಅವನೇ ನಮ್ಮ ಸೇನಾಪತಿಯೆಂದು ನನಗನ್ನಿಸುತ್ತದೆ.”

05149033 ಯುಧಿಷ್ಠಿರ ಉವಾಚ।
05149033a ಸರ್ವಸ್ಯ ಜಗತಸ್ತಾತ ಸಾರಾಸಾರಂ ಬಲಾಬಲಂ।
05149033c ಸರ್ವಂ ಜಾನಾತಿ ಧರ್ಮಾತ್ಮಾ ಗತಮೇಷ್ಯಚ್ಚ ಕೇಶವಃ।।

ಯುಧಿಷ್ಠಿರನು ಹೇಳಿದನು: “ಮಕ್ಕಳೇ! ಜಗತ್ತಿನ ಎಲ್ಲದರ - ಈಗಿನ ಮತ್ತು ಹಿಂದೆ ಆಗಿಹೋದವುಗಳ - ಸಾರಾಸರಗಳನ್ನು ಬಲಾಬಲಗಳನ್ನು ಎಲ್ಲವನ್ನೂ ಧರ್ಮಾತ್ಮ ಕೇಶವನಿಗೆ ತಿಳಿದಿದೆ.

05149034a ಯಮಾಹ ಕೃಷ್ಣೋ ದಾಶಾರ್ಹಃ ಸೋಽಸ್ತು ನೋ ವಾಹಿನೀಪತಿಃ।
05149034c ಕೃತಾಸ್ತ್ರೋ ಹ್ಯಕೃತಾಸ್ತ್ರೋ ವಾ ವೃದ್ಧೋ ವಾ ಯದಿ ವಾ ಯುವಾ।।

ಕೃಷ್ಣ ದಾಶಾರ್ಹನು ಯಾರೆಂದು ಹೇಳುತ್ತಾನೋ ಅವನು ಕೃತಾಸ್ತ್ರನಾಗಿರಲಿ ಅಥವಾ ಅಕೃತಾಸ್ತ್ರನಾಗಿರಲಿ, ವೃದ್ಧನಾಗಿರಲಿ ಅಥವಾ ಯುವಕನಾಗಿರಲಿ ಅವನೇ ನಮ್ಮ ವಾಹಿನೀಪತಿಯಾಗಲಿ.

05149035a ಏಷ ನೋ ವಿಜಯೇ ಮೂಲಮೇಷ ತಾತ ವಿಪರ್ಯಯೇ।
05149035c ಅತ್ರ ಪ್ರಾಣಾಶ್ಚ ರಾಜ್ಯಂ ಚ ಭಾವಾಭಾವೌ ಸುಖಾಸುಖೇ।।

ಮಕ್ಕಳೇ! ಇವನೇ ನಮ್ಮ ವಿಜಯ-ವಿಪರ್ಯಯಗಳ ಮೂಲ. ಅವನಲ್ಲಿಯೇ ನಮ್ಮ ಪ್ರಾಣಗಳು, ರಾಜ್ಯ, ಇರುವುದು-ಇಲ್ಲದಿರುವುದು, ಮತ್ತು ಸುಖ-ಅಸುಖಗಳು ನೆಲೆಸಿವೆ.

05149036a ಏಷ ಧಾತಾ ವಿಧಾತಾ ಚ ಸಿದ್ಧಿರತ್ರ ಪ್ರತಿಷ್ಠಿತಾ।
05149036c ಯಮಾಹ ಕೃಷ್ಣೋ ದಾಶಾರ್ಹಃ ಸ ನಃ ಸೇನಾಪತಿಃ ಕ್ಷಮಃ।।

ಇವನೇ ಧಾತಾ, ವಿಧಾತಾ. ಇವನಲ್ಲಿ ಸಿದ್ಧಿಯು ಪ್ರತಿಷ್ಠಿತವಾಗಿದೆ. ಕೃಷ್ಣ ದಾಶಾರ್ಹನು ಯಾರನ್ನು ಸಮರ್ಥನೆಂದು ಹೇಳುತ್ತಾನೋ ಅವನೇ ನಮಗೆ ಸೇನಾಪತಿಯಾಗುತ್ತಾನೆ.

05149036e ಬ್ರವೀತು ವದತಾಂ ಶ್ರೇಷ್ಠೋ ನಿಶಾ ಸಮತಿವರ್ತತೇ।।
05149037a ತತಃ ಸೇನಾಪತಿಂ ಕೃತ್ವಾ ಕೃಷ್ಣಸ್ಯ ವಶವರ್ತಿನಂ।
05149037c ರಾತ್ರಿಶೇಷೇ ವ್ಯತಿಕ್ರಾಂತೇ ಪ್ರಯಾಸ್ಯಾಮೋ ರಣಾಜಿರಂ।।
05149037e ಅಧಿವಾಸಿತಶಸ್ತ್ರಾಶ್ಚ ಕೃತಕೌತುಕಮಂಗಲಾಃ।।

ಮಾತನಾಡುವವರಲ್ಲಿ ಶ್ರೇಷ್ಠನು ಹೇಳಲಿ. ರಾತ್ರಿಯು ಮುಗಿಯಲು ಬಂದಿದೆ. ಕೃಷ್ಣನ ವಶವರ್ತಿಯಾಗಿರುವವನನ್ನು ಸೇನಾಪತಿಯನ್ನಾಗಿ ಮಾಡಿಕೊಂಡು, ಉಳಿದಿರುವ ರಾತ್ರಿಯನ್ನು ಕಳೆದು, ಮಂಗಲ ಕಾರ್ಯಗಳನ್ನು ಮುಗಿಸಿ, ಸುಹಾಸಿತ ಶಸ್ತ್ರಾಸ್ತ್ರಗಳೊಂದಿಗೆ ರಣರಂಗದ ಕಡೆ ಸಾಗೋಣ.””

