127 ಗಾಂಧಾರೀವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಭಗವದ್ಯಾನ ಪರ್ವ

ಅಧ್ಯಾಯ 127

ಸಾರ

ಕೃಷ್ಣನ ಮಾತನ್ನು ಕೇಳಿ ಧೃತರಾಷ್ಟ್ರನು ದುರ್ಯೋಧನನ್ನು ಸರಿದಾರಿಗೆ ತರಲು ಸಭೆಗೆ ಗಾಂಧಾರಿಯನ್ನು ಕರೆಯಿಸಿದ್ದುದು (1-8). ಗಾಂಧಾರಿಯು ದುರ್ಯೋಧನನಿಗೆ ಸಭೆಗೆ ಬರಲು ಹೇಳಿ ಕಳುಹಿಸಿ, ಇದಕ್ಕೆಲ್ಲ ನೀನೇ ಜವಾಬ್ಧಾರನೆಂದು ಧೃತರಾಷ್ಟ್ರನನ್ನು ನಿಂದಿಸಿದುದು (9-15). ದುರ್ಯೋಧನನು ಸಭೆಗೆ ಹಿಂದಿರುಗಲು ಗಾಂಧಾರಿಯು ಅವನಿಗೆ ಹಿತವಚನಗಳನ್ನಾಡಿದುದು (16-53).

05127001 ವೈಶಂಪಾಯನ ಉವಾಚ।
05127001a ಕೃಷ್ಣಸ್ಯ ವಚನಂ ಶ್ರುತ್ವಾ ಧೃತರಾಷ್ಟ್ರೋ ಜನೇಶ್ವರಃ।
05127001c ವಿದುರಂ ಸರ್ವಧರ್ಮಜ್ಞಾಂ ತ್ವರಮಾಣೋಽಭ್ಯಭಾಷತ।।

ವೈಶಂಪಾಯನನು ಹೇಳಿದನು: “ಕೃಷ್ಣನ ಮಾತನ್ನು ಕೇಳಿ ಜನೇಶ್ವರ ಧೃತರಾಷ್ಟ್ರನು ಸರ್ವಧರ್ಮಜ್ಞ ವಿದುರನಿಗೆ ಅವಸರದಲ್ಲಿ ಹೇಳಿದನು:

05127002a ಗಚ್ಚ ತಾತ ಮಹಾಪ್ರಾಜ್ಞಾಂ ಗಾಂಧಾರೀಂ ದೀರ್ಘದರ್ಶಿನೀಂ।
05127002c ಆನಯೇಹ ತಯಾ ಸಾರ್ಧಮನುನೇಷ್ಯಾಮಿ ದುರ್ಮತಿಂ।।

“ಅಯ್ಯಾ! ಹೋಗು! ಮಹಾಪ್ರಾಜ್ಞೆ, ದೀರ್ಘದರ್ಶಿನೀ ಗಾಂಧಾರಿಯನ್ನು ಕರೆದುಕೊಂಡು ಬಾ! ಅವಳ ಸಹಾಯದಿಂದ ನಾನು ಈ ದುರ್ಮತಿಯನ್ನು ಸರಿದಾರಿಗೆ ತರುತ್ತೇನೆ.

05127003a ಯದಿ ಸಾಪಿ ದುರಾತ್ಮಾನಂ ಶಮಯೇದ್ದುಷ್ಟಚೇತಸಂ।
05127003c ಅಪಿ ಕೃಷ್ಣಾಯ ಸುಹೃದಸ್ತಿಷ್ಠೇಮ ವಚನೇ ವಯಂ।।

ಅವಳು ಆ ದುರಾತ್ಮ ದುಷ್ಟಚೇತಸನನ್ನು ಶಾಂತಿಗೊಳಿಸಿದರೆ ಈ ಸುಹೃದಯಿ ಕೃಷ್ಣನ ವಚನದಂತೆ ನಾವು ನಡೆದುಕೊಳ್ಳಬಹುದು.

05127004a ಅಪಿ ಲೋಭಾಭಿಭೂತಸ್ಯ ಪಂಥಾನಮನುದರ್ಶಯೇತ್।
05127004c ದುರ್ಬುದ್ಧೇರ್ದುಃಸ್ಸಹಾಯಸ್ಯ ಸಮರ್ಥಂ ಬ್ರುವತೀ ವಚಃ।।

ಅವಳು ಸರಿಯಾದ ಮಾತುಗಳನ್ನಾಡಿ ಲೋಭದಿಂದ ತುಂಬಿದ, ದುರ್ಬುದ್ಧಿ, ದುಷ್ಟ ಸಹಾಯಕರನ್ನು ಹೊಂದಿದ ಇವನಿಗೆ ಸರಿಯಾದ ದಾರಿಯನ್ನು ತೋರಿಸಲು ಸಮರ್ಥಳಾದಾಳು.

05127005a ಅಪಿ ನೋ ವ್ಯಸನಂ ಘೋರಂ ದುರ್ಯೋಧನಕೃತಂ ಮಹತ್।
05127005c ಶಮಯೇಚ್ಚಿರರಾತ್ರಾಯ ಯೋಗಕ್ಷೇಮವದವ್ಯಯಂ।।

ಅವಳು ದುರ್ಯೋಧನನು ಮಾಡಿ ತರುವ ಈ ಮಹಾ ಘೋರ ವ್ಯಸನವನ್ನು ನಿಲ್ಲಿಸಿ ನಮಗೆ ಅವ್ಯಯವಾದ ಚಿರರಾತ್ರಿಯ ಯೋಗಕ್ಷೇಮಗಳನ್ನು ತರಬಹುದು.”

05127006a ರಾಜ್ಞಾಸ್ತು ವಚನಂ ಶ್ರುತ್ವಾ ವಿದುರೋ ದೀರ್ಘದರ್ಶಿನೀಂ।
05127006c ಆನಯಾಮಾಸ ಗಾಂಧಾರೀಂ ಧೃತರಾಷ್ಟ್ರಸ್ಯ ಶಾಸನಾತ್।।

ರಾಜನ ಮಾತನ್ನು ಕೇಳಿ ವಿದುರನು ಧೃತರಾಷ್ಟ್ರನ ಶಾಸನದಂತೆ ದೀರ್ಘದರ್ಶಿನೀ ಗಾಂಧಾರಿಯನ್ನು ಕರೆತಂದನು.

