137 ಭೀಷ್ಮದ್ರೋಣವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಭಗವದ್ಯಾನ ಪರ್ವ

ಅಧ್ಯಾಯ 137

ಸಾರ

ದುರ್ಯೋಧನನು ಬೇಸರಗೊಂಡಿದ್ದುದನ್ನು ಕಂಡು ಭೀಷ್ಮ-ದ್ರೋಣರು ಪುನಃ ಅವನಿಗೆ ಪಾಂಡವರೊಡನೆ ಹೋರಾಡಿ ಗೆಲ್ಲುವುದು ಕಷ್ಟವೆಂದೂ ಶಾಂತಿ ಮಾಡಿಕೊಳ್ಳೆಂದೂ ಹೇಳಿದುದು (1-22).

05137001 ವೈಶಂಪಾಯನ ಉವಾಚ।
05137001a ಏವಮುಕ್ತಸ್ತು ವಿಮನಾಸ್ತಿರ್ಯಗ್ದೃಷ್ಟಿರಧೋಮುಖಃ।
05137001c ಸಂಹತ್ಯ ಚ ಭ್ರುವೋರ್ಮಧ್ಯಂ ನ ಕಿಂ ಚಿದ್ವ್ಯಾಜಹಾರ ಹ।।

ವೈಶಂಪಾಯನನು ಹೇಳಿದನು: “ಅವರು ಹೀಗೆ ಹೇಳಲು ದುರ್ಯೋಧನನು ವಿಮನಸ್ಕನಾಗಿ, ದೃಷ್ಟಿಯನ್ನು ಕೆಳಗೆಮಾಡಿ, ಹುಬ್ಬುಗಳ ನಡುವೆ ಗಂಟುಮಾಡಿಕೊಂಡು ಚಿಂತಾಮಗ್ನನಾದನು. ಏನನ್ನೂ ಮಾತನಾಡಲಿಲ್ಲ.

05137002a ತಂ ವೈ ವಿಮನಸಂ ದೃಷ್ಟ್ವಾ ಸಂಪ್ರೇಕ್ಷ್ಯಾನ್ಯೋನ್ಯಮಂತಿಕಾತ್।
05137002c ಪುನರೇವೋತ್ತರಂ ವಾಕ್ಯಮುಕ್ತವಂತೌ ನರರ್ಷಭೌ।।

ಅವನು ಬೇಸರಗೊಂಡಿದ್ದುದನ್ನು ಕಂಡು ಆ ಇಬ್ಬರು ನರರ್ಷಭರೂ ಪರಸ್ಪರರನ್ನು ನೋಡಿ ಪುನಃ ಅವನಿಗೆ ಉತ್ತರಿಸಿ ಹೇಳಿದರು.

05137003 ಭೀಷ್ಮ ಉವಾಚ।
05137003a ಶುಶ್ರೂಷುಮನಸೂಯಂ ಚ ಬ್ರಹ್ಮಣ್ಯಂ ಸತ್ಯಸಂಗರಂ।
05137003c ಪ್ರತಿಯೋತ್ಸ್ಯಾಮಹೇ ಪಾರ್ಥಮತೋ ದುಃಖತರಂ ನು ಕಿಂ।।

ಭೀಷ್ಮನು ಹೇಳಿದನು: “ಶುಶ್ರೂಷೆ ಮಾಡುವ, ಅನಸೂಯ, ಬ್ರಹ್ಮಣ್ಯ, ಸತ್ಯಸಂಗರ ಪಾರ್ಥನೊಂದಿಗೆ ನಾವು ಹೋರಾಡಬೇಕು ಎಂದರೆ ಅದಕ್ಕಿಂತ ಹೆಚ್ಚಿನ ದುಃಖವು ಯಾವುದಿದೆ?”

05137004 ದ್ರೋಣ ಉವಾಚ।
05137004a ಅಶ್ವತ್ಥಾಮ್ನಿ ಯಥಾ ಪುತ್ರೇ ಭೂಯೋ ಮಮ ಧನಂಜಯೇ।
05137004c ಬಹುಮಾನಃ ಪರೋ ರಾಜನ್ಸಮ್ನತಿಶ್ಚ ಕಪಿಧ್ವಜೇ।।

ದ್ರೋಣನು ಹೇಳಿದನು: “ನನ್ನ ಮಗ ಅಶ್ವತ್ಥಾಮನ ಮೇಲಿರುವುದಕ್ಕಿಂತ ಹೆಚ್ಚು ಪ್ರೀತಿಯು ನನಗೆ ಧನಂಜಯನ ಮೇಲಿದೆ. ರಾಜನ್! ಕಪಿಧ್ವಜನ ಮೇಲೆ ನನಗೆ ಗೌರವವೂ ಇದೆ.