05149038 ವೈಶಂಪಾಯನ ಉವಾಚ।
05149038a ತಸ್ಯ ತದ್ವಚನಂ ಶ್ರುತ್ವಾ ಧರ್ಮರಾಜಸ್ಯ ಧೀಮತಃ।
05149038c ಅಬ್ರವೀತ್ಪುಂಡರೀಕಾಕ್ಷೋ ಧನಂಜಯಮವೇಕ್ಷ್ಯ ಹ।।

ವೈಶಂಪಾಯನನು ಹೇಳಿದನು: “ಧೀಮತ ಧರ್ಮರಾಜನ ಆ ಮಾತನ್ನು ಕೇಳಿ ಪುಂಡರೀಕಾಕ್ಷನು ಧನಂಜಯನನ್ನು ನೋಡಿ ಹೇಳಿದನು:

05149039a ಮಮಾಪ್ಯೇತೇ ಮಹಾರಾಜ ಭವದ್ಭಿರ್ಯ ಉದಾಹೃತಾಃ।
05149039c ನೇತಾರಸ್ತವ ಸೇನಾಯಾಃ ಶೂರಾ ವಿಕ್ರಾಂತಯೋಧಿನಃ।
05149039e ಸರ್ವ ಏತೇ ಸಮರ್ಥಾ ಹಿ ತವ ಶತ್ರೂನ್ಪ್ರಮರ್ದಿತುಂ।।

“ಮಹಾರಾಜ! ನೀವು ಸೂಚಿಸಿರುವ ಸೇನೆಗಳ ನೇತಾರರೆಲ್ಲರೂ ಶೂರರು, ವಿಕ್ರಾಂತ ಯೋದ್ಧರು ಮತ್ತು ನಿನ್ನ ಶತ್ರುಗಳನ್ನು ಪುಡಿಮಾಡಲು ಸಮರ್ಥರು ಎಂದು ನನಗೂ ಅನ್ನಿಸುತ್ತದೆ.

05149040a ಇಂದ್ರಸ್ಯಾಪಿ ಭಯಂ ಹ್ಯೇತೇ ಜನಯೇಯುರ್ಮಹಾಹವೇ।
05149040c ಕಿಂ ಪುನರ್ಧಾರ್ತರಾಷ್ಟ್ರಾಣಾಂ ಲುಬ್ಧಾನಾಂ ಪಾಪಚೇತಸಾಂ।।

ಅವರು ಮಹಾಹವದಲ್ಲಿ ಇಂದ್ರನಲ್ಲಿಯೂ ಕೂಡ ಭಯವನ್ನು ಹುಟ್ಟಿಸುವವರು. ಇನ್ನು ಲುಬ್ಧ ಪಾಪಚೇತಸ ಧಾರ್ತರಾಷ್ಟ್ರರೇನು?

05149041a ಮಯಾಪಿ ಹಿ ಮಹಾಬಾಹೋ ತ್ವತ್ಪ್ರಿಯಾರ್ಥಮರಿಂದಮ।
05149041c ಕೃತೋ ಯತ್ನೋ ಮಹಾಂಸ್ತತ್ರ ಶಮಃ ಸ್ಯಾದಿತಿ ಭಾರತ।
05149041e ಧರ್ಮಸ್ಯ ಗತಮಾನೃಣ್ಯಂ ನ ಸ್ಮ ವಾಚ್ಯಾ ವಿವಕ್ಷತಾಂ।।

ಮಹಾಬಾಹೋ! ಅರಿಂದಮ! ಭಾರತ! ನಾನೂ ಕೂಡ ನಿನ್ನ ಸಂತೋಷಕ್ಕಾಗಿ ಶಾಂತಿಯಿರಲಿ ಎಂದು ಮಹಾ ಪ್ರಯತ್ನವನ್ನು ಮಾಡಿದೆ. ನಾವು ಧರ್ಮದ ಋಣವನ್ನು ತೀರಿಸಿದಂತಾಗಿದೆ. ಮಾತನಾಡ ಬಯಸುವವರು ನಮ್ಮನ್ನು ನಿಂದಿಸಬಾರದು.

05149042a ಕೃತಾರ್ಥಂ ಮನ್ಯತೇ ಬಾಲಃ ಸೋಽಆತ್ಮಾನಮವಿಚಕ್ಷಣಃ।
05149042c ಧಾರ್ತರಾಷ್ಟ್ರೋ ಬಲಸ್ಥಂ ಚ ಮನ್ಯತೇಽಆತ್ಮಾನಮಾತುರಃ।।

ಆ ಬಾಲಬುದ್ಧಿಯ ಧಾರ್ತರಾಷ್ಟ್ರನು ತಾನು ಕೃತಾರ್ಥನೆಂದುಕೊಂಡಿದ್ದಾನೆ. ರೋಗಿಯು ತಿಳಿದುಕೊಳ್ಳುವಂತೆ ತಾನು ಬಲಶಾಲಿಯೆಂದು ತಿಳಿದುಕೊಂಡಿದ್ದಾನೆ.

