126 ಕೃಷ್ಣವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಭಗವದ್ಯಾನ ಪರ್ವ

ಅಧ್ಯಾಯ 126

ಸಾರ

ಕೋಪಗೊಂಡ ಕೃಷ್ಣನು ದ್ಯೂತಪ್ರಸಂಗವನ್ನೇ ಮುಖ್ಯವಾಗಿಟ್ಟುಕೊಂಡು ದುರ್ಯೋಧನನು ಪಾಂಡವರೊಂದಿಗೆ ಅಧರ್ಮವಾಗಿ ನಡೆದುಕೊಂಡಿದುದನ್ನು ಹೇಳುವುದು (1-20). ಆಗ ಕುರು ವೃದ್ಧರು ನಮ್ಮನ್ನು ಸೆರೆಹಿಡಿಯಲು ಯೋಚಿಸುತ್ತಿದ್ದಾರೆ ಎಂದು ದುಃಶಾಸನನು ದುರ್ಯೋಧನನಿಗೆ ಹೇಳಲು ಅವನು ಸಭೆಯಿಂದ ಹೊರ ಹೋದುದು, ಇತರರು ಅವನನ್ನು ಅನುಸರಿಸಿದ್ದುದು (21-28). ಭೀಷ್ಮನೂ ತನ್ನ ಅಸಹಾಯಕತೆಯನ್ನು ತೋರಿಸಲು ಕೃಷ್ಣನು “ಬಲವನ್ನುಪಯೋಗಿಸಿ ದುರ್ಯೋಧನನನ್ನು ನಿಯಂತ್ರಿಸದೇ ಇರುವುದು ಎಲ್ಲ ಕುರುವೃದ್ಧರ ಮಹಾ ಅನ್ಯಾಯ ಮತ್ತು ಅಪರಾಧ…ದುರ್ಯೋಧನ, ಕರ್ಣ, ಶಕುನಿ, ದುಃಶಾಸನರನ್ನು ಬಂಧಿಸಿ ಪಾಂಡವರಿಗೆ ಸಲ್ಲಿಸಿ” ಎಂದು ಸೂಚಿಸುವುದು (29-49).

05126001 ವೈಶಂಪಾಯನ ಉವಾಚ।
05126001a ತತಃ ಪ್ರಹಸ್ಯ ದಾಶಾರ್ಹಃ ಕ್ರೋಧಪರ್ಯಾಕುಲೇಕ್ಷಣಃ।
05126001c ದುರ್ಯೋಧನಮಿದಂ ವಾಕ್ಯಮಬ್ರವೀತ್ಕುರುಸಂಸದಿ।।

ವೈಶಂಪಾಯನನು ಹೇಳಿದನು: “ಆಗ ದಾಶಾರ್ಹನು ಜೋರಾಗಿ ನಕ್ಕು, ಸಿಟ್ಟಿನಿಂದ ಕಣ್ಣುಗಳನ್ನು ತಿರುಗಿಸುತ್ತಾ, ಕುರುಸಂಸದಿಯಲ್ಲಿ ದುರ್ಯೋಧನನಿಗೆ ಈ ಮಾತುಗಳನ್ನಾಡಿದನು.

05126002a ಲಪ್ಸ್ಯಸೇ ವೀರಶಯನಂ ಕಾಮಮೇತದವಾಪ್ಸ್ಯಸಿ।
05126002c ಸ್ಥಿರೋ ಭವ ಸಹಾಮಾತ್ಯೋ ವಿಮರ್ದೋ ಭವಿತಾ ಮಹಾನ್।।

“ವೀರ ಶಯನವನ್ನು ಬಯಸುತ್ತೀಯಾ? ಅದು ನಿನಗೆ ದೊರೆಯುತ್ತದೆ! ಅಮಾತ್ಯರೊಂದಿಗೆ ಸ್ಥಿರನಾಗು. ಮಹಾ ನಾಶವು ನಡೆಯಲಿದೆ!

05126003a ಯಚ್ಚೈವಂ ಮನ್ಯಸೇ ಮೂಢ ನ ಮೇ ಕಶ್ಚಿದ್ವ್ಯತಿಕ್ರಮಃ।
05126003c ಪಾಂಡವೇಷ್ವಿತಿ ತತ್ಸರ್ವಂ ನಿಬೋಧತ ನರಾಧಿಪಾಃ।।

ಮೂಢ! ಪಾಂಡವರ ಕುರಿತು ಕೆಟ್ಟದ್ದನ್ನು ಏನನ್ನೂ ಮಾಡಲಿಲ್ಲ ಎಂದು ನೀನು ತಿಳಿದುಕೊಂಡಿರುವೆಯಲ್ಲ! ಅವೆಲ್ಲವೂ ನರಾಧಿಪರಿಗೆ ತಿಳಿದೇ ಇದೆ.

05126004a ಶ್ರಿಯಾ ಸಂತಪ್ಯಮಾನೇನ ಪಾಂಡವಾನಾಂ ಮಹಾತ್ಮನಾಂ।
05126004c ತ್ವಯಾ ದುರ್ಮಂತ್ರಿತಂ ದ್ಯೂತಂ ಸೌಬಲೇನ ಚ ಭಾರತ।।

ಭಾರತ! ಮಹಾತ್ಮ ಪಾಂಡವರ ಐಶ್ವರ್ಯವನ್ನು ನೋಡಿ ಹೊಟ್ಟೆಕಿಚ್ಚಿನಿಂದ ಬೆಂದು ನೀನು ಮತ್ತು ಸೌಬಲನು ದ್ಯೂತದ ಕೆಟ್ಟ ಉಪಾಯವನ್ನು ಮಾಡಿದಿರಿ!

