138 ಶ್ರೀಕೃಷ್ಣವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಕರ್ಣ‌ವಿವಾದ ಪರ್ವ

ಅಧ್ಯಾಯ 138

ಸಾರ

ಕೃಷ್ಣನು ಕರ್ಣನಿಗೆ ಏನು ಹೇಳಿದನೆಂದು ಧೃತರಾಷ್ಟ್ರನು ಕೇಳಲು ಸಂಜಯನು ಅವನಿಗೆ ಕೃಷ್ಣ-ಕರ್ಣರ ಸಂಭಾಷಣೆಯನ್ನು ತಿಳಿಸಿದುದು (1-5). ಕೃಷ್ಣನು ಕರ್ಣನಿಗೆ ಅವನು ಕುಂತಿಯ ಮಗನೆಂದೂ, ಪಾಂಡವರೊಂದಿಗೆ ಸೇರಿ ರಾಜ್ಯವಾಳೆಂದೂ ಹೇಳುವುದು (6-28).

05138001 ಧೃತರಾಷ್ಟ್ರ ಉವಾಚ।
05138001a ರಾಜಪುತ್ರೈಃ ಪರಿವೃತಸ್ತಥಾಮಾತ್ಯೈಶ್ಚ ಸಂಜಯ।
05138001c ಉಪಾರೋಪ್ಯ ರಥೇ ಕರ್ಣಂ ನಿರ್ಯಾತೋ ಮಧುಸೂದನಃ।।
05138002a ಕಿಮಬ್ರವೀದ್ರಥೋಪಸ್ಥೇ ರಾಧೇಯಂ ಪರವೀರಹಾ।
05138002c ಕಾನಿ ಸಾಂತ್ವಾನಿ ಗೋವಿಂದಃ ಸೂತಪುತ್ರೇ ಪ್ರಯುಕ್ತವಾನ್।।

ಧೃತರಾಷ್ಟ್ರನು ಹೇಳಿದನು: “ಸಂಜಯ! ರಾಜಪುತ್ರರಿಂದ ಮತ್ತು ಅಮಾತ್ಯರಿಂದ ಪರಿವೃತನಾಗಿ ರಥದಲ್ಲಿ ಕರ್ಣನನ್ನು ಏರಿಸಿಕೊಂಡು ಹೊರಟ ಮಧುಸೂದನನು ರಥದಲ್ಲಿ ಕುಳಿತಿದ್ದ ಪರವೀರಹ ರಾಧೇಯನಿಗೆ ಏನು ಹೇಳಿದನು? ಗೋವಿಂದನು ಸೂತಪುತ್ರನಿಗೆ ಸಾಂತ್ವನದ ಯಾವ ಮಾತುಗಳನ್ನಾಡಿದನು?

05138003a ಓಘಮೇಘಸ್ವನಃ ಕಾಲೇ ಯತ್ಕೃಷ್ಣಃ ಕರ್ಣಮಬ್ರವೀತ್।
05138003c ಮೃದು ವಾ ಯದಿ ವಾ ತೀಕ್ಷ್ಣಂ ತನ್ಮಮಾಚಕ್ಷ್ವ ಸಂಜಯ।।

ಸಂಜಯ! ದೊಡ್ಡ ಅಲೆಯಂತೆ ಅಥವಾ ಕಪ್ಪು ಮೋಡದಂತೆ ಧ್ವನಿಯುಳ್ಳ ಕೃಷ್ಣನು ಕರ್ಣನಿಗೆ, ಮೃದುವಾಗಿರಲಿ ಅಥವಾ ಕಠೋರವಾಗಿರಲಿ, ಏನು ಹೇಳಿದ ಎನ್ನುವುದನ್ನು ನನಗೆ ಹೇಳು.”

