112 ಗಾಲವಚರಿತಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಭಗವದ್ಯಾನ ಪರ್ವ

ಅಧ್ಯಾಯ 112

ಸಾರ

ಗರುಡ ಗಾಲವರಿಬ್ಬರೂ ರಾಜಾ ಯಯಾತಿಯಲ್ಲಿಗೆ ಬಂದು ದಾನವನ್ನು ಬೇಡಿದುದು (1-20).

05112001 ನಾರದ ಉವಾಚ।
05112001a ಅಥಾಹ ಗಾಲವಂ ದೀನಂ ಸುಪರ್ಣಃ ಪತತಾಂ ವರಃ।
05112001c ನಿರ್ಮಿತಂ ವಹ್ನಿನಾ ಭೂಮೌ ವಾಯುನಾ ವೈಧಿತಂ ತಥಾ।
05112001e ಯಸ್ಮಾದ್ಧಿರಣ್ಮಯಂ ಸರ್ವಂ ಹಿರಣ್ಯಂ ತೇನ ಚೋಚ್ಯತೇ।।

ನಾರದನು ಹೇಳಿದನು: “ದೀನನಾಗಿದ್ದ ಗಾಲವನಿಗೆ ಆಗ ಪಕ್ಷಿಗಳಲ್ಲಿಯೇ ಶ್ರೇಷ್ಠ ಸುಪರ್ಣನು ಹೇಳಿದನು: “ಭೂಮಿಯ ಒಡಲು ಅಗ್ನಿಯಿಂದ ನಿರ್ಮಿತವಾಗಿದೆ, ವಾಯುವಿನಿಂದ ವೃದ್ಧಿಗೊಂಡಿದೆ ಮತ್ತು ಎಲ್ಲವೂ ಹಿರಣ್ಮಯವಾದುದರಿಂದ ಅದಕ್ಕೆ ಹಿರಣ್ಯ ಎಂದೂ ಕರೆಯುತ್ತಾರೆ.

05112002a ಧತ್ತೇ ಧಾರಯತೇ ಚೇದಮೇತಸ್ಮಾತ್ಕಾರಣಾದ್ಧನಂ।
05112002c ತದೇತತ್ತ್ರಿಷು ಲೋಕೇಷು ಧನಂ ತಿಷ್ಠತಿ ಶಾಶ್ವತಂ।।

ಪೋಷಿಸುವುದರಿಂದ ಅದನ್ನು ಧನವೆಂದು ಕರೆಯುತ್ತಾರೆ. ಧನಕ್ಕಾಗಿಯೇ ಈ ಮೂರೂ ಲೋಕಗಳು ಶಾಶ್ವತವಾಗಿವೆ.

05112003a ನಿತ್ಯಂ ಪ್ರೋಷ್ಠಪದಾಭ್ಯಾಂ ಚ ಶುಕ್ರೇ ಧನಪತೌ ತಥಾ।
05112003c ಮನುಷ್ಯೇಭ್ಯಃ ಸಮಾದತ್ತೇ ಶುಕ್ರಶ್ಚಿತ್ತಾರ್ಜಿತಂ ಧನಂ।।

ಪೂರ್ವಾಭಾದ್ರ ಅಥವಾ ಉತ್ತರಾಭಾದ್ರ ನಕ್ಷತ್ರವು ಉದಯಿಸುತ್ತಿರುವ ಆ ಶುಕ್ರವಾರದಂದು ಅಗ್ನಿಯು ತನ್ನ ಚಿತ್ತದಿಂದ ಸೃಷ್ಟಿಸಿದ ಧನವನ್ನು ಧನಪತಿಗೆ ನೀಡಲು ಮನುಷ್ಯರಿಗೆ ಕೊಟ್ಟನು.

05112004a ಅಜೈಕಪಾದಹಿರ್ಬುಧ್ನ್ಯೈ ರಕ್ಷ್ಯತೇ ಧನದೇನ ಚ।
05112004c ಏವಂ ನ ಶಕ್ಯತೇ ಲಬ್ಧುಮಲಬ್ಧವ್ಯಂ ದ್ವಿಜರ್ಷಭ।।

ದ್ವಿಜರ್ಷಭ! ಭೂಮಿಯ ಒಡಲಲ್ಲಿರುವ ಧನವನ್ನು ಅಜೈಕಪಾದ, ಅಹಿರ್ಬುಧ್ನ ಮತ್ತು ಧನದರು ರಕ್ಷಿಸುತ್ತಾರೆ. ಪಡೆಯಲು ಅತಿ ಕಷ್ಟಕರವಾದ ಅದನ್ನು ಪಡೆಯಲಿಕ್ಕಾಗುವುದಿಲ್ಲ.