05126005a ಕಥಂ ಚ ಜ್ಞಾತಯಸ್ತಾತ ಶ್ರೇಯಾಂಸಃ ಸಾಧುಸಮ್ಮತಾಃ।
05126005c ತಥಾನ್ಯಾಯ್ಯಮುಪಸ್ಥಾತುಂ ಜಿಹ್ಮೇನಾಜಿಹ್ಮಚಾರಿಣಃ।।

ಅಯ್ಯಾ! ಹೇಗೆ ತಾನೇ ಶ್ರೇಯಸ್ಕರರಾದ, ಸಾಧುಗಳಾದ ನಿನ್ನ ಬಾಂಧವರು ಅದಕ್ಕೆ ಸಮ್ಮತಿಯನ್ನು ಕೊಟ್ಟರು?

05126006a ಅಕ್ಷದ್ಯೂತಂ ಮಹಾಪ್ರಾಜ್ಞಾ ಸತಾಮರತಿನಾಶನಂ।
05126006c ಅಸತಾಂ ತತ್ರ ಜಾಯಂತೇ ಭೇದಾಶ್ಚ ವ್ಯಸನಾನಿ ಚ।।

ಮಹಾಪ್ರಾಜ್ಞ! ಅಕ್ಷದ್ಯೂತವು ಸಂತರ ಜ್ಞಾನವನ್ನೂ ಅಪಹರಿಸುತ್ತದೆ. ಅಸಂತರು ಅಲ್ಲಿ ಭೇದ-ವ್ಯಸನಗಳನ್ನು ಹುಟ್ಟಿಸುತ್ತಾರೆ.

05126007a ತದಿದಂ ವ್ಯಸನಂ ಘೋರಂ ತ್ವಯಾ ದ್ಯೂತಮುಖಂ ಕೃತಂ।
05126007c ಅಸಮೀಕ್ಷ್ಯ ಸದಾಚಾರೈಃ ಸಾರ್ಧಂ ಪಾಪಾನುಬಂಧನೈಃ।।

ನಿನ್ನ ಪಾಪಿ ಅನುಯಾಯಿಗಳೊಂದಿಗೆ ಸೇರಿಕೊಂಡು, ಸದಾಚಾರಗಳನ್ನು ಕಡೆಗಣಿಸಿ, ಈ ಘೋರ ವ್ಯಸನವನ್ನು ತರುವ ದ್ಯೂತದ ಮುಖವಾಡವನ್ನು ನೀನೇ ಮಾಡಿರುವುದು.

05126008a ಕಶ್ಚಾನ್ಯೋ ಜ್ಞಾತಿಭಾರ್ಯಾಂ ವೈ ವಿಪ್ರಕರ್ತುಂ ತಥಾರ್ಹತಿ।
05126008c ಆನೀಯ ಚ ಸಭಾಂ ವಕ್ತುಂ ಯಥೋಕ್ತಾ ದ್ರೌಪದೀ ತ್ವಯಾ।।

ಬೇರೆ ಯಾರುತಾನೇ ಅಣ್ಣನ ಭಾರ್ಯೆಯನ್ನು ನೀನು ಮಾಡಿದಂತೆ ಸಭೆಗೆ ಎಳೆದು ತಂದು ದ್ರೌಪದಿಗೆ ಮಾತನಾಡಿದಂತೆ ಮಾತನಾಡಿಯಾರು?

05126009a ಕುಲೀನಾ ಶೀಲಸಂಪನ್ನಾ ಪ್ರಾಣೇಭ್ಯೋಽಪಿ ಗರೀಯಸೀ।
05126009c ಮಹಿಷೀ ಪಾಂಡುಪುತ್ರಾಣಾಂ ತಥಾ ವಿನಿಕೃತಾ ತ್ವಯಾ।।

ಕುಲೀನೆ, ಶೀಲಸಂಪನ್ನೆ, ಪಾಂಡುಪುತ್ರರ ಮಹಿಷಿ, ಅವರ ಪ್ರಾಣಕ್ಕಿಂತಲೂ ಹೆಚ್ಚಿನವಳಾದ ಅವಳನ್ನು ನೀನು ಉಲ್ಲಂಘಿಸಿ ನಡೆದುಕೊಂಡೆ.

05126010a ಜಾನಂತಿ ಕುರವಃ ಸರ್ವೇ ಯಥೋಕ್ತಾಃ ಕುರುಸಂಸದಿ।
05126010c ದುಃಶಾಸನೇನ ಕೌಂತೇಯಾಃ ಪ್ರವ್ರಜಂತಃ ಪರಂತಪಾಃ।।

ಆ ಪರಂತಪ ಕೌಂತೇಯರು ಹೊರಡುವಾಗ ದುಃಶಾಸನನು ಕುರುಸಂಸದಿಯಲ್ಲಿ ಹೇಳಿದುದು ಕುರುಗಳೆಲ್ಲರಿಗೂ ಗೊತ್ತು.

05126011a ಸಮ್ಯಗ್ವೃತ್ತೇಷ್ವಲುಬ್ಧೇಷು ಸತತಂ ಧರ್ಮಚಾರಿಷು।
05126011c ಸ್ವೇಷು ಬಂಧುಷು ಕಃ ಸಾಧುಶ್ಚರೇದೇವಮಸಾಂಪ್ರತಂ।।

ನೀನಲ್ಲದೇ ಬೇರೆ ಯಾರುತಾನೆ ಸತತವೂ ಧರ್ಮಚಾರಿಗಳಾಗಿರುವ, ಕಷ್ಟದಲ್ಲಿಯೂ ಸಾಧುಗಳಂತೆ ನಡೆದುಕೊಂಡಿರುವ ತನ್ನದೇ ಬಂಧುಗಳಿಗೆ ಈ ರೀತಿ ಬಹಳ ಕಷ್ಟಗಳನ್ನು ಕೊಡುತ್ತಾನೆ?