05149043a ಯುಜ್ಯತಾಂ ವಾಹಿನೀ ಸಾಧು ವಧಸಾಧ್ಯಾ ಹಿ ತೇ ಮತಾಃ।
05149043c ನ ಧಾರ್ತರಾಷ್ಟ್ರಾಃ ಶಕ್ಷ್ಯಂತಿ ಸ್ಥಾತುಂ ದೃಷ್ಟ್ವಾ ಧನಂಜಯಂ।।
05149044a ಭೀಮಸೇನಂ ಚ ಸಂಕ್ರುದ್ಧಂ ಯಮೌ ಚಾಪಿ ಯಮೋಪಮೌ।
05149044c ಯುಯುಧಾನದ್ವಿತೀಯಂ ಚ ಧೃಷ್ಟದ್ಯುಮ್ನಮಮರ್ಷಣಂ।।
05149045a ಅಭಿಮನ್ಯುಂ ದ್ರೌಪದೇಯಾನ್ವಿರಾಟದ್ರುಪದಾವಪಿ।
05149045c ಅಕ್ಷೌಹಿಣೀಪತೀಂಶ್ಚಾನ್ಯಾನ್ನರೇಂದ್ರಾನ್ದೃಢವಿಕ್ರಮಾನ್।।

ಆಗಲಿ! ಸೇನೆಯನ್ನು ಹೂಡು. ವಧಿಸಿಯೇ ಅವರನ್ನು ದಾರಿಗೆ ತರಬಹುದೆಂದು ನನಗನ್ನಿಸುತ್ತದೆ. ಧಾರ್ತರಾಷ್ಟ್ರರು ಧನಂಜಯನನ್ನು, ಸಂಕೃದ್ಧ ಭೀಮಸೇನನನ್ನು ಮತ್ತು ಯಮನಂತಿರುವ ಯಮಳರನ್ನು, ಅದ್ವಿತೀಯ ಯುಯುಧಾನನನ್ನು, ಅಮರ್ಷಣ ಧೃಷ್ಟದ್ಯುಮ್ನನನ್ನು, ಅಭಿಮನ್ಯುವವನ್ನು, ದ್ರೌಪದೇಯರನ್ನು, ವಿರಾಟ ದ್ರುಪದರನ್ನೂ, ಅಕ್ಷೌಹಿಣೀ ಪತಿಗಳನ್ನೂ, ದೃಢವಿಕ್ರಮರಾದ ಅನ್ಯ ನರೇಂದ್ರರನ್ನೂ ನೋಡಿ ಎದುರಿಸಲು ಅಶಕ್ತರಾಗುತ್ತಾರೆ.

05149046a ಸಾರವದ್ಬಲಮಸ್ಮಾಕಂ ದುಷ್ಪ್ರಧರ್ಷಂ ದುರಾಸದಂ।
05149046c ಧಾರ್ತರಾಷ್ಟ್ರಬಲಂ ಸಂಖ್ಯೇ ವಧಿಷ್ಯತಿ ನ ಸಂಶಯಃ।।

ಸಾರವತ್ತಾದ, ದುಷ್ಪ್ರಧರ್ಷವಾದ, ದುರಾಸದವಾದ ನಮ್ಮ ಬಲವು ಯುದ್ಧದಲ್ಲಿ ಧಾರ್ತರಾಷ್ಟ್ರನ ಬಲವನ್ನು ವಧಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.”

05149047a ಏವಮುಕ್ತೇ ತು ಕೃಷ್ಣೇನ ಸಂಪ್ರಹೃಷ್ಯನ್ನರೋತ್ತಮಾಃ।
05149047c ತೇಷಾಂ ಪ್ರಹೃಷ್ಟಮನಸಾಂ ನಾದಃ ಸಮಭವನ್ಮಹಾನ್।।

ಕೃಷ್ಣನು ಹೀಗೆ ಹೇಳಲು ನರೋತ್ತಮರು ಸಂಪ್ರಹೃಷ್ಟರಾದರು. ಆ ಪ್ರಹೃಷ್ಟಮನಸ್ಕರಲ್ಲಿ ಮಹಾ ನಾದವುಂಟಾಯಿತು.

05149048a ಯೋಗ ಇತ್ಯಥ ಸೈನ್ಯಾನಾಂ ತ್ವರತಾಂ ಸಂಪ್ರಧಾವತಾಂ।
05149048c ಹಯವಾರಣಶಬ್ದಶ್ಚ ನೇಮಿಘೋಷಶ್ಚ ಸರ್ವಶಃ।
05149048e ಶಂಖದುಂದುಭಿನಿರ್ಘೋಷಸ್ತುಮುಲಃ ಸರ್ವತೋಽಭವತ್।।

“ಯೋಗ” ಎಂದು ಕೂಗಲು ಸೇನೆಗಳು ತ್ವರೆಮಾಡಿ ಓಡತೊಡಗಿದವು. ಎಲ್ಲೆಡೆಯೂ ಆನೆ ಕುದುರೆಗಳ ಮತ್ತು ರಥಚಕ್ರಗಳ ಘೋಷವುಂಟಾಯಿತು. ಎಲ್ಲಕಡೆಯೂ ಶಂಖ-ದುಂದುಭಿ-ನಿರ್ಘೋಷಗಳ ತುಮುಲವಾಯಿತು.

05149049a ಪ್ರಯಾಸ್ಯತಾಂ ಪಾಂಡವಾನಾಂ ಸಸೈನ್ಯಾನಾಂ ಸಮಂತತಃ।
05149049c ಗಂಗೇವ ಪೂರ್ಣಾ ದುರ್ಧರ್ಷಾ ಸಮದೃಶ್ಯತ ವಾಹಿನೀ।।

ಪಾಂಡವರನ್ನು ಸುತ್ತುವರೆದು ಹೊರಟ ಸೇನೆಗಳು ತುಂಬಿ ಹರಿಯುತ್ತಿರುವ ಗಂಗಾ ಪ್ರವಾಹದಂತೆ ದುರ್ಧರ್ಷವಾಗಿ ಕಂಡಿತು.