05127007 ಧೃತರಾಷ್ಟ್ರ ಉವಾಚ।
05127007a ಏಷ ಗಾಂಧಾರಿ ಪುತ್ರಸ್ತೇ ದುರಾತ್ಮಾ ಶಾಸನಾತಿಗಃ।
05127007c ಐಶ್ವರ್ಯಲೋಭಾದೈಶ್ವರ್ಯಂ ಜೀವಿತಂ ಚ ಪ್ರಹಾಸ್ಯತಿ।।

ಧೃತರಾಷ್ಟ್ರನು ಹೇಳಿದನು: “ಗಾಂಧಾರಿ! ಇಗೋ ನಿನ್ನ ಈ ದುರಾತ್ಮ ಮಗನು ನನ್ನ ಶಾಸನವನ್ನು ಮೀರಿ ನಡೆಯುತ್ತಿದ್ದಾನೆ. ಐಶ್ವರ್ಯಲೋಭದಿಂದ ಇದ್ದ ಐಶ್ವರ್ಯವನ್ನೂ ಜೀವವನ್ನೂ ನಗೆಗೀಡು ಮಾಡುತ್ತಿದ್ದಾನೆ.

05127008a ಅಶಿಷ್ಟವದಮರ್ಯಾದಃ ಪಾಪೈಃ ಸಹ ದುರಾತ್ಮಭಿಃ।
05127008c ಸಭಾಯಾ ನಿರ್ಗತೋ ಮೂಢೋ ವ್ಯತಿಕ್ರಮ್ಯ ಸುಹೃದ್ವಚಃ।।

ಶಿಷ್ಟಾಚಾರವಿಲ್ಲದ ಮರ್ಯಾದೆಯಿಲ್ಲದ ಆ ಮೂಢನು ಸುಹೃದಯರ ಮಾತನ್ನು ನಿರಾದರಿಸಿ ಪಾಪಿ ದುರಾತ್ಮರೊಡನೆ ಸಭೆಯಿಂದ ಹೊರ ಹೋಗಿದ್ದಾನೆ.””

05127009 ವೈಶಂಪಾಯನ ಉವಾಚ।
05127009a ಸಾ ಭರ್ತುರ್ವಚನಂ ಶ್ರುತ್ವಾ ರಾಜಪುತ್ರೀ ಯಶಸ್ವಿನೀ।
05127009c ಅನ್ವಿಚ್ಚಂತೀ ಮಹಚ್ಚ್ರೇಯೋ ಗಾಂಧಾರೀ ವಾಕ್ಯಮಬ್ರವೀತ್।।

ವೈಶಂಪಾಯನನು ಹೇಳಿದನು: “ಪತಿಯ ಮಾತನ್ನು ಕೇಳಿ ಯಶಸ್ವಿನೀ, ರಾಜಪುತ್ರೀ, ಗಾಂಧಾರಿಯು ಮಹಾಶ್ರೇಯಸ್ಕರವಾದುದನ್ನು ಬಯಸಿ ಈ ಮಾತನ್ನಾಡಿದಳು:

05127010a ಆನಯೇಹ ಸುತಂ ಕ್ಷಿಪ್ರಂ ರಾಜ್ಯಕಾಮುಕಮಾತುರಂ।
05127010c ನ ಹಿ ರಾಜ್ಯಮಶಿಷ್ಟೇನ ಶಕ್ಯಂ ಧರ್ಮಾರ್ಥಲೋಪಿನಾ।।

“ರಾಜ್ಯವನ್ನಾಳಲು ಬಯಸುವ ಮಗನನ್ನು ಕೂಡಲೇ ಬರಹೇಳಿ! ಏಕೆಂದರೆ ಧರ್ಮಾರ್ಥಗಳನ್ನು ಕಳೆದುಕೊಂಡವನು ರಾಜ್ಯವನ್ನು ಆಳಲು ಶಕ್ಯನಲ್ಲ.

05127011a ತ್ವಂ ಹ್ಯೇವಾತ್ರ ಭೃಶಂ ಗರ್ಹ್ಯೋ ಧೃತರಾಷ್ಟ್ರ ಸುತಪ್ರಿಯಃ।
05127011c ಯೋ ಜಾನನ್ಪಾಪತಾಮಸ್ಯ ತತ್ಪ್ರಜ್ಞಾಮನುವರ್ತಸೇ।।

ಧೃತರಾಷ್ಟ್ರ! ಈ ವಿಷಯದಲ್ಲಿ ನೀನೇ ಹೆಚ್ಚು ನಿಂದನೆಗೊಳಬೇಕಾದವನು. ಮಗನ ಮೇಲಿನ ಪ್ರೀತಿಯಿಂದ ಅವನು ಪಾಪಿಯೆಂದು ತಿಳಿದೂ ಅವನ ಮನಸ್ಸನ್ನು ಅನುಸರಿಸುತ್ತಾ ಬಂದಿರುವೆ.

05127012a ಸ ಏಷ ಕಾಮಮನ್ಯುಭ್ಯಾಂ ಪ್ರಲಬ್ಧೋ ಮೋಹಮಾಸ್ಥಿತಃ।
05127012c ಅಶಕ್ಯೋಽದ್ಯ ತ್ವಯಾ ರಾಜನ್ವಿನಿವರ್ತಯಿತುಂ ಬಲಾತ್।।

ರಾಜನ್! ಇಂದು ಕಾಮ-ಕ್ರೋಧಗಳಿಂದ ಪ್ರಲಬ್ಧನಾಗಿ ಹುಚ್ಚುಹಿಡಿದಿರುವ ಅವನನ್ನು ಬಲಾತ್ಕಾರವಾಗಿ ನೀನು ಹಿಂದೆ ತರಲು ಅಶಕ್ಯನಾಗಿದ್ದೀಯೆ.

