131: ವಿದುಲಾಪುತ್ರಾನುಶಾಸನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಭಗವದ್ಯಾನ ಪರ್ವ

ಅಧ್ಯಾಯ 131

ಸಾರ

ಕುಂತಿಯು ವಿದುಲೋಪಾಖ್ಯಾನದ ಮೂಲಕ ಯುಧಿಷ್ಠಿರನಿಗೆ ಸಂದೇಶವನ್ನು ಕಳುಹಿಸುದುದು - ಶತ್ರುವಿನಿಂದ ಸೋಲಿಸಲ್ಪಟ್ಟ ಮಗನು ದುಃಖಿತನಾಗಿ ನಿರಾಶನಾಗಿ ಮಲಗಿಕೊಂಡಿರಲು ತಾಯಿ ವಿದುಲೆಯು ಅವನನ್ನು ಕಠೋರ ಮಾತುಗಳಿಂದ ಎಬ್ಬಿಸಿ ಯುದ್ಧಕ್ಕೆ ಕಳುಹಿಸಲು ಪ್ರಯತ್ನಿಸಿದುದು (1-42).

05131001 ಕುಂತ್ಯುವಾಚ।
05131001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಂ।
05131001c ವಿದುರಾಯಾಶ್ಚ ಸಂವಾದಂ ಪುತ್ರಸ್ಯ ಚ ಪರಂತಪ।।
05131002a ಅತ್ರ ಶ್ರೇಯಶ್ಚ ಭೂಯಶ್ಚ ಯಥಾ ಸಾ ವಕ್ತುಮರ್ಹತಿ।

ಕುಂತಿಯು ಹೇಳಿದಳು: “ಪರಂತಪ! ಇದರ ಕುರಿತಾಗಿ ವಿದುರೆಯು1 ತನ್ನ ಪುತ್ರನೊಡನೆ ನಡೆಸಿದ ಪುರಾತನ ಐತಿಹಾಸಿಕ ಸಂವಾದವನ್ನು ಉದಾಹರಿಸುತ್ತಾರೆ. ಇದರಲ್ಲಿ ಬಹಳಷ್ಟು ಶ್ರೇಯಸ್ಕರ ವಿಷಯಗಳಿವೆ. ಇದನ್ನು ಯಥಾವತ್ತಾಗಿ ಅವನಿಗೆ ಹೇಳಬೇಕು.

05131002c ಯಶಸ್ವಿನೀ ಮನ್ಯುಮತೀ ಕುಲೇ ಜಾತಾ ವಿಭಾವರೀ।।
05131003a ಕ್ಷತ್ರಧರ್ಮರತಾ ಧನ್ಯಾ ವಿದುರಾ ದೀರ್ಘದರ್ಶಿನೀ।
05131003c ವಿಶ್ರುತಾ ರಾಜಸಂಸತ್ಸು ಶ್ರುತವಾಕ್ಯಾ ಬಹುಶ್ರುತಾ।।
05131004a ವಿದುರಾ ನಾಮ ವೈ ಸತ್ಯಾ ಜಗರ್ಹೇ ಪುತ್ರಮೌರಸಂ।
05131004c ನಿರ್ಜಿತಂ ಸಿಂಧುರಾಜೇನ ಶಯಾನಂ ದೀನಚೇತಸಂ।।
05131004e ಅನಂದನಮಧರ್ಮಜ್ಞಾಂ ದ್ವಿಷತಾಂ ಹರ್ಷವರ್ಧನಂ।।

ಯಶಸ್ವಿನೀ, ಕೋಪಿಷ್ಟ, ಸತ್ಕುಲದಲ್ಲಿ ಜನಿಸಿದ್ದ, ಮಾನಿಷ್ಠೆ, ಕ್ಷತ್ರಧರ್ಮನಿರತೆ, ಧನ್ಯೆ, ದೀರ್ಘದರ್ಶಿನಿ, ರಾಜಸಂಸದಿಗಳಲ್ಲಿ ವಿಶ್ರುತಳಾದ, ಉಪದೇಶಿತಳಾಗಿದ್ದ, ವಿಖ್ಯಾತಳಾಗಿದ್ದ ವಿದುರಾ ಎಂಬ ಹೆಸರಿನ ಸತಿಯು ಸಿಂಧುರಾಜನಿಂದ ಸೋತು ದೀನಚೇತಸನಾಗಿ ಮಲಗಿಕೊಂಡಿದ್ದ ಸಂತೋಷ ನೀಡದ, ಧರ್ಮವನ್ನು ತಿಳಿಯದಿದ್ದ, ವೈರಿಗಳ ಹರ್ಷವನ್ನು ವರ್ಧಿಸುವ ಹಿರಿಯ ಮಗನನ್ನು ನಿಂದಿಸಿದಳು.

05131005a ನ ಮಯಾ ತ್ವಂ ನ ಪಿತ್ರಾಸಿ ಜಾತಃ ಕ್ವಾಭ್ಯಾಗತೋ ಹ್ಯಸಿ।।
05131005c ನಿರ್ಮನ್ಯುರುಪಶಾಖೀಯಃ ಪುರುಷಃ ಕ್ಲೀಬಸಾಧನಃ।

“ನೀನು ನನ್ನಲ್ಲಿ ಮತ್ತು ನಿನ್ನ ತಂದೆಯಲ್ಲಿ ಹುಟ್ಟಿದವನಲ್ಲ! ಎಲ್ಲಿಂದಲೋ ಬಂದಿರುವೆ! ನಿನಗೆ ಕೋಪವೆಂಬುವುದೇ ಇಲ್ಲವಾಗಿದೆ! ಹೆಸರಿಗೆ ಮಾತ್ರ ಪುರುಷನಾಗಿರುವೆ. ಸಾಧನೆಯಲ್ಲಿ ನಪುಂಸಕನಾಗಿರುವೆ.

