ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಭಗವದ್ಯಾನ ಪರ್ವ
ಅಧ್ಯಾಯ 119
ಸಾರ
ಸ್ವರ್ಗದಿಂದ ಭೂಮಿಗೆ ಬೀಳುತ್ತಿದ್ದ ಯಯಾತಿಯು ವನದಲ್ಲಿ ಮಾಧವಿಯ ಮಕ್ಕಳಾದ ಪ್ರತರ್ದನ, ವಸುಮನ, ಶಿಬಿ ಮತ್ತು ಅಷ್ಟಕರು ಯಜ್ಞಮಾಡುತ್ತಿದ್ದಲ್ಲಿ ಬಿದ್ದುದು (1-14). ಅಲ್ಲಿಗೆ ಬಂದ ಮಾಧವಿ ಮತ್ತು ಗಾಲವರ ತಪಃ ಪ್ರಭಾವದಿಂದ ಮತ್ತು ತನ್ನ ನಾಲ್ವರು ಮೊಮ್ಮಕ್ಕಳ ಪುಣ್ಯದಿಂದ ಯಯಾತಿಯು ಸ್ವರ್ಗವನ್ನು ಪುನಃ ಸೇರಿದುದು (15-28).
05119001 ನಾರದ ಉವಾಚ।
05119001a ಅಥ ಪ್ರಚಲಿತಃ ಸ್ಥಾನಾದಾಸನಾಚ್ಚ ಪರಿಚ್ಯುತಃ।
05119001c ಕಂಪಿತೇನೈವ ಮನಸಾ ಧರ್ಷಿತಃ ಶೋಕವಹ್ನಿನಾ।।
05119002a ಮ್ಲಾನಸ್ರಗ್ಭ್ರಷ್ಟವಿಜ್ಞಾನಃ ಪ್ರಭ್ರಷ್ಟಮುಕುಟಾಂಗದಃ।
05119002c ವಿಘೂರ್ಣನ್ಸ್ರಸ್ತಸರ್ವಾಂಗಃ ಪ್ರಭ್ರಷ್ಟಾಭರಣಾಂಬರಃ।।
05119003a ಅದೃಶ್ಯಮಾನಸ್ತಾನ್ಪಶ್ಯನ್ನಪಶ್ಯಂಶ್ಚ ಪುನಃ ಪುನಃ।
05119003c ಶೂನ್ಯಃ ಶೂನ್ಯೇನ ಮನಸಾ ಪ್ರಪತಿಷ್ಯನ್ಮಹೀತಲಂ।।
ನಾರದನು ಹೇಳಿದನು: “ಆಗ ಸ್ಥಾನದಿಂದ ಪ್ರಚಲಿತನಾಗಿ, ಆಸನದಿಂದ ಪರಿಚ್ಯುತನಾಗಿ, ಮನಸ್ಸು ಕಂಪಿಸುತ್ತಿರಲು, ಶೋಕವಹ್ನಿಯಲ್ಲಿ ಬೆಂದು, ಮಾಲೆಯು ಮಸುಕಾಗಿ, ವಿಶೇಷ ಜ್ಞಾನವನ್ನು ಕಳೆದುಕೊಂಡು, ಕಿರೀಟ-ಅಂಗದಗಳನ್ನು ಕಳಚಿಕೊಂಡು, ತಲೆತಿರುಗಿದಂತಾಗಿ, ಕೈಕಾಲುಗಳು ಜೋತುಬಿದ್ದು, ಆಭರಣ-ವಸ್ತ್ರಗಳನ್ನು ಕಳೆದುಕೊಂಡು, ಅದೃಶ್ಯನಾಗಿ, ಇತರರನ್ನು ನೋಡಿಯೂ ನೋಡದಂತೆ, ಶೂನ್ಯಮನಸ್ಸಿನಿಂದ ಶೂನ್ಯನಾಗಿ ಮಹೀತಲಕ್ಕೆ ಬೀಳುತ್ತಿದ್ದನು.
05119004a ಕಿಂ ಮಯಾ ಮನಸಾ ಧ್ಯಾತಮಶುಭಂ ಧರ್ಮದೂಷಣಂ।
05119004c ಯೇನಾಹಂ ಚಲಿತಃ ಸ್ಥಾನಾದಿತಿ ರಾಜಾ ವ್ಯಚಿಂತಯತ್।।
“ನನ್ನನ್ನು ಸ್ಥಾನದಿಂದ ಚಲಿಸಬಲ್ಲಂತಹ, ಅಶುಭವೂ ಧರ್ಮದೂಷಣವೂ ಆದ ಯಾವುದನ್ನು ನಾನು ಮನಸ್ಸಿನಲ್ಲಿ ಧ್ಯಾನಿಸಿದೆ?” ಎಂದು ರಾಜನು ಚಿಂತಿಸಿದನು.
