ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಕರ್ಣವಿವಾದ ಪರ್ವ
ಅಧ್ಯಾಯ 139
ಸಾರ
ತಂದೆ ಅಧಿರಥನ ಮೇಲೆ, ತನ್ನ ಸೂತ ಬಾಂಧವರ ಮೇಲೆ ಮತ್ತು ಮಿತ್ರ ದುರ್ಯೋಧನನ ಮೇಲೆ ತನಗಿರುವ ನಿಷ್ಠೆಯು ಬದಲಾಗುವುದಿಲ್ಲವೆಂದೂ ಒಂದುವೇಳೆ ನನಗೆ ಈ ಸಂಪದ್ಭರಿತ ಮಹಾರಾಜ್ಯವನ್ನು ಒಪ್ಪಿಸಿದರೆ ಅದನ್ನು ನಾನು ದುರ್ಯೋಧನನಿಗೇ ಕೊಟ್ಟುಬಿಡುತ್ತೇನೆ ಎಂದೂ ಹೇಳಿ (1-28) ಕರ್ಣನು ನಡೆಯಲಿರುವ ಯುದ್ಧವನ್ನು ದುರ್ಯೋಧನನು ನಡೆಸುವ ಮಹಾಯಜ್ಞಕ್ಕೆ ಹೋಲಿಸಿ ನುಡಿಯುವುದು (29-57).
05139001 ಕರ್ಣ ಉವಾಚ।
05139001a ಅಸಂಶಯಂ ಸೌಹೃದಾನ್ಮೇ ಪ್ರಣಯಾಚ್ಚಾತ್ಥ ಕೇಶವ।
05139001c ಸಖ್ಯೇನ ಚೈವ ವಾರ್ಷ್ಣೇಯ ಶ್ರೇಯಸ್ಕಾಮತಯೈವ ಚ।।
ಕರ್ಣನು ಹೇಳಿದನು: “ಕೇಶವ! ವಾರ್ಷ್ಣೇಯ! ನನ್ನ ಮೇಲಿನ ಸ್ನೇಹದಿಂದ, ಪ್ರೀತಿಯಿಂದ, ಸಖ್ಯದಿಂದ ಮತ್ತು ನನಗೆ ಶ್ರೇಯಸ್ಸಾಗಬೇಕೆಂದು ಇದನ್ನು ಹೇಳುತ್ತಿದ್ದೀಯೆ ಎನ್ನುವುದರಲ್ಲಿ ಸಂಶಯವಿಲ್ಲ.
05139002a ಸರ್ವಂ ಚೈವಾಭಿಜಾನಾಮಿ ಪಾಂಡೋಃ ಪುತ್ರೋಽಸ್ಮಿ ಧರ್ಮತಃ।
05139002c ನಿಗ್ರಹಾದ್ಧರ್ಮಶಾಸ್ತ್ರಾಣಾಂ ಯಥಾ ತ್ವಂ ಕೃಷ್ಣ ಮನ್ಯಸೇ।।
ಕೃಷ್ಣ! ನೀನು ಅಭಿಪ್ರಾಯಪಡುವಂತೆ ಧರ್ಮಶಾಸ್ತ್ರಗಳ ಕಟ್ಟುಪಾಡುಗಳಂತೆ ಧರ್ಮತಃ ನಾನು ಪಾಂಡುವಿನ ಮಗನೆಂದು ಎಲ್ಲವನ್ನೂ ತಿಳಿದಿದ್ದೇನೆ.
05139003a ಕನ್ಯಾ ಗರ್ಭಂ ಸಮಾಧತ್ತ ಭಾಸ್ಕರಾನ್ಮಾಂ ಜನಾರ್ದನ।
05139003c ಆದಿತ್ಯವಚನಾಚ್ಚೈವ ಜಾತಂ ಮಾಂ ಸಾ ವ್ಯಸರ್ಜಯತ್।।
ಜನಾರ್ದನ! ಆದಿತ್ಯನು ಹೇಳಿದ್ದಂತೆ ಕನ್ಯೆಯಾಗಿದ್ದಾಗಲೇ ಭಾಸ್ಕರನಿಂದ ಗರ್ಭವನ್ನು ಪಡೆದು ಹುಟ್ಟಿದಾಗಲೇ ಅವಳು ನನ್ನನ್ನು ವಿಸರ್ಜಿಸಿದ್ದಳು.
05139004a ಸೋಽಸ್ಮಿ ಕೃಷ್ಣ ತಥಾ ಜಾತಃ ಪಾಂಡೋಃ ಪುತ್ರೋಽಸ್ಮಿ ಧರ್ಮತಃ।
05139004c ಕುಂತ್ಯಾ ತ್ವಹಮಪಾಕೀರ್ಣೋ ಯಥಾ ನ ಕುಶಲಂ ತಥಾ।।
ಹೌದು ಕೃಷ್ಣ! ಧರ್ಮತಃ ನಾನು ಪಾಂಡುವಿನ ಪುತ್ರನಾಗಿ ಹುಟ್ಟಿದೆನು. ಆದರೆ ಕುಂತಿಯು ಸತ್ತು ಹುಟ್ಟಿದವನಂತೆ ನನ್ನನ್ನು ಬಿಸಾಡಿದಳು.
05139005a ಸೂತೋ ಹಿ ಮಾಮಧಿರಥೋ ದೃಷ್ಟ್ವೈವ ಅನಯದ್ಗೃಹಾನ್।
05139005c ರಾಧಾಯಾಶ್ಚೈವ ಮಾಂ ಪ್ರಾದಾತ್ಸೌಹಾರ್ದಾನ್ಮಧುಸೂದನ।।
ಮಧುಸೂದನ! ಸೂತ ಅಧಿರಥನು ನನ್ನನ್ನು ಕಂಡಕೂಡಲೇ ಮನೆಗೆ ಕರೆತಂದು ಪ್ರೀತಿಯಿಂದ ರಾಧೆಗೆ ಕೊಟ್ಟನು.