05131006a ಯಾವಜ್ಜೀವಂ ನಿರಾಶೋಽಸಿ ಕಲ್ಯಾಣಾಯ ಧುರಂ ವಹ।।
05131006c ಮಾತ್ಮಾನಮವಮನ್ಯಸ್ವ ಮೈನಮಲ್ಪೇನ ಬೀಭರಃ।
05131006e ಮನಃ ಕೃತ್ವಾ ಸುಕಲ್ಯಾಣಂ ಮಾ ಭೈಸ್ತ್ವಂ ಪ್ರತಿಸಂಸ್ತಭ।।

ಜೀವನದಲ್ಲಿ ನಿರಾಶೆಹೊಂದಿದವಂತಿದ್ದೀಯೆ. ಕಲ್ಯಾಣಕ್ಕಾಗಿ ಯುದ್ಧಕ್ಕೆ ಹೊರಡು! ನಿನ್ನಲ್ಲಿರುವ ಆತ್ಮನನ್ನು ಅಪಮಾನಿಸಬೇಡ! ನೀನು ಸಾಮಾನ್ಯನೆಂದು ಭಾವಿಸಬೇಡ! ಕಲ್ಯಾಣವನ್ನು ಮಾಡುವ ಮನಸ್ಸು ಮಾಡು. ಭಯಪಡಬೇಡ! ಭಯವನ್ನು ತೆಗೆದುಹಾಕು.

05131007a ಉತ್ತಿಷ್ಠ ಹೇ ಕಾಪುರುಷ ಮಾ ಶೇಷ್ವೈವಂ ಪರಾಜಿತಃ।
05131007c ಅಮಿತ್ರಾನ್ನಂದಯನ್ಸರ್ವಾನ್ನಿರ್ಮಾನೋ ಬಂಧುಶೋಕದಃ।।

ಹೇಡಿ! ಮೇಲೇಳು! ಸೋತುಬಂದು ಹೀಗೆ ಬಿದ್ದುಕೊಳ್ಳಬೇಡ! ಮಾನಗೆಟ್ಟು ಸರ್ವ ಶತ್ರುಗಳಿಗೆ ಆನಂದವನ್ನುಂಟುಮಾಡಿ ಬಂಧುಗಳಿಗೆ ಶೋಕವನ್ನು ತರಬೇಡ!

05131008a ಸುಪೂರಾ ವೈ ಕುನದಿಕಾ ಸುಪೂರೋ ಮೂಷಿಕಾಂಜಲಿಃ।
05131008c ಸುಸಂತೋಷಃ ಕಾಪುರುಷಃ ಸ್ವಲ್ಪಕೇನಾಪಿ ತುಷ್ಯತಿ।।

ಸಣ್ಣ ನದಿಯು ಸ್ವಲ್ಪವೇ ಮಳೆಬಂದರೂ ತುಂಬಿ ಹರಿಯುತ್ತದೆ. ಇಲಿಯ ಬೊಗಸೆಯು ಸ್ವಲ್ಪವೇ ಅನ್ನದಿಂದ ತುಂಬಿಹೋಗುತ್ತದೆ. ಹೇಡಿಯಾದವನನ್ನು ಸಂತೋಷಗೊಳಿಸುವುದೂ ತುಂಬಾ ಸುಲಭ. ಸ್ವಲ್ಪದಿಂದಲೇ ತೃಪ್ತಿಗೊಳ್ಳುತ್ತಾನೆ.

05131009a ಅಪ್ಯರೇರಾರುಜನ್ದಂಷ್ಟ್ರಾಮಾಶ್ವೇವ ನಿಧನಂ ವ್ರಜ।
05131009c ಅಪಿ ವಾ ಸಂಶಯಂ ಪ್ರಾಪ್ಯ ಜೀವಿತೇಽಪಿ ಪರಾಕ್ರಮ।।

ಹಾವಿನ ಹಲ್ಲನ್ನಾದರೂ ಕೀಳಲು ಹೋಗಿ ಸಾವನ್ನಪ್ಪು, ಹಾಗೆಯೂ ಜೀವವುಳಿಯುತ್ತದೆಯೆಂದು ಸಂಶಯವಾದರೆ ಪರಾಕ್ರಮದಿಂದ ಹೋರಾಡು.

05131010a ಅಪ್ಯರೇಃ ಶ್ಯೇನವಚ್ಚಿದ್ರಂ ಪಶ್ಯೇಸ್ತ್ವಂ ವಿಪರಿಕ್ರಮನ್।
05131010c ವಿನದನ್ವಾಥ ವಾ ತೂಷ್ಣೀಂ ವ್ಯೋಮ್ನಿ ವಾಪರಿಶಂಕಿತಃ।।

ಗಿಡುಗವು ಮೇಲೆ ಹಾರಿ ತಿಳಿದುಕೊಳ್ಳುವಂತೆ ನೀನೂ ಕೂಡ ಶತ್ರುವಿಗೆ ಶಂಕೆಬಾರದಂತೆ ತಿಳಿದುಕೊಳ್ಳಬೇಕು. ಅನಂತರ ಗರ್ಜಿಸುತ್ತಾ ರಣರಂಗದಲ್ಲಿ ಯುದ್ಧಮಾಡಬೇಕು.

