147 ಧೃತರಾಷ್ಟ್ರವಾಕ್ಯಕಥನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಕರ್ಣ‌ವಿವಾದ ಪರ್ವ

ಅಧ್ಯಾಯ 147

ಸಾರ

ಕೃಷ್ಣನು ಕುರುಸಂಸದಿಯಲ್ಲಿ ದುರ್ಯೋಧನನಿಗೆ ಧೃತರಾಷ್ಟ್ರನು ನುಡಿದ ಹಿತವಚನಗಳನ್ನು ವರದಿಮಾಡಿದುದು (1-35).

05147001 ವಾಸುದೇವ ಉವಾಚ।
05147001a ಏವಮುಕ್ತೇ ತು ಗಾಂಧಾರ್ಯಾ ಧೃತರಾಷ್ಟ್ರೋ ಜನೇಶ್ವರಃ।
05147001c ದುರ್ಯೋಧನಮುವಾಚೇದಂ ನೃಪಮಧ್ಯೇ ಜನಾಧಿಪ।।

ವಾಸುದೇವನು ಹೇಳಿದನು: “ಜನಾಧಿಪ! ಗಾಂಧಾರಿಯು ಹೀಗೆ ಹೇಳಲು ಜನೇಶ್ವರ ಧೃತರಾಷ್ಟ್ರನು ನೃಪರ ಮಧ್ಯದಲ್ಲಿ ದುರ್ಯೋಧನನಿಗೆ ಹೀಗೆ ಹೇಳಿದನು:

05147002a ದುರ್ಯೋಧನ ನಿಬೋಧೇದಂ ಯತ್ತ್ವಾಂ ವಕ್ಷ್ಯಾಮಿ ಪುತ್ರಕ।
05147002c ತಥಾ ತತ್ಕುರು ಭದ್ರಂ ತೇ ಯದ್ಯಸ್ತಿ ಪಿತೃಗೌರವಂ।।

“ಪುತ್ರಕ! ದುರ್ಯೋಧನ! ಈಗ ನಾನು ನಿನಗೆ ಏನು ಹೇಳುತ್ತೇನೋ ಅದನ್ನು ಕೇಳಿ, ನಿನಗೆ ತಂದೆಯ ಮೇಲೆ ಗೌರವವಿದೆಯಂತಾದರೆ ಅದರಂತೆ ನಡೆದುಕೋ! ನಿನಗೆ ಮಂಗಳವಾಗಲಿ!

05147003a ಸೋಮಃ ಪ್ರಜಾಪತಿಃ ಪೂರ್ವಂ ಕುರೂಣಾಂ ವಂಶವರ್ಧನಃ।
05147003c ಸೋಮಾದ್ಬಭೂವ ಷಷ್ಠೋ ವೈ ಯಯಾತಿರ್ನಹುಷಾತ್ಮಜಃ।।

ಹಿಂದೆ ಪ್ರಜಾಪತಿ ಸೋಮನು ಕುರುಗಳ ವಂಶವನ್ನು ಸ್ಥಾಪಿಸಿದನು. ಸೋಮನಿಂದ ಆರನೆಯವನು ನಹುಷಾತ್ಮಜ ಯಯಾತಿಯಾಗಿದ್ದನು.

05147004a ತಸ್ಯ ಪುತ್ರಾ ಬಭೂವುಶ್ಚ ಪಂಚ ರಾಜರ್ಷಿಸತ್ತಮಾಃ।
05147004c ತೇಷಾಂ ಯದುರ್ಮಹಾತೇಜಾ ಜ್ಯೇಷ್ಠಃ ಸಮಭವತ್ಪ್ರಭುಃ।।

ಅವನಿಗೆ ಐವರು ರಾಜರ್ಷಿಸತ್ತಮ ಮಕ್ಕಳಿದ್ದರು. ಅವರಲ್ಲಿ ಮಹಾತೇಜಸ್ವಿ ಪ್ರಭು ಯದುವು ಜ್ಯೇಷ್ಠನಾಗಿದ್ದನು.

