136 ಭೀಷ್ಮದ್ರೋಣವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಭಗವದ್ಯಾನ ಪರ್ವ

ಅಧ್ಯಾಯ 136

ಸಾರ

ಕುಂತಿಯ ಮಾತುಗಳನ್ನು ಕೇಳಿ ಭೀಷ್ಮ-ದ್ರೋಣರಿಬ್ಬರೂ ರಾಜ್ಯವನ್ನು ಪಡೆಯದೇ ಪಾಂಡವರು ಶಾಂತಿಮಾರ್ಗದಲ್ಲಿ ಹೋಗುವುದಿಲ್ಲವೆಂದೂ, ಯುದ್ಧದಿಂದ ಕ್ಷತ್ರಿಯರ ವಿನಾಶವು ಖಂಡಿತವೆಂದು ನಿಮಿತ್ತಗಳು ತೋರಿಸುತ್ತಿವೆಯೆಂದೂ ದುರ್ಯೋಧನನಿಗೆ ಹೇಳಿದುದು (1-26).

05136001 ವೈಶಂಪಾಯನ ಉವಾಚ।
05136001a ಕುಂತ್ಯಾಸ್ತು ವಚನಂ ಶ್ರುತ್ವಾ ಭೀಷ್ಮದ್ರೋಣೌ ಮಹಾರಥೌ।
05136001c ದುರ್ಯೋಧನಮಿದಂ ವಾಕ್ಯಮೂಚತುಃ ಶಾಸನಾತಿಗಂ।।

ವೈಶಂಪಾಯನನು ಹೇಳಿದನು: “ಕುಂತಿಯ ಮಾತುಗಳನ್ನು ಕೇಳಿ ಮಹಾರಥಿಗಳಾದ ಭೀಷ್ಮ-ದ್ರೋಣರಿಬ್ಬರೂ ನಿಯಂತ್ರಿಸಲು ಅಸಾಧ್ಯನಾದ ದುರ್ಯೋಧನನಿಗೆ ಹೇಳಿದರು.

05136002a ಶ್ರುತಂ ತೇ ಪುರುಷವ್ಯಾಘ್ರ ಕುಂತ್ಯಾಃ ಕೃಷ್ಣಸ್ಯ ಸನ್ನಿಧೌ।
05136002c ವಾಕ್ಯಮರ್ಥವದವ್ಯಗ್ರಮುಕ್ತಂ ಧರ್ಮ್ಯಮನುತ್ತಮಂ।।

“ಪುರುಷವ್ಯಾಘ್ರ! ಕೃಷ್ಣನ ಸನ್ನಿಧಿಯಲ್ಲಿ ಕುಂತಿಯು ಹೇಳಿದ ಅರ್ಥವತ್ತಾದ, ಧರ್ಮದಿಂದ ಕೂಡಿದ, ಉತ್ತಮವಾದ, ಅವ್ಯಗ್ರ ಮಾತುಗಳನ್ನು ಕೇಳಿದೆವು.

05136003a ತತ್ಕರಿಷ್ಯಂತಿ ಕೌಂತೇಯಾ ವಾಸುದೇವಸ್ಯ ಸಮ್ಮತಂ।
05136003c ನ ಹಿ ತೇ ಜಾತು ಶಾಮ್ಯೇರನ್ನೃತೇ ರಾಜ್ಯೇನ ಕೌರವ।।

ಕೌರವ! ವಾಸುದೇವನಿಗೆ ಸಮ್ಮತಿಯಿದ್ದಂತೆ ಕೌಂತೇಯರು ಮಾಡುತ್ತಾರೆ. ರಾಜ್ಯವನ್ನು ಪಡೆಯದೇ ಅವರು ಶಾಂತಿಮಾರ್ಗದಲ್ಲಿ ಹೋಗುವುದಿಲ್ಲ.

