ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಭಗವದ್ಯಾನ ಪರ್ವ
ಅಧ್ಯಾಯ 118
ಸಾರ
ಯಯಾತಿಯು ಸ್ವಯಂವರಕ್ಕೆಂದು ಮಗಳನ್ನು ತಪೋವನವೊಂದಕ್ಕೆ ಕರೆತರಲು ಮಾಧವಿಯು ವನವನ್ನೇ ವರನನ್ನಾಗಿ ವರಿಸಿ ವನಗಳಲ್ಲಿ ಹರಿಣಗಳೊಡನೆ ಜಿಂಕೆಯಂತೆಯೇ ಸಂಚರಿಸಿಕೊಂಡು, ವಿಪುಲ ಧರ್ಮ ಮತ್ತು ಬ್ರಹ್ಮಚರ್ಯದಿಂದ ಮೃಗಚಾರಿಣಿಯ ಜೀವನವನ್ನು ನಡೆಸಿದುದು (1-11). ಬಹುಸಹಸ್ರವರ್ಷಗಳ ನಂತರ ಸ್ವರ್ಗವನ್ನು ಸೇರಿದ್ದ ಯಯಾತಿಯು ಎಲ್ಲ ನರರನ್ನೂ, ದೇವತೆಗಳನ್ನೂ, ಋಷಿಗಣಗಳನ್ನೂ ಅಪಮಾನಿಸಿದುದರ ಪರಿಣಾಮದಿಂದ ಓಜಸ್ಸಿಲ್ಲದವನಾದುದು (12-22).
05118001 ನಾರದ ಉವಾಚ।
05118001a ಸ ತು ರಾಜಾ ಪುನಸ್ತಸ್ಯಾಃ ಕರ್ತುಕಾಮಃ ಸ್ವಯಂವರಂ।
05118001c ಉಪಗಮ್ಯಾಶ್ರಮಪದಂ ಗಂಗಾಯಮುನಸಂಗಮೇ।।
05118002a ಗೃಹೀತಮಾಲ್ಯದಾಮಾಂ ತಾಂ ರಥಮಾರೋಪ್ಯ ಮಾಧವೀಂ।
05118002c ಪೂರುರ್ಯದುಶ್ಚ ಭಗಿನೀಮಾಶ್ರಮೇ ಪರ್ಯಧಾವತಾಂ।।
ನಾರದನು ಹೇಳಿದನು: “ಅನಂತರ ರಾಜನು ಪುನಃ ಅವಳ ಸ್ವಯಂವರವನ್ನು ಮಾಡಲು ಬಯಸಿ ಮಾಧವಿಯನ್ನು ಮಾಲೆ-ಗೆಜ್ಜೆಗಳಿಂದ ಅಲಂಕರಿಸಿ, ರಥದಲ್ಲಿ ಕುಳ್ಳಿರಿಸಿಕೊಂಡು, ಗಂಗಾ-ಯಮುನಾ ಸಂಗಮದಲ್ಲಿ ಒಂದು ಆಶ್ರಮಪದವನ್ನು ತಲುಪಿದನು. ಪುರು-ಯದುಗಳೀರ್ವರೂ ಆಶ್ರಮಕ್ಕೆ ತಂಗಿಯನ್ನು ಹಿಂಬಾಲಿಸಿದರು.
05118003a ನಾಗಯಕ್ಷಮನುಷ್ಯಾಣಾಂ ಪತತ್ರಿಮೃಗಪಕ್ಷಿಣಾಂ।
05118003c ಶೈಲದ್ರುಮವನೌಕಾನಾಮಾಸೀತ್ತತ್ರ ಸಮಾಗಮಃ।।
ಅಲ್ಲಿ ನಾಗ, ಯಕ್ಷ, ಮನುಷ್ಯ, ಪಕ್ಷಿ, ಜಿಂಕೆಗಳು, ಶೈಲ, ದ್ರುಮ, ವನೌಕಸರ ಸಮಾಗಮವಾಗಿತ್ತು.
05118004a ನಾನಾಪುರುಷದೇಶಾನಾಮೀಶ್ವರೈಶ್ಚ ಸಮಾಕುಲಂ।
05118004c ಋಷಿಭಿರ್ಬ್ರಹ್ಮಕಲ್ಪೈಶ್ಚ ಸಮಂತಾದಾವೃತಂ ವನಂ।।
ಆ ವನವು ನಾನಾ ಪುರುಷರ ಮತ್ತು ದೇಶಗಳ ರಾಜರುಗಳಿಂದ ತುಂಬಿಹೋಗಿತ್ತು. ಬ್ರಹ್ಮಕಲ್ಪ ಋಷಿಗಳೂ ಅಲ್ಲಿ ಸೇರಿದ್ದರು.
