ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಭಗವದ್ಯಾನ ಪರ್ವ
ಅಧ್ಯಾಯ 123
ಸಾರ
“ಕುಲಘ್ನ-ಅಂತಕನೆನಿಸಿಕೊಳ್ಳಬೇಡ. ದುರ್ಮತಿಯಾಗಬೇಡ! ಕೆಟ್ಟ ದಾರಿಯಲ್ಲಿ ಹೋಗಬೇಡ! ವೃದ್ಧ ತಂದೆ-ತಾಯಂದಿರಿಗೆ ಶೋಕವನ್ನು ಕೊಡಬೇಡ!” ಎಂದು ಭೀಷ್ಮನು ದುರ್ಯೋಧನನಿಗೆ ಹೇಳಲು (1-8), ದ್ರೋಣನು “ಎಲ್ಲಿ ವಾಸುದೇವ-ಅರ್ಜುನರು ಇರುವರೋ ಅಲ್ಲಿ ಸೇನೆಯು ಅಜೇಯವೆಂದು ತಿಳಿದುಕೋ!” ಎಂದು ಹೇಳಿದುದು (9-17). ಅನಂತರ ವಿದುರನೂ (18-21), ಧೃತರಾಷ್ಟ್ರನೂ ದುರ್ಯೋಧನನಿಗೆ ಹಿತವಾಕ್ಯಗಳನ್ನು ನುಡಿದುದು (22-27).
05123001 ವೈಶಂಪಾಯನ ಉವಾಚ।
05123001a ತತಃ ಶಾಂತನವೋ ಭೀಷ್ಮೋ ದುರ್ಯೋಧನಮಮರ್ಷಣಂ।
05123001c ಕೇಶವಸ್ಯ ವಚಃ ಶ್ರುತ್ವಾ ಪ್ರೋವಾಚ ಭರತರ್ಷಭ।।
ವೈಶಂಪಾಯನನು ಹೇಳಿದನು: “ಭರತರ್ಷಭ! ಆಗ ಕೇಶವನ ಮಾತನ್ನು ಕೇಳಿ ಶಾಂತನವ ಭೀಷ್ಮನು ಅಮರ್ಷಣ ದುರ್ಯೋಧನನಿಗೆ ಹೀಗೆ ಹೇಳಿದನು:
05123002a ಕೃಷ್ಣೇನ ವಾಕ್ಯಮುಕ್ತೋಽಸಿ ಸುಹೃದಾಂ ಶಮಮಿಚ್ಚತಾ।
05123002c ಅನುಪಶ್ಯಸ್ವ ತತ್ತಾತ ಮಾ ಮನ್ಯುವಶಮನ್ವಗಾಃ।।
“ಸುಹೃದಯರಲ್ಲಿ ಶಾಂತಿಯನ್ನು ಬಯಸಿ ಕೃಷ್ಣನು ನಿನಗೆ ಹೇಳಿದ್ದಾನೆ. ಮಗೂ! ಅದನ್ನು ಅನುಸರಿಸು. ಸಿಟ್ಟಿನ ವಶದಲ್ಲಿ ಬರಬೇಡ, ಸಾಧಿಸಬೇಡ.
05123003a ಅಕೃತ್ವಾ ವಚನಂ ತಾತ ಕೇಶವಸ್ಯ ಮಹಾತ್ಮನಃ।
05123003c ಶ್ರೇಯೋ ನ ಜಾತು ನ ಸುಖಂ ನ ಕಲ್ಯಾಣಮವಾಪ್ಸ್ಯಸಿ।।
ಅಯ್ಯಾ! ಮಹಾತ್ಮ ಕೇಶವನ ಮಾತಿನಂತೆ ಮಾಡದೇ ಇದ್ದರೆ ನಿನಗೆ ಶ್ರೇಯಸ್ಸಾಗಲೀ, ಸಂಪತ್ತಾಗಲೀ, ಸುಖವಾಗಲೀ, ಕಲ್ಯಾಣವಾಗಲೀ ದೊರಕುವುದಿಲ್ಲ.
