121 ಗಾಲವಚರಿತಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಭಗವದ್ಯಾನ ಪರ್ವ

ಅಧ್ಯಾಯ 121

ಸಾರ

ಸ್ವರ್ಗವನ್ನು ಸೇರಿದ ಯಯಾತಿಯು ಪಿತಾಮಹನಲ್ಲಿ ಪ್ರಶ್ನಿಸಲು ಅಭಿಮಾನವೇ ಅವನು ಸಂಗ್ರಹಿಸಿದ್ದ ಮಹಾ ಪುಣ್ಯಗಳನ್ನು ನಾಶಪಡಿಸಿತು ಎಂದು ತಿಳಿದುಕೊಳ್ಳುವುದು (1-17). ಹೀಗೆ ಗಾಲವನ ಹಠದ ಮತ್ತು ಯಯಾತಿಯ ಅಭಿಮಾನದ ದುಷ್ಪರಿಣಾಮಗಳನ್ನು ಉದಾಹರಿಸಿ ನಾರದನು ದುರ್ಯೋಧನನಿಗೆ ಉಪದೇಶಿಸಿದುದು (18-22).

05121001 ನಾರದ ಉವಾಚ।
05121001a ಸದ್ಭಿರಾರೋಪಿತಃ ಸ್ವರ್ಗಂ ಪಾರ್ಥಿವೈರ್ಭೂರಿದಕ್ಷಿಣೈಃ।
05121001c ಅಭ್ಯನುಜ್ಞಾಯ ದೌಹಿತ್ರಾನ್ಯಯಾತಿರ್ದಿವಮಾಸ್ಥಿತಃ।।

ನಾರದನು ಹೇಳಿದನು: “ಆ ಭೂರಿದಕ್ಷಿಣ ಒಳ್ಳೆಯ ಪಾರ್ಥಿವರಿಂದ ಸ್ವರ್ಗಕ್ಕೆ ಏರಿಸಲ್ಪಟ್ಟ ಯಯಾತಿಯು ಮಗಳ ಮಕ್ಕಳನ್ನು ಬೀಳ್ಕೊಂಡು ಸ್ವರ್ಗವನ್ನು ಸೇರಿದನು.

05121002a ಅಭಿವೃಷ್ಟಶ್ಚ ವರ್ಷೇಣ ನಾನಾಪುಷ್ಪಸುಗಂಧಿನಾ।
05121002c ಪರಿಷ್ವಕ್ತಶ್ಚ ಪುಣ್ಯೇನ ವಾಯುನಾ ಪುಣ್ಯಗಂಧಿನಾ।।
05121003a ಅಚಲಂ ಸ್ಥಾನಮಾರುಹ್ಯ ದೌಹಿತ್ರಫಲನಿರ್ಜಿತಂ।
05121003c ಕರ್ಮಭಿಃ ಸ್ವೈರುಪಚಿತೋ ಜಜ್ವಾಲ ಪರಯಾ ಶ್ರಿಯಾ।।

ನಾನಾ ಸುಗಂಧಿತ ಪುಷ್ಪಗಳ ಮಳೆಯಲ್ಲಿ ಮಿಂದು, ಪುಣ್ಯಸುಗಂಧಯುಕ್ತ ಪುಣ್ಯಗಾಳಿಗೆ ಸಿಲುಕಿ, ಮಗಳ ಮಕ್ಕಳ ಫಲವನ್ನು ಪಡೆದು ಅಚಲ ಸ್ಥಾನವನ್ನೇರಿ, ತನ್ನದೇ ಉಪಚಿತ ಕರ್ಮಗಳಿಂದ ಪರಮ ಶ್ರೀಯನ್ನು ಪಡೆದು ಪ್ರಜ್ವಲಿಸಿದನು.

05121004a ಉಪಗೀತೋಪನೃತ್ತಶ್ಚ ಗಂಧರ್ವಾಪ್ಸರಸಾಂ ಗಣೈಃ।
05121004c ಪ್ರೀತ್ಯಾ ಪ್ರತಿಗೃಹೀತಶ್ಚ ಸ್ವರ್ಗೇ ದುಂದುಭಿನಿಸ್ವನೈಃ।।

ಗಂಧರ್ವಾಪ್ಸರ ಗಣಗಳ ಉಪಗೀತ ಉಪನೃತ್ಯಗಳಿಂದ, ದುಂದುಭಿ ನಿಸ್ವನಗಳಿಂದ ಅವನು ಸ್ವರ್ಗದಲ್ಲಿ ಪ್ರೀತಿಯಿಂದ ಸ್ವಾಗತಿಸಲ್ಪಟ್ಟನು.

