ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಭಗವದ್ಯಾನ ಪರ್ವ
ಅಧ್ಯಾಯ 113
ಸಾರ
ಯಯಾತಿಯು ತನ್ನ ಸಂಪತ್ತು ಕ್ಷೀಣವಾಗಿರುವುದರಿಂದ ಧನವನ್ನು ದಾನಕೊಡಲಿಕ್ಕಾಗುವುದಿಲ್ಲವೆಂದೂ, ಆದರೆ ದೇಹಿ ಎಂದವರಿಗೆ ನಾಸ್ತಿ ಹೇಳಬಾರದೆಂದು ತನ್ನ ಮಗಳನ್ನು ಕೊಡುತ್ತೇನೆಂದೂ, ಕನ್ಯೆ ಮಾಧವಿಯನ್ನು ಗಾಲವನಿಗಿತ್ತುದುದು (1-14). ಗರುಡನು ಹಿಂದಿರುಗಲು ಗಾಲವನು ಮಾಧವಿಯೊಡನೆ ಅಯೋಧ್ಯೆಯ ಹರ್ಯಶ್ವನ ಬಳಿಬಂದು, “ಶುಲ್ಕವನ್ನಿತ್ತು ಇವಳನ್ನು ಪತ್ನಿಯನ್ನಾಗಿ ಸ್ವೀಕರಿಸು” ಎಂದುದು (15-21).
05113001 ನಾರದ ಉವಾಚ।
05113001a ಏವಮುಕ್ತಃ ಸುಪರ್ಣೇನ ತಥ್ಯಂ ವಚನಮುತ್ತಮಂ।
05113001c ವಿಮೃಶ್ಯಾವಹಿತೋ ರಾಜಾ ನಿಶ್ಚಿತ್ಯ ಚ ಪುನಃ ಪುನಃ।।
ನಾರದನು ಹೇಳಿದನು: “ಸುಪರ್ಣನು ಆ ತಥ್ಯವೂ ಉತ್ತಮವೂ ಆದ ಮಾತುಗಳನ್ನಾಡಲು ರಾಜನು ಪುನಃ ಪುನಃ ವಿಮರ್ಷೆ ಮಾಡಿ, ನಿಶ್ಚಯಿಸಿ ಹೇಳಿದನು.
05113002a ಯಷ್ಟಾ ಕ್ರತುಸಹಸ್ರಾಣಾಂ ದಾತಾ ದಾನಪತಿಃ ಪ್ರಭುಃ।
05113002c ಯಯಾತಿರ್ವತ್ಸಕಾಶೀಶ ಇದಂ ವಚನಮಬ್ರವೀತ್।।
ನೂರಾರು ಕ್ರತುಗಳನ್ನು ಮಾಡಿದ, ದಾನಿ, ದಾನಪತಿ, ಪ್ರಭು, ವತ್ಸ-ಕಾಶಿಗಳ ಅಧಿಪತಿ, ಯಯಾತಿಯು ಈ ಮಾತುಗಳನ್ನಾಡಿದನು.
05113003a ದೃಷ್ಟ್ವಾ ಪ್ರಿಯಸಖಂ ತಾರ್ಕ್ಷ್ಯಂ ಗಾಲವಂ ಚ ದ್ವಿಜರ್ಷಭಂ।
05113003c ನಿದರ್ಶನಂ ಚ ತಪಸೋ ಭಿಕ್ಷಾಂ ಶ್ಲಾಘ್ಯಾಂ ಚ ಕೀರ್ತಿತಾಂ।।
ಪ್ರಿಯಸಖ ತಾರ್ಕ್ಷನನ್ನೂ ದ್ವಿಜರ್ಷಭ ಗಾಲವನನ್ನೂ ನೋಡಿ, ತಪಸ್ಸಿನ ನಿದರ್ಶನವನ್ನೂ ಭಿಕ್ಷೆಯು ತನಗೆ ಶ್ಲಾಘನೀಯವಾದುದು ಮತ್ತು ಕೀರ್ತಿಯನ್ನು ತರುವಂತಹುದು ಎಂದು ಯೋಚಿಸಿದನು.