05138004 ಸಂಜಯ ಉವಾಚ।
05138004a ಆನುಪೂರ್ವ್ಯೇಣ ವಾಕ್ಯಾನಿ ಶ್ಲಕ್ಷ್ಣಾನಿ ಚ ಮೃದೂನಿ ಚ।
05138004c ಪ್ರಿಯಾಣಿ ಧರ್ಮಯುಕ್ತಾನಿ ಸತ್ಯಾನಿ ಚ ಹಿತಾನಿ ಚ।।
05138005a ಹೃದಯಗ್ರಹಣೀಯಾನಿ ರಾಧೇಯಂ ಮಧುಸೂದನಃ।
05138005c ಯಾನ್ಯಬ್ರವೀದಮೇಯಾತ್ಮಾ ತಾನಿ ಮೇ ಶೃಣು ಭಾರತ।।

ಸಂಜಯನು ಹೇಳಿದನು: “ಭಾರತ! ಆ ಸಂಭಾಷಣೆಯಲ್ಲಿ ಅಮೇಯಾತ್ಮ ಮಧುಸೂದನನು ರಾಧೇಯನಿಗೆ ಹೇಳಿದ ನಯವಾದ, ದಯೆಯಿಂದ ಕೂಡಿದ, ಪ್ರಿಯವಾದ, ಧರ್ಮಯುಕ್ತವಾದ, ಸತ್ಯವೂ ಹಿತವೂ ಆದ, ಹೃದಯದಲ್ಲಿ ಹಿಡಿದಿಟ್ಟುಕೊಳ್ಳಬೇಕಾದಂತಹ ಮಾತುಗಳನ್ನು ನನ್ನಿಂದ ಕೇಳು1.

05138006 ವಾಸುದೇವ ಉವಾಚ।
05138006a ಉಪಾಸಿತಾಸ್ತೇ ರಾಧೇಯ ಬ್ರಾಹ್ಮಣಾ ವೇದಪಾರಗಾಃ।
05138006c ತತ್ತ್ವಾರ್ಥಂ ಪರಿಪೃಷ್ಟಾಶ್ಚ ನಿಯತೇನಾನಸೂಯಯಾ।।

ವಾಸುದೇವನು ಹೇಳಿದನು: “ರಾಧೇಯ! ವೇದಪಾರಂಗತ ಬ್ರಾಹ್ಮಣರನ್ನು ನೀನು ಉಪಾಸಿಸಿದ್ದೀಯೆ. ವಿನಯದಿಂದ, ಅನಸೂಯನಾಗಿ ಅವುಗಳ ಅರ್ಥವನ್ನು ಕೇಳಿ ತಿಳಿದುಕೊಂಡಿರುವೆ.

05138007a ತ್ವಮೇವ ಕರ್ಣ ಜಾನಾಸಿ ವೇದವಾದಾನ್ಸನಾತನಾನ್।
05138007c ತ್ವಂ ಹ್ಯೇವ ಧರ್ಮಶಾಸ್ತ್ರೇಷು ಸೂಕ್ಷ್ಮೇಷು ಪರಿನಿಷ್ಠಿತಃ।।

ಕರ್ಣ! ಸನಾತನವಾದ ವೇದಗಳನ್ನೂ ನೀನು ಅರಿತಿದ್ದೀಯೆ. ನೀನು ಧರ್ಮಶಾಸ್ತ್ರಗಳ ಸೂಕ್ಷ್ಮತೆಗಳಲ್ಲಿಯೂ ಪಳಗಿದ್ದೀಯೆ.

05138008a ಕಾನೀನಶ್ಚ ಸಹೋಢಶ್ಚ ಕನ್ಯಾಯಾಂ ಯಶ್ಚ ಜಾಯತೇ।
05138008c ವೋಢಾರಂ ಪಿತರಂ ತಸ್ಯ ಪ್ರಾಹುಃ ಶಾಸ್ತ್ರವಿದೋ ಜನಾಃ।।

ಮದುವೆಯ ಮೊದಲು ಕನ್ಯೆಗೆ ಹುಟ್ಟಿದವನು ಮದುವೆಯಾದ ಅವಳ ಗಂಡನಿಗೆ ಹುಟ್ಟಿದ ಮಕ್ಕಳಿಗೆ ಸಮನೆಂದು ಶಾಸ್ತ್ರವನ್ನು ತಿಳಿದ ಜನರು ಹೇಳುತ್ತಾರೆ.

05138009a ಸೋಽಸಿ ಕರ್ಣ ತಥಾ ಜಾತಃ ಪಾಂಡೋಃ ಪುತ್ರೋಽಸಿ ಧರ್ಮತಃ।
05138009c ನಿಗ್ರಹಾದ್ಧರ್ಮಶಾಸ್ತ್ರಾಣಾಮೇಹಿ ರಾಜಾ ಭವಿಷ್ಯಸಿ।।

ಕರ್ಣ! ಹಾಗೆ ಹುಟ್ಟಿದ ನೀನೂ ಕೂಡ ಧರ್ಮತಃ ಪಾಂಡುವಿನ ಮಗನಾಗಿದ್ದೀಯೆ. ಧರ್ಮಶಾಸ್ತ್ರಗಳ ಕಟ್ಟುಪಾಡುಗಳಂತೆ ಬಾ! ರಾಜನಾಗುವೆಯಂತೆ!