05123004a ಧರ್ಮ್ಯಮರ್ಥಂ ಮಹಾಬಾಹುರಾಹ ತ್ವಾಂ ತಾತ ಕೇಶವಃ।
05123004c ತಮರ್ಥಮಭಿಪದ್ಯಸ್ವ ಮಾ ರಾಜನ್ನೀನಶಃ ಪ್ರಜಾಃ।।
ಮಗೂ! ಮಹಾಬಾಹು ಕೇಶವನು ಧರ್ಮವೂ ಅರ್ಥವೂ ಉಳ್ಳ ಮಾತುಗಳನ್ನು ನಿನಗೆ ಹೇಳಿದ್ದಾನೆ. ನೀನು ಅದರಂತೆ ನಡೆದುಕೋ. ರಾಜನ್! ಪ್ರಜೆಗಳನ್ನು ನಾಶಗೊಳಿಸಬೇಡ!
05123005a ಇಮಾಂ ಶ್ರಿಯಂ ಪ್ರಜ್ವಲಿತಾಂ ಭಾರತೀಂ ಸರ್ವರಾಜಸು।
05123005c ಜೀವತೋ ಧೃತರಾಷ್ಟ್ರಸ್ಯ ದೌರಾತ್ಮ್ಯಾದ್ ಭ್ರಂಶಯಿಷ್ಯಸಿ।।
ಧೃತರಾಷ್ಟ್ರನು ಜೀವಂತವಾಗಿರಿಸಿರುವ, ಎಲ್ಲ ರಾಜರಲ್ಲಿ ಶ್ರೀಯಿಂದ ಪ್ರಜ್ವಲಿಸುತ್ತಿರುವ ಈ ಭಾರತವನ್ನು ನಿನ್ನ ದೌರಾತ್ಮದಿಂದ ಭ್ರಂಶಗೊಳಿಸುತ್ತಿರುವೆ.
05123006a ಆತ್ಮಾನಂ ಚ ಸಹಾಮಾತ್ಯಂ ಸಪುತ್ರಪಶುಬಾಂಧವಂ।
05123006c ಸಹಮಿತ್ರಮಸದ್ಬುದ್ಧ್ಯಾ ಜೀವಿತಾದ್ ಭ್ರಂಶಯಿಷ್ಯಸಿ।।
ಅಮಾತ್ಯರೊಂದಿಗೆ, ಪುತ್ರ-ಪಶು-ಬಾಂಧವರೊಂದಿಗೆ, ಮಿತ್ರರೊಂದಿಗೆ ನಿನ್ನ ಜೀವನವನ್ನೂ ಅಸದ್ಬುದ್ಧಿಯಿಂದ ಭ್ರಂಶಗೊಳಿಸುತ್ತಿರುವೆ!
05123007a ಅತಿಕ್ರಾಮನ್ಕೇಶವಸ್ಯ ತಥ್ಯಂ ವಚನಮರ್ಥವತ್।
05123007c ಪಿತುಶ್ಚ ಭರತಶ್ರೇಷ್ಠ ವಿದುರಸ್ಯ ಚ ಧೀಮತಃ।।
05123008a ಮಾ ಕುಲಘ್ನೋಽಂತಪುರುಷೋ ದುರ್ಮತಿಃ ಕಾಪಥಂ ಗಮಃ।
05123008c ಪಿತರಂ ಮಾತರಂ ಚೈವ ವೃದ್ಧೌ ಶೋಕಾಯ ಮಾ ದದಃ।।
ಭರತಶ್ರೇಷ್ಠ! ತಥ್ಯವಾದ, ಅರ್ಥವತ್ತಾದ ಕೇಶವನ, ನಿನ್ನ ತಂದೆಯ, ಧೀಮತ ವಿದುರನ ಮಾತನ್ನು ಅತಿಕ್ರಮಿಸಿ ಕುಲಘ್ನ-ಅಂತಕನೆನಿಸಿಕೊಳ್ಳಬೇಡ. ದುರ್ಮತಿಯಾಗಬೇಡ! ಕೆಟ್ಟ ದಾರಿಯಲ್ಲಿ ಹೋಗಬೇಡ! ವೃದ್ಧ ತಂದೆ-ತಾಯಂದಿರಿಗೆ ಶೋಕವನ್ನು ಕೊಡಬೇಡ!”