05126012a ನೃಶಂಸಾನಾಮನಾರ್ಯಾಣಾಂ ಪರುಷಾಣಾಂ ಚ ಭಾಷಣಂ।
05126012c ಕರ್ಣದುಃಶಾಸನಾಭ್ಯಾಂ ಚ ತ್ವಯಾ ಚ ಬಹುಶಃ ಕೃತಂ।।

ಕ್ರೂರಿಗಳ, ಅನಾರ್ಯರ, ದುಷ್ಟ ಬಹಳಷ್ಟು ಮಾತುಗಳನ್ನು ಕರ್ಣ-ದುಃಶಾಸನರು ಮತ್ತು ನೀನೂ ಆಡಿದಿರಿ.

05126013a ಸಹ ಮಾತ್ರಾ ಪ್ರದಗ್ಧುಂ ತಾನ್ಬಾಲಕಾನ್ವಾರಣಾವತೇ।
05126013c ಆಸ್ಥಿತಃ ಪರಮಂ ಯತ್ನಂ ನ ಸಮೃದ್ಧಂ ಚ ತತ್ತವ।।

ತಾಯಿಯೊಂದಿಗೆ ಆ ಬಾಲಕರನ್ನು ವಾರಣಾವತದಲ್ಲಿ ಸುಟ್ಟುಹಾಕಲು ಪರಮ ಪ್ರಯತ್ನವನ್ನು ನೀನು ಮಾಡಿದೆ. ಆದರೆ ಅದು ಯಶಸ್ವಿಯಾಗಲಿಲ್ಲ.

05126014a ಊಷುಶ್ಚ ಸುಚಿರಂ ಕಾಲಂ ಪ್ರಚ್ಚನ್ನಾಃ ಪಾಂಡವಾಸ್ತದಾ।
05126014c ಮಾತ್ರಾ ಸಹೈಕಚಕ್ರಾಯಾಂ ಬ್ರಾಹ್ಮಣಸ್ಯ ನಿವೇಶನೇ।।

ಆಗ ಬಹುಕಾಲ ಪಾಂಡವರು ಮರೆಸಿಕೊಂಡು ತಾಯಿಯೊಂದಿಗೆ ಏಕಚಕ್ರದಲ್ಲಿ ಬ್ರಾಹ್ಮಣನ ಮನೆಯಲ್ಲಿ ವಾಸಿಸಬೇಕಾಯಿತು.

05126015a ವಿಷೇಣ ಸರ್ಪಬಂಧೈಶ್ಚ ಯತಿತಾಃ ಪಾಂಡವಾಸ್ತ್ವಯಾ।
05126015c ಸರ್ವೋಪಾಯೈರ್ವಿನಾಶಾಯ ನ ಸಮೃದ್ಧಂ ಚ ತತ್ತವ।।

ವಿಷಭರಿತ ಸರ್ಪಗಳಿಂದ ಕಟ್ಟಿಹಾಕುವ ಸರ್ವ ಉಪಾಯಗಳಿಂದ ಪಾಂಡವರನ್ನು ವಿನಾಶಗೊಳಿಸಲು ಪ್ರಯತ್ನಿಸಿದೆ. ಯಾವುದೂ ಯಶಸ್ವಿಯಾಗಲಿಲ್ಲ.

05126016a ಏವಂಬುದ್ಧಿಃ ಪಾಂಡವೇಷು ಮಿಥ್ಯಾವೃತ್ತಿಃ ಸದಾ ಭವಾನ್।
05126016c ಕಥಂ ತೇ ನಾಪರಾಧೋಽಸ್ತಿ ಪಾಂಡವೇಷು ಮಹಾತ್ಮಸು।।

ಇದೇ ಬುದ್ಧಿಯಿಂದ ನೀನು ಸದಾ ಪಾಂಡವರೊಂದಿಗೆ ಮೋಸಗಾರನಂತೆ ನಡೆದುಕೊಂಡಿರುವೆ! ಆ ಮಹಾತ್ಮ ಪಾಂಡವರ ವಿರುದ್ಧ ಅಪರಾಧಿಯಲ್ಲ ಎಂದು ನೀನು ಹೇಗೆ ಹೇಳುತ್ತೀಯೆ?

05126017a ಕೃತ್ವಾ ಬಹೂನ್ಯಕಾರ್ಯಾಣಿ ಪಾಂಡವೇಷು ನೃಶಂಸವತ್।
05126017c ಮಿಥ್ಯಾವೃತ್ತಿರನಾರ್ಯಃ ಸನ್ನದ್ಯ ವಿಪ್ರತಿಪದ್ಯಸೇ।।

ಕ್ರೂರಿಯಾಗಿ ಬಹಳ ಮಾಡಬಾರದವುಗಳನ್ನು ಮಾಡಿ, ಅನಾರ್ಯನಂತೆ ಮೋಸದಿಂದ ನಡೆದುಕೊಂಡು ಈಗ ಬೇರೆಯೇ ವೇಷವನ್ನು ತೋರಿಸುತ್ತಿದ್ದೀಯೆ!