05113004a ಅತೀತ್ಯ ಚ ನೃಪಾನನ್ಯಾನಾದಿತ್ಯಕುಲಸಂಭವಾನ್।
05113004c ಮತ್ಸಕಾಶಮನುಪ್ರಾಪ್ತಾವೇತೌ ಬುದ್ಧಿಮವೇಕ್ಷ್ಯ ಚ।।
“ಇವರಿಬ್ಬರೂ ಅನ್ಯ ಆದಿತ್ಯಕುಲಸಂಭವರನ್ನು ಬಿಟ್ಟು ನನ್ನ ಬಳಿಗೆ ಬಂದಿದ್ದಾರೆ!” ಎಂದು ಮನಸ್ಸಿನಲ್ಲಿಯೇ ಯೋಚಿಸಿದನು.
05113005a ಅದ್ಯ ಮೇ ಸಫಲಂ ಜನ್ಮ ತಾರಿತಂ ಚಾದ್ಯ ಮೇ ಕುಲಂ।
05113005c ಅದ್ಯಾಯಂ ತಾರಿತೋ ದೇಶೋ ಮಮ ತಾರ್ಕ್ಷ್ಯ ತ್ವಯಾನಘ।।
“ತಾರ್ಕ್ಷ್ಯ! ಅನಘ! ಇಂದು ನನ್ನ ಜನ್ಮವು ಸಫಲವಾಯಿತು. ಇಂದು ನನ್ನ ಕುಲವು ರಕ್ಷಿಸಲ್ಪಟ್ಟಿತು. ನಿನ್ನಿಂದ ನನ್ನ ಈ ದೇಶವು ಉಳಿದುಕೊಂಡಿತು.
05113006a ವಕ್ತುಮಿಚ್ಚಾಮಿ ತು ಸಖೇ ಯಥಾ ಜಾನಾಸಿ ಮಾಂ ಪುರಾ।
05113006c ನ ತಥಾ ವಿತ್ತವಾನಸ್ಮಿ ಕ್ಷೀಣಂ ವಿತ್ತಂ ಹಿ ಮೇ ಸಖೇ।।
ಸಖಾ! ಹಿಂದೆ ನೀನು ನನ್ನನ್ನು ಹೇಗೆ ಅರಿತುಕೊಂಡಿದ್ದೆಯೋ ಹಾಗೆ ನಾನು ಇಂದು ಇಲ್ಲ. ಸಖಾ! ನನ್ನ ಸಂಪತ್ತು ಕ್ಷೀಣಿಸಿದೆ.
05113007a ನ ಚ ಶಕ್ತೋಽಸ್ಮಿ ತೇ ಕರ್ತುಂ ಮೋಘಮಾಗಮನಂ ಖಗ।
05113007c ನ ಚಾಶಾಮಸ್ಯ ವಿಪ್ರರ್ಷೇರ್ವಿತಥಾಂ ಕರ್ತುಮುತ್ಸಹೇ।।
ಖಗ! ಆದರೂ ನಿಮ್ಮ ಆಗಮನವು ನಿಷ್ಪಲವನ್ನಾಗಿ ಮಾಡಲು ಶಕ್ತನಿಲ್ಲ. ಈ ವಿಪ್ರರ್ಷಿಯ ಆಶಯವನ್ನೂ ಕುಂಠಿಸಲು ಉತ್ಸುಕನಾಗಿಲ್ಲ.