05123009a ಅಥ ದ್ರೋಣೋಽಬ್ರವೀತ್ತತ್ರ ದುರ್ಯೋಧನಮಿದಂ ವಚಃ।
05123009c ಅಮರ್ಷವಶಮಾಪನ್ನಂ ನಿಃಶ್ವಸಂತಂ ಪುನಃ ಪುನಃ।।
ಆಗ ಅಲ್ಲಿ ಕೋಪಾವಿಷ್ಟನಾಗಿ ಪುನಃ ಪುನಃ ನಿಟ್ಟುಸಿರು ಬಿಡುತ್ತಿರುವ ದುರ್ಯೋಧನನಿಗೆ ದ್ರೋಣನು ಹೇಳಿದನು:
05123010a ಧರ್ಮಾರ್ಥಯುಕ್ತಂ ವಚನಮಾಹ ತ್ವಾಂ ತಾತ ಕೇಶವಃ।
05123010c ತಥಾ ಭೀಷ್ಮಃ ಶಾಂತನವಸ್ತಜ್ಜುಷಸ್ವ ನರಾಧಿಪ।।
“ಮಗೂ! ನರಾಧಿಪ! ಕೇಶವನೂ ಹಾಗೆ ಶಾಂತನವ ಭೀಷ್ಮನೂ ನಿನಗೆ ಧರ್ಮಾರ್ಥಯುಕ್ತವಾದ ಮಾತುಗಳನ್ನೇ ಹೇಳಿದ್ದಾರೆ. ಇವುಗಳನ್ನು ಸ್ವೀಕರಿಸು.
05123011a ಪ್ರಾಜ್ಞೌ ಮೇಧಾವಿನೌ ದಾಂತಾವರ್ಥಕಾಮೌ ಬಹುಶ್ರುತೌ।
05123011c ಆಹತುಸ್ತ್ವಾಂ ಹಿತಂ ವಾಕ್ಯಂ ತದಾದತ್ಸ್ವ ಪರಂತಪ।।
ಪರಂತಪ! ಇವರಿಬ್ಬರೂ ಪ್ರಾಜ್ಞರು, ಮೇಧಾವಿಗಳು, ಅರ್ಥ-ಕಾಮಗಳಲ್ಲಿ ದಾಂತರು, ಬಹಳ ವಿದ್ಯಾವಂತರು. ನಿನಗೆ ಹಿತವಾದುದನ್ನೇ ಆಡಿದ್ದಾರೆ. ಅದನ್ನು ತೆಗೆದುಕೋ!
05123012a ಅನುತಿಷ್ಠ ಮಹಾಪ್ರಾಜ್ಞಾ ಕೃಷ್ಣಭೀಷ್ಮೌ ಯದೂಚತುಃ।
05123012c ಮಾ ವಚೋ ಲಘುಬುದ್ಧೀನಾಂ ಸಮಾಸ್ಥಾಸ್ತ್ವಂ ಪರಂತಪ।।
ಮಹಾಪ್ರಾಜ್ಞರಾದ ಕೃಷ್ಣ-ಭೀಷ್ಮರು ಹೇಳಿದುದನ್ನು ಅನುಸರಿಸಿ ನಡೆ. ಪರಂತಪ! ಲಘು ಬುದ್ಧಿಯಿಂದ ಈ ಮಾತುಗಳನ್ನು ನೀನು ಅಲ್ಲಗಳೆಯಬೇಡ.
05123013a ಯೇ ತ್ವಾಂ ಪ್ರೋತ್ಸಾಹಯಂತ್ಯೇತೇ ನೈತೇ ಕೃತ್ಯಾಯ ಕರ್ಹಿ ಚಿತ್।
05123013c ವೈರಂ ಪರೇಷಾಂ ಗ್ರೀವಾಯಾಂ ಪ್ರತಿಮೋಕ್ಷ್ಯಂತಿ ಸಂಯುಗೇ।।
ನಿನ್ನನ್ನು ಯಾರು ಪ್ರೋತ್ಸಾಹಿಸುತ್ತಿರುವರೋ ಅವರು ಏನನ್ನೂ ಮಾಡಲಾರರು. ಯುದ್ಧದಲ್ಲಿ ಇವರು ವೈರವನ್ನು ಇನ್ನೊಬ್ಬರ ಕೊರಳಿಗೆ ಕಟ್ಟುತ್ತಾರೆ.
