117 ಗಾಲವಚರಿತಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಭಗವದ್ಯಾನ ಪರ್ವ

ಅಧ್ಯಾಯ 117

ಸಾರ ಗಾಲವನು ಗರುಡನಿಗೆ ಇನ್ನೂ ೨೦೦ ಕುದುರೆಗಳ ಕೊರತೆಯಿದೆ ಎಂದು ಹೇಳಲು ಗರುಡನು ಅಂಥಹ ಕುದುರೆಗಳಿರುವುದೇ ೬೦೦ ಎಂದು ಹೇಳಿ ಅವುಗಳೊಂದಿಗೆ ಮಾಧವಿಯನ್ನು ವಿಶ್ವಾಮಿತ್ರನಿಗಿತ್ತು ಗುರುದಕ್ಷಿಣೆಯನ್ನು ಪೂರ್ಣಗೊಳಿಸೆಂದು ಸೂಚಿಸುವುದು (1-9). ವಿಶ್ವಾಮಿತ್ರನು ಕುದುರೆಗಳನ್ನು ಮತ್ತು ಮಾಧವಿಯನ್ನು ಸ್ವೀಕರಿಸಿ ಗಾಲವನನ್ನು ಋಣಮುಕ್ತನನ್ನಾಗಿ ಮಾಡಿ, ಮಾಧವಿಯಲ್ಲಿ ಅಷ್ಟಕನೆನ್ನುವ ಪುತ್ರನನ್ನು ಪಡೆದುದು (10-17). ಗಾಲವನು ಮಾಧವಿಯನ್ನು ಅವಳ ತಂದೆಗೆ ಒಪ್ಪಿಸಿ ವನಕ್ಕೆ ತೆರಳಿದುದು (18-23).

05117001 ನಾರದ ಉವಾಚ।
05117001a ಗಾಲವಂ ವೈನತೇಯೋಽಥ ಪ್ರಹಸನ್ನಿದಮಬ್ರವೀತ್।
05117001c ದಿಷ್ಟ್ಯಾ ಕೃತಾರ್ಥಂ ಪಶ್ಯಾಮಿ ಭವಂತಮಿಹ ವೈ ದ್ವಿಜ।।

ನಾರದನು ಹೇಳಿದನು: “ಗಾಲವನಿಗೆ ವೈನತೇಯನು ಮುಗುಳ್ನಕ್ಕು ಹೇಳಿದನು: “ಒಳ್ಳೆಯದಾಯಿತು ದ್ವಿಜ! ನೀನು ಕೃತಾರ್ಥನಾದುದನ್ನು ಕಾಣುತ್ತಿದ್ದೇನೆ.”

05117002a ಗಾಲವಸ್ತು ವಚಃ ಶ್ರುತ್ವಾ ವೈನತೇಯೇನ ಭಾಷಿತಂ।
05117002c ಚತುರ್ಭಾಗಾವಶಿಷ್ಟಂ ತದಾಚಖ್ಯೌ ಕಾರ್ಯಮಸ್ಯ ಹಿ।।

ವೈನತೇಯನು ಹೇಳಿದುದನ್ನು ಕೇಳಿ ಗಾಲವನು ಕಾರ್ಯದ ನಾಲ್ಕನೆಯ ಒಂದು ಭಾಗವು ಇನ್ನೂ ಮಾಡುವುದಿದೆಯೆಂದು ಹೇಳಿದನು.

05117003a ಸುಪರ್ಣಸ್ತ್ವಬ್ರವೀದೇನಂ ಗಾಲವಂ ಪತತಾಂ ವರಃ।
05117003c ಪ್ರಯತ್ನಸ್ತೇ ನ ಕರ್ತವ್ಯೋ ನೈಷ ಸಂಪತ್ಸ್ಯತೇ ತವ।।

ಆಗ ಪಕ್ಷಿಗಳಲ್ಲಿ ಶ್ರೇಷ್ಠ ಸುಪರ್ಣನು ಗಾಲವನಿಗೆ ಹೇಳಿದನು: “ಅದಕ್ಕೆ ಪ್ರಯತ್ನಿಸಬೇಡ! ಅದು ನಿನ್ನಿಂದ ಸಂಪೂರ್ಣವಾಗುವುದಿಲ್ಲ.