05149050a ಅಗ್ರಾನೀಕೇ ಭೀಮಸೇನೋ ಮಾದ್ರೀಪುತ್ರೌ ಚ ದಂಶಿತೌ।
05149050c ಸೌಭದ್ರೋ ದ್ರೌಪದೇಯಾಶ್ಚ ಧೃಷ್ಟದ್ಯುಮ್ನಶ್ಚ ಪಾರ್ಷತಃ।
05149050e ಪ್ರಭದ್ರಕಾಶ್ಚ ಪಾಂಚಾಲಾ ಭೀಮಸೇನಮುಖಾ ಯಯುಃ।।

ಸೇನೆಯ ಮುಂದೆ ಭೀಮಸೇನ ಮತ್ತು ಕವಚಧಾರಿ ಮಾದ್ರೀಪುತ್ರರೀರ್ವರು ನಡೆದರು. ಭೀಮಸೇನನ ಹಿಂದೆ ಸೌಭದ್ರಿ, ದ್ರೌಪದೇಯರು, ಪಾರ್ಷತ ಧೃಷ್ಟದ್ಯುಮ್ನ, ಪಾಂಚಾಲರು ಮತ್ತು ಪ್ರಭದ್ರಕರು ನಡೆದರು.

05149051a ತತಃ ಶಬ್ದಃ ಸಮಭವತ್ಸಮುದ್ರಸ್ಯೇವ ಪರ್ವಣಿ।
05149051c ಹೃಷ್ಟಾನಾಂ ಸಂಪ್ರಯಾತಾನಾಂ ಘೋಷೋ ದಿವಮಿವಾಸ್ಪೃಶತ್।।

ಆಗ ಹುಣ್ಣಿಮೆಯಂದು ಸಮುದ್ರವು ಭೋರ್ಗರೆಯುವಂತೆ ಹರ್ಷದಿಂದ ಪ್ರಯಾಣಿಸುತ್ತಿರುವವರ ಘೋಷವು ದಿವವನ್ನು ಮುಟ್ಟುವಷ್ಟಾಯಿತು.

05149052a ಪ್ರಹೃಷ್ಟಾ ದಂಶಿತಾ ಯೋಧಾಃ ಪರಾನೀಕವಿದಾರಣಾಃ।
05149052c ತೇಷಾಂ ಮಧ್ಯೇ ಯಯೌ ರಾಜಾ ಕುಂತೀಪುತ್ರೋ ಯುಧಿಷ್ಠಿರಃ।।

ಹರ್ಷಿತರಾದ, ಸಂಪೂರ್ಣ ರಕ್ಷಿತರಾದ, ಶತ್ರುಸೇನೆಯನ್ನು ತುಂಡರಿಸಬಲ್ಲ ಆ ಯೋಧರ ಮಧ್ಯೆ ರಾಜಾ ಕುಂತೀಪುತ್ರ ಯುಧಿಷ್ಠಿರನು ನಡೆದನು.

05149053a ಶಕಟಾಪಣವೇಶಾಶ್ಚ ಯಾನಯುಗ್ಯಂ ಚ ಸರ್ವಶಃ।
05149053c ಕೋಶಯಂತ್ರಾಯುಧಂ ಚೈವ ಯೇ ಚ ವೈದ್ಯಾಶ್ಚಿಕಿತ್ಸಕಾಃ।।
05149054a ಫಲ್ಗು ಯಚ್ಚ ಬಲಂ ಕಿಂ ಚಿತ್ತಥೈವ ಕೃಶದುರ್ಬಲಂ।
05149054c ತತ್ಸಂಗೃಹ್ಯ ಯಯೌ ರಾಜಾ ಯೇ ಚಾಪಿ ಪರಿಚಾರಕಾಃ।।

ಬಂಡಿಗಳು, ವ್ಯಾಪಾರದ ಬಂಡಿಗಳು, ವೇಶ್ಯಾವಾಟಿಕೆಗಳು, ಬಂಡಿಗಳ ಸರಣಿ, ಕೋಶಯಂತ್ರಗಳು, ಆಯುಧಗಳು, ವೈದ್ಯರು, ಚಿಕಿತ್ಸಕರು, ಸೇನೆಯನ್ನು ಹಿಂಬಾಲಿಸಿ ಬಂದಿರುವ ಕೃಷ-ದುರ್ಬಲರನ್ನೂ ಪರಿಚಾರಕರನ್ನೂ ಒಟ್ಟುಗೂಡಿಸಿಕೊಂಡು ರಾಜನು ಹೊರಟನು.

05149055a ಉಪಪ್ಲವ್ಯೇ ತು ಪಾಂಚಾಲೀ ದ್ರೌಪದೀ ಸತ್ಯವಾದಿನೀ।
05149055c ಸಹ ಸ್ತ್ರೀಭಿರ್ನಿವವೃತೇ ದಾಸೀದಾಸಸಮಾವೃತಾ।।

ಪಾಂಚಾಲೀ ಸತ್ಯವಾದಿನೀ ದ್ರೌಪದಿಯು ಉಪಪ್ಲವ್ಯದಲ್ಲಿ ಇತರ ಸ್ತ್ರೀಯರೊಂದಿಗೆ ದಾಸೀದಾಸರೊಂದಿಗೆ ಉಳಿದುಕೊಂಡಳು.

05149056a ಕೃತ್ವಾ ಮೂಲಪ್ರತೀಕಾರಾನ್ ಗುಲ್ಮೈಃ ಸ್ಥಾವರಜಂಗಮೈಃ।
05149056c ಸ್ಕಂಧಾವಾರೇಣ ಮಹತಾ ಪ್ರಯಯುಃ ಪಾಂಡುನಂದನಾಃ।।

ಅಲ್ಲಿ ಚಲಿಸುವ ಮತ್ತು ಸ್ಥಿರವಾಗಿರುವ ಸೇನೆಗಳಿಂದ ಮೂಲಭೂತ ರಕ್ಷಣೆಯನ್ನು ನೀಡಿ ಪಾಂಡುನಂದನರು ಪ್ರಯಾಣಿಸಿದರು.

