ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಕರ್ಣವಿವಾದ ಪರ್ವ
ಅಧ್ಯಾಯ 144
ಸಾರ
ತಂದೆ ಸೂರ್ಯನು ಕುಂತಿಯು ಸತ್ಯವನ್ನು ನುಡಿಯುತ್ತಿದ್ದಾಳೆಂದು ಹೇಳಿದರೂ ಚಂಚಲನಾಗದೇ ಕರ್ಣನು ಕ್ಷತ್ರಿಯನಾಗಿ ಹುಟ್ಟಿಯೂ ಕ್ಷತ್ರಿಯರ ಗೌರವವು ಸಿಗದಂತೆ ಮಾಡಿದ ಅಪರಾಧಿಯೆಂದು ಕುಂತಿಯನ್ನು ನಿಂದಿಸಿ “ಧೃತರಾಷ್ಟ್ರನ ಮಕ್ಕಳಿಗಾಗಿ ನಾನು ನನ್ನ ಬಲ-ಶಕ್ತಿಗಳನ್ನು ಬಳಸಿ ನಿನ್ನ ಮಕ್ಕಳೊಂದಿಗೆ ಹೋರಾಡುತ್ತೇನೆ” ಎಂದೂ ಆದರೆ “ನಿನಗೆ ಐವರಿಗಿಂತ ಕಡಿಮೆ ಮಕ್ಕಳಿರುವುದಿಲ್ಲ. ಅರ್ಜುನನನು ಇಲ್ಲವಾದರೆ ಕರ್ಣನಿರುತ್ತಾನೆ ಅಥವಾ ನಾನು ಹತನಾದರೆ ಅರ್ಜುನನಿರುತ್ತಾನೆ” ಎಂದು ಹೇಳಿದುದು (1-22). ಹಾಗೆಯೇ ಆಗಲೆಂದು ಹೇಳಿ ಕುಂತಿಯು ಕರ್ಣನನ್ನು ಬಿಗಿದಪ್ಪಿ ಅವನಿಂದ ಬೀಳ್ಕೊಂಡಿದುದು (23-26).
05144001 ವೈಶಂಪಾಯನ ಉವಾಚ।
05144001a ತತಃ ಸೂರ್ಯಾನ್ನಿಶ್ಚರಿತಾಂ ಕರ್ಣಃ ಶುಶ್ರಾವ ಭಾರತೀಂ।
05144001c ದುರತ್ಯಯಾಂ ಪ್ರಣಯಿನೀಂ ಪಿತೃವದ್ಭಾಸ್ಕರೇರಿತಾಂ।।
ವೈಶಂಪಾಯನನು ಹೇಳಿದನು: “ಆಗ ಕರ್ಣನು ಸೂರ್ಯಮಂಡಲದಿಂದ ಈ ವಾತ್ಸಲ್ಯಪೂರ್ವಕ ಮಾತನ್ನು ಕೇಳಿದನು. ದೂರದಿಂದ ಬಂದ ಆ ವಾತ್ಸಲ್ಯದ ಮಾತು ತಂದೆ ಭಾಸ್ಕರನದಾಗಿತ್ತು.
05144002a ಸತ್ಯಮಾಹ ಪೃಥಾ ವಾಕ್ಯಂ ಕರ್ಣ ಮಾತೃವಚಃ ಕುರು।
05144002c ಶ್ರೇಯಸ್ತೇ ಸ್ಯಾನ್ನರವ್ಯಾಘ್ರ ಸರ್ವಮಾಚರತಸ್ತಥಾ।।
“ಕರ್ಣ! ಪೃಥೆಯು ಸತ್ಯವನ್ನೇ ಹೇಳಿದ್ದಾಳೆ. ತಾಯಿಯ ಮಾತಿನಂತೆ ಮಾಡು. ನರವ್ಯಾಘ್ರ! ಅದರಂತೆ ನಡೆದುಕೊಂಡರೆ ನಿನಗೆ ಎಲ್ಲ ಶ್ರೇಯಸ್ಸಾಗುತ್ತದೆ.”
