132 ವಿದುಲಾಪುತ್ರಾನುಶಾಸನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಭಗವದ್ಯಾನ ಪರ್ವ

ಅಧ್ಯಾಯ 132

ಸಾರ

ವಿದುರೆಯು ಮಗನಿಗೆ ವರ್ಣಧರ್ಮವನ್ನು ತಿಳಿಸಿದುದು (1-40).

05132001 ವಿದುರೋವಾಚ।
05132001a ಅಥೈತಸ್ಯಾಮವಸ್ಥಾಯಾಂ ಪೌರುಷಂ ಹಾತುಮಿಚ್ಚಸಿ।
05132001c ನಿಹೀನಸೇವಿತಂ ಮಾರ್ಗಂ ಗಮಿಷ್ಯಸ್ಯಚಿರಾದಿವ।।

ವಿದುರೆಯು ಹೇಳಿದಳು: “ಈಗ ಈ ಅವಸ್ಥೆಯಲ್ಲಿ ಪೌರುಷವನ್ನು ತ್ಯಜಿಸಲು ಇಚ್ಛಿಸಿದರೆ ಬೇಗನೇ ನೀನು ಹೀನಪುರುಷರ ಮಾರ್ಗದಲ್ಲಿ ಹೋಗುತ್ತೀಯೆ.

05132002a ಯೋ ಹಿ ತೇಜೋ ಯಥಾಶಕ್ತಿ ನ ದರ್ಶಯತಿ ವಿಕ್ರಮಾತ್।
05132002c ಕ್ಷತ್ರಿಯೋ ಜೀವಿತಾಕಾಂಕ್ಷೀ ಸ್ತೇನ ಇತ್ಯೇವ ತಂ ವಿದುಃ।।

ಯಾವ ಕ್ಷತ್ರಿಯನು ಜೀವಿಸಿರಬೇಕೆಂಬ ಒಂದೇ ಆಶಯದಿಂದ ಶಕ್ತಿ ಮೀರಿ ತನ್ನ ಪರಾಕ್ರಮವನ್ನು ಪ್ರದರ್ಶಿಸಿ ಹೋರಾಡುವುದಿಲ್ಲವೋ ಅವನನ್ನು ಹೀಗೆಯೇ ತಿಳಿಯುತ್ತಾರೆ.

05132003a ಅರ್ಥವಂತ್ಯುಪಪನ್ನಾನಿ ವಾಕ್ಯಾನಿ ಗುಣವಂತಿ ಚ।
05132003c ನೈವ ಸಂಪ್ರಾಪ್ನುವಂತಿ ತ್ವಾಂ ಮುಮೂರ್ಷುಮಿವ ಭೇಷಜಂ।।

ಸಾಯಲು ಸಿದ್ಧನಾಗಿರುವವನಿಗೆ ಔಷಧಗಳು ಹೇಗೆ ಪರಿಣಾಮವನ್ನುಂಟುಮಾಡುವುದಿಲ್ಲವೋ ಹಾಗೆ ನಾನು ಹೇಳುತ್ತಿರುವ ಈ ಯತಾರ್ಥ ಗುಣವಂತ ಮಾತುಗಳು ನಿನಗೆ ತಾಗುತ್ತಿಲ್ಲ.

05132004a ಸಂತಿ ವೈ ಸಿಂಧುರಾಜಸ್ಯ ಸಂತುಷ್ಟಾ ಬಹವೋ ಜನಾಃ।
05132004c ದೌರ್ಬಲ್ಯಾದಾಸತೇ ಮೂಢಾ ವ್ಯಸನೌಘಪ್ರತೀಕ್ಷಿಣಃ।।

ಸಿಂಧುರಾಜನಲ್ಲಿ ಸಂತುಷ್ಟರಾಗಿರದ ಬಹಳ ಜನರಿದ್ದಾರೆ. ಆದರೆ ನಿನ್ನ ದೌರ್ಬಲ್ಯದಿಂದಾಗಿ ಏನೂ ಮಾಡಲು ತಿಳಿಯದೇ ನಿರೀಕ್ಷಿಸುತ್ತಿದ್ದಾರೆ.

05132005a ಸಹಾಯೋಪಚಯಂ ಕೃತ್ವಾ ವ್ಯವಸಾಯ್ಯ ತತಸ್ತತಃ।
05132005c ಅನುದುಷ್ಯೇಯುರಪರೇ ಪಶ್ಯಂತಸ್ತವ ಪೌರುಷಂ।।

ನಿನ್ನ ಪೌರುಷವನ್ನು ನೋಡಿ ನಂತರ ಹಲವು ಕಡೆಗಳಿಂದ ನಿನಗೆ ಸಹಾಯವನ್ನು ನೀಡಿ ಅವನೊಂದಿಗೆ ಶತ್ರುತ್ವವನ್ನು ಕಟ್ಟಿಕೊಳ್ಳಬಹುದು.