05121005a ಅಭಿಷ್ಟುತಶ್ಚ ವಿವಿಧೈರ್ದೇವರಾಜರ್ಷಿಚಾರಣೈಃ।
05121005c ಅರ್ಚಿತಶ್ಚೋತ್ತಮಾರ್ಘೇಣ ದೈವತೈರಭಿನಂದಿತಃ।।
05121006a ಪ್ರಾಪ್ತಃ ಸ್ವರ್ಗಫಲಂ ಚೈವ ತಮುವಾಚ ಪಿತಾಮಹಃ।
05121006c ನಿರ್ವೃತಂ ಶಾಂತಮನಸಂ ವಚೋಭಿಸ್ತರ್ಪಯನ್ನಿವ।।

ವಿವಿಧ ದೇವ-ರಾಜರ್ಷಿ ಚಾರಣರ ಅರ್ಚನೆಗಳಿಂದ ಸಂತೋಷಗೊಂಡು, ದೇವತೆಗಳಿಂದ ಅಭಿನಂದಿತನಾಗಿ, ಅವನು ಸ್ವರ್ಗಫಲವನ್ನು ಹೊಂದಿದನು. ಆಗ ಪಿತಾಮಹನು ಶಾಂತಮನಸ್ಕನಾಗಿ ಹಿಂದಿರುಗಿದ ಅವನನ್ನು ತೃಪ್ತಿಗೊಳಿಸಲೋ ಎನ್ನುವಂತೆ ಹೇಳಿದನು:

05121007a ಚತುಷ್ಪಾದಸ್ತ್ವಯಾ ಧರ್ಮಶ್ಚಿತೋ ಲೋಕ್ಯೇನ ಕರ್ಮಣಾ।
05121007c ಅಕ್ಷಯಸ್ತವ ಲೋಕೋಽಯಂ ಕೀರ್ತಿಶ್ಚೈವಾಕ್ಷಯಾ ದಿವಿ।
05121007e ಪುನಸ್ತವಾದ್ಯ ರಾಜರ್ಷೇ ಸುಕೃತೇನೇಹ ಕರ್ಮಣಾ।।

“ಲೋಕದಲ್ಲಿ ಕರ್ಮಗಳ ಮೂಲಕ ನಾಲ್ಕು ಭಾಗ ಧರ್ಮಗಳನ್ನು ಸಂಚಯಿಸಿದ್ದೀಯೆ. ಈ ಲೋಕವು ನಿನಗೆ ಅಕ್ಷಯವಾಗುತ್ತದೆ. ರಾಜರ್ಷೇ! ನಿನ್ನ ಸುಕೃತ ಕರ್ಮಗಳಿಂದ ಪುನಃ ದಿವಿಯಲ್ಲಿ ನಿನ್ನ ಕೀರ್ತಿಯೂ ಅಕ್ಷಯವಾಗುತ್ತದೆ.

05121008a ಆವೃತಂ ತಮಸಾ ಚೇತಃ ಸರ್ವೇಷಾಂ ಸ್ವರ್ಗವಾಸಿನಾಂ।
05121008c ಯೇನ ತ್ವಾಂ ನಾಭಿಜಾನಂತಿ ತತೋಽಜ್ಞಾತ್ವಾಸಿ ಪಾತಿತಃ।।

ಸ್ವರ್ಗವಾಸಿಗಳೆಲ್ಲರ ಚೇತನಗಳೂ ತಮಸ್ಸಿನಿಂದ ಆವೃತವಾಗಿದ್ದವು. ಆದುದರಿಂದ ಅವರು ನಿನ್ನನ್ನು ಗುರುತಿಸಲಾರದಾದರು. ಗುರುತಿಗೆ ಸಿಗದೇ ನೀನು ಕೆಳಗೆ ಬಿದ್ದೆ.

