135 ಕುಂತೀವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಭಗವದ್ಯಾನ ಪರ್ವ

ಅಧ್ಯಾಯ 135

ಸಾರ

ಕುಂತಿಯು ಅರ್ಜುನ, ಭೀಮ ಮತ್ತು ಯಮಳರಿಗೆ ಸಂದೇಶವನ್ನಿತ್ತು ಕೃಷ್ಣನನ್ನು ಕಳುಹಿಸಿದುದು (1-22). ಕೃಷ್ಣನು ಕರ್ಣನೊಡನೆ ಸ್ವಲ್ಪಹೊತ್ತು ಮಾತನಾಡಿ ಉಪಪ್ಲವ್ಯಕ್ಕೆ ಹಿಂದಿರುಗಿದುದು (23-30).

05135001 ಕುಂತ್ಯುವಾಚ।
05135001a ಅರ್ಜುನಂ ಕೇಶವ ಬ್ರೂಯಾಸ್ತ್ವಯಿ ಜಾತೇ ಸ್ಮ ಸೂತಕೇ।
05135001c ಉಪೋಪವಿಷ್ಟಾ ನಾರೀಭಿರಾಶ್ರಮೇ ಪರಿವಾರಿತಾ।।

ಕುಂತಿಯು ಹೇಳಿದಳು: “ಕೇಶವ! ಅರ್ಜುನನಿಗೆ ಹೇಳು – “ನೀನು ಹುಟ್ಟಿದಾಗ ನಾನು ನಾರಿಯರಿಂದ ಸುತ್ತುವರೆಯಲ್ಪಟ್ಟು ಆಶ್ರಮದಲ್ಲಿ ಕುಳಿತುಕೊಂಡಿದ್ದೆ.

05135002a ಅಥಾಂತರಿಕ್ಷೇ ವಾಗಾಸೀದ್ದಿವ್ಯರೂಪಾ ಮನೋರಮಾ।
05135002c ಸಹಸ್ರಾಕ್ಷಸಮಃ ಕುಂತಿ ಭವಿಷ್ಯತ್ಯೇಷ ತೇ ಸುತಃ।।

ಆಗ ಅಂತರಿಕ್ಷದಲ್ಲಿ ದಿವ್ಯರೂಪದ ಮನೋರಮ ಮಾತಾಯಿತು. “ಕುಂತೀ! ನಿನ್ನ ಮಗನು ಸಹಸ್ರಾಕ್ಷಸಮನಾಗುತ್ತಾನೆ.

05135003a ಏಷ ಜೇಷ್ಯತಿ ಸಂಗ್ರಾಮೇ ಕುರೂನ್ಸರ್ವಾನ್ಸಮಾಗತಾನ್।
05135003c ಭೀಮಸೇನದ್ವಿತೀಯಶ್ಚ ಲೋಕಮುದ್ವರ್ತಯಿಷ್ಯತಿ।।

ಇವನು ಸಂಗ್ರಾಮದಲ್ಲಿ ಸೇರುವ ಕುರುಗಳೆಲ್ಲರನ್ನೂ ಭೀಮಸೇನನ ಸಹಾಯದಿಂದ ಜಯಿಸಿ ಲೋಕವನ್ನು ಉದ್ಧರಿಸುತ್ತಾನೆ.

05135004a ಪುತ್ರಸ್ತೇ ಪೃಥಿವೀಂ ಜೇತಾ ಯಶಶ್ಚಾಸ್ಯ ದಿವಸ್ಪೃಶಂ।
05135004c ಹತ್ವಾ ಕುರೂನ್ಗ್ರಾಮಜನ್ಯೇ ವಾಸುದೇವಸಹಾಯವಾನ್।।

ನಿನ್ನ ಮಗನು ವಾಸುದೇವನ ಸಹಾಯಕನಾಗಿ ರಣದಲ್ಲಿ ಕುರುಗಳನ್ನು ಕೊಂದು ಪೃಥ್ವಿಯನ್ನು ಗೆದ್ದು ಅವನ ಯಶಸ್ಸು ದಿವವನ್ನೂ ಮುಟ್ಟುತ್ತದೆ.

