ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಭಗವದ್ಯಾನ ಪರ್ವ
ಅಧ್ಯಾಯ 128
ಸಾರ
ತಾಯಿಯ ಮಾತನ್ನು ಕೇಳಿ ಕೋಪಗೊಂಡು ಪುನಃ ಸಭಾತ್ಯಾಗ ಮಾಡಿದ ದುರ್ಯೋಧನನು ತನ್ನ ಆಪ್ತರೊಂದಿಗೆ ಸಮಾಲೋಚನೆಮಾಡಿ ಕೃಷ್ಣನನ್ನೇ ಸೆರೆಹಿಡಿಯಲು ಯೋಚಿಸಿದುದು (1-8). ಸನ್ನೆಗಳನ್ನು ಅರ್ಥಮಾಡಿಕೊಳ್ಳುವ ಸಾತ್ಯಕಿಯು ಅವರ ಇಂಗಿತವನ್ನು ತಿಳಿದು ಕೃತವರ್ಮನಿಗೆ ಸೇನೆಯನ್ನು ಸಿದ್ಧಮಾಡಿ ದ್ವಾರದಲ್ಲಿರುವಂತೆ ಹೇಳಿ ಸಭೆಗೆ ಬಂದು ಕೃಷ್ಣನಿಗೂ ವಿದುರ-ಧೃತರಾಷ್ಟ್ರರಿಗೂ ಅವರ ಯೋಜನೆಯನ್ನು ತಿಳಿಸಿದುದು (9-16). ಆಗ ವಿದುರನು ಧೃತರಾಷ್ಟ್ರನಿಗೆ ಕೃಷ್ಣನ ನಿಜಸ್ವರೂಪವನ್ನು ವರ್ಣಿಸಿದುದು (17-22). “ಈ ದುರ್ಯೋಧನನನಿಗೆ ಮತ್ತು ಇತರ ಎಲ್ಲರಿಗೂ ಏನು ಮಾಡಬೇಕೆಂದು ಬಯಸಿರುವರೋ ಅದನ್ನು ಮಾಡಲು ಒಪ್ಪಿಗೆಯನ್ನು ಕೊಡುತ್ತೇನೆ.” ಎಂದು ಕೃಷ್ಣನು ಹೇಳಲು (23-29) ಧೃತರಾಷ್ಟ್ರನು ದುರ್ಯೋಧನನನ್ನು ಕರೆಯಿಸಿ “ಕೈಯಲ್ಲಿ ಹಿಡಿದಿಟ್ಟುಕೊಳ್ಳಲಾರದ ಗಾಳಿಯಂತೆ, ಕೈಯಿಂದ ಮುಟ್ಟಲಾಗದ ಶಶಿಯಂತೆ, ತಲೆಯಲ್ಲಿ ಹೊರಲಿಕ್ಕಾಗದ ಭೂಮಿಯಂತೆ ಕೇಶವನನ್ನು ಬಲವನ್ನುಪಯೋಗಿಸಿ ಹಿಡಿಯಲಿಕ್ಕಾಗುವುದಿಲ್ಲ!” ಎಂದು ಎಚ್ಚರಿಸಿದುದು (30-39). ವಿದುರನೂ ದುರ್ಯೋಧನನಿಗೆ ಕೃಷ್ಣನು ಯಾರು ಮತ್ತು ಅವನ ಪರಾಕ್ರಮವೇನೆಂದು ತಿಳಿಸಿದುದು (40-52).
05128001 ವೈಶಂಪಾಯನ ಉವಾಚ।
05128001a ತತ್ತು ವಾಕ್ಯಮನಾದೃತ್ಯ ಸೋಽರ್ಥವನ್ಮಾತೃಭಾಷಿತಂ।
05128001c ಪುನಃ ಪ್ರತಸ್ಥೇ ಸಂರಂಭಾತ್ಸಕಾಶಮಕೃತಾತ್ಮನಾಂ।।
ವೈಶಂಪಾಯನನು ಹೇಳಿದನು: “ತಾಯಿಯು ಹೇಳಿದ ಅರ್ಥವತ್ತಾದ ಮಾತುಗಳನ್ನು ಅನಾದರಿಸಿ ಪುನಃ ಸಿಟ್ಟಿನಿಂದ ಅವನು ಹೊರಟು ಅಕೃತಾತ್ಮರ ಬಳಿ ಹೋದನು.
05128002a ತತಃ ಸಭಾಯಾ ನಿರ್ಗಮ್ಯ ಮಂತ್ರಯಾಮಾಸ ಕೌರವಃ।
05128002c ಸೌಬಲೇನ ಮತಾಕ್ಷೇಣ ರಾಜ್ಞಾ ಶಕುನಿನಾ ಸಹ।।
ಆಗ ಸಭೆಯಿಂದ ನಿರ್ಗಮಿಸಿ ಕೌರವನು ಜೂಜುಕೋರ ರಾಜ ಸೌಬಲ ಶಕುನಿಯೊಡನೆ ಮಂತ್ರಾಲೋಚನೆ ಮಾಡಿದನು.