05132006a ತೈಃ ಕೃತ್ವಾ ಸಹ ಸಂಘಾತಂ ಗಿರಿದುರ್ಗಾಲಯಾಂಶ್ಚರ।
05132006c ಕಾಲೇ ವ್ಯಸನಮಾಕಾಂಕ್ಷನ್ನೈವಾಯಮಜರಾಮರಃ।।

ಅವರೊಡನೆ ನೀನು ಸಂಧಿಯನ್ನು ಮಾಡಿಕೊಂಡು ಅವನಿಗೆ ವಿಪತ್ತು ಒದಗುವ ಕಾಲವನ್ನು ಕಾಯುತ್ತಾ ರಹಸ್ಯವಾಗಿ ಗಿರಿದುರ್ಗಾಲಯಗಳಲ್ಲಿ ಸಂಚರಿಸುತ್ತಿರಬೇಕು.

05132007a ಸಂಜಯೋ ನಾಮತಶ್ಚ ತ್ವಂ ನ ಚ ಪಶ್ಯಾಮಿ ತತ್ತ್ವಯಿ।
05132007c ಅನ್ವರ್ಥನಾಮಾ ಭವ ಮೇ ಪುತ್ರ ಮಾ ವ್ಯರ್ಥನಾಮಕಃ।।

“ಸಂಜಯ” ಎಂಬ ಹೆಸರನ್ನು ನಿನಗಿಟ್ಟಿದ್ದೀವೆ. ಆದರೆ ಅದನ್ನೇ ನಾನು ನಿನ್ನಲ್ಲಿ ಕಾಣದವಳಾಗಿದ್ದೇನೆ. ಮಗೂ! ನಿನ್ನ ಅನ್ವರ್ಥನಾಮನಾಗು. ವ್ಯರ್ಥನಾಮಕನಾಗಬೇಡ.

05132008a ಸಮ್ಯಗ್ದೃಷ್ಟಿರ್ಮಹಾಪ್ರಾಜ್ಞೋ ಬಾಲಂ ತ್ವಾಂ ಬ್ರಾಹ್ಮಣೋಽಬ್ರವೀತ್।
05132008c ಅಯಂ ಪ್ರಾಪ್ಯ ಮಹತ್ಕೃಚ್ಚ್ರಂ ಪುನರ್ವೃದ್ಧಿಂ ಗಮಿಷ್ಯತಿ।।

ಹಿಂದೆ ನೀನಿನ್ನೂ ಬಾಲಕನಾಗಿದ್ದಾಗ ಶುಭಲೋಚನ ಮಹಾಪ್ರಾಜ್ಞ ಬ್ರಾಹ್ಮಣನೋರ್ವನು ನಿನ್ನನ್ನು ನೋಡಿ ಇವನು ಮುಂದೆ ಮಹಾ ಕಷ್ಟವನ್ನು ಅನುಭವಿಸಿ ನಂತರ ವೃದ್ಧಿಯನ್ನು ಪಡೆಯುತ್ತಾನೆ ಎಂದು ಹೇಳಿದ್ದನು.

05132009a ತಸ್ಯ ಸ್ಮರಂತೀ ವಚನಮಾಶಂಸೇ ವಿಜಯಂ ತವ।
05132009c ತಸ್ಮಾತ್ತಾತ ಬ್ರವೀಮಿ ತ್ವಾಂ ವಕ್ಷ್ಯಾಮಿ ಚ ಪುನಃ ಪುನಃ।।

ಅವನ ಮಾತನ್ನು ಸ್ಮರಿಸಿಕೊಂಡು ನಿನ್ನ ವಿಜಯವನ್ನು ಆಶಿಸುತ್ತಿದ್ದೇನೆ. ಆದುದರಿಂದ ಮಗೂ! ನಿನಗೆ ಪುನಃ ಪುನಃ ಹೇಳುತ್ತಿದ್ದೇನೆ.

05132010a ಯಸ್ಯ ಹ್ಯರ್ಥಾಭಿನಿರ್ವೃತ್ತೌ ಭವಂತ್ಯಾಪ್ಯಾಯಿತಾಃ ಪರೇ।
05132010c ತಸ್ಯಾರ್ಥಸಿದ್ಧಿರ್ನಿಯತಾ ನಯೇಷ್ವರ್ಥಾನುಸಾರಿಣಃ।।

ಯಾರ ಅರ್ಥಸಿದ್ಧಿಯಲ್ಲಿ ಇತರರು ಸಂತುಷ್ಟರಾಗುತ್ತಾರೋ ಮತ್ತು ತಾನೂ ಔನ್ನತ್ಯವನ್ನು ಹೊಂದುತ್ತಾನೋ ಅಂತಹ ನೀತಿಶಾಸ್ತ್ರಾನುಸಾರವಾದ ಅರ್ಥಸಿದ್ಧಿಗೆ ಪ್ರಯತ್ನಿಸುವವನ ಅಭೀಷ್ಟಗಳು ಸಿದ್ಧಿಯಾಗುತ್ತವೆ.