05135005a ಪಿತ್ರ್ಯಮಂಶಂ ಪ್ರನಷ್ಟಂ ಚ ಪುನರಪ್ಯುದ್ಧರಿಷ್ಯತಿ।
05135005c ಭ್ರಾತೃಭಿಃ ಸಹಿತಃ ಶ್ರೀಮಾಂಸ್ತ್ರೀನ್ಮೇಧಾನಾಹರಿಷ್ಯತಿ।।

ಕಳೆದುಹೋದ ಪಿತ್ರ್ಯಂಶವನ್ನು ಪುನಃ ಪಡೆದು ಬೆಳೆಸುತ್ತಾನೆ. ಸಹೋದರರೊಂದಿಗೆ ಈ ಶ್ರೀಮಾನನು ಮೂರು ಯಾಗಗಳನ್ನು ನೆರವೇರಿಸುತ್ತಾನೆ.’’

05135006a ತಂ ಸತ್ಯಸಂಧಂ ಬೀಭತ್ಸುಂ ಸವ್ಯಸಾಚಿನಮಚ್ಯುತ।
05135006c ಯಥಾಹಮೇವಂ ಜಾನಾಮಿ ಬಲವಂತಂ ದುರಾಸದಂ।
05135006e ತಥಾ ತದಸ್ತು ದಾಶಾರ್ಹ ಯಥಾ ವಾಗಭ್ಯಭಾಷತ।।

ಅಚ್ಯುತ! ದಾಶಾರ್ಹ! ಆ ಸತ್ಯಸಂಧ, ಬೀಭತ್ಸು, ಸವ್ಯಸಾಚಿಯು ನಾನು ತಿಳಿದಂತೆ ಬಲವಂತನೂ ದುರಾಸದನೂ ಆಗಿದ್ದರೆ ಆ ಮಾತು ಹೇಳಿದಂತೆಯೇ ಆಗುತ್ತದೆ.

05135007a ಧರ್ಮಶ್ಚೇದಸ್ತಿ ವಾರ್ಷ್ಣೇಯ ತಥಾ ಸತ್ಯಂ ಭವಿಷ್ಯತಿ।
05135007c ತ್ವಂ ಚಾಪಿ ತತ್ತಥಾ ಕೃಷ್ಣ ಸರ್ವಂ ಸಂಪಾದಯಿಷ್ಯಸಿ।।

ವಾರ್ಷ್ಣೇಯ! ಧರ್ಮವಿದೆಯಂತಾದರೆ ಇದು ಸತ್ಯವಾಗುತ್ತದೆ. ಕೃಷ್ಣ! ನೀನೂ ಕೂಡ ಹಾಗೆಯೇ ಎಲ್ಲವೂ ಆಗುವಂತೆ ಒದಗಿಸಿಕೊಡುತ್ತೀಯೆ.

05135008a ನಾಹಂ ತದಭ್ಯಸೂಯಾಮಿ ಯಥಾ ವಾಗಭ್ಯಭಾಷತ।
05135008c ನಮೋ ಧರ್ಮಾಯ ಮಹತೇ ಧರ್ಮೋ ಧಾರಯತಿ ಪ್ರಜಾಃ।।

ಆ ಮಾತು ಆಡಿದುದನ್ನು ನಾನೂ ಕೂಡ ಪ್ರಶ್ನಿಸುವುದಿಲ್ಲ. ಮಹಾ ಧರ್ಮಕ್ಕೆ ನಮಸ್ಕರಿಸುತ್ತೇನೆ. ಧರ್ಮವು ಪ್ರಜೆಗಳನ್ನು ಪಾಲಿಸುತ್ತದೆ.