05139006a ಮತ್ಸ್ನೇಹಾಚ್ಚೈವ ರಾಧಾಯಾಃ ಸದ್ಯಃ ಕ್ಷೀರಮವಾತರತ್।
05139006c ಸಾ ಮೇ ಮೂತ್ರಂ ಪುರೀಷಂ ಚ ಪ್ರತಿಜಗ್ರಾಹ ಮಾಧವ।।
ಮಾಧವ! ನನ್ನ ಮೇಲಿನ ಪ್ರೀತಿಯಿಂದ ಕೂಡಲೇ ಅವಳ ಎದೆಯ ಹಾಲು ಸುರಿಯಿತು. ಅವಳೂ ಕೂಡ ನನ್ನ ಮಲ ಮೂತ್ರಗಳನ್ನು ಸಹಿಸಿಕೊಂಡಳು.
05139007a ತಸ್ಯಾಃ ಪಿಂಡವ್ಯಪನಯಂ ಕುರ್ಯಾದಸ್ಮದ್ವಿಧಃ ಕಥಂ।
05139007c ಧರ್ಮವಿದ್ಧರ್ಮಶಾಸ್ತ್ರಾಣಾಂ ಶ್ರವಣೇ ಸತತಂ ರತಃ।।
ನನ್ನಂಥವನು - ಧರ್ಮವನ್ನು ತಿಳಿದವನು ಮತ್ತು ಸತತವೂ ಧರ್ಮಶಾಸ್ತ್ರಗಳನ್ನು ಕೇಳುವುದರಲ್ಲಿ ನಿರತನಾದವನು - ಹೇಗೆ ತಾನೇ ಅವಳಿಗೆ ಪಿಂಡವನ್ನು ನಿರಾಕರಿಸಬಲ್ಲ?
05139008a ತಥಾ ಮಾಮಭಿಜಾನಾತಿ ಸೂತಶ್ಚಾಧಿರಥಃ ಸುತಂ।
05139008c ಪಿತರಂ ಚಾಭಿಜಾನಾಮಿ ತಮಹಂ ಸೌಹೃದಾತ್ಸದಾ।।
ಸೂತ ಅಧಿರಥನು ನನ್ನನ್ನು ಮಗನೆಂದು ತಿಳಿದುಕೊಂಡಿದ್ದಾನೆ. ನಾನೂ ಕೂಡ ಪ್ರೀತಿಯಿಂದ ಅವನನ್ನು ತಂದೆಯೆಂದೇ ತಿಳಿದುಕೊಂಡಿದ್ದೇನೆ.
05139009a ಸ ಹಿ ಮೇ ಜಾತಕರ್ಮಾದಿ ಕಾರಯಾಮಾಸ ಮಾಧವ।
05139009c ಶಾಸ್ತ್ರದೃಷ್ಟೇನ ವಿಧಿನಾ ಪುತ್ರಪ್ರೀತ್ಯಾ ಜನಾರ್ದನ।।
ಮಾಧವ! ಜನಾರ್ದನ! ಅವನೇ ನನಗೆ ಪುತ್ರಪ್ರೀತಿಯಿಂದ ಶಾಸ್ತ್ರದೃಷ್ಟ ವಿಧಿಗಳಿಂದ ಜಾತಕರ್ಮಾದಿಗಳನ್ನು ಮಾಡಿಸಿದನು.
05139010a ನಾಮ ಮೇ ವಸುಷೇಣೇತಿ ಕಾರಯಾಮಾಸ ವೈ ದ್ವಿಜೈಃ।
05139010c ಭಾರ್ಯಾಶ್ಚೋಢಾ ಮಮ ಪ್ರಾಪ್ತೇ ಯೌವನೇ ತೇನ ಕೇಶವ।।
ದ್ವಿಜರಿಂದ ನನಗೆ ವಸುಷೇಣನೆಂಬ ಹೆಸರನ್ನಿತ್ತನು. ಕೇಶವ! ನನಗೆ ಯೌವನ ಪ್ರಾಪ್ತಿಯಾದಾಗ ಅವನೇ ನನಗೆ ಭಾರ್ಯೆಯರನ್ನು ತಂದು ಮದುವೆಮಾಡಿಸಿದನು.
05139011a ತಾಸು ಪುತ್ರಾಶ್ಚ ಪೌತ್ರಾಶ್ಚ ಮಮ ಜಾತಾ ಜನಾರ್ದನ।
05139011c ತಾಸು ಮೇ ಹೃದಯಂ ಕೃಷ್ಣ ಸಂಜಾತಂ ಕಾಮಬಂಧನಂ।।
ಜನಾರ್ದನ! ಅವರಲ್ಲಿ ನನಗೆ ಮಕ್ಕಳು ಮೊಮ್ಮಕ್ಕಳು ಹುಟ್ಟಿದ್ದಾರೆ. ಅವರ ಮೇಲೆ ನನ್ನ ಹೃದಯದಲ್ಲಿ ಕಾಮಬಂಧನವು ಬೆಳೆದುಕೊಂಡಿದೆ ಕೃಷ್ಣ!
05139012a ನ ಪೃಥಿವ್ಯಾ ಸಕಲಯಾ ನ ಸುವರ್ಣಸ್ಯ ರಾಶಿಭಿಃ।
05139012c ಹರ್ಷಾದ್ಭಯಾದ್ವಾ ಗೋವಿಂದ ಅನೃತಂ ವಕ್ತುಮುತ್ಸಹೇ।।
ಗೋವಿಂದ! ಸಕಲ ಭೂಮಿಯಾಗಲೀ, ಸುವರ್ಣದ ರಾಶಿಗಳಾಗಲೀ, ಹರ್ಷಗಳಾಗಲೀ, ಭಯಗಳಾಗಲೀ ನನ್ನನ್ನು ಮಾತಿಗೆ ಸುಳ್ಳಾಗಿ ನಡೆದುಕೊಳ್ಳುವಂತೆ ಮಾಡಲಾರವು!
05139013a ಧೃತರಾಷ್ಟ್ರಕುಲೇ ಕೃಷ್ಣ ದುರ್ಯೋಧನಸಮಾಶ್ರಯಾತ್।
05139013c ಮಯಾ ತ್ರಯೋದಶ ಸಮಾ ಭುಕ್ತಂ ರಾಜ್ಯಮಕಂಟಕಂ।।
ಕೃಷ್ಣ! ಧೃತರಾಷ್ಟ್ರ ಕುಲದಲ್ಲಿ, ದುರ್ಯೋಧನನ ಆಶ್ರಯದಲ್ಲಿ, ಹದಿಮೂರು ವರ್ಷಗಳು ಈ ರಾಜ್ಯವನ್ನು ಅಡೆತಡೆಯಿಲ್ಲದೇ ಭೋಗಿಸಿದ್ದೇನೆ.