05132011a ಸಮೃದ್ಧಿರಸಮೃದ್ಧಿರ್ವಾ ಪೂರ್ವೇಷಾಂ ಮಮ ಸಂಜಯ।
05132011c ಏವಂ ವಿದ್ವಾನ್ಯುದ್ಧಮನಾ ಭವ ಮಾ ಪ್ರತ್ಯುಪಾಹರ।।

ಸಂಜಯ! ನನಗೆ ಮತ್ತು ಪೂರ್ವಜರಿಗೆ ಸಮೃದ್ಧಿಯಾಗಲಿ ಅಥವಾ ಸಮೃದ್ಧಿಯಾಗದಿರಲೀ ಯುದ್ಧಮಾಡುವುದೇ ಧರ್ಮವೆಂದು ತಿಳಿದು ಯುದ್ಧಮಾಡು. ನಿಲ್ಲಿಸಬೇಡ!

05132012a ನಾತಃ ಪಾಪೀಯಸೀಂ ಕಾಂ ಚಿದವಸ್ಥಾಂ ಶಂಬರೋಽಬ್ರವೀತ್।
05132012c ಯತ್ರ ನೈವಾದ್ಯ ನ ಪ್ರಾತರ್ಭೋಜನಂ ಪ್ರತಿದೃಶ್ಯತೇ।।

ಇಂದಿನ ಮತ್ತು ಬೆಳಗಿನ ಊಟವು ಕಾಣುವುದಿಲ್ಲವೆಂದರೆ ಅದಕ್ಕಿಂತಲೂ ಪಾಪಿ ಅವಸ್ಥೆಯು ಬೇರೊಂದಿಲ್ಲ ಎಂದು ಶಂಬರನು ಹೇಳಿದ್ದಾನೆ.

05132013a ಪತಿಪುತ್ರವಧಾದೇತತ್ಪರಮಂ ದುಃಖಮಬ್ರವೀತ್।
05132013c ದಾರಿದ್ರ್ಯಮಿತಿ ಯತ್ಪ್ರೋಕ್ತಂ ಪರ್ಯಾಯಮರಣಂ ಹಿ ತತ್।।

ಪತಿ ಮತ್ತು ಪುತ್ರರ ವಧೆಗಿಂತಲೂ ಹೆಚ್ಚಿನ ದುಃಖವಿದೆಂದು ಹೇಳಲಾಗಿದೆ. ದಾರಿದ್ರ್ಯವೆಂದು ಯಾವುದಕ್ಕೆ ಹೇಳುತ್ತೇವೋ ಅದರ ಪರ್ಯಾಯವಾದುದೇ ಮರಣ.

05132014a ಅಹಂ ಮಹಾಕುಲೇ ಜಾತಾ ಹ್ರದಾದ್ಧ್ರದಮಿವಾಗತಾ।
05132014c ಈಶ್ವರೀ ಸರ್ವಕಲ್ಯಾಣೈರ್ಭರ್ತ್ರಾ ಪರಮಪೂಜಿತಾ।।

ನಾನು ಮಹಾಕುಲದಲ್ಲಿ ಹುಟ್ಟಿದವಳು - ಒಂದು ಸರೋವರದಿಂದ ಇನ್ನೊಂದಕ್ಕೆ ಹೋಗುವ ಕಮಲದಂತೆ ಸರ್ವಕಲ್ಯಾಣಯುಕ್ತವಾದ ಪರಮ ಪೂಜಿತ ಪತಿಯಲ್ಲಿಗೆ ಬಂದಿರುವವಳು.

05132015a ಮಹಾರ್ಹಮಾಲ್ಯಾಭರಣಾಂ ಸುಮೃಷ್ಟಾಂಬರವಾಸಸಂ।
05132015c ಪುರಾ ದೃಷ್ಟ್ವಾ ಸುಹೃದ್ವರ್ಗೋ ಮಾಮಪಶ್ಯತ್ಸುದುರ್ಗತಾಂ।।

ಹಿಂದೆ ಮಹಾರ್ಹವಾದ ಮಾಲ್ಯಾಂಬರ ಆಭರಣಗಳನ್ನೂ, ಸುಮೃಷ್ಟ ಸುಂದರ ವಸ್ತ್ರಗಳನ್ನೂ ನೋಡಿ ನಾನು ಸುಹೃದ್ವರ್ಗಗಳಲ್ಲಿ ಕಷ್ಟಗಳನ್ನೇ ನೋಡಿರಲಿಲ್ಲ.