05135009a ಏತದ್ಧನಂಜಯೋ ವಾಚ್ಯೋ ನಿತ್ಯೋದ್ಯುಕ್ತೋ ವೃಕೋದರಃ।
05135009c ಯದರ್ಥಂ ಕ್ಷತ್ರಿಯಾ ಸೂತೇ ತಸ್ಯ ಕಾಲೋಽಯಮಾಗತಃ।
05135009e ನ ಹಿ ವೈರಂ ಸಮಾಸಾದ್ಯ ಸೀದಂತಿ ಪುರುಷರ್ಷಭಾಃ।।

ಇದನ್ನು ಧನಂಜಯನಿಗೆ ಹೇಳು. ಇದನ್ನು ನಿತ್ಯವೂ ಉದ್ಯುಕ್ತನಾಗಿರುವ ವೃಕೋದರನಿಗೆ ಹೇಳು. “ಕ್ಷಾತ್ರಿಣಿಯು ಯಾವ ಕಾರಣಕ್ಕಾಗಿ ಹಡೆಯುತ್ತಾಳೆಯೋ ಅದರ ಕಾಲವು ಬಂದೊದಗಿದೆ. ಪುರುಷರ್ಷಭರು ವೈರವು ಎದುರಾದಾಗ ಹೇಡಿಗಳಾಗುವುದಿಲ್ಲ.”

05135010a ವಿದಿತಾ ತೇ ಸದಾ ಬುದ್ಧಿರ್ಭೀಮಸ್ಯ ನ ಸ ಶಾಮ್ಯತಿ।
05135010c ಯಾವದಂತಂ ನ ಕುರುತೇ ಶತ್ರೂಣಾಂ ಶತ್ರುಕರ್ಶನಃ।।

ನಿನಗೆ ತಿಳಿದೇ ಇದೆ. ಶತ್ರುಗಳನ್ನು ಅಂತ್ಯಗೊಳಿಸುವವರೆಗೆ ಆ ಶತ್ರುಕರ್ಶನ ಭೀಮನ ಬುದ್ಧಿಯು ಶಾಂತವಾಗುವುದಿಲ್ಲ.

05135011a ಸರ್ವಧರ್ಮವಿಶೇಷಜ್ಞಾಂ ಸ್ನುಷಾಂ ಪಾಂಡೋರ್ಮಹಾತ್ಮನಃ।
05135011c ಬ್ರೂಯಾ ಮಾಧವ ಕಲ್ಯಾಣೀಂ ಕೃಷ್ಣಾಂ ಕೃಷ್ಣ ಯಶಸ್ವಿನೀಂ।।

ಮಾಧವ! ಕೃಷ್ಣ! ಸರ್ವಧರ್ಮಗಳ ವಿಶೇಷತೆಯನ್ನು ತಿಳಿದುಕೊಂಡಿರುವ, ಮಹಾತ್ಮ ಪಾಂಡುವಿನ ಸೊಸೆ, ಕಲ್ಯಾಣೀ, ಯಶಸ್ವಿನೀ ಕೃಷ್ಣೆಗೆ ಇದನ್ನು ಹೇಳು:

05135012a ಯುಕ್ತಮೇತನ್ಮಹಾಭಾಗೇ ಕುಲೇ ಜಾತೇ ಯಶಸ್ವಿನಿ।
05135012c ಯನ್ಮೇ ಪುತ್ರೇಷು ಸರ್ವೇಷು ಯಥಾವತ್ತ್ವಮವರ್ತಿಥಾಃ।।

“ಮಹಾಭಾಗೇ! ಯಶಸ್ವಿನೀ! ಉತ್ತಮ ಕುಲದಲ್ಲಿ ಹುಟ್ಟಿದವಳಿಗೆ ತಕ್ಕಂತೆ ನೀನು ನನ್ನ ಮಕ್ಕಳೆಲ್ಲರೊಡನೆ ವರ್ತಿಸಿದ್ದೀಯೆ.”