05127013a ರಾಜ್ಯಪ್ರದಾನೇ ಮೂಢಸ್ಯ ಬಾಲಿಶಸ್ಯ ದುರಾತ್ಮನಃ।
05127013c ದುಃಸ್ಸಹಾಯಸ್ಯ ಲುಬ್ಧಸ್ಯ ಧೃತರಾಷ್ಟ್ರೋಽಶ್ನುತೇ ಫಲಂ।।

ಧೃತರಾಷ್ಟ್ರನು ಈ ರಾಜ್ಯವನ್ನು ಮೂಢ, ಹುಡುಗುಬುದ್ಧಿಯ, ದುರಾತ್ಮ, ದುಷ್ಟರ ಸಹಾಯಪಡೆದಿರುವ, ಲುಬ್ಧನಿಗೆ ಕೊಡುವಂಥಹ ಫಲವನ್ನು ಬೆಳೆಯಿಸಿದ್ದಾನೆ.

05127014a ಕಥಂ ಹಿ ಸ್ವಜನೇ ಭೇದಮುಪೇಕ್ಷೇತ ಮಹಾಮತಿಃ।
05127014c ಭಿನ್ನಂ ಹಿ ಸ್ವಜನೇನ ತ್ವಾಂ ಪ್ರಸಹಿಷ್ಯಂತಿ ಶತ್ರವಃ।।

ಏಕೆಂದರೆ ಯಾವ ಮಹಾಮತಿಯು ತನ್ನವರಲ್ಲಿಯೇ ಉಂಟಾದ ಭೇದವನ್ನು ಕಡೆಗಣಿಸಿಯಾನು? ನೀನೇ ಸ್ವಜನರಲ್ಲಿ ಒಡಕನ್ನು ತಂದರೆ ಶತ್ರುಗಳು ಸಂತೋಷಪಡುವುದಿಲ್ಲವೇ?

05127015a ಯಾ ಹಿ ಶಕ್ಯಾ ಮಹಾರಾಜ ಸಾಮ್ನಾ ದಾನೇನ ವಾ ಪುನಃ।
05127015c ನಿಸ್ತರ್ತುಮಾಪದಃ ಸ್ವೇಷು ದಂಡಂ ಕಸ್ತತ್ರ ಪಾತಯೇತ್।।

ಮಹಾರಾಜ! ಸಾಮ-ದಾನಗಳಿಂದ ಆಪತ್ತನ್ನು ನಿಲ್ಲಿಸಬಹುದಾದಾಗ ಯಾರು ತಾನೇ ತನ್ನವರನ್ನು ದಂಡದಿಂದ ಹೊಡೆಯುತ್ತಾರೆ?”

05127016a ಶಾಸನಾದ್ಧೃತರಾಷ್ಟ್ರಸ್ಯ ದುರ್ಯೋಧನಮಮರ್ಷಣಂ।
05127016c ಮಾತುಶ್ಚ ವಚನಾತ್ಕ್ಷತ್ತಾ ಸಭಾಂ ಪ್ರಾವೇಶಯತ್ ಪುನಃ।।

ಧೃತರಾಷ್ಟ್ರನ ಶಾಸನದಂತೆ ಮತ್ತು ತಾಯಿಯ ವಚನದಂತೆ ಕ್ಷತ್ತನು ಪುನಃ ಅಮರ್ಷಣ ದುರ್ಯೋಧನನನ್ನು ಪ್ರವೇಶಿಸಿದನು.

05127017a ಸ ಮಾತುರ್ವಚನಾಕಾಂಕ್ಷೀ ಪ್ರವಿವೇಶ ಸಭಾಂ ಪುನಃ।
05127017c ಅಭಿತಾಂರೇಕ್ಷಣಃ ಕ್ರೋಧಾನ್ನಿಃಶ್ವಸನ್ನಿವ ಪನ್ನಗಃ।।

ತಾಯಿಯು ಏನು ಹೇಳುವಳೆಂದು ನಿರೀಕ್ಷಿಸಿದ್ದ ಅವನು ಕೆಂಪು ಕಣ್ಣುಗಳುಳ್ಳವನಾಗಿ, ಕೋಪದಿಂದ ಹಾವಿನಂತೆ ಭುಸುಗುಟ್ಟುತ್ತಾ ಪುನಃ ಸಭೆಯನ್ನು ಪ್ರವೇಶಿಸಿದನು.

05127018a ತಂ ಪ್ರವಿಷ್ಟಮಭಿಪ್ರೇಕ್ಷ್ಯ ಪುತ್ರಮುತ್ಪಥಮಾಸ್ಥಿತಂ।
05127018c ವಿಗರ್ಹಮಾಣಾ ಗಾಂಧಾರೀ ಸಮರ್ಥಂ ವಾಕ್ಯಮಬ್ರವೀತ್।।

ಹಾರಾಡುತ್ತಿದ್ದ ತನ್ನ ಮಗನು ಪ್ರವೇಶಿಸಿದುದನ್ನು ಕಂಡು ಗಾಂಧಾರಿಯು ಬೈಯುತ್ತಾ ಈ ಸಮರ್ಥ ಮಾತುಗಳನ್ನಾಡಿದಳು:

05127019a ದುರ್ಯೋಧನ ನಿಬೋಧೇದಂ ವಚನಂ ಮಮ ಪುತ್ರಕ।
05127019c ಹಿತಂ ತೇ ಸಾನುಬಂಧಸ್ಯ ತಥಾಯತ್ಯಾಂ ಸುಖೋದಯಂ।।

“ಮಗನೇ! ದುರ್ಯೋಧನ! ನಿನ್ನ ಮತ್ತು ನಿನ್ನ ಜೊತೆಯಿರುವವರ ಹಿತಕ್ಕಾಗಿ ಮತ್ತು ಮುಂದೆ ಸುಖವಾಗಲೆಂದು ಹೇಳುವ ನನ್ನ ಈ ಮಾತುಗಳನ್ನು ಅರ್ಥಮಾಡಿಕೋ!

