142 ಕುಂತೀಕರ್ಣಸಮಾಗಮಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಕರ್ಣ‌ವಿವಾದ ಪರ್ವ

ಅಧ್ಯಾಯ 142

ಸಾರ

ಕುರುಗಳ ವೀರನಾಶದ ಕುರಿತು ತನಗಿರುವ ಚಿಂತೆಯನ್ನು ವಿದುರನು ಕುಂತಿಯಲ್ಲಿ ಹೇಳಿಕೊಂಡಿದುದು (1-9). ಅವನ ಮಾತುಗಳನ್ನು ಕೇಳಿ ಚಿಂತಿತಳಾದ ಕುಂತಿಯು ತನ್ನ ಮಗ ಕರ್ಣನನ್ನು ನೆನಪಿಸಿಕೊಂಡು, ಅವನನ್ನು ಭೇಟಿಯಾಗಲು ಯೋಚಿಸಿದುದು (10-25). ಕುಂತಿಯು ಕರ್ಣನನ್ನು ಭೇಟಿಯಾದುದು (26-30).

05142001 ವೈಶಂಪಾಯನ ಉವಾಚ।
05142001a ಅಸಿದ್ಧಾನುನಯೇ ಕೃಷ್ಣೇ ಕುರುಭ್ಯಃ ಪಾಂಡವಾನ್ಗತೇ।
05142001c ಅಭಿಗಮ್ಯ ಪೃಥಾಂ ಕ್ಷತ್ತಾ ಶನೈಃ ಶೋಚನ್ನಿವಾಬ್ರವೀತ್।।

ವೈಶಂಪಾಯನನು ಹೇಳಿದನು: “ಸಂಧಾನ ಪ್ರಯತ್ನವು ಯಶಸ್ವಿಯಾಗದೇ ಕೃಷ್ಣನು ಕುರುಗಳಿಂದ ಪಾಂಡವರ ಕಡೆ ಹೊರಟುಹೋದನಂತರ ಕ್ಷತ್ತನು ಪೃಥೆಯ ಬಳಿ ಹೋಗಿ ಶೋಕದಿಂದ ಮೆಲ್ಲನೇ ಹೀಗೆ ಹೇಳಿದನು:

05142002a ಜಾನಾಸಿ ಮೇ ಜೀವಪುತ್ರೇ ಭಾವಂ ನಿತ್ಯಮನುಗ್ರಹೇ।
05142002c ಕ್ರೋಶತೋ ನ ಚ ಗೃಹ್ಣೀತೇ ವಚನಂ ಮೇ ಸುಯೋಧನಃ।।

“ಜೀವಪುತ್ರೇ! ನನ್ನ ಭಾವವು ನಿತ್ಯವೂ ಅನುಗ್ರಹವಾದುದು ಎಂದು ನಿನಗೆ ತಿಳಿದಿದೆ. ನಾನು ಕೂಗಿಕೊಂಡರೂ ಕೂಡ ಸುಯೋಧನನು ನನ್ನ ಮಾತನ್ನು ಸ್ವೀಕರಿಸುವುದಿಲ್ಲ.

05142003a ಉಪಪನ್ನೋ ಹ್ಯಸೌ ರಾಜಾ ಚೇದಿಪಾಂಚಾಲಕೇಕಯೈಃ।
05142003c ಭೀಮಾರ್ಜುನಾಭ್ಯಾಂ ಕೃಷ್ಣೇನ ಯುಯುಧಾನಯಮೈರಪಿ।।
05142004a ಉಪಪ್ಲವ್ಯೇ ನಿವಿಷ್ಟೋಽಪಿ ಧರ್ಮಮೇವ ಯುಧಿಷ್ಠಿರಃ।
05142004c ಕಾಂಕ್ಷತೇ ಜ್ಞಾತಿಸೌಹಾರ್ದಾದ್ಬಲವಾನ್ದುರ್ಬಲೋ ಯಥಾ।।