05144003a ಏವಮುಕ್ತಸ್ಯ ಮಾತ್ರಾ ಚ ಸ್ವಯಂ ಪಿತ್ರಾ ಚ ಭಾನುನಾ।
05144003c ಚಚಾಲ ನೈವ ಕರ್ಣಸ್ಯ ಮತಿಃ ಸತ್ಯಧೃತೇಸ್ತದಾ।।
ಹೀಗೆ ತಾಯಿ ಮತ್ತು ತಂದೆ ಸ್ವಯಂಭಾನುವು ಹೇಳಲು ಸತ್ಯಧೃತಿ ಕರ್ಣನ ಮನಸ್ಸು ಚಂಚಲವಾಗಲಿಲ್ಲ.
05144004 ಕರ್ಣ ಉವಾಚ।
05144004a ನ ತೇ ನ ಶ್ರದ್ದಧೇ ವಾಕ್ಯಂ ಕ್ಷತ್ರಿಯೇ ಭಾಷಿತಂ ತ್ವಯಾ।
05144004c ಧರ್ಮದ್ವಾರಂ ಮಮೈತತ್ಸ್ಯಾನ್ನಿಯೋಗಕರಣಂ ತವ।।
ಕರ್ಣನು ಹೇಳಿದನು: “ಕ್ಷತ್ರಿಯೇ! ನಿನ್ನ ನಿಯೋಗದಂತೆ ನಡೆದುಕೊಳ್ಳುವುದೇ ನನ್ನ ಧರ್ಮದ ದ್ವಾರ ಎಂದು ನೀನು ಹೇಳಿದುದರಲ್ಲಿ ನನಗೆ ಶ್ರದ್ಧೆಯಿಲ್ಲವೆಂದಲ್ಲ.
05144005a ಅಕರೋನ್ಮಯಿ ಯತ್ಪಾಪಂ ಭವತೀ ಸುಮಹಾತ್ಯಯಂ।
05144005c ಅವಕೀರ್ಣೋಽಸ್ಮಿ ತೇ ತೇನ ತದ್ಯಶಃಕೀರ್ತಿನಾಶನಂ।।
ಆದರೆ ನನ್ನನ್ನು ಬಿಸುಟು ನೀನು ಸರಿಪಡಿಸಲಿಕ್ಕಾಗದಂತಹ ಪಾಪವನ್ನು ಮಾಡಿ, ನನಗೆ ದೊರಕಬೇಕಾಗಿದ್ದ ಯಶಸ್ಸು ಕೀರ್ತಿಗಳನ್ನು ನಾಶಪಡಿಸಿದ್ದೀಯೆ.
05144006a ಅಹಂ ಚ ಕ್ಷತ್ರಿಯೋ ಜಾತೋ ನ ಪ್ರಾಪ್ತಃ ಕ್ಷತ್ರಸತ್ಕ್ರಿಯಾಂ।
05144006c ತ್ವತ್ಕೃತೇ ಕಿಂ ನು ಪಾಪೀಯಃ ಶತ್ರುಃ ಕುರ್ಯಾನ್ಮಮಾಹಿತಂ।।
ಕ್ಷತ್ರಿಯನಾಗಿ ಹುಟ್ಟಿಯೂ ಕ್ಷತ್ರಿಯರಿಗೆ ಸಲ್ಲಬೇಕಾದ ಗೌರವವನ್ನು ಪಡೆಯಲಿಲ್ಲ. ನೀನು ನನಗೆ ಮಾಡಿದ ಈ ಅಹಿತ ಕಾರ್ಯವನ್ನು ಯಾವ ಶತ್ರುವು ತಾನೇ ಮಾಡಿಯಾನು?