05127020a ಭೀಷ್ಮಸ್ಯ ತು ಪಿತುಶ್ಚೈವ ಮಮ ಚಾಪಚಿತಿಃ ಕೃತಾ।
05127020c ಭವೇದ್ದ್ರೋಣಮುಖಾನಾಂ ಚ ಸುಹೃದಾಂ ಶಾಮ್ಯತಾ ತ್ವಯಾ।।

ನೀನು ಶಾಂತಿಯನ್ನುಂಟುಮಾಡುವುದರ ಮೂಲಕ ಭೀಷ್ಮನ, ತಂದೆಯ, ನನ್ನ ಮತ್ತು ದ್ರೋಣನೇ ಮೊದಲಾದ ಸುಹೃದಯರಿಗೆ ಗೌರವವನ್ನು ನೀಡುತ್ತೀಯೆ.

05127021a ನ ಹಿ ರಾಜ್ಯಂ ಮಹಾಪ್ರಾಜ್ಞಾ ಸ್ವೇನ ಕಾಮೇನ ಶಕ್ಯತೇ।
05127021c ಅವಾಪ್ತುಂ ರಕ್ಷಿತುಂ ವಾಪಿ ಭೋಕ್ತುಂ ವಾ ಭರತರ್ಷಭ।।

ಮಹಾಪ್ರಾಜ್ಞ! ಭರತರ್ಷಭ! ಕೇವಲ ಸ್ವ-ಇಚ್ಛೆಯಂತೆ ರಾಜ್ಯವನ್ನು ಪಡೆಯುವುದಕ್ಕಾಗಲೀ, ರಕ್ಷಿಸುವುದಕ್ಕಾಗಲೀ ಅಥವಾ ಭೋಗಿಸುವುದಕ್ಕಾಗಲೀ ಸಾಧ್ಯವಿಲ್ಲ.

05127022a ನ ಹ್ಯವಶ್ಯೇಂದ್ರಿಯೋ ರಾಜ್ಯಮಶ್ನೀಯಾದ್ದೀರ್ಘಮಂತರಂ।
05127022c ವಿಜಿತಾತ್ಮಾ ತು ಮೇಧಾವೀ ಸ ರಾಜ್ಯಮಭಿಪಾಲಯೇತ್।।

ಏಕೆಂದರೆ ಇಂದ್ರಿಯಗಳನ್ನು ವಶದಲ್ಲಿಟ್ಟುಕೊಂಡಿರದವನು ತನ್ನ ರಾಜ್ಯವನ್ನು ಬಹುಕಾಲ ಇಟ್ಟುಕೊಳ್ಳುವುದಿಲ್ಲ. ವಿಜಿತಾತ್ಮ, ಮೇಧಾವಿಯೇ ರಾಜ್ಯವನ್ನು ಚೆನ್ನಾಗಿ ಪಾಲಿಸುತ್ತಾನೆ.

05127023a ಕಾಮಕ್ರೋಧೌ ಹಿ ಪುರುಷಮರ್ಥೇಭ್ಯೋ ವ್ಯಪಕರ್ಷತಃ।
05127023c ತೌ ತು ಶತ್ರೂ ವಿನಿರ್ಜಿತ್ಯ ರಾಜಾ ವಿಜಯತೇ ಮಹೀಂ।।

ಕಾಮ-ಕ್ರೋಧಗಳು ಪುರುಷನನ್ನು ಅರ್ಥ-ಧರ್ಮಗಳಿಂದ ದೂರ ಎಳೆದೊಯ್ಯುತ್ತವೆ. ಈ ಇಬ್ಬರು ಶತ್ರುಗಳನ್ನು ಸೋಲಿಸಿ ರಾಜನು ಮಹಿಯನ್ನು ಗೆಲ್ಲುತ್ತಾನೆ.

05127024a ಲೋಕೇಶ್ವರಪ್ರಭುತ್ವಂ ಹಿ ಮಹದೇತದ್ದುರಾತ್ಮಭಿಃ।
05127024c ರಾಜ್ಯಂ ನಾಮೇಪ್ಸಿತಂ ಸ್ಥಾನಂ ನ ಶಕ್ಯಮಭಿರಕ್ಷಿತುಂ।।

ಲೋಕೇಶ್ವರತ್ವವೂ ಪ್ರಭುತ್ವವೂ ಮಹತ್ತರವಾದವುಗಳು. ದುರಾತ್ಮರು ರಾಜ್ಯವನ್ನು ಪಡೆದರೂ ಆ ಸ್ಥಾನವನ್ನು ಬಹುಕಾಲ ರಕ್ಷಿಸಿಕೊಳ್ಳಲು ಶಕ್ಯರಿರುವುದಿಲ್ಲ.

05127025a ಇಂದ್ರಿಯಾಣಿ ಮಹತ್ಪ್ರೇಪ್ಸುರ್ನಿಯಚ್ಚೇದರ್ಥಧರ್ಮಯೋಃ।
05127025c ಇಂದ್ರಿಯೈರ್ನಿಯತೈರ್ಬುದ್ಧಿರ್ವರ್ಧತೇಽಗ್ನಿರಿವೇಂಧನೈಃ।।

ಮಹತ್ತರವಾದುದನ್ನು ಬಯಸುವವನು ಇಂದ್ರಿಯಗಳನ್ನು ಅರ್ಥ-ಧರ್ಮಗಳ ನಿಯಂತ್ರಣದಲ್ಲಿರಿಸಿಕೊಂಡಿರಬೇಕು. ಇಂಧನಗಳನ್ನು ಸುಡುವುದರಿಂದ ಬೆಂಕಿಯು ಹೆಚ್ಚು ಉರಿಯುವಂತೆ ಇಂದ್ರಿಯಗಳನ್ನು ನಿಯಂತ್ರಿಸುವುದರಿಂದ ಬುದ್ಧಿಯು ಬೆಳೆಯುತ್ತದೆ.