05131011a ತ್ವಮೇವಂ ಪ್ರೇತವಚ್ಚೇಷೇ ಕಸ್ಮಾದ್ವಜ್ರಹತೋ ಯಥಾ।
05131011c ಉತ್ತಿಷ್ಠ ಹೇ ಕಾಪುರುಷ ಮಾ ಶೇಷ್ವೈವಂ ಪರಾಜಿತಃ।।

ರಣಹೇಡಿ! ಸಿಡಿಲು ಬಡಿದು ಸತ್ತವನಂತೆ ಏಕೆ ಮಲಗಿರುವೆ? ಏಳು! ಸೋತು ಹೀಗೆ ಮಲಗಿಕೊಳ್ಳಬೇಡ!

05131012a ಮಾಸ್ತಂ ಗಮಸ್ತ್ವಂ ಕೃಪಣೋ ವಿಶ್ರೂಯಸ್ವ ಸ್ವಕರ್ಮಣಾ।
05131012c ಮಾ ಮಧ್ಯೇ ಮಾ ಜಘನ್ಯೇ ತ್ವಂ ಮಾಧೋ ಭೂಸ್ತಿಷ್ಠ ಚೋರ್ಜಿತಃ।।

ಅಸ್ತನಾಗಿ ಹೋಗಬೇಡ! ಕೃಪಣನಾಗಿ ಸ್ವಕರ್ಮದಿಂದ ಪ್ರಸಿದ್ಧನಾಗು! ಮಧ್ಯಮನೆಂದೂ, ಜಘನ್ಯನೆಂದೂ, ಅಧಮನೆಂದೂ ತಿಳಿದುಕೊಳ್ಳಬೇಡ! ಎದ್ದು ಗೆಲ್ಲು!

05131013a ಅಲಾತಂ ತಿಂದುಕಸ್ಯೇವ ಮುಹೂರ್ತಮಪಿ ವಿಜ್ವಲ।
05131013c ಮಾ ತುಷಾಗ್ನಿರಿವಾನರ್ಚಿಃ ಕಾಕರಂಖಾ ಜಿಜೀವಿಷುಃ।
05131013e ಮುಹೂರ್ತಂ ಜ್ವಲಿತಂ ಶ್ರೇಯೋ ನ ತು ಧೂಮಾಯಿತಂ ಚಿರಂ।।

ಒಣಗಿದ ತುಂಬೇಗಿಡದಂತೆ ಒಂದು ಕ್ಷಣವಾದರೂ ಪ್ರಜ್ವಲಿಸು. ಜೀವಿಸಿರಬೇಕೆಂಬ ಒಂದೇ ಒಂದು ಆಸೆಯಿಂದ ಹೊಟ್ಟಿನ ಬೆಂಕಿಯಂತೆ ಉರಿಯಿಲ್ಲದೇ ಹೊಗೆ ಕರಿಗಳಿಂದ ಆವೃತನಾಗಿರಬೇಡ. ಬಹಳ ಕಾಲದವರೆಗೆ ಹೊಗೆಯಾಡುತ್ತಾ ಇರುವುದಕ್ಕಿಂತ ಕ್ಷಣಮಾತ್ರ ಹತ್ತಿ ಉರಿಯುವುದು ಒಳ್ಳೆಯದು.

05131014a ಮಾ ಹ ಸ್ಮ ಕಸ್ಯ ಚಿದ್ಗೇಹೇ ಜನೀ ರಾಜ್ಞಾಃ ಖರೀಮೃದುಃ।
05131014c ಕೃತ್ವಾ ಮಾನುಷ್ಯಕಂ ಕರ್ಮ ಸೃತ್ವಾಜಿಂ ಯಾವದುತ್ತಮಂ।
05131014e ಧರ್ಮಸ್ಯಾನೃಣ್ಯಮಾಪ್ನೋತಿ ನ ಚಾತ್ಮಾನಂ ವಿಗರ್ಹತೇ।।

ಯಾವೊಬ್ಬ ರಾಜನ ಮನೆಯಲ್ಲಿಯೂ ನಿನ್ನಂತೆ ಮೃದುಸ್ವಭಾವದ ಹೇಡಿ ಕತ್ತೆಯು ಹುಟ್ಟದಿರಲಿ. ಮನುಷ್ಯ ಕರ್ಮವನ್ನು ಮಾಡಿ ಪೌರುಷವಿದ್ದಷ್ಟೂ ಉತ್ತಮವಾಗಿ ಕಾದಾಡಿದರೆ ಕ್ಷತ್ರಿಯ ಧರ್ಮದ ಋಣದಿಂದ ಮುಕ್ತನಾಗುತ್ತಾನೆ. ಅವನು ಆತ್ಮನಿಂದನೆಯನ್ನು ಮಾಡಿಕೊಳ್ಳುವುದಿಲ್ಲ.