05138010a ಪಿತೃಪಕ್ಷೇ ಹಿ ತೇ ಪಾರ್ಥಾ ಮಾತೃಪಕ್ಷೇ ಚ ವೃಷ್ಣಯಃ।
05138010c ದ್ವೌ ಪಕ್ಷಾವಭಿಜಾನೀಹಿ ತ್ವಮೇತೌ ಪುರುಷರ್ಷಭ।।

ತಂದೆಯ ಕಡೆಯಿಂದ ಪಾರ್ಥರು ಮತ್ತು ತಾಯಿಯ ಕಡೆಯಿಂದ ವೃಷ್ಣಿಗಳು. ಪುರುಷರ್ಷಭ! ಇವರಿಬ್ಬರೂ ನಿನ್ನವರೇ ಎನ್ನುವುದನ್ನು ತಿಳಿದುಕೋ!

05138011a ಮಯಾ ಸಾರ್ಧಮಿತೋ ಯಾತಮದ್ಯ ತ್ವಾಂ ತಾತ ಪಾಂಡವಾಃ।
05138011c ಅಭಿಜಾನಂತು ಕೌಂತೇಯಂ ಪೂರ್ವಜಾತಂ ಯುಧಿಷ್ಠಿರಾತ್।।

ಅಯ್ಯಾ! ನನ್ನ ಜೊತೆ ಇಂದು ಬಾ! ಯುಧಿಷ್ಠಿರನ ಹಿರಿಯ ಕೌಂತೇಯನೆಂದು ಪಾಂಡವರು ನಿನ್ನನ್ನು ಗುರುತಿಸಲಿ.

05138012a ಪಾದೌ ತವ ಗ್ರಹೀಷ್ಯಂತಿ ಭ್ರಾತರಃ ಪಂಚ ಪಾಂಡವಾಃ।
05138012c ದ್ರೌಪದೇಯಾಸ್ತಥಾ ಪಂಚ ಸೌಭದ್ರಶ್ಚಾಪರಾಜಿತಃ।।

ಐವರು ಪಾಂಡವ ಸಹೋದರರು, ಐವರು ದ್ರೌಪದಿಯ ಮಕ್ಕಳು ಮತ್ತು ಅಪರಾಜಿತ ಸೌಭದ್ರಿಯು ನಿನ್ನ ಪಾದಗಳನ್ನು ಹಿಡಿಯುತ್ತಾರೆ.

05138013a ರಾಜಾನೋ ರಾಜಪುತ್ರಾಶ್ಚ ಪಾಂಡವಾರ್ಥೇ ಸಮಾಗತಾಃ।
05138013c ಪಾದೌ ತವ ಗ್ರಹೀಷ್ಯಂತಿ ಸರ್ವೇ ಚಾಂಧಕವೃಷ್ಣಯಃ।।

ಪಾಂಡವರಿಗಾಗಿ ಸೇರಿರುವ ಎಲ್ಲ ಅಂಧಕ-ವೃಷ್ಣಿಯರು, ರಾಜರು, ರಾಜಪುತ್ರರು ನಿನ್ನ ಪಾದಗಳನ್ನು ಹಿಡಿಯುತ್ತಾರೆ.

05138014a ಹಿರಣ್ಮಯಾಂಶ್ಚ ತೇ ಕುಂಭಾನ್ರಾತಾನ್ಪಾರ್ಥಿವಾಂಸ್ತಥಾ।
05138014c ಓಷಧ್ಯಃ ಸರ್ವಬೀಜಾನಿ ಸರ್ವರತ್ನಾನಿ ವೀರುಧಃ।।
05138015a ರಾಜನ್ಯಾ ರಾಜಕನ್ಯಾಶ್ಚಾಪ್ಯಾನಯಂತ್ವಭಿಷೇಚನಂ।
05138015c ಷಷ್ಠೇ ಚ ತ್ವಾಂ ತಥಾ ಕಾಲೇ ದ್ರೌಪದ್ಯುಪಗಮಿಷ್ಯತಿ।।