05127026a ಅವಿಧ್ಯೇಯಾನಿ ಹೀಮಾನಿ ವ್ಯಾಪಾದಯಿತುಮಪ್ಯಲಂ।
05127026c ಅವಿಧೇಯಾ ಇವಾದಾಂತಾ ಹಯಾಃ ಪಥಿ ಕುಸಾರಥಿಂ।।

ಇವುಗಳನ್ನು ಕಟುವಾಗಿ ನಿಯಂತ್ರಿಸದೇ ಇದ್ದರೆ ಇವು ವಿಧೇಯವಲ್ಲದ ಪಳಗಿಸಲ್ಪಡದೇ ಇರುವ ಕುದುರೆಗಳು ದುರ್ಬಲ ಸಾರಥಿಯಿರುವ ರಥವನ್ನು ಹೇಗೋ ಹಾಗೆ ವಿನಾಶದ ದಾರಿಗೆ ಎಳೆದೊಯ್ಯುತ್ತವೆ.

05127027a ಅವಿಜಿತ್ಯ ಯ ಆತ್ಮಾನಮಮಾತ್ಯಾನ್ವಿಜಿಗೀಷತೇ।
05127027c ಅಜಿತಾತ್ಮಾಜಿತಾಮಾತ್ಯಃ ಸೋಽವಶಃ ಪರಿಹೀಯತೇ।।

ತನ್ನನ್ನು ತಾನು ಗೆಲ್ಲದೇ ಅಮಾತ್ಯರನ್ನು ಗೆಲ್ಲಲು ಬಯಸುವವನು ತನ್ನನ್ನೂ ಅಮಾತ್ಯರನ್ನೂ ಗೆಲ್ಲದೇ ಅವಶನಾಗಿ ನಾಶಹೊಂದುತ್ತಾನೆ.

05127028a ಆತ್ಮಾನಮೇವ ಪ್ರಥಮಂ ದೇಶರೂಪೇಣ ಯೋ ಜಯೇತ್।
05127028c ತತೋಽಮಾತ್ಯಾನಮಿತ್ರಾಂಶ್ಚ ನ ಮೋಘಂ ವಿಜಿಗೀಷತೇ।।

ಆದರೆ ಯಾರು ದೇಶರೂಪದಲ್ಲಿರುವ ಆತ್ಮವನ್ನೇ ಮೊದಲು ಗೆಲ್ಲುತ್ತಾರೋ ಅವರು ಅಮಾತ್ಯರು ಮತ್ತು ಮಿತ್ರರನ್ನು ಪಡೆಯುವುದರಲ್ಲಿ ಸೋಲುವುದಿಲ್ಲ.

05127029a ವಶ್ಯೇಂದ್ರಿಯಂ ಜಿತಾಮಾತ್ಯಂ ಧೃತದಂಡಂ ವಿಕಾರಿಷು।
05127029c ಪರೀಕ್ಷ್ಯಕಾರಿಣಂ ಧೀರಮತ್ಯಂತಂ ಶ್ರೀರ್ನಿಷೇವತೇ।।

ಇಂದ್ರಿಯಗಳನ್ನು ವಶದಲ್ಲಿಟ್ಟುಕೊಂಡಿರುವವನನ್ನು, ಅಮಾತ್ಯರನ್ನು ಗೆದ್ದಿರುವುವವನನ್ನು, ಉಲ್ಲಂಘಿಸುವವರನ್ನು ಧೃಢವಾಗಿ ಶಿಕ್ಷಿಸುವವರನ್ನು, ಪರಿಶೀಲಿಸಿ ಕೆಲಸಮಾಡುವವರನ್ನು, ಮತ್ತು ಧೀರರನ್ನು ಶ್ರೀಯು ಅತ್ಯಂತವಾಗಿ ಸೇವಿಸುತ್ತಾಳೆ.

05127030a ಕ್ಷುದ್ರಾಕ್ಷೇಣೇವ ಜಾಲೇನ ಝಷಾವಪಿಹಿತಾವುಭೌ।
05127030c ಕಾಮಕ್ರೋಧೌ ಶರೀರಸ್ಥೌ ಪ್ರಜ್ಞಾನಂ ತೌ ವಿಲುಂಪತಃ।।

ರಂಧ್ರಗಳು ಮುಚ್ಚಲ್ಪಟ್ಟ ಜಾಲದಲ್ಲಿ ಸಿಲುಕಿದ ಎರಡು ಮೀನುಗಳಂತೆ ಪ್ರಜ್ಞಾನಿಯ ಶರೀರದಲ್ಲಿರುವ ಕಾಮ-ಕ್ರೋಧಗಳು ಶಕ್ತಿಯನ್ನು ಕಳೆದುಕೊಳ್ಳುತ್ತವೆ.

05127031a ಯಾಭ್ಯಾಂ ಹಿ ದೇವಾಃ ಸ್ವರ್ಯಾತುಃ ಸ್ವರ್ಗಸ್ಯಾಪಿದಧುರ್ಮುಖಂ।
05127031c ಬಿಭ್ಯತೋಽನುಪರಾಗಸ್ಯ ಕಾಮಕ್ರೋಧೌ ಸ್ಮ ವರ್ಧಿತೌ।।
05127032a ಕಾಮಂ ಕ್ರೋಧಂ ಚ ಲೋಭಂ ಚ ದಂಭಂ ದರ್ಪಂ ಚ ಭೂಮಿಪಃ।
05127032c ಸಮ್ಯಗ್ವಿಜೇತುಂ ಯೋ ವೇದ ಸ ಮಹೀಮಭಿಜಾಯತೇ।।

ಕಾಮ, ಕ್ರೋಧ, ಲೋಭ, ದಂಭ ಮತ್ತು ದರ್ಪಗಳನ್ನು ಗೆಲ್ಲಲು ಚೆನ್ನಾಗಿ ತಿಳಿದಿರುವ ಭೂಮಿಪನು ಇಡೀ ಮಹಿಯನ್ನು ಆಳುತ್ತಾನೆ.