05131015a ಅಲಬ್ಧ್ವಾ ಯದಿ ವಾ ಲಬ್ಧ್ವಾ ನಾನುಶೋಚಂತಿ ಪಂಡಿತಾಃ।
05131015c ಆನಂತರ್ಯಂ ಚಾರಭತೇ ನ ಪ್ರಾಣಾನಾಂ ಧನಾಯತೇ।।

ಸಿಕ್ಕಿದರೂ ಸಿಕ್ಕದೇ ಇದ್ದರೂ ಪಂಡಿತರು ಶೋಕಿಸುವುದಿಲ್ಲ. ಕೊನೆಯವರೆಗೂ ಕಾರ್ಯಮಾಡುತ್ತಲೇ ಇರುತ್ತಾರೆ. ಪ್ರಾಣವನ್ನು ಧನವೆಂದು ತಿಳಿದು ಹೆದರಿ ಸುಮ್ಮನಿರುವುದಿಲ್ಲ.

05131016a ಉದ್ಭಾವಯಸ್ವ ವೀರ್ಯಂ ವಾ ತಾಂ ವಾ ಗಚ್ಚ ಧ್ರುವಾಂ ಗತಿಂ।
05131016c ಧರ್ಮಂ ಪುತ್ರಾಗ್ರತಃ ಕೃತ್ವಾ ಕಿಂನಿಮಿತ್ತಂ ಹಿ ಜೀವಸಿ।।

ಮಗನೇ! ಧರ್ಮವನ್ನು ಮುಂದಿರಿಸಿಕೊಂಡು ವೀರ್ಯವನ್ನು ಪ್ರದರ್ಶಿಸು ಅಥವಾ ನಿಶ್ಚಯವಾದ ಮೃತ್ಯುಗತಿಯಲ್ಲಿ ಹೋಗು! ಯಾವ ಕಾರಣಕ್ಕೆ ಜೀವಿಸಿರುವೆ?

05131017a ಇಷ್ಟಾಪೂರ್ತಂ ಹಿ ತೇ ಕ್ಲೀಬ ಕೀರ್ತಿಶ್ಚ ಸಕಲಾ ಹತಾ।
05131017c ವಿಚ್ಚಿನ್ನಂ ಭೋಗಮೂಲಂ ತೇ ಕಿಮ್ನಿಮಿತ್ತಂ ಹಿ ಜೀವಸಿ।।

ನಪುಂಸಕ! ನಿನ್ನ ಧರ್ಮಕಾರ್ಯಗಳು ನಿಂತು ಹೋಗಿವೆ. ಕೀರ್ತಿಯೂ ಸಕಲವಾಗಿ ನಾಶವಾಗಿದೆ. ಭೋಗಮೂಲವಾದ ರಾಜ್ಯವೂ ಒಡೆದು ಹೋಗಿದೆ. ಇನ್ನು ಏಕೆ ಜೀವಿಸಿರುವೆ?

05131018a ಶತ್ರುರ್ನಿಮಜ್ಜತಾ ಗ್ರಾಹ್ಯೋ ಜಂಘಾಯಾಂ ಪ್ರಪತಿಷ್ಯತಾ।
05131018c ವಿಪರಿಚ್ಚಿನ್ನಮೂಲೋಽಪಿ ನ ವಿಷೀದೇತ್ಕಥಂ ಚನ।
05131018e ಉದ್ಯಮ್ಯ ಧುರಮುತ್ಕರ್ಷೇದಾಜಾನೇಯಕೃತಂ ಸ್ಮರನ್।।

ಶತ್ರುವಿನಿಂದ ಕೆಡವಲ್ಪಟ್ಟವನು ಅವನ ಮೊಣಕಾಲುಗಳನ್ನೂ ಎಳೆದು ಮೇಲೇಳಲು ಪ್ರಯತ್ನಿಸಬೇಕು. ಆಗ ಸಂಪೂರ್ಣವಾಗಿ ನಾಶಹೊಂದಿದರೂ ವಿಷಾದಿಸಬಾರದು. ಆಜಾನೇಯವೆಂಬ ಕುದುರೆಯನ್ನು ಸ್ಮರಿಸಿ ಧುರದಲ್ಲಿ ಮೇಲೇಳಲು ಸತತ ಪ್ರಯತ್ನವನ್ನು ಮಾಡುತ್ತಲೇ ಇರಬೇಕು.

05131019a ಕುರು ಸತ್ತ್ವಂ ಚ ಮಾನಂ ಚ ವಿದ್ಧಿ ಪೌರುಷಮಾತ್ಮನಃ।
05131019c ಉದ್ಭಾವಯ ಕುಲಂ ಮಗ್ನಂ ತ್ವತ್ಕೃತೇ ಸ್ವಯಮೇವ ಹಿ।।

ನಿನ್ನಲ್ಲಿರುವ ಪೌರುಷವನ್ನು ತಿಳಿದುಕೊಂಡು ನಿನ್ನಲ್ಲಿ ವೀರ್ಯವನ್ನೂ ಅಭಿಮಾನವನ್ನೂ ಹುಟ್ಟಿಸಿಕೋ! ನಿನ್ನಿಂದಾಗಿ ಮುಳುಗಿಹೋಗುತ್ತಿರುವ ವಂಶವನ್ನು ನೀನೇ ಮೇಲೆತ್ತು.