05147005a ಪೂರುರ್ಯವೀಯಾಂಶ್ಚ ತತೋ ಯೋಽಸ್ಮಾಕಂ ವಂಶವರ್ಧನಃ।
05147005c ಶರ್ಮಿಷ್ಠಾಯಾಃ ಸಂಪ್ರಸೂತೋ ದುಹಿತುರ್ವೃಷಪರ್ವಣಃ।।

ನಮ್ಮ ವಂಶವನ್ನು ಬೆಳೆಸಿದ, ಕಿರಿಯವ ಪುರುವು ವೃಷಪರ್ವಣನ ಮಗಳು ಶರ್ಮಿಷ್ಠೆಯಲ್ಲಿ ಜನಿಸಿದ್ದನು.

05147006a ಯದುಶ್ಚ ಭರತಶ್ರೇಷ್ಠ ದೇವಯಾನ್ಯಾಃ ಸುತೋಽಭವತ್।
05147006c ದೌಹಿತ್ರಸ್ತಾತ ಶುಕ್ರಸ್ಯ ಕಾವ್ಯಸ್ಯಾಮಿತತೇಜಸಃ।।

ಭರತಶ್ರೇಷ್ಠ! ಯದುವಾದರೋ ಅಮಿತ ತೇಜಸ್ವಿ ಕಾವ್ಯ ಶುಕ್ರನ ಮಗಳು ದೇವಯಾನಿಯ ಮಗನಾಗಿದ್ದನು.

05147007a ಯಾದವಾನಾಂ ಕುಲಕರೋ ಬಲವಾನ್ವೀರ್ಯಸಮ್ಮತಃ।
05147007c ಅವಮೇನೇ ಸ ತು ಕ್ಷತ್ರಂ ದರ್ಪಪೂರ್ಣಃ ಸುಮಂದಧೀಃ।।

ಯಾದವರ ಕುಲಕರ ಬಲವಾನ್ ವೀರ್ಯಸಮ್ಮತನು ದರ್ಪದಿಂದ ತುಂಬಿ, ಮಂದಬುದ್ಧಿಯುಳ್ಳವನಾಗಿ ಕ್ಷತ್ರಿಯತ್ವವನ್ನು ಕೀಳಾಗಿ ಕಂಡನು.

05147008a ನ ಚಾತಿಷ್ಠತ್ಪಿತುಃ ಶಾಸ್ತ್ರೇ ಬಲದರ್ಪವಿಮೋಹಿತಃ।
05147008c ಅವಮೇನೇ ಚ ಪಿತರಂ ಭ್ರಾತೄಂಶ್ಚಾಪ್ಯಪರಾಜಿತಃ।।

ಬಲದರ್ಪವಿಮೋಹಿತನಾದ ಅವನು ತಂದೆಯ ಶಾಸನದಂತೆ ನಡೆದುಕೊಳ್ಳಲಿಲ್ಲ. ಆ ಅಪರಾಜಿತನು ತಂದೆಯನ್ನೂ ಸಹೋದರರನ್ನೂ ಅವಮಾನಿಸಿದನು.

05147009a ಪೃಥಿವ್ಯಾಂ ಚತುರಂತಾಯಾಂ ಯದುರೇವಾಭವದ್ಬಲೀ।
05147009c ವಶೇ ಕೃತ್ವಾ ಸ ನೃಪತೀನವಸನ್ನಾಗಸಾಹ್ವಯೇ।।

ಭೂಮಿಯ ನಾಲ್ಕೂ ಕಡೆಗಳಲ್ಲಿಯೂ ಯದುವು ಬಲಶಾಲಿಯಾಗಿದ್ದನು. ನೃಪತಿಗಳನ್ನು ವಶಪಡಿಸಿಕೊಂಡು ನಾಗಸಾಹ್ವಯದಲ್ಲಿ ವಾಸಿಸುತ್ತಿದ್ದನು.