05128003a ದುರ್ಯೋಧನಸ್ಯ ಕರ್ಣಸ್ಯ ಶಕುನೇಃ ಸೌಬಲಸ್ಯ ಚ।
05128003c ದುಃಶಾಸನಚತುರ್ಥಾನಾಮಿದಮಾಸೀದ್ವಿಚೇಷ್ಟಿತಂ।।
ದುರ್ಯೋಧನ, ಕರ್ಣ, ಸೌಬಲ ಶಕುನಿ ಮತ್ತು ದುಃಶಾಸನ ಈ ನಾಲ್ವರ ನಡುವೆ ಈ ಚರ್ಚೆಯಾಯಿತು:
05128004a ಪುರಾಯಮಸ್ಮಾನ್ಗೃಹ್ಣಾತಿ ಕ್ಷಿಪ್ರಕಾರೀ ಜನಾರ್ದನಃ।
05128004c ಸಹಿತೋ ಧೃತರಾಷ್ಟ್ರೇಣ ರಾಜ್ಞಾ ಶಾಂತನವೇನ ಚ।।
05128005a ವಯಮೇವ ಹೃಷೀಕೇಶಂ ನಿಗೃಹ್ಣೀಮ ಬಲಾದಿವ।
05128005c ಪ್ರಸಹ್ಯ ಪುರುಷವ್ಯಾಘ್ರಮಿಂದ್ರೋ ವೈರೋಚನಿಂ ಯಥಾ।।
“ಕ್ಷಿಪ್ರಕಾರೀ ಜನಾರ್ದನನು ರಾಜ ಧೃತರಾಷ್ಟ್ರ ಮತ್ತು ಶಾಂತನವನ ಸಹಾಯದಿಂದ ನಮ್ಮನ್ನು ಸೆರೆಹಿಡಿಯುವ ಮೊದಲು ನಾವೇ ಇಂದ್ರನು ವೈರೋಚನಿಯನ್ನು ಹೇಗೋ ಹಾಗೆ ಬಲವನ್ನುಪಯೋಗಿಸಿ ಸೋಲಿಸಿ ಪುರುಷವ್ಯಾಘ್ರ ಹೃಷೀಕೇಶನನ್ನು ಬಂಧಿಸೋಣ!
05128006a ಶ್ರುತ್ವಾ ಗೃಹೀತಂ ವಾರ್ಷ್ಣೇಯಂ ಪಾಂಡವಾ ಹತಚೇತಸಃ।
05128006c ನಿರುತ್ಸಾಹಾ ಭವಿಷ್ಯಂತಿ ಭಗ್ನದಂಷ್ಟ್ರಾ ಇವೋರಗಾಃ।।
ವಾರ್ಷ್ಣೇಯನು ಬಂಧಿಯಾದುದನ್ನು ಕೇಳಿ ಹತಚೇತಸರಾದ ಪಾಂಡವರು ಹಲ್ಲು ಮುರಿದ ಹಾವಿನಂತೆ ನಿರುತ್ಸಾಹಿಗಳಾಗುತ್ತಾರೆ.
05128007a ಅಯಂ ಹ್ಯೇಷಾಂ ಮಹಾಬಾಹುಃ ಸರ್ವೇಷಾಂ ಶರ್ಮ ವರ್ಮ ಚ।
05128007c ಅಸ್ಮಿನ್ಗೃಹೀತೇ ವರದೇ ಋಷಭೇ ಸರ್ವಸಾತ್ವತಾಂ।।
05128007e ನಿರುದ್ಯಮಾ ಭವಿಷ್ಯಂತಿ ಪಾಂಡವಾಃ ಸೋಮಕೈಃ ಸಹ।।
ಏಕೆಂದರೆ ಈ ಮಹಾಬಾಹುವು ಅವರೆಲ್ಲರಿಗೆ ನೆರಳು ಮತ್ತು ರಕ್ಷೆ. ಸರ್ವಸಾತ್ವತರ ವರದ ಈ ಋಷಭನನ್ನು ಸೆರೆಹಿಡಿದರೆ ಸೋಮಕರೊಂದಿಗೆ ಪಾಂಡವರು ನಿರುದ್ಯಮರಾಗುತ್ತಾರೆ.
05128008a ತಸ್ಮಾದ್ವಯಮಿಹೈವೈನಂ ಕೇಶವಂ ಕ್ಷಿಪ್ರಕಾರಿಣಂ।
05128008c ಕ್ರೋಶತೋ ಧೃತರಾಷ್ಟ್ರಸ್ಯ ಬದ್ಧ್ವಾ ಯೋತ್ಸ್ಯಾಮಹೇ ರಿಪೂನ್।।
ಆದುದರಿಂದ ಈ ಕ್ಷಿಪ್ರಕಾರಿಣೀ ಕೇಶವನನ್ನು ನಾವೇ, ಧೃತರಾಷ್ಟ್ರನು ಕೂಗಾಡಿದರೂ, ಬಂಧಿಸಿಟ್ಟು, ಶತ್ರುಗಳ ಮೇಲೆ ಆಕ್ರಮಣ ಮಾಡೋಣ!”
05128009a ತೇಷಾಂ ಪಾಪಮಭಿಪ್ರಾಯಂ ಪಾಪಾನಾಂ ದುಷ್ಟಚೇತಸಾಂ।
05128009c ಇಂಗಿತಜ್ಞಾಃ ಕವಿಃ ಕ್ಷಿಪ್ರಮನ್ವಬುಧ್ಯತ ಸಾತ್ಯಕಿಃ।।
ಸನ್ನೆಗಳನ್ನು ಅರ್ಥಮಾಡಿಕೊಳ್ಳುವ ಕವಿ ಸಾತ್ಯಕಿಯು ಆ ಪಾಪಿ ದುಷ್ಟಚೇತಸರ ಅಭಿಪ್ರಾಯವನ್ನು ಕೂಡಲೇ ತಿಳಿದುಕೊಂಡನು.
05128010a ತದರ್ಥಮಭಿನಿಷ್ಕ್ರಮ್ಯ ಹಾರ್ದಿಕ್ಯೇನ ಸಹಾಸ್ಥಿತಃ।
05128010c ಅಬ್ರವೀತ್ಕೃತವರ್ಮಾಣಂ ಕ್ಷಿಪ್ರಂ ಯೋಜಯ ವಾಹಿನೀಂ।।
ಅದಕ್ಕಾಗಿ ಹೊರಬಂದು ಹತ್ತಿರದಲ್ಲಿ ನಿಂತಿದ್ದ ಹಾರ್ದಿಕ್ಯ ಕೃತವರ್ಮನಿಗೆ ಹೇಳಿದನು: “ಬೇಗನೇ ಸೇನೆಯನ್ನು ಸಿದ್ಧಗೊಳಿಸು!
