ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಕರ್ಣವಿವಾದ ಪರ್ವ
ಅಧ್ಯಾಯ 146
ಸಾರ
ಕೃಷ್ಣನು ಕುರುಸಂಸದಿಯಲ್ಲಿ ದುರ್ಯೋಧನನಿಗೆ ದ್ರೋಣ (1-16), ವಿದುರ (17-25) ಮತ್ತು ಗಾಂಧಾರಿಯರು ಹೇಳಿದ ಹಿತವಚನಗಳನ್ನು ವರದಿಮಾಡಿದುದು (26-35).
05146001 ವಾಸುದೇವ ಉವಾಚ।
05146001a ಭೀಷ್ಮೇಣೋಕ್ತೇ ತತೋ ದ್ರೋಣೋ ದುರ್ಯೋಧನಮಭಾಷತ।
05146001c ಮಧ್ಯೇ ನೃಪಾಣಾಂ ಭದ್ರಂ ತೇ ವಚನಂ ವಚನಕ್ಷಮಃ।।
ವಾಸುದೇವನು ಹೇಳಿದನು: “ಭೀಷ್ಮನು ಹೀಗೆ ಹೇಳಲು ವಚನಕ್ಷಮನಾದ ದ್ರೋಣನು ನೃಪರ ಮಧ್ಯೆ ಆ ದುರ್ಯೋಧನನಿಗೆ, ನಿನಗೆ ಹಿತವಾಗುವ ಈ ಮಾತನ್ನಾಡಿದನು.
05146002a ಪ್ರಾತೀಪಃ ಶಂತನುಸ್ತಾತ ಕುಲಸ್ಯಾರ್ಥೇ ಯಥೋತ್ಥಿತಃ।
05146002c ತಥಾ ದೇವವ್ರತೋ ಭೀಷ್ಮಃ ಕುಲಸ್ಯಾರ್ಥೇ ಸ್ಥಿತೋಽಭವತ್।।
“ಅಯ್ಯಾ! ಹೇಗೆ ಪ್ರಾತೀಪ ಶಂತನುವು ಕುಲಕ್ಕಾಗಿ ನಡೆದುಕೊಂಡನೋ ಹಾಗೆ ದೇವವ್ರತ ಭೀಷ್ಮನು ಕುಲಕ್ಕಾಗಿ ನಿಂತಿದ್ದಾನೆ.
05146003a ತತಃ ಪಾಂಡುರ್ನರಪತಿಃ ಸತ್ಯಸಂಧೋ ಜಿತೇಂದ್ರಿಯಃ।
05146003c ರಾಜಾ ಕುರೂಣಾಂ ಧರ್ಮಾತ್ಮಾ ಸುವ್ರತಃ ಸುಸಮಾಹಿತಃ।।
ನರಪತಿ, ಸತ್ಯಸಂಧ, ಜಿತೇಂದ್ರಿಯ, ಕುರುಗಳ ರಾಜ, ಧರ್ಮಾತ್ಮ, ಸಮಾಹಿತ ಪಾಂಡುವೂ ಹಾಗೆಯೇ ಇದ್ದನು.
05146004a ಜ್ಯೇಷ್ಠಾಯ ರಾಜ್ಯಮದದಾದ್ಧೃತರಾಷ್ಟ್ರಾಯ ಧೀಮತೇ।
05146004c ಯವೀಯಸಸ್ತಥಾ ಕ್ಷತ್ತುಃ ಕುರುವಂಶವಿವರ್ಧನಃ।।
ಆ ಕುರುವಂಶ ವಿವರ್ಧನನು ರಾಜ್ಯವನ್ನು ಹಿರಿಯಣ್ಣ ಧೃತರಾಷ್ಟ್ರನಿಗೆ ಮತ್ತು ಕಿರಿಯ ತಮ್ಮ ಕ್ಷತ್ತನಿಗೆ ಒಪ್ಪಿಸಿದ್ದನು.
05146005a ತತಃ ಸಿಂಹಾಸನೇ ರಾಜನ್ ಸ್ಥಾಪಯಿತ್ವೈನಮಚ್ಯುತಂ।
05146005c ವನಂ ಜಗಾಮ ಕೌರವ್ಯೋ ಭಾರ್ಯಾಭ್ಯಾಂ ಸಹಿತೋಽನಘ।।
ರಾಜನ್! ಅನಂತರ ಸಿಂಹಾಸನದಲ್ಲಿ ಈ ಅಚ್ಯುತನನ್ನು ಸ್ಥಾಪಿಸಿ ಆ ಅನಘ ಕೌರವ್ಯನು ಭಾರ್ಯೆಯರೊಡನೆ ವನಕ್ಕೆ ಹೋದನು.