05139014a ಇಷ್ಟಂ ಚ ಬಹುಭಿರ್ಯಜ್ಞೈಃ ಸಹ ಸೂತೈರ್ಮಯಾಸಕೃತ್।
05139014c ಆವಾಹಾಶ್ಚ ವಿವಾಹಾಶ್ಚ ಸಹ ಸೂತೈಃ ಕೃತಾ ಮಯಾ।।
ಸೂತರೊಂದಿಗೆ ಬಹಳಷ್ಟು ಇಷ್ಟಿ-ಯಜ್ಞಗಳನ್ನು ನಾನು ಮಾಡಿದ್ದೇನೆ. ಕುಟುಂಬದ ಆವಾಹ-ವಿವಾಹಗಳನ್ನೂ ಕೂಡ ನಾನು ಸೂತರೊಂದಿಗೇ ಮಾಡಿದ್ದೇನೆ.
05139015a ಮಾಂ ಚ ಕೃಷ್ಣ ಸಮಾಶ್ರಿತ್ಯ ಕೃತಃ ಶಸ್ತ್ರಸಮುದ್ಯಮಃ।
05139015c ದುರ್ಯೋಧನೇನ ವಾರ್ಷ್ಣೇಯ ವಿಗ್ರಹಶ್ಚಾಪಿ ಪಾಂಡವೈಃ।।
ಕೃಷ್ಣ! ವಾರ್ಷ್ಣೇಯ! ನನ್ನನ್ನೇ ಅವಲಂಬಿಸಿ ಶಸ್ತ್ರಗಳನ್ನು ಮೇಲೆತ್ತಿ ದುರ್ಯೋಧನನು ಪಾಂಡವರೊಂದಿಗೆ ಹೋರಾಟ ಮಾಡುತ್ತಿದ್ದಾನೆ.
05139016a ತಸ್ಮಾದ್ರಣೇ ದ್ವೈರಥೇ ಮಾಂ ಪ್ರತ್ಯುದ್ಯಾತಾರಮಚ್ಯುತ।
05139016c ವೃತವಾನ್ಪರಮಂ ಹೃಷ್ಟಃ ಪ್ರತೀಪಂ ಸವ್ಯಸಾಚಿನಃ।।
ಅಚ್ಯುತ! ಆದುದರಿಂದಲೇ ರಣದಲ್ಲಿ ರಥಗಳ ದ್ವಂದ್ವಯುದ್ದದಲ್ಲಿ ಸವ್ಯಸಾಚಿಯ ವಿರುದ್ಧವಾಗಿ ನನ್ನನ್ನು ವಿಶ್ವಾಸದಿಂದ ಆರಿಸಿಕೊಂಡು, ಪರಮ ಹರ್ಷಿತನಾಗಿದ್ದಾನೆ.
05139017a ವಧಾದ್ಬಂಧಾದ್ಭಯಾದ್ವಾಪಿ ಲೋಭಾದ್ವಾಪಿ ಜನಾರ್ದನ।
05139017c ಅನೃತಂ ನೋತ್ಸಹೇ ಕರ್ತುಂ ಧಾರ್ತರಾಷ್ಟ್ರಸ್ಯ ಧೀಮತಃ।।
ಜನಾರ್ದನ! ಸಾವಾಗಲೀ, ಸೆರೆಯಾಗಲೀ, ಭಯವಾಗಲೀ, ಲೋಭವಾಗಲೀ ಧೀಮತ ಧಾರ್ತರಾಷ್ಟ್ರನಿಗೆ ನಾನು ಕೊಟ್ಟ ಮಾತನ್ನು ಮುರಿಯುವಂತೆ ಮಾಡಲಾರವು.
05139018a ಯದಿ ಹ್ಯದ್ಯ ನ ಗಚ್ಚೇಯಂ ದ್ವೈರಥಂ ಸವ್ಯಸಾಚಿನಾ।
05139018c ಅಕೀರ್ತಿಃ ಸ್ಯಾದ್ಧೃಷೀಕೇಶ ಮಮ ಪಾರ್ಥಸ್ಯ ಚೋಭಯೋಃ।।
ಕೇಶವ! ಇಂದು ನಾವು ರಥಗಳ ದ್ವಂದ್ವಯುದ್ಧವನ್ನು ಮಾಡದೇ ಇದ್ದರೆ ನನಗೆ ಮತ್ತು ಪಾರ್ಥ ಇಬ್ಬರಿಗೂ ಅಕೀರ್ತಿಯು ಲಭಿಸುತ್ತದೆ.
05139019a ಅಸಂಶಯಂ ಹಿತಾರ್ಥಾಯ ಬ್ರೂಯಾಸ್ತ್ವಂ ಮಧುಸೂದನ।
05139019c ಸರ್ವಂ ಚ ಪಾಂಡವಾಃ ಕುರ್ಯುಸ್ತ್ವದ್ವಶಿತ್ವಾನ್ನ ಸಂಶಯಃ।।
ಮಧುಸೂದನ! ನೀನು ಒಳ್ಳೆಯದಕ್ಕಾಗಿಯೇ ಹೇಳುತ್ತಿದ್ದೀಯೆ ಮತ್ತು ನಿನ್ನ ಮಾರ್ಗದರ್ಶನದಿಂದ ಪಾಂಡವರು ಎಲ್ಲವನ್ನೂ ಸಾಧಿಸುವರು ಎನ್ನುವುದರಲ್ಲಿ ಸಂಶಯವೇ ಇಲ್ಲ.
05139020a ಮಂತ್ರಸ್ಯ ನಿಯಮಂ ಕುರ್ಯಾಸ್ತ್ವಮತ್ರ ಪುರುಷೋತ್ತಮ।
05139020c ಏತದತ್ರ ಹಿತಂ ಮನ್ಯೇ ಸರ್ವಯಾದವನಂದನ।।
ಪುರುಷೋತ್ತಮ! ಸರ್ವಯಾದವನಂದನ! ನಾವು ಇಲ್ಲಿ ಮಾತನಾಡಿದುದನ್ನು ಇಲ್ಲಿಯೇ ಇರಿಸಬೇಕು. ಅದರಲ್ಲಿಯೇ ಹಿತವಿದೆ ಎಂದು ನನಗನ್ನಿಸುತ್ತದೆ.