05132016a ಯದಾ ಮಾಂ ಚೈವ ಭಾರ್ಯಾಂ ಚ ದ್ರಷ್ಟಾಸಿ ಭೃಶದುರ್ಬಲೇ।
05132016c ನ ತದಾ ಜೀವಿತೇನಾರ್ಥೋ ಭವಿತಾ ತವ ಸಂಜಯ।।

ಸಂಜಯ! ಯಾವಾಗ ತುಂಬಾ ದುರ್ಬಲರಾಗಿರುವ ನನ್ನನ್ನು ಮತ್ತು ನಿನ್ನ ಭಾರ್ಯೆಯನ್ನು ನೋಡುವೆಯೋ ಆಗ ನಿನಗೆ ನನ್ನ ಬದುಕಿಗೆ ಅರ್ಥವಿಲ್ಲ ಎಂದಾಗುತ್ತದೆ.

05132017a ದಾಸಕರ್ಮಕರಾನ್ಭೃತ್ಯಾನಾಚಾರ್ಯರ್ತ್ವಿಕ್ಪುರೋಹಿತಾನ್।
05132017c ಅವೃತ್ತ್ಯಾಸ್ಮಾನ್ಪ್ರಜಹತೋ ದೃಷ್ಟ್ವಾ ಕಿಂ ಜೀವಿತೇನ ತೇ।।

ದಾಸರು, ಕೆಲಸಗಾರರು, ಸೇವಕರು, ಆಚಾರ್ಯರು, ಋತ್ವಿಕರು, ಪುರೋಹಿತರು ನಮ್ಮನ್ನು ಬಿಟ್ಟು ಹೋಗುತ್ತಾರೆ. ಅದನ್ನು ನೋಡಿಯೂ ನೀನು ಜೀವಿಸಿದ್ದೇನು ಫಲ?

05132018a ಯದಿ ಕೃತ್ಯಂ ನ ಪಶ್ಯಾಮಿ ತವಾದ್ಯೇಹ ಯಥಾ ಪುರಾ।
05132018c ಶ್ಲಾಘನೀಯಂ ಯಶಸ್ಯಂ ಚ ಕಾ ಶಾಂತಿರ್ಹೃದಯಸ್ಯ ಮೇ।।

ಹಿಂದಿನಂತೆಯೇ ಇಂದು ನೀನು ಶ್ಲಾಘನೀಯ ಯಶಸ್ಕರವಾದುದನ್ನು ಮಾಡುವುದನ್ನು ನಾನು ನೋಡದಿದ್ದರೆ ನನ್ನ ಹೃದಯಕ್ಕೆ ಶಾಂತಿಯೆಲ್ಲಿಂದ?

05132019a ನೇತಿ ಚೇದ್ಬ್ರಾಹ್ಮಣಾನ್ಬ್ರೂಯಾಂ ದೀರ್ಯತೇ ಹೃದಯಂ ಮಮ।
05132019c ನ ಹ್ಯಹಂ ನ ಚ ಮೇ ಭರ್ತಾ ನೇತಿ ಬ್ರಾಹ್ಮಣಮುಕ್ತವಾನ್।।

ಇಲ್ಲ ಎಂದು ಬ್ರಾಹ್ಮಣನಿಗೆ ಹೇಳಲು ನನ್ನ ಹೃದಯವು ಸೀಳಿಹೋಗುತ್ತದೆ. ಬ್ರಾಹ್ಮಣರಿಗೆ ಇಲ್ಲವೆಂದು ನನ್ನ ಪತಿಯು ಎಂದೂ ಹೇಳಿರಲಿಲ್ಲ.

05132020a ವಯಮಾಶ್ರಯಣೀಯಾಃ ಸ್ಮ ನಾಶ್ರಿತಾರಃ ಪರಸ್ಯ ಚ।
05132020c ಸಾನ್ಯಾನಾಶ್ರಿತ್ಯ ಜೀವಂತೀ ಪರಿತ್ಯಕ್ಷ್ಯಾಮಿ ಜೀವಿತಂ।।

ಆಶ್ರಯವನ್ನಿತ್ತಿದ್ದ ನಾವು ಈಗ ಪರರ ಆಶ್ರಯದಲ್ಲಿ ಇರುವವರಲ್ಲ. ಇನ್ನೊಬ್ಬರನ್ನು ಆಶ್ರಯಿಸಿ ಜೀವಿಸಬೇಕಾಗಿ ಬಂದರೆ ಜೀವವನ್ನು ಬಿಡುತ್ತೇನೆ.