05147010a ತಂ ಪಿತಾ ಪರಮಕ್ರುದ್ಧೋ ಯಯಾತಿರ್ನಹುಷಾತ್ಮಜಃ।
05147010c ಶಶಾಪ ಪುತ್ರಂ ಗಾಂಧಾರೇ ರಾಜ್ಯಾಚ್ಚ ವ್ಯಪರೋಪಯತ್।।

ಗಾಂಧಾರೇ! ಅವನ ತಂದೆ ನಹುಷಾತ್ಮಜ ಯಯಾತಿಯು ಅವನನ್ನು ಶಪಿಸಿ ರಾಜ್ಯದಿಂದ ಹೊರಹಾಕಿದನು.

05147011a ಯ ಚೈನಮನ್ವವರ್ತಂತ ಭ್ರಾತರೋ ಬಲದರ್ಪಿತಂ।
05147011c ಶಶಾಪ ತಾನಪಿ ಕ್ರುದ್ಧೋ ಯಯಾತಿಸ್ತನಯಾನಥ।।

ಬಲದರ್ಪಿತನಾದ ಆ ಅಣ್ಣನನ್ನು ಅನುಸರಿಸಿದ ತನ್ನ ಇತರ ಮಕ್ಕಳನ್ನೂ ಕೂಡ ಕ್ರುದ್ಧನಾದ ಯಯಾತಿಯು ಶಪಿಸಿದನು.

05147012a ಯವೀಯಾಂಸಂ ತತಃ ಪೂರುಂ ಪುತ್ರಂ ಸ್ವವಶವರ್ತಿನಂ।
05147012c ರಾಜ್ಯೇ ನಿವೇಶಯಾಮಾಸ ವಿಧೇಯಂ ನೃಪಸತ್ತಮಃ।।

ಆ ನೃಪಸತ್ತಮನು ತನ್ನಂತೆ ನಡೆದುಕೊಂಡ ಕಿರಿಯ ಪುತ್ರ ವಿಧೇಯ ಪುರುವನ್ನು ರಾಜ್ಯದಲ್ಲಿರಿಸಿಕೊಂಡನು.

05147013a ಏವಂ ಜ್ಯೇಷ್ಠೋಽಪ್ಯಥೋತ್ಸಿಕ್ತೋ ನ ರಾಜ್ಯಮಭಿಜಾಯತೇ।
05147013c ಯವೀಯಾಂಸೋಽಭಿಜಾಯಂತೇ ರಾಜ್ಯಂ ವೃದ್ಧೋಪಸೇವಯಾ।।

ಹೀಗೆ ಜ್ಯೇಷ್ಠನಾದರೂ ಜಂಬಪಡುತ್ತಿದ್ದವನು ರಾಜ್ಯವನ್ನು ಪಡೆಯಲಿಲ್ಲ. ಆದರೆ ಕಿರಿಯವನಾಗಿದ್ದರೂ ವೃದ್ಧರ ಸೇವೆಯನ್ನು ಮಾಡುವವನು ರಾಜ್ಯವನ್ನು ಪಡೆದನು.

05147014a ತಥೈವ ಸರ್ವಧರ್ಮಜ್ಞಾಃ ಪಿತುರ್ಮಮ ಪಿತಾಮಹಃ।
05147014c ಪ್ರತೀಪಃ ಪೃಥಿವೀಪಾಲಸ್ತ್ರಿಷು ಲೋಕೇಷು ವಿಶ್ರುತಃ।।

ಹೀಗೆಯೇ ನನ್ನ ತಂದೆಯ ಅಜ್ಜ ಪ್ರತೀಪನು ಸರ್ವಧರ್ಮಜ್ಞನಾಗಿದ್ದು ಮೂರು ಲೋಕಗಳಲ್ಲಿಯೂ ವಿಶ್ರುತನಾದ ರಾಜನಾಗಿದ್ದನು.

