114 ಗಾಲವಚರಿತಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಭಗವದ್ಯಾನ ಪರ್ವ

ಅಧ್ಯಾಯ 114

ಸಾರ

ಮಾಧವಿಯನ್ನು ಬಯಸಿ ಶುಲ್ಕವೇನೆಂದು ತಿಳಿದ ಹರ್ಯಶ್ವನು ತನ್ನಲ್ಲಿ ಗಾಲವನಿಗೆ ಬೇಕಾದಂತಹ ಕೇವಲ 200 ಕುದುರೆಗಳಿವೆಯೆಂದೂ, ಮಾಧವಿಯಲ್ಲಿ ಒಂದೇ ಮಗನನ್ನು ಪಡೆದು ಅವಳನ್ನು ಹಿಂದಿರುಗಿಸುತ್ತೇನೆಂದೂ ಸೂಚಿಸಿದುದು (1-9). ಆಗ ಮಾಧವಿಯು ಹೆರಿಗೆಯಾದ ನಂತರವೂ ಪುನಃ ಕನ್ಯೆಯಾಗುವಂತೆ ತನಗಿರುವ ವರವನ್ನು ತಿಳಿಸಿ, ಅವಳು ನಾಲ್ಕು ರಾಜರಿಗೆ ಮಕ್ಕಳನ್ನಿತ್ತು 200-200 ರಂತೆ 800 ಕುದುರೆಗಳನ್ನು ಸಂಪಾದಿಸಬಲ್ಲೆವೆಂದು ಗಾಲವನಿಗೆ ಹೇಳಿದುದು (10-13). ಹರ್ಯಶ್ವನು ಮಾಧವಿಯಲ್ಲಿ ವಸುಮನನೆಂಬ ಮಗನನ್ನು ಪಡೆಯಲು ಗಾಲವನು ಕುದುರೆಗಳನ್ನೂ ಮಾಧವಿಯನ್ನೂ ಸ್ವೀಕರಿಸಿ, ಅವಳೊಂದಿಗೆ ಕಾಶಿರಾಜ ದಿವೋದಾಸನಲ್ಲಿಗೆ ಹೋದುದು (14-22).

05114001 ನಾರದ ಉವಾಚ।
05114001a ಹರ್ಯಶ್ವಸ್ತ್ವಬ್ರವೀದ್ರಾಜಾ ವಿಚಿಂತ್ಯ ಬಹುಧಾ ತತಃ।
05114001c ದೀರ್ಘಮುಷ್ಣಂ ಚ ನಿಃಶ್ವ್ವಸ್ಯ ಪ್ರಜಾಹೇತೋರ್ನೃಪೋತ್ತಮಃ।।

ನಾರದನು ಹೇಳಿದನು: “ಬಹಳಷ್ಟು ಚಿಂತೆಮಾಡಿ, ದೀರ್ಘ, ಬಿಸಿಯಾದ, ನಿಟ್ಟುಸಿರನ್ನು ಬಿಡುತ್ತಾ, ಮಕ್ಕಳನ್ನು ಪಡೆಯಲೋಸುಗ, ಆ ನೃಪೋತ್ತಮ ರಾಜಾ ಹರ್ಯಶ್ವನು ಹೇಳಿದನು:

05114002a ಉನ್ನತೇಷೂನ್ನತಾ ಷಟ್ಸು ಸೂಕ್ಷ್ಮಾ ಸೂಕ್ಷ್ಮೇಷು ಸಪ್ತಸು।
05114002c ಗಂಭೀರಾ ತ್ರಿಷು ಗಂಭೀರೇಷ್ವಿಯಂ ರಕ್ತಾ ಚ ಪಂಚಸು।।

“ಉನ್ನತವಾಗಿರಬೇಕಾದ ಆ ಆರೂ ಇವಳಲ್ಲಿ ಉನ್ನತವಾಗಿವೆ. ಸೂಕ್ಷ್ಮವಾಗಿರಬೇಕಾದ ಏಳೂ ಸೂಕ್ಷ್ಮವಾಗಿವೆ. ಗಂಭೀರವಾಗಿರಬೇಕಾದ ಮೂರೂ ಗಂಭೀರವಾಗಿವೆ ಮತ್ತು ಐದು ಕೆಂಪಾಗಿವೆ.