ಪಾರ್ಥಿವರು, ರಾಜರು, ರಾಜಕನ್ಯೆಯರು ಬಂಗಾರದ ಮತ್ತು ರಜತ ಕಲಶಗಳಲ್ಲಿ ಔಷಧಿ, ಸರ್ವಬೀಜಗಳು, ಸರ್ವರತ್ನಗಳನ್ನು, ಗಿಡಮೂಲಿಕೆಗಳನ್ನು ತಂದು ನಿನ್ನನ್ನು ಅಭಿಷೇಕಿಸುತ್ತಾರೆ. ಸಮಯ ಬಂದಾಗ ದ್ರೌಪದಿಯೂ ಕೂಡ ಆರನೆಯವನಾಗಿ ನಿನ್ನನ್ನು ಸೇರುತ್ತಾಳೆ.

05138016a ಅದ್ಯ ತ್ವಾಮಭಿಷಿಂಚಂತು ಚಾತುರ್ವೈದ್ಯಾ ದ್ವಿಜಾತಯಃ।
05138016c ಪುರೋಹಿತಃ ಪಾಂಡವಾನಾಂ ವ್ಯಾಘ್ರಚರ್ಮಣ್ಯವಸ್ಥಿತಂ।।

ಇಂದು ಚಾತುರ್ವೇದಗಳನ್ನು ತಿಳಿದಿರುವ ಬ್ರಾಹ್ಮಣವರ್ಗ ಮತ್ತು ಪಾಂಡವರ ಪುರೋಹಿತನು ನಿನ್ನನ್ನು ವ್ಯಾಘ್ರಚರ್ಮದ ಮೇಲೆ ಕುಳ್ಳಿರಿಸಿ ಅಭಿಷೇಕಿಸುತ್ತಾರೆ.

05138017a ತಥೈವ ಭ್ರಾತರಃ ಪಂಚ ಪಾಂಡವಾಃ ಪುರುಷರ್ಷಭಾಃ।
05138017c ದ್ರೌಪದೇಯಾಸ್ತಥಾ ಪಂಚ ಪಾಂಚಾಲಾಶ್ಚೇದಯಸ್ತಥಾ।।
05138018a ಅಹಂ ಚ ತ್ವಾಭಿಷೇಕ್ಷ್ಯಾಮಿ ರಾಜಾನಂ ಪೃಥಿವೀಪತಿಂ।
05138018c ಯುವರಾಜೋಽಸ್ತು ತೇ ರಾಜಾ ಕುಂತೀಪುತ್ರೋ ಯುಧಿಷ್ಠಿರಃ।।

ಹಾಗೆಯೇ ಆ ಪುರುಷರ್ಷಭ ಸಹೋದರ ಪಂಚ ಪಾಂಡವರು, ಐವರು ದ್ರೌಪದೇಯರು, ಪಾಂಚಾಲ-ಚೇದಿಯರು ಮತ್ತು ನಾನೂ ಕೂಡ ನಿನ್ನನ್ನು ಪೃಥಿವೀಪತಿ ರಾಜನಾಗಿ ಅಭಿಷೇಕಿಸುತ್ತೇವೆ. ರಾಜನಾದ ನಿನಗೆ ಕುಂತೀಪುತ್ರ ಯುಧಿಷ್ಠಿರನು ಯುವರಾಜನಾಗುತ್ತಾನೆ.

05138019a ಗೃಹೀತ್ವಾ ವ್ಯಜನಂ ಶ್ವೇತಂ ಧರ್ಮಾತ್ಮಾ ಸಂಶಿತವ್ರತಃ।
05138019c ಉಪಾನ್ವಾರೋಹತು ರಥಂ ಕುಂತೀಪುತ್ರೋ ಯುಧಿಷ್ಠಿರಃ।।

ಧರ್ಮಾತ್ಮ ಸಂಶಿತವ್ರತ ಕುಂತೀಪುತ್ರ ಯುಧಿಷ್ಠಿರನು ನಿನ್ನ ಮೇಲೆ ಶ್ವೇತವ್ಯಾಜಿನವನ್ನು ಹಿಡಿದು ನಿನ್ನ ರಥದಲ್ಲಿ ನಿಲ್ಲುತ್ತಾನೆ.