05128011a ವ್ಯೂಢಾನೀಕಃ ಸಭಾದ್ವಾರಮುಪತಿಷ್ಠಸ್ವ ದಂಶಿತಃ।
05128011c ಯಾವದಾಖ್ಯಾಮ್ಯಹಂ ಚೈತತ್ಕೃಷ್ಣಾಯಾಕ್ಲಿಷ್ಟಕರ್ಮಣೇ।।
ನಾನು ಅಕ್ಲಿಷ್ಟಕರ್ಮಿಗೆ ಹೇಳುವುದರೊಳಗೆ ನೀನು ಸನ್ನದ್ಧ ಸೇನೆಯನ್ನು ಸಭಾದ್ವಾರದಲ್ಲಿ ತಂದು ನಿಲ್ಲಿಸು.”
05128012a ಸ ಪ್ರವಿಶ್ಯ ಸಭಾಂ ವೀರಃ ಸಿಂಹೋ ಗಿರಿಗುಹಾಮಿವ।
05128012c ಆಚಷ್ಟ ತಮಭಿಪ್ರಾಯಂ ಕೇಶವಾಯ ಮಹಾತ್ಮನೇ।।
ಸಿಂಹವು ಗಿರಿಗುಹೆಯನ್ನು ಪ್ರವೇಶಿಸುವಂತೆ ಆ ವೀರನು ಸಭೆಯನ್ನು ಪ್ರವೇಶಿಸಿ ಅವರ ಅಭಿಪ್ರಾಯವನ್ನು ಮಹಾತ್ಮ ಕೇಶವನಿಗೆ ಹೇಳಿದನು.
05128013a ಧೃತರಾಷ್ಟ್ರಂ ತತಶ್ಚೈವ ವಿದುರಂ ಚಾನ್ವಭಾಷತ।
05128013c ತೇಷಾಮೇತಮಭಿಪ್ರಾಯಮಾಚಚಕ್ಷೇ ಸ್ಮಯನ್ನಿವ।।
ಧೃತರಾಷ್ಟ್ರ-ವಿದುರರಿಗೂ ಇದನ್ನು ಹೇಳಿದನು. ಅವರ ಉಪಾಯದ ಕುರಿತು ಹೇಳಿ ನಸುನಗುತ್ತಾ ಹೇಳಿದನು:
05128014a ಧರ್ಮಾದಪೇತಮರ್ಥಾಚ್ಚ ಕರ್ಮ ಸಾಧುವಿಗರ್ಹಿತಂ।
05128014c ಮಂದಾಃ ಕರ್ತುಮಿಹೇಚ್ಚಂತಿ ನ ಚಾವಾಪ್ಯಂ ಕಥಂ ಚನ।।
“ಈ ಮೂಢರು ಇಲ್ಲಿ ಸಾಧುಗಳು ನಿಷೇಧಿಸುವ, ಧರ್ಮ-ಅರ್ಥ-ಕಾಮಗಳಿಗೆ ಸಲ್ಲದ ಕೆಲಸವನ್ನು ಮಾಡಲು ಬಯಸುತ್ತಿದ್ದಾರೆ. ಆದರೆ ಅವರು ಅದನ್ನು ಎಂದೂ ಸಾಧಿಸರಾರರು.
05128015a ಪುರಾ ವಿಕುರ್ವತೇ ಮೂಢಾಃ ಪಾಪಾತ್ಮಾನಃ ಸಮಾಗತಾಃ।
05128015c ಧರ್ಷಿತಾಃ ಕಾಮಮನ್ಯುಭ್ಯಾಂ ಕ್ರೋಧಲೋಭವಶಾನುಗಾಃ।।
ಈ ಮೂಢರು ಪಾಪಾತ್ಮರು ಒಂದಾಗಿ ಕ್ರೋಧಲೋಭವಶಾನುಗರಾಗಿ, ಕಾಮ ಮತ್ತು ಸಿಟ್ಟಿನಿಂದ ಧರ್ಷಿತರಾಗಿ ಮಾಡಬಾರದುದನ್ನು ಮಾಡಲು ಹೊರಟಿದ್ದಾರೆ.
05128016a ಇಮಂ ಹಿ ಪುಂಡರೀಕಾಕ್ಷಂ ಜಿಘೃಕ್ಷಂತ್ಯಲ್ಪಚೇತಸಃ।
05128016c ಪಟೇನಾಗ್ನಿಂ ಪ್ರಜ್ವಲಿತಂ ಯಥಾ ಬಾಲಾ ಯಥಾ ಜಡಾಃ।।
ಈ ಅಲ್ಪಚೇತಸರು ಉತ್ತರೀಯದಲ್ಲಿ ಉರಿಯುತ್ತಿರುವ ಬೆಂಕಿಯನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುವ ಬಾಲಕರಂತೆ ಈ ಪುಂಡರೀಕಾಕ್ಷನನ್ನು ಸೆರೆಹಿಡಿಯಲು ಹೊರಟಿದ್ದಾರೆ.”
05128017a ಸಾತ್ಯಕೇಸ್ತದ್ವಚಃ ಶ್ರುತ್ವಾ ವಿದುರೋ ದೀರ್ಘದರ್ಶಿವಾನ್।
05128017c ಧೃತರಾಷ್ಟ್ರಂ ಮಹಾಬಾಹುಮಬ್ರವೀತ್ಕುರುಸಂಸದಿ।।
ಸಾತ್ಯಕಿಯ ಆ ಮಾತನ್ನು ಕೇಳಿ ದೀರ್ಘದರ್ಶಿ ವಿದುರನು ಕುರುಸಂಸದಿಯಲ್ಲಿ ಮಹಾಬಾಹು ಧೃತರಾಷ್ಟ್ರನಿಗೆ ಹೇಳಿದನು.
