ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಕರ್ಣವಿವಾದ ಪರ್ವ
ಅಧ್ಯಾಯ 141
ಸಾರ
ದುರ್ಯೋಧನನ ಪರಾಭವವನ್ನು ಮತ್ತು ಯುಧಿಷ್ಠಿರನ ವಿಜಯವನ್ನು ಘೋಷಿಸುವ ವಿವಿಧ ಘೋರ ಸ್ವಪ್ನಗಳು, ಘೋರ ನಿಮಿತ್ತಗಳು ಮತ್ತು ದಾರುಣ ಉತ್ಪಾತಗಳ ಕುರಿತು ಕರ್ಣನು ಕೃಷ್ಣನಲ್ಲಿ ಹೇಳಿಕೊಂಡಿದುದು (1-42). ಅನಂತರ ಕರ್ಣ-ಕೃಷ್ಣರೀರ್ವರು ಪರಸ್ಪರರನ್ನು ಬೀಳ್ಕೊಂಡಿದುದು (43-49).
05141001 ಸಂಜಯ ಉವಾಚ।
05141001a ಕೇಶವಸ್ಯ ತು ತದ್ವಾಕ್ಯಂ ಕರ್ಣಃ ಶ್ರುತ್ವಾ ಹಿತಂ ಶುಭಂ।
05141001c ಅಬ್ರವೀದಭಿಸಂಪೂಜ್ಯ ಕೃಷ್ಣಂ ಮಧುನಿಷೂದನಂ।
05141001e ಜಾನನ್ಮಾಂ ಕಿಂ ಮಹಾಬಾಹೋ ಸಮ್ಮೋಹಯಿತುಮಿಚ್ಚಸಿ।।
ಸಂಜಯನು ಹೇಳಿದನು: “ಕೇಶವನ ಹಿತವೂ ಶುಭವೂ ಆದ ಆ ಮಾತನ್ನು ಕೇಳಿ ಕರ್ಣನು ಕೃಷ್ಣ ಮಧುನಿಷೂದನನಿಗೆ ನಮಸ್ಕರಿಸಿ ಹೇಳಿದನು: “ಮಹಾಬಾಹೋ! ಗೊತ್ತಿದ್ದರೂ ನನ್ನನ್ನು ಏಕೆ ಮೋಹಗೊಳಿಸಲು ಬಯಸುವೆ?
05141002a ಯೋಽಯಂ ಪೃಥಿವ್ಯಾಃ ಕಾರ್ತ್ಸ್ನ್ಯೆನ ವಿನಾಶಃ ಸಮುಪಸ್ಥಿತಃ।
05141002c ನಿಮಿತ್ತಂ ತತ್ರ ಶಕುನಿರಹಂ ದುಃಶಾಸನಸ್ತಥಾ।
05141002e ದುರ್ಯೋಧನಶ್ಚ ನೃಪತಿರ್ಧೃತರಾಷ್ಟ್ರಸುತೋಽಭವತ್।।
ಸಂಪೂರ್ಣ ಈ ಪೃಥ್ವಿಯ ವಿನಾಶವು ಬಂದಿದೆ. ಶಕುನಿ, ನಾನು, ದುಃಶಾಸನ, ಧೃತರಾಷ್ಟ್ರಸುತ ನೃಪತಿ ದುರ್ಯೋದನರು ಇದರಲ್ಲಿ ನಿಮಿತ್ತಮಾತ್ರ.
05141003a ಅಸಂಶಯಮಿದಂ ಕೃಷ್ಣ ಮಹದ್ಯುದ್ಧಮುಪಸ್ಥಿತಂ।
05141003c ಪಾಂಡವಾನಾಂ ಕುರೂಣಾಂ ಚ ಘೋರಂ ರುಧಿರಕರ್ದಮಂ।।
ಕೃಷ್ಣ! ಪಾಂಡವರ ಮತ್ತು ಕುರುಗಳ ರಕ್ತವನ್ನು ಚೆಲ್ಲುವ ಘೋರ ಮಹಾಯುದ್ಧವು ಬಂದೊದಗಿದೆ ಎನ್ನುವುದರಲ್ಲಿ ಸಂಶಯವಿಲ್ಲ.
05141004a ರಾಜಾನೋ ರಾಜಪುತ್ರಾಶ್ಚ ದುರ್ಯೋಧನವಶಾನುಗಾಃ।
05141004c ರಣೇ ಶಸ್ತ್ರಾಗ್ನಿನಾ ದಗ್ಧಾಃ ಪ್ರಾಪ್ಸ್ಯಂತಿ ಯಮಸಾದನಂ।।
ದುರ್ಯೋಧನನ ವಶರಾಗಿ ಅನುಸರಿಸುವ ರಾಜರು ರಾಜಪುತ್ರರು ರಣದಲ್ಲಿ ಶಸ್ತ್ರಾಗ್ನಿಯಲ್ಲಿ ಸುಟ್ಟು ಯುಮಸಾದನವನ್ನು ಸೇರುತ್ತಾರೆ.