05119005a ತೇ ತು ತತ್ರೈವ ರಾಜಾನಃ ಸಿದ್ಧಾಶ್ಚಾಪ್ಸರಸಸ್ತಥಾ।
05119005c ಅಪಶ್ಯಂತ ನಿರಾಲಂಬಂ ಯಯಾತಿಂ ತಂ ಪರಿಚ್ಯುತಂ।।
ಆದರೆ ಅಲ್ಲಿದ್ದ ರಾಜರು, ಸಿದ್ಧರು ಮತ್ತು ಅಪ್ಸರೆಯರು ನಿರಾಲಂಬನಾಗಿ ಪರಿಚ್ಯುತನಾಗಿದ್ದ ಯಯಾತಿಯನ್ನು ನೋಡಲೇ ಇಲ್ಲ.
05119006a ಅಥೈತ್ಯ ಪುರುಷಃ ಕಶ್ಚಿತ್ಕ್ಷೀಣಪುಣ್ಯನಿಪಾತಕಃ।
05119006c ಯಯಾತಿಮಬ್ರವೀದ್ರಾಜನ್ದೇವರಾಜಸ್ಯ ಶಾಸನಾತ್।।
ರಾಜನ್! ಅಷ್ಟರಲ್ಲಿಯೇ ಕ್ಷೀಣ ಪುಣ್ಯರನ್ನು ಕೆಳಗುರುಳಿಸುವ ಯಾರೋ ಪುರುಷನೋರ್ವನು ದೇವರಾಜನ ಶಾಸನದಂತೆ ಯಯಾತಿಗೆ ಹೇಳಿದನು:
05119007a ಅತೀವ ಮದಮತ್ತಸ್ತ್ವಂ ನ ಕಂ ಚಿನ್ನಾವಮನ್ಯಸೇ।
05119007c ಮಾನೇನ ಭ್ರಷ್ಟಃ ಸ್ವರ್ಗಸ್ತೇ ನಾರ್ಹಸ್ತ್ವಂ ಪಾರ್ಥಿವಾತ್ಮಜ।
05119007e ನ ಚ ಪ್ರಜ್ಞಾಯಸೇ ಗಚ್ಚ ಪತಸ್ವೇತಿ ತಮಬ್ರವೀತ್।।
“ಅತೀವ ಮದಮತ್ತನಾಗಿ ನೀನು ಬೇರೆ ಎಲ್ಲರನ್ನೂ ಅವಮಾನಿಸುತ್ತಿರುವೆ. ಮಾನದಿಂದಾಗಿ ನೀನು ಸ್ವರ್ಗಭ್ರಷ್ಟನಾಗಿದ್ದೀಯೆ. ಪಾರ್ಥಿವಾತ್ಮಜ! ನೀನು ಅನರ್ಹನಾಗಿರುವೆ. ಈಗ ನೀನು ಅಪರಿಚಿತ. ಹೋಗು. ಬೀಳು!” ಎಂದು ಹೇಳಿದನು.
05119008a ಪತೇಯಂ ಸತ್ಸ್ವಿತಿ ವಚಸ್ತ್ರಿರುಕ್ತ್ವಾ ನಹುಷಾತ್ಮಜಃ।
05119008c ಪತಿಷ್ಯಂಶ್ಚಿಂತಯಾಮಾಸ ಗತಿಂ ಗತಿಮತಾಂ ವರಃ।।
“ಒಳ್ಳೆಯವರ ಮಧ್ಯೆ ಬೀಳುವಂತಾಗಲಿ!” ಎಂದು ಹೇಳಿ ಗತಿವಂತರಲ್ಲಿ ಶ್ರೇಷ್ಠ ನಹುಷಾತ್ಮಜನು ಹೋಗುವ ದಾರಿಯ ಕುರಿತು ಚಿಂತಿಸಿದನು.