05144007a ಕ್ರಿಯಾಕಾಲೇ ತ್ವನುಕ್ರೋಶಮಕೃತ್ವಾ ತ್ವಮಿಮಂ ಮಮ।
05144007c ಹೀನಸಂಸ್ಕಾರಸಮಯಮದ್ಯ ಮಾಂ ಸಮಚೂಚುದಃ।।
ಮಾಡಬೇಕಾದ ಸಮಯದಲ್ಲಿ ನನಗೆ ನೀನು ಈಗ ತೋರಿಸುವ ಅನುಕಂಪವನ್ನು ತೋರಿಸಲಿಲ್ಲ. ಸಂಸ್ಕಾರಗಳಿಂದ ವಂಚಿಸಿದ ನಿನ್ನ ಈ ಮಗನಿಗೆ ಈಗ ಹೀಗೆ ಮಾಡೆಂದು ಹೇಳುತ್ತಿದ್ದೀಯೆ.
05144008a ನ ವೈ ಮಮ ಹಿತಂ ಪೂರ್ವಂ ಮಾತೃವಚ್ಚೇಷ್ಟಿತಂ ತ್ವಯಾ।
05144008c ಸಾ ಮಾಂ ಸಂಬೋಧಯಸ್ಯದ್ಯ ಕೇವಲಾತ್ಮಹಿತೈಷಿಣೀ।।
ತಾಯಿಯಂತೆ ನೀನು ಎಂದೂ ನನಗೆ ಹಿತವಾಗಿ ನಡೆದುಕೊಳ್ಳಲಿಲ್ಲ. ಈಗ ನೀನು ಕೇವಲ ನಿನ್ನ ಹಿತವನ್ನು ಬಯಸಿ ನನಗೆ ತಿಳಿಸಿ ಹೇಳುತ್ತಿದ್ದೀಯೆ!
05144009a ಕೃಷ್ಣೇನ ಸಹಿತಾತ್ಕೋ ವೈ ನ ವ್ಯಥೇತ ಧನಂಜಯಾತ್।
05144009c ಕೋಽದ್ಯ ಭೀತಂ ನ ಮಾಂ ವಿದ್ಯಾತ್ಪಾರ್ಥಾನಾಂ ಸಮಿತಿಂ ಗತಂ।।
ಕೃಷ್ಣನ ಸಹಾಯಪಡೆದಿರುವ ಧನಂಜಯನ ಎದಿರು ಯಾರು ತಾನೇ ನಡುಗುವುದಿಲ್ಲ? ಈಗ ನಾನು ಪಾರ್ಥರನ್ನು ಸೇರಿದರೆ ಭಯದಿಂದ ಹಾಗೆ ಮಾಡಿದೆ ಎಂದು ಯಾರು ತಾನೇ ತಿಳಿದುಕೊಳ್ಳುವುದಿಲ್ಲ?
05144010a ಅಭ್ರಾತಾ ವಿದಿತಃ ಪೂರ್ವಂ ಯುದ್ಧಕಾಲೇ ಪ್ರಕಾಶಿತಃ।
05144010c ಪಾಂಡವಾನ್ಯದಿ ಗಚ್ಚಾಮಿ ಕಿಂ ಮಾಂ ಕ್ಷತ್ರಂ ವದಿಷ್ಯತಿ।।
ಇದೂವರೆಗೆ ಅವರ ಅಣ್ಣನೆಂದು ವಿದಿತನಾಗಿರದ ನನಗೆ ಈಗ ಯುದ್ಧದ ಸಮಯದಲ್ಲಿ ಗೊತ್ತಾಗಿದೆ. ಈಗ ಪಾಂಡವರ ಕಡೆ ಹೋದರೆ ಕ್ಷತ್ರಿಯರು ನನ್ನ ಕುರಿತು ಏನು ಹೇಳುತ್ತಾರೆ?