05149057a ದದತೋ ಗಾಂ ಹಿರಣ್ಯಂ ಚ ಬ್ರಾಹ್ಮಣೈರಭಿಸಂವೃತಾಃ।
05149057c ಸ್ತೂಯಮಾನಾ ಯಯೂ ರಾಜನ್ರಥೈರ್ಮಣಿವಿಭೂಷಿತೈಃ।।

ರಾಜನ್! ಮಣಿವಿಭೂಷಿತ ರಥಗಳಲ್ಲಿ ಅವರು ಸತ್ತುವರೆದು ಸ್ತುತಿಸುತ್ತಿದ್ದ ಬ್ರಾಹ್ಮಣರಿಗೆ ಗೋವು ಹಿರಣ್ಯಗಳನ್ನು ನೀಡುತ್ತಾ ಪ್ರಯಾಣಿಸಿದರು.

05149058a ಕೇಕಯಾ ಧೃಷ್ಟಕೇತುಶ್ಚ ಪುತ್ರಃ ಕಾಶ್ಯಸ್ಯ ಚಾಭಿಭೂಃ।
05149058c ಶ್ರೇಣಿಮಾನ್ವಸುದಾನಶ್ಚ ಶಿಖಂಡೀ ಚಾಪರಾಜಿತಃ।।
05149059a ಹೃಷ್ಟಾಸ್ತುಷ್ಟಾಃ ಕವಚಿನಃ ಸಶಸ್ತ್ರಾಃ ಸಮಲಂಕೃತಾಃ।
05149059c ರಾಜಾನಮನ್ವಯುಃ ಸರ್ವೇ ಪರಿವಾರ್ಯ ಯುಧಿಷ್ಠಿರಂ।।

ಕೇಕಯರು, ಧೃಷ್ಟಕೇತು, ಕಾಶಿಯ ರಾಜನ ಮಗ, ಶ್ರೇಣಿಮಾನ್, ವಸುದಾನ, ಅಪರಾಜಿತ ಶಿಖಂಡೀ ಇವರು ಹೃಷ್ಟರೂ ತುಷ್ಟರೂ ಆಗಿ, ಕವಚಗಳನ್ನು ಧರಿಸಿ, ಸಶಸ್ತ್ರರಾಗಿ, ಸಮಲಂಕೃತರಾಗಿ ಎಲ್ಲರೂ ರಾಜ ಯುಧಿಷ್ಠಿರನನ್ನು ಸುತ್ತುವರೆದು ಹಿಂಬಾಲಿಸಿದರು.

05149060a ಜಘನಾರ್ಧೇ ವಿರಾಟಶ್ಚ ಯಜ್ಞಾಸೇನಶ್ಚ ಸೋಮಕಿಃ।
05149060c ಸುಧರ್ಮಾ ಕುಂತಿಭೋಜಶ್ಚ ಧೃಷ್ಟದ್ಯುಮ್ನಸ್ಯ ಚಾತ್ಮಜಾಃ।।
05149061a ರಥಾಯುತಾನಿ ಚತ್ವಾರಿ ಹಯಾಃ ಪಂಚಗುಣಾಸ್ತತಃ।
05149061c ಪತ್ತಿಸೈನ್ಯಂ ದಶಗುಣಂ ಸಾದಿನಾಮಯುತಾನಿ ಷಟ್।।

ಹಿಂದೆ ವಿರಾಟ, ಯಜ್ಞಾಸೇನ, ಸೋಮಕಿ, ಸುಧರ್ಮ, ಕುಂತಿಭೋಜ, ಮತ್ತು ಧೃಷ್ಟದ್ಯುಮ್ನನ ಮಕ್ಕಳು - ನಲವತ್ತು ಸಾವಿರ ರಥಗಳು, ಅದರ ಐದುಪಟ್ಟು ಸಂಖ್ಯೆಯ ಕುದುರೆಗಳು, ಅದರ ಹತ್ತು ಪಟ್ಟು ಕಾಲಾಳುಗಳು, ಮತ್ತು ಅರವತ್ತು ಸಾವಿರ ಸವಾರಿ ಸೈನಿಕರೊಂದಿಗೆ ನಡೆದರು.

05149062a ಅನಾಧೃಷ್ಟಿಶ್ಚೇಕಿತಾನಶ್ಚೇದಿರಾಜೋಽಥ ಸಾತ್ಯಕಿಃ।
05149062c ಪರಿವಾರ್ಯ ಯಯುಃ ಸರ್ವೇ ವಾಸುದೇವಧನಂಜಯೌ।।

ಅನಾಧೃಷ್ಟಿ, ಚೇಕಿತಾನ, ಚೇದಿರಾಜ ಮತ್ತು ಸಾತ್ಯಕಿ ಎಲ್ಲರೂ ವಾಸುದೇವ-ಧನಂಜಯರನ್ನು ಸುತ್ತುವರೆದು ನಡೆದರು.

05149063a ಆಸಾದ್ಯ ತು ಕುರುಕ್ಷೇತ್ರಂ ವ್ಯೂಢಾನೀಕಾಃ ಪ್ರಹಾರಿಣಃ।
05149063c ಪಾಂಡವಾಃ ಸಮದೃಶ್ಯಂತ ನರ್ದಂತೋ ವೃಷಭಾ ಇವ।।

ಸೇನೆಗಳನ್ನು ರಚಿಸಿ ಕುರುಕ್ಷೇತ್ರವನ್ನು ಸೇರಿ ಪಾಂಡವರು ಘೀಳಿಡುವ ಹೋರಿಗಳಂತೆ ಕಂಡುಬಂದರು.