05131020a ಯಸ್ಯ ವೃತ್ತಂ ನ ಜಲ್ಪಂತಿ ಮಾನವಾ ಮಹದದ್ಭುತಂ।
05131020c ರಾಶಿವರ್ಧನಮಾತ್ರಂ ಸ ನೈವ ಸ್ತ್ರೀ ನ ಪುನಃ ಪುಮಾನ್।।

ಯಾರ ಮಹಾ ಅದ್ಭುತ ಸಾಧನೆಗಳನ್ನು ಮನುಷ್ಯರು ಮಾತನಾಡಿಕೊಳ್ಳುವುದಿಲ್ಲವೋ ಅವನು ಜನಸಂಖ್ಯೆಯನ್ನು ಹೆಚ್ಚಿಸಲು ಮಾತ್ರ ಅರ್ಹನಾಗಿರುತ್ತಾನೆ. ಅವನು ಸ್ತ್ರೀಯೂ ಆಗಿರುವುದಿಲ್ಲ. ಪುರುಷನೂ ಆಗಿರುವುದಿಲ್ಲ.

05131021a ದಾನೇ ತಪಸಿ ಶೌರ್ಯೇ ಚ ಯಸ್ಯ ನ ಪ್ರಥಿತಂ ಯಶಃ।
05131021c ವಿದ್ಯಾಯಾಮರ್ಥಲಾಭೇ ವಾ ಮಾತುರುಚ್ಚಾರ ಏವ ಸಃ।।

ಯಾರು ದಾನದಲ್ಲಿ, ತಪಸ್ಸಿನಲ್ಲಿ, ಶೌರ್ಯದಲ್ಲಿ, ವಿದ್ಯೆಯಲ್ಲಿ ಅಥವಾ ಅರ್ಥಲಾಭದಲ್ಲಿ ಪ್ರಸಿದ್ಧನಾಗುವುದಿಲ್ಲವೋ ಅವನು ತಾಯಿಯ ಮಲ-ಮೂತ್ರಗಳಿದ್ದಂತೆ.

05131022a ಶ್ರುತೇನ ತಪಸಾ ವಾಪಿ ಶ್ರಿಯಾ ವಾ ವಿಕ್ರಮೇಣ ವಾ।
05131022c ಜನಾನ್ಯೋಽಭಿಭವತ್ಯನ್ಯಾನ್ಕರ್ಮಣಾ ಹಿ ಸ ವೈ ಪುಮಾನ್।।

ಯಾರು ಪಾಂಡಿತ್ಯದಿಂದ ಅಥವಾ ತಪಸ್ಸಿನಿಂದ ಅಥವಾ ಸಂಪತ್ತಿನಿಂದ ಅಥವಾ ವಿಕ್ರಮದಿಂದ ಅಥವಾ ಬೇರೆ ಕರ್ಮಗಳಿಂದ ಅನ್ಯ ಜನರನ್ನು ಮೀರುತ್ತಾನೋ ಅವನೇ ಪುರುಷ.

05131023a ನ ತ್ವೇವ ಜಾಲ್ಮೀಂ ಕಾಪಾಲೀಂ ವೃತ್ತಿಮೇಷಿತುಮರ್ಹಸಿ।
05131023c ನೃಶಂಸ್ಯಾಮಯಶಸ್ಯಾಂ ಚ ದುಃಖಾಂ ಕಾಪುರುಷೋಚಿತಾಂ।।

ಕಾಪುರುಷರಿಗೆ ಉಚಿತವಾದ ಕ್ರೂರ, ಅಯಶಸ್ಕರವಾದ, ದುಃಖಕರವಾದ, ನೀಚರ ಮತ್ತು ಭಿಕ್ಷಾವೃತ್ತಿಯಿಂದ ಜೀವಿಸುವವರ ವೃತ್ತಿಯನ್ನು ಮಾತ್ರ ನೀನು ಆಚರಿಸಬೇಡ.

05131024a ಯಮೇನಮಭಿನಂದೇಯುರಮಿತ್ರಾಃ ಪುರುಷಂ ಕೃಶಂ।
05131024c ಲೋಕಸ್ಯ ಸಮವಜ್ಞ‌ಆತಂ ನಿಹೀನಾಶನವಾಸಸಂ।।
05131025a ಅಹೋಲಾಭಕರಂ ದೀನಮಲ್ಪಜೀವನಮಲ್ಪಕಂ।
05131025c ನೇದೃಶಂ ಬಂಧುಮಾಸಾದ್ಯ ಬಾಂಧವಃ ಸುಖಮೇಧತೇ।।

ಯಾರನ್ನು ನೋಡಿ ಶತ್ರುಗಳು ಆನಂದಿಸುತ್ತಾರೋ, ಯಾರ ಇರುವಿಕೆಯೇ ಲೋಕಕ್ಕೆ ತಿಳಿದಿರುವುದಿಲ್ಲವೋ, ಯಾರನ್ನು ನೋಡಿ ಲೋಕವು ಹಳಿಯುವುದೋ, ಯಾರ ಆಸನ-ವಸನಗಳು ಹೀನವಾಗಿರುವವೋ, ಅಲ್ಪ ಲಾಭಕ್ಕೆ ಯಾರು ಸಂತುಷ್ಟನಾಗಿ ಅಚ್ಚರಿಯನ್ನು ಪ್ರಕಟಿಸುತ್ತಾನೋ ಆ ದೀನ, ಅಲ್ಪಜೀವಿಕ, ಅಲ್ಪಕ ಬಂಧುವನ್ನು ಸೇರಿ ಬಾಂಧವರು ಸುಖವನ್ನು ಪಡೆಯುವುದಿಲ್ಲ.