05126018a ಮಾತಾಪಿತೃಭ್ಯಾಂ ಭೀಷ್ಮೇಣ ದ್ರೋಣೇನ ವಿದುರೇಣ ಚ।
05126018c ಶಾಮ್ಯೇತಿ ಮುಹುರುಕ್ತೋಽಸಿ ನ ಚ ಶಾಮ್ಯಸಿ ಪಾರ್ಥಿವ।।

ಪಾರ್ಥಿವ! ತಂದೆ-ತಾಯಿಗಳು, ಭೀಷ್ಮ, ದ್ರೋಣ ಮತ್ತು ವಿದುರರು ಸಂಧಿ ಮಾಡಿಕೋ ಎಂದು ಪುನಃ ಪುನಃ ಹೇಳಿದರೂ ನೀನು ಸಂಧಿ ಮಾಡಿಕೊಳ್ಳುತ್ತಿಲ್ಲ.

05126019a ಶಮೇ ಹಿ ಸುಮಹಾನರ್ಥಸ್ತವ ಪಾರ್ಥಸ್ಯ ಚೋಭಯೋಃ।
05126019c ನ ಚ ರೋಚಯಸೇ ರಾಜನ್ಕಿಮನ್ಯದ್ಬುದ್ಧಿಲಾಘವಾತ್।।

ನಿನಗೆ ಮತ್ತು ಪಾರ್ಥ ಇಬ್ಬರಿಗೂ ಬಹಳ ಒಳ್ಳೆಯದಾದುದು ಶಾಂತಿ-ಸಂಧಿ. ರಾಜನ್! ಆದರೆ ಇದು ನಿನಗೆ ಇಷ್ಟವಾಗುತ್ತಿಲ್ಲವೆಂದರೆ ಇದಕ್ಕೆ ಕಾರಣ ಬುದ್ಧಿಯ ಕೊರತೆಯಲ್ಲದೇ ಬೇರೆ ಏನಿರಬಹುದು?

05126020a ನ ಶರ್ಮ ಪ್ರಾಪ್ಸ್ಯಸೇ ರಾಜನ್ನುತ್ಕ್ರಮ್ಯ ಸುಹೃದಾಂ ವಚಃ।
05126020c ಅಧರ್ಮ್ಯಮಯಶಸ್ಯಂ ಚ ಕ್ರಿಯತೇ ಪಾರ್ಥಿವ ತ್ವಯಾ।।

ರಾಜನ್! ಸುಹೃದರ ಮಾತುಗಳನ್ನು ಅತಿಕ್ರಮಿಸಿ ನಿನಗೆ ನೆಲೆಯು ದೊರಕುವುದಿಲ್ಲ. ಪಾರ್ಥಿವ! ನೀನು ಮಾಡಲು ಹೊರಟಿರುವುದು ಅಧರ್ಮ ಮತ್ತು ಅಯಶಸ್ಕರವಾದುದು.”

05126021a ಏವಂ ಬ್ರುವತಿ ದಾಶಾರ್ಹೇ ದುರ್ಯೋಧನಮಮರ್ಷಣಂ।
05126021c ದುಃಶಾಸನ ಇದಂ ವಾಕ್ಯಮಬ್ರವೀತ್ಕುರುಸಂಸದಿ।।

ದಾಶಾರ್ಹನು ಹೀಗೆ ಹೇಳುತ್ತಿರಲು ದುಃಶಾಸನನು ಕುರುಸಂಸದಿಯಲ್ಲಿ ಕೋಪಿಷ್ಟ ದುರ್ಯೋಧನನಿಗೆ ಈ ಮಾತುಗಳನ್ನಾಡಿದನು.

05126022a ನ ಚೇತ್ಸಂಧಾಸ್ಯಸೇ ರಾಜನ್ಸ್ವೇನ ಕಾಮೇನ ಪಾಂಡವೈಃ।
05126022c ಬದ್ಧ್ವಾ ಕಿಲ ತ್ವಾಂ ದಾಸ್ಯಂತಿ ಕುಂತೀಪುತ್ರಾಯ ಕೌರವಾಃ।।

“ರಾಜನ್! ಸ್ವ-ಇಚ್ಛೆಯಿಂದ ನೀನು ಪಾಂಡವರೊಂದಿಗೆ ಸಂಧಿ ಮಾಡಿಕೊಳ್ಳದೇ ಇದ್ದರೆ ಕೌರವರು ನಿನ್ನನ್ನು ಬಂಧಿಸಿ ಕುಂತೀಪುತ್ರನಿಗೆ ಕೊಡುತ್ತಾರೆ.

05126023a ವೈಕರ್ತನಂ ತ್ವಾಂ ಚ ಮಾಂ ಚ ತ್ರೀನೇತಾನ್ಮನುಜರ್ಷಭ।
05126023c ಪಾಂಡವೇಭ್ಯಃ ಪ್ರದಾಸ್ಯಂತಿ ಭೀಷ್ಮೋ ದ್ರೋಣಃ ಪಿತಾ ಚ ತೇ।।

ಮನುಜರ್ಷಭ! ಭೀಷ್ಮ, ದ್ರೋಣ ಮತ್ತು ನಿನ್ನ ತಂದೆಯು ವೈಕರ್ತನನನ್ನು, ನಿನ್ನನ್ನು ಮತ್ತು ನನ್ನನ್ನು - ಈ ಮೂವರನ್ನು ಪಾಂಡವರಿಗೆ ಕೊಡಲಿದ್ದಾರೆ.”