05136004a ಕ್ಲೇಶಿತಾ ಹಿ ತ್ವಯಾ ಪಾರ್ಥಾ ಧರ್ಮಪಾಶಸಿತಾಸ್ತದಾ।
05136004c ಸಭಾಯಾಂ ದ್ರೌಪದೀ ಚೈವ ತೈಶ್ಚ ತನ್ಮರ್ಷಿತಂ ತವ।।

ನೀನು ಪಾರ್ಥರಿಗೆ ಸಾಕಷ್ಟು ಕ್ಲೇಶಗಳನ್ನು ಕೊಟ್ಟಿದ್ದೀಯೆ. ಸಭೆಯಲ್ಲಿ ದ್ರೌಪದಿಯನ್ನೂ ಕಾಡಿಸಿದೆ. ಧರ್ಮಪಾಶಕ್ಕೆ ಬದ್ಧರಾಗಿದ್ದ ಅವರು ನಿನ್ನ ಅವೆಲ್ಲವನ್ನೂ ಸಹಿಸಿಕೊಂಡರು.

05136005a ಕೃತಾಸ್ತ್ರಂ ಹ್ಯರ್ಜುನಂ ಪ್ರಾಪ್ಯ ಭೀಮಂ ಚ ಕೃತನಿಶ್ರಮಂ।
05136005c ಗಾಂಡೀವಂ ಚೇಷುಧೀ ಚೈವ ರಥಂ ಚ ಧ್ವಜಮೇವ ಚ।
05136005e ಸಹಾಯಂ ವಾಸುದೇವಂ ಚ ನ ಕ್ಷಂಸ್ಯತಿ ಯುಧಿಷ್ಠಿರಃ।।

ಅಸ್ತ್ರಗಳನ್ನು ಸಂಪಾದಿಸಿದ ಅರ್ಜುನ, ಧೃಢನಿಶ್ಚಯಿ ಭೀಮ, ಗಾಂಡೀವ, ಎರಡು ಅಕ್ಷಯ ಭತ್ತಳಿಕೆಗಳು, ರಥ-ಧ್ವಜಗಳು ಮತ್ತು ವಾಸುದೇವನ ಸಹಾಯವನ್ನು ಪಡೆದಿರುವ ಯುಧಿಷ್ಠಿರ – ಇವರು ಈಗ ನಿನ್ನನ್ನು ಕ್ಷಮಿಸಲಾರರು.

05136006a ಪ್ರತ್ಯಕ್ಷಂ ತೇ ಮಹಾಬಾಹೋ ಯಥಾ ಪಾರ್ಥೇನ ಧೀಮತಾ।
05136006c ವಿರಾಟನಗರೇ ಪೂರ್ವಂ ಸರ್ವೇ ಸ್ಮ ಯುಧಿ ನಿರ್ಜಿತಾಃ।।

ಮಹಾಬಾಹೋ! ಹಿಂದೆ ವಿರಾಟನಗರದ ಯುದ್ಧದಲ್ಲಿ ಧೀಮತ ಪಾರ್ಥನು ನಮ್ಮೆಲ್ಲರನ್ನೂ ಸೋಲಿಸಿದುದನ್ನು ನೀನು ಪ್ರತ್ಯಕ್ಷವಾಗಿ ನೋಡಿದ್ದೀಯೆ.

05136007a ದಾನವಾನ್ಘೋರಕರ್ಮಾಣೋ ನಿವಾತಕವಚಾನ್ಯುಧಿ।
05136007c ರೌದ್ರಮಸ್ತ್ರಂ ಸಮಾಧಾಯ ದಗ್ಧವಾನಸ್ತ್ರವಹ್ನಿನಾ।।

ಅವನು ಯುದ್ಧದಲ್ಲಿ ಘೋರಕರ್ಮಿ ದಾನವ ನಿವಾತಕವಚರನ್ನು ರೌದ್ರಾಸ್ತ್ರವನ್ನು ಬಳಸಿ ಆ ಅಸ್ತ್ರದ ಬೆಂಕಿಯಲ್ಲಿ ಅವರನ್ನು ಸುಟ್ಟನು.