05118005a ನಿರ್ದಿಶ್ಯಮಾನೇಷು ತು ಸಾ ವರೇಷು ವರವರ್ಣಿನೀ।
05118005c ವರಾನುತ್ಕ್ರಮ್ಯ ಸರ್ವಾಂಸ್ತಾನ್ವನಂ ವೃತವತೀ ವರಂ।।
ಆ ಎಲ್ಲ ವರರನ್ನೂ ಪರಿಚಯಿಸಿದ ನಂತರ ಆ ವರವರ್ಣಿನಿಯು ವರರೆಲ್ಲರನ್ನೂ ದಾಟಿ ವನವನ್ನು ವರನನ್ನಾಗಿ ವರಿಸಿದಳು.
05118006a ಅವತೀರ್ಯ ರಥಾತ್ಕನ್ಯಾ ನಮಸ್ಕೃತ್ವಾ ಚ ಬಂಧುಷು।
05118006c ಉಪಗಮ್ಯ ವನಂ ಪುಣ್ಯಂ ತಪಸ್ತೇಪೇ ಯಯಾತಿಜಾ।।
ಯಯಾತಿಯ ಮಗಳು ಕನ್ಯೆಯು ರಥದಿಂದಿಳಿದು, ಬಂಧುಗಳಿಗೆ ನಮಸ್ಕರಿಸಿ ಪುಣ್ಯ ವನಕ್ಕೆ ತೆರಳಿ ತಪಸ್ಸನ್ನು ತಪಿಸಿದಳು.
05118007a ಉಪವಾಸೈಶ್ಚ ವಿವಿಧೈರ್ದೀಕ್ಷಾಭಿರ್ನಿಯಮೈಸ್ತಥಾ।
05118007c ಆತ್ಮನೋ ಲಘುತಾಂ ಕೃತ್ವಾ ಬಭೂವ ಮೃಗಚಾರಿಣೀ।।
ಉಪವಾಸ, ವಿವಿಧ ದೀಕ್ಷಾನಿಯಮಗಳಿಂದ ತನ್ನನ್ನು ಹಗುರವಾಗಿಸಿಕೊಂಡು ಅವಳು ಮೃಗಚಾರಿಣಿಯಾದಳು.
05118008a ವೈಡೂರ್ಯಾಂಕುರಕಲ್ಪಾನಿ ಮೃದೂನಿ ಹರಿತಾನಿ ಚ।
05118008c ಚರಂತೀ ಶಷ್ಪಮುಖ್ಯಾನಿ ತಿಕ್ತಾನಿ ಮಧುರಾಣಿ ಚ।।
05118009a ಸ್ರವಂತೀನಾಂ ಚ ಪುಣ್ಯಾನಾಂ ಸುರಸಾನಿ ಶುಚೀನಿ ಚ।
05118009c ಪಿಬಂತೀ ವಾರಿಮುಖ್ಯಾನಿ ಶೀತಾನಿ ವಿಮಲಾನಿ ಚ।।
05118010a ವನೇಷು ಮೃಗರಾಜೇಷು ಸಿಂಹವಿಪ್ರೋಷಿತೇಷು ಚ।
05118010c ದಾವಾಗ್ನಿವಿಪ್ರಮುಕ್ತೇಷು ಶೂನ್ಯೇಷು ಗಹನೇಷು ಚ।।
05118011a ಚರಂತೀ ಹರಿಣೈಃ ಸಾರ್ಧಂ ಮೃಗೀವ ವನಚಾರಿಣೀ।
05118011c ಚಚಾರ ವಿಪುಲಂ ಧರ್ಮಂ ಬ್ರಹ್ಮಚರ್ಯೇಣ ಸಂವೃತಾ।।
ವೈಡೂರ್ಯದಂತಿರುವ ಮೃದುವಾದ ಹಸಿರು, ಚಪ್ಪೆ-ಸಿಹಿಯಾಗಿರುವ ಚಿಗುರುಗಳನ್ನು ಮೇಯುತ್ತಾ; ಹರಿಯುತ್ತಿರುವ ಪುಣ್ಯ, ರುಚಿಕರ, ಶುದ್ಧ ಶೀತ ವಿಮಲ ನದಿಗಳ ನೀರನ್ನು ಕುಡಿಯುತ್ತಾ; ಜಿಂಕೆಯೇ ರಾಜನಾಗಿರುವ, ಸಿಂಹವು ಇಲ್ಲದಿರುವ, ದಾವಾಗ್ನಿಗಳಿಂದ ಮುಕ್ತವಾದ, ಶೂನ್ಯ ಗಹನ ವನಗಳಲ್ಲಿ ಹರಿಣಗಳೊಡನೆ ಜಿಂಕೆಯಂತೆಯೇ ವನದಲ್ಲಿ ಸಂಚರಿಸಿಕೊಂಡು, ವಿಪುಲ ಧರ್ಮ ಮತ್ತು ಬ್ರಹ್ಮಚರ್ಯದಿಂದ ಸಂವೃತಳಾಗಿ ನಡೆದುಕೊಂಡಳು.
