145 ಭಗವದ್ವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಕರ್ಣ‌ವಿವಾದ ಪರ್ವ

ಅಧ್ಯಾಯ 145

ಸಾರ

ಹಸ್ತಿನಾಪುರದಿಂದ ಉಪಪ್ಲವ್ಯಕ್ಕೆ ಬಂದು ಕೃಷ್ಣನು ಯುದಿಷ್ಠಿರನಿಗೆ ಅಲ್ಲಿ ನಡೆದುದೆಲ್ಲವನ್ನೂ ತಿಳಿಸಲು, ಯುಧಿಷ್ಠಿರನು ಭೀಷ್ಮ-ದ್ರೋಣರು ಏನು ಹೇಳಿದರೆಂದು ಕೃಷ್ಣನನ್ನು ಕೇಳಿದುದು (1-12). ಭೀಷ್ಮನು ತನ್ನ ಕುಲಕ್ಕೆ ಹಿತವಾದುದನ್ನು ಮಾಡೆಂದು ಶಂತನುವಿನಿಂದ ಪ್ರಾರಂಭಿಸಿ ಕುಲವು ಹೇಗೆ ನಡೆದುಕೊಂಡು ಬಂದಿದೆಯೆಂದು ಹೇಳಿದುದನ್ನು ಕೃಷ್ಣನು ಯುಧಿಷ್ಠಿರನಿಗೆ ವರದಿ ಮಾಡಿದುದು (13-40).

05145001 ವೈಶಂಪಾಯನ ಉವಾಚ।
05145001a ಆಗಮ್ಯ ಹಾಸ್ತಿನಪುರಾದುಪಪ್ಲವ್ಯಮರಿಂದಮಃ।
05145001c ಪಾಂಡವಾನಾಂ ಯಥಾವೃತ್ತಂ ಕೇಶವಃ ಸರ್ವಮುಕ್ತವಾನ್।।

ವೈಶಂಪಾಯನನು ಹೇಳಿದನು: “ಹಸ್ತಿನಾಪುರದಿಂದ ಉಪಪ್ಲವ್ಯಕ್ಕೆ ಬಂದು ಅರಿಂದಮ ಕೇಶವನು ಪಾಂಡವರಿಗೆ ಎಲ್ಲವನ್ನೂ ಹೇಳಿದನು.

05145002a ಸಂಭಾಷ್ಯ ಸುಚಿರಂ ಕಾಲಂ ಮಂತ್ರಯಿತ್ವಾ ಪುನಃ ಪುನಃ।
05145002c ಸ್ವಮೇವಾವಸಥಂ ಶೌರಿರ್ವಿಶ್ರಾಮಾರ್ಥಂ ಜಗಾಮ ಹ।।

ಬಹಳ ಹೊತ್ತು ಮಾತುಕತೆಯಾಡಿ, ಪುನಃ ಪುನಃ ಮಂತ್ರಾಲೋಚನೆ ಮಾಡಿ ಶೌರಿಯು ವಿಶ್ರಾಮಾರ್ಥವಾಗಿ ತನ್ನ ಬಿಡಾರಕ್ಕೆ ಹೋದನು.

05145003a ವಿಸೃಜ್ಯ ಸರ್ವಾನ್ನೃಪತೀನ್ವಿರಾಟಪ್ರಮುಖಾಂಸ್ತದಾ।
05145003c ಪಾಂಡವಾ ಭ್ರಾತರಃ ಪಂಚ ಭಾನಾವಸ್ತಂಗತೇ ಸತಿ।।

ಸೂರ್ಯನು ಮುಳುಗಲು ವಿರಾಟನೇ ಮೊದಲಾದ ಸರ್ವ ಪ್ರಮುಖ ರಾಜರನ್ನು ಕಳುಹಿಸಿ ಐವರು ಪಾಂಡವ ಸಹೋದರರು ಸಂಧ್ಯಾವಂದನೆಯನ್ನು ಪೂರೈಸಿದರು.

05145004a ಸಂಧ್ಯಾಮುಪಾಸ್ಯ ಧ್ಯಾಯಂತಸ್ತಮೇವ ಗತಮಾನಸಾಃ।
05145004c ಆನಾಯ್ಯ ಕೃಷ್ಣಂ ದಾಶಾರ್ಹಂ ಪುನರ್ಮಂತ್ರಮಮಂತ್ರಯನ್।।

ಸಂಧ್ಯಾವಂದನೆಯನ್ನು ಮುಗಿಸಿ, ಅದರ ಕುರಿತೇ ಯೋಚಿಸಿ, ಮನಸ್ಸನ್ನು ಕಳೆದುಕೊಂಡ ಅವನು ಪುನಃ ಮಂತ್ರಾಲೋಚಿಸಲು ದಾಶಾರ್ಹ ಕೃಷ್ಣನಿಗೆ ಬರಲು ಕರೆ ಕಳುಹಿಸಿದನು.