05126024a ಭ್ರಾತುರೇತದ್ವಚಃ ಶ್ರುತ್ವಾ ಧಾರ್ತರಾಷ್ಟ್ರಃ ಸುಯೋಧನಃ।
05126024c ಕ್ರುದ್ಧಃ ಪ್ರಾತಿಷ್ಠತೋತ್ಥಾಯ ಮಹಾನಾಗ ಇವ ಶ್ವಸನ್।।

ತಮ್ಮನ ಈ ಮಾತನ್ನು ಕೇಳಿ ಧಾರ್ತರಾಷ್ಟ್ರ ಸುಯೋಧನನು ಕ್ರುದ್ಧನಾಗಿ ಮಹಾನಾಗನಂತೆ ಭುಸುಗುಟ್ಟುತ್ತಾ ತನ್ನ ಆಸನದಿಂದ ಮೇಲೆದ್ದನು.

05126025a ವಿದುರಂ ಧೃತರಾಷ್ಟ್ರಂ ಚ ಮಹಾರಾಜಂ ಚ ಬಾಹ್ಲಿಕಂ।
05126025c ಕೃಪಂ ಚ ಸೋಮದತ್ತಂ ಚ ಭೀಷ್ಮಂ ದ್ರೋಣಂ ಜನಾರ್ದನಂ।।
05126026a ಸರ್ವಾನೇತಾನನಾದೃತ್ಯ ದುರ್ಮತಿರ್ನಿರಪತ್ರಪಃ।
05126026c ಅಶಿಷ್ಟವದಮರ್ಯಾದೋ ಮಾನೀ ಮಾನ್ಯಾವಮಾನಿತಾ।।

ಆ ಅಶಿಷ್ಟವಾಗಿ ಮಾತನಾಡುವ, ಮರ್ಯಾದೆಯನ್ನು ಕೊಡದ, ದುರಭಿಮಾನಿ ದುರ್ಮತಿಯು ಮಾನ್ಯರನ್ನು ಅವಮಾನಿಸಿ ವಿದುರ, ಮಹಾರಾಜ ಧೃತರಾಷ್ಟ್ರ, ಬಾಹ್ಲಿಕ, ಕೃಪ, ಸೋಮದತ್ತ, ಭೀಷ್ಮ, ದ್ರೋಣ, ಜನಾರ್ದನ ಎಲ್ಲರನ್ನೂ ಅನಾದರಿಸಿ ಹೊರ ಹೋದನು.

05126027a ತಂ ಪ್ರಸ್ಥಿತಮಭಿಪ್ರೇಕ್ಷ್ಯ ಭ್ರಾತರೋ ಮನುಜರ್ಷಭಂ।
05126027c ಅನುಜಗ್ಮುಃ ಸಹಾಮಾತ್ಯಾ ರಾಜಾನಶ್ಚಾಪಿ ಸರ್ವಶಃ।।

ಅವನು ಹೊರಹೋಗುವುದನ್ನು ನೋಡಿ ಸಹೋದರರು ಮತ್ತು ಅಮಾತ್ಯರು ಸರ್ವ ರಾಜರೊಂದಿಗೆ ಆ ಮನುಜರ್ಷಭನನ್ನು ಹಿಂಬಾಲಿಸಿ ಹೋದರು.

05126028a ಸಭಾಯಾಮುತ್ಥಿತಂ ಕ್ರುದ್ಧಂ ಪ್ರಸ್ಥಿತಂ ಭ್ರಾತೃಭಿಃ ಸಹ।
05126028c ದುರ್ಯೋಧನಮಭಿಪ್ರೇಕ್ಷ್ಯ ಭೀಷ್ಮಃ ಶಾಂತನವೋಽಬ್ರವೀತ್।।

ಕ್ರುದ್ಧನಾಗಿ ಸಭೆಯಿಂದ ಎದ್ದು ಭ್ರಾತೃಗಳೊಂದಿಗೆ ಹೊರಟು ಹೋದ ದುರ್ಯೋಧನನನ್ನು ನೋಡಿ ಭೀಷ್ಮ ಶಾಂತನವನು ಹೇಳಿದನು:

05126029a ಧರ್ಮಾರ್ಥಾವಭಿಸಂತ್ಯಜ್ಯ ಸಂರಂಭಂ ಯೋಽನುಮನ್ಯತೇ।
05126029c ಹಸಂತಿ ವ್ಯಸನೇ ತಸ್ಯ ದುರ್ಹೃದೋ ನಚಿರಾದಿವ।।

“ಧರ್ಮಾರ್ಥಗಳನ್ನು ತ್ಯಜಿಸಿ ತನ್ನ ಮನೋವಿಕಾರಗಳನ್ನು ಅನುಸರಿಸುವವನು ಸ್ವಲ್ಪವೇ ಸಮಯದಲ್ಲಿ ಅವನ ದುಹೃದಯರ ನಗೆಗೀಡಾಗುತ್ತಾನೆ.

05126030a ದುರಾತ್ಮಾ ರಾಜಪುತ್ರೋಽಯಂ ಧಾರ್ತರಾಷ್ಟ್ರೋಽನುಪಾಯವಿತ್।
05126030c ಮಿಥ್ಯಾಭಿಮಾನೀ ರಾಜ್ಯಸ್ಯ ಕ್ರೋಧಲೋಭವಶಾನುಗಃ।।

ಈ ರಾಜಪುತ್ರ ಧಾರ್ತರಾಷ್ಟ್ರನು ದುರಾತ್ಮನು. ಸರಿಯಾದುದನ್ನು ತಿಳಿಯದವನು. ಮಿಥ್ಯಾಭಿಮಾನೀ. ಮತ್ತು ರಾಜ್ಯಕ್ಕಾಗಿ ಕ್ರೋಧ-ಲೋಭಗಳಿಗೆ ವಶನಾಗಿ ನಡೆದುಕೊಳ್ಳುವವನು.