05123014a ಮಾ ಕುರೂಂ ಜೀಘನಃ ಸರ್ವಾನ್ಪುತ್ರಾನ್ ಭ್ರಾತೄನ್ತಥೈವ ಚ।
05123014c ವಾಸುದೇವಾರ್ಜುನೌ ಯತ್ರ ವಿದ್ಧ್ಯಜೇಯಂ ಬಲಂ ಹಿ ತತ್।।
ಎಲ್ಲ ಮಕ್ಕಳ ಮತ್ತು ಸಹೋದರರ ಕೊಲೆ ಮಾಡಬೇಡ. ಎಲ್ಲಿ ವಾಸುದೇವ-ಅರ್ಜುನರು ಇರುವರೋ ಅಲ್ಲಿ ಸೇನೆಯು ಅಜೇಯವೆಂದು ತಿಳಿದುಕೋ!
05123015a ಏತಚ್ಚೈವ ಮತಂ ಸತ್ಯಂ ಸುಹೃದೋಃ ಕೃಷ್ಣಭೀಷ್ಮಯೋಃ।
05123015c ಯದಿ ನಾದಾಸ್ಯಸೇ ತಾತ ಪಶ್ಚಾತ್ತಪ್ಸ್ಯಸಿ ಭಾರತ।।
ಸುಹೃದಯರಾದ ಈ ಕೃಷ್ಣ-ಭೀಷ್ಮರ ಸತ್ಯ ಮತವನ್ನು ನೀನು ಆದರಿಸದೇ ಇದ್ದರೆ ಮಗೂ! ಭಾರತ! ಪಶ್ಚಾತ್ತಾಪ ಪಡುತ್ತೀಯೆ.
05123016a ಯಥೋಕ್ತಂ ಜಾಮದಗ್ನ್ಯೇನ ಭೂಯಾನೇವ ತತೋಽರ್ಜುನಃ।
05123016c ಕೃಷ್ಣೋ ಹಿ ದೇವಕೀಪುತ್ರೋ ದೇವೈರಪಿ ದುರುತ್ಸಹಃ।।
ಅರ್ಜುನನು ಜಾಮದಗ್ನಿಯು ಹೇಳಿದುದಕ್ಕಿಂತಲೂ ಹೆಚ್ಚಿನವನು. ದೇವಕೀ ಪುತ್ರ ಕೃಷ್ಣನು ದೇವತೆಗಳಿಗೂ ದುರುತ್ಸಹನು.
05123017a ಕಿಂ ತೇ ಸುಖಪ್ರಿಯೇಣೇಹ ಪ್ರೋಕ್ತೇನ ಭರತರ್ಷಭ।
05123017c ಏತತ್ತೇ ಸರ್ವಮಾಖ್ಯಾತಂ ಯಥೇಚ್ಚಸಿ ತಥಾ ಕುರು।
05123017e ನ ಹಿ ತ್ವಾಮುತ್ಸಹೇ ವಕ್ತುಂ ಭೂಯೋ ಭರತಸತ್ತಮ।।
ಭರತರ್ಷಭ! ನಿನಗೆ ಸುಖವೂ ಪ್ರಿಯವೂ ಆದುದನ್ನು ಹೇಳುವುದರಲ್ಲಿ ಇನ್ನೇನಿದೆ? ಇವರು ಎಲ್ಲವನ್ನೂ ಹೇಳಿದ್ದಾರೆ. ನಿನಗೆ ಇಷ್ಟವಾದ ಹಾಗೆ ಮಾಡು! ಭರತಸತ್ತಮ! ಇದಕ್ಕಿಂತಲೂ ಹೆಚ್ಚಿಗೆ ನಿನಗೆ ಹೇಳಲು ಉತ್ಸಾಹವಿಲ್ಲ.”