05145005 ಯುಧಿಷ್ಠಿರ ಉವಾಚ।
05145005a ತ್ವಯಾ ನಾಗಪುರಂ ಗತ್ವಾ ಸಭಾಯಾಂ ಧೃತರಾಷ್ಟ್ರಜಃ।
05145005c ಕಿಮುಕ್ತಃ ಪುಂಡರೀಕಾಕ್ಷ ತನ್ನಃ ಶಂಸಿತುಮರ್ಹಸಿ।।

ಯುಧಿಷ್ಠಿರನು ಹೇಳಿದನು: “ಪುಂಡರೀಕಾಕ್ಷ! ನಾಗಪುರದಲ್ಲಿ ಧೃತರಾಷ್ಟ್ರಜನ ಸಭೆಗೆ ಹೋಗಿ ಏನು ಹೇಳಿದೆ ಎನ್ನುವುದನ್ನು ವಿವರಿಸಬೇಕು.”

05145006 ವಾಸುದೇವ ಉವಾಚ।
05145006a ಮಯಾ ನಾಗಪುರಂ ಗತ್ವಾ ಸಭಾಯಾಂ ಧೃತರಾಷ್ಟ್ರಜಃ।
05145006c ತಥ್ಯಂ ಪಥ್ಯಂ ಹಿತಂ ಚೋಕ್ತೋ ನ ಚ ಗೃಹ್ಣಾತಿ ದುರ್ಮತಿಃ।।

ವಾಸುದೇವನು ಹೇಳಿದನು: “ನಾನು ನಾಗಪುರದಲ್ಲಿ ಧೃತರಾಷ್ಟ್ರಜನ ಸಭೆಗೆ ಹೋಗಿ ನಿಜವಾದುದನ್ನೂ, ಪಾಲಿಸಬೇಕಾದುದನ್ನೂ ಮತ್ತು ಹಿತವಾದುದನ್ನೂ ಹೇಳಿದೆನು. ಆದರೆ ಆ ದುರ್ಮತಿಯು ಅದನ್ನು ಸ್ವೀಕರಿಸಲಿಲ್ಲ.”

05145007 ಯುಧಿಷ್ಠಿರ ಉವಾಚ।
05145007a ತಸ್ಮಿನ್ನುತ್ಪಥಮಾಪನ್ನೇ ಕುರುವೃದ್ಧಃ ಪಿತಾಮಹಃ।
05145007c ಕಿಮುಕ್ತವಾನ್ ಹೃಷೀಕೇಶ ದುರ್ಯೋಧನಮಮರ್ಷಣಂ।।
05145007e ಆಚಾರ್ಯೋ ವಾ ಮಹಾಬಾಹೋ ಭಾರದ್ವಾಜಃ ಕಿಮಬ್ರವೀತ್।।

ಯುಧಿಷ್ಠಿರನು ಹೇಳಿದನು: “ಹೃಷೀಕೇಶ! ಕ್ರೂರಿ ದುರ್ಯೋಧನನು ಕೆಟ್ಟ ದಾರಿಯನ್ನು ಹಿಡಿದಾಗ ಕುರುವೃದ್ಧ ಪಿತಾಮಹನು ಏನು ಹೇಳಿದನು? ಮಹಾಬಾಹು ಆಚಾರ್ಯ ಭಾರದ್ವಾಜನು ಏನು ಹೇಳಿದನು?

05145008a ಪಿತಾ ಯವೀಯಾನಸ್ಮಾಕಂ ಕ್ಷತ್ತಾ ಧರ್ಮಭೃತಾಂ ವರಃ।
05145008c ಪುತ್ರಶೋಕಾಭಿಸಂತಪ್ತಃ ಕಿಮಾಹ ಧೃತರಾಷ್ಟ್ರಜಂ।।

ನಮ್ಮ ಕಿರಿಯ ತಂದೆಯಾದ, ಧರ್ಮಭೃತರಲ್ಲಿ ಶ್ರೇಷ್ಠನಾದ, ಪುತ್ರಶೋಕದಿಂದ ಸಂತಪ್ತನಾದ ಕ್ಷತ್ತನು ಧೃತರಾಷ್ಟ್ರಜನಿಗೆ ಏನು ಹೇಳಿದನು?

05145009a ಕಿಂ ಚ ಸರ್ವೇ ನೃಪತಯಃ ಸಭಾಯಾಂ ಯೇ ಸಮಾಸತೇ।
05145009c ಉಕ್ತವಂತೋ ಯಥಾತತ್ತ್ವಂ ತದ್ಬ್ರೂಹಿ ತ್ವಂ ಜನಾರ್ದನ।।

ಜನಾರ್ದನ! ಅಲ್ಲಿ ಸಭೆಯಲ್ಲಿ ಸೇರಿದ್ದ ಎಲ್ಲ ನೃಪತಿಯರು ಏನು ಹೇಳಿದರು? ಅವರು ಹೇಳಿದುದನ್ನು ಯಥಾತತ್ವವಾಗಿ ಹೇಳು.