05141005a ಸ್ವಪ್ನಾ ಹಿ ಬಹವೋ ಘೋರಾ ದೃಶ್ಯಂತೇ ಮಧುಸೂದನ।
05141005c ನಿಮಿತ್ತಾನಿ ಚ ಘೋರಾಣಿ ತಥೋತ್ಪಾತಾಃ ಸುದಾರುಣಾಃ।।
05141006a ಪರಾಜಯಂ ಧಾರ್ತರಾಷ್ಟ್ರೇ ವಿಜಯಂ ಚ ಯುಧಿಷ್ಠಿರೇ।
05141006c ಶಂಸಂತ ಇವ ವಾರ್ಷ್ಣೇಯ ವಿವಿಧಾ ಲೋಮಹರ್ಷಣಾಃ।।
ಮಧುಸೂದನ! ವಾರ್ಷ್ಣೇಯ! ಧಾರ್ತರಾಷ್ಟ್ರನ ಪರಾಭವವನ್ನು ಮತ್ತು ಯುಧಿಷ್ಠಿರನ ವಿಜಯವನ್ನು ಘೋಷಿಸುವ ವಿವಿಧ, ಮೈ ನವಿರೇಳಿಸುವ, ಬಹಳ ಘೋರ ಸ್ವಪ್ನಗಳು, ಘೋರ ನಿಮಿತ್ತಗಳು ಮತ್ತು ದಾರುಣ ಉತ್ಪಾತಗಳು ಕಾಣಿಸಿಕೊಳ್ಳುತ್ತಿವೆ.
05141007a ಪ್ರಾಜಾಪತ್ಯಂ ಹಿ ನಕ್ಷತ್ರಂ ಗ್ರಹಸ್ತೀಕ್ಷ್ಣೋ ಮಹಾದ್ಯುತಿಃ।
05141007c ಶನೈಶ್ಚರಃ ಪೀಡಯತಿ ಪೀಡಯನ್ಪ್ರಾಣಿನೋಽಧಿಕಂ।।
ಪ್ರಾಣಿಗಳನ್ನು ಅಧಿಕವಾಗಿ ಪೀಡಿಸುವ ತೀಕ್ಷ್ಣ ಮಹಾದ್ಯುತಿ ಶನೈಶ್ಚರ ಗ್ರಹವು ರೋಹಿಣೀ ನಕ್ಷತ್ರವನ್ನು ಪೀಡಿಸುತ್ತಿದೆ.
05141008a ಕೃತ್ವಾ ಚಾಂಗಾರಕೋ ವಕ್ರಂ ಜ್ಯೇಷ್ಠಾಯಾಂ ಮಧುಸೂದನ।
05141008c ಅನುರಾಧಾಂ ಪ್ರಾರ್ಥಯತೇ ಮೈತ್ರಂ ಸಂಶಮಯನ್ನಿವ।।
ಮಧುಸೂದನ! ಮಿತ್ರರ ನಾಶವನ್ನು ಸೂಚಿಸಿ ಅಂಗಾರಕನು ವಕ್ರಿಯಾಗಿ ಜ್ಯೇಷ್ಠಾ ಮತ್ತು ಅನುರಾಧಾ ನಕ್ಷತ್ರಗಳ ಬಳಿ ಸಾಗುತ್ತಿದ್ದಾನೆ.
05141009a ನೂನಂ ಮಹದ್ಭಯಂ ಕೃಷ್ಣ ಕುರೂಣಾಂ ಸಮುಪಸ್ಥಿತಂ।
05141009c ವಿಶೇಷೇಣ ಹಿ ವಾರ್ಷ್ಣೇಯ ಚಿತ್ರಾಂ ಪೀಡಯತೇ ಗ್ರಹಃ।।
ಕೃಷ್ಣ! ವಾರ್ಷ್ಣೇಯ! ಈ ಗ್ರಹವು ಚಿತ್ರಾ ನಕ್ಷತ್ರವನ್ನು ಪೀಡಿಸುತ್ತಿರುವುದರಿಂದ ವಿಶೇಷವಾಗಿ ಕುರುಗಳಿಗೆ ಮಹಾ ಭಯವು ಬಂದೊದಗಿದೆ.
05141010a ಸೋಮಸ್ಯ ಲಕ್ಷ್ಮ ವ್ಯಾವೃತ್ತಂ ರಾಹುರರ್ಕಮುಪೇಷ್ಯತಿ।
05141010c ದಿವಶ್ಚೋಲ್ಕಾಃ ಪತಂತ್ಯೇತಾಃ ಸನಿರ್ಘಾತಾಃ ಸಕಂಪನಾಃ।।
ಚಂದ್ರನ ಮೇಲಿರುವ ಕಲೆಯು ತಲೆಕೆಳಗಾಗಿದೆ. ರಾಹುವು ಸೂರ್ಯನನ್ನು ಸಮೀಪಿಸುತ್ತಿದ್ದಾನೆ. ಆಕಾಶದಿಂದ ಜೋರಾಗಿ ಶಬ್ಧಮಾಡುತ್ತಾ, ಕಂಪಿಸುತ್ತಾ ಉಲ್ಕೆಗಳು ಬೀಳುತ್ತಿವೆ.
05141011a ನಿಷ್ಟನಂತಿ ಚ ಮಾತಂಗಾ ಮುಂಚಂತ್ಯಶ್ರೂಣಿ ವಾಜಿನಃ।
05141011c ಪಾನೀಯಂ ಯವಸಂ ಚಾಪಿ ನಾಭಿನಂದಂತಿ ಮಾಧವ।।
ಆನೆಗಳು ಇದ್ದಕ್ಕಿದ್ದಂತೆಯೇ ಘೀಳಿಡುತ್ತಿವೆ. ಕುದುರೆಗಳು ಕಣ್ಣೀರು ಸುರಿಸುತ್ತಿವೆ. ಮಾಧವ! ಅವು ನೀರು-ಆಹಾರಗಳನ್ನೂ ಇಷ್ಟಪಡುತ್ತಿಲ್ಲ.