05126031a ಕಾಲಪಕ್ವಮಿದಂ ಮನ್ಯೇ ಸರ್ವಕ್ಷತ್ರಂ ಜನಾರ್ದನ।
05126031c ಸರ್ವೇ ಹ್ಯನುಸೃತಾ ಮೋಹಾತ್ಪಾರ್ಥಿವಾಃ ಸಹ ಮಂತ್ರಿಭಿಃ।।

ಜನಾರ್ದನ! ಸರ್ವ ಕ್ಷತ್ರಿಯರ ಕಾಲವೂ ಪಕ್ವವಾಗಿದೆ ಎನ್ನಿಸುತ್ತಿದೆ. ಏಕೆಂದರೆ ಎಲ್ಲ ಪಾರ್ಥಿವರೂ ಮಂತ್ರಿಗಳೂ ಮೋಹದಿಂದ ಅವನನ್ನೇ ಅನುಸರಿಸುತ್ತಿದ್ದಾರೆ.”

05126032a ಭೀಷ್ಮಸ್ಯಾಥ ವಚಃ ಶ್ರುತ್ವಾ ದಾಶಾರ್ಹಃ ಪುಷ್ಕರೇಕ್ಷಣಃ।
05126032c ಭೀಷ್ಮದ್ರೋಣಮುಖಾನ್ಸರ್ವಾನಭ್ಯಭಾಷತ ವೀರ್ಯವಾನ್।।

ಭೀಷ್ಮನ ಆ ಮಾತುಗಳನ್ನು ಕೇಳಿ ಪುಷ್ಕರೇಕ್ಷಣ ವೀರ್ಯವಾನ್ ದಾಶಾರ್ಹನು ಭೀಷ್ಮ-ದ್ರೋಣ ಪ್ರಮುಖರೆಲ್ಲರನ್ನೂ ಉದ್ದೇಶಿಸಿ ಹೇಳಿದನು:

05126033a ಸರ್ವೇಷಾಂ ಕುರುವೃದ್ಧಾನಾಂ ಮಹಾನಯಮತಿಕ್ರಮಃ।
05126033c ಪ್ರಸಹ್ಯ ಮಂದಮೈಶ್ವರ್ಯೇ ನ ನಿಯಚ್ಚತ ಯನ್ನೃಪಂ।।

“ಐಶ್ವರ್ಯದಿಂದ ಮಂದನಾಗಿರುವ ಈ ನೃಪನನ್ನು ಬಲವನ್ನುಪಯೋಗಿಸಿ ನಿಯಂತ್ರಿಸದೇ ಇರುವುದು ಎಲ್ಲ ಕುರುವೃದ್ಧರ ಮಹಾ ಅನ್ಯಾಯ ಮತ್ತು ಅಪರಾಧ.

05126034a ತತ್ರ ಕಾರ್ಯಮಹಂ ಮನ್ಯೇ ಪ್ರಾಪ್ತಕಾಲಮರಿಂದಮಾಃ।
05126034c ಕ್ರಿಯಮಾಣೇ ಭವೇಚ್ಚ್ರೇಯಸ್ತತ್ಸರ್ವಂ ಶೃಣುತಾನಘಾಃ।।
05126035a ಪ್ರತ್ಯಕ್ಷಮೇತದ್ಭವತಾಂ ಯದ್ವಕ್ಷ್ಯಾಮಿ ಹಿತಂ ವಚಃ।
05126035c ಭವತಾಮಾನುಕೂಲ್ಯೇನ ಯದಿ ರೋಚೇತ ಭಾರತಾಃ।।

ಅರಿಂದಮರೇ! ಆ ಕಾರ್ಯಕ್ಕೆ ಈಗ ಕಾಲವೊದಗಿದೆ ಎಂದು ನನಗನ್ನಿಸುತ್ತದೆ. ಹೀಗೆ ಮಾಡುವುದರಿಂದ ಎಲ್ಲವೂ ಒಳ್ಳೆಯದಾಗುತ್ತದೆ. ಅನಘರೇ! ನಿಮಗೆ ಪ್ರತ್ಯಕ್ಷವಾಗಿ ನಾನು ಹಿತವಾದ ಏನನ್ನು ಹೇಳುತ್ತೇನೋ ಅದನ್ನು, ಭಾರತರೇ! ನಿಮಗೆ ಅನುಕೂಲವಾದರೆ ಇಷ್ಟವಾದರೆ ಕೇಳಿ.

05126036a ಭೋಜರಾಜಸ್ಯ ವೃದ್ಧಸ್ಯ ದುರಾಚಾರೋ ಹ್ಯನಾತ್ಮವಾನ್।
05126036c ಜೀವತಃ ಪಿತುರೈಶ್ವರ್ಯಂ ಹೃತ್ವಾ ಮನ್ಯುವಶಂ ಗತಃ।।

ವೃದ್ಧ ಭೋಜರಾಜನ ದುರಾಚಾರಿ ಅನಾತ್ಮವಂತ ಮಗನು ಕೋಪಾವಿಷ್ಟನಾಗಿ ತಂದೆಯು ಜೀವಂತವಿರುವಾಗಲೇ ಐಶ್ವರ್ಯವನ್ನು ಅಪಹರಿಸಿದನು.