05146006a ನೀಚೈಃ ಸ್ಥಿತ್ವಾ ತು ವಿದುರ ಉಪಾಸ್ತೇ ಸ್ಮ ವಿನೀತವತ್।
05146006c ಪ್ರೇಷ್ಯವತ್ ಪುರುಷವ್ಯಾಘ್ರೋ ವಾಲವ್ಯಜನಮುತ್ಕ್ಷಿಪನ್।।
ಈ ಪುರುಷವ್ಯಾಘ್ರ ವಿದುರನಾದರೋ ವಿನೀತನಾಗಿ ತಾಳೆಯ ಮರದ ಗರಿಯನ್ನು ಬೀಸುತ್ತಾ ಕೆಳಗೆ ನಿಂತು ದಾಸನಂತೆ ಅವನ ಸೇವೆಗೈದನು.
05146007a ತತಃ ಸರ್ವಾಃ ಪ್ರಜಾಸ್ತಾತ ಧೃತರಾಷ್ಟ್ರಂ ಜನೇಶ್ವರಂ।
05146007c ಅನ್ವಪದ್ಯಂತ ವಿಧಿವದ್ಯಥಾ ಪಾಂಡುಂ ನರಾಧಿಪಂ।।
ಅಯ್ಯಾ! ಆಗ ಪ್ರಜೆಗಳೆಲ್ಲರೂ ನರಾಧಿಪ ಪಾಂಡುವನ್ನು ಹೇಗೋ ಹಾಗೆ ಜನೇಶ್ವರ ಧೃತರಾಷ್ಟ್ರನನ್ನು ಅನುಸರಿಸಿದರು.
05146008a ವಿಸೃಜ್ಯ ಧೃತರಾಷ್ಟ್ರಾಯ ರಾಜ್ಯಂ ಸ ವಿದುರಾಯ ಚ।
05146008c ಚಚಾರ ಪೃಥಿವೀಂ ಪಾಂಡುಃ ಸರ್ವಾಂ ಪರಪುರಂಜಯಃ।।
ಧೃತರಾಷ್ಟ್ರ ಮತ್ತು ವಿದುರರಿಗೆ ರಾಜ್ಯವನ್ನು ಬಿಟ್ಟು ಪರಪುರಂಜಯ ಪಾಂಡುವು ಭೂಮಿಯನ್ನೆಲ್ಲಾ ಸಂಚರಿಸಿದನು.
05146009a ಕೋಶಸಂಜನನೇ ದಾನೇ ಭೃತ್ಯಾನಾಂ ಚಾನ್ವವೇಕ್ಷಣೇ।
05146009c ಭರಣೇ ಚೈವ ಸರ್ವಸ್ಯ ವಿದುರಃ ಸತ್ಯಸಂಗರಃ।।
ಸತ್ಯಸಂಗರ ವಿದುರನು ಕೋಶ, ದಾನ, ಸೇವಕರ ಮೇಲ್ವಿಚಾರಣೆ, ಮತ್ತು ಎಲ್ಲರಿಗೂ ಊಟಹಾಕಿಸುವುದು ಇವುಗಳನ್ನು ನೋಡಿಕೊಳ್ಳುತ್ತಿದ್ದನು.
05146010a ಸಂಧಿವಿಗ್ರಹಸಮ್ಯುಕ್ತೋ ರಾಜ್ಞಾಃ ಸಂವಾಹನಕ್ರಿಯಾಃ।
05146010c ಅವೈಕ್ಷತ ಮಹಾತೇಜಾ ಭೀಷ್ಮಃ ಪರಪುರಂಜಯಃ।।
ಪರಪುರಂಜಯ ಮಹಾತೇಜಸ್ವಿ ಭೀಷ್ಮನು ರಾಜರೊಂದಿಗೆ ಸಂಧಿ-ಯುದ್ಧಗಳು, ಮತ್ತು ಕಪ್ಪ-ಕಾಣಿಕೆಗಳ ವಿಷಯಗಳನ್ನು ನೋಡಿಕೊಳ್ಳುತ್ತಿದ್ದನು.