05114003a ಬಹುದೇವಾಸುರಾಲೋಕಾ ಬಹುಗಂಧರ್ವದರ್ಶನಾ।
05114003c ಬಹುಲಕ್ಷಣಸಂಪನ್ನಾ ಬಹುಪ್ರಸವಧಾರಿಣೀ।।

ಇವಳು ದೇವಾಸುರಲೋಕದವರಿಗೂ ಗಂಧರ್ವರಿಗೂ ಸುಂದರಿಯಾಗಿ ಕಾಣುತ್ತಾಳೆ. ಬಹುಲಕ್ಷಣ ಸಂಪನ್ನೆಯಾಗಿದ್ದಾಳೆ. ಬಹಳ ಮಕ್ಕಳನ್ನೂ ಹಡೆಯುವಂತಿದ್ದಾಳೆ.

05114004a ಸಮರ್ಥೇಯಂ ಜನಯಿತುಂ ಚಕ್ರವರ್ತಿನಮಾತ್ಮಜಂ।
05114004c ಬ್ರೂಹಿ ಶುಲ್ಕಂ ದ್ವಿಜಶ್ರೇಷ್ಠ ಸಮೀಕ್ಷ್ಯ ವಿಭವಂ ಮಮ।।

ಇವಳು ನನ್ನಿಂದ ಹುಟ್ಟುವ ಚಕ್ರವರ್ತಿಗೆ ಜನ್ಮನೀಡಲು ಸಮರ್ಥಳಾಗಿದ್ದಾಳೆ. ದ್ವಿಜಶ್ರೇಷ್ಠ! ನನ್ನ ಸಂಪತ್ತನ್ನು ನೋಡಿಕೊಂಡು ಶುಲ್ಕವೇನೆಂದು ಹೇಳು.”

05114005 ಗಾಲವ ಉವಾಚ।
05114005a ಏಕತಃಶ್ಯಾಮಕರ್ಣಾನಾಂ ಶತಾನ್ಯಷ್ಟೌ ದದಸ್ವ ಮೇ।
05114005c ಹಯಾನಾಂ ಚಂದ್ರಶುಭ್ರಾಣಾಂ ದೇಶಜಾನಾಂ ವಪುಷ್ಮತಾಂ।।

ಗಾಲವನು ಹೇಳಿದನು: “ಒಂದೇ ಕಿವಿಯು ಕಪ್ಪಾಗಿರುವ, ಚಂದ್ರನಂತೆ ಬಿಳಿಯಾಗಿರುವ, ಉತ್ತಮ ಪ್ರದೇಶದಲ್ಲಿ ಹುಟ್ಟಿದ ಸುಂದರ ಎಂಟುನೂರು ಕುದುರೆಗಳನ್ನು ನನಗೆ ಕೊಡು.

05114006a ತತಸ್ತವ ಭವಿತ್ರೀಯಂ ಪುತ್ರಾಣಾಂ ಜನನೀ ಶುಭಾ।
05114006c ಅರಣೀವ ಹುತಾಶಾನಾಂ ಯೋನಿರಾಯತಲೋಚನಾ।।

ಆಗ ಹುತಾಶನನ ಯೋನಿ ಅರಣಿಯಂತಿರುವ ಈ ಆಯತಲೋಚನೆ ಶುಭೆಯು ನಿನ್ನ ಪುತ್ರರ ಜನನಿಯಾಗುತ್ತಾಳೆ.””

05114007 ನಾರದ ಉವಾಚ।
05114007a ಏತಚ್ಚ್ರುತ್ವಾ ವಚೋ ರಾಜಾ ಹರ್ಯಶ್ವಃ ಕಾಮಮೋಹಿತಃ।
05114007c ಉವಾಚ ಗಾಲವಂ ದೀನೋ ರಾಜರ್ಷಿರ್ಋಷಿಸತ್ತಮಂ।।

ನಾರದನು ಹೇಳಿದನು: “ಈ ಮಾತುಗಳನ್ನು ಕೇಳಿದ ಕಾಮಮೋಹಿತ ರಾಜರ್ಷಿ ರಾಜಾ ಹರ್ಯಶ್ವನು ದೀನನಾಗಿ ಗಾಲವನಿಗೆ ಹೇಳಿದನು:

05114008a ದ್ವೇ ಮೇ ಶತೇ ಸಂನ್ನಿಹಿತೇ ಹಯಾನಾಂ ಯದ್ವಿಧಾಸ್ತವ।
05114008c ಏಷ್ಟವ್ಯಾಃ ಶತಶಸ್ತ್ವನ್ಯೇ ಚರಂತಿ ಮಮ ವಾಜಿನಃ।।

“ನೀನು ಬಯಸುವಂತಹ ಎರಡೇ ನೂರು ಕುದುರೆಗಳು ನನ್ನ ಹತ್ತಿರ ಇವೆ. ಇಷ್ಟಿಗಳಲ್ಲಿ ಬಳಸಬಹುದಾದ ಇತರ ಇನ್ನೂ ನೂರಾರು ಕುದುರೆಗಳು ನನ್ನ ಬಳಿ ಓಡಾಡುತ್ತಿವೆ.

05114009a ಸೋಽಹಮೇಕಮಪತ್ಯಂ ವೈ ಜನಯಿಷ್ಯಾಮಿ ಗಾಲವ।
05114009c ಅಸ್ಯಾಮೇತಂ ಭವಾನ್ಕಾಮಂ ಸಂಪಾದಯತು ಮೇ ವರಂ।।

ಗಾಲವ! ನಾನು ಇವಳಲ್ಲಿ ಒಬ್ಬನೇ ಮಗನನ್ನು ಹುಟ್ಟಿಸುತ್ತೇನೆ. ನನಗೆ ಈ ವರವನ್ನು ನೀಡಲು ನೀನು ಮನಸ್ಸುಮಾಡಬೇಕು.”

05114010a ಏತಚ್ಚ್ರುತ್ವಾ ತು ಸಾ ಕನ್ಯಾ ಗಾಲವಂ ವಾಕ್ಯಮಬ್ರವೀತ್।
05114010c ಮಮ ದತ್ತೋ ವರಃ ಕಶ್ಚಿತ್ಕೇನ ಚಿದ್ಬ್ರಹ್ಮವಾದಿನಾ।।

ಇದನ್ನು ಕೇಳಿದ ಆ ಕನ್ಯೆಯು ಗಾಲವನಿಗೆ ಹೇಳಿದಳು: “ಒಮ್ಮೆ ನನಗೆ ಯಾರೋ ಒಬ್ಬ ಬ್ರಹ್ಮವಾದಿಯು ವರವನ್ನು ನೀಡಿದ್ದನು.

05114011a ಪ್ರಸೂತ್ಯಂತೇ ಪ್ರಸೂತ್ಯಂತೇ ಕನ್ಯೈವ ತ್ವಂ ಭವಿಷ್ಯಸಿ।
05114011c ಸ ತ್ವಂ ದದಸ್ವ ಮಾಂ ರಾಜ್ಞೇ ಪ್ರತಿಗೃಹ್ಯ ಹಯೋತ್ತಮಾನ್।।

“ಪ್ರತಿ ಹೆರಿಗೆಯ ನಂತರ ನೀನು ಕನ್ಯೆಯಾಗಿಯೇ ಉಳಿಯುತ್ತೀಯೆ!” ಎಂದು. ಆದುದರಿಂದ ನನ್ನನ್ನು ಈ ರಾಜನಿಗೆ ಕೊಟ್ಟು ನೀನು ಆ ಉತ್ತಮ ಕುದುರೆಗಳನ್ನು ಪಡೆ.

05114012a ನೃಪೇಭ್ಯೋ ಹಿ ಚತುರ್ಭ್ಯಸ್ತೇ ಪೂರ್ಣಾನ್ಯಷ್ಟೌ ಶತಾನಿ ವೈ।
05114012c ಭವಿಷ್ಯಂತಿ ತಥಾ ಪುತ್ರಾ ಮಮ ಚತ್ವಾರ ಏವ ಚ।।

ಹೀಗೆ ನಾಲ್ವರು ನೃಪರಿಂದ ಸಂಪೂರ್ಣವಾಗಿ ಎಂಟುನೂರು ಕುದುರೆಗಳನ್ನು ಪಡೆಯಬಹುದು. ನನಗೂ ಕೂಡ ನಾಲ್ವರು ಮಕ್ಕಳಾದಂತೆ ಆಗುತ್ತದೆ.