05141012a ಪ್ರಾದುರ್ಭೂತೇಷು ಚೈತೇಷು ಭಯಮಾಹುರುಪಸ್ಥಿತಂ।
05141012c ನಿಮಿತ್ತೇಷು ಮಹಾಬಾಹೋ ದಾರುಣಂ ಪ್ರಾಣಿನಾಶನಂ।।
ಮಹಾಬಾಹೋ! ಈ ಸೂಚನೆಗಳು ಕಂಡುಬಂದಾಗ ಮಹಾ ಭಯವು ಬರಲಿಕ್ಕಿದೆ ಎಂದು ಹೇಳುತ್ತಾರೆ. ಇವು ದಾರುಣ ಪ್ರಾಣಿನಾಶನವನ್ನು ಸೂಚಿಸುತ್ತವೆ.
05141013a ಅಲ್ಪೇ ಭುಕ್ತೇ ಪುರೀಷಂ ಚ ಪ್ರಭೂತಮಿಹ ದೃಶ್ಯತೇ।
05141013c ವಾಜಿನಾಂ ವಾರಣಾನಾಂ ಚ ಮನುಷ್ಯಾಣಾಂ ಚ ಕೇಶವ।।
ಕೇಶವ! ಆನೆಗಳು, ಕುದುರೆಗಳು ಮತ್ತು ಮನುಷ್ಯರು ಕಡಿಮೆ ತಿನ್ನುವಂತೆ ಆದರೆ ಅಧಿಕವಾಗಿ ಮಲವಿಸರ್ಜನೆ ಮಾಡುವಂತೆ ತೋರುತ್ತಿದೆ.
05141014a ಧಾರ್ತರಾಷ್ಟ್ರಸ್ಯ ಸೈನ್ಯೇಷು ಸರ್ವೇಷು ಮಧುಸೂದನ।
05141014c ಪರಾಭವಸ್ಯ ತಲ್ಲಿಂಗಮಿತಿ ಪ್ರಾಹುರ್ಮನೀಷಿಣಃ।।
ಮಧುಸೂದನ! ಪರಾಭವದ ಸೂಚನೆಗಳೇನೆಂದು ತಿಳಿದವರು ಹೇಳುವ ಎಲ್ಲವೂ ಧಾರ್ತರಾಷ್ಟ್ರನ ಸೇನೆಯಲ್ಲಿವೆ.
05141015a ಪ್ರಹೃಷ್ಟಂ ವಾಹನಂ ಕೃಷ್ಣ ಪಾಂಡವಾನಾಂ ಪ್ರಚಕ್ಷತೇ।
05141015c ಪ್ರದಕ್ಷಿಣಾ ಮೃಗಾಶ್ಚೈವ ತತ್ತೇಷಾಂ ಜಯಲಕ್ಷಣಂ।।
ಕೃಷ್ಣ! ಪಾಂಡವರ ವಾಹನಗಳು ಸಂತೋಷದಿಂದಿರುವಂತೆ ಕಾಣುತ್ತಿವೆ. ಮೃಗಗಳು ಪ್ರದಕ್ಷಿಣೆಯಾಗಿ ಚಲಿಸುತ್ತಿವೆ. ಇದು ಅವರ ಜಯದ ಲಕ್ಷಣ.
05141016a ಅಪಸವ್ಯಾ ಮೃಗಾಃ ಸರ್ವೇ ಧಾರ್ತರಾಷ್ಟ್ರಸ್ಯ ಕೇಶವ।
05141016c ವಾಚಶ್ಚಾಪ್ಯಶರೀರಿಣ್ಯಸ್ತತ್ಪರಾಭವಲಕ್ಷಣಂ।।
ಕೇಶವ! ಧಾರ್ತರಾಷ್ಟ್ರನ ಮೃಗಗಳೆಲ್ಲವೂ ಅಪ್ರದಕ್ಷಿಣೆಯಾಗಿ ತಿರುಗುತ್ತಿವೆ. ಅಶರೀರವಾಣಿಗಳು ಕೇಳಿಬರುತ್ತಿವೆ. ಇದು ಅವರ ಸೋಲಿನ ಲಕ್ಷಣ.
05141017a ಮಯೂರಾಃ ಪುಷ್ಪಶಕುನಾ ಹಂಸಾಃ ಸಾರಸಚಾತಕಾಃ।
05141017c ಜೀವಂ ಜೀವಕಸಂಘಾಶ್ಚಾಪ್ಯನುಗಚ್ಚಂತಿ ಪಾಂಡವಾನ್।।
ಉತ್ತಮ ಪಕ್ಷಿಗಳಾದ ನವಿಲುಗಳು, ಹಂಸಗಳು, ಸಾರಸಗಳು, ಜಾತಕಗಳು, ಜೀವ ಮತ್ತು ಜೀವಕಗಳ ಗುಂಪುಗಳು ಪಾಂಡವರನ್ನು ಅನುಸರಿಸಿ ಹೋಗುತ್ತಿವೆ.
05141018a ಗೃಧ್ರಾಃ ಕಾಕಾ ಬಡಾಃ ಶ್ಯೇನಾ ಯಾತುಧಾನಾಃ ಶಲಾವೃಕಾಃ।
05141018c ಮಕ್ಷಿಕಾಣಾಂ ಚ ಸಂಘಾತಾ ಅನುಗಚ್ಚಂತಿ ಕೌರವಾನ್।।
ಆದರೆ ಹದ್ದು, ಕಾಗೆ, ಗಿಡುಗ, ತೋಳಗಳು, ರಾಕ್ಷಸರು ಮತ್ತು ಜೇನುಹುಳುಗಳು ಗುಂಪುಗಳಲ್ಲಿ ಕೌರವರನ್ನು ಹಿಂಬಾಲಿಸುತ್ತಿವೆ.