05137005a ತಂ ಚೇತ್ಪುತ್ರಾತ್ಪ್ರಿಯತರಂ ಪ್ರತಿಯೋತ್ಸ್ಯೇ ಧನಂಜಯಂ।
05137005c ಕ್ಷತ್ರಧರ್ಮಮನುಷ್ಠಾಯ ಧಿಗಸ್ತು ಕ್ಷತ್ರಜೀವಿಕಾಂ।।

ಕ್ಷತ್ರಧರ್ಮವನ್ನು ಅನುಸರಿಸಿರುವ ನಾನು ಮಗನಿಗಿಂತ ಪ್ರಿಯಕರನಾಗಿರುವ ಧನಂಜಯನನ್ನು ವಿರೋಧಿಸಿ ಹೋರಾಡಬೇಕಲ್ಲ! ಕ್ಷತ್ರಿಯನಾಗಿ ಜೀವಿಸುವುದಕ್ಕೆ ಧಿಕ್ಕಾರ!

05137006a ಯಸ್ಯ ಲೋಕೇ ಸಮೋ ನಾಸ್ತಿ ಕಶ್ಚಿದನ್ಯೋ ಧನುರ್ಧರಃ।
05137006c ಮತ್ಪ್ರಸಾದಾತ್ಸ ಬೀಭತ್ಸುಃ ಶ್ರೇಯಾನನ್ಯೈರ್ಧನುರ್ಧರೈಃ।।

ಲೋಕದಲ್ಲಿ ಯಾರ ಸಮನಾದ ಅನ್ಯ ಧನುರ್ಧರನಿಲ್ಲವೋ ಆ ಬೀಭತ್ಸುವು ನನ್ನ ಕೃಪೆಯಿಂದ ಅನ್ಯ ಧನುರ್ಧರರಿಗಿಂತ ಯಶಸ್ವಿಯಾಗಿದ್ದಾನೆ.

05137007a ಮಿತ್ರಧ್ರುಗ್ದುಷ್ಟಭಾವಶ್ಚ ನಾಸ್ತಿಕೋಽಥಾನೃಜುಃ ಶಠಃ।
05137007c ನ ಸತ್ಸು ಲಭತೇ ಪೂಜಾಂ ಯಜ್ಞೇ ಮೂರ್ಖ ಇವಾಗತಃ।।

ಮಿತ್ರದ್ರೋಹಿ, ದುಷ್ಟಭಾವನೆಯುಳ್ಳವನು, ನಾಸ್ತಿಕ, ಪ್ರಾಮಾಣಿಕನಾಗಿಲ್ಲದಿರುವವನು ಮತ್ತು ಶಠನು ಯಜ್ಞಕ್ಕೆ ಬಂದಿರುವ ಮೂರ್ಖನಂತೆ ಸಂತರಲ್ಲಿ ಗೌರವವನ್ನು ಪಡೆಯುವುದಿಲ್ಲ.

05137008a ವಾರ್ಯಮಾಣೋಽಪಿ ಪಾಪೇಭ್ಯಃ ಪಾಪಾತ್ಮಾ ಪಾಪಮಿಚ್ಚತಿ।
05137008c ಚೋದ್ಯಮಾನೋಽಪಿ ಪಾಪೇನ ಶುಭಾತ್ಮಾ ಶುಭಮಿಚ್ಚತಿ।।

ತಡೆಯಲ್ಪಟ್ಟರೂ ಪಾಪಾತ್ಮ ಪಾಪಿಗಳು ಪಾಪವನ್ನು ಮಾಡಲು ಇಚ್ಛಿಸುತ್ತಾರೆ. ಪಾಪದಿಂದ ಪ್ರಚೋದಿಸಲ್ಪಟ್ಟರೂ ಶುಭಾತ್ಮರು ಶುಭವನ್ನೇ ಮಾಡಲು ಬಯಸುತ್ತಾರೆ.