05135013a ಮಾದ್ರೀಪುತ್ರೌ ಚ ವಕ್ತವ್ಯೌ ಕ್ಷತ್ರಧರ್ಮರತಾವುಭೌ।
05135013c ವಿಕ್ರಮೇಣಾರ್ಜಿತಾನ್ಭೋಗಾನ್ವೃಣೀತಂ ಜೀವಿತಾದಪಿ।।

ಕ್ಷತ್ರಧರ್ಮರತರಾದ ಆ ಮಾದ್ರೀಪುತ್ರರಿಬ್ಬರಿಗೂ ಹೇಳು: “ಜೀವಕ್ಕಿಂತ ವಿಕ್ರಮದಿಂದ ಗಳಿಸಿದ ಭೋಗವನ್ನು ಆರಿಸಬೇಕು.

05135014a ವಿಕ್ರಮಾಧಿಗತಾ ಹ್ಯರ್ಥಾಃ ಕ್ಷತ್ರಧರ್ಮೇಣ ಜೀವತಃ।
05135014c ಮನೋ ಮನುಷ್ಯಸ್ಯ ಸದಾ ಪ್ರೀಣಂತಿ ಪುರುಷೋತ್ತಮ।।

ಪುರುಷೋತ್ತಮ! ವಿಕ್ರಮದಿಂದ ಗಳಿಸಿದ ಸಂಪತ್ತು ಕ್ಷತ್ರಧರ್ಮದಿಂದ ಜೀವಿಸುವ ಮನುಷ್ಯನ ಮನಸ್ಸನ್ನು ಸದಾ ಸಂತೋಷಗೊಳಿಸುತ್ತದೆ.

05135015a ಯಚ್ಚ ವಃ ಪ್ರೇಕ್ಷಮಾಣಾನಾಂ ಸರ್ವಧರ್ಮೋಪಚಾಯಿನೀ।
05135015c ಪಾಂಚಾಲೀ ಪರುಷಾಣ್ಯುಕ್ತಾ ಕೋ ನು ತತ್ಕ್ಷಂತುಮರ್ಹತಿ।।

ನೀವು ನೋಡುತ್ತಿರುವಾಗಲೇ ಸರ್ವಧರ್ಮಗಳನ್ನೂ ಗಳಿಸಿರುವ ಪಾಂಚಾಲಿಗೆ ಗಡುಸಾಗಿ ಮಾತನಾಡಿದ ಯಾರು ತಾನೇ ಕ್ಷಮೆಗೆ ಅರ್ಹರು?

05135016a ನ ರಾಜ್ಯಹರಣಂ ದುಃಖಂ ದ್ಯೂತೇ ಚಾಪಿ ಪರಾಜಯಃ।
05135016c ಪ್ರವ್ರಾಜನಂ ಸುತಾನಾಂ ವಾ ನ ಮೇ ತದ್ದುಃಖಕಾರಣಂ।।

ರಾಜ್ಯವನ್ನು ಕಳೆದುಕೊಂಡಿದ್ದುದಾಗಲೀ, ದ್ಯೂತದಲ್ಲಿ ಸೋತಿದ್ದುದೂ, ಮಕ್ಕಳ ದೂರಹೋದುದು ಇವು ಯಾವುವೂ ನನ್ನ ಈ ದುಃಖಕ್ಕೆ ಕಾರಣವಲ್ಲ.

05135017a ಯತ್ತು ಸಾ ಬೃಹತೀ ಶ್ಯಾಮಾ ಸಭಾಯಾಂ ರುದತೀ ತದಾ।
05135017c ಅಶ್ರೌಷೀತ್ಪರುಷಾ ವಾಚಸ್ತನ್ಮೇ ದುಃಖತರಂ ಮತಂ।।

ಆಗ ಆ ಬೃಹತೀ ಶ್ಯಾಮೆಯು ಸಭೆಯಲ್ಲಿ ಅಳುತ್ತಾ ಆ ಮಾನಭಂಗದ ಮಾತುಗಳನ್ನು ಕೇಳಬೇಕಾಯಿತಲ್ಲ ಎನ್ನುವುದು ನನ್ನ ಈ ದುಃಖವನ್ನು ಹೆಚ್ಚಿಸಿದೆ.