05128018a ರಾಜನ್ಪರೀತಕಾಲಾಸ್ತೇ ಪುತ್ರಾಃ ಸರ್ವೇ ಪರಂತಪ।
05128018c ಅಯಶಸ್ಯಮಶಕ್ಯಂ ಚ ಕರ್ಮ ಕರ್ತುಂ ಸಮುದ್ಯತಾಃ।।
“ರಾಜನ್! ಪರಂತಪ! ನಿನ್ನ ಮಕ್ಕಳೆಲ್ಲರಿಗೂ ಕೊನೆಯ ಗಳಿಗೆಯು ಬಂದುಬಿಟ್ಟಿದೆ! ಅಶಕ್ಯರಾಗಿದ್ದರೂ ಅಯಶಸ್ಸನ್ನು ತರುವ ಕೆಲಸವನ್ನು ಮಾಡಲು ಉದ್ಯುಕ್ತರಾಗಿದ್ದಾರೆ.
05128019a ಇಮಂ ಹಿ ಪುಂಡರೀಕಾಕ್ಷಮಭಿಭೂಯ ಪ್ರಸಹ್ಯ ಚ।
05128019c ನಿಗ್ರಹೀತುಂ ಕಿಲೇಚ್ಚಂತಿ ಸಹಿತಾ ವಾಸವಾನುಜಂ।।
ಎಲ್ಲರೂ ಒಂದಾಗಿ ಈ ವಾಸವನ ಅನುಜ ಪುಂಡರೀಕಾಕ್ಷನ ಮೇಲೆ ಅಕ್ರಮಣ ಮಾಡಿ ಸೆರೆಹಿಡಿಯಲು ಬಯಸುತ್ತಿದ್ದಾರಲ್ಲ!
05128020a ಇಮಂ ಪುರುಷಶಾರ್ದೂಲಮಪ್ರಧೃಷ್ಯಂ ದುರಾಸದಂ।
05128020c ಆಸಾದ್ಯ ನ ಭವಿಷ್ಯಂತಿ ಪತಂಗಾ ಇವ ಪಾವಕಂ।।
ಬೆಂಕಿಯ ಬಳಿ ಹೋಗಲು ಪತಂಗಗಳಿಗೆ ಹೇಗೆ ಅಸಾಧ್ಯವೋ ಹಾಗೆ ಈ ಪುರುಷ ಶಾರ್ದೂಲ, ಅಪ್ರಧೃಷ್ಯ, ದುರಾಸದನ ಬಳಿಹೋಗಲೂ ಅವರಿಗೆ ಸಾದ್ಯವಿಲ್ಲ.
05128021a ಅಯಮಿಚ್ಚನ್ ಹಿ ತಾನ್ಸರ್ವಾನ್ಯತಮಾನಾಂ ಜನಾರ್ದನಃ।
05128021c ಸಿಂಹೋ ಮೃಗಾನಿವ ಕ್ರುದ್ಧೋ ಗಮಯೇದ್ಯಮಸಾದನಂ।।
ಜನಾರ್ದನನು ಬಯಸಿದರೆ ಪ್ರಯತ್ನಿಸುತ್ತಿರುವ ಇವರೆಲ್ಲರನ್ನೂ ಕೃದ್ಧ ಸಿಂಹವು ಮೃಗಗಳನ್ನು ಹೇಗೋ ಹಾಗೆ ಯಮಸಾದನಕ್ಕೆ ಕಳುಹಿಸುತ್ತಾನೆ.
05128022a ನ ತ್ವಯಂ ನಿಂದಿತಂ ಕರ್ಮ ಕುರ್ಯಾತ್ಕೃಷ್ಣಃ ಕಥಂ ಚನ।
05128022c ನ ಚ ಧರ್ಮಾದಪಕ್ರಾಮೇದಚ್ಯುತಃ ಪುರುಷೋತ್ತಮಃ।।
ಆದರೆ ಕೃಷ್ಣನು ಈ ನಿಂದನೀಯ ಕೆಸಲವನ್ನು ಎಂದೂ ಮಾಡುವುದಿಲ್ಲ. ಈ ಅಚ್ಯುತ ಪುರುಷೋತ್ತಮನು ಧರ್ಮವನ್ನು ದಾಟುವವನಲ್ಲ.”
05128023a ವಿದುರೇಣೈವಮುಕ್ತೇ ತು ಕೇಶವೋ ವಾಕ್ಯಮಬ್ರವೀತ್।
05128023c ಧೃತರಾಷ್ಟ್ರಮಭಿಪ್ರೇಕ್ಷ್ಯ ಸುಹೃದಾಂ ಶೃಣ್ವತಾಂ ಮಿಥಃ।।
ವಿದುರನು ಹೀಗೆ ಹೇಳಲು ಕೇಶವನು, ಧೃತರಾಷ್ಟ್ರನನ್ನು ನೋಡಿ, ಸುಹೃದಯರು ಕೇಳುವಂತೆ ಈ ಮಾತುಗಳನ್ನಾಡಿದನು.
05128024a ರಾಜನ್ನೇತೇ ಯದಿ ಕ್ರುದ್ಧಾ ಮಾಂ ನಿಗೃಹ್ಣೀಯುರೋಜಸಾ।
05128024c ಏತೇ ವಾ ಮಾಮಹಂ ವೈನಾನನುಜಾನೀಹಿ ಪಾರ್ಥಿವ।।
“ರಾಜನ್! ಪಾರ್ಥಿವ! ಇವರು ತಮ್ಮ ಬಲವನ್ನುಪಯೋಗಿಸಿ ನನ್ನ ಸೆರೆಹಿಡಿಯ ಬಯಸಿದರೆ ಅವರಿಗೆ ಅದನ್ನು ಮಾಡುವುದಕ್ಕೆ ಬಿಡು. ಅವರನ್ನು ನಾನು ಏನು ಮಾಡಬೇಕೆಂದು ನನಗೆ ತಿಳಿದಿದೆ.