05147015a ತಸ್ಯ ಪಾರ್ಥಿವಸಿಂಹಸ್ಯ ರಾಜ್ಯಂ ಧರ್ಮೇಣ ಶಾಸತಃ।
05147015c ತ್ರಯಃ ಪ್ರಜಜ್ಞೈರೇ ಪುತ್ರಾ ದೇವಕಲ್ಪಾ ಯಶಸ್ವಿನಃ।।

ರಾಜ್ಯವನ್ನು ಧರ್ಮದಿಂದ ಶಾಸನಮಾಡುತ್ತಿದ್ದ ಆ ಪಾರ್ಥಿವಸಿಂಹನಿಗೆ ಮೂವರು ದೇವಕಲ್ಪರಾದ ಯಶಸ್ವೀ ಪುತ್ರರು ಜನಿಸಿದರು.

05147016a ದೇವಾಪಿರಭವಜ್ಜ್ಯೇಷ್ಠೋ ಬಾಹ್ಲೀಕಸ್ತದನಂತರಂ।
05147016c ತೃತೀಯಃ ಶಂತನುಸ್ತಾತ ಧೃತಿಮಾನ್ಮೇ ಪಿತಾಮಹಃ।।

ದೇವಾಪಿಯು ಜ್ಯೇಷ್ಠನಾಗಿದ್ದನು. ಬಾಹ್ಲೀಕನು ಅವನ ನಂತರದವನು. ಮಗೂ! ಮೂರನೆಯವನು ನನ್ನ ಅಜ್ಜ ಧೃತಿಮಾನ್ ಶಂತನುವು.

05147017a ದೇವಾಪಿಸ್ತು ಮಹಾತೇಜಾಸ್ತ್ವಗ್ದೋಷೀ ರಾಜಸತ್ತಮಃ।
05147017c ಧಾರ್ಮಿಕಃ ಸತ್ಯವಾದೀ ಚ ಪಿತುಃ ಶುಶ್ರೂಷಣೇ ರತಃ।।

ಮಹಾತೇಜಸ್ವಿ, ರಾಜಸತ್ತಮ, ಧಾರ್ಮಿಕ, ಸತ್ಯವಾದೀ, ಪಿತುಶುಶ್ರೂಷಣರತನಾಗಿದ್ದ ದೇವಾಪಿಯಾದರೋ ಚರ್ಮರೋಗಿಯಾಗಿದ್ದನು.

05147018a ಪೌರಜಾನಪದಾನಾಂ ಚ ಸಮ್ಮತಃ ಸಾಧುಸತ್ಕೃತಃ।
05147018c ಸರ್ವೇಷಾಂ ಬಾಲವೃದ್ಧಾನಾಂ ದೇವಾಪಿರ್ಹೃದಯಂಗಮಃ।।

ಅವನು ಪೌರ-ಜಾನಪದಗಳಿಗೆ ಸಮ್ಮತನಾಗಿದ್ದನು. ಸಾಧು ಸತ್ಕೃತನಾಗಿದ್ದನು. ಎಲ್ಲರ - ಬಾಲಕ-ವೃದ್ಧರ ಮತ್ತು ದೇವತೆಗಳ ಹೃದಯಂಗಮನಾಗಿದ್ದನು.

05147019a ಪ್ರಾಜ್ಞಾಶ್ಚ ಸತ್ಯಸಂಧಶ್ಚ ಸರ್ವಭೂತಹಿತೇ ರತಃ।
05147019c ವರ್ತಮಾನಃ ಪಿತುಃ ಶಾಸ್ತ್ರೇ ಬ್ರಾಹ್ಮಣಾನಾಂ ತಥೈವ ಚ।।
05147020a ಬಾಹ್ಲೀಕಸ್ಯ ಪ್ರಿಯೋ ಭ್ರಾತಾ ಶಂತನೋಶ್ಚ ಮಹಾತ್ಮನಃ।
05147020c ಸೌಭ್ರಾತ್ರಂ ಚ ಪರಂ ತೇಷಾಂ ಸಹಿತಾನಾಂ ಮಹಾತ್ಮನಾಂ।।