05114013a ಕ್ರಿಯತಾಂ ಮಮ ಸಂಹಾರೋ ಗುರ್ವರ್ಥಂ ದ್ವಿಜಸತ್ತಮ।
05114013c ಏಷಾ ತಾವನ್ಮಮ ಪ್ರಜ್ಞಾ ಯಥಾ ವಾ ಮನ್ಯಸೇ ದ್ವಿಜ।।

ದ್ವಿಜಸತ್ತಮ! ಹೀಗೆ ನನ್ನನ್ನು ಬಳಸಿ ನಿನ್ನ ಗುರುವಿಗೆ ಬೇಕಾದುದನ್ನು ಸಂಗ್ರಹಿಸಿದಂತಾಗುತ್ತದೆ. ಹೀಗೆ ಮಾಡಬಹುದೆಂದು ನನಗನ್ನಿಸುತ್ತದೆ. ಆದರೆ ದ್ವಿಜ! ನಿನಗೆ ಅನ್ನಿಸಿದ ಹಾಗೆ ಮಾಡು.”

05114014a ಏವಮುಕ್ತಸ್ತು ಸ ಮುನಿಃ ಕನ್ಯಯಾ ಗಾಲವಸ್ತದಾ।
05114014c ಹರ್ಯಶ್ವಂ ಪೃಥಿವೀಪಾಲಮಿದಂ ವಚನಮಬ್ರವೀತ್।।

ಕನ್ಯೆಯು ಈ ರೀತಿ ಹೇಳಲು ಮುನಿ ಗಾಲವನು ಪೃಥಿವೀಪಾಲ ಹರ್ಯಶ್ವನಿಗೆ ಈ ಮಾತನ್ನಾಡಿದನು:

05114015a ಇಯಂ ಕನ್ಯಾ ನರಶ್ರೇಷ್ಠ ಹರ್ಯಶ್ವ ಪ್ರತಿಗೃಹ್ಯತಾಂ।
05114015c ಚತುರ್ಭಾಗೇನ ಶುಲ್ಕಸ್ಯ ಜನಯಸ್ವೈಕಮಾತ್ಮಜಂ।।

“ನರಶ್ರೇಷ್ಠ! ಹರ್ಯಶ್ವ! ಶುಲ್ಕದ ನಾಲ್ಕನೆಯ ಒಂದು ಭಾಗವನ್ನು ಕೊಟ್ಟು ಇವಳನ್ನು ಸ್ವೀಕರಿಸು. ಇವಳಿಂದ ಒಬ್ಬನೇ ಮಗನನ್ನು ಹುಟ್ಟಿಸು.”

05114016a ಪ್ರತಿಗೃಹ್ಯ ಸ ತಾಂ ಕನ್ಯಾಂ ಗಾಲವಂ ಪ್ರತಿನಂದ್ಯ ಚ।
05114016c ಸಮಯೇ ದೇಶಕಾಲೇ ಚ ಲಬ್ಧವಾನ್ಸುತಮೀಪ್ಸಿತಂ।।

ಗಾಲವನನ್ನು ಪೂಜಿಸಿ, ಆ ಕನ್ಯೆಯನ್ನು ಸ್ವೀಕರಿಸಿ, ಅವನು ದೇಶಕಾಲದಲ್ಲಿ ಒಪ್ಪಂದದಂತೆ ತನಗಿಷ್ಟನಾದ ಮಗನನ್ನು ಪಡೆದನು.

05114017a ತತೋ ವಸುಮನಾ ನಾಮ ವಸುಭ್ಯೋ ವಸುಮತ್ತರಃ।
05114017c ವಸುಪ್ರಖ್ಯೋ ನರಪತಿಃ ಸ ಬಭೂವ ವಸುಪ್ರದಃ।।

ಸಂಪತ್ತಿರುವವರಲ್ಲೆಲ್ಲ ಅಧಿಕ ಸಂಪತ್ತುಳ್ಳವನಾಗಿ, ವಸುವಿನಂತೆ ತೋರುವ ಅವನು ವಸುಮನಾ ಎಂಬ ಹೆಸರಿನ, ಸಂಪತ್ತನ್ನು ನೀಡುವ, ನರಪತಿಯಾದನು.