05119009a ಏತಸ್ಮಿನ್ನೇವ ಕಾಲೇ ತು ನೈಮಿಷೇ ಪಾರ್ಥಿವರ್ಷಭಾನ್।
05119009c ಚತುರೋಽಪಶ್ಯತ ನೃಪಸ್ತೇಷಾಂ ಮಧ್ಯೇ ಪಪಾತ ಸಃ।
ಇದೇ ಕಾಲದಲ್ಲಿ ನೈಮಿಷದಲ್ಲಿದ್ದ ನಾಲ್ವರು ಪಾರ್ಥಿವರ್ಷಭರನ್ನು ನೋಡಿ ಅವನು ಆ ನೃಪರ ಮಧ್ಯದಲ್ಲಿಯೇ ಬಿದ್ದನು.
05119010a ಪ್ರತರ್ದನೋ ವಸುಮನಾಃ ಶಿಬಿರೌಶೀನರೋಽಷ್ಟಕಃ।
05119010c ವಾಜಪೇಯೇನ ಯಜ್ಞೇನ ತರ್ಪಯಂತಿ ಸುರೇಶ್ವರಂ।।
ಪ್ರತರ್ದನ, ವಸುಮನ, ಔಶೀನರ ಶಿಬಿ ಮತ್ತು ಅಷ್ಟಕರು ವಾಜಪೇಯ ಯಜ್ಞದಿಂದ ಸುರೇಶ್ವರನನ್ನು ತೃಪ್ತಿಪಡಿಸುತ್ತಿದ್ದರು.
05119011a ತೇಷಾಮಧ್ವರಜಂ ಧೂಮಂ ಸ್ವರ್ಗದ್ವಾರಮುಪಸ್ಥಿತಂ।
05119011c ಯಯಾತಿರುಪಜಿಘ್ರನ್ವೈ ನಿಪಪಾತ ಮಹೀಂ ಪ್ರತಿ।।
ಅವರ ಅಧ್ವರದಲ್ಲಿ ಹುಟ್ಟಿದ ಧೂಮವು ಸ್ವರ್ಗದ್ವಾರವನ್ನು ತಲುಪಿತ್ತು. ಅದನ್ನು ಆಘ್ರಾಣಿಸಿ ಯಯಾತಿಯು ಭೂಮಿಯ ಮೇಲೆ ಬಿದ್ದನು.
05119012a ಭೂಮೌ ಸ್ವರ್ಗೇ ಚ ಸಂಬದ್ಧಾಂ ನದೀಂ ಧೂಮಮಯೀಂ ನೃಪಃ।
05119012c ಸ ಗಂಗಾಮಿವ ಗಚ್ಚಂತೀಮಾಲಂಬ್ಯ ಜಗತೀಪತಿಃ।।
05119013a ಶ್ರೀಮತ್ಸ್ವವಭೃಥಾಗ್ರ್ಯೇಷು ಚತುರ್ಷು ಪ್ರತಿಬಂಧುಷು।
05119013c ಮಧ್ಯೇ ನಿಪತಿತೋ ರಾಜಾ ಲೋಕಪಾಲೋಪಮೇಷು ಚ।।
ಭೂಮಿಯನ್ನು ಸ್ವರ್ಗಕ್ಕೆ ಜೋಡಿಸುವ ಗಂಗಾನದಿಯಂತಿದ್ದ ಆ ಧೂಮದಲ್ಲಿಯೇ ತೇಲಿಕೊಂಡು ಜಗತೀಪತಿ ರಾಜನು ಲೋಕಪಾಲಕರಂತಿದ್ದ ಆ ನಾಲ್ವರು ಶ್ರೀಮಂತ, ಅವಭೃಥರಲ್ಲಿ ಅಗ್ರ ಬಂಧುಗಳ ಮಧ್ಯೆ ಬಿದ್ದನು.
05119014a ಚತುರ್ಷು ಹುತಕಲ್ಪೇಷು ರಾಜಸಿಂಹಮಹಾಗ್ನಿಷು।
05119014c ಪಪಾತ ಮಧ್ಯೇ ರಾಜರ್ಷಿರ್ಯಯಾತಿಃ ಪುಣ್ಯಸಂಕ್ಷಯೇ।।
ಆ ಪುಣ್ಯ ಸಂಕ್ಷಯದಲ್ಲಿ ಮಹಾಗ್ನಿಗಳಲ್ಲಿ ಆಹುತಿಗಳಂತಿದ್ದ ರಾಜಸಿಂಹರ ಮಧ್ಯೆ ರಾಜರ್ಷಿ ಯಯಾತಿಯು ಬಿದ್ದನು.