05141019a ಧಾರ್ತರಾಷ್ಟ್ರಸ್ಯ ಸೈನ್ಯೇಷು ಭೇರೀಣಾಂ ನಾಸ್ತಿ ನಿಸ್ವನಃ।
05141019c ಅನಾಹತಾಃ ಪಾಂಡವಾನಾಂ ನದಂತಿ ಪಟಹಾಃ ಕಿಲ।।
ಧಾರ್ತರಾಷ್ಟ್ರನ ಸೇನೆಯಲ್ಲಿ ಭೇರಿಗಳು ಶಬ್ಧಮಾಡುತ್ತಿಲ್ಲ. ಆದರೆ ಪಾಂಡವರಲ್ಲಿ ಅವು ಹೊಡೆಯದೆಯೇ ಶಬ್ಧಮಾಡುತ್ತಿವೆಯಲ್ಲ!
05141020a ಉದಪಾನಾಶ್ಚ ನರ್ದಂತಿ ಯಥಾ ಗೋವೃಷಭಾಸ್ತಥಾ।
05141020c ಧಾರ್ತರಾಷ್ಟ್ರಸ್ಯ ಸೈನ್ಯೇಷು ತತ್ಪರಾಭವಲಕ್ಷಣಂ।।
ಧಾರ್ತರಾಷ್ಟ್ರನ ಸೇನೆಯಲ್ಲಿ ಬಾವಿಗಳು ಹೋರಿಯಂತೆ ಶಬ್ಧಮಾಡುತ್ತಿವೆ. ಅದು ಅವರ ಪರಾಭವದ ಲಕ್ಷಣ.
05141021a ಮಾಂಸಶೋಣಿತವರ್ಷಂ ಚ ವೃಷ್ಟಂ ದೇವೇನ ಮಾಧವ।
05141021c ತಥಾ ಗಂಧರ್ವನಗರಂ ಭಾನುಮಂತಮುಪಸ್ಥಿತಂ।
05141021e ಸಪ್ರಾಕಾರಂ ಸಪರಿಖಂ ಸವಪ್ರಂ ಚಾರುತೋರಣಂ।।
ಮಾಧವ! ದೇವತೆಗಳು ಮಾಂಸ ಮತ್ತು ರಕ್ತಗಳ ಮಳೆಯನ್ನು ಸುರಿಸುತ್ತಿದ್ದಾರೆ. ಆಗಸದಲ್ಲಿ ಪ್ರಾಕಾರ, ಪರಿಖ ಮತ್ತು ವಪ್ರ ಚಾರುತೋರಣಗಳಿಂದ ಸಜ್ಜಿತವಾದ ಗಂಧರ್ವನಗರಿಯು ಕಾಣುತ್ತಿದೆ.
05141022a ಕೃಷ್ಣಶ್ಚ ಪರಿಘಸ್ತತ್ರ ಭಾನುಮಾವೃತ್ಯ ತಿಷ್ಠತಿ।
05141022c ಉದಯಾಸ್ತಮಯೇ ಸಂಧ್ಯೇ ವೇದಯಾನೋ ಮಹದ್ಭಯಂ।
05141022e ಏಕಾ ಸೃಗ್ವಾಶತೇ ಘೋರಂ ತತ್ಪರಾಭವಲಕ್ಷಣಂ।।
ಸೂರ್ಯನನ್ನು ಕಪ್ಪುಬಣ್ಣದ ಕೊಪ್ಪರಿಗೆಯು ಆವರಿಸಿದಂತಿದೆ. ಉದಯ ಮತ್ತು ಅಸ್ತ ಸಂಧ್ಯೆಗಳು ಮಹಾಭಯವನ್ನು ತಿಳಿಸುತ್ತಿವೆ. ನರಿಗಳು ಘೋರವಾಗಿ ಗೋಳಿಡುತ್ತಿವೆ. ಇವು ಪರಾಭವದ ಲಕ್ಷಣಗಳು.
05141023a ಕೃಷ್ಣಗ್ರೀವಾಶ್ಚ ಶಕುನಾ ಲಂಬಮಾನಾ ಭಯಾನಕಾಃ।
05141023c ಸಂಧ್ಯಾಮಭಿಮುಖಾ ಯಾಂತಿ ತತ್ಪರಾಭವಲಕ್ಷಣಂ।।
ಸಾಯಂಕಾಲ ಕಪ್ಪು ಕೊರಳಿನ ಕೆಂಪುಕಾಲಿನ ಭಯಾನಕ ಪಕ್ಷಿಗಳು ಸೇನೆಯ ಎದುರುಮುಖವಾಗಿ ಹಾರುತ್ತಿವೆ. ಇದು ಪರಾಭವದ ಲಕ್ಷಣ.
05141024a ಬ್ರಾಹ್ಮಣಾನ್ಪ್ರಥಮಂ ದ್ವೇಷ್ಟಿ ಗುರೂಂಶ್ಚ ಮಧುಸೂದನ।
05141024c ಭೃತ್ಯಾನ್ಭಕ್ತಿಮತಶ್ಚಾಪಿ ತತ್ಪರಾಭವಲಕ್ಷಣಂ।।
ಮಧುಸೂದನ! ಮೊದಲು ಬ್ರಾಹ್ಮಣರನ್ನು, ಗುರುಗಳನ್ನು, ನಂತರ ಭಕ್ತಿಯುಳ್ಳ ಸೇವಕರನ್ನು ದ್ವೇಷಿಸುತ್ತಿದ್ದಾರೆ. ಇದು ಪರಾಭವದ ಲಕ್ಷಣ.