05146011a ಸಿಂಹಾಸನಸ್ಥೋ ನೃಪತಿರ್ಧೃತರಾಷ್ಟ್ರೋ ಮಹಾಬಲಃ।
05146011c ಅನ್ವಾಸ್ಯಮಾನಃ ಸತತಂ ವಿದುರೇಣ ಮಹಾತ್ಮನಾ।।
ಸಿಂಹಾಸನಸ್ಥನಾಗಿದ್ದ ನೃಪತಿ ಮಹಾಬಲಿ ಧೃತರಾಷ್ಟ್ರನು ಮಹಾತ್ಮ ವಿದುರನಿಂದ ಸತತವಾಗಿ ಸಲಹೆಗಳನ್ನು ಪಡೆಯುತ್ತಿದ್ದನು.
05146012a ಕಥಂ ತಸ್ಯ ಕುಲೇ ಜಾತಃ ಕುಲಭೇದಂ ವ್ಯವಸ್ಯಸಿ।
05146012c ಸಂಭೂಯ ಭ್ರಾತೃಭಿಃ ಸಾರ್ಧಂ ಭುಂಕ್ಷ್ವ ಭೋಗಾಂ ಜನಾಧಿಪ।।
ಜನಾಧಿಪ! ಅವನ ಕುಲದಲ್ಲಿ ಹುಟ್ಟಿ ಏಕೆ ಕುಲವನ್ನು ಒಡೆಯಲು ತೊಡಗಿದ್ದೀಯೆ? ಸಹೋದರರೊಂದಿಗೆ ಒಂದಾಗು. ಒಟ್ಟಿಗೇ ಭೋಗಗಳನ್ನು ಭುಂಜಿಸು.
05146013a ಬ್ರವೀಮ್ಯಹಂ ನ ಕಾರ್ಪಣ್ಯಾನ್ನಾರ್ಥಹೇತೋಃ ಕಥಂ ಚನ।
05146013c ಭೀಷ್ಮೇಣ ದತ್ತಮಶ್ನಾಮಿ ನ ತ್ವಯಾ ರಾಜಸತ್ತಮ।।
ನಾನು ಇದನ್ನು ಹೇಡಿತನದಿಂದ ಹೇಳುತ್ತಿಲ್ಲ. ಹಣದ ಕಾರಣಕ್ಕಂತೂ ಅಲ್ಲವೇ ಅಲ್ಲ. ಭೀಷ್ಮನು ಕೊಟ್ಟಿದ್ದುದನ್ನು ತಿನ್ನುತ್ತಿದ್ದೇನೆ. ರಾಜಸತ್ತಮ! ನಿನ್ನಿಂದಲ್ಲ!
05146014a ನಾಹಂ ತ್ವತ್ತೋಽಭಿಕಾಂಕ್ಷಿಷ್ಯೇ ವೃತ್ತ್ಯುಪಾಯಂ ಜನಾಧಿಪ।
05146014c ಯತೋ ಭೀಷ್ಮಸ್ತತೋ ದ್ರೋಣೋ ಯದ್ಭೀಷ್ಮಸ್ತ್ವಾಹ ತತ್ಕುರು।।
ಜನಾಧಿಪ! ನಿನ್ನಿಂದ ವೃತ್ತಿ ವೇತನವನ್ನು ಪಡೆಯಲು ಬಯಸುತ್ತಿಲ್ಲ. ಭೀಷ್ಮನು ಎಲ್ಲಿದ್ದಾನೋ ಅಲ್ಲಿ ದ್ರೋಣನು ಇರಲೇಬೇಕು. ಭೀಷ್ಮನು ಹೇಳಿದಂತೆ ಮಾಡು.
05146015a ದೀಯತಾಂ ಪಾಂಡುಪುತ್ರೇಭ್ಯೋ ರಾಜ್ಯಾರ್ಧಮರಿಕರ್ಶನ।
05146015c ಸಮಮಾಚಾರ್ಯಕಂ ತಾತ ತವ ತೇಷಾಂ ಚ ಮೇ ಸದಾ।।
ಅರಿಕರ್ಶನ! ಮಗೂ! ಪಾಂಡುಪುತ್ರರಿಗೆ ಅರ್ಧರಾಜ್ಯವನ್ನು ಕೊಡು. ಅವರಿಗೆ ಹೇಗೆ ಆಚಾರ್ಯನೋ ಹಾಗೆ ನಾನು ನಿನಗೂ ಕೂಡ.