ಪ್ರಾಜ್ಞನೂ, ಸತ್ಯಸಂಧನೂ, ಸರ್ವಭೂತಹಿತರತನೂ ಆಗಿದ್ದ ಅವನು ತಂದೆ, ಶಾಸ್ತ್ರ ಮತ್ತು ಬ್ರಾಹ್ಮಣರ ಪ್ರಕಾರ ನಡೆದುಕೊಳ್ಳುತ್ತಿದ್ದನು. ಬಾಹ್ಲೀಕನ ಮತ್ತು ಮಹಾತ್ಮ ಶಂತನುವಿನ ಪ್ರಿಯ ಅಣ್ಣನಾಗಿದ್ದನು. ಆ ಮಹಾತ್ಮರ ಒಟ್ಟಿಗಿದ್ದ ಸೌಭ್ರಾತೃತ್ವವು ಉದಾಹರಣೀಯವಾಗಿತ್ತು.

05147021a ಅಥ ಕಾಲಸ್ಯ ಪರ್ಯಾಯೇ ವೃದ್ಧೋ ನೃಪತಿಸತ್ತಮಃ।
05147021c ಸಂಭಾರಾನಭಿಷೇಕಾರ್ಥಂ ಕಾರಯಾಮಾಸ ಶಾಸ್ತ್ರತಃ।
05147021e ಮಂಗಲಾನಿ ಚ ಸರ್ವಾಣಿ ಕಾರಯಾಮಾಸ ಚಾಭಿಭೂಃ।।

ಆಗ ಕಾಲವು ಪ್ರಾಪ್ತವಾದಾಗ ವೃದ್ಧ ನೃಪತಿಸತ್ತಮ ವಿಭುವು ಅವನ ಅಭಿಷೇಕಕ್ಕಾಗಿ ಶಾಸ್ತ್ರೋಕ್ತ ಸಾಮಗ್ರಿಗಳನ್ನು ಸಂಗ್ರಹಿಸಿ ಎಲ್ಲ ಮಂಗಲ ಕಾರ್ಯಗಳನ್ನೂ ಮಾಡತೊಡಗಿದನು.

05147022a ತಂ ಬ್ರಾಹ್ಮಣಾಶ್ಚ ವೃದ್ಧಾಶ್ಚ ಪೌರಜಾನಪದೈಃ ಸಹ।
05147022c ಸರ್ವೇ ನಿವಾರಯಾಮಾಸುರ್ದೇವಾಪೇರಭಿಷೇಚನಂ।।

ಆಗ ಬ್ರಾಹ್ಮಣರು, ಹಿರಿಯರು ನಗರ-ಗ್ರಾಮಗಳೊಂದಿಗೆ ಎಲ್ಲರೂ ದೇವಾಪಿಯ ಅಭಿಷೇಕವನ್ನು ನಿಲ್ಲಿಸಿದರು.

05147023a ಸ ತಚ್ಚ್ರುತ್ವಾ ತು ನೃಪತಿರಭಿಷೇಕನಿವಾರಣಂ।
05147023c ಅಶ್ರುಕಂಠೋಽಭವದ್ರಾಜಾ ಪರ್ಯಶೋಚತ ಚಾತ್ಮಜಂ।।

ಅವರು ಅಭಿಷೇಕವನ್ನು ನಿಲ್ಲಿಸುತ್ತಿದ್ದಾರೆ ಎಂದು ಕೇಳಿದ ರಾಜಾ ನೃಪತಿಯ ಗಂಟಲಿನಲ್ಲಿ ಕಣ್ಣೀರು ತುಂಬಿಕೊಂಡಿತು ಮತ್ತು ತನ್ನ ಮಗನಿಗಾಗಿ ಬಹಳ ಶೋಕಿಸಿದನು.

05147024a ಏವಂ ವದಾನ್ಯೋ ಧರ್ಮಜ್ಞಾಃ ಸತ್ಯಸಂಧಶ್ಚ ಸೋಽಭವತ್।
05147024c ಪ್ರಿಯಃ ಪ್ರಜಾನಾಮಪಿ ಸಂಸ್ತ್ವಗ್ದೋಷೇಣ ಪ್ರದೂಷಿತಃ।।

ಹೀಗೆ ದಾನಿ, ಧರ್ಮಜ್ಞ, ಸತ್ಯಸಂಧನು ಪ್ರಜೆಗಳಿಗೆ ಪ್ರಿಯನಾಗಿದ್ದರೂ ಚರ್ಮದ ದೋಷದಿಂದ ಪ್ರದೂಷಿತನಾದನು.