05141025a ಪೂರ್ವಾ ದಿಗ್ಲೋಹಿತಾಕಾರಾ ಶಸ್ತ್ರವರ್ಣಾ ಚ ದಕ್ಷಿಣಾ।
05141025c ಆಮಪಾತ್ರಪ್ರತೀಕಾಶಾ ಪಶ್ಚಿಮಾ ಮಧುಸೂದನ।।
ಮಧುಸೂದನ! ಪೂರ್ವ ದಿಕ್ಕು ಕೆಂಪಾಗಿದೆ. ದಕ್ಷಿಣವು ಶಸ್ತ್ರವರ್ಣದ್ದಾಗಿದೆ. ಪಶ್ಚಿಮವು ಮಣ್ಣಿನ ಬಣ್ಣವನ್ನು ತಳೆದಿದೆ.
05141026a ಪ್ರದೀಪ್ತಾಶ್ಚ ದಿಶಃ ಸರ್ವಾ ಧಾರ್ತರಾಷ್ಟ್ರಸ್ಯ ಮಾಧವ।
05141026c ಮಹದ್ಭಯಂ ವೇದಯಂತಿ ತಸ್ಮಿನ್ನುತ್ಪಾತಲಕ್ಷಣೇ।।
ಮಾಧವ! ಧಾರ್ತರಾಷ್ಟ್ರನ ಎಲ್ಲ ದಿಕ್ಕುಗಳು ಹತ್ತಿ ಉರಿಯುವಂತಿವೆ. ಈ ಉತ್ಪಾತ ಲಕ್ಷಣಗಳು ಮಹಾಭಯವನ್ನು ಸೂಚಿಸುತ್ತವೆ.
05141027a ಸಹಸ್ರಪಾದಂ ಪ್ರಾಸಾದಂ ಸ್ವಪ್ನಾಂತೇ ಸ್ಮ ಯುಧಿಷ್ಠಿರಃ।
05141027c ಅಧಿರೋಹನ್ಮಯಾ ದೃಷ್ಟಃ ಸಹ ಭ್ರಾತೃಭಿರಚ್ಯುತ।।
ಅಚ್ಯುತ! ಸಹೋದರರೊಂದಿಗೆ ಯುಧಿಷ್ಠಿರನು ಸಾವಿರ ಮೆಟ್ಟಿಲುಗಳಿರುವ ಅರಮನೆಯನ್ನು ಏರುತ್ತಿರುವುದನ್ನು ನಾನು ಸ್ವಪ್ನದ ಕೊನೆಯಲ್ಲಿ ಕಂಡಿದ್ದೇನೆ.
05141028a ಶ್ವೇತೋಷ್ಣೀಷಾಶ್ಚ ದೃಶ್ಯಂತೇ ಸರ್ವೇ ತೇ ಶುಕ್ಲವಾಸಸಃ।
05141028c ಆಸನಾನಿ ಚ ಶುಭ್ರಾಣಿ ಸರ್ವೇಷಾಮುಪಲಕ್ಷಯೇ।।
ಅವರೆಲ್ಲರೂ ಬಿಳೀಬಣ್ಣದ ಮುಂಡಾಸು, ಬಿಳೀ ವಸ್ತ್ರವನ್ನು ಧರಿಸಿದ್ದರು ಮತ್ತು ಎಲ್ಲರೂ ಶುಭ್ರ ಆಸನಗಳಲ್ಲಿ ಕುಳಿತುಕೊಳ್ಳುವುದನ್ನು ನೋಡಿದೆನು.
05141029a ತವ ಚಾಪಿ ಮಯಾ ಕೃಷ್ಣ ಸ್ವಪ್ನಾಂತೇ ರುಧಿರಾವಿಲಾ।
05141029c ಆಂತ್ರೇಣ ಪೃಥಿವೀ ದೃಷ್ಟಾ ಪರಿಕ್ಷಿಪ್ತಾ ಜನಾರ್ದನ।।
ಕೃಷ್ಣ! ಜನಾರ್ದನ! ಅದೇ ಸ್ವಪ್ನದ ಕೊನೆಯಲ್ಲಿ ನೀನು ರಕ್ತದಿಂದ ತೋಯ್ದ ಆಯುಧಗಳನ್ನು ನೆಲದಲ್ಲಿ ಮುಚ್ಚಿಡುತ್ತಿದ್ದುದನ್ನು ನೋಡಿದೆನು.
05141030a ಅಸ್ಥಿಸಂಚಯಮಾರೂಢಶ್ಚಾಮಿತೌಜಾ ಯುಧಿಷ್ಠಿರಃ।
05141030c ಸುವರ್ಣಪಾತ್ರ್ಯಾಂ ಸಂಹೃಷ್ಟೋ ಭುಕ್ತವಾನ್ ಘೃತಪಾಯಸಂ।।
ಅಮಿತೌಜಸ ಯುಧಿಷ್ಠಿರನು ಅಸ್ಥಿಗಳ ಗುಡ್ಡೆಯನ್ನೇರಿ ಸಂತೋಷದಿಂದ ಸುವರ್ಣಪಾತ್ರೆಯಲ್ಲಿ ಘೃತಪಾಯಸವನ್ನು ತಿನ್ನುತ್ತಿದ್ದನು.