05149064a ತೇಽವಗಾಹ್ಯ ಕುರುಕ್ಷೇತ್ರಂ ಶಂಖಾನ್ದಧ್ಮುರರಿಂದಮಾಃ।
05149064c ತಥೈವ ದಧ್ಮತುಃ ಶಂಖೌ ವಾಸುದೇವಧನಂಜಯೌ।।

ಆ ಅರಿಂದಮರು ಕುರುಕ್ಷೇತ್ರದಲ್ಲಿ ಇಳಿದು ಶಂಖಗಳನ್ನು ಊದಿದರು. ಹಾಗೆಯೇ ವಾಸುದೇವ-ಧನಂಜಯರೂ ಶಂಖಗಳನ್ನು ಊದಿದರು.

05149065a ಪಾಂಚಜನ್ಯಸ್ಯ ನಿರ್ಘೋಷಂ ವಿಸ್ಫೂರ್ಜಿತಮಿವಾಶನೇಃ।
05149065c ನಿಶಮ್ಯ ಸರ್ವಸೈನ್ಯಾನಿ ಸಮಹೃಷ್ಯಂತ ಸರ್ವಶಃ।।

ಸಿಡಿಲು ಬಡಿದಂತೆ ಕೇಳಿಬಂದ ಪಾಂಚಜನ್ಯದ ನಿರ್ಘೋಷವನ್ನು ಕೇಳಿ ಸರ್ವ ಸೇನೆಯಲ್ಲಿ ಎಲ್ಲಕಡೆಯೂ ಹರ್ಷೋದ್ಗಾರವಾಯಿತು.

05149066a ಶಂಖದುಂದುಭಿಸಂಸೃಷ್ಟಃ ಸಿಂಹನಾದಸ್ತರಸ್ವಿನಾಂ।
05149066c ಪೃಥಿವೀಂ ಚಾಂತರಿಕ್ಷಂ ಚ ಸಾಗರಾಂಶ್ಚಾನ್ವನಾದಯತ್।।

ತರಸ್ವಿಗಳ ಸಿಂಹನಾದಗಳೊಂದಿಗೆ ಶಂಖದುಂಧುಭಿಗಳು ಸೇರಿ ನಾದವು ಭೂಮಿ, ಅಂತರಿಕ್ಷ ಮತ್ತು ಸಾಗರಗಳನ್ನು ಸೇರಿತು.

05149067a ತತೋ ದೇಶೇ ಸಮೇ ಸ್ನಿಗ್ಧೇ ಪ್ರಭೂತಯವಸೇಂಧನೇ।
05149067c ನಿವೇಶಯಾಮಾಸ ತದಾ ಸೇನಾಂ ರಾಜಾ ಯುಧಿಷ್ಠಿರಃ।।
05149068a ಪರಿಹೃತ್ಯ ಶ್ಮಶಾನಾನಿ ದೇವತಾಯತನಾನಿ ಚ।
05149068c ಆಶ್ರಮಾಂಶ್ಚ ಮಹರ್ಷೀಣಾಂ ತೀರ್ಥಾನ್ಯಾಯತನಾನಿ ಚ।।

ಆಗ ರಾಜಾ ಯುಧಿಷ್ಠಿರನು ಸಮಪ್ರದೇಶದಲ್ಲಿ, ಸುಂದರವಾದ, ಸಾಕಷ್ಟು ನೀರು ಮೇವುಗಳಿರುವಲ್ಲಿ, ಶ್ಮಶಾನ, ದೇವಾಲಯ, ಮಹರ್ಷಿಗಳ ಆಶ್ರಮ, ತೀರ್ಥಸ್ಥಾನಗಳನ್ನು ಬಿಟ್ಟು, ತನ್ನ ಸೇನೆಯನ್ನು ಬೀಡುಬಿಡಿಸಿದನು.

05149069a ಮಧುರಾನೂಷರೇ ದೇಶೇ ಶಿವೇ ಪುಣ್ಯೇ ಮಹೀಪತಿಃ।
05149069c ನಿವೇಶಂ ಕಾರಯಾಮಾಸ ಕುಂತೀಪುತ್ರೋ ಯುಧಿಷ್ಠಿರಃ।।

ಮಹೀಪತಿ ಕುಂತೀಪುತ್ರ ಯುಧಿಷ್ಠಿರನು ಮಂಗಳ, ಪುಣ್ಯ, ಉಪ್ಪಿಲ್ಲದ ಪ್ರದೇಶದಲ್ಲಿ ತನ್ನ ಬಿಡಾರವನ್ನು ಮಾಡಿಸಿಕೊಂಡನು.

05149070a ತತಶ್ಚ ಪುನರುತ್ಥಾಯ ಸುಖೀ ವಿಶ್ರಾಂತವಾಹನಃ।
05149070c ಪ್ರಯಯೌ ಪೃಥಿವೀಪಾಲೈರ್ವೃತಃ ಶತಸಹಸ್ರಶಃ।।

ವಾಹನಗಳು ವಿಶ್ರಾಂತಿಪಡೆದು ಸುಖಿಗಳಾದ ನಂತರ, ಪುನಃ ಅಲ್ಲಿಂದ ಹೊರಟು ನೂರಾರು ಸಹಸ್ರಾರು ಪೃಥಿವೀಪಾಲರಿಂದ ಆವೃತನಾಗಿ ಪುನಃ ಪ್ರಯಾಣಿಸಿದನು.

05149071a ವಿದ್ರಾವ್ಯ ಶತಶೋ ಗುಲ್ಮಾನ್ಧಾರ್ತರಾಷ್ಟ್ರಸ್ಯ ಸೈನಿಕಾನ್।
05149071c ಪರ್ಯಕ್ರಾಮತ್ಸಮಂತಾಚ್ಚ ಪಾರ್ಥೇನ ಸಹ ಕೇಶವಃ।।

ಪಾರ್ಥನೊಂದಿಗೆ ಕೇಶವನು ಸುತ್ತು ಹಾಕಿ ಧಾರ್ತರಾಷ್ಟ್ರನ ನೂರಾರು ಗುಪ್ತಚಾರಿ ಸೈನಿಕ ತುಕಡಿಗಳನ್ನು ಓಡಿಸಿದನು.