05128025a ಏತಾನ್ ಹಿ ಸರ್ವಾನ್ಸಂರಬ್ಧಾನ್ನಿಯಂತುಮಹಮುತ್ಸಹೇ।
05128025c ನ ತ್ವಹಂ ನಿಂದಿತಂ ಕರ್ಮ ಕುರ್ಯಾಂ ಪಾಪಂ ಕಥಂ ಚನ।।
ಇವರೆಲ್ಲರೂ ಸಿಟ್ಟಾಗಿ ಮಹಾ ಉತ್ಸಾಹದಿಂದ ಆಕ್ರಮಣ ಮಾಡಲು ಬಂದರೂ ನಾನು ನಿಂದನೀಯ ಪಾಪ ಕರ್ಮವನ್ನು ಎಂದೂ ಮಾಡುವುದಿಲ್ಲ.
05128026a ಪಾಂಡವಾರ್ಥೇ ಹಿ ಲುಭ್ಯಂತಃ ಸ್ವಾರ್ಥಾದ್ಧಾಸ್ಯಂತಿ ತೇ ಸುತಾಃ।
05128026c ಏತೇ ಚೇದೇವಮಿಚ್ಚಂತಿ ಕೃತಕಾರ್ಯೋ ಯುಧಿಷ್ಠಿರಃ।।
ಪಾಂಡವರದ್ದನ್ನು ಹಿಡಿದಿಟ್ಟುಕೊಂಡು ನಿನ್ನ ಮಕ್ಕಳು ತಮ್ಮದ್ದನ್ನೂ ಕಳೆದುಕೊಳ್ಳುತ್ತಾರೆ. ಆದರೆ ಇದನ್ನೇ ಮಾಡಲು ಅವರು ಇಚ್ಛಿಸಿದರೆ, ಯುಧಿಷ್ಠಿರನ ಕೆಲಸವು ಮುಗಿದಂತೆ.
05128027a ಅದ್ಯೈವ ಹ್ಯಹಮೇತಾಂಶ್ಚ ಯೇ ಚೈತಾನನು ಭಾರತ।
05128027c ನಿಗೃಹ್ಯ ರಾಜನ್ಪಾರ್ಥೇಭ್ಯೋ ದದ್ಯಾಂ ಕಿಂ ದುಷ್ಕೃತಂ ಭವೇತ್।।
ಏಕೆಂದರೆ ಭಾರತ! ರಾಜನ್! ಇಂದೇ ನಾನು ಇವರನ್ನು ಮತ್ತು ಇವರನ್ನು ಅನುಸರಿಸಿ ಬರುವವರನ್ನು ಹಿಡಿದು ಪಾರ್ಥರಿಗೆ ಕೊಡಬಹುದು. ನನಗೆ ಯಾವುದು ಅಸಾಧ್ಯವಾದುದು?
05128028a ಇದಂ ತು ನ ಪ್ರವರ್ತೇಯಂ ನಿಂದಿತಂ ಕರ್ಮ ಭಾರತ।
05128028c ಸನ್ನಿಧೌ ತೇ ಮಹಾರಾಜ ಕ್ರೋಧಜಂ ಪಾಪಬುದ್ಧಿಜಂ।।
ಆದರೆ ಭಾರತ! ಮಹಾರಾಜ! ನಿನ್ನ ಸನ್ನಿಧಿಯಲ್ಲಿ ಕೋಪ ಮತ್ತು ಪಾಪಬುದ್ಧಿಯಲ್ಲಿ ಹುಟ್ಟುವ ಈ ನಿಂದನೀಯ ಕೆಲಸವನ್ನು ಮಾಡುವುದಿಲ್ಲ.
05128029a ಏಷ ದುರ್ಯೋಧನೋ ರಾಜನ್ಯಥೇಚ್ಚತಿ ತಥಾಸ್ತು ತತ್।
05128029c ಅಹಂ ತು ಸರ್ವಾನ್ಸಮಯಾನನುಜಾನಾಮಿ ಭಾರತ।।
ರಾಜನ್! ಭಾರತ! ಈ ದುರ್ಯೋಧನನನಿಗೆ ಮತ್ತು ಇತರ ಎಲ್ಲರಿಗೂ ಏನು ಮಾಡಬೇಕೆಂದು ಬಯಸಿರುವರೋ ಅದನ್ನು ಮಾಡಲು ಒಪ್ಪಿಗೆಯನ್ನು ಕೊಡುತ್ತೇನೆ.”
05128030a ಏತಚ್ಚ್ರುತ್ವಾ ತು ವಿದುರಂ ಧೃತರಾಷ್ಟ್ರೋಽಭ್ಯಭಾಷತ।
05128030c ಕ್ಷಿಪ್ರಮಾನಯ ತಂ ಪಾಪಂ ರಾಜ್ಯಲುಬ್ಧಂ ಸುಯೋಧನಂ।।
05128031a ಸಹಮಿತ್ರಂ ಸಹಾಮಾತ್ಯಂ ಸಸೋದರ್ಯಂ ಸಹಾನುಗಂ।
05128031c ಶಕ್ನುಯಾಂ ಯದಿ ಪಂಥಾನಮವತಾರಯಿತುಂ ಪುನಃ।।
ಇದನ್ನು ಕೇಳಿ ಧೃತರಾಷ್ಟ್ರನು ವಿದುರನಿಗೆ ಹೇಳಿದನು: “ಆ ಪಾಪಿ, ರಾಜ್ಯಲುಬ್ಧ ಸುಯೋಧನನನ್ನು ಅವನ ಮಿತ್ರರು, ಅಮಾತ್ಯರು, ಸೋದರರು ಮತ್ತು ಅನುಯಾಯಿಗಳೊಂದಿಗೆ ಬೇಗನೆ ಕರೆದುಕೊಂಡು ಬಾ! ಅವರನ್ನು ದಾರಿಗೆ ತರಲು ಮತ್ತೊಮ್ಮೆ ಪ್ರಯತ್ನಿಸೋಣ.”