05137009a ಮಿಥ್ಯೋಪಚರಿತಾ ಹ್ಯೇತೇ ವರ್ತಮಾನಾ ಹ್ಯನು ಪ್ರಿಯೇ।
05137009c ಅಹಿತತ್ವಾಯ ಕಲ್ಪಂತೇ ದೋಷಾ ಭರತಸತ್ತಮ।।

ಭರತಸತ್ತಮ! ಮೋಸಕ್ಕೊಳಗಾದರೂ ಅವರು ಪ್ರಿಯವಾಗಿ ನಡೆದುಕೊಳ್ಳುತ್ತಾರೆ. ಆದರೆ ನಿನ್ನ ಅಹಿತತ್ವವು ನಿನಗೇ ದೋಷವನ್ನು ತರುತ್ತದೆ.

05137010a ತ್ವಮುಕ್ತಃ ಕುರುವೃದ್ಧೇನ ಮಯಾ ಚ ವಿದುರೇಣ ಚ।
05137010c ವಾಸುದೇವೇನ ಚ ತಥಾ ಶ್ರೇಯೋ ನೈವಾಭಿಪದ್ಯಸೇ।।

ಕುರುವೃದ್ಧರು, ನಾನು, ಮತ್ತು ವಿದುರರು, ಹಾಗೆಯೇ ವಾಸುದೇವನೂ ನಿನಗೆ ಹೇಳಿದ್ದಾರೆ. ಆದರೂ ನಿನಗೆ ಶ್ರೇಯಸ್ಸಾದುದು ಕಾಣುತ್ತಿಲ್ಲ.

05137011a ಅಸ್ತಿ ಮೇ ಬಲಮಿತ್ಯೇವ ಸಹಸಾ ತ್ವಂ ತಿತೀರ್ಷಸಿ।
05137011c ಸಗ್ರಾಹನಕ್ರಮಕರಂ ಗಂಗಾವೇಗಮಿವೋಷ್ಣಗೇ।।

ನನ್ನಲ್ಲಿ ಬಲವಿದೆ ಎಂದು ಮೊಸಳೆ, ತಿಮಿಂಗಿಲಗಳಿಂದ ತುಂಬಿದ ಮಳೆಗಾಲದ ಗಂಗೆಯನ್ನು ಕೂಡಲೇ ದಾಟಿಬಿಡುತ್ತೇನೆ ಎನ್ನುವವನ ಹಾಗಿದ್ದೀಯೆ.

05137012a ವಾಸ ಏವ ಯಥಾ ಹಿ ತ್ವಂ ಪ್ರಾವೃಣ್ವಾನೋಽದ್ಯ ಮನ್ಯಸೇ।
05137012c ಸ್ರಜಂ ತ್ಯಕ್ತಾಮಿವ ಪ್ರಾಪ್ಯ ಲೋಭಾದ್ಯೌಧಿಷ್ಠಿರೀಂ ಶ್ರಿಯಂ।।

ಇಂದು ನೀನು ಯುಧಿಷ್ಠಿರನ ಸಂಪತ್ತನ್ನು ಪಡೆದಿದ್ದೇನೆ ಎಂದು ತಿಳಿದುಕೊಂಡಿದ್ದೀಯೆ. ಆದರೆ ನೀನು ಲೋಭದಿಂದ ಕೇವಲ ಅವನು ಬಿಸುಡಿದ ಮಾಲೆಯನ್ನು ಹಿಡಿದು ಕೊಂಡು ಅವನ ಸಂಪತ್ತು ಎಂದು ಭ್ರಮಿಸಿಕೊಂಡಿದ್ದೀಯೆ.

05137013a ದ್ರೌಪದೀಸಹಿತಂ ಪಾರ್ಥಂ ಸಾಯುಧೈರ್ಭ್ರಾತೃಭಿರ್ವೃತಂ।
05137013c ವನಸ್ಥಮಪಿ ರಾಜ್ಯಸ್ಥಃ ಪಾಂಡವಂ ಕೋಽತಿಜೀವತಿ।।

ರಾಜ್ಯವನ್ನು ಪಡೆದಿದ್ದರೂ ವನಸ್ಥನಾಗಿದ್ದ, ದ್ರೌಪದೀಸಹಿತನಾದ, ಆಯುಧ-ಭ್ರಾತೃಗಳಿಂದ ಆವೃತನಾಗಿರುವ ಪಾಂಡವನನ್ನು ಯಾರು ಅತಿಜೀವಿಸುತ್ತಾರೆ?