05117004a ಪುರಾ ಹಿ ಕನ್ಯಕುಬ್ಜೇ ವೈ ಗಾಧೇಃ ಸತ್ಯವತೀಂ ಸುತಾಂ।
05117004c ಭಾರ್ಯಾರ್ಥೇಽವರಯತ್ಕನ್ಯಾಮೃಚೀಕಸ್ತೇನ ಭಾಷಿತಃ।।
05117005a ಏಕತಃಶ್ಯಾಮಕರ್ಣಾನಾಂ ಹಯಾನಾಂ ಚಂದ್ರವರ್ಚಸಾಂ।
05117005c ಭಗವನ್ದೀಯತಾಂ ಮಹ್ಯಂ ಸಹಸ್ರಮಿತಿ ಗಾಲವ।।

ಏಕೆಂದರೆ ಗಾಲವ! ಹಿಂದೆ ಕನ್ಯಕುಬ್ಜದಲ್ಲಿ ಗಾಧಿಯು ಮಗಳು ಸತ್ಯವತಿಯನ್ನು ಪತ್ನಿಯನ್ನಾಗಿ ಋಚೀಕನು ವರಿಸುವಾಗ “ಒಂದೇ ಕಿವಿಯು ಕಪ್ಪಾಗಿರುವ ಚಂದ್ರವರ್ಚಸ ಒಂದು ಸಾವಿರ ಕುದುರೆಗಳನ್ನು ನನಗೆ ಕೊಡು” ಎಂದು ಹೇಳಿದ್ದನು.

05117006a ಋಚೀಕಸ್ತು ತಥೇತ್ಯುಕ್ತ್ವಾ ವರುಣಸ್ಯಾಲಯಂ ಗತಃ।
05117006c ಅಶ್ವತೀರ್ಥೇ ಹಯಾಽಲ್ಲಬ್ಧ್ವಾ ದತ್ತವಾನ್ಪಾರ್ಥಿವಾಯ ವೈ।।

ಹಾಗೆಯೇ ಆಗಲೆಂದು ಋಚೀಕನು ವರುಣಾಲಯಕ್ಕೆ ಹೋದನು. ಅಶ್ವತೀರ್ಥದಲ್ಲಿ ಕುದುರೆಗಳನ್ನು ಪಡೆದು ಪಾರ್ಥಿವನಿಗೆ ಕೊಟ್ಟಿದ್ದನು.

05117007a ಇಷ್ಟ್ವಾ ತೇ ಪುಂಡರೀಕೇಣ ದತ್ತಾ ರಾಜ್ಞಾ ದ್ವಿಜಾತಿಷು।
05117007c ತೇಭ್ಯೋ ದ್ವೇ ದ್ವೇ ಶತೇ ಕ್ರೀತ್ವಾ ಪ್ರಾಪ್ತಾಸ್ತೇ ಪಾರ್ಥಿವೈಸ್ತದಾ।।

ರಾಜನು ಪುಂಡರೀಕ ಇಷ್ಟಿಯನ್ನು ಮಾಡುವಾಗ ದ್ವಿಜರಲ್ಲಿ ಆ ಕುದುರೆಗಳನ್ನು ಬ್ರಾಹ್ಮಣರಿಗೆ ದಾನವನ್ನಾಗಿತ್ತಿದ್ದನು. ಅವರಿಂದ ನೀನು ಹೋಗಿದ್ದ ರಾಜರು ಎರಡೆರಡು ನೂರನ್ನು ಖರೀದಿಸಿ ಪಡೆದಿದ್ದರು.

05117008a ಅಪರಾಣ್ಯಪಿ ಚತ್ವಾರಿ ಶತಾನಿ ದ್ವಿಜಸತ್ತಮ।
05117008c ನೀಯಮಾನಾನಿ ಸಂತಾರೇ ಹೃತಾನ್ಯಾಸನ್ ವಿತಸ್ತಯಾ।
05117008e ಏವಂ ನ ಶಕ್ಯಮಪ್ರಾಪ್ಯಂ ಪ್ರಾಪ್ತುಂ ಗಾಲವ ಕರ್ಹಿ ಚಿತ್।।

ದ್ವಿಜಸತ್ತಮ! ಉಳಿದ ನಾಲ್ನೂರನ್ನು ತರುವಾಗ ಸೇತುವೆಯಿಂದ ವಿತಸ್ತನು ಅಪಹರಿಸಿದ್ದನು. ಹೀಗೆ ಗಾಲವ! ಅಪ್ರಾಪ್ಯವಾದುದನ್ನು ಪಡೆಯಲು ಎಂದೂ ಸಾಧ್ಯವಿಲ್ಲ.