05149072a ಶಿಬಿರಂ ಮಾಪಯಾಮಾಸ ಧೃಷ್ಟದ್ಯುಮ್ನಶ್ಚ ಪಾರ್ಷತಃ।
05149072c ಸಾತ್ಯಕಿಶ್ಚ ರಥೋದಾರೋ ಯುಯುಧಾನಃ ಪ್ರತಾಪವಾನ್।।
05149073a ಆಸಾದ್ಯ ಸರಿತಂ ಪುಣ್ಯಾಂ ಕುರುಕ್ಷೇತ್ರೇ ಹಿರಣ್ವತೀಂ।
05149073c ಸೂಪತೀರ್ಥಾಂ ಶುಚಿಜಲಾಂ ಶರ್ಕರಾಪಂಕವರ್ಜಿತಾಂ।।

ಪಾರ್ಷತ ಧೃಷ್ಟದ್ಯುಮ್ನನು ರಥೋದಾರ ಪ್ರತಾಪವಾನ್ ಯುಯುಧಾನ ಸಾತ್ಯಕಿಯೊಡನೆ ಶಿಬಿರವನ್ನು ಕುರುಕ್ಷೇತ್ರದಲ್ಲಿ ಸೂಪತೀರ್ಥ, ಶುದ್ಧ ನೀರಿನ, ಕಲ್ಲು-ಕೆಸರುಗಳಿಂದ ವರ್ಜಿತವಾದ ಪುಣ್ಯ ಹಿರಣ್ವತೀ ನದಿಯವರೆಗೆ ಅಳೆದರು.

05149074a ಖಾನಯಾಮಾಸ ಪರಿಖಾಂ ಕೇಶವಸ್ತತ್ರ ಭಾರತ।
05149074c ಗುಪ್ತ್ಯರ್ಥಮಪಿ ಚಾದಿಶ್ಯ ಬಲಂ ತತ್ರ ನ್ಯವೇಶಯತ್।।

ಭಾರತ! ಅಲ್ಲಿ ಕೇಶವನು ಒಂದು ಕೋಡಿಯನ್ನು ತೋಡಿಸಿ, ಗುಪ್ತ ಉದ್ದೇಶಗಳನ್ನು ತಿಳಿಸಿ ಹೇಳಿ ಬಲವೊಂದನ್ನು ಇರಿಸಿದನು.

05149075a ವಿಧಿರ್ಯಃ ಶಿಬಿರಸ್ಯಾಸೀತ್ಪಾಂಡವಾನಾಂ ಮಹಾತ್ಮನಾಂ।
05149075c ತದ್ವಿಧಾನಿ ನರೇಂದ್ರಾಣಾಂ ಕಾರಯಾಮಾಸ ಕೇಶವಃ।।
05149076a ಪ್ರಭೂತಜಲಕಾಷ್ಠಾನಿ ದುರಾಧರ್ಷತರಾಣಿ ಚ।
05149076c ಭಕ್ಷ್ಯಭೋಜ್ಯೋಪಪನ್ನಾನಿ ಶತಶೋಽಥ ಸಹಸ್ರಶಃ।।

ಮಹಾತ್ಮ ಪಾಂಡವರ ಶಿಬಿರಗಳಿದ್ದ ಹಾಗೆ ಇತರ ನರೇಂದ್ರರಿಗೂ ಕೂಡ ಕೇಶವನು ಹೇರಳವಾಗಿ ನೀರು-ಕಟ್ಟಿಗೆಗಳನ್ನೂ, ಕಡುರಕ್ಷಣೆಗಳನ್ನೂ, ಭಕ್ಷ್ಯ-ಭೋಜ್ಯಾದಿಗಳನ್ನು ಒದಗಿಸಿ ನೂರಾರು ಸಹಸ್ರಾರು ಶಿಬಿರಗಳನ್ನು ಮಾಡಿಸಿದನು.

05149077a ಶಿಬಿರಾಣಿ ಮಹಾರ್ಹಾಣಿ ರಾಜ್ಞಾಂ ತತ್ರ ಪೃಥಕ್ ಪೃಥಕ್।
05149077c ವಿಮಾನಾನೀವ ರಾಜೇಂದ್ರ ನಿವಿಷ್ಟಾನಿ ಮಹೀತಲೇ।।

ರಾಜೇಂದ್ರ! ಅಲ್ಲಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ನಿರ್ಮಿಸಲ್ಪಟ್ಟಿದ್ದ ಆ ವೈಭವೋಪೇತ ಶಿಬಿರಗಳು ಮಹೀತಲಕ್ಕೆ ಬಂದಿಳಿದ ವಿಮಾನಗಳಂತೆ ಶೋಭಿಸುತ್ತಿದ್ದವು.

05149078a ತತ್ರಾಸಂ ಶಿಲ್ಪಿನಃ ಪ್ರಾಜ್ಞಾಃ ಶತಶೋ ದತ್ತವೇತನಾಃ।
05149078c ಸರ್ವೋಪಕರಣೈರ್ಯುಕ್ತಾ ವೈದ್ಯಾಶ್ಚ ಸುವಿಶಾರದಾಃ।।

ಅಲ್ಲಿ ನೂರಾರು, ವೇತನಗಳನ್ನು ಪಡೆದ, ಪ್ರಾಜ್ಞ ಶಿಲ್ಪಿಗಳಿದ್ದರು. ಸವಿಶಾರದ, ಸರ್ವೋಪಕರಣಯುಕ್ತ ವೈದ್ಯರಿದ್ದರು.

