116 ಗಾಲವಚರಿತಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಭಗವದ್ಯಾನ ಪರ್ವ

ಅಧ್ಯಾಯ 116

ಸಾರ

ಗಾಲವನು ಮಾಧವಿಯೊಂದಿಗೆ ಭೋಜನಗರದ ರಾಜ ಉಶೀನರನಲ್ಲಿ ಹೋಗಿ ಅವನಿಗೆ ಮಾಧವಿಯಲ್ಲಿ ಎರಡು ಮಕ್ಕಳನ್ನು ಪಡೆದು ಒಂದೇ ಕಿವಿಯು ಕಪ್ಪಾಗಿರುವ ೪೦೦ ಬಿಳೀ ಕುದುರೆಗಳನ್ನು ಕೊಡಬೇಕೆಂದು ಕೇಳುವುದು (1-15). ತನ್ನಲ್ಲಿ ಅಂತಹ ಇನ್ನೂರು ಕುದುರೆಗಳು ಮಾತ್ರ ಇರುವುದರಿಂದ ಮಾಧವಿಯಲ್ಲಿ ಒಬ್ಬನೇ ಪುತ್ರನನ್ನು ಪಡೆಯುತ್ತೇನೆಂದು ಹೇಳಿ ಉಶೀನರನು ಶಿಬಿಯೆಂಬ ಮಗನನ್ನು ಪಡೆದುದು (16-21).

05116001 ನಾರದ ಉವಾಚ।
05116001a ತಥೈವ ಸಾ ಶ್ರಿಯಂ ತ್ಯಕ್ತ್ವಾ ಕನ್ಯಾ ಭೂತ್ವಾ ಯಶಸ್ವಿನೀ।
05116001c ಮಾಧವೀ ಗಾಲವಂ ವಿಪ್ರಮನ್ವಯಾತ್ಸತ್ಯಸಂಗರಾ।।

ನಾರದನು ಹೇಳಿದನು: “ಆ ಶ್ರೀಯನ್ನೂ ತೊರೆದು ಪುನಃ ಕನ್ಯೆಯಾಗಿ ಆ ಯಶಸ್ವಿನೀ ಸತ್ಯಸಂಗರೆ ಮಾಧವಿಯು ವಿಪ್ರ ಗಾಲವನನ್ನು ಅನುಸರಿಸಿದಳು.

05116002a ಗಾಲವೋ ವಿಮೃಶನ್ನೇವ ಸ್ವಕಾರ್ಯಗತಮಾನಸಃ।
05116002c ಜಗಾಮ ಭೋಜನಗರಂ ದ್ರಷ್ಟುಮೌಶೀನರಂ ನೃಪಂ।।

ತನ್ನ ಕಾರ್ಯವಾಗಬೇಕೆಂದು ಬಯಸಿ ವಿಮರ್ಶೆಮಾಡಿ ಗಾಲವನು ನೃಪ ಔಶೀನರನನ್ನು ನೋಡಲು ಭೋಜನಗರಕ್ಕೆ ಹೋದನು.

05116003a ತಮುವಾಚಾಥ ಗತ್ವಾ ಸ ನೃಪತಿಂ ಸತ್ಯವಿಕ್ರಮಂ।
05116003c ಇಯಂ ಕನ್ಯಾ ಸುತೌ ದ್ವೌ ತೇ ಜನಯಿಷ್ಯತಿ ಪಾರ್ಥಿವೌ।।

ಅಲ್ಲಿಗೆ ಹೋಗಿ ಅವನು ಸತ್ಯವಿಕ್ರಮಿ ನೃಪತಿಗೆ ಹೇಳಿದನು: “ಈ ಕನ್ಯೆಯು ನಿನಗೆ ಇಬ್ಬರು ಪಾರ್ಥಿವ ಸುತರನ್ನು ಜನಿಸುತ್ತಾಳೆ.

05116004a ಅಸ್ಯಾಂ ಭವಾನವಾಪ್ತಾರ್ಥೋ ಭವಿತಾ ಪ್ರೇತ್ಯ ಚೇಹ ಚ।
05116004c ಸೋಮಾರ್ಕಪ್ರತಿಸಂಕಾಶೌ ಜನಯಿತ್ವಾ ಸುತೌ ನೃಪ।।

ನೃಪ! ಇವಳಲ್ಲಿ ಸೋಮಾರ್ಕಪ್ರತಿಸಂಕಾಶರಾದ ಇಬ್ಬರು ಮಕ್ಕಳನ್ನು ಪಡೆದು ನೀನು ಇಲ್ಲಿಯ ಮತ್ತು ನಂತರದ ಉದ್ದೇಶಗಳನ್ನು ಸಾಧಿಸಬಲ್ಲೆ.