05114018a ಅಥ ಕಾಲೇ ಪುನರ್ಧೀಮಾನ್ಗಾಲವಃ ಪ್ರತ್ಯುಪಸ್ಥಿತಃ।
05114018c ಉಪಸಂಗಮ್ಯ ಚೋವಾಚ ಹರ್ಯಶ್ವಂ ಪ್ರೀತಿಮಾನಸಂ।।

ಅನಂತರ ಕಾಲಾಂತರದಲ್ಲಿ ಧೀಮಾನ್ ಗಾಲವನು ಮರಳಿ ಬಂದನು. ಸಂತೋಷದಿಂದಿದ್ದ ಹರ್ಯಶ್ವನನ್ನು ಭೇಟಿಮಾಡಿ ಹೇಳಿದನು:

05114019a ಜಾತೋ ನೃಪ ಸುತಸ್ತೇಽಯಂ ಬಾಲಭಾಸ್ಕರಸಮ್ನಿಭಃ।
05114019c ಕಾಲೋ ಗಂತುಂ ನರಶ್ರೇಷ್ಠ ಭಿಕ್ಷಾರ್ಥಮಪರಂ ನೃಪಂ।।

“ನೃಪ! ನಿನಗೆ ಈ ಭಾಸ್ಕರ ಸನ್ನಿಭ ಮಗನು ಜನಿಸಿದ್ದಾನೆ. ನರಶ್ರೇಷ್ಠ! ಬೇರೆ ನೃಪರಲ್ಲಿಗೆ ಭಿಕ್ಷೆಗೆ ಹೋಗುವ ಸಮಯವು ಬಂದಿದೆ.”

05114020a ಹರ್ಯಶ್ವಃ ಸತ್ಯವಚನೇ ಸ್ಥಿತಃ ಸ್ಥಿತ್ವಾ ಚ ಪೌರುಷೇ।
05114020c ದುರ್ಲಭತ್ವಾದ್ಧಯಾನಾಂ ಚ ಪ್ರದದೌ ಮಾಧವೀಂ ಪುನಃ।।

ಸತ್ಯವಚನದಲ್ಲಿ ಸ್ಥಿತನಾಗಿದ್ದ, ಪೌರುಷದಲ್ಲಿ ನಿಂತಿದ್ದ ಹರ್ಯಶ್ವನು ಸಂಪೂರ್ಣ ಶುಲ್ಕವು ತನ್ನಲ್ಲಿ ದುರ್ಲಭವೆಂದು ಮಾಧವಿಯನ್ನು ಮರಳಿ ಕೊಟ್ಟನು.

05114021a ಮಾಧವೀ ಚ ಪುನರ್ದೀಪ್ತಾಂ ಪರಿತ್ಯಜ್ಯ ನೃಪಶ್ರಿಯಂ।
05114021c ಕುಮಾರೀ ಕಾಮತೋ ಭೂತ್ವಾ ಗಾಲವಂ ಪೃಷ್ಠತೋಽನ್ವಗಾತ್।।

ಮಾಧವಿಯಾದರೋ ಆ ನೃಪನ ಬೆಳಗುತ್ತಿದ್ದ ಶ್ರೀಯನ್ನು ಪರಿತ್ಯಜಿಸಿ ಪುನಃ ಕಾಮಿಸುವ ಕುಮಾರಿಯಾಗಿ ಗಾಲವನನ್ನು ಹಿಂಬಾಲಿಸಿದಳು.

05114022a ತ್ವಯ್ಯೇವ ತಾವತ್ತಿಷ್ಠಂತು ಹಯಾ ಇತ್ಯುಕ್ತವಾನ್ದ್ವಿಜಃ।
05114022c ಪ್ರಯಯೌ ಕನ್ಯಯಾ ಸಾರ್ಧಂ ದಿವೋದಾಸಂ ಪ್ರಜೇಶ್ವರಂ।।

“ಈ ಕುದುರೆಗಳು ನಿನ್ನಲ್ಲಿಯೇ ಇರಲಿ!” ಎಂದು ಹೇಳಿ ದ್ವಿಜನು ಕನ್ಯೆಯೊಡನೆ ಪ್ರಜೇಶ್ವರ ದಿವೋದಾಸನಲ್ಲಿಗೆ ಪ್ರಯಾಣಿಸಿದನು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಲವಚರಿತೇ ಚತುರ್ದಶಾಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಲವಚರಿತೆಯಲ್ಲಿ ನೂರಾಹದಿನಾಲ್ಕನೆಯ ಅಧ್ಯಾಯವು.