05132021a ಅಪಾರೇ ಭವ ನಃ ಪಾರಮಪ್ಲವೇ ಭವ ನಃ ಪ್ಲವಃ।
05132021c ಕುರುಷ್ವ ಸ್ಥಾನಮಸ್ಥಾನೇ ಮೃತಾನ್ಸಂಜೀವಯಸ್ವ ನಃ।।

ಪಾರವೇ ಇಲ್ಲದವಳಿಗೆ ಪಾರವಾಗು. ನೌಕೆಯೇ ಇಲ್ಲದವಳಿಗೆ ನೌಕೆಯಾಗು. ಅಸ್ಥಾನಗೊಂಡಿರುವವರಿಗೆ ಸ್ಥಾನಮಾಡಿಕೊಡು. ಮೃತರಾಗುವವರಿಗೆ ಸಂಜೀವನಿಯಾಗು.

05132022a ಸರ್ವೇ ತೇ ಶತ್ರವಃ ಸಹ್ಯಾ ನ ಚೇಜ್ಜೀವಿತುಮಿಚ್ಚಸಿ।
05132022c ಅಥ ಚೇದೀದೃಶೀಂ ವೃತ್ತಿಂ ಕ್ಲೀಬಾಮಭ್ಯುಪಪದ್ಯಸೇ।।

ಜೀವಿಸಿರಲು ಇಚ್ಛಿಸದೇ ಹೋರಾಡಿದರೆ ನೀನು ಸರ್ವ ಶತ್ರುಗಳನ್ನೂ ಜಯಿಸಬಲ್ಲೆ. ಈ ರೀತಿಯಲ್ಲಿ ಹೇಡಿಯಂತೆ ನಡೆದುಕೊಳ್ಳುತ್ತೀಯಾದರೆ ಈಗಲೇ ಜೀವವನ್ನು ಬಿಟ್ಟುಬಿಡು.

05132023a ನಿರ್ವಿಣ್ಣಾತ್ಮಾ ಹತಮನಾ ಮುಂಚೈತಾಂ ಪಾಪಜೀವಿಕಾಂ।
05132023c ಏಕಶತ್ರುವಧೇನೈವ ಶೂರೋ ಗಚ್ಚತಿ ವಿಶ್ರುತಿಂ।।

ನಿರ್ವಿಣ್ಣನಾಗಿ ಹತಮನಸ್ಕನಾಗಿದ್ದರೆ ಈ ಪಾಪಜೀವಕವನ್ನು ಬಿಟ್ಟುಬಿಡು. ಒಬ್ಬನೇ ಶತ್ರುವನ್ನು ಕೊಲ್ಲುವುದರಿಂದಲೂ ಶೂರನೆಂದು ಖ್ಯಾತಿ ಹೊಂದುತ್ತಾರೆ.

05132024a ಇಂದ್ರೋ ವೃತ್ರವಧೇನೈವ ಮಹೇಂದ್ರಃ ಸಮಪದ್ಯತ।
05132024c ಮಾಹೇಂದ್ರಂ ಚ ಗ್ರಹಂ ಲೇಭೇ ಲೋಕಾನಾಂ ಚೇಶ್ವರೋಽಭವತ್।।

ಇಂದ್ರನು ವೃತ್ರನೊಬ್ಬನ ವಧೆಯಿಂದಾಗಿ ಮಹೇಂದ್ರನೆಂದೆನಿಸಿಕೊಂಡನು. ಮಾಹೇಂದ್ರ ಗೃಹವನ್ನೂ ಪಡೆದನು ಮತ್ತು ಲೋಕಗಳ ಈಶ್ವರನೂ ಆದನು.

05132025a ನಾಮ ವಿಶ್ರಾವ್ಯ ವಾ ಸಂಖ್ಯೇ ಶತ್ರೂನಾಹೂಯ ದಂಶಿತಾನ್।
05132025c ಸೇನಾಗ್ರಂ ವಾಪಿ ವಿದ್ರಾವ್ಯ ಹತ್ವಾ ವಾ ಪುರುಷಂ ವರಂ।।

ಶ್ರೇಷ್ಠ ಪುರುಷನು ಹೆಸರನ್ನು ಹೇಳಿ ಯುದ್ಧದಲ್ಲಿ ಶತ್ರುವನ್ನು ಕರೆದು ಕವಚ ಧರಿಸಿ ಸೇನಾಗ್ರದಲ್ಲಿರುವವರನ್ನು ಓಡಿಸಬೇಕು ಅಥವಾ ಕೊಲ್ಲಬೇಕು.