05138020a ಚತ್ರಂ ಚ ತೇ ಮಹಚ್ಚ್ವೇತಂ ಭೀಮಸೇನೋ ಮಹಾಬಲಃ।
05138020c ಅಭಿಷಿಕ್ತಸ್ಯ ಕೌಂತೇಯ ಕೌಂತೇಯೋ ಧಾರಯಿಷ್ಯತಿ।।

ಅಭಿಷಿಕ್ತನಾದ ಕೌಂತೇಯ ನಿನಗೆ ಕೌಂತೇಯ ಮಹಾಬಲಿ ಭೀಮಸೇನನು ದೊಡ್ಡ ಶ್ವೇತಚತ್ರವನ್ನು ಹಿಡಿಯುತ್ತಾನೆ.

05138021a ಕಿಂಕಿಣೀಶತನಿರ್ಘೋಷಂ ವೈಯಾಘ್ರಪರಿವಾರಣಂ।
05138021c ರಥಂ ಶ್ವೇತಹಯೈರ್ಯುಕ್ತಮರ್ಜುನೋ ವಾಹಯಿಷ್ಯತಿ।।

ನೂರಾರು ಗಂಟೆಗಳ ಧ್ವನಿಗಳಿಂದ ಕೂಡಿದ, ವೈಯಾಘ್ರಚರ್ಮವನ್ನು ಹೊದೆಸಿದ, ಬಿಳಿಯ ಕುದುರೆಗಳನ್ನು ಕಟ್ಟಿರುವ ರಥದಲ್ಲಿ ನಿನ್ನನ್ನು ಅರ್ಜುನನು ಕರೆದೊಯ್ಯುತ್ತಾನೆ.

05138022a ಅಭಿಮನ್ಯುಶ್ಚ ತೇ ನಿತ್ಯಂ ಪ್ರತ್ಯಾಸನ್ನೋ ಭವಿಷ್ಯತಿ।
05138022c ನಕುಲಃ ಸಹದೇವಶ್ಚ ದ್ರೌಪದೇಯಾಶ್ಚ ಪಂಚ ಯೇ।।

ಅಭಿಮನ್ಯು, ನಕುಲ, ಸಹದೇವ, ಐವರು ದ್ರೌಪದೇಯರು ನಿತ್ಯವೂ ನಿನ್ನ ಸೇವೆಮಾಡುತ್ತಾರೆ.

05138023a ಪಾಂಚಾಲಾಸ್ತ್ವಾನುಯಾಸ್ಯಂತಿ ಶಿಖಂಡೀ ಚ ಮಹಾರಥಃ।
05138023c ಅಹಂ ಚ ತ್ವಾನುಯಾಸ್ಯಾಮಿ ಸರ್ವೇ ಚಾಂಧಕವೃಷ್ಣಯಃ।
05138023e ದಾಶಾರ್ಹಾಃ ಪರಿವಾರಾಸ್ತೇ ದಾಶಾರ್ಣಾಶ್ಚ ವಿಶಾಂ ಪತೇ।।

ವಿಶಾಂಪತೇ! ಪಾಂಚಾಲರು, ಮಹಾರಥಿ ಶಿಖಂಡಿ, ಮತ್ತು ನಾನೂ ಕೂಡ ನಿನ್ನನ್ನು ಅನುಸರಿಸುತ್ತೇವೆ. ಎಲ್ಲ ಅಂಧಕ ವೃಷ್ಣಿಯರು, ದಾಶಾರ್ಹರು, ದಾಶಾರ್ಣರು ನಿನ್ನನ್ನು ಸುತ್ತುವರೆದಿರುತ್ತಾರೆ.

05138024a ಭುಂಕ್ಷ್ವ ರಾಜ್ಯಂ ಮಹಾಬಾಹೋ ಭ್ರಾತೃಭಿಃ ಸಹ ಪಾಂಡವೈಃ।
05138024c ಜಪೈರ್ಹೋಮೈಶ್ಚ ಸಂಯುಕ್ತೋ ಮಂಗಲೈಶ್ಚ ಪೃಥಗ್ವಿಧೈಃ।।

ಮಹಾಬಾಹೋ! ಪಾಂಡವ ಸಹೋದರರೊಂದಿಗೆ, ಜಪ-ಹೋಮಗಳಿಂದ ಸಂಯುಕ್ತನಾಗಿ, ಮಂಗಲ ವಿಧಗಳಿಂದ ರಾಜ್ಯವನ್ನು ಭೋಗಿಸು.