05121009a ಪ್ರೀತ್ಯೈವ ಚಾಸಿ ದೌಹಿತ್ರೈಸ್ತಾರಿತಸ್ತ್ವಮಿಹಾಗತಃ।
05121009c ಸ್ಥಾನಂ ಚ ಪ್ರತಿಪನ್ನೋಽಸಿ ಕರ್ಮಣಾ ಸ್ವೇನ ನಿರ್ಜಿತಂ।
05121009e ಅಚಲಂ ಶಾಶ್ವತಂ ಪುಣ್ಯಮುತ್ತಮಂ ಧ್ರುವಮವ್ಯಯಂ।।

ನಿನ್ನ ಮಗಳ ಮಕ್ಕಳು ಪ್ರೀತಿಯಿಂದ ನಿನ್ನನ್ನು ಉದ್ಧರಿಸಿದುದರಿಂದ ನೀನು ಇಲ್ಲಿಗೆ ಬಂದಿರುವೆ. ಮತ್ತು ನಿನ್ನ ಕರ್ಮಗಳಿಂದ ಗಳಿಸಿದ ಈ ಅಚಲವೂ, ಶಾಶ್ವತವೂ, ಪುಣ್ಯವೂ, ಉತ್ತಮವೂ, ನಿಶ್ಚಿತವೂ, ಅವ್ಯಯವೂ ಆಗಿರುವ ಸ್ಥಾನವನ್ನು ಗಳಿಸಿರುವೆ.”

05121010 ಯಯಾತಿರುವಾಚ।
05121010a ಭಗವನ್ಸಂಶಯೋ ಮೇಽಸ್ತಿ ಕಶ್ಚಿತ್ತಂ ಚೇತ್ತುಮರ್ಹಸಿ।
05121010c ನ ಹ್ಯನ್ಯಮಹಮರ್ಹಾಮಿ ಪ್ರಷ್ಟುಂ ಲೋಕಪಿತಾಮಹ।।

ಯಯಾತಿಯು ಹೇಳಿದನು: “ಭಗವನ್! ಲೋಕಪಿತಾಮಹ! ನನಗೊಂದು ಸಂಶಯವಿದೆ. ಅದನ್ನು ಹೋಗಲಾಡಿಸಬೇಕು. ಏಕೆಂದರೆ ಬೇರೆ ಯಾರಲ್ಲಿಯೂ ಇದನ್ನು ಕೇಳಲಾರೆ.

05121011a ಬಹುವರ್ಷಸಹಸ್ರಾಂತಂ ಪ್ರಜಾಪಾಲನವರ್ಧಿತಂ।
05121011c ಅನೇಕಕ್ರತುದಾನೌಘೈರರ್ಜಿತಂ ಮೇ ಮಹತ್ಫಲಂ।।

ಬಹಳ ಸಹಸ್ರಾರು ವರ್ಷಗಳ ಕಾಲ ಪ್ರಜಾಪಾಲನೆಯಿಂದ ಬೆಳೆದ, ಅನೇಕ ಕ್ರತು-ದಾನಾದಿಗಳಿಂದ ನಾನು ಮಹಾ ಫಲವನ್ನು ಗಳಿಸಿದ್ದೆನು.

05121012a ಕಥಂ ತದಲ್ಪಕಾಲೇನ ಕ್ಷೀಣಂ ಯೇನಾಸ್ಮಿ ಪಾತಿತಃ।
05121012c ಭಗವನ್ವೇತ್ಥ ಲೋಕಾಂಶ್ಚ ಶಾಶ್ವತಾನ್ಮಮ ನಿರ್ಜಿತಾನ್।।

ಆದರೆ, ಅದು ಸ್ವಲ್ಪವೇ ಸಮಯದಲ್ಲಿ ಕ್ಷೀಣವಾಗಿ ನಾನು ಹೇಗೆ ಬಿದ್ದೆ? ಭಗವನ್! ನಾನು ಗಳಿಸಿದ ಶಾಶ್ವತ ಲೋಕಗಳು ನಿನಗೆ ತಿಳಿದೇ ಇವೆ.”

05121013 ಪಿತಾಮಹ ಉವಾಚ।
05121013a ಬಹುವರ್ಷಸಹಸ್ರಾಂತಂ ಪ್ರಜಾಪಾಲನವರ್ಧಿತಂ।
05121013c ಅನೇಕಕ್ರತುದಾನೌಘೈರ್ಯತ್ತ್ವಯೋಪಾರ್ಜಿತಂ ಫಲಂ।।

ಪಿತಾಮಹನು ಹೇಳಿದನು: “ಬಹಳ ಸಹಸ್ರಾರು ವರ್ಷಗಳ ಕಾಲ ಪ್ರಜಾಪಾಲನೆಯಿಂದ ಬೆಳೆದ, ಅನೇಕ ಕ್ರತು-ದಾನಾದಿಗಳಿಂದ ನೀನು ಮಹಾ ಫಲಗಳನ್ನು ಗಳಿಸಿದ್ದೆ.