05128032a ತತೋ ದುರ್ಯೋಧನಂ ಕ್ಷತ್ತಾ ಪುನಃ ಪ್ರಾವೇಶಯತ್ಸಭಾಂ।
05128032c ಅಕಾಮಂ ಭ್ರಾತೃಭಿಃ ಸಾರ್ಧಂ ರಾಜಭಿಃ ಪರಿವಾರಿತಂ।।
ಆಗ ಕ್ಷತ್ತನು ಬೇಡವಂತಿದ್ದ, ರಾಜರಿಂದ ಸುತ್ತುವರೆಯಲ್ಪಟ್ಟಿದ್ದ ದುರ್ಯೋಧನನನ್ನು ಅವನ ಸಹೋದರರೊಂದಿಗೆ ಸಭೆಗೆ ಪ್ರವೇಶಗೊಳಿಸಿದನು.
05128033a ಅಥ ದುರ್ಯೋಧನಂ ರಾಜಾ ಧೃತರಾಷ್ಟ್ರೋಽಭ್ಯಭಾಷತ।
05128033c ಕರ್ಣದುಃಶಾಸನಾಭ್ಯಾಂ ಚ ರಾಜಭಿಶ್ಚಾಭಿಸಂವೃತಂ।।
ಆಗ ರಾಜಾ ಧೃತರಾಷ್ಟ್ರನು ಕರ್ಣ-ದುಃಶಾಸನರೊಡನಿದ್ದ, ರಾಜರಿಂದ ಸುತ್ತುವರೆಯಲ್ಪಟ್ಟಿದ್ದ ದುರ್ಯೋಧನನಿಗೆ ಹೇಳಿದನು:
05128034a ನೃಶಂಸ ಪಾಪಭೂಯಿಷ್ಠ ಕ್ಷುದ್ರಕರ್ಮಸಹಾಯವಾನ್।
05128034c ಪಾಪೈಃ ಸಹಾಯೈಃ ಸಂಹತ್ಯ ಪಾಪಂ ಕರ್ಮ ಚಿಕೀರ್ಷಸಿ।।
“ಕ್ರೂರಿ! ಪಾಪಭೂಯಿಷ್ಠ! ಕ್ಷುದ್ರಕರ್ಮಿಗಳ ಸಹಾಯದಿಂದ, ಪಾಪಿಗಳೊಂದಿಗೆ ಪಾಪ ಕರ್ಮವನ್ನೆಸಗಲು ಬಯಸುತ್ತಿದ್ದೀಯೆ!
05128035a ಅಶಕ್ಯಮಯಶಸ್ಯಂ ಚ ಸದ್ಭಿಶ್ಚಾಪಿ ವಿಗರ್ಹಿತಂ।
05128035c ಯಥಾ ತ್ವಾದೃಶಕೋ ಮೂಢೋ ವ್ಯವಸ್ಯೇತ್ಕುಲಪಾಂಸನಃ।।
ಕುಲಪಾಂಸನ! ಅಶಕ್ಯವಾದರೂ ಅಯಶಸ್ಸನ್ನು ತರುವ, ಸಾಧುಗಳು ನಿಂದಿಸುವ, ಮೂಢನಾದ ನೀನೊಬ್ಬನೇ ಮಾಡಬಹುದಾದ ಕೆಲಸವನ್ನು ಮಾಡಲು ಹೊರಟಿರುವೆ.
05128036a ತ್ವಮಿಮಂ ಪುಂಡರೀಕಾಕ್ಷಮಪ್ರಧೃಷ್ಯಂ ದುರಾಸದಂ।
05128036c ಪಾಪೈಃ ಸಹಾಯೈಃ ಸಂಹತ್ಯ ನಿಗ್ರಹೀತುಂ ಕಿಲೇಚ್ಚಸಿ।।
ಅಪ್ರಧೃಷ್ಠನಾದ, ದುರಾಸದನಾದ ಈ ಪುಂಡರೀಕಾಕ್ಷನನ್ನು ನೀನು ಪಾಪಿಗಳ ಸಹಾಯದಿಂದ ನಿರ್ಬಲನನ್ನಾಗಿಸಿ ಸೆರೆಹಿಡಿಯಲು ಬಯಸುತ್ತೀಯಲ್ಲಾ!
05128037a ಯೋ ನ ಶಕ್ಯೋ ಬಲಾತ್ಕರ್ತುಂ ದೇವೈರಪಿ ಸವಾಸವೈಃ।
05128037c ತಂ ತ್ವಂ ಪ್ರಾರ್ಥಯಸೇ ಮಂದ ಬಾಲಶ್ಚಂದ್ರಮಸಂ ಯಥಾ।।
ಮಂದ! ಬಾಲಕನು ಚಂದ್ರನನ್ನು ಬಯಸುವಂತೆ ವಾಸವನೊಂದಿಗೆ ದೇವತೆಗಳೂ ಬಲಾತ್ಕರಿಸಲು ಶಕ್ಯನಲ್ಲದ ಇವನನ್ನು ಹಿಡಿಯಲು ನೀನು ಬಯಸುತ್ತಿದ್ದೀಯೆ.
05128038a ದೇವೈರ್ಮನುಷ್ಯೈರ್ಗಂಧರ್ವೈರಸುರೈರುರಗೈಶ್ಚ ಯಃ।
05128038c ನ ಸೋಢುಂ ಸಮರೇ ಶಕ್ಯಸ್ತಂ ನ ಬುಧ್ಯಸಿ ಕೇಶವಂ।।
ಕೇಶವನನ್ನು ಸಮರದಲ್ಲಿ ದೇವ-ಮನುಷ್ಯ-ಗಂಧರ್ವ-ಸುರ-ಉರುಗರೂ ಕೂಡ ಸೋಲಿಸಲಾರರು ಎಂದು ನಿನಗೆ ತಿಳಿದಿಲ್ಲವೇ?