05136008a ಕರ್ಣಪ್ರಭೃತಯಶ್ಚೇಮೇ ತ್ವಂ ಚಾಪಿ ಕವಚೀ ರಥೀ।
05136008c ಮೋಕ್ಷಿತಾ ಘೋಷಯಾತ್ರಾಯಾಂ ಪರ್ಯಾಪ್ತಂ ತನ್ನಿದರ್ಶನಂ।।

ಘೋಷಯಾತ್ರೆಯ ವೇಳೆಯಲ್ಲಿ ಕವಚಗಳನ್ನು ಧರಿಸಿ ರಥವನ್ನೇರಿದ್ದ ಅವನು ನಿನ್ನನ್ನು ಮತ್ತು ಕರ್ಣನೇ ಮೊದಲಾದವರನ್ನು ಬಿಡುಗಡೆ ಮಾಡಿದುದೂ ಅದರ ನಿದರ್ಶನವೇ.

05136009a ಪ್ರಶಾಮ್ಯ ಭರತಶ್ರೇಷ್ಠ ಭ್ರಾತೃಭಿಃ ಸಹ ಪಾಂಡವೈಃ।
05136009c ರಕ್ಷೇಮಾಂ ಪೃಥಿವೀಂ ಸರ್ವಾಂ ಮೃತ್ಯೋರ್ದಂಷ್ಟ್ರಾಂತರಂ ಗತಾಂ।।

ಭರತಶ್ರೇಷ್ಠ! ಸಹೋದರ ಪಾಂಡವರೊಂದಿಗೆ ಶಾಂತನಾಗು. ಮೃತ್ಯುವಿನ ಹಲ್ಲಿಗೆ ಹೋಗುತ್ತಿರುವ ಈ ಪೃಥ್ವಿಯ ಎಲ್ಲರನ್ನೂ ರಕ್ಷಿಸು.

05136010a ಜ್ಯೇಷ್ಠೋ ಭ್ರಾತಾ ಧರ್ಮಶೀಲೋ ವತ್ಸಲಃ ಶ್ಲಕ್ಷ್ಣವಾಕ್ ಶುಚಿಃ।
05136010c ತಂ ಗಚ್ಚ ಪುರುಷವ್ಯಾಘ್ರಂ ವ್ಯಪನೀಯೇಹ ಕಿಲ್ಬಿಷಂ।।

ಈ ದೋಷವನ್ನು ಕಳೆದುಕೊಂಡು ಆ ಪುರುಷವ್ಯಾಘ್ರ, ಶುಚಿ, ಮೃದುವಾದಿ, ವತ್ಸಲ, ಧರ್ಮಶೀಲ ಹಿರಿಯಣ್ಣನ ಬಳಿ ಹೋಗು.

05136011a ದೃಷ್ಟಶ್ಚೇತ್ತ್ವಂ ಪಾಂಡವೇನ ವ್ಯಪನೀತಶರಾಸನಃ।
05136011c ಪ್ರಸನ್ನಭ್ರುಕುಟಿಃ ಶ್ರೀಮಾನ್ಕೃತಾ ಶಾಂತಿಃ ಕುಲಸ್ಯ ನಃ।।

ಧನುಸ್ಸನ್ನು ತೊರೆದು ಹುಬ್ಬು ಗಂಟಿಕ್ಕದೇ ಪ್ರಸನ್ನನಾಗಿರುವ ನಿನ್ನನ್ನು ಆ ಶ್ರೀಮಾನನು ನೋಡಿದರೂ ಅದು ಕುಲಕ್ಕೆ ಶಾಂತಿಯನ್ನು ತರುತ್ತದೆ.

05136012a ತಮಭ್ಯೇತ್ಯ ಸಹಾಮಾತ್ಯಃ ಪರಿಷ್ವಜ್ಯ ನೃಪಾತ್ಮಜಂ।
05136012c ಅಭಿವಾದಯ ರಾಜಾನಂ ಯಥಾಪೂರ್ವಮರಿಂದಮ।।

ಅರಿಂದಮ! ಅಮಾತ್ಯರೊಂದಿಗೆ ಆ ರಾಜ ನೃಪಾತ್ಮಜನ ಬಳಿಹೋಗಿ ಭ್ರಾತೃತ್ವದಿಂದ ಅವನನ್ನು ಅಪ್ಪಿಕೋ.

