143 ಕುಂತೀಕರ್ಣಸಮಾಗಮಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಕರ್ಣ‌ವಿವಾದ ಪರ್ವ

ಅಧ್ಯಾಯ 143

ಸಾರ

ಕುಂತಿಯು ಕರ್ಣನಿಗೆ ಅವನು ತನ್ನ ಮತ್ತು ಸೂರ್ಯನ ಮಗನೆಂದೂ ಪಾಂಡವರೊಂದಿಗೆ ಸೇರೆಂದೂ, “ಸೂತಪುತ್ರ ಎನ್ನುವ ಶಬ್ಧವು ನಿನಗೆ ಬೇಡ. ಪಾರ್ಥನೆಂದೆನಿಸಿಕೋ!” ಎನ್ನುವುದು (1-12).

05143001 ಕರ್ಣ ಉವಾಚ। 05143001a ರಾಧೇಯೋಽಹಮಾಧಿರಥಿಃ ಕರ್ಣಸ್ತ್ವಾಮಭಿವಾದಯೇ। 05143001c ಪ್ರಾಪ್ತಾ ಕಿಮರ್ಥಂ ಭವತೀ ಬ್ರೂಹಿ ಕಿಂ ಕರವಾಣಿ ತೇ।।

ಕರ್ಣನು ಹೇಳಿದನು: “ರಾಧೇಯ, ಆದಿರಥಿ, ನಾನು ಕರ್ಣನು ನಿನಗೆ ನಮಸ್ಕರಿಸುತ್ತೇನೆ. ಇಲ್ಲಿಗೆ ನೀನು ಏಕೆ ಬಂದಿದ್ದೀಯೆ ಮತ್ತು ನಾನು ಏನು ಮಾಡಲಿ?”

05143002 ಕುಂತ್ಯುವಾಚ। 05143002a ಕೌಂತೇಯಸ್ತ್ವಂ ನ ರಾಧೇಯೋ ನ ತವಾಧಿರಥಃ ಪಿತಾ। 05143002c ನಾಸಿ ಸೂತಕುಲೇ ಜಾತಃ ಕರ್ಣ ತದ್ವಿದ್ಧಿ ಮೇ ವಚಃ।।

ಕುಂತಿಯು ಹೇಳಿದಳು: “ನೀನು ಕೌಂತೇಯ! ರಾಧೇಯನಲ್ಲ. ಅಧಿರಥನು ನಿನ್ನ ಪಿತನಲ್ಲ. ಕರ್ಣ! ನೀನು ಸೂತಕುಲದಲ್ಲಿ ಜನಿಸಿದವನಲ್ಲ. ನನ್ನ ಮಾತನ್ನು ತಿಳಿದುಕೋ.

05143003a ಕಾನೀನಸ್ತ್ವಂ ಮಯಾ ಜಾತಃ ಪೂರ್ವಜಃ ಕುಕ್ಷಿಣಾ ಧೃತಃ। 05143003c ಕುಂತಿಭೋಜಸ್ಯ ಭವನೇ ಪಾರ್ಥಸ್ತ್ವಮಸಿ ಪುತ್ರಕ।।

ಕನ್ಯೆಯಾಗಿದ್ದಾಗ ನನಗೆ ನೀನು ಜ್ಯೇಷ್ಠನಾಗಿ ಹುಟ್ಟಿದೆ. ಕುಂತೀಭೋಜನ ಭವನದಲ್ಲಿ ಹೊಟ್ಟೆಯಲ್ಲಿ ನಿನ್ನನ್ನು ಹೊತ್ತಿದ್ದೆ. ಪುತ್ರಕ! ನೀನು ಪಾರ್ಥನಾಗಿದ್ದೀಯೆ.