05123018a ತಸ್ಮಿನ್ವಾಕ್ಯಾಂತರೇ ವಾಕ್ಯಂ ಕ್ಷತ್ತಾಪಿ ವಿದುರೋಽಬ್ರವೀತ್।
05123018c ದುರ್ಯೋಧನಮಭಿಪ್ರೇಕ್ಷ್ಯ ಧಾರ್ತರಾಷ್ಟ್ರಮಮರ್ಷಣಂ।।
ಆ ಮಾತು ಮುಗಿದ ನಂತರ ಕ್ಷತ್ತ ವಿದುರನೂ ಕೂಡ ಕೋಪಾವಿಷ್ಟನಾಗಿದ್ದ ಧಾರ್ತರಾಷ್ಟ್ರ ದುರ್ಯೋಧನನನ್ನು ನೋಡಿ ಹೇಳಿದನು:
05123019a ದುರ್ಯೋಧನ ನ ಶೋಚಾಮಿ ತ್ವಾಮಹಂ ಭರತರ್ಷಭ।
05123019c ಇಮೌ ತು ವೃದ್ಧೌ ಶೋಚಾಮಿ ಗಾಂಧಾರೀಂ ಪಿತರಂ ಚ ತೇ।।
“ದುರ್ಯೋಧನ! ಭರತರ್ಷಭ! ನಿನ್ನ ಕುರಿತು ನಾನು ಶೋಕಿಸುತ್ತಿಲ್ಲ! ವೃದ್ಧರಾಗಿರುವ ಈ ಗಾಂಧಾರೀ ಮತ್ತು ನಿನ್ನ ತಂದೆಯ ಕುರಿತು ಶೋಕಿಸುತ್ತಿದ್ದೇನೆ.
05123020a ಯಾವನಾಥೌ ಚರಿಷ್ಯೇತೇ ತ್ವಯಾ ನಾಥೇನ ದುರ್ಹೃದಾ।
05123020c ಹತಮಿತ್ರೌ ಹತಾಮಾತ್ಯೌ ಲೂನಪಕ್ಷಾವಿವ ದ್ವಿಜೌ।।
ದುಷ್ಟನಾದ ನಿನ್ನನ್ನು ನಾಥನನ್ನಾಗಿ ಪಡೆದಿರುವ ಇವರು ಮಿತ್ರರನ್ನು ಕಳೆದುಕೊಂಡು, ಅಮಾತ್ಯರನ್ನು ಕಳೆದುಕೊಂಡು, ರೆಕ್ಕೆಗಳನ್ನು ಕಳೆದುಕೊಂಡ ಪಕ್ಷಿಗಳಂತೆ ಅನಾಥರಾಗಿ ತಿರುಗ ಬೇಕಾಗುತ್ತದೆ.
05123021a ಭಿಕ್ಷುಕೌ ವಿಚರಿಷ್ಯೇತೇ ಶೋಚಂತೌ ಪೃಥಿವೀಮಿಮಾಂ।
05123021c ಕುಲಘ್ನಮೀದೃಶಂ ಪಾಪಂ ಜನಯಿತ್ವಾ ಕುಪೂರುಷಂ।।
ನಿನ್ನಂತಹ ಕುಲಘ್ನ, ಪಾಪಿ, ಕೆಟ್ಟಪುರುಷನಿಗೆ ಜನ್ಮವಿತ್ತು ಭಿಕ್ಷುಕರಂತೆ ಶೋಕಿಸುತ್ತಾ ಈ ಭೂಮಿಯಲ್ಲಿ ಅಲೆಯಬೇಕಾಗುತ್ತದೆ.”
05123022a ಅಥ ದುರ್ಯೋಧನಂ ರಾಜಾ ಧೃತರಾಷ್ಟ್ರೋಽಭ್ಯಭಾಷತ।
05123022c ಆಸೀನಂ ಭ್ರಾತೃಭಿಃ ಸಾರ್ಧಂ ರಾಜಭಿಃ ಪರಿವಾರಿತಂ।।
ಆಗ ಸಹೋದರರೊಂದಿಗೆ, ರಾಜರಿಂದ ಸುತ್ತುವರೆಯಲ್ಪಟ್ಟು ಕುಳಿತಿದ್ದ ದುರ್ಯೋಧನನಿಗೆ ರಾಜಾ ಧೃತರಾಷ್ಟ್ರನು ಹೇಳಿದನು:
05123023a ದುರ್ಯೋಧನ ನಿಬೋಧೇದಂ ಶೌರಿಣೋಕ್ತಂ ಮಹಾತ್ಮನಾ।
05123023c ಆದತ್ಸ್ವ ಶಿವಮತ್ಯಂತಂ ಯೋಗಕ್ಷೇಮವದವ್ಯಯಂ।।
“ದುರ್ಯೋಧನ! ಮಹಾತ್ಮ ಶೌರಿಯು ಹೇಳಿದುದನ್ನು ಕೇಳು. ಅವನ ಆ ಅತ್ಯಂತ ಮಂಗಳಕರ, ಅವ್ಯಯ ಯೋಗ-ಕ್ಷೇಮಗಳನ್ನು ನೀಡುವ ಮಾತನ್ನು ಸ್ವೀಕರಿಸು.