05138025a ಪುರೋಗಮಾಶ್ಚ ತೇ ಸಂತು ದ್ರವಿಡಾಃ ಸಹ ಕುಂತಲೈಃ।
05138025c ಆಂಧ್ರಾಸ್ತಾಲಚರಾಶ್ಚೈವ ಚೂಚುಪಾ ವೇಣುಪಾಸ್ತಥಾ।।

ದ್ರವಿಡರು, ಕುಂತಲರು, ಆಂಧ್ರರು, ತಾಲಚರರು, ಚೂಚುಪರು, ಮತ್ತು ವೇಣುಪರು ನಿನ್ನ ಪುರೋಗಮರಾಗುತ್ತಾರೆ.

05138026a ಸ್ತುವಂತು ತ್ವಾದ್ಯ ಬಹುಶಃ ಸ್ತುತಿಭಿಃ ಸೂತಮಾಗಧಾಃ।
05138026c ವಿಜಯಂ ವಸುಷೇಣಸ್ಯ ಘೋಷಯಂತು ಚ ಪಾಂಡವಾಃ।।

ಇಂದು ಅನೇಕ ಸೂತ-ಮಾಗಧರು ಸ್ತುತಿಗಳಿಂದ ನಿನ್ನನ್ನು ಸ್ತುತಿಸುತ್ತಾರೆ. ಪಾಂಡವರು ವಸುಷೇಣನ ವಿಜಯವನ್ನು ಘೋಷಿಸುತ್ತಾರೆ.

05138027a ಸ ತ್ವಂ ಪರಿವೃತಃ ಪಾರ್ಥೈರ್ನಕ್ಷತ್ರೈರಿವ ಚಂದ್ರಮಾಃ।
05138027c ಪ್ರಶಾಧಿ ರಾಜ್ಯಂ ಕೌಂತೇಯ ಕುಂತೀಂ ಚ ಪ್ರತಿನಂದಯ।।

ಕೌಂತೇಯ! ನಕ್ಷತ್ರಗಳಿಂದ ಚಂದ್ರಮನು ಹೇಗೋ ಹಾಗೆ ನೀನು ಪಾರ್ಥರಿಂದ ಪರಿವೃತನಾಗಿ ರಾಜ್ಯವನ್ನು ಆಳಿ ಕುಂತಿಗೂ ಆನಂದವನ್ನು ನೀಡುವೆ.

05138028a ಮಿತ್ರಾಣಿ ತೇ ಪ್ರಹೃಷ್ಯಂತು ವ್ಯಥಂತು ರಿಪವಸ್ತಥಾ।
05138028c ಸೌಭ್ರಾತ್ರಂ ಚೈವ ತೇಽದ್ಯಾಸ್ತು ಭ್ರಾತೃಭಿಃ ಸಹ ಪಾಂಡವೈಃ।।

ಸಹೋದರ ಪಾಂಡವರೊಂದಿಗಿರುವ ನಿನ್ನ ಸೌಭ್ರಾತೃತ್ವದಿಂದ ನಿನ್ನ ಮಿತ್ರರು ಹರ್ಷಪಡುತ್ತಾರೆ. ಶತ್ರುಗಳು ದುಃಖಿಸುತ್ತಾರೆ2.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಕರ್ಣ‌ವಿವಾದ ಪರ್ವಣಿ ಶ್ರೀಕೃಷ್ಣವಾಕ್ಯೇ ಅಷ್ಟತ್ರಿಂಶದಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಕರ್ಣ‌ವಿವಾದ ಪರ್ವದಲ್ಲಿ ಶ್ರೀಕೃಷ್ಣವಾಕ್ಯದಲ್ಲಿ ನೂರಾಮೂವತ್ತೆಂಟನೆಯ ಅಧ್ಯಾಯವು.


  1. ಕೃಷ್ಣ-ಕರ್ಣರ ಸಂಭಾಷಣೆಯು ಸಂಜಯನಿಗೆ ಹೇಗೆ ತಿಳಿಯಿತು? ↩︎

  2. ಕರ್ಣನು ಕುಂತಿಯ ಮಗನೆಂದು ತಿಳಿದ ಧೃತರಾಷ್ಟ್ರನು ಏನೂ ಹೇಳಲಿಲ್ಲವೇ? ಏನನ್ನೂ ಮಾಡಲಿಲ್ಲವೇ? ↩︎