05118012a ಯಯಾತಿರಪಿ ಪೂರ್ವೇಷಾಂ ರಾಜ್ಞಾಂ ವೃತ್ತಮನುಷ್ಠಿತಃ।
05118012c ಬಹುವರ್ಷಸಹಸ್ರಾಯುರಯುಜತ್ಕಾಲಧರ್ಮಣಾ।।
ಯಯಾತಿಯೂ ಕೂಡ ಹಿಂದಿನ ರಾಜರಂತೆ ನಡೆದುಕೊಂಡು ಬಹಳ ಸಾವಿರ ವರ್ಷಗಳ ನಂತರ ಕಾಲಧರ್ಮಕ್ಕೊಳಗಾದನು.
05118013a ಪೂರುರ್ಯದುಶ್ಚ ದ್ವೌ ವಂಶೌ ವರ್ಧಮಾನೌ ನರೋತ್ತಮೌ।
05118013c ತಾಭ್ಯಾಂ ಪ್ರತಿಷ್ಠಿತೋ ಲೋಕೇ ಪರಲೋಕೇ ಚ ನಾಹುಷಃ।।
ನರೋತ್ತಮರಾದ ಪುರು ಮತ್ತು ಯದು ಇಬ್ಬರೂ ಎರಡು ವಂಶಗಳನ್ನು ಬೆಳೆಯಿಸಿ ಈ ಲೋಕ ಮತ್ತು ಪರಲೋಕ ಎರಡರಲ್ಲಿಯೂ ನಾಹುಷನ ಹೆಸರನ್ನು ಪ್ರತಿಷ್ಠಾಪಿಸಿದರು.
05118014a ಮಹೀಯತೇ ನರಪತಿರ್ಯಯಾತಿಃ ಸ್ವರ್ಗಮಾಸ್ಥಿತಃ।
05118014c ಮಹರ್ಷಿಕಲ್ಪೋ ನೃಪತಿಃ ಸ್ವರ್ಗಾಗ್ರ್ಯಫಲಭುಗ್ವಿಭುಃ।।
ನರಪತಿ ಯಯಾತಿ ನೃಪತಿ ವಿಭುವು ಸ್ವರ್ಗವನ್ನು ಸೇರಿ ಮಹರ್ಷಿಗಳಂತೆ ಸ್ವರ್ಗದ ಅಗ್ರ ಫಲಗಳನ್ನು ಭೋಗಿಸಿ ಮೆರೆದನು.
05118015a ಬಹುವರ್ಷಸಹಸ್ರಾಖ್ಯೇ ಕಾಲೇ ಬಹುಗುಣೇ ಗತೇ।
05118015c ರಾಜರ್ಷಿಷು ನಿಷಣ್ಣೇಷು ಮಹೀಯಃಸು ಮಹರ್ಷಿಷು।।
05118016a ಅವಮೇನೇ ನರಾನ್ಸರ್ವಾನ್ದೇವಾನೃಷಿಗಣಾಂಸ್ತಥಾ।
05118016c ಯಯಾತಿರ್ಮೂಢವಿಜ್ಞಾನೋ ವಿಸ್ಮಯಾವಿಷ್ಟಚೇತನಃ।।
ಬಹುವರ್ಷಸಹಸ್ರಗಳು ಬಹುಗುಣಗಳಲ್ಲಿ ಕಳೆಯಲು, ರಾಜರ್ಷಿಗಳು ಮತ್ತು ಮಹರ್ಷಿಗಳೊಂದಿಗೆ ಕುಳಿತುಕೊಂಡಿರುವಾಗ, ಯಯಾತಿಯು ಬುದ್ಧಿಮೂಢನಾಗಿ, ವಿಸ್ಮಯದಿಂದ ಆವೇಶಗೊಂಡು, ಎಲ್ಲ ನರರನ್ನೂ, ದೇವತೆಗಳನ್ನೂ, ಋಷಿಗಣಗಳನ್ನೂ ಅಪಮಾನಿಸಿದನು.
05118017a ತತಸ್ತಂ ಬುಬುಧೇ ದೇವಃ ಶಕ್ರೋ ಬಲನಿಷೂದನಃ।
05118017c ತೇ ಚ ರಾಜರ್ಷಯಃ ಸರ್ವೇ ಧಿಗ್ಧಿಗಿತ್ಯೇವಮಬ್ರುವನ್।।
ಅವನನ್ನು ಬಲನಿಷೂದನ ದೇವ ಶಕ್ರನು ಅರ್ಥಮಾಡಿಕೊಂಡನು. ಅವನೂ ಮತ್ತು ರಾಜರ್ಷಿಗಳೆಲ್ಲರೂ “ಧಿಕ್ಕಾರ! ಧಿಕ್ಕಾರ!” ಎಂದು ಹೇಳಿದರು.