05147025a ಹೀನಾಂಗಂ ಪೃಥಿವೀಪಾಲಂ ನಾಭಿನಂದಂತಿ ದೇವತಾಃ।
05147025c ಇತಿ ಕೃತ್ವಾ ನೃಪಶ್ರೇಷ್ಠಂ ಪ್ರತ್ಯಷೇಧನ್ದ್ವಿಜರ್ಷಭಾಃ।।

ಹೀನಾಂಗನನ್ನು ರಾಜನನ್ನಾಗಿ ದೇವತೆಗಳು ಆನಂದಿಸುವುದಿಲ್ಲ. ಆದುದರಿಂದ ದ್ವಿಜರ್ಷಭರು ಆ ನೃಪಶ್ರೇಷ್ಠನನ್ನು ತಡೆದರು.

05147026a ತತಃ ಪ್ರವ್ಯಥಿತಾತ್ಮಾಸೌ ಪುತ್ರಶೋಕಸಮನ್ವಿತಃ।
05147026c ಮಮಾರ ತಂ ಮೃತಂ ದೃಷ್ಟ್ವಾ ದೇವಾಪಿಃ ಸಂಶ್ರಿತೋ ವನಂ।।

ಆಗ ಅತ್ಯಂತ ವ್ಯಥಿತನಾದ ಪುತ್ರಶೋಕಸಮನ್ವಿತನಾದ ಅವನು ಮರಣಹೊಂದಲು, ಅದನ್ನು ನೋಡಿ ದೇವಾಪಿಯು ವನವನ್ನು ಸೇರಿದನು.

05147027a ಬಾಹ್ಲೀಕೋ ಮಾತುಲಕುಲೇ ತ್ಯಕ್ತ್ವಾ ರಾಜ್ಯಂ ವ್ಯವಸ್ಥಿತಃ।
05147027c ಪಿತೃಭ್ರಾತೄನ್ಪರಿತ್ಯಜ್ಯ ಪ್ರಾಪ್ತವಾನ್ಪುರಮೃದ್ಧಿಮತ್।।

ಬಾಹ್ಲೀಕನು ರಾಜ್ಯವನ್ನು ತ್ಯಜಿಸಿ ಅವನ ಸೋದರ ಮಾವನ ಕುಲದಲ್ಲಿ ನೆಲೆಸಿದನು. ತಂದೆ-ತಮ್ಮರನ್ನು ಪರಿತ್ಯಜಿಸಿ ಅಭಿವೃದ್ಧಿ ಹೊಂದಿದ ಪುರವನ್ನು ಪಡೆದನು.

05147028a ಬಾಹ್ಲೀಕೇನ ತ್ವನುಜ್ಞಾತಃ ಶಂತನುರ್ಲೋಕವಿಶ್ರುತಃ।
05147028c ಪಿತರ್ಯುಪರತೇ ರಾಜನ್ರಾಜಾ ರಾಜ್ಯಮಕಾರಯತ್।।

ರಾಜನ್! ತಂದೆಯ ಮರಣದ ನಂತರ ಬಾಹ್ಲೀಕನು ಹೊರಟುಹೋಗಲು ಲೋಕವಿಶ್ರುತ ಶಂತನುವು ರಾಜನಾಗಿ ರಾಜ್ಯವನ್ನಾಳಿದನು.