05144011a ಸರ್ವಕಾಮೈಃ ಸಂವಿಭಕ್ತಃ ಪೂಜಿತಶ್ಚ ಸದಾ ಭೃಶಂ।
05144011c ಅಹಂ ವೈ ಧಾರ್ತರಾಷ್ಟ್ರಾಣಾಂ ಕುರ್ಯಾಂ ತದಫಲಂ ಕಥಂ।।
ಧಾರ್ತರಾಷ್ಟ್ರರು ಸರ್ವಕಾಮಗಳಿಂದ ಸಂವಿಭಕ್ತರಾಗಿ ಸದಾ ನನ್ನನ್ನು ತುಂಬಾ ಪೂಜಿಸಿದ್ದಾರೆ. ಈಗ ನಾನು ಅದನ್ನು ಹೇಗೆ ನಿಷ್ಫಲವನ್ನಾಗಿ ಮಾಡಲಿ?
05144012a ಉಪನಹ್ಯ ಪರೈರ್ವೈರಂ ಯೇ ಮಾಂ ನಿತ್ಯಮುಪಾಸತೇ।
05144012c ನಮಸ್ಕುರ್ವಂತಿ ಚ ಸದಾ ವಸವೋ ವಾಸವಂ ಯಥಾ।।
ಈಗ ಶತ್ರುಗಳೊಂದಿಗೆ ವೈರವನ್ನು ಕಟ್ಟಿಕೊಂಡು ಅವರು ನಿತ್ಯವೂ ನನ್ನನ್ನು ವಸುಗಳು ವಾಸವನನ್ನು ಹೇಗೋ ಹಾಗೆ ಪೂಜಿಸುತ್ತಾರೆ, ನಮಸ್ಕರಿಸುತ್ತಾರೆ.
05144013a ಮಮ ಪ್ರಾಣೇನ ಯೇ ಶತ್ರೂಂ ಶಕ್ತಾಃ ಪ್ರತಿಸಮಾಸಿತುಂ।
05144013c ಮನ್ಯಂತೇಽದ್ಯ ಕಥಂ ತೇಷಾಮಹಂ ಭಿಂದ್ಯಾಂ ಮನೋರಥಂ।।
ನನ್ನ ಶಕ್ತಿಯಿಂದ ಶತ್ರುಗಳ ಶಕ್ತಿಯನ್ನು ಎದುರಿಸಬಲ್ಲರು ಎಂದು ತಿಳಿದುಕೊಂಡಿರುವ ಅವರ ಮನೋರಥವನ್ನು ಇಂದು ನಾನು ಹೇಗೆ ಒಡೆದು ಹಾಕಲಿ?
05144014a ಮಯಾ ಪ್ಲವೇನ ಸಂಗ್ರಾಮಂ ತಿತೀರ್ಷಂತಿ ದುರತ್ಯಯಂ।
05144014c ಅಪಾರೇ ಪಾರಕಾಮಾ ಯೇ ತ್ಯಜೇಯಂ ತಾನಹಂ ಕಥಂ।।
ಸಾಧಿಸಲಸಾಧ್ಯವಾದ ಈ ಸಂಗ್ರಾಮವೆಂಬ ಸಾಗರವನ್ನು ದಾಟಿಸಲು ಸಾಧ್ಯಮಾಡಬಲ್ಲ ದೋಣಿಯಂತೆ ನನ್ನನ್ನು ನೋಡುತ್ತಿರುವ ಅವರನ್ನು ನಾನು ಹೇಗೆ ತೊರೆಯಬಲ್ಲೆನು?
05144015a ಅಯಂ ಹಿ ಕಾಲಃ ಸಂಪ್ರಾಪ್ತೋ ಧಾರ್ತರಾಷ್ಟ್ರೋಪಜೀವಿನಾಂ।
05144015c ನಿರ್ವೇಷ್ಟವ್ಯಂ ಮಯಾ ತತ್ರ ಪ್ರಾಣಾನಪರಿರಕ್ಷತಾ।।
ಧಾರ್ತರಾಷ್ಟ್ರನನ್ನು ಅವಲಂಬಿಸಿ ಜೀವಿಸುವವರಿಗೆ ಇದೇ ಕಾಲವು ಬಂದಿದೆ. ನನ್ನ ಪ್ರಾಣವನ್ನು ರಕ್ಷಿಸಿಕೊಳ್ಳದೇ ನನ್ನ ಕರ್ತವ್ಯವನ್ನು ಮಾಡಬೇಕು.