05146016a ಅಶ್ವತ್ಥಾಮಾ ಯಥಾ ಮಹ್ಯಂ ತಥಾ ಶ್ವೇತಹಯೋ ಮಮ।
05146016c ಬಹುನಾ ಕಿಂ ಪ್ರಲಾಪೇನ ಯತೋ ಧರ್ಮಸ್ತತೋ ಜಯಃ।।
ನನಗೆ ಅಶ್ವತ್ಥಾಮನು ಹೇಗೋ ಹಾಗೆ ಆ ಶ್ವೇತಹಯನೂ ನನ್ನವನೇ. ಬಹಳಷ್ಟು ಏಕೆ ಪ್ರಲಪಿಸಬೇಕು? ಎಲ್ಲಿ ಧರ್ಮವಿದೆಯೋ ಅಲ್ಲಿ ಜಯವಿದೆ.”
05146017a ಏವಮುಕ್ತೇ ಮಹಾರಾಜ ದ್ರೋಣೇನಾಮಿತತೇಜಸಾ।
05146017c ವ್ಯಾಜಹಾರ ತತೋ ವಾಕ್ಯಂ ವಿದುರಃ ಸತ್ಯಸಂಗರಃ।
05146017e ಪಿತುರ್ವದನಮನ್ವೀಕ್ಷ್ಯ ಪರಿವೃತ್ಯ ಚ ಧರ್ಮವಿತ್।।
ಮಹಾರಾಜ! ಅಮಿತತೇಜಸ್ವಿ ದ್ರೋಣನು ಹೀಗೆ ಹೇಳಲು ಸತ್ಯಸಂಗರ ಧರ್ಮವಿದು ವಿದುರನು ಚಿಕ್ಕಪ್ಪ ಭೀಷ್ಮನ ಕಡೆ ತಿರುಗಿ ಅವನ ಮುಖವನ್ನು ನೋಡುತ್ತಾ ಹೇಳಿದನು:
05146018a ದೇವವ್ರತ ನಿಬೋಧೇದಂ ವಚನಂ ಮಮ ಭಾಷತಃ।
05146018c ಪ್ರನಷ್ಟಃ ಕೌರವೋ ವಂಶಸ್ತ್ವಯಾಯಂ ಪುನರುದ್ಧೃತಃ।।
“ದೇವವ್ರತ! ನಾನು ಹೇಳುವ ಮಾತನ್ನು ಕೇಳು. ಈ ಕುರುವಂಶವು ಪ್ರನಷ್ಟವಾಗುತ್ತಿದ್ದಾಗ ನೀನು ಪುನಃ ಚೇತರಿಸುವಂತೆ ಮಾಡಿದೆ.
05146019a ತನ್ಮೇ ವಿಲಪಮಾನಸ್ಯ ವಚನಂ ಸಮುಪೇಕ್ಷಸೇ।
05146019c ಕೋಽಯಂ ದುರ್ಯೋಧನೋ ನಾಮ ಕುಲೇಽಸ್ಮಿನ್ಕುಲಪಾಂಸನಃ।।
ಇದರಿಂದ ವಿಲಪಿಸುತ್ತಿರುವ ನನ್ನ ಮಾತನ್ನು ನೀನು ಕಡೆಗಾಣುತ್ತಿದ್ದೀಯೆ. ಈ ಕುಲದಲ್ಲಿ ಕುಲಪಾಂಸನನಾಗಿರುವ ದುರ್ಯೋಧನ ಎಂಬ ಹೆಸರಿನವನು ಯಾರು?