05117009a ಇಮಾಮಶ್ವಶತಾಭ್ಯಾಂ ವೈ ದ್ವಾಭ್ಯಾಂ ತಸ್ಮೈ ನಿವೇದಯ।
05117009c ವಿಶ್ವಾಮಿತ್ರಾಯ ಧರ್ಮಾತ್ಮನ್ ಷಡ್ಭಿರಶ್ವಶತೈಃ ಸಹ।
05117009e ತತೋಽಸಿ ಗತಸಮ್ಮೋಹಃ ಕೃತಕೃತ್ಯೋ ದ್ವಿಜರ್ಷಭ।।

ಧರ್ಮಾತ್ಮನ್! ನಿನ್ನಲ್ಲಿರುವ ಆರುನೂರು ಕುದುರೆಗಳೊಂದಿಗೆ, ಉಳಿದ ಇನ್ನೂರು ಕುದುರೆಗಳಿಗೆ ಬದಲಾಗಿ ಈ ಕನ್ಯೆಯನ್ನು ನೀನು ವಿಶ್ವಾಮಿತ್ರನಿಗಿತ್ತು ಕೃತಕೃತ್ಯನಾಗು. ದ್ವಿಜರ್ಷಭ! ಆಗ ನೀನು ಚಿಂತೆ ಕಳೆದುಕೊಂಡವನಾಗುತ್ತೀಯೆ.”

05117010a ಗಾಲವಸ್ತಂ ತಥೇತ್ಯುಕ್ತ್ವಾ ಸುಪರ್ಣಸಹಿತಸ್ತತಃ।
05117010c ಆದಾಯಾಶ್ವಾಂಶ್ಚ ಕನ್ಯಾಂ ಚ ವಿಶ್ವಾಮಿತ್ರಮುಪಾಗಮತ್।।

ಹಾಗೆಯೇ ಆಗಲೆಂದು ಹೇಳಿ ಗಾಲವನು ಸುಪರ್ಣನ ಸಹಿತ ಆ ಕನ್ಯೆಯನ್ನೂ ಕರೆದುಕೊಂಡು ವಿಶ್ವಾಮಿತ್ರನಲ್ಲಿಗೆ ಹೋದನು.

05117011 ಗಾಲವ ಉವಾಚ।
05117011a ಅಶ್ವಾನಾಂ ಕಾಂಕ್ಷಿತಾರ್ಥಾನಾಂ ಷಡಿಮಾನಿ ಶತಾನಿ ವೈ।
05117011c ಶತದ್ವಯೇನ ಕನ್ಯೇಯಂ ಭವತಾ ಪ್ರತಿಗೃಹ್ಯತಾಂ।।

ಗಾಲವನು ಹೇಳಿದನು: “ನೀನು ಕೇಳಿದಂತಹ ಆರುನೂರು ಕುದುರೆಗಳು ಮಾತ್ರ ಇವೆ. ಉಳಿದ ಇನ್ನೂರಕ್ಕೆ ಬದಲಾಗಿ ಈ ಕನ್ಯೆಯನ್ನು ಸ್ವೀಕರಿಸಬೇಕು.

05117012a ಅಸ್ಯಾಂ ರಾಜರ್ಷಿಭಿಃ ಪುತ್ರಾ ಜಾತಾ ವೈ ಧಾರ್ಮಿಕಾಸ್ತ್ರಯಃ।
05117012c ಚತುರ್ಥಂ ಜನಯತ್ವೇಕಂ ಭವಾನಪಿ ನರೋತ್ತಮ।।

ಇವಳಿಂದ ಮೂವರು ಧಾರ್ಮಿಕ ರಾಜರ್ಷಿಗಳು ಪುತ್ರರನ್ನು ಪಡೆದಿದ್ದಾರೆ. ನರೋತ್ತಮ! ನಿನ್ನಿಂದ ನಾಲ್ಕನೆಯವನು ಇವಳಲ್ಲಿ ಹುಟ್ಟಲಿ.

05117013a ಪೂರ್ಣಾನ್ಯೇವಂ ಶತಾನ್ಯಷ್ಟೌ ತುರಗಾಣಾಂ ಭವಂತು ತೇ।
05117013c ಭವತೋ ಹ್ಯನೃಣೋ ಭೂತ್ವಾ ತಪಃ ಕುರ್ಯಾಂ ಯಥಾಸುಖಂ।।

ಹೀಗೆ ಎಂಟು ನೂರು ಕುದುರೆಗಳು ಸಂಪೂರ್ಣವಾಗಿ ನಿನಗೆ ಸಲ್ಲಿಸಿದಂತಾದವು. ನಿನ್ನಿಂದ ಋಣಮುಕ್ತನಾಗಿ ಯಥಾಸುಖವಾಗಿ ತಪಸ್ಸನ್ನು ಮಾಡುತ್ತೇನೆ.””