ಅಲ್ಲಿ ಚೇದಿ, ಪಾಂಚಾಲ, ಕೇಕಯ, ಭೀಮಾರ್ಜುನರು, ಕೃಷ್ಣ, ಯುಯುಧಾನರೊಡನೆ ಉಪಪ್ಲವದಲ್ಲಿ ನೆಲೆಸಿರುವ ರಾಜಾ ಯುಧಿಷ್ಠಿರನು ಜ್ಞಾತಿಸೌಹಾರ್ದತೆಯಿಂದ ಬಲವಂತನಾಗಿದ್ದರೂ ದುರ್ಬಲನಂತೆ ಧರ್ಮವನ್ನೇ ಬಯಸುತ್ತಿದ್ದಾನೆ.

05142005a ರಾಜಾ ತು ಧೃತರಾಷ್ಟ್ರೋಽಯಂ ವಯೋವೃದ್ಧೋ ನ ಶಾಮ್ಯತಿ।
05142005c ಮತ್ತಃ ಪುತ್ರಮದೇನೈವ ವಿಧರ್ಮೇ ಪಥಿ ವರ್ತತೇ।।

ಇಲ್ಲಿ ರಾಜಾ ಧೃತರಾಷ್ಟ್ರನು ವಯೋವೃದ್ಧನಾದರೂ ಶಾಂತಿಯನ್ನು ತರುತ್ತಿಲ್ಲ. ಪುತ್ರಮದದಿಂದ ಮತ್ತನಾಗಿ ವಿಧರ್ಮದ ಮಾರ್ಗದಲ್ಲಿ ನಡೆಯುತ್ತಿದ್ದಾನೆ.

05142006a ಜಯದ್ರಥಸ್ಯ ಕರ್ಣಸ್ಯ ತಥಾ ದುಃಶಾಸನಸ್ಯ ಚ।
05142006c ಸೌಬಲಸ್ಯ ಚ ದುರ್ಬುದ್ಧ್ಯಾ ಮಿಥೋಭೇದಃ ಪ್ರವರ್ತತೇ।।

ಜಯದ್ರಥ, ಕರ್ಣ, ದುಃಶಾಸನ ಮತ್ತು ಸೌಬಲರ ದುರ್ಬುದ್ಧಿಯಿಂದ ಮಿಥೋಭೇದವು ಮುಂದುವರೆಯುತ್ತಿದೆ.

05142007a ಅಧರ್ಮೇಣ ಹಿ ಧರ್ಮಿಷ್ಠಂ ಹೃತಂ ವೈ ರಾಜ್ಯಮೀದೃಶಂ।
05142007c ಯೇಷಾಂ ತೇಷಾಮಯಂ ಧರ್ಮಃ ಸಾನುಬಂಧೋ ಭವಿಷ್ಯತಿ।।

ಆದರೆ ಅಧರ್ಮದಿಂದ ಆ ಧರ್ಮಿಷ್ಠನ ರಾಜ್ಯವನ್ನು ಈ ರೀತಿ ಅಪಹರಿಸಿದವರನ್ನು ಧರ್ಮವು ಹಿಂದೆ ಹಾಕುತ್ತದೆ.

05142008a ಹ್ರಿಯಮಾಣೇ ಬಲಾದ್ಧರ್ಮೇ ಕುರುಭಿಃ ಕೋ ನ ಸಂಜ್ವರೇತ್।
05142008c ಅಸಾಮ್ನಾ ಕೇಶವೇ ಯಾತೇ ಸಮುದ್ಯೋಕ್ಷ್ಯಂತಿ ಪಾಂಡವಾಃ।।

ಕುರುಗಳು ಬಲಾತ್ಕಾರವಾಗಿ ಧರ್ಮವನ್ನು ಅಪಹರಿಸಿದಾಗ ಯಾರು ತಾನೆ ಕೋಪಗೊಳ್ಳುವುದಿಲ್ಲ? ಕೇಶವನನ್ನು ಸೇರಿಕೊಂಡು ಪಾಂಡವರು ಬಂದು ಸದೆಬಡಿಯುತ್ತಾರೆ.