05113008a ತತ್ತು ದಾಸ್ಯಾಮಿ ಯತ್ಕಾರ್ಯಮಿದಂ ಸಂಪಾದಯಿಷ್ಯತಿ।
05113008c ಅಭಿಗಮ್ಯ ಹತಾಶೋ ಹಿ ನಿವೃತ್ತೋ ದಹತೇ ಕುಲಂ।।
ಆದರೂ ನಾನು ಈ ಕಾರ್ಯವನ್ನು ಸಂಪಾದಿಸಬಲ್ಲದುದನ್ನು ಕೊಡುತ್ತೇನೆ. ಏಕೆಂದರೆ ಬಂದೂ ಹತಾಶರಾಗಿ ಹಿಂದಿರುಗುವವರು ಕುಲವನ್ನು ಸುಡುತ್ತಾರೆ.
05113009a ನಾತಃ ಪರಂ ವೈನತೇಯ ಕಿಂ ಚಿತ್ಪಾಪಿಷ್ಠಮುಚ್ಯತೇ।
05113009c ಯಥಾಶಾನಾಶನಂ ಲೋಕೇ ದೇಹಿ ನಾಸ್ತೀತಿ ವಾ ವಚಃ।।
ವೈನತೇಯ! ನನ್ನಲ್ಲಿ ಏನೂ ಇಲ್ಲ ಎಂದು ಹೇಳುವುದು ಮತ್ತು ದೇಹಿ ಎಂದವನಿಗೆ ನಾಸ್ತಿ ಎನ್ನುವುದು ಲೋಕದಲ್ಲಿ ಪರಮ ಪಾಪಿಷ್ಠವಾದುದು ಎಂದು ಹೇಳುತ್ತಾರೆ.
05113010a ಹತಾಶೋ ಹ್ಯಕೃತಾರ್ಥಃ ಸನ್ ಹತಃ ಸಂಭಾವಿತೋ ನರಃ।
05113010c ಹಿನಸ್ತಿ ತಸ್ಯ ಪುತ್ರಾಂಶ್ಚ ಪೌತ್ರಾಂಶ್ಚಾಕುರ್ವತೋಽರ್ಥಿನಾಂ।।
ಹತಾಶೆಗೆ, ಅಯಶಸ್ವಿಗೆ ಕಾರಣನಾದ, ಸಂಭವವನ್ನು ಕೊಂದ ನರನ ಪುತ್ರ ಪೌತ್ರರನ್ನು ಯಾಚಿಸಿಬಂದವನು ಸಂಹರಿಸುತ್ತಾನೆ.
05113011a ತಸ್ಮಾಚ್ಚತುರ್ಣಾಂ ವಂಶಾನಾಂ ಸ್ಥಾಪಯಿತ್ರೀ ಸುತಾ ಮಮ।
05113011c ಇಯಂ ಸುರಸುತಪ್ರಖ್ಯಾ ಸರ್ವಧರ್ಮೋಪಚಾಯಿನೀ।।
05113012a ಸದಾ ದೇವಮನುಷ್ಯಾಣಾಮಸುರಾಣಾಂ ಚ ಗಾಲವ।
05113012c ಕಾಂಕ್ಷಿತಾ ರೂಪತೋ ಬಾಲಾ ಸುತಾ ಮೇ ಪ್ರತಿಗೃಹ್ಯತಾಂ।।
ಗಾಲವ! ಆದುದರಿಂದ ನಾಲ್ಕು ವಂಶಗಳನ್ನು ಸ್ಥಾಪಿಸುವ ಈ ನನ್ನ ಮಗಳನ್ನು, ಸುರಸುತೆಯಂತೆ ಪ್ರಖರಳಾಗಿರುವ, ಸರ್ವಧರ್ಮೋಪಚಾರಿಣಿ, ಸದಾ ದೇವ-ಮನುಷ್ಯ-ಅಸುರರು ಬಯಸುವ, ರೂಪವತಿ, ನನ್ನ ಈ ಬಾಲಕಿ ಮಗಳನ್ನು ಸ್ವೀಕರಿಸಬೇಕು.