05145010a ಉಕ್ತವಾನ್ ಹಿ ಭವಾನ್ಸರ್ವಂ ವಚನಂ ಕುರುಮುಖ್ಯಯೋಃ।
05145010c ಕಾಮಲೋಭಾಭಿಭೂತಸ್ಯ ಮಂದಸ್ಯ ಪ್ರಾಜ್ಞಾಮಾನಿನಃ।।

ನೀನು ಈಗಾಗಲೇ ಕುರುಮುಖ್ಯರು ಕಾಮಲೋಭಗಳಿಂದ ತುಂಬಿದ, ಮೂಢನಾಗಿದ್ದರೂ ಪ್ರಾಜ್ಞನೆಂದು ತಿಳಿದುಕೊಂಡಿರುವ ಅವನಿಗೆ ಹೇಳಿದುದೆಲ್ಲವನ್ನೂ ಹೇಳಿದ್ದೀಯೆ.

05145011a ಅಪ್ರಿಯಂ ಹೃದಯೇ ಮಹ್ಯಂ ತನ್ನ ತಿಷ್ಠತಿ ಕೇಶವ।
05145011c ತೇಷಾಂ ವಾಕ್ಯಾನಿ ಗೋವಿಂದ ಶ್ರೋತುಮಿಚ್ಚಾಮ್ಯಹಂ ವಿಭೋ।।

ಆದರೆ ಕೇಶವ! ಅಪ್ರಿಯವಾದುದು ನನ್ನ ಹೃದಯದಲ್ಲಿ ನಿಲ್ಲುವುದಿಲ್ಲ. ಗೋವಿಂದ! ವಿಭೋ! ಅವರ ಮಾತುಗಳನ್ನು ಕೇಳಲು ಬಯಸುತ್ತೇನೆ.

05145012a ಯಥಾ ಚ ನಾಭಿಪದ್ಯೇತ ಕಾಲಸ್ತಾತ ತಥಾ ಕುರು।
05145012c ಭವಾನ್ ಹಿ ನೋ ಗತಿಃ ಕೃಷ್ಣ ಭವಾನ್ನಾಥೋ ಭವಾನ್ಗುರುಃ।।

ಅಯ್ಯಾ! ಈ ಅವಕಾಶವು ಕಳೆದುಹೋಗದಂತೆ ಮಾಡು. ಕೃಷ್ಣ! ನೀನೇ ನಮಗೆ ಗತಿ. ನೀನೇ ನಾಥ. ನೀನೇ ಗುರು.”

05145013 ವಾಸುದೇವ ಉವಾಚ।
05145013a ಶೃಣು ರಾಜನ್ಯಥಾ ವಾಕ್ಯಮುಕ್ತೋ ರಾಜಾ ಸುಯೋಧನಃ।
05145013c ಮಧ್ಯೇ ಕುರೂಣಾಂ ರಾಜೇಂದ್ರ ಸಭಾಯಾಂ ತನ್ನಿಬೋಧ ಮೇ।।

ವಾಸುದೇವನು ಹೇಳಿದನು: “ರಾಜನ್! ರಾಜೇಂದ್ರ! ಕುರುಗಳ ಮಧ್ಯೆ ಸಭೆಯಲ್ಲಿ ರಾಜಾ ಸುಯೋಧನನಿಗೆ ಹೇಳಿದ ಮಾತುಗಳನ್ನು ಕೇಳು. ಅರ್ಥಮಾಡಿಕೋ!

05145014a ಮಯಾ ವೈ ಶ್ರಾವಿತೇ ವಾಕ್ಯೇ ಜಹಾಸ ಧೃತರಾಷ್ಟ್ರಜಃ।
05145014c ಅಥ ಭೀಷ್ಮಃ ಸುಸಂಕ್ರುದ್ಧ ಇದಂ ವಚನಮಬ್ರವೀತ್।।

ನನ್ನ ಮಾತನ್ನು ಕೇಳಿ ಧೃತರಾಷ್ಟ್ರಜನು ಜೋರಾಗಿ ನಕ್ಕನು. ಆಗ ಭೀಷ್ಮನು ಸಂಕೃದ್ಧನಾಗಿ ಈ ಮಾತುಗಳನ್ನಾಡಿದನು:

05145015a ದುರ್ಯೋಧನ ನಿಬೋಧೇದಂ ಕುಲಾರ್ಥೇ ಯದ್ಬ್ರವೀಮಿ ತೇ।
05145015c ತಚ್ಚ್ರುತ್ವಾ ರಾಜಶಾರ್ದೂಲ ಸ್ವಕುಲಸ್ಯ ಹಿತಂ ಕುರು।।

“ದುರ್ಯೋಧನ! ಕುಲಾರ್ಥಕ್ಕಾಗಿ ನಾನು ಹೇಳುವುದನ್ನು ಅರ್ಥಮಾಡಿಕೋ! ರಾಜಶಾರ್ದೂಲ! ಅದನ್ನು ಕೇಳಿ ನಿನ್ನ ಕುಲಕ್ಕೆ ಹಿತವಾದುದನ್ನು ಮಾಡು.