05149079a ಜ್ಯಾಧನುರ್ವರ್ಮಶಸ್ತ್ರಾಣಾಂ ತಥೈವ ಮಧುಸರ್ಪಿಷೋಃ।
05149079c ಸಸರ್ಜ ರಸಪಾಂಸೂನಾಂ ರಾಶಯಃ ಪರ್ವತೋಪಮಾಃ।।
05149080a ಬಹೂದಕಂ ಸುಯವಸಂ ತುಷಾಂಗಾರಸಮನ್ವಿತಂ।
05149080c ಶಿಬಿರೇ ಶಿಬಿರೇ ರಾಜಾ ಸಂಚಕಾರ ಯುಧಿಷ್ಠಿರಃ।।
05149081a ಮಹಾಯಂತ್ರಾಣಿ ನಾರಾಚಾಸ್ತೋಮರರ್ಷ್ಟಿಪರಶ್ವಧಾಃ।
05149081c ಧನೂಂಷಿ ಕವಚಾದೀನಿ ಹೃದ್ಯಭೂವನ್ನೃಣಾಂ ತದಾ।।

ಶಿಬಿರ ಶಿಬಿರಗಳಿಗೂ ರಾಜ ಯುಧಿಷ್ಠಿರನು ಬೇಕಾದಷ್ಟು ಧನುಸ್ಸು-ಬಾಣಗಳನ್ನು, ಕವಚ-ಅಸ್ತ್ರಗಳನ್ನು, ಜೇನು-ತುಪ್ಪಗಳನ್ನು, ಪರ್ವತಗಳಂತೆ ತೋರುವ ರಾಶಿಗಟ್ಟಲೆ ಆಹಾರ ಪದಾರ್ಥಗಳನ್ನು, ಸಾಕಷ್ಟು ನೀರು, ಉತ್ತಮ ಹುಲ್ಲು, ಇದ್ದಿಲು-ಕಟ್ಟಿಗೆಗಳನ್ನು, ಮಹಾಯಂತ್ರಗಳನ್ನು, ಕಬ್ಬಿಣದ ಬಾಣ-ತೋಮರ-ಈಟಿ-ಕೊಡಲಿಗಳನ್ನು, ಧನುಸ್ಸು-ಕವಚಾದಿಗಳನ್ನು, ಮನುಷ್ಯರ ಎದೆಗಳನ್ನು ಸಿಂಗರಿಸುವ ಕವಚಗಳನ್ನು ಕೊಡಿಸಿದನು.

05149082a ಗಜಾಃ ಕಂಕಟಸಂನ್ನಾಹಾ ಲೋಹವರ್ಮೋತ್ತರಚ್ಚದಾಃ।
05149082c ಅದೃಶ್ಯಂಸ್ತತ್ರ ಗಿರ್ಯಾಭಾಃ ಸಹಸ್ರಶತಯೋಧಿನಃ।।

ಮೊಳೆಗಳಿಂದ ಕೂಡಿದ ಲೋಹದ ಹೊದಿಕೆಗಳನ್ನು ಹೊದಿಸಿದ, ಪರ್ವತಗಳಂತೆ ತೋರುತ್ತಿದ್ದ, ನೂರಾರು ಸಹಸ್ರಾರು ಯೋಧರೊಂದಿಗೆ ಹೋರಾಡಬಲ್ಲ ಆನೆಗಳು ಅಲ್ಲಿ ಕಂಡುಬಂದವು.

05149083a ನಿವಿಷ್ಟಾನ್ಪಾಂಡವಾಂಸ್ತತ್ರ ಜ್ಞಾತ್ವಾ ಮಿತ್ರಾಣಿ ಭಾರತ।
05149083c ಅಭಿಸಸ್ರುರ್ಯಥೋದ್ದೇಶಂ ಸಬಲಾಃ ಸಹವಾಹನಾಃ।।

ಭಾರತ! ಪಾಂಡವರು ಅಲ್ಲಿ ಬೀಡುಬಿಟ್ಟಿದ್ದಾರೆ ಎಂದು ತಿಳಿದು ಅವರ ಮಿತ್ರರು ಸೇನೆಗಳೊಂದಿಗೆ, ವಾಹನಗಳೊಂದಿಗೆ ಆ ಪ್ರದೇಶದಲ್ಲಿ ಬಂದು ಸೇರಿದರು.

05149084a ಚರಿತಬ್ರಹ್ಮಚರ್ಯಾಸ್ತೇ ಸೋಮಪಾ ಭೂರಿದಕ್ಷಿಣಾಃ।
05149084c ಜಯಾಯ ಪಾಂಡುಪುತ್ರಾಣಾಂ ಸಮಾಜಗ್ಮುರ್ಮಹೀಕ್ಷಿತಃ।।

ಬ್ರಹ್ಮಚರ್ಯವನ್ನು ಆಚರಿಸಿದ, ಸೋಮವನ್ನು ಕುಡಿದ, ಭೂರಿದಕ್ಷಿಣೆಗಳನ್ನಿತ್ತ, ಮಹೀಕ್ಷಿತರು ಪಾಂಡುಪುತ್ರರ ಜಯಕ್ಕಾಗಿ ಬಂದು ಸೇರಿಕೊಂಡರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸೇನಾನಿರ್ಯಾಣ ಪರ್ವಣಿ ಕುರುಕ್ಷೇತ್ರಪ್ರವೇಶೇ ಏಕೋನಪಂಚಾಶದಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸೇನಾನಿರ್ಯಾಣ ಪರ್ವದಲ್ಲಿ ಕುರುಕ್ಷೇತ್ರಪ್ರವೇಶದಲ್ಲಿ ನೂರಾನಲ್ವತ್ತೊಂಭತ್ತನೆಯ ಅಧ್ಯಾಯವು.