05146020a ಯಸ್ಯ ಲೋಭಾಭಿಭೂತಸ್ಯ ಮತಿಂ ಸಮನುವರ್ತಸೇ।
05146020c ಅನಾರ್ಯಸ್ಯಾಕೃತಜ್ಞಾಸ್ಯ ಲೋಭೋಪಹತಚೇತಸಃ।
05146020e ಅತಿಕ್ರಾಮತಿ ಯಃ ಶಾಸ್ತ್ರಂ ಪಿತುರ್ಧರ್ಮಾರ್ಥದರ್ಶಿನಃ।।
ಲೋಭದಲ್ಲಿ ನೆಲೆಸಿದ, ಅನಾರ್ಯನಾದ, ಅಕೃತಜ್ಞನಾದ, ಲೋಭದಿಂದ ಚೇತನವನ್ನು ಕಳೆದುಕೊಂಡ, ತಂದೆಯ ಧರ್ಮಾರ್ಥದರ್ಶಿನಿ ಶಾಸ್ತ್ರಗಳನ್ನು ಅತಿಕ್ರಮಿಸುವ ಅವನ ಬುದ್ಧಿಯನ್ನು ಅನುಸರಿಸುತ್ತಿರುವೆಯಲ್ಲ!
05146021a ಏತೇ ನಶ್ಯಂತಿ ಕುರವೋ ದುರ್ಯೋಧನಕೃತೇನ ವೈ।
05146021c ಯಥಾ ತೇ ನ ಪ್ರಣಶ್ಯೇಯುರ್ಮಹಾರಾಜ ತಥಾ ಕುರು।।
ದುರ್ಯೋಧನನು ಕುರುಗಳು ನಶಿಸುವಂತೆ ಮಾಡುತ್ತಾನೆ! ಮಹಾರಾಜ! ಅವನಿಂದ ನಾಶಹೊಂದದಂತೆ ಮಾಡು.
05146022a ಮಾಂ ಚೈವ ಧೃತರಾಷ್ಟ್ರಂ ಚ ಪೂರ್ವಮೇವ ಮಹಾದ್ಯುತೇ।
05146022c ಚಿತ್ರಕಾರ ಇವಾಲೇಖ್ಯಂ ಕೃತ್ವಾ ಮಾ ಸ್ಮ ವಿನಾಶಯ।
05146022e ಪ್ರಜಾಪತಿಃ ಪ್ರಜಾಃ ಸೃಷ್ಟ್ವಾ ಯಥಾ ಸಂಹರತೇ ತಥಾ।।
ಮಹಾದ್ಯುತೇ! ಹಿಂದೆ ನನ್ನನ್ನೂ ಧೃತರಾಷ್ಟ್ರನನ್ನೂ ಓರ್ವ ಚಿತ್ರಕಾರನು ಬರೆದಂತೆ ರೂಪಿಸಿದ್ದೆ. ಪ್ರಜಾಪತಿಯು ಪ್ರಜೆಗಳನ್ನು ಸೃಷ್ಟಿಸಿ ಸಂಹರಿಸುವಂತೆ ನೀನು ನಮ್ಮನ್ನು ನಾಶಗೊಳಿಸಬೇಡ!
05146023a ನೋಪೇಕ್ಷಸ್ವ ಮಹಾಬಾಹೋ ಪಶ್ಯಮಾನಃ ಕುಲಕ್ಷಯಂ।
05146023c ಅಥ ತೇಽದ್ಯ ಮತಿರ್ನಷ್ಟಾ ವಿನಾಶೇ ಪ್ರತ್ಯುಪಸ್ಥಿತೇ।
05146023e ವನಂ ಗಚ್ಚ ಮಯಾ ಸಾರ್ಧಂ ಧೃತರಾಷ್ಟ್ರೇಣ ಚೈವ ಹ।।
ಮಹಾಬಾಹೋ! ನಿನ್ನ ಕಣ್ಣೆದುರಿಗೇ ನಡೆಯುವ ಈ ಕುಲಕ್ಷಯವನ್ನು ಉಪೇಕ್ಷಿಸಬೇಡ! ಒದಗಿರುವ ವಿನಾಶದಿಂದ ಇಂದು ನಿನ್ನ ಬುದ್ಧಿಯು ನಷ್ಟವಾಗಿದೆಯೆಂದಾದರೆ ಧೃತರಾಷ್ಟ್ರ ಮತ್ತು ನನ್ನೊಂದಿಗೆ ವನಕ್ಕೆ ಹೊರಡು!