05135018a ಸ್ತ್ರೀಧರ್ಮಿಣೀ ವರಾರೋಹಾ ಕ್ಷತ್ರಧರ್ಮರತಾ ಸದಾ।
05135018c ನಾಧ್ಯಗಚ್ಚತ್ತದಾ ನಾಥಂ ಕೃಷ್ಣಾ ನಾಥವತೀ ಸತೀ।।

ಮುಟ್ಟಾಗಿದ್ದ, ಸದಾ ಕ್ಷತ್ರಧರ್ಮನಿರತಳಾಗಿರುವ ಆ ವರಾರೋಹೆ ಸತೀ ಕೃಷ್ಣೆಯು ನಾಥವತಿಯಾಗಿದ್ದರೂ ಅಲ್ಲಿ ಅನಾಥಳಾಗಿದ್ದಳು.”

05135019a ತಂ ವೈ ಬ್ರೂಹಿ ಮಹಾಬಾಹೋ ಸರ್ವಶಸ್ತ್ರಭೃತಾಂ ವರಂ।
05135019c ಅರ್ಜುನಂ ಪುರುಷವ್ಯಾಘ್ರಂ ದ್ರೌಪದ್ಯಾಃ ಪದವೀಂ ಚರ।।

ಮಹಾಬಾಹೋ! ಆ ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠ ಪುರುಷವ್ಯಾಘ್ರ ಅರ್ಜುನನಿಗೆ “ದ್ರೌಪದಿಯ ದಾರಿಯಲ್ಲಿ ನಡೆ!” ಎಂದು ಹೇಳು.

05135020a ವಿದಿತೌ ಹಿ ತವಾತ್ಯಂತಂ ಕ್ರುದ್ಧಾವಿವ ಯಮಾಂತಕೌ।
05135020c ಭೀಮಾರ್ಜುನೌ ನಯೇತಾಂ ಹಿ ದೇವಾನಪಿ ಪರಾಂ ಗತಿಂ।।

ಅತ್ಯಂತ ಕೃದ್ಧರಾದ ಭೀಮಾರ್ಜುನರಿಬ್ಬರೂ ಯಮ ಅಂತಕನಂತೆ ದೇವತೆಗಳನ್ನೂ ಪರಾಗತಿಗೆ ಕಳುಹಿಸಬಲ್ಲರು ಎಂದು ನಿನಗೆ ತಿಳಿದೇ ಇದೆ.

05135021a ತಯೋಶ್ಚೈತದವಜ್ಞಾನಂ ಯತ್ಸಾ ಕೃಷ್ಣಾ ಸಭಾಗತಾ।
05135021c ದುಃಶಾಸನಶ್ಚ ಯದ್ಭೀಮಂ ಕಟುಕಾನ್ಯಭ್ಯಭಾಷತ।
05135021e ಪಶ್ಯತಾಂ ಕುರುವೀರಾಣಾಂ ತಚ್ಚ ಸಂಸ್ಮಾರಯೇಃ ಪುನಃ।।

ದುಃಶಾಸನನು ಕೃಷ್ಣೆಯನ್ನು ಸಭೆಗೆ ಎಳೆದು ತಂದದ್ದು ಮತ್ತು ಭೀಮನಿಗೆ ಕಟುಕಾಗಿ ಮಾತನಾಡಿದುದು ಇವೆರಡರಿಂದಲೂ ಅವರು ಅಪಮಾನಿತರಾಗಿದ್ದರು. ಅವರಿಬ್ಬರಿಗೆ ಇದನ್ನು ಪುನಃ ನೆನಪಿಸಿಕೊಡು.