05145016a ಮಮ ತಾತ ಪಿತಾ ರಾಜನ್ ಶಂತನುರ್ಲೋಕವಿಶ್ರುತಃ।
05145016c ತಸ್ಯಾಹಮೇಕ ಏವಾಸಂ ಪುತ್ರಃ ಪುತ್ರವತಾಂ ವರಃ।।

ರಾಜನ್! ನನ್ನ ತಂದೆಯು ಲೋಕವಿಶ್ರುತ ಶಂತನು. ಆ ಪುತ್ರವಂತರಲ್ಲಿ ಶ್ರೇಷ್ಠನಿಗೆ ನಾನೊಬ್ಬನೇ ಮಗನಾಗಿದ್ದೆನು.

05145017a ತಸ್ಯ ಬುದ್ಧಿಃ ಸಮುತ್ಪನ್ನಾ ದ್ವಿತೀಯಃ ಸ್ಯಾತ್ಕಥಂ ಸುತಃ।
05145017c ಏಕಪುತ್ರಮಪುತ್ರಂ ವೈ ಪ್ರವದಂತಿ ಮನೀಷಿಣಃ।।

ಎರಡನೆಯ ಮಗನನ್ನು ಪಡೆಯಬೇಕು ಎಂದು ಅವನ ಬುದ್ಧಿಯಲ್ಲಿ ಯೋಚನೆಯು ಬಂದಿತು. ಏಕೆಂದರೆ ತಿಳಿದವರು ಒಂದೇ ಮಗನೆಂದರೆ ಮಗನೇ ಇಲ್ಲದ ಹಾಗೆ ಎಂದು ಹೇಳುತ್ತಾರೆ.

05145018a ನ ಚೋಚ್ಚೇದಂ ಕುಲಂ ಯಾಯಾದ್ವಿಸ್ತೀರ್ಯೇತ ಕಥಂ ಯಶಃ।
05145018c ತಸ್ಯಾಹಮೀಪ್ಸಿತಂ ಬುದ್ಧ್ವಾ ಕಾಲೀಂ ಮಾತರಮಾವಹಂ।।

ಈ ಕುಲವು ನಾಶವಾಗಬಾರದು ಮತ್ತು ನನ್ನ ಯಶಸ್ಸು ಹೇಗೆ ಹರಡಬೇಕು ಎಂದು ಯೋಚಿಸಿದ ಅವನ ಬಯಕೆಯನ್ನು ತಿಳಿದುಕೊಂಡು ನಾನು ಕಾಲಿಯನ್ನು ತಾಯಿಯನ್ನಾಗಿ ಕರೆತಂದೆನು.

05145019a ಪ್ರತಿಜ್ಞಾಂ ದುಷ್ಕರಾಂ ಕೃತ್ವಾ ಪಿತುರರ್ಥೇ ಕುಲಸ್ಯ ಚ।
05145019c ಅರಾಜಾ ಚೋರ್ಧ್ವರೇತಾಶ್ಚ ಯಥಾ ಸುವಿದಿತಂ ತವ।
05145019e ಪ್ರತೀತೋ ನಿವಸಾಮ್ಯೇಷ ಪ್ರತಿಜ್ಞಾಮನುಪಾಲಯನ್।।

ತಂದೆಗಾಗಿ ಮತ್ತು ಕುಲಕ್ಕಾಗಿ ಆಗ ನಾನು ರಾಜನಾಗಲಾರೆ ಮತ್ತು ಊರ್ಧ್ವರೇತನಾಗಿರುತ್ತೇನೆ ಎಂಬ ದುಷ್ಕರ ಪ್ರತಿಜ್ಞೆಯನ್ನು ಮಾಡಿದುದು ನಿನಗೆ ತಿಳಿದೇ ಇದೆ. ಆ ಪ್ರತಿಜ್ಞೆಯನ್ನು ಪಾಲಿಸುತ್ತಾ ನಾನು ಸಂತೋಷದಿಂದಿದ್ದೇನೆ. ನೋಡು!

05145020a ತಸ್ಯಾಂ ಜಜ್ಞೇ ಮಹಾಬಾಹುಃ ಶ್ರೀಮಾನ್ಕುರುಕುಲೋದ್ವಹಃ।
05145020c ವಿಚಿತ್ರವೀರ್ಯೋ ಧರ್ಮಾತ್ಮಾ ಕನೀಯಾನ್ಮಮ ಪಾರ್ಥಿವಃ।।

ಅವನಲ್ಲಿ ಮಹಾಬಾಹು, ಶ್ರೀಮಾನ್, ಕುರುಕುಲೋದ್ವಹ, ಧರ್ಮಾತ್ಮ, ನನ್ನ ಕಿರಿಯ ರಾಜ ವಿಚಿತ್ರವೀರ್ಯನು ಜನಿಸಿದನು.