05127033a ಸತತಂ ನಿಗ್ರಹೇ ಯುಕ್ತ ಇಂದ್ರಿಯಾಣಾಂ ಭವೇನ್ನೃಪಃ।
05127033c ಈಪ್ಸನ್ನರ್ಥಂ ಚ ಧರ್ಮಂ ಚ ದ್ವಿಷತಾಂ ಚ ಪರಾಭವಂ।।

ಇಂದ್ರಿಯ ನಿಗ್ರಹದಲ್ಲಿ ಸತತವೂ ನಿರತನಾಗಿರುವ ನೃಪನು ಅರ್ಥ-ಧರ್ಮಗಳನ್ನು ಪಡೆದು ಶತ್ರುಗಳನ್ನು ಸೋಲಿಸುತ್ತಾನೆ.

05127034a ಕಾಮಾಭಿಭೂತಃ ಕ್ರೋಧಾದ್ವಾ ಯೋ ಮಿಥ್ಯಾ ಪ್ರತಿಪದ್ಯತೇ।
05127034c ಸ್ವೇಷು ಚಾನ್ಯೇಷು ವಾ ತಸ್ಯ ನ ಸಹಾಯಾ ಭವಂತ್ಯುತ।।

ಕಾಮ ಕ್ರೋಧಗಳಿಂದ ತುಂಬಿ ಯಾರು ತನ್ನವರೊಡನೆ ಅಥವಾ ಇತರರೊಡನೆ ಸುಳ್ಳಾಗಿ ನಡೆದುಕೊಳ್ಳುತ್ತಾನೋ ಅವನಿಗೆ ಸಹಾಯಕರೇ ಇರುವುದಿಲ್ಲ.

05127035a ಏಕೀಭೂತೈರ್ಮಹಾಪ್ರಾಜ್ಞೈಃ ಶೂರೈರರಿನಿಬರ್ಹಣೈಃ।
05127035c ಪಾಂಡವೈಃ ಪೃಥಿವೀಂ ತಾತ ಭೋಕ್ಷ್ಯಸೇ ಸಹಿತಃ ಸುಖೀ।।

ಮಗನೇ! ಒಂದಾಗಿರುವ, ಮಹಾಪ್ರಾಜ್ಞ, ಶೂರ, ಅರಿಗಳನ್ನು ಸದೆಬಡಿಯುವ ಪಾಂಡವರೊಡನೆ ನೀನು ಭೂಮಿಯನ್ನು ಸುಖವಾಗಿ ಭೋಗಿಸಬಲ್ಲೆ.

05127036a ಯಥಾ ಭೀಷ್ಮಃ ಶಾಂತನವೋ ದ್ರೋಣಶ್ಚಾಪಿ ಮಹಾರಥಃ।
05127036c ಆಹತುಸ್ತಾತ ತತ್ಸತ್ಯಮಜೇಯೌ ಕೃಷ್ಣಪಾಂಡವೌ।।

ಮಗನೇ! ಭೀಷ್ಮ ಶಾಂತನವ ಮತ್ತು ಮಹಾರಥಿ ದ್ರೋಣನೂ ಕೂಡ ಹೇಳಿದಂತೆ ಕೃಷ್ಣ-ಪಾಂಡವರು ಅಜೇಯರು.

05127037a ಪ್ರಪದ್ಯಸ್ವ ಮಹಾಬಾಹುಂ ಕೃಷ್ಣಮಕ್ಲಿಷ್ಟಕಾರಿಣಂ।
05127037c ಪ್ರಸನ್ನೋ ಹಿ ಸುಖಾಯ ಸ್ಯಾದುಭಯೋರೇವ ಕೇಶವಃ।।

ಈ ಅಕ್ಲಿಷ್ಟಕಾರಿಣಿ, ಮಹಾಬಾಹು ಕೃಷ್ಣನ ಶರಣು ಹೋಗು. ಕೇಶವನು ಪ್ರಸನ್ನನಾದರೆ ಎರಡೂ ಪಕ್ಷಗಳಿಗೂ ಸುಖವಾಗುತ್ತದೆ.

05127038a ಸುಹೃದಾಮರ್ಥಕಾಮಾನಾಂ ಯೋ ನ ತಿಷ್ಠತಿ ಶಾಸನೇ।
05127038c ಪ್ರಾಜ್ಞಾನಾಂ ಕೃತವಿದ್ಯಾನಾಂ ಸ ನರಃ ಶತ್ರುನಂದನಃ।।

ಅರ್ಥವನ್ನು ಬಯಸುವ ಯಾವ ನರನು ಸುಹೃದಯಿಗಳ, ಪ್ರಾಜ್ಞರ ಮತ್ತು ವಿದ್ಯಾವಂತರ ಮಾತಿನಂತೆ ನಡೆಯುವುದಿಲ್ಲವೋ ಅವನು ಶತ್ರುಗಳಿಗೆ ಆನಂದವನ್ನು ನೀಡುತ್ತಾನೆ.

05127039a ನ ಯುದ್ಧೇ ತಾತ ಕಲ್ಯಾಣಂ ನ ಧರ್ಮಾರ್ಥೌ ಕುತಃ ಸುಖಂ।
05127039c ನ ಚಾಪಿ ವಿಜಯೋ ನಿತ್ಯಂ ಮಾ ಯುದ್ಧೇ ಚೇತ ಆಧಿಥಾಃ।।

ಮಗನೇ! ಯುದ್ಧದಲ್ಲಿ ಕಲ್ಯಾಣವಿಲ್ಲ, ಧರ್ಮಾರ್ಥಗಳಿಲ್ಲ. ಸುಖವು ಎಲ್ಲಿಂದ? ಯಾವಾಗಲೂ ವಿಜಯವೂ ನಿಶ್ಚಿತವಾದುದಲ್ಲ. ಆದುದರಿಂದ ಯುದ್ಧದ ಕುರಿತು ಯೋಚಿಸಬೇಡ.