05128039a ದುರ್ಗ್ರಹಃ ಪಾಣಿನಾ ವಾಯುರ್ದುಃಸ್ಪರ್ಶಃ ಪಾಣಿನಾ ಶಶೀ।
05128039c ದುರ್ಧರಾ ಪೃಥಿವೀ ಮೂರ್ಧ್ನಾ ದುರ್ಗ್ರಹಃ ಕೇಶವೋ ಬಲಾತ್।।
ಕೈಯಲ್ಲಿ ಹಿಡಿದಿಟ್ಟುಕೊಳ್ಳಲಾರದ ಗಾಳಿಯಂತೆ, ಕೈಯಿಂದ ಮುಟ್ಟಲಾಗದ ಶಶಿಯಂತೆ, ತಲೆಯಲ್ಲಿ ಹೊರಲಿಕ್ಕಾಗದ ಭೂಮಿಯಂತೆ ಕೇಶವನನ್ನು ಬಲವನ್ನುಪಯೋಗಿಸಿ ಹಿಡಿಯಲಿಕ್ಕಾಗುವುದಿಲ್ಲ!”
05128040a ಇತ್ಯುಕ್ತೇ ಧೃತರಾಷ್ಟ್ರೇಣ ಕ್ಷತ್ತಾಪಿ ವಿದುರೋಽಬ್ರವೀತ್।
05128040c ದುರ್ಯೋಧನಮಭಿಪ್ರೇಕ್ಷ್ಯ ಧಾರ್ತರಾಷ್ಟ್ರಮಮರ್ಷಣಂ।।
ಧೃತರಾಷ್ಟ್ರನು ಹೀಗೆ ಹೇಳಲು ಕ್ಷತ್ತ ವಿದುರನೂ ಕೂಡ ಅಮರ್ಷಣ ಧಾರ್ತರಾಷ್ಟ್ರ ದುರ್ಯೋಧನನನ್ನು ನೋಡಿ ಹೇಳಿದನು:
05128041a ಸೌಭದ್ವಾರೇ ವಾನರೇಂದ್ರೋ ದ್ವಿವಿದೋ ನಾಮ ನಾಮತಃ।
05128041c ಶಿಲಾವರ್ಷೇಣ ಮಹತಾ ಚಾದಯಾಮಾಸ ಕೇಶವಂ।।
“ಸೌಭದ್ವಾರದಲ್ಲಿ ದ್ವಿವಿದ ಎಂಬ ಹೆಸರಿನ ವಾನರೇಂದ್ರನು ಅತಿ ದೊಡ್ಡ ಶಿಲಾವರ್ಷದಿಂದ ಕೇಶವನನ್ನು ಮುಚ್ಚಿದನು.
05128042a ಗ್ರಹೀತುಕಾಮೋ ವಿಕ್ರಮ್ಯ ಸರ್ವಯತ್ನೇನ ಮಾಧವಂ।
05128042c ಗ್ರಹೀತುಂ ನಾಶಕತ್ತತ್ರ ತಂ ತ್ವಂ ಪ್ರಾರ್ಥಯಸೇ ಬಲಾತ್।।
ಮಾಧವನನ್ನು ಹಿಡಿಯಲು ಬಯಸಿ ವಿಕ್ರಮದಿಂದ ಸರ್ವಯತ್ನಗಳನ್ನು ಮಾಡಿದರೂ ಹಿಡಿಯಲು ಆಗಲಿಲ್ಲ. ಅಂಥವನನ್ನು ಬಲವನ್ನುಪಯೋಗಿಸಿ ಹಿಡಿಯಲು ಬಯಸುತ್ತಿರುವೆ.
05128043a ನಿರ್ಮೋಚನೇ ಷಟ್ಸಹಸ್ರಾಃ ಪಾಶೈರ್ಬದ್ಧ್ವಾ ಮಹಾಸುರಾಃ।
05128043c ಗ್ರಹೀತುಂ ನಾಶಕಂಶ್ಚೈನಂ ತಂ ತ್ವಂ ಪ್ರಾರ್ಥಯಸೇ ಬಲಾತ್।।
ನಿರ್ಮೋಚನದಲ್ಲಿ ಮಹಾಸುರರು ಆರುಸಾವಿರ ಪಾಶಗಳಿಂದಲೂ ಹಿಡಿಯಲು ಅಸಮರ್ಥರಾದ ಇವನನ್ನು ಬಲವನ್ನುಪಯೋಗಿಸಿ ಹಿಡಿಯಲು ಬಯಸುತ್ತಿರುವೆ.
05128044a ಪ್ರಾಗ್ಜ್ಯೋತಿಷಗತಂ ಶೌರಿಂ ನರಕಃ ಸಹ ದಾನವೈಃ।
05128044c ಗ್ರಹೀತುಂ ನಾಶಕತ್ತತ್ರ ತಂ ತ್ವಂ ಪ್ರಾರ್ಥಯಸೇ ಬಲಾತ್।।
ಪ್ರಾಗ್ಜ್ಯೋತಿಷಕ್ಕೆ ಹೋಗಿದ್ದ ಶೌರಿಯನ್ನು ದಾನವರ ಸಹಿತ ನರಕನು ಹಿಡಿಯಲು ಅಸಮರ್ಥನಾದ. ಇವನನ್ನು ನೀನು ಬಲವನ್ನುಪಯೋಗಿಸಿ ಹಿಡಿಯಲು ಬಯಸುತ್ತಿರುವೆ.
05128045a ಅನೇನ ಹಿ ಹತಾ ಬಾಲ್ಯೇ ಪೂತನಾ ಶಿಶುನಾ ತಥಾ।
05128045c ಗೋವರ್ಧನೋ ಧಾರಿತಶ್ಚ ಗವಾರ್ಥೇ ಭರತರ್ಷಭ।।
ಭರತರ್ಷಭ! ಇವನು ಬಾಲ್ಯದಲ್ಲಿಯೇ ಶಿಶುವಾಗಿದ್ದಾಗ ಪೂತನಿಯನ್ನು ಕೊಂದನು ಮತ್ತು ಗೋವುಗಳನ್ನು ರಕ್ಷಿಸಲು ಗೋವರ್ಧನವನ್ನು ಎತ್ತಿ ಹಿಡಿದನು.