05121014a ತದನೇನೈವ ದೋಷೇಣ ಕ್ಷೀಣಂ ಯೇನಾಸಿ ಪಾತಿತಃ।
05121014c ಅಭಿಮಾನೇನ ರಾಜೇಂದ್ರ ಧಿಕ್ಕೃತಃ ಸ್ವರ್ಗವಾಸಿಭಿಃ।।

ಆದರೆ ಅವನ್ನು ಒಂದೇ ಒಂದು ದೋಷದಿಂದ ಅವುಗಳನ್ನು ಕಳೆದುಕೊಂಡು ಇಲ್ಲಿಂದ ಕೆಳಗುರುಳಿದೆ. ರಾಜೇಂದ್ರ! ಅಭಿಮಾನದಿಂದ ನೀನು ಸ್ವರ್ಗವಾಸಿಗಳಿಂದ ಧಿಕ್ಕರಿಸಲ್ಪಟ್ಟೆ.

05121015a ನಾಯಂ ಮಾನೇನ ರಾಜರ್ಷೇ ನ ಬಲೇನ ನ ಹಿಂಸಯಾ।
05121015c ನ ಶಾಠ್ಯೇನ ನ ಮಾಯಾಭಿರ್ಲೋಕೋ ಭವತಿ ಶಾಶ್ವತಃ।।

ರಾಜರ್ಷೇ! ಈ ಲೋಕವು ಮಾನದಿಂದ, ಬಲದಿಂದ, ಹಿಂಸೆಯಿಂದ, ಮೋಸದಿಂದ ಮತ್ತು ಮಾಯೆಯಿಂದ ಶಾಶ್ವತವಾಗುವುದಿಲ್ಲ.

05121016a ನಾವಮಾನ್ಯಾಸ್ತ್ವಯಾ ರಾಜನ್ನವರೋತ್ಕೃಷ್ಟಮಧ್ಯಮಾಃ।
05121016c ನ ಹಿ ಮಾನಪ್ರದಗ್ಧಾನಾಂ ಕಶ್ಚಿದಸ್ತಿ ಸಮಃ ಕ್ವ ಚಿತ್।।

ರಾಜನ್! ನೀನು ಮೇಲಿರುವವರನ್ನಾಗಲೀ, ಕೆಳಗಿರುವವರನ್ನಾಗಲೀ, ಮುಧ್ಯಮರನ್ನಾಗಲೀ ಅವಮಾನಿಸಕೂಡದು. ಅಭಿಮಾನದ ಕಿಚ್ಚಿಗೆ ಸಿಲುಕಿದವರಿಗೆ ಎಂದೂ ಯಾರೂ ಸಮರೆನಿಸುವುದಿಲ್ಲ.

05121017a ಪತನಾರೋಹಣಮಿದಂ ಕಥಯಿಷ್ಯಂತಿ ಯೇ ನರಾಃ।
05121017c ವಿಷಮಾಣ್ಯಪಿ ತೇ ಪ್ರಾಪ್ತಾಸ್ತರಿಷ್ಯಂತಿ ನ ಸಂಶಯಃ।।

ನಿನ್ನ ಈ ಪತನ ಮತ್ತು ಆರೋಹಣವನ್ನು ಯಾವ ನರರು ಹೇಳುತ್ತಾರೋ ಅವರು ಎಲ್ಲ ಕಷ್ಟಗಳನ್ನು ದಾಟುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ!””

05121018 ನಾರದ ಉವಾಚ।
05121018a ಏಷ ದೋಷೋಽಭಿಮಾನೇನ ಪುರಾ ಪ್ರಾಪ್ತೋ ಯಯಾತಿನಾ।
05121018c ನಿರ್ಬಂಧತಶ್ಚಾತಿಮಾತ್ರಂ ಗಾಲವೇನ ಮಹೀಪತೇ।।

ನಾರದನು ಹೇಳಿದನು: “ಮಹೀಪತೇ! ಈ ರೀತಿ ಅಭಿಮಾನದಿಂದ ಹಿಂದೆ ಯಯಾತಿ ಮತ್ತು ಗಾಲವರು ಅತಿ ನಿರ್ಬಂಧಕ್ಕಾಗಿ ದೋಷಗಳನ್ನು ಹೊಂದಿದರು.