05147029a ತಥೈವಾಹಂ ಮತಿಮತಾ ಪರಿಚಿಂತ್ಯೇಹ ಪಾಂಡುನಾ।
05147029c ಜ್ಯೇಷ್ಠಃ ಪ್ರಭ್ರಂಶಿತೋ ರಾಜ್ಯಾದ್ ಹೀನಾಂಗ ಇತಿ ಭಾರತ।।

ಭಾರತ! ಹಾಗೆಯೇ ಜ್ಯೇಷ್ಠನಾದ ನಾನೂ ಕೂಡ ಹೀನಾಂಗನೆಂದು ಮತಿಮತನಾದ ಪಾಂಡುವಿನಿಂದ, ತುಂಬಾ ಆಲೋಚನೆಗಳ ನಂತರ, ರಾಜ್ಯದಿಂದ ಪರಿಭ್ರಂಷಿತನಾದೆ.

05147030a ಪಾಂಡುಸ್ತು ರಾಜ್ಯಂ ಸಂಪ್ರಾಪ್ತಃ ಕನೀಯಾನಪಿ ಸನ್ನೃಪಃ।
05147030c ವಿನಾಶೇ ತಸ್ಯ ಪುತ್ರಾಣಾಮಿದಂ ರಾಜ್ಯಮರಿಂದಮ।
05147030e ಮಯ್ಯಭಾಗಿನಿ ರಾಜ್ಯಾಯ ಕಥಂ ತ್ವಂ ರಾಜ್ಯಮಿಚ್ಚಸಿ।।

ಕಿರಿಯವನಾಗಿದ್ದರೂ ಪಾಂಡುವು ರಾಜ್ಯವನ್ನು ಪಡೆದು ರಾಜನಾದನು. ಅರಿಂದಮ! ಅವನ ಮರಣದ ನಂತರ ಈ ರಾಜ್ಯವು ಅವನ ಮಕ್ಕಳದ್ದಾಯಿತು. ಈ ರಾಜ್ಯಕ್ಕೆ ನಾನೇ ಭಾಗಿಯಾಗಿರದಿರುವಾಗ ನೀನು ಹೇಗೆ ಅದನ್ನು ಬಯಸುತ್ತೀಯೆ?

05147031a ಯುಧಿಷ್ಠಿರೋ ರಾಜಪುತ್ರೋ ಮಹಾತ್ಮಾ ನ್ಯಾಯಾಗತಂ ರಾಜ್ಯಮಿದಂ ಚ ತಸ್ಯ।
05147031c ಸ ಕೌರವಸ್ಯಾಸ್ಯ ಜನಸ್ಯ ಭರ್ತಾ ಪ್ರಶಾಸಿತಾ ಚೈವ ಮಹಾನುಭಾವಃ।।

ನ್ಯಾಯಗತವಾಗಿ ಈ ರಾಜ್ಯವು ರಾಜಪುತ್ರ, ಮಹಾತ್ಮ ಯುಧಿಷ್ಠಿರನದ್ದು. ಅವನು ಕೌರವ ಜನರ ಒಡೆಯ. ಆ ಮಹಾನುಭಾವನೇ ಇದನ್ನು ಆಳುವವನು.

05147032a ಸ ಸತ್ಯಸಂಧಃ ಸತತಾಪ್ರಮತ್ತಃ ಶಾಸ್ತ್ರೇ ಸ್ಥಿತೋ ಬಂಧುಜನಸ್ಯ ಸಾಧುಃ।
05147032c ಪ್ರಿಯಃ ಪ್ರಜಾನಾಂ ಸುಹೃದಾನುಕಂಪೀ ಜಿತೇಂದ್ರಿಯಃ ಸಾಧುಜನಸ್ಯ ಭರ್ತಾ।।

ಅವನು ಸತ್ಯಸಂಧ. ಸತತವೂ ಅಪ್ರಮತ್ತನಾಗಿ, ಶಾಸ್ತ್ರಗಳಲ್ಲಿ ನೆಲೆಸಿದ್ದಾನೆ. ಬಂಧುಜನರ ಸಾಧು. ಪ್ರಜೆಗಳ ಪ್ರಿಯ. ಸುಹೃದಯರ ಅನುಕಂಪಿ. ಜಿತೇಂದ್ರಿಯ ಮತ್ತು ಸಾಧುಜನರ ನಾಯಕ.