05142009a ತತಃ ಕುರೂಣಾಮನಯೋ ಭವಿತಾ ವೀರನಾಶನಃ।
05142009c ಚಿಂತಯನ್ನ ಲಭೇ ನಿದ್ರಾಮಹಃಸ್ಸು ಚ ನಿಶಾಸು ಚ।।

ಆಗ ಈ ಕುರುಗಳ ವೀರನಾಶನವಾಗುತ್ತದೆ. ಇದನ್ನು ಚಿಂತಿಸಿ ನನಗೆ ಹಗಲಾಗಲೀ ರಾತ್ರಿಯಾಗಲೀ ನಿದ್ದೆಯೇ ಬರುವುದಿಲ್ಲ.”

05142010a ಶ್ರುತ್ವಾ ತು ಕುಂತೀ ತದ್ವಾಕ್ಯಮರ್ಥಕಾಮೇನ ಭಾಷಿತಂ।
05142010c ಅನಿಷ್ಟನಂತೀ ದುಃಖಾರ್ತಾ ಮನಸಾ ವಿಮಮರ್ಶ ಹ।।

ಒಳ್ಳೆಯದನ್ನೇ ಬಯಸಿ ಅವನಾಡಿದ ಮಾತನ್ನು ಕೇಳಿದ ಕುಂತಿಯು ಏನನ್ನೋ ಕಳೆದುಕೊಳ್ಳುವಳಂತೆ ದುಃಖಾರ್ತಳಾಗಿ ಮನಸ್ಸಿನಲ್ಲಿಯೇ ವಿಮರ್ಶಿಸಿದಳು:

05142011a ಧಿಗಸ್ತ್ವರ್ಥಂ ಯತ್ಕೃತೇಽಯಂ ಮಹಾಂ ಜ್ಞಾತಿವಧೇ ಕ್ಷಯಃ।
05142011c ವರ್ತ್ಸ್ಯತೇ ಸುಹೃದಾಂ ಹ್ಯೇಷಾಂ ಯುದ್ಧೇಽಸ್ಮಿನ್ವೈ ಪರಾಭವಃ।।

“ಯಾವುದಕ್ಕಾಗಿ ಈ ಮಹಾ ಕ್ಷಯಕಾರಕ ಜ್ಞಾತಿವಧೆಯು ನಡೆಯುತ್ತದೆಯೋ ಆ ಸಂಪತ್ತಿಗೆ ಧಿಕ್ಕಾರ! ಈ ಯುದ್ಧದಲ್ಲಿ ಸುಹೃದಯರ ವಧೆಯಾಗುತ್ತದೆ ಮತ್ತು ಪರಾಭವವೇ ದೊರೆಯುತ್ತದೆ.

05142012a ಪಾಂಡವಾಶ್ಚೇದಿಪಾಂಚಾಲಾ ಯಾದವಾಶ್ಚ ಸಮಾಗತಾಃ।
05142012c ಭಾರತೈರ್ಯದಿ ಯೋತ್ಸ್ಯಂತಿ ಕಿಂ ನು ದುಃಖಮತಃ ಪರಂ।।

ಪಾಂಡವರು ಚೇದಿ, ಪಾಂಚಾಲ ಮತ್ತು ಯಾದವರೊಂದಿಗೆ ಸೇರಿಕೊಂಡು ಭಾರತರೊಂದಿಗೆ ಹೋರಾಡುತ್ತಾರೆ ಎಂದರೆ ಇದಕ್ಕಿಂತಲೂ ಹೆಚ್ಚಿನ ದುಃಖವು ಯಾವುದಿದೆ?

05142013a ಪಶ್ಯೇ ದೋಷಂ ಧ್ರುವಂ ಯುದ್ಧೇ ತಥಾ ಯುದ್ಧೇ ಪರಾಭವಂ।
05142013c ಅಧನಸ್ಯ ಮೃತಂ ಶ್ರೇಯೋ ನ ಹಿ ಜ್ಞಾತಿಕ್ಷಯೇ ಜಯಃ।।

ಯುದ್ಧದಲ್ಲಿಯ ಪರಾಭವದಂತೆ ಯುದ್ಧದಲ್ಲಿಯೇ ದೋಷವನ್ನು ಕಾಣುತ್ತಿದ್ದೇನೆ. ಜ್ಞಾತಿಕ್ಷಯದಲ್ಲಿ ಜಯವನ್ನು ಪಡೆಯುವುದಕ್ಕಿಂತ ಧನವಿಲ್ಲದೇ ಸಾಯುವುದೇ ಶ್ರೇಯಸ್ಕರವು.