05127040a ಭೀಷ್ಮೇಣ ಹಿ ಮಹಾಪ್ರಾಜ್ಞಾ ಪಿತ್ರಾ ತೇ ಬಾಹ್ಲಿಕೇನ ಚ।
05127040c ದತ್ತೋಽಮ್ಶಃ ಪಾಂಡುಪುತ್ರಾಣಾಂ ಭೇದಾದ್ಭೀತೈರರಿಂದಮ।।

ಅರಿಂದಮ! ಒಡಕಿನ ಭಯದಿಂದ ಬೀಷ್ಮ, ಮಹಾಪ್ರಾಜ್ಞನಾದ ನಿನ್ನ ತಂದೆ ಮತ್ತು ಬಾಹ್ಲೀಕರು ಪಾಂಡುಪುತ್ರರಿಗೆ ಕೊಟ್ಟಿದ್ದರು.

05127041a ತಸ್ಯ ಚೈತತ್ಪ್ರದಾನಸ್ಯ ಫಲಮದ್ಯಾನುಪಶ್ಯಸಿ।
05127041c ಯದ್ಭುಂಕ್ಷೇ ಪೃಥಿವೀಂ ಸರ್ವಾಂ ಶೂರೈರ್ನಿಹತಕಂಟಕಾಂ।।

ಈಗ ನಿನ್ನಲ್ಲಿರುವುದು, ನೀನು ನೋಡಿರುವುದು ಆ ಶಾಂತಿಯ ಫಲ. ಆ ಶೂರರು ಕಂಟಕರನ್ನೆಲ್ಲ ನಾಶಗೊಳಿಸಿರುವ ಈ ಭೂಮಿಯನ್ನು ನೀನು ಭೋಗಿಸುತ್ತಿದ್ದೀಯೆ.

05127042a ಪ್ರಯಚ್ಚ ಪಾಂಡುಪುತ್ರಾಣಾಂ ಯಥೋಚಿತಮರಿಂದಮ।
05127042c ಯದೀಚ್ಚಸಿ ಸಹಾಮಾತ್ಯೋ ಭೋಕ್ತುಮರ್ಧಂ ಮಹೀಕ್ಷಿತಾಂ।।

ಅರಿಂದಮ! ಯಥೋಚಿತವಾಗಿರುವುದನ್ನು ಪಾಂಡುಪುತ್ರರಿಗೆ ಕೊಟ್ಟುಬಿಡು. ಇಷ್ಟಪಟ್ಟರೆ ಅಮಾತ್ಯರೊಂದಿಗೆ ಅರ್ಧ ಭೂಮಿಯನ್ನು ಭೋಗಿಸು.

05127043a ಅಲಮರ್ಧಂ ಪೃಥಿವ್ಯಾಸ್ತೇ ಸಹಾಮಾತ್ಯಸ್ಯ ಜೀವನಂ।
05127043c ಸುಹೃದಾಂ ವಚನೇ ತಿಷ್ಠನ್ಯಶಃ ಪ್ರಾಪ್ಸ್ಯಸಿ ಭಾರತ।।

ನಿನ್ನ ಅಮಾತ್ಯರೊಂದಿಗೆ ಜೀವನ ಮಾಡಲು ಅರ್ಧ ಭೂಮಿಯು ಸಾಕು. ಭಾರತ! ಸುಹೃದರ ಮಾತಿನಂತೆ ನಡೆದುಕೊಂಡರೆ ಯಶಸ್ಸನ್ನು ಪಡೆಯುತ್ತೀಯೆ.

05127044a ಶ್ರೀಮದ್ಭಿರಾತ್ಮವದ್ಭಿರ್ಹಿ ಬುದ್ಧಿಮದ್ಭಿರ್ಜಿತೇಂದ್ರಿಯೈಃ।
05127044c ಪಾಂಡವೈರ್ವಿಗ್ರಹಸ್ತಾತ ಭ್ರಂಶಯೇನ್ಮಹತಃ ಸುಖಾತ್।।

ಮಗನೇ! ಶ್ರೀಮಂತರಾಗಿರುವ, ಆತ್ಮವನ್ನು ನಿಯಂತ್ರಿಸಿಕೊಂಡಿರುವ, ಬುದ್ಧಿವಂತರಾದ, ಜಿತೇಂದ್ರಿಯರಾದ ಪಾಂಡವರೊಂದಿಗೆ ಜಗಳವಾಡಿ ನೀನು ಮಹಾ ಸುಖದಿಂದ ವಂಚಿತನಾಗುತ್ತೀಯೆ.

05127045a ನಿಗೃಹ್ಯ ಸುಹೃದಾಂ ಮನ್ಯುಂ ಶಾಧಿ ರಾಜ್ಯಂ ಯಥೋಚಿತಂ।
05127045c ಸ್ವಮಂಶಂ ಪಾಂಡುಪುತ್ರೇಭ್ಯಃ ಪ್ರದಾಯ ಭರತರ್ಷಭ।।

ಭರತರ್ಷಭ! ಸುಹೃದಯರ ಕೋಪವನ್ನು ತಡೆದು ಯಥೋಚಿತವಾಗಿ ಪಾಂಡುಪುತ್ರರಿಗೆ ಅವರ ಭಾಗವನ್ನು ಕೊಟ್ಟು ರಾಜ್ಯವನ್ನು ಆಳು.

05127046a ಅಲಮಹ್ನಾ ನಿಕಾರೋಽಯಂ ತ್ರಯೋದಶ ಸಮಾಃ ಕೃತಃ।
05127046c ಶಮಯೈನಂ ಮಹಾಪ್ರಾಜ್ಞಾ ಕಾಮಕ್ರೋಧಸಮೇಧಿತಂ।।

ಅವರನ್ನು ಈ ಹದಿಮೂರು ವರ್ಷಗಳು ಕಾಡಿದ್ದುದು ಸಾಕು. ಮಹಾಪ್ರಾಜ್ಞ! ಕಾಮ-ಕ್ರೋಧಗಳಿಂದ ಉರಿಯುವುದನ್ನು ಶಮನಗೊಳಿಸು.