05128046a ಅರಿಷ್ಟೋ ಧೇನುಕಶ್ಚೈವ ಚಾಣೂರಶ್ಚ ಮಹಾಬಲಃ।
05128046c ಅಶ್ವರಾಜಶ್ಚ ನಿಹತಃ ಕಂಸಶ್ಚಾರಿಷ್ಟಮಾಚರನ್।।
ಇವನು ಅರಿಷ್ಟ, ಧೇನುಕ, ಮಹಾಬಲ ಚಾಣೂರ, ಅಶ್ವರಾಜ ಮತ್ತು ದುರಾಚಾರಿ ಕಂಸನನ್ನು ಕೊಂದಿರುವನು.
05128047a ಜರಾಸಂಧಶ್ಚ ವಕ್ರಶ್ಚ ಶಿಶುಪಾಲಶ್ಚ ವೀರ್ಯವಾನ್।
05128047c ಬಾಣಶ್ಚ ನಿಹತಃ ಸಂಖ್ಯೇ ರಾಜಾನಶ್ಚ ನಿಷೂದಿತಾಃ।।
ಇವನು ಜರಾಸಂಧ, ವಕ್ರ, ವೀರ್ಯವಾನ್ ಶಿಶುಪಾಲ ಮತ್ತು ಬಾಣರನ್ನು ಸಂಹರಿಸಿದ್ದಾನೆ. ಸಮರದಲ್ಲಿ ರಾಜರನ್ನು ಸದೆಬಡಿದಿದ್ದಾನೆ.
05128048a ವರುಣೋ ನಿರ್ಜಿತೋ ರಾಜಾ ಪಾವಕಶ್ಚಾಮಿತೌಜಸಾ।
05128048c ಪಾರಿಜಾತಂ ಚ ಹರತಾ ಜಿತಃ ಸಾಕ್ಷಾಚ್ಚಚೀಪತಿಃ।।
ಇವನು ರಾಜಾ ವರುಣ ಮತ್ತು ಅಮಿತೌಜಸ ಪಾವಕನನ್ನು ಸೋಲಿಸಿದ್ದಾನೆ. ಸಾಕ್ಷಾತ್ ಶಚೀಪತಿಯನ್ನು ಗೆದ್ದು ಪಾರಿಜಾತವನ್ನು ಅಪಹರಿಸಿದನು.
05128049a ಏಕಾರ್ಣವೇ ಶಯಾನೇನ ಹತೌ ತೌ ಮಧುಕೈಟಭೌ।
05128049c ಜನ್ಮಾಂತರಮುಪಾಗಮ್ಯ ಹಯಗ್ರೀವಸ್ತಥಾ ಹತಃ।।
ಏಕಾರ್ಣವದಲ್ಲಿ ಮಲಗಿರುವಾಗ ಇವನು ಮಧು-ಕೈಟಭರನ್ನು ಸಂಹರಿಸಿದನು. ಇನ್ನೊಂದು ಜನ್ಮದಲ್ಲಿ ಹಯಗ್ರೀವನನ್ನು ಕೊಂದನು.
05128050a ಅಯಂ ಕರ್ತಾ ನ ಕ್ರಿಯತೇ ಕಾರಣಂ ಚಾಪಿ ಪೌರುಷೇ।
05128050c ಯದ್ಯದಿಚ್ಚೇದಯಂ ಶೌರಿಸ್ತತ್ತತ್ಕುರ್ಯಾದಯತ್ನತಃ।।
ಇವನು ಕರ್ತ. ಇವನನ್ನು ಯಾರೂ ಮಾಡಿಲ್ಲ. ಇವನು ಪೌರುಷಗಳ ಕಾರಣ. ಯಾವುದನ್ನು ಬಯಸುತ್ತಾನೋ ಅದನ್ನು ಶೌರಿಯು ನಿರಾಯಾಸವಾಗಿ ಮಾಡುತ್ತಾನೆ.
05128051a ತಂ ನ ಬುಧ್ಯಸಿ ಗೋವಿಂದಂ ಘೋರವಿಕ್ರಮಮಚ್ಯುತಂ।
05128051c ಆಶೀವಿಷಮಿವ ಕ್ರುದ್ಧಂ ತೇಜೋರಾಶಿಮನಿರ್ಜಿತಂ।।
ಇಲ್ಲ! ನಿನಗೆ ಈ ಗೋವಿಂದ, ಘೋರವಿಕ್ರಮಿ, ಅಚ್ಯುತ, ಕೃದ್ಧನಾದರೆ ಘೋರವಿಷದಂತಿರುವ, ತೇಜೋರಾಶಿ, ಅನಿರ್ಜಿತನು ಗೊತ್ತಿಲ್ಲ!
05128052a ಪ್ರಧರ್ಷಯನ್ಮಹಾಬಾಹುಂ ಕೃಷ್ಣಮಕ್ಲಿಷ್ಟಕಾರಿಣಂ।
05128052c ಪತಂಗೋಽಗ್ನಿಮಿವಾಸಾದ್ಯ ಸಾಮಾತ್ಯೋ ನ ಭವಿಷ್ಯಸಿ।।
ಅಗ್ನಿಯ ಬಳಿಸಾರುವ ಪತಂಗಗಳಂತೆ ಈ ಅಕ್ಲಿಷ್ಟಕರ್ಮಿ, ಮಹಾಬಾಹು ಕೃಷ್ಣನ ಮೇಲೆರಗಿ ನೀನು ಮತ್ತು ಅಮಾತ್ಯರು ಇಲ್ಲವಾಗುತ್ತೀರಿ!””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ವಿದುರವಾಕ್ಯೇ ಅಷ್ಟಾವಿಂಶತ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ವಿದುರವಾಕ್ಯದಲ್ಲಿ ನೂರಾಇಪ್ಪತ್ತೆಂಟನೆಯ ಅಧ್ಯಾಯವು.