05136013a ಅಭಿವಾದಯಮಾನಂ ತ್ವಾಂ ಪಾಣಿಭ್ಯಾಂ ಭೀಮಪೂರ್ವಜಃ।
05136013c ಪ್ರತಿಗೃಹ್ಣಾತು ಸೌಹಾರ್ದಾತ್ಕುಂತೀಪುತ್ರೋ ಯುಧಿಷ್ಠಿರಃ।।

ಭೀಮನ ಅಣ್ಣ ಕುಂತೀಪುತ್ರ ಯುಧಿಷ್ಠಿರನು ಅಭಿವಾದಿಸುವ ನಿನ್ನನ್ನು ಸೌಹಾರ್ದತೆಯಿಂದ ತನ್ನೆರಡೂ ಕೈಗಳಿಂದ ಬರಮಾಡಿಕೊಳ್ಳುತ್ತಾನೆ.

05136014a ಸಿಂಹಸ್ಕಂಧೋರುಬಾಹುಸ್ತ್ವಾಂ ವೃತ್ತಾಯತಮಹಾಭುಜಃ।
05136014c ಪರಿಷ್ವಜತು ಬಾಹುಭ್ಯಾಂ ಭೀಮಃ ಪ್ರಹರತಾಂ ವರಃ।।

ಪ್ರಹರಿಗಳಲ್ಲಿ ಶ್ರೇಷ್ಠ ಭೀಮನು ತನ್ನ ಎರಡೂ ಕೈಗಳಿಂದ ಸಿಂಹದಂತಿರುವ ನಿನ್ನ ತೊಡೆ ಬಾಹುಗಳನ್ನು ಸುತ್ತುವರೆಸಿ ಬಳಸಿ ಆಲಂಗಿಸುತ್ತಾನೆ.

05136015a ಸಿಂಹಗ್ರೀವೋ ಗುಡಾಕೇಶಸ್ತತಸ್ತ್ವಾಂ ಪುಷ್ಕರೇಕ್ಷಣಃ।
05136015c ಅಭಿವಾದಯತಾಂ ಪಾರ್ಥಃ ಕುಂತೀಪುತ್ರೋ ಧನಂಜಯಃ।।

ಸಿಂಹಗ್ರೀವ ಗುಡಾಕೇಶ ಪಾರ್ಥ ಕುಂತೀಪುತ್ರ ಧನಂಜಯನು ಪುಷ್ಕರೇಕ್ಷಣ ನಿನ್ನನ್ನು ನಮಸ್ಕರಿಸುತ್ತಾನೆ.

05136016a ಆಶ್ವಿನೇಯೌ ನರವ್ಯಾಘ್ರೌ ರೂಪೇಣಾಪ್ರತಿಮೌ ಭುವಿ।
05136016c ತೌ ಚ ತ್ವಾಂ ಗುರುವತ್ಪ್ರೇಮ್ಣಾ ಪೂಜಯಾ ಪ್ರತ್ಯುದೀಯತಾಂ।।

ಭೂಮಿಯಲ್ಲಿಯೇ ರೂಪದಲ್ಲಿ ಅಪ್ರತಿಮರಾಗಿರುವ ಆ ಅಶ್ವಿನೀಪುತ್ರರು ನಿನ್ನನ್ನು ಗುರುವಂತೆ ಪ್ರೇಮದ ಪೂಜೆಯಿಂದ ನಿನ್ನನ್ನು ಗೌರವಿಸುತ್ತಾರೆ.

05136017a ಮುಂಚಂತ್ವಾನಂದಜಾಶ್ರೂಣಿ ದಾಶಾರ್ಹಪ್ರಮುಖಾ ನೃಪಾಃ।
05136017c ಸಂಗಚ್ಚ ಭ್ರಾತೃಭಿಃ ಸಾರ್ಧಂ ಮಾನಂ ಸಂತ್ಯಜ್ಯ ಪಾರ್ಥಿವ।।

ಪಾರ್ಥಿವ! ಅಭಿಮಾನವನ್ನು ತೊರೆದು ಭ್ರಾತೃಗಳ ಬಳಿಸಾರಿ ಅವರನ್ನು ಸೇರಿಕೋ. ಆಗ ದಾಶಾರ್ಹಪ್ರಮುಖ ನೃಪರು ಆನಂದದಿಂದ ಕಣ್ಣೀರು ಸುರಿಸುತ್ತಾರೆ.