05116005a ಶುಲ್ಕಂ ತು ಸರ್ವಧರ್ಮಜ್ಞಾ ಹಯಾನಾಂ ಚಂದ್ರವರ್ಚಸಾಂ।
05116005c ಏಕತಃಶ್ಯಾಮಕರ್ಣಾನಾಂ ದೇಯಂ ಮಹ್ಯಂ ಚತುಃಶತಂ।।

ಸರ್ವಧರ್ಮಜ್ಞ! ಶುಲ್ಕವಾಗಿ ನೀನು ನನಗೆ ನಾಲ್ನೂರು ಚಂದ್ರವರ್ಚಸ, ಒಂದೇ ಕಿವಿಯು ಕಪ್ಪಾಗಿರುವ ಕುದುರೆಗಳನ್ನು ಕೊಡಬೇಕು.

05116006a ಗುರ್ವರ್ಥೋಽಯಂ ಸಮಾರಂಭೋ ನ ಹಯೈಃ ಕೃತ್ಯಮಸ್ತಿ ಮೇ।
05116006c ಯದಿ ಶಕ್ಯಂ ಮಹಾರಾಜ ಕ್ರಿಯತಾಂ ಮಾ ವಿಚಾರ್ಯತಾಂ।।

ಗುರುವಿಗಾಗಿ ನಾನು ಈ ಕುದುರೆಗಳನ್ನು ಒಟ್ಟುಹಾಕುತ್ತಿದ್ದೇನೆ. ಮಹಾರಾಜ! ಶಕ್ಯವಾದರೆ ಮಾಡು. ವಿಚಾರಮಾಡಬೇಡ!

05116007a ಅನಪತ್ಯೋಽಸಿ ರಾಜರ್ಷೇ ಪುತ್ರೌ ಜನಯ ಪಾರ್ಥಿವ।
05116007c ಪಿತೄನ್ಪುತ್ರಪ್ಲವೇನ ತ್ವಮಾತ್ಮಾನಂ ಚೈವ ತಾರಯ।।

ರಾಜರ್ಷೇ! ಮಕ್ಕಳಿಲ್ಲದವನಾಗಿದ್ದೀಯೆ. ಇಬ್ಬರು ಪುತ್ರರನ್ನು ಹುಟ್ಟಿಸು ಪಾರ್ಥಿವ! ಪುತ್ರನೆನ್ನುವ ದೋಣಿಯಿಂದ ನಿನ್ನನ್ನೂ ನಿನ್ನ ಪಿತೃಗಳನ್ನೂ ಉದ್ಧರಿಸು.

05116008a ನ ಪುತ್ರಫಲಭೋಕ್ತಾ ಹಿ ರಾಜರ್ಷೇ ಪಾತ್ಯತೇ ದಿವಃ।
05116008c ನ ಯಾತಿ ನರಕಂ ಘೋರಂ ಯತ್ರ ಗಚ್ಚಂತ್ಯನಾತ್ಮಜಾಃ।।

ಏಕೆಂದರೆ ರಾಜರ್ಷೇ! ಪುತ್ರಫಲವನ್ನು ಪಡೆದವನು ದಿವದಿಂದ ಬೀಳುವುದಿಲ್ಲ ಮತ್ತು ಅನಾತ್ಮಜರು ಹೋಗುವ ಘೋರ ನರಕಕ್ಕೆ ಹೋಗುವುದಿಲ್ಲ.”

05116009a ಏತಚ್ಚಾನ್ಯಚ್ಚ ವಿವಿಧಂ ಶ್ರುತ್ವಾ ಗಾಲವಭಾಷಿತಂ।
05116009c ಉಶೀನರಃ ಪ್ರತಿವಚೋ ದದೌ ತಸ್ಯ ನರಾಧಿಪಃ।।

ಈ ರೀತಿ ಮತ್ತು ಇನ್ನೂ ಇತರ ವಿಧಗಳಲ್ಲಿ ಹೇಳಿದ ಗಾಲವನ ಮಾತನ್ನು ಕೇಳಿ ನರಾಧಿಪ ಉಶೀನರನು ಅವನಿಗೆ ಪ್ರತ್ಯುತ್ತರವನ್ನಿತ್ತನು:

05116010a ಶ್ರುತವಾನಸ್ಮಿ ತೇ ವಾಕ್ಯಂ ಯಥಾ ವದಸಿ ಗಾಲವ।
05116010c ವಿಧಿಸ್ತು ಬಲವಾನ್ಬ್ರಹ್ಮನ್ಪ್ರವಣಂ ಹಿ ಮನೋ ಮಮ।।

“ಗಾಲವ! ನೀನು ಮಾತನಾಡಿದ್ದುದನ್ನು ನಾನು ಕೇಳಿದ್ದೇನೆ. ಏಕೆಂದರೆ ಬ್ರಹ್ಮನ್! ಯಾವುದರಲ್ಲಿ ನನ್ನ ಮನಸ್ಸು ಬಯಸುತ್ತಿದೆಯೋ ಅಲ್ಲಿ ವಿಧಿಯು ಬಲವಾದುದು.