05147033a ಕ್ಷಮಾ ತಿತಿಕ್ಷಾ ದಮ ಆರ್ಜವಂ ಚ ಸತ್ಯವ್ರತತ್ವಂ ಶ್ರುತಮಪ್ರಮಾದಃ।
05147033c ಭೂತಾನುಕಂಪಾ ಹ್ಯನುಶಾಸನಂ ಚ ಯುಧಿಷ್ಠಿರೇ ರಾಜಗುಣಾಃ ಸಮಸ್ತಾಃ।।

ಕ್ಷಮೆ, ತಿತಿಕ್ಷಾ, ದಮ, ಆರ್ಜವ, ಸತ್ಯವ್ರತತ್ವ, ಶ್ರುತ, ಅಪ್ರಮಾದ, ಭೂತಾನುಕಂಪನೆ, ಅನುಶಾಸನ ಈ ಸಮಸ್ತ ರಾಜಗುಣಗಳೂ ಯುಧಿಷ್ಠಿರನಲ್ಲಿವೆ.

05147034a ಅರಾಜಪುತ್ರಸ್ತ್ವಮನಾರ್ಯವೃತ್ತೋ ಲುಬ್ಧಸ್ತಥಾ ಬಂಧುಷು ಪಾಪಬುದ್ಧಿಃ।
05147034c ಕ್ರಮಾಗತಂ ರಾಜ್ಯಮಿದಂ ಪರೇಷಾಂ ಹರ್ತುಂ ಕಥಂ ಶಕ್ಷ್ಯಸಿ ದುರ್ವಿನೀತಃ।।

ರಾಜನ ಮಗನಲ್ಲದ, ಅನಾರ್ಯನಂತೆ ನಡೆದುಕೊಳ್ಳುವ, ಲುಬ್ಧನಾದ, ಬಂಧುಗಳಲ್ಲಿ ಪಾಪಬುದ್ಧಿಯನ್ನು ತೋರಿಸುವ, ದುರ್ವಿನೀತನಾದ ನೀನು ಹೇಗೆ ತಾನೇ ಕ್ರಮಾಗತವಾಗಿ ಬೇರೆಯವರದ್ದಾಗಿರುವ ಈ ರಾಜ್ಯವನ್ನು ಅಪಹರಿಸಲು ಸಾಧ್ಯ?

05147035a ಪ್ರಯಚ್ಚ ರಾಜ್ಯಾರ್ಧಮಪೇತಮೋಹಃ ಸವಾಹನಂ ತ್ವಂ ಸಪರಿಚ್ಚದಂ ಚ।
05147035c ತತೋಽವಶೇಷಂ ತವ ಜೀವಿತಸ್ಯ ಸಹಾನುಜಸ್ಯೈವ ಭವೇನ್ನರೇಂದ್ರ।।

ಹುಚ್ಚನ್ನು ತೊರೆದು ವಾಹನ ಪರಿಚಾರಕರೊಂದಿಗೆ ಅರ್ಧರಾಜ್ಯವನ್ನು ಬಿಟ್ಟುಕೊಡು. ನರೇಂದ್ರ! ಹಾಗೆ ಮಾಡಿದರೆ ಮಾತ್ರ ನೀನು ಮತ್ತು ನಿನ್ನ ಅನುಜರು ಉಳಿದ ಆಯುಸ್ಸನ್ನು ಜೀವಿಸಬಲ್ಲಿರಿ!””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಕರ್ಣ‌ವಿವಾದ ಪರ್ವಣಿ ಧೃತರಾಷ್ಟ್ರವಾಕ್ಯಕಥನೇ ಸಪ್ತಚತ್ವಾರಿಂಶದಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಕರ್ಣ‌ವಿವಾದ ಪರ್ವದಲ್ಲಿ ಧೃತರಾಷ್ಟ್ರವಾಕ್ಯಕಥನದಲ್ಲಿ ನೂರಾನಲ್ವತ್ತೇಳನೆಯ ಅಧ್ಯಾಯವು.