05132026a ಯದೈವ ಲಭತೇ ವೀರಃ ಸುಯುದ್ಧೇನ ಮಹದ್ಯಶಃ।
05132026c ತದೈವ ಪ್ರವ್ಯಥಂತೇಽಸ್ಯ ಶತ್ರವೋ ವಿನಮಂತಿ ಚ।।

ಉತ್ತಮ ಯುದ್ಧದಿಂದ ವೀರನು ಯಾವ ಮಹಾಯಶಸ್ಸನ್ನು ಪಡೆಯುತ್ತಾನೋ ಅದರಿಂದಲೇ ಶತ್ರುಗಳು ದುಃಖಿತರಾಗುತ್ತಾರೆ ಮತ್ತು ತಲೆತಗ್ಗಿಸುತ್ತಾರೆ.

05132027a ತ್ಯಕ್ತ್ವಾತ್ಮಾನಂ ರಣೇ ದಕ್ಷಂ ಶೂರಂ ಕಾಪುರುಷಾ ಜನಾಃ।
05132027c ಅವಶಾಃ ಪೂರಯಂತಿ ಸ್ಮ ಸರ್ವಕಾಮಸಮೃದ್ಧಿಭಿಃ।।

ಪ್ರಾಣದ ಹಂಗನ್ನು ತೊರೆದು ರಣದಲ್ಲಿ ದಕ್ಷನಾದ ಶೂರನನ್ನು ಕಾಪುರುಷ ಮುತ್ತು ಅವಶ ಜನರು ಸರ್ವಕಾಮ ಸಮೃದ್ಧಿಗಳಿಂದ ತೃಪ್ತಿಪಡಿಸುತ್ತಾರೆ.

05132028a ರಾಜ್ಯಂ ವಾಪ್ಯುಗ್ರವಿಭ್ರಂಶಂ ಸಂಶಯೋ ಜೀವಿತಸ್ಯ ವಾ।
05132028c ಪ್ರಲಬ್ಧಸ್ಯ ಹಿ ಶತ್ರೋರ್ವೈ ಶೇಷಂ ಕುರ್ವಂತಿ ಸಾಧವಃ।।

ರಾಜ್ಯವನ್ನು ಹಿಂದೆ ತೆಗೆದುಕೊಳ್ಳುವುದು ತುಂಬಾ ಕಷ್ಟವೆಂದೆನಿಸಬಹುದು. ಜೀವವುಳಿಯುವ ಸಂಶಯವೂ ಇರಬಹುದು. ಆದರೆ ತಿಳಿದವರು ಸಿಕ್ಕಿದ ಶತ್ರುವನ್ನು ನಿಃಶೇಷ ಮಾಡುತ್ತಾರೆ.

05132029a ಸ್ವರ್ಗದ್ವಾರೋಪಮಂ ರಾಜ್ಯಮಥ ವಾಪ್ಯಮೃತೋಪಮಂ।
05132029c ರುದ್ಧಮೇಕಾಯನೇ ಮತ್ವಾ ಪತೋಲ್ಮುಕ ಇವಾರಿಷು।।

ಯುದ್ಧವು ಸ್ವರ್ಗದ ದ್ವಾರದಂತೆ. ರಾಜ್ಯವನ್ನೂ ಕೊಡುವಂಥಹುದು. ಇದನ್ನು ತಿಳಿದುಕೊಂಡು ಉರಿಯುವ ಕೊಳ್ಳಿಯಂತೆ ಶತ್ರುಗಳ ಮೇಲೆ ಬೀಳು.

05132030a ಜಹಿ ಶತ್ರೂನ್ರಣೇ ರಾಜನ್ಸ್ವಧರ್ಮಮನುಪಾಲಯ।
05132030c ಮಾ ತ್ವಾ ಪಶ್ಯೇತ್ಸುಕೃಪಣಂ ಶತ್ರುಃ ಶ್ರೀಮಾನ್ಕದಾ ಚನ।।

ರಾಜನ್! ರಣದಲ್ಲಿ ಶತ್ರುಗಳನ್ನು ಕೊಂದು ಸ್ವಧರ್ಮವನ್ನು ಪಾಲಿಸು. ನೀನು ಕೃಪಣನಾಗಿ ಮಲಗಿರುವುದನ್ನು ಮತ್ತು ಶತ್ರುಗಳು ಶ್ರೀಮಂತರಾಗಿರುವುದನ್ನು ನಾನು ಎಂದೂ ನೋಡಲಾರೆನು.