05116011a ಶತೇ ದ್ವೇ ತು ಮಮಾಶ್ವಾನಾಮೀದೃಶಾನಾಂ ದ್ವಿಜೋತ್ತಮ।
05116011c ಇತರೇಷಾಂ ಸಹಸ್ರಾಣಿ ಸುಬಹೂನಿ ಚರಂತಿ ಮೇ।।

ದ್ವಿಜೋತ್ತಮ! ನನ್ನಲ್ಲಿ ಅಂಥಹ ಇನ್ನೂರು ಕುದುರೆಗಳು ಮಾತ್ರ ಇವೆ. ಇತರ ಬಹಳಷ್ಟು ಸಹಸ್ರ ಸಂಖ್ಯೆಯಲ್ಲಿ ನನ್ನಲ್ಲಿ ನಡೆದಾಡುತ್ತಿವೆ.

05116012a ಅಹಮಪ್ಯೇಕಮೇವಾಸ್ಯಾಂ ಜನಯಿಷ್ಯಾಮಿ ಗಾಲವ।
05116012c ಪುತ್ರಂ ದ್ವಿಜ ಗತಂ ಮಾರ್ಗಂ ಗಮಿಷ್ಯಾಮಿ ಪರೈರಹಂ।।

ಗಾಲವ! ದ್ವಿಜ! ನಾನೂ ಕೂಡ ಇವಳಲ್ಲಿ ಓರ್ವನೇ ಮಗನನ್ನು ಪಡೆದು ಇತರರು ಹೋದ ದಾರಿಯಲ್ಲಿಯೇ ಹೋಗುತ್ತೇನೆ.

05116013a ಮೂಲ್ಯೇನಾಪಿ ಸಮಂ ಕುರ್ಯಾಂ ತವಾಹಂ ದ್ವಿಜಸತ್ತಮ।
05116013c ಪೌರಜಾನಪದಾರ್ಥಂ ತು ಮಮಾರ್ಥೋ ನಾತ್ಮಭೋಗತಃ।।

ದ್ವಿಜಸತ್ತಮ! ನಾನು ನಿನಗೆ ಅವರಿಗೆ ಸಮನಾದ ಮೂಲ್ಯವನ್ನೂ ಕೊಡುತ್ತೇನೆ. ನನ್ನ ಸಂಪತ್ತು ಪೌರಜನರಿಗಾಗಿ ಇದೆಯೇ ಹೊರತು ನನಗೆ ಭೋಗಿಸಲಿಕ್ಕಲ್ಲ.

05116014a ಕಾಮತೋ ಹಿ ಧನಂ ರಾಜಾ ಪಾರಕ್ಯಂ ಯಃ ಪ್ರಯಚ್ಚತಿ।
05116014c ನ ಸ ಧರ್ಮೇಣ ಧರ್ಮಾತ್ಮನ್ಯುಜ್ಯತೇ ಯಶಸಾ ನ ಚ।।

ಧರ್ಮಾತ್ಮ! ಪರರ ಧನವನ್ನು ತನ್ನ ಕಾಮಕ್ಕಾಗಿ ಕಳೆಯುವ ರಾಜನು ಧರ್ಮವನ್ನೂ ಯಶಸ್ಸನ್ನೂ ಸಾಧಿಸುವುದಿಲ್ಲ.

05116015a ಸೋಽಹಂ ಪ್ರತಿಗ್ರಹೀಷ್ಯಾಮಿ ದದಾತ್ವೇತಾಂ ಭವಾನ್ಮಮ।
05116015c ಕುಮಾರೀಂ ದೇವಗರ್ಭಾಭಾಮೇಕಪುತ್ರಭವಾಯ ಮೇ।।

ಆದುದರಿಂದ ಅವಳನ್ನು ನೀನು ನನಗೆ ಕೊಡು. ಸ್ವೀಕರಿಸುತ್ತೇನೆ. ಈ ಕುಮಾರಿಯಲ್ಲಿ ನನಗೆ ದೇವಗರ್ಭಾಭನಾದ ಓರ್ವ ಪುತ್ರನು ಆಗಲಿ.”