05131026a ಅವೃತ್ತ್ಯೈವ ವಿಪತ್ಸ್ಯಾಮೋ ವಯಂ ರಾಷ್ಟ್ರಾತ್ಪ್ರವಾಸಿತಾಃ।
05131026c ಸರ್ವಕಾಮರಸೈರ್ಹೀನಾಃ ಸ್ಥಾನಭ್ರಷ್ಟಾ ಅಕಿಂಚನಾಃ।।

ನಮ್ಮ ರಾಷ್ಟ್ರದಿಂದ ಹೊರಗಟ್ಟಲ್ಪಟ್ಟು ಶತ್ರುಗಳ ವಶವಾಗಿದ್ದೇವೆ. ನಾವು ಸರ್ವಕಾಮರಸಹೀನರಾಗಿ ಸ್ಥಾನಭ್ರಷ್ಟರಾಗಿ ಏನೂ ಇಲ್ಲದವರಾಗಿದ್ದೇವೆ.

05131027a ಅವರ್ಣಕಾರಿಣಂ ಸತ್ಸು ಕುಲವಂಶಸ್ಯ ನಾಶನಂ।
05131027c ಕಲಿಂ ಪುತ್ರಪ್ರವಾದೇನ ಸಂಜಯ ತ್ವಾಮಜೀಜನಂ।।

ಪುತ್ರ! ಸಂಜಯ! ಸತ್ಪುರುಷರ ಕುಲದಲ್ಲಿ ಪುತ್ರನೆಂದು ಕರೆದುಕೊಳ್ಳವ ಈ ಅಮಂಗಳಕಾರಿ, ವಂಶ ನಾಶಿನಿ, ಕಲಿಯಾದ ನಿನಗೆ ಜನ್ಮವಿತ್ತಿದ್ದೇನಲ್ಲ!

05131028a ನಿರಮರ್ಷಂ ನಿರುತ್ಸಾಹಂ ನಿರ್ವೀರ್ಯಮರಿನಂದನಂ।
05131028c ಮಾ ಸ್ಮ ಸೀಮಂತಿನೀ ಕಾ ಚಿಜ್ಜನಯೇತ್ಪುತ್ರಮೀದೃಶಂ।।

ಕೋಪರಹಿತನಾದ, ನಿರುತ್ಸಾಹಿಯಾದ, ನಿರ್ವೀರ್ಯನಾದ, ಶತ್ರುಗಳನ್ನು ಸಂತೋಷಗೊಳಿಸುವ ಇಂತಹ ಪುತ್ರನನ್ನು ಯಾವ ಸೀಮಂತಿನಿಯೂ ಪ್ರಸವಿಸದಿರಲಿ.

05131029a ಮಾ ಧೂಮಾಯ ಜ್ವಲಾತ್ಯಂತಮಾಕ್ರಮ್ಯ ಜಹಿ ಶಾತ್ರವಾನ್।
05131029c ಜ್ವಲ ಮೂರ್ಧನ್ಯಮಿತ್ರಾಣಾಂ ಮುಹೂರ್ತಮಪಿ ವಾ ಕ್ಷಣಂ।।

ಧೂಮಪ್ರಾಯನಾಗಬೇಡ! ಅಗ್ನಿಯಂತೆ ಪ್ರಜ್ಚಲಿಸು! ಶತ್ರುಗಳನ್ನು ಆಕ್ರಮಿಸಿ ನಾಶಪಡಿಸು. ಮುಹೂರ್ತವಾಗಲೀ ಕ್ಷಣವಾಗಲೀ ಅಮಿತ್ರರ ನೆತ್ತಿಯನ್ನು ಸುಡು.

05131030a ಏತಾವಾನೇವ ಪುರುಷೋ ಯದಮರ್ಷೀ ಯದಕ್ಷಮೀ।
05131030c ಕ್ಷಮಾವಾನ್ನಿರಮರ್ಷಶ್ಚ ನೈವ ಸ್ತ್ರೀ ನ ಪುನಃ ಪುಮಾನ್।।

ಯಾರಲ್ಲಿ ಕೋಪವಿದೆಯೋ ಯಾರು ಅಕ್ಷಮಿಯೋ ಅವನೇ ಪುರುಷ. ಕ್ಷಮೆಯಿರುವವನು, ಸಿಟ್ಟಿಲ್ಲದಿರುವವನು ಸ್ತ್ರೀಯೂ ಅಲ್ಲ ಪುರುಷನೂ ಅಲ್ಲ.

05131031a ಸಂತೋಷೋ ವೈ ಶ್ರಿಯಂ ಹಂತಿ ತಥಾನುಕ್ರೋಶ ಏವ ಚ।
05131031c ಅನುತ್ಥಾನಭಯೇ ಚೋಭೇ ನಿರೀಹೋ ನಾಶ್ನುತೇ ಮಹತ್।।

ಅಲ್ಪ ಸಂತುಷ್ಟಿ, ದಯೆ, ಉದ್ಯೋಗಶೂನ್ಯತೆ, ಮತ್ತು ಭಯ ಇವು ಸಂಪತ್ತನ್ನು ನಾಶಗೊಳಿಸುತ್ತವೆ. ನಿರಪೇಕ್ಷನು ಇಲ್ಲಿ ಮತ್ತು ನಂತರ ಎರಡರಲ್ಲೂ ಮಹಾ ಉಚ್ಛಸ್ಥಾನಗಳನ್ನು ಪಡೆಯಲಾರನು.