05119015a ತಮಾಹುಃ ಪಾರ್ಥಿವಾಃ ಸರ್ವೇ ಪ್ರತಿಮಾನಮಿವ ಶ್ರಿಯಃ।
05119015c ಕೋ ಭವಾನ್ಕಸ್ಯ ವಾ ಬಂಧುರ್ದೇಶಸ್ಯ ನಗರಸ್ಯ ವಾ।।
ಶ್ರೀಯಂತೆ ಸುಂದರರಾಗಿದ್ದ ಆ ಪಾರ್ಥಿವರೆಲ್ಲರೂ ಅವನನ್ನು ಕೇಳಿದರು: “ನೀನು ಯಾರು? ಯಾರ ಬಂಧು? ಯಾವ ದೇಶ ಅಥವಾ ನಗರದವನು?
05119016a ಯಕ್ಷೋ ವಾಪ್ಯಥ ವಾ ದೇವೋ ಗಂಧರ್ವೋ ರಾಕ್ಷಸೋಽಪಿ ವಾ।
05119016c ನ ಹಿ ಮಾನುಷರೂಪೋಽಸಿ ಕೋ ವಾರ್ಥಃ ಕಾಂಕ್ಷಿತಸ್ತ್ವಯಾ।।
ಯಕ್ಷನೋ ಅಥವಾ ದೇವನೋ, ಗಂಧರ್ವನೋ ಅಥವಾ ರಾಕ್ಷಸನೋ? ಏಕೆಂದರೆ ನೀನು ಮನುಷ್ಯರೂಪದವನಲ್ಲ! ನಿನ್ನ ಉದ್ದೇಶ ಬಯಕೆಗಳು ಏನು?”
05119017 ಯಯಾತಿರುವಾಚ।
05119017a ಯಯಾತಿರಸ್ಮಿ ರಾಜರ್ಷಿಃ ಕ್ಷೀಣಪುಣ್ಯಶ್ಚ್ಯುತೋ ದಿವಃ।
05119017c ಪತೇಯಂ ಸತ್ಸ್ವಿತಿ ಧ್ಯಾಯನ್ಭವತ್ಸು ಪತಿತಸ್ತತಃ।।
ಯಯಾತಿಯು ಹೇಳಿದನು: “ನಾನು ರಾಜರ್ಷಿ ಯಯಾತಿ. ಪುಣ್ಯವು ಕಡಿಮೆಯಾಗಿ ದಿವದಿಂದ ಚ್ಯುತನಾಗಿದ್ದೇನೆ. ಒಳ್ಳೆಯವರ ಮಧ್ಯೆ ಬೀಳಲಿ ಎಂದು ಆಲೋಚಿಸುತ್ತಾ ನಿಮ್ಮ ಮಧ್ಯೆ ಬಿದ್ದಿದ್ದೇನೆ!”
05119018 ರಾಜಾನ ಊಚುಃ।
05119018a ಸತ್ಯಮೇತದ್ಭವತು ತೇ ಕಾಂಕ್ಷಿತಂ ಪುರುಷರ್ಷಭ।
05119018c ಸರ್ವೇಷಾಂ ನಃ ಕ್ರತುಫಲಂ ಧರ್ಮಶ್ಚ ಪ್ರತಿಗೃಹ್ಯಯತಾಂ।।
ರಾಜರು ಹೇಳಿದರು: “ಪುರುಷರ್ಷಭ! ನಿನ್ನನ್ನು ಬಯಕೆಯು ಸತ್ಯವಾಗಲಿ. ನಮ್ಮೆಲ್ಲರ ಕ್ರತು ಮತ್ತು ಧರ್ಮಫಲಗಳನ್ನು ಸ್ವೀಕರಿಸು.”
05119019 ಯಯಾತಿರುವಾಚ।
05119019a ನಾಹಂ ಪ್ರತಿಗ್ರಹಧನೋ ಬ್ರಾಹ್ಮಣಃ ಕ್ಷತ್ರಿಯೋ ಹ್ಯಹಂ।
05119019c ನ ಚ ಮೇ ಪ್ರವಣಾ ಬುದ್ಧಿಃ ಪರಪುಣ್ಯವಿನಾಶನೇ।।
ಯಯಾತಿಯು ಹೇಳಿದನು: “ನಾನು ಧನವನ್ನು ದಾನವಾಗಿ ಸ್ವೀಕರಿಸಬಲ್ಲ ಬ್ರಾಹ್ಮಣನಲ್ಲ. ಏಕೆಂದರೆ ನಾನು ಕ್ಷತ್ರಿಯ. ಇತರರ ಪುಣ್ಯವನ್ನು ನಾಶಗೊಳಿಸುವಲ್ಲಿ ನನ್ನ ಬುದ್ಧಿಯು ಇಷ್ಟಪಡುವುದಿಲ್ಲ.””