05137014a ನಿದೇಶೇ ಯಸ್ಯ ರಾಜಾನಃ ಸರ್ವೇ ತಿಷ್ಠಂತಿ ಕಿಂಕರಾಃ।
05137014c ತಮೈಲವಿಲಮಾಸಾದ್ಯ ಧರ್ಮರಾಜೋ ವ್ಯರಾಜತ।।

ಯಾರ ನಿರ್ದೇಶನದಂತೆ ಎಲ್ಲ ರಾಜರೂ ಕಿಂಕರರಾಗಿ ನಿಲ್ಲುತ್ತಾರೋ ಆ ಐಲವಿಲನನ್ನು ಸೇರಿ ಧರ್ಮರಾಜನು ವಿರಾಜಿಸುತ್ತಿದ್ದಾನೆ.

05137015a ಕುಬೇರಸದನಂ ಪ್ರಾಪ್ಯ ತತೋ ರತ್ನಾನ್ಯವಾಪ್ಯ ಚ।
05137015c ಸ್ಫೀತಮಾಕ್ರಮ್ಯ ತೇ ರಾಷ್ಟ್ರಂ ರಾಜ್ಯಮಿಚ್ಚಂತಿ ಪಾಂಡವಾಃ।।

ಕುಬೇರಸದನವನ್ನು ಸೇರಿ ಅಲ್ಲಿಂದ ರತ್ನಗಳನ್ನು ಪಡೆದು ಪಾಂಡವರು ಸಮೃದ್ಧವಾಗಿರುವ ನಿನ್ನ ರಾಷ್ಟ್ರವನ್ನು ಆಕ್ರಮಣ ಮಾಡಿ ರಾಜ್ಯವಾಳಲು ಬಯಸುತ್ತಾರೆ.

05137016a ದತ್ತಂ ಹುತಮಧೀತಂ ಚ ಬ್ರಾಹ್ಮಣಾಸ್ತರ್ಪಿತಾ ಧನೈಃ।
05137016c ಆವಯೋರ್ಗತಮಾಯುಶ್ಚ ಕೃತಕೃತ್ಯೌ ಚ ವಿದ್ಧಿ ನೌ।।

ನಾವು ದಾನಮಾಡಿದ್ದೇವೆ. ಆಹುತಿಗಳನ್ನು ನೀಡಿದ್ದೇವೆ. ಬ್ರಾಹ್ಮಣರನ್ನು ಧನದಿಂದ ತೃಪ್ತಿಗೊಳಿಸಿದ್ದೇವೆ. ನಮ್ಮ ಆಯುಸ್ಸನ್ನು ಬದುಕಿದ್ದೇವೆ. ಇಬ್ಬರೂ ಕೃತಕೃತ್ಯರಾಗಿದ್ದೇವೆಂದು ತಿಳಿ.

05137017a ತ್ವಂ ತು ಹಿತ್ವಾ ಸುಖಂ ರಾಜ್ಯಂ ಮಿತ್ರಾಣಿ ಚ ಧನಾನಿ ಚ।
05137017c ವಿಗ್ರಹಂ ಪಾಂಡವೈಃ ಕೃತ್ವಾ ಮಹದ್ವ್ಯಸನಮಾಪ್ಸ್ಯಸಿ।।

ಆದರೆ ನೀನು ಸುಖ, ರಾಜ್ಯ, ಮಿತ್ರರು ಮತ್ತು ಐಶ್ವರ್ಯಗಳನ್ನು ಕಡೆಗಣಿಸಿ ಪಾಂಡವರೊಂದಿಗೆ ಕಲಹ ಮಾಡಿ ಮಹಾ ವ್ಯಸನವನ್ನು ಹೊಂದುತ್ತೀಯೆ.

05137018a ದ್ರೌಪದೀ ಯಸ್ಯ ಚಾಶಾಸ್ತೇ ವಿಜಯಂ ಸತ್ಯವಾದಿನೀ।
05137018c ತಪೋಘೋರವ್ರತಾ ದೇವೀ ನ ತ್ವಂ ಜೇಷ್ಯಸಿ ಪಾಂಡವಂ।।

ಆ ಸತ್ಯವಾದಿನೀ ದೇವಿ ಘೋರತಪಸ್ವಿ ಮತ್ತು ವ್ರತನಿರತಳಾದ ದ್ರೌಪದಿಯು ಯಾರ ವಿಜಯವನ್ನು ಆಶಿಸುವಳೋ ಆ ಪಾಂಡವರನ್ನು ನೀನು ಜಯಿಸಲಾರೆ.