05131032a ಏಭ್ಯೋ ನಿಕೃತಿಪಾಪೇಭ್ಯಃ ಪ್ರಮುಂಚಾತ್ಮಾನಮಾತ್ಮನಾ।
05131032c ಆಯಸಂ ಹೃದಯಂ ಕೃತ್ವಾ ಮೃಗಯಸ್ವ ಪುನಃ ಸ್ವಕಂ।।

ಈ ಪರಾಭವಗೊಳಿಸುವ ಪಾಪಗಳನ್ನು ನಿನ್ನಿಂದ ನೀನೇ ತೆಗೆದುಹಾಕು. ಹೃದಯವನ್ನು ಕಬ್ಬಿಣವನ್ನಾಗಿಸಿಕೊಂಡು ನಿನ್ನದನ್ನು ಪುನಃ ಸಂಪಾದಿಸು.

05131033a ಪುರಂ2 ವಿಷಹತೇ ಯಸ್ಮಾತ್ತಸ್ಮಾತ್ಪುರುಷ ಉಚ್ಯತೇ।
05131033c ತಮಾಹುರ್ವ್ಯರ್ಥನಾಮಾನಂ ಸ್ತ್ರೀವದ್ಯ ಇಹ ಜೀವತಿ।।

ಪುರವನ್ನು ಎದುರಿಸಿ ನಿಲ್ಲುತ್ತಾನೆ ಎನ್ನುವುದರಿಂದಲೇ ಪುರುಷ ಎಂದು ಕರೆಯಲ್ಪಡುತ್ತಾನೆ. ಸ್ತ್ರೀಯಂತೆ ಜೀವಿಸುವವರಿಗೆ ಈ ಹೆಸರು ವ್ಯರ್ಥವೆಂದು ಹೇಳುತ್ತಾರೆ.

05131034a ಶೂರಸ್ಯೋರ್ಜಿತಸತ್ತ್ವಸ್ಯ ಸಿಂಹವಿಕ್ರಾಂತಗಾಮಿನಃ।
05131034c ದಿಷ್ಟಭಾವಂ ಗತಸ್ಯಾಪಿ ವಿಘಸೇ ಮೋದತೇ ಪ್ರಜಾ।।

ಸುಸ್ಥಿರ ವೀರಪರಾಕ್ರಮವುಳ್ಳ ಸಿಂಹವಿಕ್ರಾಂತಗಾಮಿ ಶೂರನು ಒಂದು ವೇಳೆ ಯುದ್ಧಮಾಡುತ್ತಾ ಪ್ರಾಣತೊರೆದರೂ ಅವನ ಪ್ರಜೆಗಳು ಸುಖವಾಗಿರುತ್ತಾರೆ.

05131035a ಯ ಆತ್ಮನಃ ಪ್ರಿಯಸುಖೇ ಹಿತ್ವಾ ಮೃಗಯತೇ ಶ್ರಿಯಂ।
05131035c ಅಮಾತ್ಯಾನಾಮಥೋ ಹರ್ಷಮಾದಧಾತ್ಯಚಿರೇಣ ಸಃ।।

ಯಾರು ತನಗೆ ಪ್ರಿಯವಾದುದನ್ನು ಮತ್ತು ಸುಖವಾದುದನ್ನು ತೊರೆದು ಸಂಪತ್ತನ್ನು ಅರಸಿ ಪ್ರಯತ್ನಿಸುತ್ತಾನೋ ಅವನು ಶೀಘ್ರದಲ್ಲಿಯೇ ತನ್ನ ಅಮಾತ್ಯರಿಗೆ ಹರ್ಷವನ್ನುಂಟುಮಾಡುತ್ತಾನೆ.”

05131036 ಪುತ್ರ ಉವಾಚ।
05131036a ಕಿಂ ನು ತೇ ಮಾಮಪಶ್ಯಂತ್ಯಾಃ ಪೃಥಿವ್ಯಾ ಅಪಿ ಸರ್ವಯಾ।
05131036c ಕಿಮಾಭರಣಕೃತ್ಯಂ ತೇ ಕಿಂ ಭೋಗೈರ್ಜೀವಿತೇನ ವಾ।।

ಪುತ್ರನು ಹೇಳಿದನು: “ನಾನು ಸತ್ತು ಹೋದರೆ ಈ ಪೃಥ್ವಿ, ಎಲ್ಲವೂ ಏನಕ್ಕೆ ಬೇಕು? ಆಭರಣ, ಭೋಗ, ಜೀವಿತ, ಕೃತ್ಯಗಳೇಕೆ?”

05131037 ಮಾತೋವಾಚ।
05131037a ಕಿಮದ್ಯಕಾನಾಂ ಯೇ ಲೋಕಾ ದ್ವಿಷಂತಸ್ತಾನವಾಪ್ನುಯುಃ।
05131037c ಯೇ ತ್ವಾದೃತಾತ್ಮನಾಂ ಲೋಕಾಃ ಸುಹೃದಸ್ತಾನ್ವ್ರಜಂತು ನಃ।।

ಮಾತೆಯು ಹೇಳಿದಳು: “ಇಂದೇ ಏಕೆ ಮಾಡುವುದು ಎನ್ನುವವರ ಲೋಕವನ್ನು ನಮ್ಮ ವೈರಿಗಳು ಪಡೆಯಲಿ. ಧೃತಾತ್ಮರ ಲೋಕಗಳನ್ನು ನಮ್ಮ ಸುಹೃದಯರು ಪಡೆಯಲಿ.