05146024a ಬದ್ಧ್ವಾ ವಾ ನಿಕೃತಿಪ್ರಜ್ಞಾಂ ಧಾರ್ತರಾಷ್ಟ್ರಂ ಸುದುರ್ಮತಿಂ।
05146024c ಸಾಧ್ವಿದಂ ರಾಜ್ಯಮದ್ಯಾಸ್ತು ಪಾಂಡವೈರಭಿರಕ್ಷಿತಂ।।
ಸುದುರ್ಮತಿ ಧಾರ್ತರಾಷ್ಟ್ರನನ್ನು ಬಂಧಿಸಿ ಅಥವಾ ಮೂರ್ಛೆಗೊಳಿಸಿ ಈ ರಾಜ್ಯವು ಪಾಂಡವರಿಂದ ಅಭಿರಕ್ಷಿತಗೊಳ್ಳುತ್ತದೆ.
05146025a ಪ್ರಸೀದ ರಾಜಶಾರ್ದೂಲ ವಿನಾಶೋ ದೃಶ್ಯತೇ ಮಹಾನ್।
05146025c ಪಾಂಡವಾನಾಂ ಕುರೂಣಾಂ ಚ ರಾಜ್ಞಾ ಚಾಮಿತತೇಜಸಾಂ।।
ರಾಜಶಾರ್ದೂಲ! ಪ್ರಸೀದನಾಗು! ಅಮಿತ ತೇಜಸ್ವಿ ಪಾಂಡವರ, ಕುರುಗಳ ಮತ್ತು ರಾಜರ ಮಹಾ ವಿನಾಶವು ಕಾಣುತ್ತಿದೆ.”
05146026a ವಿರರಾಮೈವಮುಕ್ತ್ವಾ ತು ವಿದುರೋ ದೀನಮಾನಸಃ।
05146026c ಪ್ರಧ್ಯಾಯಮಾನಃ ಸ ತದಾ ನಿಃಶ್ವಸಂಶ್ಚ ಪುನಃ ಪುನಃ।।
ಹೀಗೆ ಹೇಳಿ ದೀನಮಾನಸ ವಿದುರನು ಸುಮ್ಮನಾದನು. ಚಿಂತೆಗೊಳಗಾಗಿ ಪುನಃ ಪುನಃ ಸಿಟ್ಟುಸಿರುಬಿಡುತ್ತಿದ್ದನು.
05146027a ತತೋಽಥ ರಾಜ್ಞಾಃ ಸುಬಲಸ್ಯ ಪುತ್ರೀ ಧರ್ಮಾರ್ಥಯುಕ್ತಂ ಕುಲನಾಶಭೀತಾ।
05146027c ದುರ್ಯೋಧನಂ ಪಾಪಮತಿಂ ನೃಶಂಸಂ ರಾಜ್ಞಾಂ ಸಮಕ್ಷಂ ಸುತಮಾಹ ಕೋಪಾತ್।।
ಆಗ ರಾಜ ಸುಬಲನ ಪುತ್ರಿಯು ಕುಲನಾಶನದ ಭೀತಿಯಿಂದ ರಾಜರ ಸಮಕ್ಷಮದಲ್ಲಿ ಕ್ರೂರಿ ಪಾಪಮತಿ ದುರ್ಯೋಧನನಿಗೆ ಕೋಪದಿಂದ ಧರ್ಮಾತ್ಮಯುಕ್ತವಾದ ಈ ಮಾತನ್ನು ಹೇಳಿದಳು.
05146028a ಯೇ ಪಾರ್ಥಿವಾ ರಾಜಸಭಾಂ ಪ್ರವಿಷ್ಟಾ ಬ್ರಹ್ಮರ್ಷಯೋ ಯೇ ಚ ಸಭಾಸದೋಽನ್ಯೇ।
05146028c ಶೃಣ್ವಂತು ವಕ್ಷ್ಯಾಮಿ ತವಾಪರಾಧಂ ಪಾಪಸ್ಯ ಸಾಮಾತ್ಯಪರಿಚ್ಚದಸ್ಯ।।
“ಈ ರಾಜಸಭೆಯನ್ನು ಪ್ರವೇಶಿಸಿದ ಪಾರ್ಥಿವರೇ! ಬ್ರಹ್ಮರ್ಷಿಗಳೇ! ಅನ್ಯ ಸಭಾಸದರೇ! ಕೇಳಿರಿ! ಅಮಾತ್ಯ, ಸೇವಕರೊಂದಿಗೆ ನೀವು ಮಾಡಿದ ಪಾಪ ಮತ್ತು ನಿಮ್ಮ ಅಪರಾಧವನ್ನು ಹೇಳುತ್ತೇನೆ!