05118018a ವಿಚಾರಶ್ಚ ಸಮುತ್ಪನ್ನೋ ನಿರೀಕ್ಷ್ಯ ನಹುಷಾತ್ಮಜಂ।
05118018c ಕೋ ನ್ವಯಂ ಕಸ್ಯ ವಾ ರಾಜ್ಞಾಃ ಕಥಂ ವಾ ಸ್ವರ್ಗಮಾಗತಃ।।
ನಹುಷಾತ್ಮಜನನ್ನು ನೋಡಿ ಅವರಲ್ಲಿ ಸಂಶಯವುಂಟಾಯಿತು: “ಇವನು ಯಾರು? ಯಾರ ರಾಜ? ಹೇಗೆ ಸ್ವರ್ಗಕ್ಕೆ ಆಗಮಿಸಿದನು?
05118019a ಕರ್ಮಣಾ ಕೇನ ಸಿದ್ಧೋಽಯಂ ಕ್ವ ವಾನೇನ ತಪಶ್ಚಿತಂ।
05118019c ಕಥಂ ವಾ ಜ್ಞಾಯತೇ ಸ್ವರ್ಗೇ ಕೇನ ವಾ ಜ್ಞಾಯತೇಽಪ್ಯುತ।।
ಯಾವ ಕರ್ಮಗಳಿಂದ ಇವನು ಸಿದ್ಧನಾದನು? ಎಲ್ಲಿಂದ ತಪೋಬಲವನ್ನು ಪಡೆದನು? ಸ್ವರ್ಗದಲ್ಲಿ ಇವನು ಹೇಗೆ ಪರಿಚಿತನಾಗಿದ್ದಾನೆ? ಯಾರು ಇವನನ್ನು ಬಲ್ಲರು?”
05118020a ಏವಂ ವಿಚಾರಯಂತಸ್ತೇ ರಾಜಾನಃ ಸ್ವರ್ಗವಾಸಿನಃ।
05118020c ದೃಷ್ಟ್ವಾ ಪಪ್ರಚ್ಚುರನ್ಯೋನ್ಯಂ ಯಯಾತಿಂ ನೃಪತಿಂ ಪ್ರತಿ।।
ಹೀಗೆ ಸ್ವರ್ಗವಾಸಿ ರಾಜರು ನೃಪತಿ ಯಯಾತಿಯ ಕಡೆ ನೋಡಿ ಅನ್ಯೋನ್ಯರನ್ನು ಕೇಳಿ ವಿಚಾರಿಸಿದರು.
05118021a ವಿಮಾನಪಾಲಾಃ ಶತಶಃ ಸ್ವರ್ಗದ್ವಾರಾಭಿರಕ್ಷಿಣಃ।
05118021c ಪೃಷ್ಟಾ ಆಸನಪಾಲಾಶ್ಚ ನ ಜಾನೀಮೇತ್ಯಥಾಬ್ರುವನ್।।
ನೂರಾರು ವಿಮಾನಪಾಲಕರು, ಸ್ವರ್ಗದ್ವಾರ ರಕ್ಷಕರು, ಮತ್ತು ಆಸನಪಾಲಕರು “ಇವನು ನಮಗೆ ಗೊತ್ತಿಲ್ಲ!” ಎಂದು ಹೇಳಿದರು.
05118022a ಸರ್ವೇ ತೇ ಹ್ಯಾವೃತಜ್ಞಾನಾ ನಾಭ್ಯಜಾನಂತ ತಂ ನೃಪಂ।
05118022c ಸ ಮುಹೂರ್ತಾದಥ ನೃಪೋ ಹತೌಜಾ ಅಭವತ್ತದಾ।।
ಅವರೆಲ್ಲರ ಜ್ಞಾನವು ಮಸುಕಾಗಿತ್ತು ಮತ್ತು ಯಾರೂ ಆ ನೃಪನನ್ನು ಗುರುತಿಸಲಿಲ್ಲ. ಮುಹೂರ್ತ ಮಾತ್ರದಲ್ಲಿ ಆ ನೃಪನು ಓಜಸ್ಸಿಲ್ಲದವನಾಗಿಬಿಟ್ಟಿದ್ದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಲವಚರಿತೇ ಯಯಾತಿಮೋಹೇ ಅಷ್ಟಾದಶಾಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಲವಚರಿತೆಯಲ್ಲಿ ಯಯಾತಿಮೋಹದಲ್ಲಿ ನೂರಾಹದಿನೆಂಟನೆಯ ಅಧ್ಯಾಯವು.