05119020 ನಾರದ ಉವಾಚ।
05119020a ಏತಸ್ಮಿನ್ನೇವ ಕಾಲೇ ತು ಮೃಗಚರ್ಯಾಕ್ರಮಾಗತಾಂ।
05119020c ಮಾಧವೀಂ ಪ್ರೇಕ್ಷ್ಯ ರಾಜಾನಸ್ತೇಽಭಿವಾದ್ಯೇದಮಬ್ರುವನ್।।
ನಾರದನು ಹೇಳಿದನು: “ಅದೇ ಸಮಯದಲ್ಲಿ ಜಿಂಕೆಯ ನಡತೆ-ಕ್ರಮಗಳನ್ನು ಅನುಸರಿಸುತ್ತಿರುವ ಮಾಧವಿಯನ್ನು ನೋಡಿ ರಾಜರು ಅವಳನ್ನು ಅಭಿವಂದಿಸಿ ಹೇಳಿದರು:
05119021a ಕಿಮಾಗಮನಕೃತ್ಯಂ ತೇ ಕಿಂ ಕುರ್ವಃ ಶಾಸನಂ ತವ।
05119021c ಆಜ್ಞಾಪ್ಯಾ ಹಿ ವಯಂ ಸರ್ವೇ ತವ ಪುತ್ರಾಸ್ತಪೋಧನೇ।।
“ನೀನು ಇಲ್ಲಿಗೆ ಬರಲು ಕಾರಣವೇನು? ಏನು ಕೆಲಸವಿದೆ? ನಿನ್ನ ಶಾಸನದಂತೆ ಮಾಡುತ್ತೇವೆ. ಆಜ್ಞಾಪಿಸು. ತಪೋಧನೆ! ನಾವೆಲ್ಲರೂ ನಿನ್ನ ಪುತ್ರರು.”
05119022a ತೇಷಾಂ ತದ್ಭಾಷಿತಂ ಶ್ರುತ್ವಾ ಮಾಧವೀ ಪರಯಾ ಮುದಾ।
05119022c ಪಿತರಂ ಸಮುಪಾಗಚ್ಚದ್ಯಯಾತಿಂ ಸಾ ವವಂದ ಚ।।
ಅವರ ಆ ಮಾತನ್ನು ಕೇಳಿ ಪರಮ ಮುದಿತಳಾಗಿ ಮಾಧವಿಯು ತಂದೆ ಯಯಾತಿಯ ಬಳಿ ಸಾರಿ ಅವನಿಗೆ ವಂದಿಸಿದಳು.
05119023a ದೃಷ್ಟ್ವಾ ಮೂರ್ಧ್ನಾ ನತಾನ್ಪುತ್ರಾಂಸ್ತಾಪಸೀ ವಾಕ್ಯಮಬ್ರವೀತ್।
05119023c ದೌಹಿತ್ರಾಸ್ತವ ರಾಜೇಂದ್ರ ಮಮ ಪುತ್ರಾ ನ ತೇ ಪರಾಃ।
05119023e ಇಮೇ ತ್ವಾಂ ತಾರಯಿಷ್ಯಂತಿ ದಿಷ್ಟಮೇತತ್ ಪುರಾತನಂ।।
ತಲೆತಗ್ಗಿಸಿ ನಿಂತಿದ್ದ ಮಕ್ಕಳನ್ನು ನೋಡಿ ಆ ತಾಪಸಿಯು ಹೇಳಿದಳು: “ರಾಜೇಂದ್ರ! ನನ್ನ ಈ ಮಕ್ಕಳು ನಿನ್ನ ಮಗಳ ಮಕ್ಕಳು. ನಿನಗೆ ಪರರಲ್ಲ. ಇವರೇ ನಿನ್ನನ್ನು ಉದ್ಧರಿಸುತ್ತಾರೆ ಎಂಬುದು ಬಹಳ ಹಿಂದೆಯೇ ಕಾಣಲಾಗಿತ್ತು.