05132031a ಅಸ್ಮದೀಯೈಶ್ಚ ಶೋಚದ್ಭಿರ್ನದದ್ಭಿಶ್ಚ ಪರೈರ್ವೃತಂ।
05132031c ಅಪಿ ತ್ವಾಂ ನಾನುಪಶ್ಯೇಯಂ ದೀನಾ ದೀನಮವಸ್ಥಿತಂ।।

ನಾವು ಇಲ್ಲಿ ಶೋಕಿಸುತ್ತಿದ್ದರೆ ಅಲ್ಲಿ ವೈರಿಗಳು ಆವೃತರಾಗಿ ಆನಂದಿಸುತ್ತಿದ್ದಾರೆ. ದೀನನಾಗಿ ದೀನಾವಸ್ಥೆಯಲ್ಲಿರುವ ನಿನ್ನನ್ನು ನಾವು ನೋಡಲಾರೆವು.

05132032a ಉಷ್ಯ ಸೌವೀರಕನ್ಯಾಭಿಃ ಶ್ಲಾಘಸ್ವಾರ್ಥೈರ್ಯಥಾ ಪುರಾ।
05132032c ಮಾ ಚ ಸೈಂಧವಕನ್ಯಾನಾಮವಸನ್ನೋ ವಶಂ ಗಮಃ।।

ಹಿಂದಿನಂತೆ ಸೌವೀರಕನ್ಯೆಯರ ಶ್ಲಾಘನೆಗೆ ಏಳು. ಸೈಂಧವಕನ್ಯೆಯರ ವಶನಾಗಬೇಡ.

05132033a ಯುವಾ ರೂಪೇಣ ಸಂಪನ್ನೋ ವಿದ್ಯಯಾಭಿಜನೇನ ಚ।
05132033c ಯಸ್ತ್ವಾದೃಶೋ ವಿಕುರ್ವೀತ ಯಶಸ್ವೀ ಲೋಕವಿಶ್ರುತಃ।
05132033e ವೋಢವ್ಯೇ ಧುರ್ಯನಡುವನ್ಮನ್ಯೇ ಮರಣಮೇವ ತತ್।।

ಯೌವನ, ರೂಪ, ವಿದ್ಯೆ, ಮಿತ್ರರಿಂದ ಸಂಪನ್ನನಾಗಿದ್ದೀಯೆ. ಯಶಸ್ವಿ ಮತ್ತು ಲೋಕವಿಶ್ರುತನಾಗಿರುವ ನೀನು ಭಾರವನ್ನು ಹೊರಬೇಕಾದ ಸಮಯದಲ್ಲಿ ಎತ್ತು ನೊಗದಿಂದ ನುಣಚಿಕೊಳ್ಳುವಂತೆ ಏನೂ ಮಾಡದೇ ಕುಳಿತಿರುವೆಯಲ್ಲ! ಇದು ನಿನ್ನ ಮರಣವೆಂದೇ ತಿಳಿದುಕೊಳ್ಳುತ್ತೇನೆ.

05132034a ಯದಿ ತ್ವಾಮನುಪಶ್ಯಾಮಿ ಪರಸ್ಯ ಪ್ರಿಯವಾದಿನಂ।
05132034c ಪೃಷ್ಠತೋಽನುವ್ರಜಂತಂ ವಾ ಕಾ ಶಾಂತಿರ್ಹೃದಯಸ್ಯ ಮೇ।।

ನೀನು ಶತ್ರುಗಳ ಹೊಗಳುಭಟ್ಟನಾಗಿ, ಅವರ ಶುಶ್ರೂಷೆ ಮಾಡುವುದನ್ನೂ, ಹಿಂದೆ ಹೋಗುವುದನ್ನೂ ನೋಡಿದರೆ ನನ್ನ ಹೃದಯಕ್ಕೆ ಶಾಂತಿ ಎಲ್ಲಿಂದ?

05132035a ನಾಸ್ಮಿಂ ಜಾತು ಕುಲೇ ಜಾತೋ ಗಚ್ಚೇದ್ಯೋಽನ್ಯಸ್ಯ ಪೃಷ್ಠತಃ।
05132035c ನ ತ್ವಂ ಪರಸ್ಯಾನುಧುರಂ ತಾತ ಜೀವಿತುಮರ್ಹಸಿ।।

ಮಗೂ! ಇನ್ನೊಬ್ಬರ ಅನುಚರನಾಗಿ ಅವರ ಸೇವೆ ಮಾಡಿಕೊಂಡಿರುವವನು ನಮ್ಮ ಕುಲದಲ್ಲಿ ಎಂದೂ ಹುಟ್ಟಿಲ್ಲ. ಹೀಗಿರುವಾಗ ನೀನು ಪರರನ್ನು ಆಧರಿಸಿ ಜೀವಿಸಬಾರದು.