05135022a ಪಾಂಡವಾನ್ಕುಶಲಂ ಪೃಚ್ಚೇಃ ಸಪುತ್ರಾನ್ಕೃಷ್ಣಯಾ ಸಹ।
05135022c ಮಾಂ ಚ ಕುಶಲಿನೀಂ ಬ್ರೂಯಾಸ್ತೇಷು ಭೂಯೋ ಜನಾರ್ದನ।
05135022e ಅರಿಷ್ಟಂ ಗಚ್ಚ ಪಂಥಾನಂ ಪುತ್ರಾನ್ಮೇ ಪರಿಪಾಲಯ।।

ಪುತ್ರರೊಂದಿಗೆ ಮತ್ತು ಕೃಷ್ಣೆಯೊಂದಿಗೆ ಪಾಂಡವರ ಕುಶಲವನ್ನು ಕೇಳು. ಜನಾರ್ದನ! ತಿರುಗಿ ನಾನು ಕುಶಲದಿಂದಿದ್ದೇನೆಂದು ಅವರಿಗೆ ಹೇಳು. ಹೋಗು! ನಿನ್ನ ಪ್ರಯಾಣವು ಸುಖಕರವಾಗಲಿ. ನನ್ನ ಮಕ್ಕಳನ್ನು ಪರಿಪಾಲಿಸು!””

05135023 ವೈಶಂಪಾಯನ ಉವಾಚ।
05135023a ಅಭಿವಾದ್ಯಾಥ ತಾಂ ಕೃಷ್ಣಃ ಕೃತ್ವಾ ಚಾಭಿಪ್ರದಕ್ಷಿಣಂ।
05135023c ನಿಶ್ಚಕ್ರಾಮ ಮಹಾಬಾಹುಃ ಸಿಂಹಖೇಲಗತಿಸ್ತತಃ।।

ವೈಶಂಪಾಯನನು ಹೇಳಿದನು: “ಅವಳನ್ನು ಪ್ರದಕ್ಷಿಣೆ ಮಾಡಿ ನಮಸ್ಕರಿಸಿ ಮಹಾಬಾಹು ಕೃಷ್ಣನು ಸಿಂಹದ ನಡೆಯನ್ನು ನಡೆಯುತ್ತಾ ಹೊರಟನು.

05135024a ತತೋ ವಿಸರ್ಜಯಾಮಾಸ ಭೀಷ್ಮಾದೀನ್ಕುರುಪುಂಗವಾನ್।
05135024c ಆರೋಪ್ಯ ಚ ರಥೇ ಕರ್ಣಂ ಪ್ರಾಯಾತ್ಸಾತ್ಯಕಿನಾ ಸಹ।।

ಆಗ ಅವನು ಭೀಷ್ಮಾದಿ ಕುರುಪುಂಗವರನ್ನು ಕಳುಹಿಸಿದನು. ರಥದಲ್ಲಿ ಕರ್ಣನನ್ನು ಏರಿಸಿಕೊಂಡು ಸಾತ್ಯಕಿಯೊಂದಿಗೆ ಪ್ರಯಾಣಿಸಿದನು.

05135025a ತತಃ ಪ್ರಯಾತೇ ದಾಶಾರ್ಹೇ ಕುರವಃ ಸಂಗತಾ ಮಿಥಃ।
05135025c ಜಜಲ್ಪುರ್ಮಹದಾಶ್ಚರ್ಯಂ ಕೇಶವೇ ಪರಮಾದ್ಭುತಂ।।

ದಾಶಾರ್ಹನು ಹೊರಟುಹೋಗಲು ಕುರುಗಳು ಸೇರಿಕೊಂಡು ಕೇಶವನೊಂದಿಗೆ ನಡೆದ ಪರಮಾದ್ಭುತ ಮಹದಾಶ್ಚರ್ಯದ ಕುರಿತು ಮಾತನಾಡಿಕೊಂಡರು.