05121019a ಶ್ರೋತವ್ಯಂ ಹಿತಕಾಮಾನಾಂ ಸುಹೃದಾಂ ಭೂತಿಮಿಚ್ಚತಾಂ।
05121019c ನ ಕರ್ತವ್ಯೋ ಹಿ ನಿರ್ಬಂಧೋ ನಿರ್ಬಂಧೋ ಹಿ ಕ್ಷಯೋದಯಃ।।

ತಮ್ಮ ಏಳಿಗೆಯನ್ನು ಬಯಸುವವರು ಸುಹೃದಯರ ಹಿತಕಾಮನೆಗಳನ್ನು ಕೇಳಬೇಕು. ಹಠವನ್ನು ಮಾಡಬಾರದು. ಏಕೆಂದರೆ ಹಠವು ಕ್ಷಯವನ್ನು ತರುತ್ತದೆ.

05121020a ತಸ್ಮಾತ್ತ್ವಮಪಿ ಗಾಂಧಾರೇ ಮಾನಂ ಕ್ರೋಧಂ ಚ ವರ್ಜಯ।
05121020c ಸಂಧತ್ಸ್ವ ಪಾಂಡವೈರ್ವೀರ ಸಂರಂಭಂ ತ್ಯಜ ಪಾರ್ಥಿವ।।

ಆದುದರಿಂದ ಗಾಂಧಾರೇ! ನೀನೂ ಕೂಡ ಮಾನಕ್ರೋಧಗಳನ್ನು ತೊರೆದು ವೀರ ಪಾಂಡವರೊಂದಿಗೆ ಸಂಧಿ ಮಾಡಿಕೋ! ಪಾರ್ಥಿವ! ಈ ರಂಪಾಟವನ್ನು ತ್ಯಜಿಸು.

05121021a ದದಾತಿ ಯತ್ಪಾರ್ಥಿವ ಯತ್ಕರೋತಿ ಯದ್ವಾ ತಪಸ್ತಪ್ಯತಿ ಯಜ್ಜುಹೋತಿ।
05121021c ನ ತಸ್ಯ ನಾಶೋಽಸ್ತಿ ನ ಚಾಪಕರ್ಷೋ ನಾನ್ಯಸ್ತದಶ್ನಾತಿ ಸ ಏವ ಕರ್ತಾ।।

ಪಾರ್ಥಿವ! ಏನನ್ನು ಕೊಡುತ್ತೀವೋ, ಏನನ್ನು ಮಾಡುತ್ತೇವೋ, ಏನು ತಪಸ್ಸನ್ನು ತಪಿಸುತ್ತೇವೋ, ಏನು ಯಜ್ಞಗಳನ್ನು ಮಾಡುತ್ತೇವೋ ಅವುಗಳು ನಾಶವಾಗುವುದಿಲ್ಲ. ಬೇರೆ ಯಾರೂ ತೆಗೆದುಕೊಳ್ಳುವುದಿಲ್ಲ. ಮಾಡುವವನಲ್ಲದೇ ಬೇರೆ ಯಾರಿಗೂ ಅವು ತಲುಪುವುದಿಲ್ಲ.

05121022a ಇದಂ ಮಹಾಖ್ಯಾನಮನುತ್ತಮಂ ಮತಂ ಬಹುಶ್ರುತಾನಾಂ ಗತರೋಷರಾಗಿಣಾಂ।
05121022c ಸಮೀಕ್ಷ್ಯ ಲೋಕೇ ಬಹುಧಾ ಪ್ರಧಾವಿತಾ ತ್ರಿವರ್ಗದೃಷ್ಟಿಃ ಪೃಥಿವೀಮುಪಾಶ್ನುತೇ।।

ಈ ಉತ್ತಮ ಮಹಾಖ್ಯಾನವನ್ನು ಬಹುಶ್ರುತರು ರೋಷರಾಗಗಳನ್ನು ಕಳೆದುಕೊಂಡವರು ಲೋಕಕ್ಕೆ ಬಹುರೀತಿಗಳಲ್ಲಿ ಮೂರೂವರ್ಗದ ದೃಷ್ಟಿಗಳಿಂದ ತೋರಿಸಿ ಕೊಟ್ಟರೆ ಅವರು ಭೂಮಿಯನ್ನು ಪಡೆಯುತ್ತಾರೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಲವಚರಿತೇ ಏಕವಿಂಶತ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಲವಚರಿತೆಯಲ್ಲಿ ನೂರಾಇಪ್ಪತ್ತೊಂದನೆಯ ಅಧ್ಯಾಯವು.