05143004a ಪ್ರಕಾಶಕರ್ಮಾ ತಪನೋ ಯೋಽಯಂ ದೇವೋ ವಿರೋಚನಃ। 05143004c ಅಜೀಜನತ್ತ್ವಾಂ ಮಯ್ಯೇಷ ಕರ್ಣ ಶಸ್ತ್ರಭೃತಾಂ ವರಂ।।

ಕರ್ಣ! ದೇವ ವಿರೋಚನ, ಎಲ್ಲವನ್ನೂ ಪ್ರಕಾಶಗೊಳಿಸುವ ಶಸ್ತ್ರಭೃತರಲ್ಲಿ ಶೇಷ್ಠ ತಪನನು ನನ್ನಲ್ಲಿ ನಿನ್ನನ್ನು ಹುಟ್ಟಿಸಿದನು.

05143005a ಕುಂಡಲೀ ಬದ್ಧಕವಚೋ ದೇವಗರ್ಭಃ ಶ್ರಿಯಾ ವೃತಃ। 05143005c ಜಾತಸ್ತ್ವಮಸಿ ದುರ್ಧರ್ಷ ಮಯಾ ಪುತ್ರ ಪಿತುರ್ಗೃಹೇ।।

ಪುತ್ರ! ಕುಂಡಲ-ಕವಚಗಳಿಂದೊಡಗೂಡಿ, ದುರ್ಧರ್ಷ ದೇವಗರ್ಭನಾದ ನೀನು ಶ್ರೀಯಿಂದ ಆವೃತನಾಗಿ ತಂದೆಯ ಮನೆಯಲ್ಲಿ ನನ್ನ ಮಗನಾಗಿ ಹುಟ್ಟಿದ್ದೆ.

05143006a ಸ ತ್ವಂ ಭ್ರಾತೄನಸಂಬುದ್ಧ್ವಾ ಮೋಹಾದ್ಯದುಪಸೇವಸೇ। 05143006c ಧಾರ್ತರಾಷ್ಟ್ರಾನ್ನ ತದ್ಯುಕ್ತಂ ತ್ವಯಿ ಪುತ್ರ ವಿಶೇಷತಃ।।

ಪುತ್ರ! ನಿನ್ನ ಸಹೋದರರನ್ನು ತಿಳಿಯದೇ ಅಜ್ಞಾನದಿಂದ ಈ ರೀತಿ ಧಾರ್ತರಾಷ್ಟ್ರನ ಸೇವೆ ಮಾಡುವುದು ನಿನಗೆ ಸರಿಯಲ್ಲ.

05143007a ಏತದ್ಧರ್ಮಫಲಂ ಪುತ್ರ ನರಾಣಾಂ ಧರ್ಮನಿಶ್ಚಯೇ। 05143007c ಯತ್ತುಷ್ಯಂತ್ಯಸ್ಯ ಪಿತರೋ ಮಾತಾ ಚಾಪ್ಯೇಕದರ್ಶಿನೀ।।

ಪುತ್ರ! ತಂದೆ-ತಾಯಿಯರ ಉದ್ದೇಶಗಳನ್ನು ಪೂರೈಸುವುದು ನರರ ಧರ್ಮಫಲವೆಂದು ಧರ್ಮನಿಶ್ಚಯವಾಗಿದೆ.

05143008a ಅರ್ಜುನೇನಾರ್ಜಿತಾಂ ಪೂರ್ವಂ ಹೃತಾಂ ಲೋಭಾದಸಾಧುಭಿಃ। 05143008c ಆಚ್ಚಿದ್ಯ ಧಾರ್ತರಾಷ್ಟ್ರೇಭ್ಯೋ ಭುಂಕ್ಷ್ವ ಯೌಧಿಷ್ಠಿರೀಂ ಶ್ರಿಯಂ।।

ಹಿಂದೆ ಅರ್ಜುನನು ಸಂಪಾದಿಸಿದ, ನಂತರ ಕೆಟ್ಟ ಧಾರ್ತರಾಷ್ಟ್ರರಿಂದ ಮೋಸದಿಂದ ಅಪಹರಿಸಲ್ಪಟ್ಟ ಯುಧಿಷ್ಠಿರನ ಸಂಪತ್ತನ್ನು ಭೋಗಿಸು.