05145021a ಸ್ವರ್ಯಾತೇಽಹಂ ಪಿತರಿ ತಂ ಸ್ವರಾಜ್ಯೇ ಸಂನ್ಯವೇಶಯಂ।
05145021c ವಿಚಿತ್ರವೀರ್ಯಂ ರಾಜಾನಂ ಭೃತ್ಯೋ ಭೂತ್ವಾ ಹ್ಯಧಶ್ಚರಃ।।

ತಂದೆಯ ಮರಣದ ನಂತರ ನನ್ನದಾಗಬೇಕಾಗಿದ್ದ ರಾಜ್ಯದಲ್ಲಿ ನಾನೇ ವಿಚಿತ್ರವೀರ್ಯನನ್ನು ರಾಜನನ್ನಾಗಿ ಸ್ಥಾಪಿಸಿದೆನು. ಮತ್ತು ಅವನ ಕೆಳಗೆ ಸೇವಕನಾಗಿ ನಡೆದುಕೊಂಡೆನು.

05145022a ತಸ್ಯಾಹಂ ಸದೃಶಾನ್ದಾರಾನ್ರಾಜೇಂದ್ರ ಸಮುದಾವಹಂ।
05145022c ಜಿತ್ವಾ ಪಾರ್ಥಿವಸಂಘಾತಮಪಿ ತೇ ಬಹುಶಃ ಶ್ರುತಂ।।

ರಾಜೇಂದ್ರ! ಅವನಿಗೆ ಸದೃಶರಾದ ಪತ್ನಿಯರನ್ನು ನಾನು ಸೇರಿದ್ದ ಪಾರ್ಥಿವ ಗುಂಪನ್ನು ಗೆದ್ದು ಕರೆದುಕೊಂಡು ಬಂದೆ. ಅದನ್ನು ನೀನು ಬಹಳ ಸಾರಿ ಕೇಳಿದ್ದೀಯೆ.

05145023a ತತೋ ರಾಮೇಣ ಸಮರೇ ದ್ವಂದ್ವಯುದ್ಧಮುಪಾಗಮಂ।
05145023c ಸ ಹಿ ರಾಮಭಯಾದೇಭಿರ್ನಾಗರೈರ್ವಿಪ್ರವಾಸಿತಃ।
05145023e ದಾರೇಷ್ವತಿಪ್ರಸಕ್ತಶ್ಚ ಯಕ್ಷ್ಮಾಣಂ ಸಮಪದ್ಯತ।।

ಆಗ ಸಮರದಲ್ಲಿ ನನಗೆ ರಾಮನೊಂದಿಗೆ ದ್ವಂದ್ವಯುದ್ಧಮಾಡುವ ಸಮಯ ಬಂದೊದಗಿತು. ರಾಮನ ಭಯದಿಂದ ಅವನು ನಾಗಸಾಹ್ವಯವನ್ನು ಬಿಟ್ಟು ಓಡಿ ಹೋಗಿದ್ದ. ಪತ್ನಿಯರಲ್ಲಿ ತುಂಬಾ ತೊಡಗಿದ್ದ ಅವನು ಯಮಸದನವನ್ನು ಸೇರಿದನು.

05145024a ಯದಾ ತ್ವರಾಜಕೇ ರಾಷ್ಟ್ರೇ ನ ವವರ್ಷ ಸುರೇಶ್ವರಃ।
05145024c ತದಾಭ್ಯಧಾವನ್ಮಾಮೇವ ಪ್ರಜಾಃ ಕ್ಷುದ್ಭಯಪೀಡಿತಾಃ।।

ಅರಾಜಕತ್ವದಿಂದ ಸುರೇಶ್ವರನು ರಾಷ್ಟ್ರದಲ್ಲಿ ಮಳೆಯನ್ನು ಸುರಿಸಲಿಲ್ಲ. ಆಗ ಹಸಿವು-ಭಯ ಪೀಡಿತರಾದ ಪ್ರಜೆಗಳು ಅವಸರದಲ್ಲಿ ನನ್ನಲ್ಲಿಗೇ ಬಂದರು.

05145025 ಪ್ರಜಾ ಊಚುಃ।
05145025a ಉಪಕ್ಷೀಣಾಃ ಪ್ರಜಾಃ ಸರ್ವಾ ರಾಜಾ ಭವ ಭವಾಯ ನಃ।
05145025c ಈತಯೋ ನುದ ಭದ್ರಂ ತೇ ಶಂತನೋಃ ಕುಲವರ್ಧನ।।

ಪ್ರಜೆಗಳು ಹೇಳಿದರು: “ಪ್ರಜೆಗಳೆಲ್ಲರೂ ನಾಶಗೊಳ್ಳುತ್ತಿದ್ದಾರೆ. ನೀನೇ ರಾಜನಾಗು! ಶಂತನುವಿನ ಕುಲವರ್ಧನ! ಈ ಬರಗಾಲವನ್ನು ಇಲ್ಲವಾಗಿಸು. ನಿನಗೆ ಮಂಗಳವಾಗಲಿ!