05139021a ಯದಿ ಜಾನಾತಿ ಮಾಂ ರಾಜಾ ಧರ್ಮಾತ್ಮಾ ಸಂಶಿತವ್ರತಃ।
05139021c ಕುಂತ್ಯಾಃ ಪ್ರಥಮಜಂ ಪುತ್ರಂ ನ ಸ ರಾಜ್ಯಂ ಗ್ರಹೀಷ್ಯತಿ।।
ನಾನು ಕುಂತಿಯ ಮೊದಲು ಹುಟ್ಟಿದ ಮಗನೆಂದು ಆ ರಾಜಾ ಧರ್ಮಾತ್ಮ ಸಂಶಿತವ್ರತನಿಗೆ ಗೊತ್ತಾದರೆ ಅವನು ರಾಜ್ಯವನ್ನು ಸ್ವೀಕರಿಸುವುದಿಲ್ಲ.
05139022a ಪ್ರಾಪ್ಯ ಚಾಪಿ ಮಹದ್ರಾಜ್ಯಂ ತದಹಂ ಮಧುಸೂದನ।
05139022c ಸ್ಫೀತಂ ದುರ್ಯೋಧನಾಯೈವ ಸಂಪ್ರದದ್ಯಾಮರಿಂದಮ।।
ಮಧುಸೂದನ! ಅರಿಂದಮ! ಒಂದುವೇಳೆ ನನಗೆ ಈ ಸಂಪದ್ಭರಿತ ಮಹಾರಾಜ್ಯವನ್ನು ಒಪ್ಪಿಸಿದರೆ ಅದನ್ನು ನಾನು ದುರ್ಯೋಧನನಿಗೇ ಕೊಟ್ಟುಬಿಡುತ್ತೇನೆ.
05139023a ಸ ಏವ ರಾಜಾ ಧರ್ಮಾತ್ಮಾ ಶಾಶ್ವತೋಽಸ್ತು ಯುಧಿಷ್ಠಿರಃ।
05139023c ನೇತಾ ಯಸ್ಯ ಹೃಷೀಕೇಶೋ ಯೋದ್ಧಾ ಯಸ್ಯ ಧನಂಜಯಃ।।
ಹೃಷೀಕೇಶನನ್ನು ಮಾರ್ಗದರ್ಶಕನನ್ನಾಗಿ ಮತ್ತು ಧನಂಜಯನನ್ನು ಸೇನಾಪತಿಯಾಗಿ ಪಡೆದಿರುವ ಧರ್ಮಾತ್ಮ ಯುಧಿಷ್ಠಿರನೇ ಶಾಶ್ವತವಾಗಿ ರಾಜನಾಗಲಿ.
05139024a ಪೃಥಿವೀ ತಸ್ಯ ರಾಷ್ಟ್ರಂ ಚ ಯಸ್ಯ ಭೀಮೋ ಮಹಾರಥಃ।
05139024c ನಕುಲಃ ಸಹದೇವಶ್ಚ ದ್ರೌಪದೇಯಾಶ್ಚ ಮಾಧವ।।
05139025a ಉತ್ತಮೌಜಾ ಯುಧಾಮನ್ಯುಃ ಸತ್ಯಧರ್ಮಾ ಚ ಸೋಮಕಿಃ।
05139025c ಚೈದ್ಯಶ್ಚ ಚೇಕಿತಾನಶ್ಚ ಶಿಖಂಡೀ ಚಾಪರಾಜಿತಃ।।
05139026a ಇಂದ್ರಗೋಪಕವರ್ಣಾಶ್ಚ ಕೇಕಯಾ ಭ್ರಾತರಸ್ತಥಾ।
05139026c ಇಂದ್ರಾಯುಧಸವರ್ಣಶ್ಚ ಕುಂತಿಭೋಜೋ ಮಹಾರಥಃ।।
05139027a ಮಾತುಲೋ ಭೀಮಸೇನಸ್ಯ ಸೇನಜಿಚ್ಚ ಮಹಾರಥಃ।
05139027c ಶಂಖಃ ಪುತ್ರೋ ವಿರಾಟಸ್ಯ ನಿಧಿಸ್ತ್ವಂ ಚ ಜನಾರ್ದನ।।
ಮಾಧವ! ಯಾರೊಡನೆ ಮಹಾರಥಿ ಭೀಮ, ನಕುಲ-ಸಹದೇವರು, ದ್ರೌಪದೇಯರು, ಉತ್ತಮೌಜ, ಯುಧಾಮನ್ಯು, ಸತ್ಯಧರ್ಮ ಸೋಮಕಿ, ಚೈದ್ಯ, ಚೇಕಿತಾನ, ಅಪರಾಜಿತ ಶಿಖಂಡೀ, ಇಂದ್ರಗೋಪಕ, ವರ್ಣ, ಕೇಕಯ ಸಹೋದರರು, ಇಂದ್ರಾಯುಧ, ಸವರ್ಣ, ಮಹಾರಥಿ ಕುಂತಿಭೋಜ, ಭೀಮಸೇನನ ಮಾವ ಮಹಾರಥಿ ಸೇನಜಿತ್, ವಿರಾಟನ ಪುತ್ರ ಶಂಖ ಮತ್ತು ನಿಧಿಗಾಗಿ ಜನಾರ್ದನ ನೀನಿರುವೆಯೋ ಅವನದ್ದೇ ರಾಷ್ಟ್ರವು ಈ ಭೂಮಿಯಾಗುವುದು.
05139028a ಮಹಾನಯಂ ಕೃಷ್ಣ ಕೃತಃ ಕ್ಷತ್ರಸ್ಯ ಸಮುದಾನಯಃ।
05139028c ರಾಜ್ಯಂ ಪ್ರಾಪ್ತಮಿದಂ ದೀಪ್ತಂ ಪ್ರಥಿತಂ ಸರ್ವರಾಜಸು।।
ಕೃಷ್ಣ! ಇಲ್ಲಿ ಸೇರಿರುವ ಮಹಾಸಂಖ್ಯೆಯ ಕ್ಷತ್ರಿಯರು ಒಂದು ಸಾಧನೆಯೇ! ಎಲ್ಲ ರಾಜರಲ್ಲಿಯೇ ಪ್ರಥಿತವಾಗಿರುವ ಬೆಳಗುತ್ತಿರುವ ಈ ರಾಜ್ಯವು ದೊರಕಿದಂತೆಯೇ!