05113013a ಅಸ್ಯಾಃ ಶುಲ್ಕಂ ಪ್ರದಾಸ್ಯಂತಿ ನೃಪಾ ರಾಜ್ಯಮಪಿ ಧ್ರುವಂ।
05113013c ಕಿಂ ಪುನಃ ಶ್ಯಾಮಕರ್ಣಾನಾಂ ಹಯಾನಾಂ ದ್ವೇ ಚತುಹ್ಶತೇ।।
ಇವಳಿಗೆ ಶುಲ್ಕವಾಗಿ ನೃಪರು ರಾಜ್ಯವನ್ನೇ ನೀಡುವುದು ನಿಶ್ಚಿತ. ಇನ್ನು ಎಂಟುನೂರು ಕಪ್ಪುಕಿವಿಗಳ ಕುದುರೆಗಳೇನು?
05113014a ಸ ಭವಾನ್ಪ್ರತಿಗೃಹ್ಣಾತು ಮಮೇಮಾಂ ಮಾಧವೀಂ ಸುತಾಂ।
05113014c ಅಹಂ ದೌಹಿತ್ರವಾನ್ಸ್ಯಾಂ ವೈ ವರ ಏಷ ಮಮ ಪ್ರಭೋ।।
ನನ್ನ ಸುತೆ ಮಾಧವಿಯನ್ನು ನೀವು ಸ್ವೀಕರಿಸಬೇಕು. ಪ್ರಭೋ! ಇವಳಿಂದ ನನಗೆ ಮೊಮ್ಮಗನೋರ್ವನಾಗಲಿ ಎಂದು ಕೇಳಿಕೊಳ್ಳುತ್ತೇನೆ.”
05113015a ಪ್ರತಿಗೃಹ್ಯ ಚ ತಾಂ ಕನ್ಯಾಂ ಗಾಲವಃ ಸಹ ಪಕ್ಷಿಣಾ।
05113015c ಪುನರ್ದ್ರಕ್ಷ್ಯಾವ ಇತ್ಯುಕ್ತ್ವಾ ಪ್ರತಸ್ಥೇ ಸಹ ಕನ್ಯಯಾ।।
ಪಕ್ಷಿಯೊಡನೆ ಗಾಲವನು ಆ ಕನ್ಯೆಯನ್ನು ಸ್ವೀಕರಿಸಿ “ಮತ್ತೆ ಕಾಣುತ್ತೇವೆ” ಎಂದು ಹೇಳಿ ಕನ್ಯೆಯೊಡನೆ ಹೊರಟರು.
05113016a ಉಪಲಬ್ಧಮಿದಂ ದ್ವಾರಮಶ್ವಾನಾಮಿತಿ ಚಾಂಡಜಃ।
05113016c ಉಕ್ತ್ವಾ ಗಾಲವಮಾಪೃಚ್ಚ್ಯ ಜಗಾಮ ಭವನಂ ಸ್ವಕಂ।।
“ಅಶ್ವಗಳಿಗೆ ದ್ವಾರವಾದ ಇವಳು ಸಿಕ್ಕಿದಳು!” ಎಂದು ಗಾಲವನಿಗೆ ಹೇಳಿ ಅಂಡಜನು ತನ್ನ ಮನೆಗೆ ತೆರಳಿದನು.
05113017a ಗತೇ ಪತಗರಾಜೇ ತು ಗಾಲವಃ ಸಹ ಕನ್ಯಯಾ।
05113017c ಚಿಂತಯಾನಃ ಕ್ಷಮಂ ದಾನೇ ರಾಜ್ಞಾಂ ವೈ ಶುಲ್ಕತೋಽಗಮತ್।।
ಪತಗರಾಜನು ಹೊರಟುಹೋಗಲು ಕನ್ಯೆಯೊಡನೆ ಗಾಲವನು ಇವಳಿಗೆ ಶುಲ್ಕವನ್ನು ಕೊಡಬಲ್ಲ ಯಾವ ರಾಜನಿಗೆ ಇವಳನ್ನು ಮಾರಲಿ ಎಂದು ಚಿಂತಿಸಿದನು.