05136018a ಪ್ರಶಾಧಿ ಪೃಥಿವೀಂ ಕೃತ್ಸ್ನಾಂ ತತಸ್ತಂ ಭ್ರಾತೃಭಿಃ ಸಹ।
05136018c ಸಮಾಲಿಂಗ್ಯ ಚ ಹರ್ಷೇಣ ನೃಪಾ ಯಾಂತು ಪರಸ್ಪರಂ।।

ಆಗ ನೀನು ಸಹೋದರರೊಂದಿಗೆ ಇಡೀ ಪೃಥ್ವಿಯನ್ನೇ ಆಳು. ಹರ್ಷದಿಂದ ಈ ನೃಪರು ಪರಸ್ಪರರನ್ನು ಆಲಂಗಿಸಿ ಹಿಂದಿರುಗಲಿ.

05136019a ಅಲಂ ಯುದ್ಧೇನ ರಾಜೇಂದ್ರ ಸುಹೃದಾಂ ಶೃಣು ಕಾರಣಂ।
05136019c ಧ್ರುವಂ ವಿನಾಶೋ ಯುದ್ಧೇ ಹಿ ಕ್ಷತ್ರಿಯಾಣಾಂ ಪ್ರದೃಶ್ಯತೇ।।

ರಾಜೇಂದ್ರ! ಈ ಯುದ್ಧವು ಬೇಡವೆನ್ನುವ ಸ್ನೇಹಿತರ ಕಾರಣವನ್ನು ಕೇಳು. ಈ ಯುದ್ಧದಿಂದ ಕ್ಷತ್ರಿಯರ ವಿನಾಶವು ಖಂಡಿತವೆಂದು ಕಾಣುತ್ತದೆ.

05136020a ಜ್ಯೋತೀಂಷಿ ಪ್ರತಿಕೂಲಾನಿ ದಾರುಣಾ ಮೃಗಪಕ್ಷಿಣಃ।
05136020c ಉತ್ಪಾತಾ ವಿವಿಧಾ ವೀರ ದೃಶ್ಯಂತೇ ಕ್ಷತ್ರನಾಶನಾಃ।।

ವೀರ! ಕ್ಷತ್ರಿಯರ ನಾಶವನ್ನು ಸೂಚಿಸುವ ಜ್ಯೋತಿಷ್ಯ, ಮೃಗಪಕ್ಷಿಗಳ ದಾರುಣ ಸಂಕೇತಗಳು, ವಿವಿಧ ಉತ್ಪಾತಗಳು ಕಾಣುತ್ತಿವೆ.

05136021a ವಿಶೇಷತ ಇಹಾಸ್ಮಾಕಂ ನಿಮಿತ್ತಾನಿ ವಿನಾಶನೇ।
05136021c ಉಲ್ಕಾಭಿರ್ಹಿ ಪ್ರದೀಪ್ತಾಭಿರ್ವಧ್ಯತೇ ಪೃತನಾ ತವ।।

ಈ ವಿನಾಶದ ನಿಮಿತ್ತಗಳು ವಿಶೇಷತಃ ನಮ್ಮಲ್ಲಿ ಕಂಡುಬರುತ್ತಿವೆ. ಉರಿಯುತ್ತಿರುವ ಉಲ್ಕೆಗಳು ನಿನ್ನ ಪ್ರದೇಶದಲ್ಲಿ ಬಿದ್ದು ಕಾಡುತ್ತಿವೆ.

05136022a ವಾಹನಾನ್ಯಪ್ರಹೃಷ್ಟಾನಿ ರುದಂತೀವ ವಿಶಾಂ ಪತೇ।
05136022c ಗೃಧ್ರಾಸ್ತೇ ಪರ್ಯುಪಾಸಂತೇ ಸೈನ್ಯಾನಿ ಚ ಸಮಂತತಃ।।

ವಿಶಾಂಪತೇ! ನಮ್ಮ ವಾಹನಗಳು ಹರ್ಷದಿಂದಿಲ್ಲ. ರೋದಿಸುತ್ತಿರುವಂತಿವೆ. ನಿನ್ನ ಸೇನೆಯ ಸುತ್ತಲೂ ಹದ್ದುಗಳು ಹಾರಾಡುತ್ತಿವೆ.