05139029a ಧಾರ್ತರಾಷ್ಟ್ರಸ್ಯ ವಾರ್ಷ್ಣೇಯ ಶಸ್ತ್ರಯಜ್ಞೋ ಭವಿಷ್ಯತಿ।
05139029c ಅಸ್ಯ ಯಜ್ಞಾಸ್ಯ ವೇತ್ತಾ ತ್ವಂ ಭವಿಷ್ಯಸಿ ಜನಾರ್ದನ।
05139029e ಆಧ್ವರ್ಯವಂ ಚ ತೇ ಕೃಷ್ಣ ಕ್ರತಾವಸ್ಮಿನ್ ಭವಿಷ್ಯತಿ।।
ವಾರ್ಷ್ಣೇಯ! ಧಾರ್ತರಾಷ್ಟ್ರನು ನಡೆಸುವ ಒಂದು ಶಸ್ತ್ರಯಜ್ಞವು ನಡೆಯಲಿಕ್ಕಿದೆ. ಜನಾರ್ದನ! ಈ ಯಜ್ಞದ ವೇತ್ತನು ನೀನಾಗುವೆ. ಕೃಷ್ಣ! ಈ ಕ್ರತುವಿನ ಅಧ್ವರ್ಯನೂ ನೀನಾಗುವೆ.
05139030a ಹೋತಾ ಚೈವಾತ್ರ ಬೀಭತ್ಸುಃ ಸನ್ನದ್ಧಃ ಸ ಕಪಿಧ್ವಜಃ।
05139030c ಗಾಂಡೀವಂ ಸ್ರುಕ್ತಥಾಜ್ಯಂ ಚ ವೀರ್ಯಂ ಪುಂಸಾಂ ಭವಿಷ್ಯತಿ।।
ಅದರ ಹೋತನು ಸನ್ನದ್ಧನಾಗಿರುವ ಕಪಿಧ್ವಜ ಬೀಭತ್ಸುವು. ಗಾಂಡೀವವು ಸ್ರುಕ್ ಮತ್ತು ಪುರುಷರ ವೀರ್ಯವು ಆಜ್ಯವಾಗುತ್ತದೆ.
05139031a ಐಂದ್ರಂ ಪಾಶುಪತಂ ಬ್ರಾಹ್ಮಂ ಸ್ಥೂಣಾಕರ್ಣಂ ಚ ಮಾಧವ।
05139031c ಮಂತ್ರಾಸ್ತತ್ರ ಭವಿಷ್ಯಂತಿ ಪ್ರಯುಕ್ತಾಃ ಸವ್ಯಸಾಚಿನಾ।।
ಮಾಧವ! ಸವ್ಯಸಾಚಿಯು ಪ್ರಯೋಗಿಸುವ ಐಂದ್ರ, ಪಾಶುಪತ, ಬ್ರಹ್ಮ, ಮತ್ತು ಸ್ಥೂಣಾಕರ್ಣ ಅಸ್ತ್ರಗಳು ಅದರಲ್ಲಿ ಮಂತ್ರಗಳಾಗುತ್ತವೆ.
05139032a ಅನುಯಾತಶ್ಚ ಪಿತರಮಧಿಕೋ ವಾ ಪರಾಕ್ರಮೇ।
05139032c ಗ್ರಾವಸ್ತೋತ್ರಂ ಸ ಸೌಭದ್ರಃ ಸಮ್ಯಕ್ತತ್ರ ಕರಿಷ್ಯತಿ।।
ಪರಾಕ್ರಮದಲ್ಲಿ ತಂದೆಯನ್ನು ಹೋಲುವ ಅಥವಾ ಅವನಿಗಿಂತಲೂ ಅಧಿಕನಾಗಿರುವ ಸೌಭದ್ರನು ಅದರಲ್ಲಿ ಗ್ರಾವಸ್ತೋತ್ರಿಯ ಕೆಲಸವನ್ನು ಮಾಡುತ್ತಾನೆ.
05139033a ಉದ್ಗಾತಾತ್ರ ಪುನರ್ಭೀಮಃ ಪ್ರಸ್ತೋತಾ ಸುಮಹಾಬಲಃ।
05139033c ವಿನದನ್ಸ ನರವ್ಯಾಘ್ರೋ ನಾಗಾನೀಕಾಂತಕೃದ್ರಣೇ।।
ರಣದಲ್ಲಿ ಗರ್ಜಿಸಿ ಆನೆಗಳ ಸೇನೆಯನ್ನು ಕೊನೆಗೊಳಿಸುವ ನರವ್ಯಾಘ್ರ ಸುಮಹಾಬಲ ಭೀಮನು ಅದರಲ್ಲಿ ಉದ್ಗಾತನೂ ಪ್ರಸ್ತೋತನೂ ಆಗುತ್ತಾನೆ.
05139034a ಸ ಚೈವ ತತ್ರ ಧರ್ಮಾತ್ಮಾ ಶಶ್ವದ್ರಾಜಾ ಯುಧಿಷ್ಠಿರಃ।
05139034c ಜಪೈರ್ಹೋಮೈಶ್ಚ ಸಂಯುಕ್ತೋ ಬ್ರಹ್ಮತ್ವಂ ಕಾರಯಿಷ್ಯತಿ।।
ಆ ಶಾಶ್ವತ ರಾಜ, ಧರ್ಮಾತ್ಮಾ, ಜಪ-ಹೋಮಗಳಲ್ಲಿ ಪಳಗಿರುವ ಯುಧಿಷ್ಠಿರನು ಅದರಲ್ಲಿ ಬ್ರಹ್ಮತ್ವವನ್ನು ಕೈಗೊಳ್ಳುತ್ತಾನೆ.
05139035a ಶಂಖಶಬ್ದಾಃ ಸಮುರಜಾ ಭೇರ್ಯಶ್ಚ ಮಧುಸೂದನ।
05139035c ಉತ್ಕೃಷ್ಟಸಿಂಹನಾದಾಶ್ಚ ಸುಬ್ರಹ್ಮಣ್ಯೋ ಭವಿಷ್ಯತಿ।।
ಮಧುಸೂದನ! ಶಂಖಗಳ ಶಬ್ಧ, ನಗಾರಿ ಭೇರಿಗಳ ಶಬ್ಧಗಳು, ಮತ್ತು ಕಿವಿ ಕಿವುಡು ಮಾಡುವ ಸಿಂಹನಾದಗಳು ಸುಬ್ರಹ್ಮಣ್ಯವಾಗುತ್ತವೆ.