05127047a ನ ಚೈಷ ಶಕ್ತಃ ಪಾರ್ಥಾನಾಂ ಯಸ್ತ್ವದರ್ಥಮಭೀಪ್ಸತಿ।
05127047c ಸೂತಪುತ್ರೋ ದೃಢಕ್ರೋಧೋ ಭ್ರಾತಾ ದುಃಶಾಸನಶ್ಚ ತೇ।।

ಯಾರ ಸಂಪತ್ತನ್ನು ನಿನ್ನದಾಗಿರಿಸಿಕೊಂಡಿರುವೆಯೋ ಆ ಪಾರ್ಥರನ್ನು ಎದುರಿಸಲು ನೀನಾಗಲೀ, ಕ್ರುದ್ಧನಾದ ಸೂತಪುತ್ರನಾಗಲೀ, ನಿನ್ನ ತಮ್ಮ ದುಃಶಾಸನನಾಗಲೀ ಶಕ್ತರಿಲ್ಲ.

05127048a ಭೀಷ್ಮೇ ದ್ರೋಣೇ ಕೃಪೇ ಕರ್ಣೇ ಭೀಮಸೇನೇ ಧನಂಜಯೇ।
05127048c ಧೃಷ್ಟದ್ಯುಮ್ನೇ ಚ ಸಂಕ್ರುದ್ಧೇ ನ ಸ್ಯುಃ ಸರ್ವಾಃ ಪ್ರಜಾ ಧ್ರುವಂ।।

ಭೀಷ್ಮ, ದ್ರೋಣ, ಕೃಪ, ಕರ್ಣ, ಭೀಮಸೇನ, ಧನಂಜಯ ಮತ್ತು ಧೃಷ್ಟದ್ಯುಮ್ನರು ಕುಪಿತರಾದರೆ ಎಲ್ಲ ಪ್ರಜೆಗಳೂ ಇಲ್ಲವಾಗುವುದು ಖಂಡಿತ.

05127049a ಅಮರ್ಷವಶಮಾಪನ್ನೋ ಮಾ ಕುರೂಂಸ್ತಾತ ಜೀಘನಃ।
05127049c ಸರ್ವಾ ಹಿ ಪೃಥಿವೀ ಸ್ಪೃಷ್ಟಾ ತ್ವತ್ಪಾಂಡವಕೃತೇ ವಧಂ।।

ಮಗನೇ! ಕ್ರೋಧದ ವಶದಲ್ಲಿ ಬಂದು ಕುರುಗಳನ್ನು ಕೊಲ್ಲಿಸಬೇಡ. ನಿನ್ನಿಂದಾಗಿ ಪಾಂಡವರು ಭೂಮಿಯಲ್ಲಿರುವ ಎಲ್ಲರನ್ನೂ ವಧಿಸದಿರಲಿ.

05127050a ಯಚ್ಚ ತ್ವಂ ಮನ್ಯಸೇ ಮೂಢ ಭೀಷ್ಮದ್ರೋಣಕೃಪಾದಯಃ।
05127050c ಯೋತ್ಸ್ಯಂತೇ ಸರ್ವಶಕ್ತ್ಯೇತಿ ನೈತದದ್ಯೋಪಪದ್ಯತೇ।।

ಮೂಢ! ಭೀಷ್ಮ, ದ್ರೋಣ, ಕೃಪ ಮೊದಲಾದವರು ಸರ್ವ ಶಕ್ತಿಯನ್ನೂ ಉಪಯೋಗಿಸಿ ನಿನ್ನ ಪರವಾಗಿ ಹೋರಾಡುತ್ತಾರೆ ಎಂದು ನೀನು ತಿಳಿದುಕೊಂಡಿದ್ದೀಯೆ. ಆದರೆ ಅದು ಹಾಗೆ ಆಗುವುದಿಲ್ಲ.

05127051a ಸಮಂ ಹಿ ರಾಜ್ಯಂ ಪ್ರೀತಿಶ್ಚ ಸ್ಥಾನಂ ಚ ವಿಜಿತಾತ್ಮನಾಂ।
05127051c ಪಾಂಡವೇಷ್ವಥ ಯುಷ್ಮಾಸು ಧರ್ಮಸ್ತ್ವಭ್ಯಧಿಕಸ್ತತಃ।।

ಏಕೆಂದರೆ ವಿಜಿತಾತ್ಮರಾದ ಇವರಿಗೆ ನಿನ್ನ ಮೇಲೆ ಮತ್ತು ಪಾಂಡವರ ಮೇಲೆ ಇರುವ ಪ್ರೀತಿಯು ಸಮನಾದುದು.

05127052a ರಾಜಪಿಂಡಭಯಾದೇತೇ ಯದಿ ಹಾಸ್ಯಂತಿ ಜೀವಿತಂ।
05127052c ನ ಹಿ ಶಕ್ಷ್ಯಂತಿ ರಾಜಾನಂ ಯುಧಿಷ್ಠಿರಮುದೀಕ್ಷಿತುಂ।।

ಒಂದುವೇಳೆ ಇವರು ರಾಜಪಿಂಡದ ಭಯದಿಂದ ಜೀವನವನ್ನು ಮುಡುಪಾಗಿಟ್ಟರೂ ಅವರು ರಾಜ ಯುಧಿಷ್ಠಿರನ ಮುಖವನ್ನು ನೇರವಾಗಿ ನೋಡಲಾರರು.

05127053a ನ ಲೋಭಾದರ್ಥಸಂಪತ್ತಿರ್ನರಾಣಾಮಿಹ ದೃಶ್ಯತೇ।
05127053c ತದಲಂ ತಾತ ಲೋಭೇನ ಪ್ರಶಾಮ್ಯ ಭರತರ್ಷಭ।।

ಭರತರ್ಷಭ! ಲೋಭದಿಂದ ಸಂಪತ್ತನ್ನು ಗಳಿಸುವ ನರರು ಇಲ್ಲಿ ಕಂಡುಬರುವುದಿಲ್ಲ. ಆದುದರಿಂದ ಮಗನೇ! ಲೋಭವನ್ನು ತಡೆದು ಶಾಂತನಾಗು.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಂಧಾರೀವಾಕ್ಯೇ ಸಪ್ತವಿಂಶತ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಂಧಾರೀವಾಕ್ಯದಲ್ಲಿ ನೂರಾಇಪ್ಪತ್ತೇಳನೆಯ ಅಧ್ಯಾಯವು.