05119024a ಅಹಂ ತೇ ದುಹಿತಾ ರಾಜನ್ಮಾಧವೀ ಮೃಗಚಾರಿಣೀ।
05119024c ಮಯಾಪ್ಯುಪಚಿತೋ ಧರ್ಮಸ್ತತೋಽರ್ಧಂ ಪ್ರತಿಗೃಹ್ಯತಾಂ।।
ರಾಜನ್! ನಾನು ನಿನ್ನ ಮಗಳು ಮೃಗಚಾರಿಣೀ ಮಾಧವೀ. ನಾನೂ ಕೂಡ ಧರ್ಮವನ್ನು ಸಂಚಯಿಸಿದ್ದೇನೆ. ಅದರ ಅರ್ಧವನ್ನು ಸ್ವೀಕರಿಸಬೇಕು.
05119025a ಯಸ್ಮಾದ್ರಾಜನ್ನರಾಃ ಸರ್ವೇ ಅಪತ್ಯಫಲಭಾಗಿನಃ।
05119025c ತಸ್ಮಾದಿಚ್ಚಂತಿ ದೌಹಿತ್ರಾನ್ಯಥಾ ತ್ವಂ ವಸುಧಾಧಿಪ।।
ರಾಜನ್! ಹೇಗೆ ನರರು ಎಲ್ಲರೂ ಮಕ್ಕಳ ಫಲಗಳಿಗೆ ಭಾಗಿಗಳಾಗುತ್ತಾರೋ ಹಾಗೆ ವಸುಧಾಧಿಪ! ನಿನ್ನಂತೆ ಮಗಳ ಮಕ್ಕಳನ್ನೂ ಬಯಸುತ್ತಾರೆ.”
05119026a ತತಸ್ತೇ ಪಾರ್ಥಿವಾಃ ಸರ್ವೇ ಶಿರಸಾ ಜನನೀಂ ತದಾ।
05119026c ಅಭಿವಾದ್ಯ ನಮಸ್ಕೃತ್ಯ ಮಾತಾಮಹಮಥಾಬ್ರುವನ್।।
ಆಗ ಆ ಎಲ್ಲ ಪಾರ್ಥಿವರೂ ಶಿರಬಾಗಿ ಜನನಿಗೆ ಅಭಿವಂದಿಸಿದರು. ಮಾತಾಮಹನಿಗೆ ನಮಸ್ಕರಿಸಿ ಹೇಳಿದರು.
05119027a ಉಚ್ಚೈರನುಪಮೈಃ ಸ್ನಿಗ್ಧೈಃ ಸ್ವರೈರಾಪೂರ್ಯ ಮೇದಿನೀಂ।
05119027c ಮಾತಾಮಹಂ ನೃಪತಯಸ್ತಾರಯಂತೋ ದಿವಶ್ಚ್ಯುತಂ।।
ಅವರ ಉಚ್ಚವಾದ, ಅನುಪಮ, ಸ್ನಿಗ್ಧ ಸ್ವರಗಳಿಂದ ಮೇದಿನಿಯನ್ನು ತುಂಬಿಸಿ ಆ ನೃಪತಿಗಳು ದಿವದಿಂದ ಚ್ಯುತನಾಗಿದ್ದ ಮಾತಾಮಹನನ್ನು ಉದ್ಧರಿಸಿದರು.
05119028a ಅಥ ತಸ್ಮಾದುಪಗತೋ ಗಾಲವೋಽಪ್ಯಾಹ ಪಾರ್ಥಿವಂ।
05119028c ತಪಸೋ ಮೇಽಷ್ಟಭಾಗೇನ ಸ್ವರ್ಗಮಾರೋಹತಾಂ ಭವಾನ್।।
ಆಗ ಗಾಲವನೂ ಅಲ್ಲಿಗೆ ಬಂದು ಪಾರ್ಥಿವನಿಗೆ “ನನ್ನ ತಪಸ್ಸಿನ ಎಂಟನೇ ಒಂದು ಭಾಗದಿಂದ ನೀನು ಸ್ವರ್ಗವನ್ನೇರು!” ಎಂದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಲವಚರಿತೇ ಯಯಾತಿಸ್ವರ್ಗಭ್ರಂಶೇ ಏಕೋನವಿಂಶತ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಲವಚರಿತೆಯಲ್ಲಿ ಯಯಾತಿಸ್ವರ್ಗಭ್ರಂಶದಲ್ಲಿ ನೂರಾಹತ್ತೊಂಭತ್ತನೆಯ ಅಧ್ಯಾಯವು.