05141031a ಯುಧಿಷ್ಠಿರೋ ಮಯಾ ದೃಷ್ಟೋ ಗ್ರಸಮಾನೋ ವಸುಂಧರಾಂ।
05141031c ತ್ವಯಾ ದತ್ತಾಮಿಮಾಂ ವ್ಯಕ್ತಂ ಭೋಕ್ಷ್ಯತೇ ಸ ವಸುಂಧರಾಂ।।
ನೀನು ನೀಡಿದ ವಸುಂಧರೆಯನ್ನು ಯುಧಿಷ್ಠಿರನು ನುಂಗುತ್ತಿರುವುದನ್ನು ನೋಡಿದೆನು. ಇದರಿಂದ ಅವನು ವಸುಂಧರೆಯನ್ನು ಭೋಗಿಸುತ್ತಾನೆ ಎನ್ನುವುದು ವ್ಯಕ್ತವಾಗುತ್ತದೆ.
05141032a ಉಚ್ಚಂ ಪರ್ವತಮಾರೂಢೋ ಭೀಮಕರ್ಮಾ ವೃಕೋದರಃ।
05141032c ಗದಾಪಾಣಿರ್ನರವ್ಯಾಘ್ರೋ ವೀಕ್ಷನ್ನಿವ ಮಹೀಮಿಮಾಂ।।
ಎತ್ತರ ಪರ್ವತವನ್ನು ಏರಿ ಭೀಮಕರ್ಮಿ, ಗದಾಪಾಣಿ, ನರವ್ಯಾಘ್ರ, ವೃಕೋದರನು ಈ ಭೂಮಿಯನ್ನು ವೀಕ್ಷಿಸುತ್ತಿರುವಂತಿದ್ದನು.
05141033a ಕ್ಷಪಯಿಷ್ಯತಿ ನಃ ಸರ್ವಾನ್ಸ ಸುವ್ಯಕ್ತಂ ಮಹಾರಣೇ।
05141033c ವಿದಿತಂ ಮೇ ಹೃಷೀಕೇಶ ಯತೋ ಧರ್ಮಸ್ತತೋ ಜಯಃ।।
ಅವನು ಮಹಾರಣದಲ್ಲಿ ನಮ್ಮೆಲ್ಲರನ್ನೂ ಸಂಹರಿಸುತ್ತಾನೆ ಎನ್ನುವುದು ಚೆನ್ನಾಗಿ ವ್ಯಕ್ತವಾಗಿದೆ. ಹೃಷೀಕೇಶ! ಧರ್ಮವು ಎಲ್ಲಿರುವುದೋ ಅಲ್ಲಿ ಜಯವೆಂದು ನನಗೆ ತಿಳಿದಿದೆ.
05141034a ಪಾಂಡುರಂ ಗಜಮಾರೂಢೋ ಗಾಂಡೀವೀ ಸ ಧನಂಜಯಃ।
05141034c ತ್ವಯಾ ಸಾರ್ಧಂ ಹೃಷೀಕೇಶ ಶ್ರಿಯಾ ಪರಮಯಾ ಜ್ವಲನ್।।
05141035a ಯೂಯಂ ಸರ್ವಾನ್ವಧಿಷ್ಯಧ್ವಂ ತತ್ರ ಮೇ ನಾಸ್ತಿ ಸಂಶಯಃ।
05141035c ಪಾರ್ಥಿವಾನ್ಸಮರೇ ಕೃಷ್ಣ ದುರ್ಯೋಧನಪುರೋಗಮಾನ್।।
ಹೃಷೀಕೇಶ! ಕೃಷ್ಣ! ಬಿಳಿಯ ಗಜವನ್ನೇರಿದ ಆ ಗಾಂಡೀವಿ ಧನಂಜಯನು ನಿನ್ನ ಜೊತೆಗೂಡಿ, ಪರಮಶ್ರೀಯಿಂದ ಬೆಳಗುತ್ತಾ, ನಮ್ಮೆಲ್ಲರನ್ನೂ –ಸಮರದಲ್ಲಿ ದುರ್ಯೋಧನನನ್ನು ಬೆಂಬಲಿಸಿ ಬರುವ ಪಾರ್ಥಿವರನ್ನು- ವಧಿಸುತ್ತಾನೆ ಎನ್ನುವುದರಲ್ಲಿ ನನಗೆ ಸಂಶಯವಿಲ್ಲ.
05141036a ನಕುಲಃ ಸಹದೇವಶ್ಚ ಸಾತ್ಯಕಿಶ್ಚ ಮಹಾರಥಃ।
05141036c ಶುದ್ಧಕೇಯೂರಕಂಠತ್ರಾಃ ಶುಕ್ಲಮಾಲ್ಯಾಂಬರಾವೃತಾಃ।।
ನಕುಲ-ಸಹದೇವರು ಮತ್ತು ಮಹಾರಥಿ ಸಾತ್ಯಕಿಯರು ಶುದ್ಧ ಕೇಯೂರ, ಹಾರ, ಮತ್ತು ಶುಕ್ಲ ಮಾಲ್ಯಾಂಬರಗಳನ್ನು ಧರಿಸಿದ್ದರು.
05141037a ಅಧಿರೂಢಾ ನರವ್ಯಾಘ್ರಾ ನರವಾಹನಮುತ್ತಮಂ।
05141037c ತ್ರಯ ಏತೇ ಮಹಾಮಾತ್ರಾಃ ಪಾಂಡುರಚ್ಚತ್ರವಾಸಸಃ।।
ಆ ನರವ್ಯಾಘ್ರರು ಉತ್ತಮ ನರವಾಹನಗಳನ್ನೇರಿದ್ದರು. ಆ ಮೂವರೂ ಮಹಾಮಾತ್ರರ ಮೇಲೆ ಬಿಳಿಗೊಡೆಗಳನ್ನು ಹಿಡಿಯಲಾಗಿತ್ತು.