05145026a ಪೀಡ್ಯಂತೇ ತೇ ಪ್ರಜಾಃ ಸರ್ವಾ ವ್ಯಾಧಿಭಿರ್ಭೃಶದಾರುಣೈಃ।
05145026c ಅಲ್ಪಾವಶಿಷ್ಟಾ ಗಾಂಗೇಯ ತಾಃ ಪರಿತ್ರಾತುಮರ್ಹಸಿ।।

ನಿನ್ನ ಪ್ರಜೆಗಳೆಲ್ಲರೂ ಅತಿ ತೀಕ್ಷ್ಣ ಮತ್ತು ದಾರುಣ ವ್ಯಾಧಿಗಳಿಂದ ಪೀಡಿತರಾಗಿದ್ದಾರೆ. ಕೆಲವರೇ ಉಳಿದುಕೊಂಡಿದ್ದಾರೆ. ಗಾಂಗೇಯ! ಅವರನ್ನು ರಕ್ಷಿಸಬೇಕು.

05145027a ವ್ಯಾಧೀನ್ಪ್ರಣುದ್ಯ ವೀರ ತ್ವಂ ಪ್ರಜಾ ಧರ್ಮೇಣ ಪಾಲಯ।
05145027c ತ್ವಯಿ ಜೀವತಿ ಮಾ ರಾಷ್ಟ್ರಂ ವಿನಾಶಮುಪಗಚ್ಚತು।।

ವೀರ! ಈ ವ್ಯಾಧಿಗಳನ್ನು ಹೋಗಲಾಡಿಸು. ಪ್ರಜೆಗಳನ್ನು ಧರ್ಮದಿಂದ ಪಾಲಿಸು. ನೀನು ಜೀವಂತವಿರುವಾಗಲೇ ರಾಷ್ಟ್ರವು ವಿನಾಶಹೊಂದಲು ಬಿಡಬೇಡ!””

05145028 ಭೀಷ್ಮ ಉವಾಚ।
05145028a ಪ್ರಜಾನಾಂ ಕ್ರೋಶತೀನಾಂ ವೈ ನೈವಾಕ್ಷುಭ್ಯತ ಮೇ ಮನಃ।
05145028c ಪ್ರತಿಜ್ಞಾಂ ರಕ್ಷಮಾಣಸ್ಯ ಸದ್ವೃತ್ತಂ ಸ್ಮರತಸ್ತಥಾ।।

ಭೀಷ್ಮನು ಹೇಳಿದನು: “ಪ್ರಜೆಗಳ ಈ ಅತೀವ ಕ್ರೋಶವು ನನ್ನ ಮನಸ್ಸನ್ನು ಅಲುಗಾಡಿಸಲಿಲ್ಲ. ಪ್ರತಿಜ್ಞೆಯನ್ನು ನೆನಪಿಸಿಕೊಂಡು ಅದನ್ನು ರಕ್ಷಿಸಲು ನಡೆದುಕೊಂಡೆ.

05145029a ತತಃ ಪೌರಾ ಮಹಾರಾಜ ಮಾತಾ ಕಾಲೀ ಚ ಮೇ ಶುಭಾ।
05145029c ಭೃತ್ಯಾಃ ಪುರೋಹಿತಾಚಾರ್ಯಾ ಬ್ರಾಹ್ಮಣಾಶ್ಚ ಬಹುಶ್ರುತಾಃ।
05145029e ಮಾಮೂಚುರ್ಭೃಶಸಂತಪ್ತಾ ಭವ ರಾಜೇತಿ ಸಂತತಂ।।

ಆಗ ಮಹಾರಾಜ! ತುಂಬಾ ಸಂತಪ್ತರಾದ ಪೌರರು, ತಾಯಿ ಶುಭೆ ಕಾಲೀ, ಸೇವಕರು, ಪುರೋಹಿತರು, ಆಚಾರ್ಯರು, ವಿದ್ವಾನ್ ಬ್ರಾಹ್ಮಣರು “ರಾಜನಾಗು!” ಎಂದು ಒತ್ತಾಯಿಸಿದರು.

05145030a ಪ್ರತೀಪರಕ್ಷಿತಂ ರಾಷ್ಟ್ರಂ ತ್ವಾಂ ಪ್ರಾಪ್ಯ ವಿನಶಿಷ್ಯತಿ।
05145030c ಸ ತ್ವಮಸ್ಮದ್ಧಿತಾರ್ಥಂ ವೈ ರಾಜಾ ಭವ ಮಹಾಮತೇ।।

“ನಿನ್ನನ್ನು ಪಡೆದ ಈ ಪ್ರತೀಪರಕ್ಷಿತ ರಾಷ್ಟ್ರವು ನಾಶಗೊಳ್ಳುತ್ತಿದೆ. ಮಹಾಮತೇ! ನೀನು ನಮಗಾಗಿಯಾದರೂ ರಾಜನಾಗಿ, ಉದ್ಧರಿಸು!”