05142014a ಪಿತಾಮಹಃ ಶಾಂತನವ ಆಚಾರ್ಯಶ್ಚ ಯುಧಾಂ ಪತಿಃ।
05142014c ಕರ್ಣಶ್ಚ ಧಾರ್ತರಾಷ್ಟ್ರಾರ್ಥಂ ವರ್ಧಯಂತಿ ಭಯಂ ಮಮ।।

ಧಾರ್ತರಾಷ್ಟ್ರರ ಕಡೆಯಿರುವ ಪಿತಾಮಹ ಶಾಂತನವ, ಯೋಧರ ನಾಯಕ ಆಚಾರ್ಯ, ಮತ್ತು ಕರ್ಣ ಇವರು ನನ್ನ ಭಯವನ್ನು ಹೆಚ್ಚಿಸುತ್ತಿದ್ದಾರೆ.

05142015a ನಾಚಾರ್ಯಃ ಕಾಮವಾಂ ಶಿಷ್ಯೈರ್ದ್ರೋಣೋ ಯುಧ್ಯೇತ ಜಾತು ಚಿತ್।
05142015c ಪಾಂಡವೇಷು ಕಥಂ ಹಾರ್ದಂ ಕುರ್ಯಾನ್ನ ಚ ಪಿತಾಮಹಃ।।

ಆಚಾರ್ಯ ದ್ರೋಣನು ಶಿಷ್ಯರ ಮೇಲಿನ ಪ್ರೀತಿಯಿಂದ ಯುದ್ಧವನ್ನು ಮಾಡದೇ ಇರಬಹುದು. ಪಿತಾಮಹನೂ ಕೂಡ ಪಾಂಡವರೊಂದಿಗೆ ಯುದ್ಧಮಾಡಲು ಹೇಗೆ ಮನಸ್ಸು ಮಾಡುತ್ತಾನೆ?

05142016a ಅಯಂ ತ್ವೇಕೋ ವೃಥಾದೃಷ್ಟಿರ್ಧಾರ್ತರಾಷ್ಟ್ರಸ್ಯ ದುರ್ಮತೇಃ।
05142016c ಮೋಹಾನುವರ್ತೀ ಸತತಂ ಪಾಪೋ ದ್ವೇಷ್ಟಿ ಚ ಪಾಂಡವಾನ್।।

ತಿಳಿಯದೇ ದುರ್ಮತಿ ಧಾರ್ತರಾಷ್ಟ್ರನನ್ನು ಅನುಸರಿಸಿ ಪಾಂಡವರನ್ನು ಸತತವಾಗಿ ಪಾಪದಿಂದ ದ್ವೇಷಿಸುವವನು ಇವ (ಕರ್ಣ) ನು ಒಬ್ಬನೇ!

05142017a ಮಹತ್ಯನರ್ಥೇ ನಿರ್ಬಂಧೀ ಬಲವಾಂಶ್ಚ ವಿಶೇಷತಃ।
05142017c ಕರ್ಣಃ ಸದಾ ಪಾಂಡವಾನಾಂ ತನ್ಮೇ ದಹತಿ ಸಾಂಪ್ರತಂ।।

ಪಾಂಡವರಿಗೆ ಸದಾ ಮಹಾ ಕೆಡುಕನ್ನು ಮಾಡಲು ಬದ್ಧನಾಗಿರುವ ವಿಶೇಷವಾಗಿ ಬಲವಂತನಾಗಿರುವ ಕರ್ಣನು ನನ್ನನ್ನು ಸುಡುತ್ತಿದ್ದಾನೆ.