05146029a ರಾಜ್ಯಂ ಕುರೂಣಾಮನುಪೂರ್ವಭೋಗ್ಯಂ ಕ್ರಮಾಗತೋ ನಃ ಕುಲಧರ್ಮ ಏಷಃ।
05146029c ತ್ವಂ ಪಾಪಬುದ್ಧೇಽತಿನೃಶಂಸಕರ್ಮನ್ ರಾಜ್ಯಂ ಕುರೂಣಾಮನಯಾದ್ವಿಹಂಸಿ।।
ಕುರುಗಳ ಈ ರಾಜ್ಯವು ವಂಶಪಾರಂಪರಿಕವಾಗಿ ಭೋಗಿಸಲ್ಪಟ್ಟು ಬಂದಿದೆ. ಇದೇ ಕ್ರಮಾಗತವಾಗಿ ಬಂದಿರುವ ಕುಲಧರ್ಮ. ಕ್ರೂರಕರ್ಮಿಗಳೇ! ನೀವು ಪಾಪಬುದ್ಧಿಯಿಂದ ಕುರುಗಳ ರಾಜ್ಯವನ್ನು ಧ್ವಂಸಿಸುತ್ತಿದ್ದೀರಿ.
05146030a ರಾಜ್ಯೇ ಸ್ಥಿತೋ ಧೃತರಾಷ್ಟ್ರೋ ಮನೀಷೀ ತಸ್ಯಾನುಜೋ ವಿದುರೋ ದೀರ್ಘದರ್ಶೀ।
05146030c ಏತಾವತಿಕ್ರಮ್ಯ ಕಥಂ ನೃಪತ್ವಂ ದುರ್ಯೋಧನ ಪ್ರಾರ್ಥಯಸೇಽದ್ಯ ಮೋಹಾತ್।।
ರಾಜ್ಯದಲ್ಲಿ ನೆಲೆಸಿರುವ ಮನೀಷೀ ಧೃತರಾಷ್ಟ್ರ ಮತ್ತು ಅವನ ತಮ್ಮ ದೀರ್ಘದರ್ಶಿ ವಿದುರನನ್ನು ಅತಿಕ್ರಮಿಸಿ ದುರ್ಯೋಧನ! ನೀನು ಹೇಗೆ ಮೋಹದಿಂದ ಇಂದು ನೃಪತ್ವವನ್ನು ಕೇಳುತ್ತಿದ್ದೀಯೆ?
05146031a ರಾಜಾ ಚ ಕ್ಷತ್ತಾ ಚ ಮಹಾನುಭಾವೌ ಭೀಷ್ಮೇ ಸ್ಥಿತೇ ಪರವಂತೌ ಭವೇತಾಂ।
05146031c ಅಯಂ ತು ಧರ್ಮಜ್ಞಾತಯಾ ಮಹಾತ್ಮಾ ನ ರಾಜ್ಯಕಾಮೋ ನೃವರೋ ನದೀಜಃ।।
ಭೀಷ್ಮನಿರುವಾಗ ರಾಜ ಮತ್ತು ಕ್ಷತ್ತರು ಇಬ್ಬರು ಮಹಾನುಭಾವರೂ ಅವನ ಅಧಿಕಾರದಲ್ಲಿದ್ದಾರೆ. ಆದರೆ ಧರ್ಮವನ್ನು ತಿಳಿದಿರುವ ಮಹಾತ್ಮ ನದೀಜನು ರಾಜ್ಯವನ್ನು ಬಯಸುವುದಿಲ್ಲ.
05146032a ರಾಜ್ಯಂ ತು ಪಾಂಡೋರಿದಮಪ್ರಧೃಷ್ಯಂ ತಸ್ಯಾದ್ಯ ಪುತ್ರಾಃ ಪ್ರಭವಂತಿ ನಾನ್ಯೇ।
05146032c ರಾಜ್ಯಂ ತದೇತನ್ನಿಖಿಲಂ ಪಾಂಡವಾನಾಂ ಪೈತಾಮಹಂ ಪುತ್ರಪೌತ್ರಾನುಗಾಮಿ।।
ಈ ರಾಜ್ಯವು ಅಪ್ರಧೃಷ್ಯವಾಗಿ ಪಾಂಡುವಿನದಾಗಿತ್ತು. ಇಂದು ಅವನ ಪುತ್ರರದ್ದಲ್ಲದೇ ಇತರರಿಗಾಗುವುದಿಲ್ಲ. ಈ ಅಖಿಲ ರಾಜ್ಯವು ಪಾಂಡವರದ್ದು. ಅವರ ಪಿತಾಮಹನಿಂದ ಬಂದಿರುವುದು ಮತ್ತು ಮಕ್ಕಳು ಮೊಮ್ಮಕ್ಕಳಿಗೆ ಹೋಗುವಂಥಹುದು.