05145031a ಇತ್ಯುಕ್ತಃ ಪ್ರಾಂಜಲಿರ್ಭೂತ್ವಾ ದುಃಖಿತೋ ಭೃಶಮಾತುರಃ।
05145031c ತೇಭ್ಯೋ ನ್ಯವೇದಯಂ ಪುತ್ರ ಪ್ರತಿಜ್ಞಾಂ ಪಿತೃಗೌರವಾತ್।
05145031e ಊರ್ಧ್ವರೇತಾ ಹ್ಯರಾಜಾ ಚ ಕುಲಸ್ಯಾರ್ಥೇ ಪುನಃ ಪುನಃ।।

ಅವರ ಮಾತನ್ನು ಕೇಳಿ, ಕೈಮುಗಿದು ದುಃಖಿತನಾಗಿ ತುಂಬಾ ಆತುರನಾಗಿ ಅವರಿಗೆ ಪಿತೃಗೌರವಕ್ಕಾಗಿ ಮಗನು ಮಾಡಿದ ಮತ್ತು ಕುಲಕ್ಕಾಗಿ ಮಾಡಿದ ಅರಾಜನಾಗಿರುವ ಮತ್ತು ಊರ್ಧ್ವರೇತನಾಗಿರುವ ಪ್ರತಿಜ್ಞೆಯ ಕುರಿತು ಪುನಃ ಪುನಃ ಹೇಳಿದೆ.

05145032a ತತೋಽಹಂ ಪ್ರಾಂಜಲಿರ್ಭೂತ್ವಾ ಮಾತರಂ ಸಂಪ್ರಸಾದಯಂ।
05145032c ನಾಂಬ ಶಂತನುನಾ ಜಾತಃ ಕೌರವಂ ವಂಶಮುದ್ವಹನ್।
05145032e ಪ್ರತಿಜ್ಞಾಂ ವಿತಥಾಂ ಕುರ್ಯಾಮಿತಿ ರಾಜನ್ಪುನಃ ಪುನಃ।।

ರಾಜನ್! ಆಗ ನಾನು ಕೈಮುಗಿದು ತಾಯಿಗೆ “ಅಂಬ! ಶಾಂತನುವಿನಲ್ಲಿ ಹುಟ್ಟಿ, ಕೌರವ ವಂಶವನ್ನು ಬೆಂಬಲಿಸುವ ನಾನು ಪ್ರತಿಜ್ಞೆಯನ್ನು ಸುಳ್ಳಾಗಿ ಮಾಡಲಾರೆ” ಎಂದು ಪುನಃ ಪುನಃ ಹೇಳಿ ಸಮಾಧಾನಗೊಳಿಸಿದೆನು.

05145033a ವಿಶೇಷತಸ್ತ್ವದರ್ಥಂ ಚ ಧುರಿ ಮಾ ಮಾಂ ನಿಯೋಜಯ।
05145033c ಅಹಂ ಪ್ರೇಷ್ಯಶ್ಚ ದಾಸಶ್ಚ ತವಾಂಬ ಸುತವತ್ಸಲೇ।।

“ವಿಶೇಷವಾಗಿ ನಿನಗೋಸ್ಕರ ಈ ನೇಗಿಲನ್ನು ನನ್ನ ಮೇಲೆ ಹೊರಿಸಬೇಡ. ಅಂಬೇ! ಸುತವತ್ಸಲೇ! ನಾನು ನಿನ್ನ ದಾಸ ಮತ್ತು ಗುಲಾಮ.”

05145034a ಏವಂ ತಾಮನುನೀಯಾಹಂ ಮಾತರಂ ಜನಮೇವ ಚ।
05145034c ಅಯಾಚಂ ಭ್ರಾತೃದಾರೇಷು ತದಾ ವ್ಯಾಸಂ ಮಹಾಮುನಿಂ।।

ಹೀಗೆ ನನ್ನ ತಾಯಿಯನ್ನೂ ಜನರನ್ನೂ ಸಮಾಧಾನಗೊಳಿಸಿ ನನ್ನ ತಮ್ಮನ ಪತ್ನಿಯರಿಗಾಗಿ ಮಹಾಮುನಿ ವ್ಯಾಸನನ್ನು ಬೇಡಿಕೊಂಡೆನು.

05145035a ಸಹ ಮಾತ್ರಾ ಮಹಾರಾಜ ಪ್ರಸಾದ್ಯ ತಮೃಷಿಂ ತದಾ।
05145035c ಅಪತ್ಯಾರ್ಥಮಯಾಚಂ ವೈ ಪ್ರಸಾದಂ ಕೃತವಾಂಶ್ಚ ಸಃ।
05145035e ತ್ರೀನ್ಸ ಪುತ್ರಾನಜನಯತ್ತದಾ ಭರತಸತ್ತಮ।।

ಭರತಸತ್ತಮ! ಮಹಾರಾಜ! ತಾಯಿಯೊಂದಿಗೆ ಆ ಋಷಿಯನ್ನು ಪೂಜಿಸಿ ಮಕ್ಕಳನ್ನು ಕೇಳಿದಾಗ ಆ ಕೃತವಂತನು ಪ್ರಸಾದವಾಗಿ ಮೂವರು ಪುತ್ರರನ್ನು ಜನಿಸಿದನು.