05141038a ಶ್ವೇತೋಷ್ಣೀಷಾಶ್ಚ ದೃಶ್ಯಂತೇ ತ್ರಯ ಏವ ಜನಾರ್ದನ।
05141038c ಧಾರ್ತರಾಷ್ಟ್ರಸ್ಯ ಸೈನ್ಯೇಷು ತಾನ್ವಿಜಾನೀಹಿ ಕೇಶವ।।
ಜನಾರ್ದನ! ಧಾರ್ತರಾಷ್ಟ್ರನ ಸೇನೆಯಲ್ಲಿ ಈ ಮೂವರು ಮಾತ್ರ ಬಿಳಿಯ ಮುಂಡಾಸನ್ನು ಧರಿಸಿರುವುದು ಕಂಡಿತು. ಕೇಶವ! ಅವರು ಯಾರೆಂದು ತಿಳಿದುಕೋ.
05141039a ಅಶ್ವತ್ಥಾಮಾ ಕೃಪಶ್ಚೈವ ಕೃತವರ್ಮಾ ಚ ಸಾತ್ವತಃ।
05141039c ರಕ್ತೋಷ್ಣೀಷಾಶ್ಚ ದೃಶ್ಯಂತೇ ಸರ್ವೇ ಮಾಧವ ಪಾರ್ಥಿವಾಃ।।
ಅಶ್ವತ್ಥಾಮ, ಕೃಪ ಮತ್ತು ಸಾತ್ವತ ಕೃತವರ್ಮ! ಮಾಧವ! ಇತರ ಎಲ್ಲ ಪಾರ್ಥಿವರೂ ಕೆಂಪು ಮುಂಡಾಸಗಳನ್ನು ಧರಿಸಿ ಕಂಡುಬಂದರು.
05141040a ಉಷ್ಟ್ರಯುಕ್ತಂ ಸಮಾರೂಢೌ ಭೀಷ್ಮದ್ರೋಣೌ ಜನಾರ್ದನ।
05141040c ಮಯಾ ಸಾರ್ಧಂ ಮಹಾಬಾಹೋ ಧಾರ್ತರಾಷ್ಟ್ರೇಣ ಚಾಭಿಭೋ।।
05141041a ಅಗಸ್ತ್ಯಶಾಸ್ತಾಂ ಚ ದಿಶಂ ಪ್ರಯಾತಾಃ ಸ್ಮ ಜನಾರ್ದನ।
05141041c ಅಚಿರೇಣೈವ ಕಾಲೇನ ಪ್ರಾಪ್ಸ್ಯಾಮೋ ಯಮಸಾದನಂ।।
ಜನಾರ್ದನ! ಮಹಾಬಾಹೋ! ವಿಭೋ! ಭೀಷ್ಮ-ದ್ರೋಣರು, ನಾನು ಮತ್ತು ಧಾರ್ತರಾಷ್ಟ್ರ ಇವರು ಒಂಟೆಗಳನ್ನು ಕಟ್ಟಿದ ವಾಹನಗಳನ್ನೇರಿ ಅಗಸ್ತ್ಯನ ದಿಕ್ಕಿನೆಡೆಗೆ ಹೋಗುತ್ತಿದ್ದೆವು. ಜನಾರ್ದನ! ಸ್ವಲ್ಪವೇ ಸಮಯದಲ್ಲಿ ನಾವು ಯಮಸಾದನವನ್ನು ಸೇರುವವರಿದ್ದೇವೆ.
05141042a ಅಹಂ ಚಾನ್ಯೇ ಚ ರಾಜಾನೋ ಯಚ್ಚ ತತ್ಕ್ಷತ್ರಮಂಡಲಂ।
05141042c ಗಾಂಡೀವಾಗ್ನಿಂ ಪ್ರವೇಕ್ಷ್ಯಾಮ ಇತಿ ಮೇ ನಾಸ್ತಿ ಸಂಶಯಃ।।
ನಾನು ಮತ್ತು ಆ ಕ್ಷತ್ರಮಂಡಲದಲ್ಲಿರುವ ಅನ್ಯ ರಾಜರು ಗಾಂಡೀವಾಗ್ನಿಯನ್ನು ಪ್ರವೇಶಿಸುತ್ತೇವೆ ಎನ್ನುವುದರಲ್ಲಿ ನನಗೆ ಸಂಶಯವಿಲ್ಲ.”
05141043 ಕೃಷ್ಣ ಉವಾಚ।
05141043a ಉಪಸ್ಥಿತವಿನಾಶೇಯಂ ನೂನಮದ್ಯ ವಸುಂಧರಾ।
05141043c ತಥಾ ಹಿ ಮೇ ವಚಃ ಕರ್ಣ ನೋಪೈತಿ ಹೃದಯಂ ತವ।।
ಕೃಷ್ಣನು ಹೇಳಿದನು: “ಕರ್ಣ! ನನ್ನ ಮಾತುಗಳು ನಿನ್ನ ಹೃದಯವನ್ನು ಮುಟ್ಟುವುದಿಲ್ಲವಾದರೆ ಇಂದು ಈ ವಸುಂಧರೆಯ ವಿನಾಶವು ಬಂದೊದಗಿದೆ ಎಂದರ್ಥ.