05146033a ಯದ್ವೈ ಬ್ರೂತೇ ಕುರುಮುಖ್ಯೋ ಮಹಾತ್ಮಾ ದೇವವ್ರತಃ ಸತ್ಯಸಂಧೋ ಮನೀಷೀ।
05146033c ಸರ್ವಂ ತದಸ್ಮಾಭಿರಹತ್ಯ ಧರ್ಮಂ ಗ್ರಾಹ್ಯಂ ಸ್ವಧರ್ಮಂ ಪರಿಪಾಲಯದ್ಭಿಃ।।
ಕುರುಮುಖ್ಯ, ಮಹಾತ್ಮ, ಸತ್ಯಸಂಧ, ಮನೀಷೀ ದೇವವ್ರತನು ಏನು ಹೇಳುತ್ತಾನೋ ಅದನ್ನು ನಾವೆಲ್ಲರೂ ನಾಶಗೊಳ್ಳದ ಧರ್ಮವೆಂದು ಸ್ವೀಕರಿಸಿ, ಸ್ವಧರ್ಮವೆಂದು ಪರಿಪಾಲಿಸಬೇಕು.
05146034a ಅನುಜ್ಞಾಯಾ ಚಾಥ ಮಹಾವ್ರತಸ್ಯ ಬ್ರೂಯಾನ್ನೃಪೋ ಯದ್ವಿದುರಸ್ತಥೈವ।
05146034c ಕಾರ್ಯಂ ಭವೇತ್ತತ್ಸುಹೃದ್ಭಿರ್ನಿಯುಜ್ಯ ಧರ್ಮಂ ಪುರಸ್ಕೃತ್ಯ ಸುದೀರ್ಘಕಾಲಂ।।
ಈ ಮಹಾವ್ರತನ ಅನುಜ್ಞೆಯಂತೆ ನೃಪ ಮತ್ತು ವಿದುರರು ಹೇಳಲಿ. ನಮ್ಮ ಸುಹೃದಯಿಗಳು ಧರ್ಮವನ್ನು ಮುಂದಿಟ್ಟುಕೊಂಡು ದೀರ್ಘಕಾಲದವರೆಗೆ ಅದರಂತೆಯೇ ಮಾಡಲಿ.
05146035a ನ್ಯಾಯಾಗತಂ ರಾಜ್ಯಮಿದಂ ಕುರೂಣಾಂ ಯುಧಿಷ್ಠಿರಃ ಶಾಸ್ತು ವೈ ಧರ್ಮಪುತ್ರಃ।
05146035c ಪ್ರಚೋದಿತೋ ಧೃತರಾಷ್ಟ್ರೇಣ ರಾಜ್ಞಾ ಪುರಸ್ಕೃತಃ ಶಾಂತನವೇನ ಚೈವ।।
ನ್ಯಾಯಗತವಾಗಿರುವ ಕುರುಗಳ ಈ ರಾಜ್ಯವನ್ನು ಧರ್ಮಪುತ್ರ ಯುಧಿಷ್ಠಿರನು, ರಾಜಾ ಧೃತರಾಷ್ಟ್ರನಿಂದ ಪ್ರಚೋದಿತನಾಗಿ, ಶಾಂತನವನನ್ನು ಮುಂದಿಟ್ಟುಕೊಂಡು ಆಳಲಿ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಕರ್ಣವಿವಾದ ಪರ್ವಣಿ ಕೃಷ್ಣವಾಕ್ಯೇ ಷಟ್ಚತ್ವಾರಿಂಶದಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಕರ್ಣವಿವಾದ ಪರ್ವದಲ್ಲಿ ಕೃಷ್ಣವಾಕ್ಯದಲ್ಲಿ ನೂರಾನಲ್ವತ್ತಾರನೆಯ ಅಧ್ಯಾಯವು.