05145036a ಅಂಧಃ ಕರಣಹೀನೇತಿ ನ ವೈ ರಾಜಾ ಪಿತಾ ತವ।
05145036c ರಾಜಾ ತು ಪಾಂಡುರಭವನ್ಮಹಾತ್ಮಾ ಲೋಕವಿಶ್ರುತಃ।।

ಅಂಧನೆಂದು ನಿನ್ನ ತಂದೆಯು ರಾಜನಾಗಲಿಲ್ಲ. ಲೋಕವಿಶ್ರುತ ಮಹಾತ್ಮಾ ಪಾಂಡುವು ರಾಜನಾದನು.

05145037a ಸ ರಾಜಾ ತಸ್ಯ ತೇ ಪುತ್ರಾಃ ಪಿತುರ್ದಾಯಾದ್ಯಹಾರಿಣಃ।
05145037c ಮಾ ತಾತ ಕಲಹಂ ಕಾರ್ಷೀ ರಾಜ್ಯಸ್ಯಾರ್ಧಂ ಪ್ರದೀಯತಾಂ।।

ಅವನು ರಾಜನಾಗಿದ್ದನು. ಅವನ ಪುತ್ರರು ಅವರ ತಂದೆಗೆ ಆನುವಂಶೀಕರು. ಮಗೂ! ಕಲಹವನ್ನು ಮಾಡಬೇಡ! ಅವರಿಗೆ ಅರ್ಧ ರಾಜ್ಯವನ್ನು ಕೊಟ್ಟುಬಿಡು.

05145038a ಮಯಿ ಜೀವತಿ ರಾಜ್ಯಂ ಕಃ ಸಂಪ್ರಶಾಸೇತ್ಪುಮಾನಿಹ।
05145038c ಮಾವಮಂಸ್ಥಾ ವಚೋ ಮಹ್ಯಂ ಶಮಮಿಚ್ಚಾಮಿ ವಃ ಸದಾ।।

ನಾನು ಬದುಕಿರುವಾಗ ಯಾವ ಪುರುಷನು ರಾಜ್ಯವನ್ನಾಳುತ್ತಾನೆ? ನನ್ನ ಮಾತುಗಳನ್ನು ಕಡೆಗಣಿಸಬೇಡ. ನಿನ್ನ ಶಾಂತಿಯು ಸದಾ ನನ್ನ ಮನಸ್ಸಿನಲ್ಲಿದೆ.

05145039a ನ ವಿಶೇಷೋಽಸ್ತಿ ಮೇ ಪುತ್ರ ತ್ವಯಿ ತೇಷು ಚ ಪಾರ್ಥಿವ।
05145039c ಮತಮೇತತ್ಪಿತುಸ್ತುಭ್ಯಂ ಗಾಂಧಾರ್ಯಾ ವಿದುರಸ್ಯ ಚ।।

ಪುತ್ರ! ಪಾರ್ಥಿವ! ನಾನು ನಿನ್ನ ಮತ್ತು ಅವರಲ್ಲಿ ಭೇದ ತೋರಿಸುವುದಿಲ್ಲ. ನಿನ್ನ ತಂದೆ, ಗಾಂಧಾರಿ ಮತ್ತು ವಿದುರರ ಮತವೂ ಇದೇ ಆಗಿದೆ.

05145040a ಶ್ರೋತವ್ಯಂ ಯದಿ ವೃದ್ಧಾನಾಂ ಮಾತಿಶಂಕೀರ್ವಚೋ ಮಮ।
05145040c ನಾಶಯಿಷ್ಯಸಿ ಮಾ ಸರ್ವಮಾತ್ಮಾನಂ ಪೃಥಿವೀಂ ತಥಾ।।

ವೃದ್ಧರನ್ನು ಕೇಳಬೇಕಾದರೆ ನನ್ನ ಮಾತುಗಳನ್ನು ಶಂಕಿಸಬೇಡ. ಇಲ್ಲವಾದರೆ ಸರ್ವವನ್ನೂ – ನಿನ್ನನ್ನೂ ಭೂಮಿಯನ್ನೂ – ನಾಶಪಡಿಸುತ್ತೀಯೆ.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಕರ್ಣ‌ವಿವಾದ ಪರ್ವಣಿ ಭಗವದ್ವಾಕ್ಯೇ ಪಂಚಚತ್ವಾರಿಂಶದಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಕರ್ಣ‌ವಿವಾದ ಪರ್ವದಲ್ಲಿ ಭಗವದ್ವಾಕ್ಯದಲ್ಲಿ ನೂರಾನಲ್ವತ್ತೈದನೆಯ ಅಧ್ಯಾಯವು.