05139036a ನಕುಲಃ ಸಹದೇವಶ್ಚ ಮಾದ್ರೀಪುತ್ರೌ ಯಶಸ್ವಿನೌ।
05139036c ಶಾಮಿತ್ರಂ ತೌ ಮಹಾವೀರ್ಯೌ ಸಮ್ಯಕ್ತತ್ರ ಕರಿಷ್ಯತಃ।।
ಮಹಾವೀರರಾದ ಯಶಸ್ವಿಗಳಾದ ಮಾದ್ರೀಪುತ್ರ ನಕುಲ-ಸಹದೇವರಿಬ್ಬರೂ ಅದರಲ್ಲಿ ಶಾಮಿತ್ರರ ಕೆಲಸವನ್ನು ಮಾಡುತ್ತಾರೆ.
05139037a ಕಲ್ಮಾಷದಂಡಾ ಗೋವಿಂದ ವಿಮಲಾ ರಥಶಕ್ತಯಃ।
05139037c ಯೂಪಾಃ ಸಮುಪಕಲ್ಪಂತಾಮಸ್ಮಿನ್ಯಜ್ಞೇ ಜನಾರ್ದನ।।
ಗೋವಿಂದ! ಜನಾರ್ದನ! ಈ ಯಜ್ಞದಲ್ಲಿ ರಥಗಳಿಗೆ ಕಟ್ಟಿದ ಶುಭ್ರ ಪತಾಕೆಗಳ ದಂಡಗಳು ಯೂಪಗಳಂತೆ ಇರುತ್ತವೆ.
05139038a ಕರ್ಣಿನಾಲೀಕನಾರಾಚಾ ವತ್ಸದಂತೋಪಬೃಹ್ಮಣಾಃ।
05139038c ತೋಮರಾಃ ಸೋಮಕಲಶಾಃ ಪವಿತ್ರಾಣಿ ಧನೂಂಷಿ ಚ।।
ಕರ್ಣಿ, ನಾಲೀಕ, ನಾರಾಚ, ವತ್ಸದಂತ ಮತ್ತು ತೋಮರ ಬಾಣಗಳು ಸೋಮಕಲಶಗಳಾಗುತ್ತವೆ ಹಾಗೂ ಧನುಸ್ಸುಗಳು ಪವಿತ್ರಗಳಾಗುತ್ತವೆ.
05139039a ಅಸಯೋಽತ್ರ ಕಪಾಲಾನಿ ಪುರೋಡಾಶಾಃ ಶಿರಾಂಸಿ ಚ।
05139039c ಹವಿಸ್ತು ರುಧಿರಂ ಕೃಷ್ಣ ಅಸ್ಮಿನ್ಯಜ್ಞೇ ಭವಿಷ್ಯತಿ।।
ಕೃಷ್ಣ! ಈ ಯಜ್ಞದಲ್ಲಿ ಕಪಾಲ-ಶಿರಗಳು ಪುರೋಡಾಷಗಳೂ, ರಕ್ತವು ಹವಿಸ್ಸಾಗಿಯೂ ಆಗುತ್ತವೆ.
05139040a ಇಧ್ಮಾಃ ಪರಿಧಯಶ್ಚೈವ ಶಕ್ತ್ಯೋಽಥ ವಿಮಲಾ ಗದಾಃ।
05139040c ಸದಸ್ಯಾ ದ್ರೋಣಶಿಷ್ಯಾಶ್ಚ ಕೃಪಸ್ಯ ಚ ಶರದ್ವತಃ।।
ಶುಭ್ರವಾದ ಶಕ್ತ್ಯಾಯುಧ ಮತ್ತು ಗದೆಗಳು ಅಗ್ನಿಯನ್ನು ಹೊತ್ತಿಸುವ ಮತ್ತು ಉರಿಸುವ ಕಟ್ಟಿಗೆಗಳಾದರೆ ದ್ರೋಣ ಮತ್ತು ಶರದ್ವತ ಕೃಪನ ಶಿಷ್ಯರು ಸದಸ್ಯರಾಗುತ್ತಾರೆ.
05139041a ಇಷವೋಽತ್ರ ಪರಿಸ್ತೋಮಾ ಮುಕ್ತಾ ಗಾಂಡೀವಧನ್ವನಾ।
05139041c ಮಹಾರಥಪ್ರಯುಕ್ತಾಶ್ಚ ದ್ರೋಣದ್ರೌಣಿಪ್ರಚೋದಿತಾಃ।।
ಅಲ್ಲಿ ಗಾಂಡೀವಧನ್ವಿಯು ಸುತ್ತುವರೆದು ಬಿಡುವ ಮತ್ತು ದ್ರೋಣ-ದ್ರೌಣಿಯರು ಪ್ರಯೋಗಿಸುವ ಬಾಣಗಳು ತಲೆದಿಂಬುಗಳಾಗುತ್ತವೆ.
05139042a ಪ್ರಾತಿಪ್ರಸ್ಥಾನಿಕಂ ಕರ್ಮ ಸಾತ್ಯಕಿಃ ಸ ಕರಿಷ್ಯತಿ।
05139042c ದೀಕ್ಷಿತೋ ಧಾರ್ತರಾಷ್ಟ್ರೋಽತ್ರ ಪತ್ನೀ ಚಾಸ್ಯ ಮಹಾಚಮೂಃ।।
ಸಾತ್ಯಕಿಯು ಪ್ರಾತಿಪ್ರಸ್ಥಾನಿಕನ ಕೆಲಸವನ್ನು ಮಾಡುತ್ತಾನೆ. ಧಾರ್ತರಾಷ್ಟ್ರನು ಅದರಲ್ಲಿ ದೀಕ್ಷಿತನಾಗುತ್ತಾನೆ ಮತ್ತು ಮಹಾಸೇನೆಯು ಅವನ ಪತ್ನಿ.