05117014 ನಾರದ ಉವಾಚ।
05117014a ವಿಶ್ವಾಮಿತ್ರಸ್ತು ತಂ ದೃಷ್ಟ್ವಾ ಗಾಲವಂ ಸಹ ಪಕ್ಷಿಣಾ।
05117014c ಕನ್ಯಾಂ ಚ ತಾಂ ವರಾರೋಹಾಮಿದಮಿತ್ಯಬ್ರವೀದ್ವಚಃ।।

ನಾರದನು ಹೇಳಿದನು: “ವಿಶ್ವಾಮಿತ್ರನು ಪಕ್ಷಿಯೊಂದಿಗಿರುವ ಗಾಲವನನ್ನು ಮತ್ತು ಆ ವರಾರೋಹೆ ಕನ್ಯೆಯನ್ನು ನೋಡಿ ಈ ಮಾತನ್ನಾಡಿದನು.

05117015a ಕಿಮಿಯಂ ಪೂರ್ವಮೇವೇಹ ನ ದತ್ತಾ ಮಮ ಗಾಲವ।
05117015c ಪುತ್ರಾ ಮಮೈವ ಚತ್ವಾರೋ ಭವೇಯುಃ ಕುಲಭಾವನಾಃ।।

“ಗಾಲವ! ಈ ಮೊದಲೇ ಇವಳನ್ನು ನನಗೆ ಏಕೆ ಕೊಡಲಿಲ್ಲ? ನನಗೇ ನಾಲ್ಕು ಕುಲಭಾವನ ಮಕ್ಕಳು ಆಗುತ್ತಿದ್ದರಲ್ಲ!

05117016a ಪ್ರತಿಗೃಹ್ಣಾಮಿ ತೇ ಕನ್ಯಾಮೇಕಪುತ್ರಫಲಾಯ ವೈ।
05117016c ಅಶ್ವಾಶ್ಚಾಶ್ರಮಮಾಸಾದ್ಯ ತಿಷ್ಠಂತು ಮಮ ಸರ್ವಶಃ।।

ಒಬ್ಬನೇ ಮಗನಿಗಾದರೂ ನಿನ್ನ ಕನ್ಯೆಯನ್ನು ಸ್ವೀಕರಿಸುತ್ತೇನೆ. ಕುದುರೆಗಳು ಎಲ್ಲವೂ ನನ್ನ ಆಶ್ರಮದಲ್ಲಿಯೇ ನೆಲೆಸಲಿ.”

05117017a ಸ ತಯಾ ರಮಮಾಣೋಽಥ ವಿಶ್ವಾಮಿತ್ರೋ ಮಹಾದ್ಯುತಿಃ।
05117017c ಆತ್ಮಜಂ ಜನಯಾಮಾಸ ಮಾಧವೀಪುತ್ರಮಷ್ಟಕಂ।।

ಆಗ ಮಹಾದ್ಯುತಿ ವಿಶ್ವಾಮಿತ್ರನು ಅವಳೊಂದಿಗೆ ರಮಿಸಿದನು. ಮಾಧವಿಯಲ್ಲಿ ಮಗ ಅಷ್ಟಕನನ್ನು ಹುಟ್ಟಿಸಿದನು.

05117018a ಜಾತಮಾತ್ರಂ ಸುತಂ ತಂ ಚ ವಿಶ್ವಾಮಿತ್ರೋ ಮಹಾದ್ಯುತಿಃ।
05117018c ಸಂಯೋಜ್ಯಾರ್ಥೈಸ್ತಥಾ ಧರ್ಮೈರಶ್ವೈಸ್ತೈಃ ಸಮಯೋಜಯತ್।।

ಹುಟ್ಟಿದ ಕೂಡಲೇ ಮಹಾದ್ಯುತಿ ವಿಶ್ವಾಮಿತ್ರನು ಮಗನಿಗೆ ಅರ್ಥ-ಧರ್ಮಗಳಿಂದ ಸಂಯೋಜಿಸಿದನು ಮತ್ತು ಆ ಅಶ್ವಗಳನ್ನೂ ಕೊಟ್ಟನು.