05143009a ಅದ್ಯ ಪಶ್ಯಂತು ಕುರವಃ ಕರ್ಣಾರ್ಜುನಸಮಾಗಮಂ। 05143009c ಸೌಭ್ರಾತ್ರೇಣ ತದಾಲಕ್ಷ್ಯ ಸಮ್ನಮಂತಾಮಸಾಧವಃ।।

ಇಂದು ಕುರುಗಳು ಕರ್ಣಾರ್ಜುನರು ಒಂದಾಗುವುದನ್ನು ನೋಡಲಿ. ನಿಮ್ಮಿಬ್ಬರ ಸೌಭ್ರಾತೃತ್ವವನ್ನು ನೋಡಿ ಕೆಟ್ಟ ಜನರು ತಲೆಬಾಗಲಿ.

05143010a ಕರ್ಣಾರ್ಜುನೌ ವೈ ಭವತಾಂ ಯಥಾ ರಾಮಜನಾರ್ದನೌ। 05143010c ಅಸಾಧ್ಯಂ ಕಿಂ ನು ಲೋಕೇ ಸ್ಯಾದ್ಯುವಯೋಃ ಸಹಿತಾತ್ಮನೋಃ।।

ರಾಮ-ಜನಾರ್ದನರಂತೆ ನೀವಿಬ್ಬರೂ ಕರ್ಣಾರ್ಜುನರಾಗಿರಿ. ನೀವಿಬ್ಬರೂ ಒಂದಾದರೆ ನಿಮಗೆ ಈ ಲೋಕದಲ್ಲಿ ಯಾವುದು ತಾನೇ ಅಸಾಧ್ಯ?

05143011a ಕರ್ಣ ಶೋಭಿಷ್ಯಸೇ ನೂನಂ ಪಂಚಭಿರ್ಭ್ರಾತೃಭಿರ್ವೃತಃ। 05143011c ವೇದೈಃ ಪರಿವೃತೋ ಬ್ರಹ್ಮಾ ಯಥಾ ವೇದಾಂಗಪಂಚಮೈಃ।।

ಕರ್ಣ! ವೇದ ಮತ್ತು ವೇದಾಂಗ ಈ ಐದರಿಂದ ಪರಿವೃತನಾದ ಬ್ರಹ್ಮನಂತೆ ನೀನು ಐವರು ಸಹೋದರರಿಂದ ಪರಿವೃತನಾಗಿ ಕಂಗೊಳಿಸುವೆ.

05143012a ಉಪಪನ್ನೋ ಗುಣೈಃ ಶ್ರೇಷ್ಠೋ ಜ್ಯೇಷ್ಠಃ ಶ್ರೇಷ್ಠೇಷು ಬಂಧುಷು। 05143012c ಸೂತಪುತ್ರೇತಿ ಮಾ ಶಬ್ದಃ ಪಾರ್ಥಸ್ತ್ವಮಸಿ ವೀರ್ಯವಾನ್।।

ಶ್ರೇಷ್ಠ ಗುಣಗಳಿಂದ ಕೂಡಿದ ನೀನು ನನ್ನ ಜ್ಯೇಷ್ಠ. ಬಂಧುಗಳಲ್ಲಿ ಶ್ರೇಷ್ಠ! ಸೂತಪುತ್ರ ಎನ್ನುವ ಶಬ್ಧವು ನಿನಗೆ ಬೇಡ. ವೀರ್ಯವಾನ್! ಪಾರ್ಥನೆಂದೆನಿಸಿಕೋ!””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಕರ್ಣ‌ವಿವಾದ ಪರ್ವಣಿ ಕುಂತೀಕರ್ಣಸಮಾಗಮೇ ತ್ರಿಚತ್ವಾರಿಂಶದಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಕರ್ಣ‌ವಿವಾದ ಪರ್ವದಲ್ಲಿ ಕುಂತೀಕರ್ಣಸಮಾಗಮದಲ್ಲಿ ನೂರಾನಲ್ವತ್ಮೂರನೆಯ ಅಧ್ಯಾಯವು.