05144016a ಕೃತಾರ್ಥಾಃ ಸುಭೃತಾ ಯೇ ಹಿ ಕೃತ್ಯಕಾಲ ಉಪಸ್ಥಿತೇ।
05144016c ಅನವೇಕ್ಷ್ಯ ಕೃತಂ ಪಾಪಾ ವಿಕುರ್ವಂತ್ಯನವಸ್ಥಿತಾಃ।।
ಚೆನ್ನಾಗಿ ಪೋಷಿತರಾಗಿ ಕೃತಾರ್ಥರಾಗಿರುವವರು ಅವರಿಗೆ ಮಾಡಿದುದನ್ನು ಕಡೆಗಣಿಸಿ, ಸಮಯ ಬಂದಾಗ ಹಿಂದೆ ಪಡೆದ ಎಲ್ಲ ಲಾಭಗಳನ್ನೂ ಅಲ್ಲಗಳೆಯುವವರು ಪಾಪಿಷ್ಟರು.
05144017a ರಾಜಕಿಲ್ಬಿಷಿಣಾಂ ತೇಷಾಂ ಭರ್ತೃಪಿಂಡಾಪಹಾರಿಣಾಂ।
05144017c ನೈವಾಯಂ ನ ಪರೋ ಲೋಕೋ ವಿದ್ಯತೇ ಪಾಪಕರ್ಮಣಾಂ।।
ರಾಜರನ್ನು ದುರ್ಬಲಗೊಳಿಸುವ ಆ ಭರ್ತೃಪಿಂಡಾಪಹಾರಿ ಪಾಪಕರ್ಮಿಗಳಿಗೆ ಈ ಲೋಕದಲ್ಲಿಯಾಗಲೀ ಪರಲೋಕದಲ್ಲಿಯಾಗಲೀ ಒಳ್ಳೆಯದಾಗುವುದಿಲ್ಲ.
05144018a ಧೃತರಾಷ್ಟ್ರಸ್ಯ ಪುತ್ರಾಣಾಮರ್ಥೇ ಯೋತ್ಸ್ಯಾಮಿ ತೇ ಸುತೈಃ।
05144018c ಬಲಂ ಚ ಶಕ್ತಿಂ ಚಾಸ್ಥಾಯ ನ ವೈ ತ್ವಯ್ಯನೃತಂ ವದೇ।।
ಧೃತರಾಷ್ಟ್ರನ ಮಕ್ಕಳಿಗಾಗಿ ನಾನು ನನ್ನ ಬಲ ಶಕ್ತಿಗಳನ್ನು ಬಳಸಿ ನಿನ್ನ ಮಕ್ಕಳೊಂದಿಗೆ ಹೋರಾಡುತ್ತೇನೆ. ನಿನಗೆ ಸುಳ್ಳನ್ನು ಹೇಳುತ್ತಿಲ್ಲ.
05144019a ಆನೃಶಂಸ್ಯಮಥೋ ವೃತ್ತಂ ರಕ್ಷನ್ಸತ್ಪುರುಷೋಚಿತಂ।
05144019c ಅತೋಽರ್ಥಕರಮಪ್ಯೇತನ್ನ ಕರೋಮ್ಯದ್ಯ ತೇ ವಚಃ।।
ಸತ್ಪುರುಷರಿಗೆ ಉಚಿತವಾದ ಮಾನವೀಯ ನಡತೆಯನ್ನು ರಕ್ಷಿಸಿ, ನನಗೆ ಒಳ್ಳೆಯದಾಗದಿದ್ದರೂ ಇಂದು ನಿನ್ನ ಮಾತಿನಂತೆ ಮಾಡುವುದಿಲ್ಲ.