05139043a ಘಟೋತ್ಕಚೋಽತ್ರ ಶಾಮಿತ್ರಂ ಕರಿಷ್ಯತಿ ಮಹಾಬಲಃ।
05139043c ಅತಿರಾತ್ರೇ ಮಹಾಬಾಹೋ ವಿತತೇ ಯಜ್ಞಾಕರ್ಮಣಿ।।
ಯಜ್ಞಕರ್ಮಗಳು ರಾತ್ರಿಯೂ ಮುಂದುವರಿದರೆ ಆಗ ಅದರಲ್ಲಿ ಮಹಾಬಲ ಮಹಾಬಾಹು ಘಟೋತ್ಕಚನು ಶಾಮಿತ್ರನ ಕೆಲಸವನ್ನು ಮಾಡುತ್ತಾನೆ.
05139044a ದಕ್ಷಿಣಾ ತ್ವಸ್ಯ ಯಜ್ಞಾಸ್ಯ ಧೃಷ್ಟದ್ಯುಮ್ನಃ ಪ್ರತಾಪವಾನ್।
05139044c ವೈತಾನೇ ಕರ್ಮಣಿ ತತೇ ಜಾತೋ ಯಃ ಕೃಷ್ಣ ಪಾವಕಾತ್।।
ಕೃಷ್ಣ! ಅಗ್ನಿಯಿಂದ ಹುಟ್ಟಿದ ಪ್ರತಾಪವಾನ್ ಧೃಷ್ಟದ್ಯುಮ್ನನು ಈ ಯಜ್ಞದ ವೈತಾನ ಕರ್ಮಗಳಲ್ಲಿ ದಕ್ಷಿಣೆಯಾಗುತ್ತಾನೆ.
05139045a ಯದಬ್ರುವಮಹಂ ಕೃಷ್ಣ ಕಟುಕಾನಿ ಸ್ಮ ಪಾಂಡವಾನ್।
05139045c ಪ್ರಿಯಾರ್ಥಂ ಧಾರ್ತರಾಷ್ಟ್ರಸ್ಯ ತೇನ ತಪ್ಯೇಽದ್ಯ ಕರ್ಮಣಾ।।
05139046a ಯದಾ ದ್ರಕ್ಷ್ಯಸಿ ಮಾಂ ಕೃಷ್ಣ ನಿಹತಂ ಸವ್ಯಸಾಚಿನಾ।
05139046c ಪುನಶ್ಚಿತಿಸ್ತದಾ ಚಾಸ್ಯ ಯಜ್ಞಾಸ್ಯಾಥ ಭವಿಷ್ಯತಿ।।
ಕೃಷ್ಣ! ಅಂದು ಧಾರ್ತರಾಷ್ಟ್ರನನ್ನು ಸಂತೋಷಪಡಿಸಲು, ಇಂದು ಆ ಕೆಲಸಕ್ಕೆ ನಾನು ಪಶ್ಚಾತ್ತಾಪ ಪಡುತ್ತಿರುವ, ಪಾಂಡವರಿಗಾಡಿದ ಕಟುಕಾದ ಮಾತುಗಳಿಗೆ ಸವ್ಯಸಾಚಿಯು ನನ್ನನ್ನು ತುಂಡರಿಸುವುದನ್ನು ನೀನು ನೋಡಿದಾಗ ಅದು ಈ ಯಜ್ಞದ ಪುನಶ್ಚಿತಿಯಾಗುತ್ತದೆ.
05139047a ದುಃಶಾಸನಸ್ಯ ರುಧಿರಂ ಯದಾ ಪಾಸ್ಯತಿ ಪಾಂಡವಃ।
05139047c ಆನರ್ದಂ ನರ್ದತಃ ಸಮ್ಯಕ್ತದಾ ಸುತ್ಯಂ ಭವಿಷ್ಯತಿ।।
ಪಾಂಡವನು ಜೋರಾಗಿ ಘರ್ಜಿಸಿ ದುಃಶಾಸನನ ರುಧಿರವನ್ನು ಕುಡಿಯುವಾಗ ಅದು ಇದರ ಸುತ್ಯವಾಗುತ್ತದೆ.
05139048a ಯದಾ ದ್ರೋಣಂ ಚ ಭೀಷ್ಮಂ ಚ ಪಾಂಚಾಲ್ಯೌ ಪಾತಯಿಷ್ಯತಃ।
05139048c ತದಾ ಯಜ್ಞಾವಸಾನಂ ತದ್ಭವಿಷ್ಯತಿ ಜನಾರ್ದನ।।
ಜನಾರ್ದನ! ಪಾಂಚಾಲರಿಬ್ಬರೂ ದ್ರೋಣ-ಭೀಷ್ಮರನ್ನು ಕೆಳಗುರುಳಿಸಿದಾಗ ಅದು ಯಜ್ಞದ ಅವಸಾನವಾಗುತ್ತದೆ.
05139049a ದುರ್ಯೋಧನಂ ಯದಾ ಹಂತಾ ಭೀಮಸೇನೋ ಮಹಾಬಲಃ।
05139049c ತದಾ ಸಮಾಪ್ಸ್ಯತೇ ಯಜ್ಞೋ ಧಾರ್ತರಾಷ್ಟ್ರಸ್ಯ ಮಾಧವ।।
ಮಾಧವ! ಮಹಾಬಲ ಭೀಮಸೇನನು ದುರ್ಯೋಧನನನ್ನು ಕೊಂದಾಗ ಧಾರ್ತರಾಷ್ಟ್ರನ ಈ ಯಜ್ಞವು ಸಮಾಪ್ತವಾಗುತ್ತದೆ.
05139050a ಸ್ನುಷಾಶ್ಚ ಪ್ರಸ್ನುಷಾಶ್ಚೈವ ಧೃತರಾಷ್ಟ್ರಸ್ಯ ಸಂಗತಾಃ।
05139050c ಹತೇಶ್ವರಾ ಹತಸುತಾ ಹತನಾಥಾಶ್ಚ ಕೇಶವ।।
05139051a ಗಾಂಧಾರ್ಯಾ ಸಹ ರೋದಂತ್ಯಃ ಶ್ವಗೃಧ್ರಕುರರಾಕುಲೇ।
05139051c ಸ ಯಜ್ಞೇಽಸ್ಮಿನ್ನವಭೃಥೋ ಭವಿಷ್ಯತಿ ಜನಾರ್ದನ।।
ಕೇಶವ! ಜನಾರ್ದನ! ಸೊಸೆಯಂದಿರು ಮತ್ತು ಮಕ್ಕಳ ಸೊಸೆಯಂದಿರು ಧೃತರಾಷ್ಟ್ರನನ್ನು ಸೇರಿ ಹತೇಶ್ವರರಾಗಿ, ಹತಸುತರಾಗಿ, ಹತನಾಥರಾಗಿ, ಗಾಂಧಾರಿಯೊಂದಿಗೆ ರೋದಿಸುತ್ತಾ ನಾಯಿ-ಹದ್ದು-ನರಿಗಳಿಂದ ಕೂಡಿದ ಯಜ್ಞಸ್ಥಳದಲ್ಲಿ ಸೇರಿದಾಗ ಅದು ಅವಭೃತವಾಗುತ್ತದೆ.