05117019a ಅಥಾಷ್ಟಕಃ ಪುರಂ ಪ್ರಾಯಾತ್ತದಾ ಸೋಮಪುರಪ್ರಭಂ।
05117019c ನಿರ್ಯಾತ್ಯ ಕನ್ಯಾಂ ಶಿಷ್ಯಾಯ ಕೌಶಿಕೋಽಪಿ ವನಂ ಯಯೌ।।

ಅನಂತರ ಅಷ್ಟಕನು ಸೋಮಪುರಪ್ರಭೆಯುಳ್ಳ ಪುರವನ್ನು ಪಡೆದನು. ಕೌಶಿಕನಾದರೋ ಕನ್ಯೆಯನ್ನು ಶಿಷ್ಯನಿಗೆ ಹಿಂದಿರುಗಿಸಿ, ವನಕ್ಕೆ ತೆರಳಿದನು.

05117020a ಗಾಲವೋಽಪಿ ಸುಪರ್ಣೇನ ಸಹ ನಿರ್ಯಾತ್ಯ ದಕ್ಷಿಣಾಂ।
05117020c ಮನಸಾಭಿಪ್ರತೀತೇನ ಕನ್ಯಾಮಿದಮುವಾಚ ಹ।।

ಗಾಲವನೂ ಕೂಡ ಸುಪರ್ಣನ ಜೊತೆಗೆ ಗುರು ದಕ್ಷಿಣೆಗಳನ್ನು ಪೂರೈಸಿ ಮನಸ್ಸಿನಲ್ಲಿ ತುಂಬಾ ಸಂತೋಷಗೊಂಡು ಕನ್ಯೆಗೆ ಹೀಗೆ ಹೇಳಿದನು:

05117021a ಜಾತೋ ದಾನಪತಿಃ ಪುತ್ರಸ್ತ್ವಯಾ ಶೂರಸ್ತಥಾಪರಃ।
05117021c ಸತ್ಯಧರ್ಮರತಶ್ಚಾನ್ಯೋ ಯಜ್ವಾ ಚಾಪಿ ತಥಾಪರಃ।।

“ನೀನು ದಾನಪತಿಯಾಗಿರುವ ಮಗನಿಗೆ ಜನ್ಮವಿತ್ತಿದ್ದೀಯೆ. ಇನ್ನೊಬ್ಬನು ಶೂರ. ಅನ್ಯನು ಸತ್ಯಧರ್ಮ ರತ. ಇನ್ನೊಬ್ಬನು ಯಜ್ಞಗಳಲ್ಲಿ ಶ್ರೇಷ್ಠನು.

05117022a ತದಾಗಚ್ಚ ವರಾರೋಹೇ ತಾರಿತಸ್ತೇ ಪಿತಾ ಸುತೈಃ।
05117022c ಚತ್ವಾರಶ್ಚೈವ ರಾಜಾನಸ್ತಥಾಹಂ ಚ ಸುಮಧ್ಯಮೇ।।

ವರಾರೋಹೇ! ಈ ಮಕ್ಕಳ ಮೂಲಕ ನೀನು ನಿನ್ನ ತಂದೆಯಲ್ಲದೇ ಆ ನಾಲ್ವರು ರಾಜರನ್ನೂ, ಮತ್ತು ನನ್ನನ್ನೂ ಉದ್ಧರಿಸಿದ್ದೀಯೆ. ಸುಮಧ್ಯಮೇ! ಹೋಗು!”

05117023a ಗಾಲವಸ್ತ್ವಭ್ಯನುಜ್ಞಾಯ ಸುಪರ್ಣಂ ಪನ್ನಗಾಶನಂ।
05117023c ಪಿತುರ್ನಿರ್ಯಾತ್ಯ ತಾಂ ಕನ್ಯಾಂ ಪ್ರಯಯೌ ವನಮೇವ ಹ।।

ಗಾಲವನು ಪನ್ನಗಾಶನ ಸುಪರ್ಣನಿಗೆ ಬೀಳ್ಕೊಟ್ಟು, ಆ ಕನ್ಯೆಯನ್ನು ತಾನೇ ಅವಳ ತಂದೆಗೆ ಹಿಂದಿರುಗಿಸಿ ವನಕ್ಕೆ ತೆರಳಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಲವಚರಿತೇ ಸಪ್ತದಶಾಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಲವಚರಿತೆಯಲ್ಲಿ ನೂರಾಹದಿನೇಳನೆಯ ಅಧ್ಯಾಯವು.