05126037a ಉಗ್ರಸೇನಸುತಃ ಕಂಸಃ ಪರಿತ್ಯಕ್ತಃ ಸ ಬಾಂಧವೈಃ।
05126037c ಜ್ಞಾತೀನಾಂ ಹಿತಕಾಮೇನ ಮಯಾ ಶಸ್ತೋ ಮಹಾಮೃಧೇ।।

ಬಾಂಧವರಿಂದ ಪರಿತ್ಯಕ್ತನಾದ ಈ ಉಗ್ರಸೇನ ಸುತ ಕಂಸನನ್ನು ಬಾಂಧವರ ಹಿತವನ್ನು ಬಯಸಿ, ನಾನು ಮಹಾಯುದ್ಧದಲ್ಲಿ ಶಿಕ್ಷಿಸಿದೆನು.

05126038a ಆಹುಕಃ ಪುನರಸ್ಮಾಭಿರ್ಜ್ಞಾತಿಭಿಶ್ಚಾಪಿ ಸತ್ಕೃತಃ।
05126038c ಉಗ್ರಸೇನಃ ಕೃತೋ ರಾಜಾ ಭೋಜರಾಜನ್ಯವರ್ಧನಃ।।

ಅನಂತರ ಇತರ ಬಾಂಧವರೊಂದಿಗೆ ನಾವು ಆಹುಕ ಉಗ್ರಸೇನನನ್ನು ಸತ್ಕರಿಸಿ ಪುನಃ ರಾಜನನ್ನಾಗಿ ಮಾಡಿದೆವು. ಅವನಿಂದ ಭೋಜರಾಜ್ಯವು ವರ್ಧಿಸಿತು.

05126039a ಕಂಸಮೇಕಂ ಪರಿತ್ಯಜ್ಯ ಕುಲಾರ್ಥೇ ಸರ್ವಯಾದವಾಃ।
05126039c ಸಂಭೂಯ ಸುಖಮೇಧಂತೇ ಭಾರತಾಂಧಕವೃಷ್ಣಯಃ।।

ಭಾರತ! ಕುಲಕ್ಕಾಗಿ ಕಂಸನೊಬ್ಬನನ್ನು ಪರಿತ್ಯಜಿಸಿ ಎಲ್ಲ ಯಾದವರೂ ಅಂಧಕ-ವೃಷ್ಣಿಯರೂ ಅಭಿವೃದ್ಧಿ ಹೊಂದಿ ಸುಖದಿಂದಿದ್ದಾರೆ.

05126040a ಅಪಿ ಚಾಪ್ಯವದದ್ರಾಜನ್ಪರಮೇಷ್ಠೀ ಪ್ರಜಾಪತಿಃ।
05126040c ವ್ಯೂಢೇ ದೇವಾಸುರೇ ಯುದ್ಧೇಽಭ್ಯುದ್ಯತೇಷ್ವಾಯುಧೇಷು ಚ।।

ರಾಜನ್! ದೇವಾಸುರರು ತಮ್ಮ ತಮ್ಮ ಆಯುಧಗಳನ್ನು ಎತ್ತಿ ಹಿಡಿದು ಯುದ್ಧಕ್ಕೆ ತೊಡಗಿದಾಗ ಪರಮೇಷ್ಠೀ ಪ್ರಜಾಪತಿಯೂ ಹೇಳಿದ್ದನು.

05126041a ದ್ವೈಧೀಭೂತೇಷು ಲೋಕೇಷು ವಿನಶ್ಯತ್ಸು ಚ ಭಾರತ।
05126041c ಅಬ್ರವೀತ್ಸೃಷ್ಟಿಮಾನ್ದೇವೋ ಭಗವಾಽಲ್ಲೋಕಭಾವನಃ।।

ಲೋಕದಲ್ಲಿರುವವೆಲ್ಲವೂ ಎರಡಾಗಿ ವಿನಾಶದ ಮಾರ್ಗದಲ್ಲಿರುವಾಗ ಭಗವಾನ್, ಲೋಕಭಾವನ, ದೇವ ಸೃಷ್ಟಿಕರ್ತನು ಹೇಳಿದನು:

05126042a ಪರಾಭವಿಷ್ಯಂತ್ಯಸುರಾ ದೈತೇಯಾ ದಾನವೈಃ ಸಹ।
05126042c ಆದಿತ್ಯಾ ವಸವೋ ರುದ್ರಾ ಭವಿಷ್ಯಂತಿ ದಿವೌಕಸಃ।।

“ಅಸುರರು ದೈತ್ಯ ದಾನವರೊಂದಿಗೆ ಪರಾಭವ ಹೊಂದುತ್ತಾರೆ. ಆದಿತ್ಯ, ವಸುಗಳು ಮತ್ತು ರುದ್ರರು ದಿವೌಕಸರಾಗುತ್ತಾರೆ.

05126043a ದೇವಾಸುರಮನುಷ್ಯಾಶ್ಚ ಗಂಧರ್ವೋರಗರಾಕ್ಷಸಾಃ।
05126043c ಅಸ್ಮಿನ್ಯುದ್ಧೇ ಸುಸಮ್ಯತ್ತಾ ಹನಿಷ್ಯಂತಿ ಪರಸ್ಪರಂ।।

ಈ ಯುದ್ಧದಲ್ಲಿ ದೇವ, ಅಸುರ, ಮನುಷ್ಯ, ಗಂಧರ್ವ, ಉರಗ, ರಾಕ್ಷಸರು ಅತಿಕೋಪದಿಂದ ಪರಸ್ಪರರನ್ನು ಸಂಹರಿಸುತ್ತಾರೆ.”