05123024a ಅನೇನ ಹಿ ಸಹಾಯೇನ ಕೃಷ್ಣೇನಾಕ್ಲಿಷ್ಟಕರ್ಮಣಾ।
05123024c ಇಷ್ಟಾನ್ಸರ್ವಾನಭಿಪ್ರಾಯಾನ್ಪ್ರಾಪ್ಸ್ಯಾಮಃ ಸರ್ವರಾಜಸು।।
ಏಕೆಂದರೆ ಈ ಅಕ್ಲಿಷ್ಟಕರ್ಮಿ ಕೃಷ್ಣನ ಸಹಾಯದಿಂದಲೇ ನಾವು ಎಲ್ಲ ರಾಜರೂ ತಮ್ಮ ಇಷ್ಟ ಅಭಿಪ್ರಾಯಗಳನ್ನು ಸಾಧಿಸಬಲ್ಲೆವು.
05123025a ಸುಸಂಹಿತಃ ಕೇಶವೇನ ಗಚ್ಚ ತಾತ ಯುಧಿಷ್ಠಿರಂ।
05123025c ಚರ ಸ್ವಸ್ತ್ಯಯನಂ ಕೃತ್ಸ್ನಂ ಭಾರತಾನಾಮನಾಮಯಂ।।
ಮಗೂ! ಕೇಶವನೊಂದಿಗೆ ಹೋಗಿ ಯುಧಿಷ್ಠಿರನನ್ನು ಸೇರು. ಭಾರತರ ಈ ಅನಾಮಯ ಸಂಪೂರ್ಣ ಮಂಗಳ ಕಾರ್ಯವನ್ನು ಮಾಡಿ ಅದರಂತೆ ನಡೆದುಕೋ.
05123026a ವಾಸುದೇವೇನ ತೀರ್ಥೇನ ತಾತ ಗಚ್ಚಸ್ವ ಸಂಗಮಂ।
05123026c ಕಾಲಪ್ರಾಪ್ತಮಿದಂ ಮನ್ಯೇ ಮಾ ತ್ವಂ ದುರ್ಯೋಧನಾತಿಗಾಃ।।
ಮಗೂ! ವಾಸುದೇವನ ಮೂಲಕ ಸಂಗಮವನ್ನು ಹೊಂದು. ಕಾಲವು ಪ್ರಾಪ್ತವಾಗಿದೆ ಎಂದೆನಿಸುತ್ತಿದೆ. ದುರ್ಯೋಧನ! ಈ ಅವಕಾಶವನ್ನು ಕಳೆದುಕೊಳ್ಳಬೇಡ!
05123027a ಶಮಂ ಚೇದ್ಯಾಚಮಾನಂ ತ್ವಂ ಪ್ರತ್ಯಾಖ್ಯಾಸ್ಯಸಿ ಕೇಶವಂ।
05123027c ತ್ವದರ್ಥಮಭಿಜಲ್ಪಂತಂ ನ ತವಾಸ್ತ್ಯಪರಾಭವಃ।।
ಆದರೆ ನಿನ್ನ ಒಳ್ಳೆಯದಕ್ಕಾಗಿಯೇ ಪುನಃ ಪುನಃ ಹೇಳುತ್ತಿರುವ ಕೇಶವನನ್ನು ನೀನು ಅನಾದರಿಸಿ ಶಾಂತಿಯನ್ನು ಮಾಡಿಕೊಳ್ಳದೇ ಇದ್ದರೆ ಪರಾಭವವು ನಿನ್ನದಾಗುತ್ತದೆ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಭೀಷ್ಮಾದಿವಾಕ್ಯೇ ತ್ರಿವಿಂಶತ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಭೀಷ್ಮಾದಿವಾಕ್ಯದಲ್ಲಿ ನೂರಾಇಪ್ಪತ್ತ್ಮೂರನೆಯ ಅಧ್ಯಾಯವು.