05139052a ವಿದ್ಯಾವೃದ್ಧಾ ವಯೋವೃದ್ಧಾಃ ಕ್ಷತ್ರಿಯಾಃ ಕ್ಷತ್ರಿಯರ್ಷಭ।
05139052c ವೃಥಾಮೃತ್ಯುಂ ನ ಕುರ್ವೀರಂಸ್ತ್ವತ್ಕೃತೇ ಮಧುಸೂದನ।।
ಕ್ಷತ್ರಿಯರ್ಷಭ! ಮಧುಸೂದನ! ವಿದ್ಯಾವೃದ್ಧರಾದ, ವಯೋವೃದ್ಧರಾದ ಈ ಕ್ಷತ್ರಿಯರು ನಿನ್ನಿಂದಾಗಿ ಕುರ್ವೀರರಾಗಿ ವೃಥಾ ಮೃತ್ಯುವನ್ನು ಹೊಂದದಂತಾಗಲಿ.
05139053a ಶಸ್ತ್ರೇಣ ನಿಧನಂ ಗಚ್ಚೇತ್ಸಮೃದ್ಧಂ ಕ್ಷತ್ರಮಂಡಲಂ।
05139053c ಕುರುಕ್ಷೇತ್ರೇ ಪುಣ್ಯತಮೇ ತ್ರೈಲೋಕ್ಯಸ್ಯಾಪಿ ಕೇಶವ।।
ಕೇಶವ! ಮೂರುಲೋಕಗಳಲ್ಲಿಯೂ ಪುಣ್ಯತಮವಾಗಿರುವ ಕುರುಕ್ಷೇತ್ರದಲ್ಲಿ ಸಮೃದ್ಧ ಕ್ಷತ್ರಮಂಡಲವು ಶಸ್ತ್ರಗಳ ಮೂಲಕ ನಿಧನ ಹೊಂದಲಿ.
05139054a ತದತ್ರ ಪುಂಡರೀಕಾಕ್ಷ ವಿಧತ್ಸ್ವ ಯದಭೀಪ್ಸಿತಂ।
05139054c ಯಥಾ ಕಾರ್ತ್ಸ್ನ್ಯೆನ ವಾರ್ಷ್ಣೇಯ ಕ್ಷತ್ರಂ ಸ್ವರ್ಗಮವಾಪ್ನುಯಾತ್।।
ಪುಂಡರೀಕಾಕ್ಷ! ವಾರ್ಷ್ಣೇಯ! ಸಂಪೂರ್ಣವಾಗಿ ಕ್ಷತ್ರಿಯರು ಸ್ವರ್ಗವನ್ನು ಪಡೆಯುವಂತೆ ಬಯಸಿ ಅದರಂತೆ ಮಾಡು!
05139055a ಯಾವತ್ಸ್ಥಾಸ್ಯಂತಿ ಗಿರಯಃ ಸರಿತಶ್ಚ ಜನಾರ್ದನ।
05139055c ತಾವತ್ಕೀರ್ತಿಭವಃ ಶಬ್ದಃ ಶಾಶ್ವತೋಽಯಂ ಭವಿಷ್ಯತಿ।।
ಜನಾರ್ದನ! ಎಲ್ಲಿಯವರೆಗೆ ಗಿರಿಗಳು ನಿಂತಿರುತ್ತವೆಯೋ, ನದಿಗಳು ಹರಿಯುತ್ತಿರುತ್ತವೆಯೋ ಅಲ್ಲಿಯವರೆಗೆ ಈ ಯುದ್ಧದ ಶಬ್ಧದ ಕೀರ್ತಿಯು ಕೇಳಿಬರುತ್ತದೆ. ಶಾಶ್ವತವಾಗಿರುತ್ತದೆ.
05139056a ಬ್ರಾಹ್ಮಣಾಃ ಕಥಯಿಷ್ಯಂತಿ ಮಹಾಭಾರತಮಾಹವಂ।
05139056c ಸಮಾಗಮೇಷು ವಾರ್ಷ್ಣೇಯ ಕ್ಷತ್ರಿಯಾಣಾಂ ಯಶೋಧರಂ।।
ವಾರ್ಷ್ಣೇಯ! ಕ್ಷತ್ರಿಯರ ಯಶಸ್ಸನ್ನು ಹೆಚ್ಚಿಸುವ ಈ ಮಹಾಭಾರತ ಯುದ್ಧವನ್ನು ಬ್ರಾಹ್ಮಣರು ಸಮಾಗಮಗಳಲ್ಲಿ ಹೇಳುತ್ತಿರುತ್ತಾರೆ.
05139057a ಸಮುಪಾನಯ ಕೌಂತೇಯಂ ಯುದ್ಧಾಯ ಮಮ ಕೇಶವ।
05139057c ಮಂತ್ರಸಂವರಣಂ ಕುರ್ವನ್ನಿತ್ಯಮೇವ ಪರಂತಪ।।
ಕೇಶವ! ಪರಂತಪ! ಕೌಂತೇಯನನ್ನು ಯುದ್ಧಕ್ಕೆ ಕರೆದುಕೊಂಡು ಬಾ. ಈ ಮಾತುಕತೆಯನ್ನು ಗೋಪನೀಯವಾಗಿರಿಸು.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಕರ್ಣವಿವಾದ ಪರ್ವಣಿ ಕರ್ಣವಾಕ್ಯೇ ಏಕೋನಚತ್ವಾರಿಂಶದಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಕರ್ಣವಿವಾದ ಪರ್ವದಲ್ಲಿ ಕರ್ಣವಾಕ್ಯ ಎನ್ನುವ ನೂರಾಮೂವತ್ತೊಂಭತ್ತನೆಯ ಅಧ್ಯಾಯವು.