05142018a ಆಶಂಸೇ ತ್ವದ್ಯ ಕರ್ಣಸ್ಯ ಮನೋಽಹಂ ಪಾಂಡವಾನ್ಪ್ರತಿ।
05142018c ಪ್ರಸಾದಯಿತುಮಾಸಾದ್ಯ ದರ್ಶಯಂತೀ ಯಥಾತಥಂ।।

ಇಂದು ಕರ್ಣನ ಕರುಣೆಯನ್ನು ಬೇಡಿ ಬಳಿಹೋಗಿ ನಡೆದುದನ್ನು ತೋರಿಸಿಕೊಟ್ಟು ಅವನ ಮನಸ್ಸನ್ನು ಪಾಂಡವರ ಕಡೆ ಸೆಳೆಯುತ್ತೇನೆ.

05142019a ತೋಷಿತೋ ಭಗವಾನ್ಯತ್ರ ದುರ್ವಾಸಾ ಮೇ ವರಂ ದದೌ।
05142019c ಆಹ್ವಾನಂ ದೇವಸಂಯುಕ್ತಂ ವಸಂತ್ಯಾಃ ಪಿತೃವೇಶ್ಮನಿ।।

ಒಂದು ವಸಂತದಲ್ಲಿ ತಂದೆಯ ಮನೆಯಲ್ಲಿರುವಾಗ ಭಗವಾನ್ ದುರ್ವಾಸನು ಸಂತೃಪ್ತನಾಗಿ ದೇವತೆಗಳನ್ನು ಆಹ್ವಾನಿಸಬಲ್ಲ ವರವನ್ನು ನನಗೆ ನೀಡಿದ್ದನು.

05142020a ಸಾಹಮಂತಃಪುರೇ ರಾಜ್ಞಾಃ ಕುಂತಿಭೋಜಪುರಸ್ಕೃತಾ।
05142020c ಚಿಂತಯಂತೀ ಬಹುವಿಧಂ ಹೃದಯೇನ ವಿದೂಯತಾ।।

ಆಗ ರಾಜಾ ಕುಂತಿಭೋಜನಿಂದ ಪುರಸ್ಕೃತಳಾದ ನಾನು ಅಂತಃಪುರದಲ್ಲಿ ಹೃದಯದ ನೋವಿನಿಂದ ಬಹುವಿಧವಾಗಿ ಚಿಂತಿಸುತ್ತಿದ್ದೆ.

05142021a ಬಲಾಬಲಂ ಚ ಮಂತ್ರಾಣಾಂ ಬ್ರಾಹ್ಮಣಸ್ಯ ಚ ವಾಗ್ಬಲಂ।
05142021c ಸ್ತ್ರೀಭಾವಾದ್ಬಾಲಭಾವಾಚ್ಚ ಚಿಂತಯಂತೀ ಪುನಃ ಪುನಃ।।

ಮಂತ್ರಗಳ ಬಲಾಬಲವನ್ನೂ ಬ್ರಾಹ್ಮಣನ ವಾಗ್ಬಲವನ್ನೂ ಸ್ತ್ರೀಭಾವದಿಂದ ಮತ್ತು ಬಾಲಭಾವದಿಂದ ಪುನಃ ಪುನಃ ಚಿಂತಿಸತೊಡಗಿದೆನು.

05142022a ಧಾತ್ರ್ಯಾ ವಿಶ್ರಬ್ಧಯಾ ಗುಪ್ತಾ ಸಖೀಜನವೃತಾ ತದಾ।
05142022c ದೋಷಂ ಪರಿಹರಂತೀ ಚ ಪಿತುಶ್ಚಾರಿತ್ರರಕ್ಷಿಣೀ।।
05142023a ಕಥಂ ನು ಸುಕೃತಂ ಮೇ ಸ್ಯಾನ್ನಾಪರಾಧವತೀ ಕಥಂ।
05142023c ಭವೇಯಮಿತಿ ಸಂಚಿಂತ್ಯ ಬ್ರಾಹ್ಮಣಂ ತಂ ನಮಸ್ಯ ಚ।।
05142024a ಕೌತೂಹಲಾತ್ತು ತಂ ಲಬ್ಧ್ವಾ ಬಾಲಿಶ್ಯಾದಾಚರಂ ತದಾ।
05142024c ಕನ್ಯಾ ಸತೀ ದೇವಮರ್ಕಮಾಸಾದಯಮಹಂ ತತಃ।।