05113018a ಸೋಽಗಚ್ಚನ್ಮನಸೇಕ್ಷ್ವಾಕುಂ ಹರ್ಯಶ್ವಂ ರಾಜಸತ್ತಮಂ।
05113018c ಅಯೋಧ್ಯಾಯಾಂ ಮಹಾವೀರ್ಯಂ ಚತುರಂಗಬಲಾನ್ವಿತಂ।।
05113019a ಕೋಶಧಾನ್ಯಬಲೋಪೇತಂ ಪ್ರಿಯಪೌರಂ ದ್ವಿಜಪ್ರಿಯಂ।
05113019c ಪ್ರಜಾಭಿಕಾಮಂ ಶಾಮ್ಯಂತಂ ಕುರ್ವಾಣಂ ತಪ ಉತ್ತಮಂ।।
ಅವನ ಮನಸ್ಸು ಇಕ್ಷ್ವಾಕು ರಾಜಸತ್ತಮ ಹರ್ಯಶ್ವನ ಕಡೆ ಹರಿಯಿತು. ಆ ಅಯೋಧ್ಯೆಯ ಮಹಾವೀರ್ಯ, ಚತುರಂಗಬಲಾನ್ವಿತ, ಕೋಶಧಾನ್ಯಬಲೋಪೇತ, ಪುರರ ಪ್ರಿಯ, ದ್ವಿಜರ ಪ್ರಿಯನು ಮಕ್ಕಳನ್ನು ಬಯಸಿ ಶಾಂತಿಯಿಂದ ಉತ್ತಮ ತಪಸ್ಸನ್ನು ನಡೆಸುತ್ತಿದ್ದನು.
05113020a ತಮುಪಾಗಮ್ಯ ವಿಪ್ರಃ ಸ ಹರ್ಯಶ್ವಂ ಗಾಲವೋಽಬ್ರವೀತ್।
05113020c ಕನ್ಯೇಯಂ ಮಮ ರಾಜೇಂದ್ರ ಪ್ರಸವೈಃ ಕುಲವರ್ಧಿನೀ।।
ಆ ಹರ್ಯಶ್ವನ ಬಳಿಹೋಗಿ ವಿಪ್ರ ಗಾಲವನು ಹೇಳಿದನು: “ರಾಜೇಂದ್ರ! ನನ್ನ ಈ ಕನ್ಯೆಯು ಪ್ರಸವಿಸಿ ಕುಲವನ್ನು ವೃದ್ಧಿಸುತ್ತಾಳೆ.
05113021a ಇಯಂ ಶುಲ್ಕೇನ ಭಾರ್ಯಾರ್ಥೇ ಹರ್ಯಶ್ವ ಪ್ರತಿಗೃಹ್ಯತಾಂ।
05113021c ಶುಲ್ಕಂ ತೇ ಕೀರ್ತಯಿಷ್ಯಾಮಿ ತಚ್ಚ್ರುತ್ವಾ ಸಂಪ್ರಧಾರ್ಯತಾಂ।।
ಹರ್ಯಶ್ವ! ಶುಲ್ಕವನ್ನಿತ್ತು ಇವಳನ್ನು ಪತ್ನಿಯನ್ನಾಗಿ ಸ್ವೀಕರಿಸು. ನಿನಗೆ ಶುಲ್ಕವೇನೆಂದು ಹೇಳುತ್ತೇನೆ. ಅದನ್ನು ಕೇಳಿ ನಿನಗೆ ಏನು ಮಾಡಬೇಕೆಂದು ನಿರ್ಧರಿಸು.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಲವಚರಿತೇ ತ್ರಯೋದಶಾಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಲವಚರಿತೆಯಲ್ಲಿ ನೂರಾಹದಿಮೂರನೆಯ ಅಧ್ಯಾಯವು.