05132036a ಅಹಂ ಹಿ ಕ್ಷತ್ರಹೃದಯಂ ವೇದ ಯತ್ಪರಿಶಾಶ್ವತಂ।
05132036c ಪೂರ್ವೈಃ ಪೂರ್ವತರೈಃ ಪ್ರೋಕ್ತಂ ಪರೈಃ ಪರತರೈರಪಿ।।

ಪರಿಶಾಶ್ವತವಾಗಿರುವ, ಪೂರ್ವಜರು, ಅದಕ್ಕೂ ಪೂರ್ವಜರು, ಇತರರು, ಬೇರೆಯವರು ಹೇಳಿದ ಕ್ಷತ್ರಹೃದಯವನ್ನು ನಾನು ತಿಳಿದುಕೊಂಡಿದ್ದೇನೆ.

05132037a ಯೋ ವೈ ಕಶ್ಚಿದಿಹಾಜಾತಃ ಕ್ಷತ್ರಿಯಃ ಕ್ಷತ್ರಧರ್ಮವಿತ್।
05132037c ಭಯಾದ್ವೃತ್ತಿಸಮೀಕ್ಷೋ ವಾ ನ ನಮೇದಿಹ ಕಸ್ಯ ಚಿತ್।।

ಇಲ್ಲಿ ಕ್ಷತ್ರಿಯನಾಗಿ ಜನಿಸಿದ, ಕ್ಷತ್ರಧರ್ಮವನ್ನು ತಿಳಿದುಕೊಂಡಿರುವ ಯಾರೂ ಎಂದೂ ಭಯದಿಂದ ಅಥವಾ ಜೀವವುಳಿಸಿಕೊಳ್ಳಲು ಬೇರೊಬ್ಬನ ಮುಂದೆ ತಲೆತಗ್ಗಿಸಬಾರದು.

05132038a ಉದ್ಯಚ್ಚೇದೇವ ನ ನಮೇದುದ್ಯಮೋ ಹ್ಯೇವ ಪೌರುಷಂ।
05132038c ಅಪ್ಯಪರ್ವಣಿ ಭಜ್ಯೇತ ನ ನಮೇದಿಹ ಕಸ್ಯ ಚಿತ್।।

ವಿಜಯಕ್ಕೆ ಪ್ರಯತ್ನಿಸುತ್ತಲೇ ಇರಬೇಕು. ಎಂದೂ ಶರಣಾಗತನಾಗಬಾರದು. ಉದ್ಯಮವೇ ಪೌರುಷ. ಮಧ್ಯದಲ್ಲಿ ತುಂಡಾದರೂ ಸರಿ. ಎಂದೂ ಬಗ್ಗಬಾರದು.

05132039a ಮಾತಂಗೋ ಮತ್ತ ಇವ ಚ ಪರೀಯಾತ್ಸುಮಹಾಮನಾಃ।
05132039c ಬ್ರಾಹ್ಮಣೇಭ್ಯೋ ನಮೇನ್ನಿತ್ಯಂ ಧರ್ಮಾಯೈವ ಚ ಸಂಜಯ।।

ಸಂಜಯ! ಮದಿಸಿದ ಆನೆಯಂತೆ ಸರ್ವತ್ರ ಭಯರಹಿತನಾಗಿ ಸುತ್ತಾಡುತ್ತಿರಬೇಕು. ಬ್ರಾಹ್ಮಣರಿಗೆ ಮತ್ತು ಧರ್ಮಕ್ಕೆ ಮಾತ್ರ ಸದಾ ಸಮಸ್ಕರಿಸಬೇಕು.

05132040a ನಿಯಚ್ಚನ್ನಿತರಾನ್ವರ್ಣಾನ್ವಿನಿಘ್ನನ್ಸರ್ವದುಷ್ಕೃತಃ।
05132040c ಸಸಹಾಯೋಽಸಹಾಯೋ ವಾ ಯಾವಜ್ಜೀವಂ ತಥಾ ಭವೇತ್।।

ಇನ್ನೊಬ್ಬರ ಸಹಾಯವಿರಲಿ ಅಥವಾ ಇಲ್ಲದಿರಲಿ, ಎಲ್ಲಿಯವರೆಗೆ ಜೀವವಿದೆಯೋ ಅಲ್ಲಿಯವರೆಗೆ ವರ್ಣಧರ್ಮದಲ್ಲಿ ನಿರತರಾಗಿರುವಂತೆ ಸರ್ವ ದುಷ್ಕೃತರನ್ನೂ ನಿಗ್ರಹಿಸುತ್ತಾ ಇರಬೇಕು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ವಿದುಲಾಪುತ್ರಾನುಶಾಸನೇ ದ್ವಿತ್ರಿಂಶದಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ವಿದುಲಾಪುತ್ರಾನುಶಾಸನದಲ್ಲಿ ನೂರಾಮೂವತ್ತೆರಡನೆಯ ಅಧ್ಯಾಯವು.