ಆಗ ನಂಬಿಕೆಯಿರುವ ಧಾತ್ರಿಕೆ ಮತ್ತು ಗುಪ್ತ ಸಖೀಜನರೊಂದಿಗೆ ಆವೃತಳಾದ ನಾನು, ದೂಷಿತಳಾಗಬಾರದೆಂದು, ತಂದೆಯ ಚಾರಿತ್ರವನ್ನು ರಕ್ಷಿಸಬೇಕೆಂದು, ನನಗೆ ಒಳ್ಳೆಯದಾಗುವ ಹಾಗೆ ಹೇಗೆ ನಡೆದುಕೊಳ್ಳಲಿ, ನನ್ನಿಂದ ಹೇಗೆ ಅಪರಾಧವಾಗದೇ ಇರಲಿ ಎಂದು ಯೋಚಿಸುತ್ತಾ, ಆ ಬ್ರಾಹ್ಮಣನನ್ನು ನಮಸ್ಕರಿಸಿ, ಬಾಲಿಕೆಯ ಕುತೂಹಲದಿಂದ ಕನ್ಯೆ ಸತೀ ನಾನು ದೇವ ಅರ್ಕನನ್ನು ಹತ್ತಿರ ಕರೆದೆನು.

05142025a ಯೋಽಸೌ ಕಾನೀನಗರ್ಭೋ ಮೇ ಪುತ್ರವತ್ಪರಿವರ್ತಿತಃ।
05142025c ಕಸ್ಮಾನ್ನ ಕುರ್ಯಾದ್ವಚನಂ ಪಥ್ಯಂ ಭ್ರಾತೃಹಿತಂ ತಥಾ।।

ಕನ್ಯೆಯಾಗಿದ್ದಾಗ ನನ್ನ ಗರ್ಭದಲ್ಲಿದ್ದ, ಪುತ್ರನಂತೆ ಪರಿವರ್ತಿತನಾದ ಅವನು ಈಗ ಏಕೆ ನನ್ನ ಮಾತಿನಂತೆ ಭ್ರಾತೃಹಿತನಾಗಿ ಬೇಕಾದುದನ್ನು ಮಾಡುವುದಿಲ್ಲ?”

05142026a ಇತಿ ಕುಂತೀ ವಿನಿಶ್ಚಿತ್ಯ ಕಾರ್ಯಂ ನಿಶ್ಚಿತಮುತ್ತಮಂ।
05142026c ಕಾರ್ಯಾರ್ಥಮಭಿನಿರ್ಯಾಯ ಯಯೌ ಭಾಗೀರಥೀಂ ಪ್ರತಿ।।

ಕುಂತಿಯು ಈ ರೀತಿ ಯೋಚಿಸಿ ಆ ಉತ್ತಮ ಕಾರ್ಯವನ್ನು ಮಾಡಲು ನಿಶ್ಚಯಿಸಿದಳು. ಕಾರ್ಯಾರ್ಥಕ್ಕಾಗಿ ಯಾರಿಗೂ ತಿಳಿಯದಂತೆ ಭಾಗೀರಥಿಯ ಕಡೆ ನಡೆದಳು.

05142027a ಆತ್ಮಜಸ್ಯ ತತಸ್ತಸ್ಯ ಘೃಣಿನಃ ಸತ್ಯಸಂಗಿನಃ।
05142027c ಗಂಗಾತೀರೇ ಪೃಥಾಶೃಣ್ವದುಪಾಧ್ಯಯನನಿಸ್ವನಂ।।

ಗಂಗಾತೀರದಲ್ಲಿ ಪೃಥೆಯು ದಯಾಳು, ಸತ್ಯಸಂಗಿ ಮಗನು ಪಠಿಸುತ್ತಿರುವ ಮಂತ್ರಗಳ ಸದ್ದನ್ನು ಕೇಳಿದಳು.