05131038a ಭೃತ್ಯೈರ್ವಿಹೀಯಮಾನಾನಾಂ ಪರಪಿಂಡೋಪಜೀವಿನಾಂ।
05131038c ಕೃಪಣಾನಾಮಸತ್ತ್ವಾನಾಂ ಮಾ ವೃತ್ತಿಮನುವರ್ತಿಥಾಃ।।

ಸೇವಕರಿಲ್ಲದೇ ಜೀವಿಸುವವರ, ಪರಾನ್ನದಿಂದಲೇ ಉಪಜೀವಿಸುವವರ, ಕೃಪಣರ, ಅಸತ್ತ್ವರ ವೃತ್ತಿಯನ್ನು ಅನುಸರಿಸಬೇಡ.

05131039a ಅನು ತ್ವಾಂ ತಾತ ಜೀವಂತು ಬ್ರಾಹ್ಮಣಾಃ ಸುಹೃದಸ್ತಥಾ।
05131039c ಪರ್ಜನ್ಯಮಿವ ಭೂತಾನಿ ದೇವಾ ಇವ ಶತಕ್ರತುಂ।।

ಮಗೂ! ದೇವತೆಗಳು ಶತಕ್ರತುವನ್ನು ಮತ್ತು ಭೂತಗಳು ಮಳೆಯನ್ನು ಹೇಗೋ ಹಾಗೆ ಬ್ರಾಹ್ಮಣರು ಮತ್ತು ಸುಹೃದಯರು ನಿನ್ನನ್ನು ಅವಲಂಬಿಸಿ ಜೀವಿಸಲಿ.

05131040a ಯಮಾಜೀವಂತಿ ಪುರುಷಂ ಸರ್ವಭೂತಾನಿ ಸಂಜಯ।
05131040c ಪಕ್ವಂ ದ್ರುಮಮಿವಾಸಾದ್ಯ ತಸ್ಯ ಜೀವಿತಮರ್ಥವತ್।।

ಸಂಜಯ! ಪಕ್ವ ಹಣ್ಣುಗಳಿಂದ ಕೂಡಿದ ವೃಕ್ಷದಬಳಿ ಹೋಗುವಂತೆ ಯಾವ ಪುರುಷನ ಆಶ್ರಯದಲ್ಲಿ ಸರ್ವಭೂತಗಳೂ ಇರುವವೋ ಅಂತಹವನ ರಾಜ್ಯವು ಅರ್ಥವತ್ತಾಗಿರುತ್ತದೆ.

05131041a ಯಸ್ಯ ಶೂರಸ್ಯ ವಿಕ್ರಾಂತೈರೇಧಂತೇ ಬಾಂಧವಾಃ ಸುಖಂ।
05131041c ತ್ರಿದಶಾ ಇವ ಶಕ್ರಸ್ಯ ಸಾಧು ತಸ್ಯೇಹ ಜೀವಿತಂ।।

ಶಕ್ರನ ವಿಕ್ರಾಂತವನ್ನು ಆಶ್ರಯಿಸಿ ತ್ರಿದಶರು ಹೇಗೋ ಹಾಗೆ ಯಾವ ಶೂರನ ವಿಕ್ರಾಂತವನ್ನಾಶ್ರಯಿಸಿ ಬಾಂಧವರು ಸುಖಿಗಳಾಗಿರುತ್ತಾರೋ ಅವನ ಜೀವನವೇ ಅರ್ಥವತ್ತಾಗಿರುತ್ತದೆ.

05131042a ಸ್ವಬಾಹುಬಲಮಾಶ್ರಿತ್ಯ ಯೋಽಭ್ಯುಜ್ಜೀವತಿ ಮಾನವಃ।
05131042c ಸ ಲೋಕೇ ಲಭತೇ ಕೀರ್ತಿಂ ಪರತ್ರ ಚ ಶುಭಾಂ ಗತಿಂ।।

ಸ್ವಬಲವನ್ನಾಶ್ರಯಿಸಿ ಯಾವ ಮಾನವನು ಇನ್ನೊಬ್ಬರಿಗೂ ಆಶ್ರಯವನ್ನು ನೀಡುತ್ತಾನೋ ಅವನು ಲೋಕದಲ್ಲಿ ಕೀರ್ತಿಯನ್ನೂ ಪರದಲ್ಲಿ ಶುಭಗತಿಯನ್ನೂ ಪಡೆಯುತ್ತಾನೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ವಿದುಲಾಪುತ್ರಾನುಶಾಸನೇ ಏಕತ್ರಿಂಶದಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ವಿದುಲಾಪುತ್ರಾನುಶಾಸನದಲ್ಲಿ ನೂರಾಮೂವತ್ತೊಂದನೆಯ ಅಧ್ಯಾಯವು.


  1. ಪುಣೆಯ ಸಂಪುಟದಲ್ಲಿ “ವಿದುರಾ” ಎಂದು ಕುಂಭಕೋಣ-ನೀಲಕಂಠಿಯಗಳಲ್ಲಿ “ವಿದುಲಾ” ಎಂದೂ ಹೆಸರಿದೆ. ↩︎

  2. ಭಾರತದರ್ಶನದಲ್ಲಿ “ಪುರ” ಶಬ್ಧದ ಬದಲಾಗಿ “ಪರ” ಅಂದರೆ ಶತ್ರು ಎಂಬ ಅರ್ಥವನ್ನು ಕೊಡುವ ಶಬ್ಧದ ಬಳಕೆಯಿದೆ. ↩︎