05144020a ನ ತು ತೇಽಯಂ ಸಮಾರಂಭೋ ಮಯಿ ಮೋಘೋ ಭವಿಷ್ಯತಿ।
05144020c ವಧ್ಯಾನ್ವಿಷಹ್ಯಾನ್ಸಂಗ್ರಾಮೇ ನ ಹನಿಷ್ಯಾಮಿ ತೇ ಸುತಾನ್।
05144020e ಯುಧಿಷ್ಠಿರಂ ಚ ಭೀಮಂ ಚ ಯಮೌ ಚೈವಾರ್ಜುನಾದೃತೇ।।
ಆದರೂ ನನ್ನೊಡನೆ ನೀನು ನಡೆಸಿದ ಈ ಪ್ರಯತ್ನವು ನಿಷ್ಫಲವಾಗುವುದಿಲ್ಲ. ಅವರನ್ನು ಎದುರಿಸಿ ಕೊಲ್ಲಬಲ್ಲೆನಾದರೂ ನಾನು ಯುದ್ಧದಲ್ಲಿ ನಿನ್ನ ಮಕ್ಕಳನ್ನು – ಅರ್ಜುನನನ್ನು ಬಿಟ್ಟು, ಯುಧಿಷ್ಠಿರ, ಭೀಮ, ಮತ್ತು ಯಮಳರನ್ನು – ಕೊಲ್ಲುವುದಿಲ್ಲ.
05144021a ಅರ್ಜುನೇನ ಸಮಂ ಯುದ್ಧಂ ಮಮ ಯೌಧಿಷ್ಠಿರೇ ಬಲೇ।
05144021c ಅರ್ಜುನಂ ಹಿ ನಿಹತ್ಯಾಜೌ ಸಂಪ್ರಾಪ್ತಂ ಸ್ಯಾತ್ಫಲಂ ಮಯಾ।
05144021e ಯಶಸಾ ಚಾಪಿ ಯುಜ್ಯೇಯಂ ನಿಹತಃ ಸವ್ಯಸಾಚಿನಾ।।
ಯುಧಿಷ್ಠಿರನ ಬಲದಲ್ಲಿರುವ ಅರ್ಜುನನೊಂದಿಗೆ ನನ್ನ ಯುದ್ಧವು ನಡೆಯುತ್ತದೆ. ಅರ್ಜುನನನ್ನು ಕೊಂದು ನನಗೆ ನನ್ನ ಫಲವು ದೊರೆಯುತ್ತದೆ. ಅಥವಾ ಸವ್ಯಸಾಚಿಯಿಂದ ಹತನಾದರೆ ಯಶಸ್ಸನ್ನು ಪಡೆಯುತ್ತೇನೆ.
05144022a ನ ತೇ ಜಾತು ನಶಿಷ್ಯಂತಿ ಪುತ್ರಾಃ ಪಂಚ ಯಶಸ್ವಿನಿ।
05144022c ನಿರರ್ಜುನಾಃ ಸಕರ್ಣಾ ವಾ ಸಾರ್ಜುನಾ ವಾ ಹತೇ ಮಯಿ।।
ಯಶಸ್ವಿನೀ! ನಿನಗೆ ಐವರಿಗಿಂತ ಕಡಿಮೆ ಮಕ್ಕಳಿರುವುದಿಲ್ಲ. ಅರ್ಜುನನನು ಇಲ್ಲವಾದರೆ ಕರ್ಣನಿರುತ್ತಾನೆ ಅಥವಾ ನಾನು ಹತನಾದರೆ ಅರ್ಜುನನಿರುತ್ತಾನೆ.””