05142028a ಪ್ರಾಙ್ಮುಖಸ್ಯೋರ್ಧ್ವಬಾಹೋಃ ಸಾ ಪರ್ಯತಿಷ್ಠತ ಪೃಷ್ಠತಃ।
05142028c ಜಪ್ಯಾವಸಾನಂ ಕಾರ್ಯಾರ್ಥಂ ಪ್ರತೀಕ್ಷಂತೀ ತಪಸ್ವಿನೀ।।

ಅವನು ಬಾಹುಗಳನ್ನು ಮೇಲೆತ್ತಿ ಪೂರ್ವಾಭಿಮುಖವಾಗಿ ನಿಂತಿರಲು ಆ ತಪಸ್ವಿನಿಯು ಅವನ ಹಿಂದೆ ಹೋಗಿ ಅವನ ಜಪವು ಮುಗಿಯುವುದಕ್ಕೆ ಮತ್ತು ತನ್ನ ಕಾರ್ಯವು ಸಿದ್ಧಿಯಾಗಲು ಕಾದು ನಿಂತಳು.

05142029a ಅತಿಷ್ಠತ್ಸೂರ್ಯತಾಪಾರ್ತಾ ಕರ್ಣಸ್ಯೋತ್ತರವಾಸಸಿ।
05142029c ಕೌರವ್ಯಪತ್ನೀ ವಾರ್ಷ್ಣೇಯೀ ಪದ್ಮಮಾಲೇವ ಶುಷ್ಯತೀ।।

ಕರ್ಣನ ಉತ್ತರೀಯದ ನೆರಳಲ್ಲಿ ನಿಂತಿದ್ದ ಆ ಕೌರವಪತ್ನಿ ವಾರ್ಷ್ಣೇಯಿಯು ಸೂರ್ಯನ ತಾಪದಿಂದ ಬಳಲಿ ಒಣಗಿದ್ದ ಪದ್ಮಮಾಲೆಯಂತೆ ತೋರಿದಳು.

05142030a ಆ ಪೃಷ್ಠತಾಪಾಜ್ಜಪ್ತ್ವಾ ಸ ಪರಿವೃತ್ಯ ಯತವ್ರತಃ।
05142030c ದೃಷ್ಟ್ವಾ ಕುಂತೀಮುಪಾತಿಷ್ಠದಭಿವಾದ್ಯ ಕೃತಾಂಜಲಿಃ।
05142030e ಯಥಾನ್ಯಾಯಂ ಮಹಾತೇಜಾ ಮಾನೀ ಧರ್ಮಭೃತಾಂ ವರಃ।।

ಸೂರ್ಯನ ಕಿರಣಗಳು ಬೆನ್ನನ್ನು ಸುಡುವವರೆಗೆ ಆ ಯತವ್ರತನು ಜಪಿಸುತಿದ್ದನು. ಹಿಂದೆ ನಿಂತಿದ್ದ ಕುಂತಿಯನ್ನು ನೋಡಿ ಯಥಾನ್ಯಾಯವಾಗಿ ಆ ಮಹಾತೇಜಸ್ವಿ ಮಾನಿನೀ ಧರ್ಮಭೃತರಲ್ಲಿ ಶ್ರೇಷ್ಠನು ಕೈಮುಗಿದು ನಮಸ್ಕರಿಸಿದನು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಕರ್ಣ‌ವಿವಾದ ಪರ್ವಣಿ ಕುಂತೀಕರ್ಣಸಮಾಗಮೇ ದ್ವಿಚತ್ವಾರಿಂಶದಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಕರ್ಣ‌ವಿವಾದ ಪರ್ವದಲ್ಲಿ ಕುಂತೀಕರ್ಣಸಮಾಗಮದಲ್ಲಿ ನೂರಾನಲ್ವತ್ತೆರಡನೆಯ ಅಧ್ಯಾಯವು.