05116016a ತಥಾ ತು ಬಹುಕಲ್ಯಾಣಮುಕ್ತವಂತಂ ನರಾಧಿಪಂ।
05116016c ಉಶೀನರಂ ದ್ವಿಜಶ್ರೇಷ್ಠೋ ಗಾಲವಃ ಪ್ರತ್ಯಪೂಜಯತ್।।

ಆಗ ಬಹಳ ಕಲ್ಯಾಣಕರವಾದುದನ್ನು ಹೇಳಿದ ಆ ನರಾಧಿಪ ಉಶೀನರನನ್ನು ದ್ವಿಜಶ್ರೇಷ್ಠ ಗಾಲವನು ಗೌರವಿಸಿದನು.

05116017a ಉಶೀನರಂ ಪ್ರತಿಗ್ರಾಹ್ಯ ಗಾಲವಃ ಪ್ರಯಯೌ ವನಂ।
05116017c ರೇಮೇ ಸ ತಾಂ ಸಮಾಸಾದ್ಯ ಕೃತಪುಣ್ಯ ಇವ ಶ್ರಿಯಂ।।
05116018a ಕಂದರೇಷು ಚ ಶೈಲಾನಾಂ ನದೀನಾಂ ನಿರ್ಝರೇಷು ಚ।
05116018c ಉದ್ಯಾನೇಷು ವಿಚಿತ್ರೇಷು ವನೇಷೂಪವನೇಷು ಚ।।
05116019a ಹರ್ಮ್ಯೇಷು ರಮಣೀಯೇಷು ಪ್ರಾಸಾದಶಿಖರೇಷು ಚ।
05116019c ವಾತಾಯನವಿಮಾನೇಷು ತಥಾ ಗರ್ಭಗೃಹೇಷು ಚ।।

ಅವಳನ್ನು ಉಶೀನರನಿಗೆ ಕೊಟ್ಟು ಗಾಲವನು ವನಕ್ಕೆ ನಡೆದನು. ಅವನು ಅವಳನ್ನು ಶ್ರೀಯನ್ನು ಕೃತಪುಣ್ಯನು ಭೋಗಿಸುವಂತೆ ಕಂದರಗಳಲ್ಲಿ, ಶೈಲಗಳಲ್ಲಿ, ನದಿಗಳಲ್ಲಿ, ನಿರ್ಝರಿಗಳಲ್ಲಿ, ಉದ್ಯಾನಗಳಲ್ಲಿ, ವಿಚಿತ್ರ ವನ-ಉಪವನಗಳಲ್ಲಿ, ಹರ್ಮಿಗಳಲ್ಲಿ, ರಮಣೀಯ ಪ್ರಾಸಾದಶಿಖರಗಳಲ್ಲಿ, ವಾತಾಯನ ವಿಮಾನಗಳಲ್ಲಿ, ಗರ್ಭಗೃಹಗಳಲ್ಲಿ ರಮಿಸಿದನು.

05116020a ತತೋಽಸ್ಯ ಸಮಯೇ ಜಜ್ಞೇ ಪುತ್ರೋ ಬಾಲರವಿಪ್ರಭಃ।
05116020c ಶಿಬಿರ್ನಾಮ್ನಾಭಿವಿಖ್ಯಾತೋ ಯಃ ಸ ಪಾರ್ಥಿವಸತ್ತಮಃ।।

ಆಗ ಕಾಲದಲ್ಲಿ ಅವನಿಗೆ ಬಾಲರವಿಯ ಪ್ರಭೆಯುಳ್ಳ ಪುತ್ರನು ಜನಿಸಿದನು. ಅವನೇ ಪಾರ್ಥಿವ ಸತ್ತಮ ಶಿಬಿಯೆಂಬ ಹೆಸರಿನಿಂದ ವಿಖ್ಯಾತನಾದನು.

05116021a ಉಪಸ್ಥಾಯ ಸ ತಂ ವಿಪ್ರೋ ಗಾಲವಃ ಪ್ರತಿಗೃಹ್ಯ ಚ।
05116021c ಕನ್ಯಾಂ ಪ್ರಯಾತಸ್ತಾಂ ರಾಜನ್ದೃಷ್ಟವಾನ್ವಿನತಾತ್ಮಜಂ।।

ರಾಜನ್! ಅನಂತರ ವಿಪ್ರ ಗಾಲವನು ಅವನಿಂದ ಕನ್ಯೆಯನ್ನು ಹಿಂದೆ ಪಡೆದು ವಿನತಾತ್ಮಜನನ್ನು ನೋಡಲು ಹೋದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಲವಚರಿತೇ ಷಡ್‌ದಶಾಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಲವಚರಿತೆಯಲ್ಲಿ ನೂರಾಹದಿನಾರನೆಯ ಅಧ್ಯಾಯವು.