05144023 ವೈಶಂಪಾಯನ ಉವಾಚ।
05144023a ಇತಿ ಕರ್ಣವಚಃ ಶ್ರುತ್ವಾ ಕುಂತೀ ದುಃಖಾತ್ಪ್ರವೇಪತೀ।
05144023c ಉವಾಚ ಪುತ್ರಮಾಶ್ಲಿಷ್ಯ ಕರ್ಣಂ ಧೈರ್ಯಾದಕಂಪಿತಂ।।
ವೈಶಂಪಾಯನನು ಹೇಳಿದನು: “ಕರ್ಣನ ಈ ಮಾತುಗಳನ್ನು ಕೇಳಿ ಕುಂತಿಯು ದುಃಖದಿಂದ ನಡುಗಿದಳು. ಓಲಾಡದೇ ಧೈಯದಿಂದಿದ್ದ ಪುತ್ರ ಕರ್ಣನನ್ನು ಬಿಗಿದಪ್ಪಿ ಹೇಳಿದಳು:
05144024a ಏವಂ ವೈ ಭಾವ್ಯಮೇತೇನ ಕ್ಷಯಂ ಯಾಸ್ಯಂತಿ ಕೌರವಾಃ।
05144024c ಯಥಾ ತ್ವಂ ಭಾಷಸೇ ಕರ್ಣ ದೈವಂ ತು ಬಲವತ್ತರಂ।।
“ಕರ್ಣ! ಹೀಗೆಯೇ ಆಗಲಿ! ನೀನು ಹೇಳಿದಂತೆ ಕೌರವರು ಕ್ಷಯ ಹೊಂದುತ್ತಾರೆ. ದೈವವು ಬಲವತ್ತರವಾದುದು.
05144025a ತ್ವಯಾ ಚತುರ್ಣಾಂ ಭ್ರಾತೄಣಾಮಭಯಂ ಶತ್ರುಕರ್ಶನ।
05144025c ದತ್ತಂ ತತ್ಪ್ರತಿಜಾನೀಹಿ ಸಂಗರಪ್ರತಿಮೋಚನಂ।।
ಶತ್ರುಕರ್ಶನ! ನಿನ್ನ ನಾಲ್ವರು ತಮ್ಮಂದಿರಿಗೆ ನೀನು ನೀಡಿರುವ ಅಭಯವನ್ನು ನೆನಪಿನಲ್ಲಿಟ್ಟುಕೊಂಡು ಸಂಗರಕ್ಕೆ ಪ್ರಾಯಶ್ಚಿತ್ತವನ್ನು ಮಾಡಿಕೋ.
05144026a ಅನಾಮಯಂ ಸ್ವಸ್ತಿ ಚೇತಿ ಪೃಥಾಥೋ ಕರ್ಣಮಬ್ರವೀತ್।
05144026c ತಾಂ ಕರ್ಣೋಽಭ್ಯವದತ್ಪ್ರೀತಸ್ತತಸ್ತೌ ಜಗ್ಮತುಃ ಪೃಥಕ್।।
ಆರೋಗ್ಯವಾಗಿರು! ಮಂಗಳವಾಗಲಿ!” ಎಂದು ಪೃಥೆಯು ಕರ್ಣನಿಗೆ ಹೇಳಿದಳು. ಪ್ರೀತಿಯಿಂದ ಕರ್ಣನು ಅವಳಿಗೆ ವಂದಿಸಿದನು. ಇಬ್ಬರೂ ಬೇರೆ ಬೇರೆ ದಾರಿಗಳಲ್ಲಿ ಹೋದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಕರ್ಣವಿವಾದ ಪರ್ವಣಿ ಕುಂತೀಕರ್ಣಸಮಾಗಮೇ ಚತುಶ್ಚತ್ವಾರಿಂಶದಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಕರ್ಣವಿವಾದ ಪರ್ವದಲ್ಲಿ ಕುಂತೀಕರ್ಣಸಮಾಗಮದಲ್ಲಿ ನೂರಾನಲ್ವತ್ನಾಲ್ಕನೆಯ ಅಧ್ಯಾಯವು.