05135026a ಪ್ರಮೂಢಾ ಪೃಥಿವೀ ಸರ್ವಾ ಮೃತ್ಯುಪಾಶಸಿತಾ ಕೃತಾ।
05135026c ದುರ್ಯೋಧನಸ್ಯ ಬಾಲಿಶ್ಯಾನ್ನೈತದಸ್ತೀತಿ ಚಾಬ್ರುವನ್।।

“ಪ್ರಮೂಢ ಭೂಮಿಯ ಎಲ್ಲರೂ ಮೃತ್ಯುಪಾಶಕ್ಕೆ ಕಟ್ಟಲ್ಪಟ್ಟಿದ್ದಾರೆ. ದುರ್ಯೋಧನನ ಹುಡುಗಾಟದಿಂದ ಹೀಗಾಗಿದೆ!” ಎಂದು ಅವರು ಆಡಿಕೊಂಡರು.

05135027a ತತೋ ನಿರ್ಯಾಯ ನಗರಾತ್ಪ್ರಯಯೌ ಪುರುಷೋತ್ತಮಃ।
05135027c ಮಂತ್ರಯಾಮಾಸ ಚ ತದಾ ಕರ್ಣೇನ ಸುಚಿರಂ ಸಹ।।

ಆಗ ನಗರದಿಂದ ಹೊರಟ ಪುರುಷೋತ್ತಮನು ಬಹಳ ಸಮಯ ಕರ್ಣನೊಂದಿಗೆ ಸಮಾಲೋಚನೆ ಮಾಡಿದನು.

05135028a ವಿಸರ್ಜಯಿತ್ವಾ ರಾಧೇಯಂ ಸರ್ವಯಾದವನಂದನಃ।
05135028c ತತೋ ಜವೇನ ಮಹತಾ ತೂರ್ಣಮಶ್ವಾನಚೋದಯತ್।।

ಅನಂತರ ರಾಧೇಯನನ್ನು ಕಳುಹಿಸಿ ಸರ್ವಯಾದವನಂದನನು ತುಂಬಾ ವೇಗದಿಂದ ಹೋಗುವಂತೆ ಕುದುರೆಗಳನ್ನು ಪ್ರಚೋದಿಸಿದನು.

05135029a ತೇ ಪಿಬಂತ ಇವಾಕಾಶಂ ದಾರುಕೇಣ ಪ್ರಚೋದಿತಾಃ।
05135029c ಹಯಾ ಜಗ್ಮುರ್ಮಹಾವೇಗಾ ಮನೋಮಾರುತರಂಹಸಃ।।

ದಾರುಕನಿಂದ ಪ್ರಚೋದಿತಗೊಂಡ ಕುದುರೆಗಳು ಆಕಾಶವನ್ನೇ ಕುಡಿಯುವಂತೆ ಮನಸ್ಸು-ಮಾರುತಗಳಂತೆ ಮಹಾ ವೇಗದಿಂದ ಹೋದವು.

05135030a ತೇ ವ್ಯತೀತ್ಯ ತಮಧ್ವಾನಂ ಕ್ಷಿಪ್ರಂ ಶ್ಯೇನಾ ಇವಾಶುಗಾಃ।
05135030c ಉಚ್ಚೈಃ ಸೂರ್ಯಮುಪಪ್ಲವ್ಯಂ ಶಾಂಙ್ರಧನ್ವಾನಮಾವಹನ್।।

ಆ ದಾರಿಯನ್ನು ವೇಗವುಳ್ಳ ಗಿಡುಗಗಳಂತೆ ದಾಟಿ ಅವು ಆ ಶಾಂಙ್ರಧನ್ವಿಯನ್ನು ಸೂರ್ಯನು ನೆತ್ತಿಯ ಮೇಲಿರುವಾಗ ಉಪಪ್ಲವ್ಯಕ್ಕೆ ಕರೆದೊಯ್ದವು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಕುಂತೀವಾಕ್ಯೇ ಪಂಚತ್ರಿಂಶದಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಕುಂತೀವಾಕ್ಯದಲ್ಲಿ ನೂರಾಮೂವತ್ತೈದನೆಯ ಅಧ್ಯಾಯವು.