05126044a ಇತಿ ಮತ್ವಾಬ್ರವೀದ್ಧರ್ಮಂ ಪರಮೇಷ್ಠೀ ಪ್ರಜಾಪತಿಃ।
05126044c ವರುಣಾಯ ಪ್ರಯಚ್ಚೈತಾನ್ಬದ್ಧ್ವಾ ದೈತೇಯದಾನವಾನ್।।

ಹೀಗೆ ತನ್ನ ಮತವನ್ನು ಹೇಳಿ ಪರಮೇಷ್ಠೀ ಪ್ರಜಾಪತಿಯು ಧರ್ಮನಿಗೆ ಹೇಳಿದನು: “ದೈತ್ಯ-ದಾನವರನ್ನು ಬಂಧಿಸಿ ವರುಣನಿಗೆ ಒಪ್ಪಿಸು!”

05126045a ಏವಮುಕ್ತಸ್ತತೋ ಧರ್ಮೋ ನಿಯೋಗಾತ್ಪರಮೇಷ್ಠಿನಃ।
05126045c ವರುಣಾಯ ದದೌ ಸರ್ವಾನ್ಬದ್ಧ್ವಾ ದೈತೇಯದಾನವಾನ್।।

ಪರಮೇಷ್ಠಿಯು ಹೀಗೆ ನಿಯೋಗವನ್ನು ನೀಡಲು ಧರ್ಮನು ಎಲ್ಲ ದೈತ್ಯ-ದಾನವರನ್ನೂ ಬಂದಿಸಿ ವರುಣನಿಗೆ ಕೊಟ್ಟನು.

05126046a ತಾನ್ಬದ್ಧ್ವಾ ಧರ್ಮಪಾಶೈಶ್ಚ ಸ್ವೈಶ್ಚ ಪಾಶೈರ್ಜಲೇಶ್ವರಃ।
05126046c ವರುಣಃ ಸಾಗರೇ ಯತ್ತೋ ನಿತ್ಯಂ ರಕ್ಷತಿ ದಾನವಾನ್।।

ಅನಂತರ ಜಲೇಶ್ವರ ವರುಣನು ಆ ದಾನವರನ್ನು ಧರ್ಮಪಾಶಗಳಿಂದ ಮತ್ತು ಅವನದೇ ಪಾಶಗಳಿಂದ ಬಂಧಿಸಿ ಸಾಗರದಲ್ಲಿರಿಸಿ ನಿತ್ಯವೂ ರಕ್ಷಿಸುತ್ತಾನೆ.

05126047a ತಥಾ ದುರ್ಯೋಧನಂ ಕರ್ಣಂ ಶಕುನಿಂ ಚಾಪಿ ಸೌಬಲಂ।
05126047c ಬದ್ಧ್ವಾ ದುಃಶಾಸನಂ ಚಾಪಿ ಪಾಂಡವೇಭ್ಯಃ ಪ್ರಯಚ್ಚತ।।

ಹಾಗೆಯೇ ದುರ್ಯೋಧನ, ಕರ್ಣ, ಸೌಬಲ ಶಕುನಿ ಮತ್ತು ದುಃಶಾಸನರನ್ನು ಬಂಧಿಸಿ ಪಾಂಡವರಿಗೆ ಸಲ್ಲಿಸಿ.

05126048a ತ್ಯಜೇತ್ಕುಲಾರ್ಥೇ ಪುರುಷಂ ಗ್ರಾಮಸ್ಯಾರ್ಥೇ ಕುಲಂ ತ್ಯಜೇತ್।
05126048c ಗ್ರಾಮಂ ಜನಪದಸ್ಯಾರ್ಥೇ ಆತ್ಮಾರ್ಥೇ ಪೃಥಿವೀಂ ತ್ಯಜೇತ್।।

ಕುಲಕ್ಕಾಗಿ ಪುರುಷನನ್ನು ತ್ಯಜಿಸಬೇಕು. ಗ್ರಾಮಕ್ಕಾಗಿ ಕುಲವನ್ನು ತ್ಯಜಿಸಬೇಕು. ಜನಪದಕ್ಕಾಗಿ ಗ್ರಾಮವನ್ನು, ಮತ್ತು ಆತ್ಮಕ್ಕಾಗಿ ಪೃಥ್ವಿಯನ್ನು ತ್ಯಜಿಸಬೇಕು.

05126049a ರಾಜನ್ದುರ್ಯೋಧನಂ ಬದ್ಧ್ವಾ ತತಃ ಸಂಶಾಮ್ಯ ಪಾಂಡವೈಃ।
05126049c ತ್ವತ್ಕೃತೇ ನ ವಿನಶ್ಯೇಯುಃ ಕ್ಷತ್ರಿಯಾಃ ಕ್ಷತ್ರಿಯರ್ಷಭ।।

ರಾಜನ್! ಕ್ಷತ್ರಿಯರ್ಷಭ! ದುರ್ಯೋಧನನನ್ನು ಬಂಧಿಸಿ ಪಾಂಡವರೊಂದಿಗೆ ಸಂಧಿಮಾಡಿಕೊಂಡರೆ ನಿನ್ನಿಂದಾಗಿ ಕ್ಷತ್ರಿಯರು ವಿನಾಶ ಹೊಂದುವುದಿಲ್ಲ.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಕೃಷ್ಣವಾಕ್ಯೇ ಷಡ್‌ವಿಂಶತ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಕೃಷ್ಣವಾಕ್ಯದಲ್ಲಿ ನೂರಾಇಪ್ಪತ್ತಾರನೆಯ ಅಧ್ಯಾಯವು.