05136023a ನಗರಂ ನ ಯಥಾಪೂರ್ವಂ ತಥಾ ರಾಜನಿವೇಶನಂ।
05136023c ಶಿವಾಶ್ಚಾಶಿವನಿರ್ಘೋಷಾ ದೀಪ್ತಾಂ ಸೇವಂತಿ ವೈ ದಿಶಂ।।

ನಗರವಾಗಲೀ ಅರಮನೆಯಾಗಲೀ ಮೊದಲಿನಂತಿಲ್ಲ. ಕೆಂಪಾಗಿರುವ ನಾಲ್ಕೂ ಕಡೆಗಳಲ್ಲಿ ನರಿಗಳು ಅಮಂಗಳಕರವಾಗಿ ಕೂಗುತ್ತಾ ಓಡಾಡುತ್ತಿವೆ.

05136024a ಕುರು ವಾಕ್ಯಂ ಪಿತುರ್ಮಾತುರಸ್ಮಾಕಂ ಚ ಹಿತೈಷಿಣಾಂ।
05136024c ತ್ವಯ್ಯಾಯತ್ತೋ ಮಹಾಬಾಹೋ ಶಮೋ ವ್ಯಾಯಾಮ ಏವ ಚ।।

ಮಹಾಬಾಹೋ! ತಂದೆ ತಾಯಿಯರ ಮತ್ತು ಹಿತೈಷಿಗಳಾದ ನಮ್ಮ ಮಾತಿನಂತೆ ಮಾಡು. ಯುದ್ಧ ಮತ್ತು ಶಾಂತಿ ಎರಡೂ ನಿನ್ನ ಕೈಯಲ್ಲಿದೆ.

05136025a ನ ಚೇತ್ಕರಿಷ್ಯಸಿ ವಚಃ ಸುಹೃದಾಮರಿಕರ್ಶನ।
05136025c ತಪ್ಸ್ಯಸೇ ವಾಹಿನೀಂ ದೃಷ್ಟ್ವಾ ಪಾರ್ಥಬಾಣಪ್ರಪೀಡಿತಾಂ।।

ಅರಿಕರ್ಶನ! ಒಂದುವೇಳೆ ಸುಹೃದಯರ ಮಾತಿನಂತೆ ಮಾಡದೇ ಇದ್ದರೆ ಪಾರ್ಥನ ಬಾಣಗಳಿಂದ ಪೀಡಿತವಾದ ಸೇನೆಯನ್ನು ನೋಡಿ ಪರಿತಪಿಸುತ್ತೀಯೆ.

05136026a ಭೀಮಸ್ಯ ಚ ಮಹಾನಾದಂ ನದತಃ ಶುಷ್ಮಿಣೋ ರಣೇ।
05136026c ಶ್ರುತ್ವಾ ಸ್ಮರ್ತಾಸಿ ಮೇ ವಾಕ್ಯಂ ಗಾಂಡೀವಸ್ಯ ಚ ನಿಸ್ವನಂ।
05136026e ಯದ್ಯೇತದಪಸವ್ಯಂ ತೇ ಭವಿಷ್ಯತಿ ವಚೋ ಮಮ।।

ರಣದಲ್ಲಿ ಭೀಮನ ಅಟ್ಟಹಾಸವನ್ನು, ಗಾಂಡೀವದ ನಿಸ್ವನವನ್ನೂ ಕೇಳಿ ನಮ್ಮ ಈ ಮಾತನ್ನು ನೆನಪಿಸಿಕೊಳ್ಳುತ್ತೀಯೆ. ಈಗ ನಿನಗೆ ನಾವು ಹೇಳುವುದು ಅಸ್ವೀಕೃತವಾದರೂ ಆಗ ನಾವು ಹೇಳಿದಂತೆಯೇ ಆಗುತ್ತದೆ.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಭೀಷ್ಮದ್ರೋಣವಾಕ್ಯೇ ಷಟ್‌ತ್ರಿಂಶದಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಭೀಷ್ಮದ್ರೋಣವಾಕ್ಯದಲ್ಲಿ ನೂರಾಮೂವತ್ತಾರನೆಯ ಅಧ್ಯಾಯವು.