05137019a ಮಂತ್ರೀ ಜನಾರ್ದನೋ ಯಸ್ಯ ಭ್ರಾತಾ ಯಸ್ಯ ಧನಂಜಯಃ।
05137019c ಸರ್ವಶಸ್ತ್ರಭೃತಾಂ ಶ್ರೇಷ್ಠಂ ಕಥಂ ಜೇಷ್ಯಸಿ ಪಾಂಡವಂ।।

ಯಾರ ಮಂತ್ರಿಯು ಜನಾರ್ದನನೋ, ಯಾರ ತಮ್ಮನು ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠ ಧನಂಜಯನೋ ಆ ಪಾಂಡವನನ್ನು ನೀನು ಹೇಗೆ ಜಯಿಸಬಲ್ಲೆ?

05137020a ಸಹಾಯಾ ಬ್ರಾಹ್ಮಣಾ ಯಸ್ಯ ಧೃತಿಮಂತೋ ಜಿತೇಂದ್ರಿಯಾಃ।
05137020c ತಮುಗ್ರತಪಸಂ ವೀರಂ ಕಥಂ ಜೇಷ್ಯಸಿ ಪಾಂಡವಂ।।

ಧೃತಿಮಂತರಾದ, ಜಿತೇಂದ್ರಿಯರಾದ, ಉಗ್ರತಾಪಸಿ ಬ್ರಾಹ್ಮಣರು ಯಾರಿಗೆ ಸಹಾಯ ಮಾಡುತ್ತಿದ್ದಾರೋ ಅಂತಹ ವೀರ ಪಾಂಡವನನ್ನು ನೀನು ಹೇಗೆ ಜಯಿಸಬಲ್ಲೆ?

05137021a ಪುನರುಕ್ತಂ ಚ ವಕ್ಷ್ಯಾಮಿ ಯತ್ಕಾರ್ಯಂ ಭೂತಿಮಿಚ್ಚತಾ।
05137021c ಸುಹೃದಾ ಮಜ್ಜಮಾನೇಷು ಸುಹೃತ್ಸು ವ್ಯಸನಾರ್ಣವೇ।।

ವ್ಯಸನವೆಂಬ ಮಹಾಸಾಗರದಲ್ಲಿ ಮುಳುಗಿಹೋಗುತ್ತಿರುವ ಸ್ನೇಹಿತನಿಗೆ ಸ್ನೇಹಿತನು ಉಳಿಸಲು ಬಯಸುವವನು ಮಾಡುವವನಂತೆ ಪುನಃ ಹೇಳುತ್ತಿದ್ದೇನೆ.

05137022a ಅಲಂ ಯುದ್ಧೇನ ತೈರ್ವೀರೈಃ ಶಾಮ್ಯ ತ್ವಂ ಕುರುವೃದ್ಧಯೇ।
05137022c ಮಾ ಗಮಃ ಸಸುತಾಮಾತ್ಯಃ ಸಬಲಶ್ಚ ಪರಾಭವಂ।।

ಈ ಯುದ್ಧಮಾಡುವುದನ್ನು ನಿಲ್ಲಿಸು. ಕುರುವೃದ್ಧಿಗಾಗಿ ಆ ವೀರರೊಂದಿಗೆ ಶಾಂತಿಯನ್ನು ಮಾಡಿಕೋ. ನಿನ್ನ ಮಕ್ಕಳು, ಅಮಾತ್ಯರು, ಮತ್ತು ಸೇನೆಯೊಂದಿಗೆ ಪರಾಭವದ ಕಡೆ ಮುಂದುವರೆಯಬೇಡ!”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಭೀಷ್ಮದ್ರೋಣವಾಕ್ಯೇ ಸಪ್ತತ್ರಿಂಶದಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಭೀಷ್ಮದ್ರೋಣವಾಕ್ಯದಲ್ಲಿ ನೂರಾಮೂವತ್ತೇಳನೆಯ ಅಧ್ಯಾಯವು. ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವವು. ಇದೂವರೆಗಿನ ಒಟ್ಟು ಮಹಾಪರ್ವಗಳು-4-18, ಉಪಪರ್ವಗಳು-54/100, ಅಧ್ಯಾಯಗಳು-800/1995, ಶ್ಲೋಕಗಳು-26045/73784.