05141044a ಸರ್ವೇಷಾಂ ತಾತ ಭೂತಾನಾಂ ವಿನಾಶೇ ಸಮುಪಸ್ಥಿತೇ।
05141044c ಅನಯೋ ನಯಸಂಕಾಶೋ ಹೃದಯಾನ್ನಾಪಸರ್ಪತಿ।।
ಅಯ್ಯಾ! ಸರ್ವಭೂತಗಳ ವಿನಾಶವು ಉಪಸ್ಥಿತವಾಗಿರುವಾಗ ಅನ್ಯಾಯವು ನ್ಯಾಯವಾಗಿ ಕಾಣುವುದು ಹೃದಯವನ್ನು ಬಿಟ್ಟು ಹೋಗುವುದಿಲ್ಲ!”
05141045 ಕರ್ಣ ಉವಾಚ।
05141045a ಅಪಿ ತ್ವಾ ಕೃಷ್ಣ ಪಶ್ಯಾಮ ಜೀವಂತೋಽಸ್ಮಾನ್ಮಹಾರಣಾತ್।
05141045c ಸಮುತ್ತೀರ್ಣಾ ಮಹಾಬಾಹೋ ವೀರಕ್ಷಯವಿನಾಶನಾತ್।।
ಕರ್ಣನು ಹೇಳಿದನು: “ಮಹಾಬಾಹೋ! ಕೃಷ್ಣ! ಈ ವೀರಕ್ಷಯವಿನಾಶದಿಂದ ಉತ್ತೀರ್ಣರಾಗಿ ಮಹಾರಣದಿಂದ ಜೀವಂತರಾಗಿ ಉಳಿದು ಬಂದರೆ ಪುನಃ ನಾವು ಭೇಟಿಯಾಗೋಣ!
05141046a ಅಥ ವಾ ಸಂಗಮಃ ಕೃಷ್ಣ ಸ್ವರ್ಗೇ ನೋ ಭವಿತಾ ಧ್ರುವಂ।
05141046c ತತ್ರೇದಾನೀಂ ಸಮೇಷ್ಯಾಮಃ ಪುನಃ ಸಾರ್ಧಂ ತ್ವಯಾನಘ।।
ಅಥವಾ ಕೃಷ್ಣ! ಅನಘ! ಖಂಡಿತವಾಗಿಯೂ ಸ್ವರ್ಗದಲ್ಲಿ ನಮ್ಮ ಮಿಲನವಾಗುತ್ತದೆ. ಅಲ್ಲಿಯೇ ನಮ್ಮಿಬ್ಬರ ಪುನರ್ಮಿಲನವಾಗುವುದು ಎಂದು ನನಗನ್ನಿಸುತ್ತಿದೆ.””
05141047 ಸಂಜಯ ಉವಾಚ।
05141047a ಇತ್ಯುಕ್ತ್ವಾ ಮಾಧವಂ ಕರ್ಣಃ ಪರಿಷ್ವಜ್ಯ ಚ ಪೀಡಿತಂ।
05141047c ವಿಸರ್ಜಿತಃ ಕೇಶವೇನ ರಥೋಪಸ್ಥಾದವಾತರತ್।।
ಸಂಜಯನು ಹೇಳಿದನು: “ಹೀಗೆ ಹೇಳಿ ಕರ್ಣನು ಮಾಧವನನ್ನು ಬಿಗಿಯಾಗಿ ಅಪ್ಪಿಕೊಂಡನು. ಕೇಶವನಿಂದ ಬೀಳ್ಕೊಂಡು ರಥದಿಂದ ಕೆಳಕ್ಕಿಳಿದನು.
05141048a ತತಃ ಸ್ವರಥಮಾಸ್ಥಾಯ ಜಾಂಬೂನದವಿಭೂಷಿತಂ।
05141048c ಸಹಾಸ್ಮಾಭಿರ್ನಿವವೃತೇ ರಾಧೇಯೋ ದೀನಮಾನಸಃ।।
ಬಂಗಾರದಿಂದ ವಿಭೂಷಿತವಾದ ತನ್ನ ರಥದಲ್ಲಿ ಕುಳಿತು ದೀನಮಾನಸನಾಗಿ ರಾಧೇಯನು ನಮ್ಮೊಂದಿಗೆ ಹಿಂದಿರುಗಿದನು.
05141049a ತತಃ ಶೀಘ್ರತರಂ ಪ್ರಾಯಾತ್ಕೇಶವಃ ಸಹಸಾತ್ಯಕಿಃ।
05141049c ಪುನರುಚ್ಚಾರಯನ್ವಾಣೀಂ ಯಾಹಿ ಯಾಹೀತಿ ಸಾರಥಿಂ।।
ಅನಂತರ ಸಾತ್ಯಕಿಯೊಂದಿಗೆ ಕೇಶವನು “ಹೋಗು! ಹೋಗು!” ಎಂದು ಪುನಃ ಪುನಃ ಸಾರಥಿಗೆ ಹೇಳುತ್ತಾ ಶೀಘ್ರವಾಗಿ ಪ್ರಯಾಣಿಸಿದನು.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಕರ್ಣವಿವಾದ ಪರ್ವಣಿ ಕೃಷ್ಣಕರ್ಣಸಂವಾದೇ ಏಕಚತ್ವಾರಿಂಶದಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಕರ್ಣವಿವಾದ ಪರ್ವದಲ್ಲಿ ಕೃಷ್ಣಕರ್ಣಸಂವಾದದಲ್ಲಿ ನೂರಾನಲ್ವತ್ತೊಂದನೆಯ ಅಧ್ಯಾಯವು.