05112005a ಋತೇ ಚ ಧನಮಶ್ವಾನಾಂ ನಾವಾಪ್ತಿರ್ವಿದ್ಯತೇ ತವ।
05112005c ಅರ್ಥಂ ಯಾಚಾತ್ರ ರಾಜಾನಂ ಕಂ ಚಿದ್ರಾಜರ್ಷಿವಂಶಜಂ।
05112005e ಅಪೀಡ್ಯ ರಾಜಾ ಪೌರಾನ್ ಹಿ ಯೋ ನೌ ಕುರ್ಯಾತ್ಕೃತಾರ್ಥಿನೌ।।

ಧನವಿಲ್ಲದೇ ನಾವು ನಿನ್ನ ಕುದುರೆಗಳನ್ನು ಪಡೆಯುವ ವಿಧಾನವಿಲ್ಲ. ಆದುದರಿಂದ ನಾವು ಯಾರಾದರೂ ರಾಜರ್ಷಿಯ ವಂಶದಲ್ಲಿ ಹುಟ್ಟಿದ ರಾಜನಲ್ಲಿ ಯಾಚಿಸಬೇಕು. ಆ ರಾಜನು ತನ್ನ ಪೌರರನ್ನು ಪೀಡಿಸದೇ ಯಾಚಿಸುವ ನಮಗೆ ಏನಾದರೂ ಮಾಡಬಹುದು.

05112006a ಅಸ್ತಿ ಸೋಮಾನ್ವವಾಯೇ ಮೇ ಜಾತಃ ಕಶ್ಚಿನ್ನೃಪಃ ಸಖಾ।
05112006c ಅಭಿಗಚ್ಚಾವಹೇ ತಂ ವೈ ತಸ್ಯಾಸ್ತಿ ವಿಭವೋ ಭುವಿ।।

ಚಂದ್ರವಂಶದಲ್ಲಿ ನನ್ನ ಸಖನಾದ ನೃಪನೊಬ್ಬನು ಇದ್ದಾನೆ. ಭುವಿಯಲ್ಲಿಯೇ ಅತ್ಯಂತ ಶ್ರೀಮಂತನಾಗಿರುವ ಅವನಲ್ಲಿಗೆ ಹೋಗೋಣ.

05112007a ಯಯಾತಿರ್ನಾಮ ರಾಜರ್ಷಿರ್ನಾಹುಷಃ ಸತ್ಯವಿಕ್ರಮಃ।
05112007c ಸ ದಾಸ್ಯತಿ ಮಯಾ ಚೋಕ್ತೋ ಭವತಾ ಚಾರ್ಥಿತಃ ಸ್ವಯಂ।।

ಅವನ ಹೆಸರು ಯಯಾತಿ; ರಾಜರ್ಷಿ ನಾಹುಷ ಮತ್ತು ಸತ್ಯವಿಕ್ರಮಿ. ಸ್ವಯಂ ನೀನು ಕೇಳಿದರೆ, ನಾನು ಅದನ್ನು ಅನುಮೋದಿಸಿದರೆ ಅದನ್ನು ಅವನು ಕೊಡದೇ ಇರಲಾರ.

05112008a ವಿಭವಶ್ಚಾಸ್ಯ ಸುಮಹಾನಾಸೀದ್ಧನಪತೇರಿವ।
05112008c ಏವಂ ಸ ತು ಧನಂ ವಿದ್ವಾನ್ದಾನೇನೈವ ವ್ಯಶೋಧಯತ್।।

ಧನಪತಿಯಂತೆ ಅವನು ಅತಿದೊಡ್ಡ ಶ್ರೀಮಂತ. ಹೀಗೆ ಧನವನ್ನು ಪಡೆದು ನಿನ್ನ ಗುರುವಿಗೆ ಅದನ್ನು ಕೊಟ್ಟು ಋಣವನ್ನು ತೀರಿಸಿಕೋ.”

05112009a ತಥಾ ತೌ ಕಥಯಂತೌ ಚ ಚಿಂತಯಂತೌ ಚ ಯತ್ಕ್ಷಮಂ।
05112009c ಪ್ರತಿಷ್ಠಾನೇ ನರಪತಿಂ ಯಯಾತಿಂ ಪ್ರತ್ಯುಪಸ್ಥಿತೌ।।

ಈ ರೀತಿಯಾಗಿ ಅವರಿಬ್ಬರೂ ಮಾತನಾಡಿಕೊಳ್ಳುತ್ತಾ, ಒಳ್ಳೆಯದನ್ನು ಮಾಡಲು ಯೋಚಿಸುತ್ತಾ ಪ್ರತಿಷ್ಠಾನದಲ್ಲಿ ನರಪತಿ ಯಯಾತಿಯ ಉಪಸ್ಥಿತಿಯಲ್ಲಿ ಬಂದರು.

05112010a ಪ್ರತಿಗೃಹ್ಯ ಚ ಸತ್ಕಾರಮರ್ಘಾದಿಂ ಭೋಜನಂ ವರಂ।
05112010c ಪೃಷ್ಟಶ್ಚಾಗಮನೇ ಹೇತುಮುವಾಚ ವಿನತಾಸುತಃ।।

ಅರ್ಘ್ಯವೇ ಮೊದಲಾದ ಸತ್ಕಾರಗಳನ್ನೂ, ಶ್ರೇಷ್ಠ ಭೋಜನವನ್ನೂ ಸ್ವೀಕರಿಸಿ, ಬಂದ ಕಾರಣವನ್ನು ಕೇಳಲು, ವಿನತಾಸುತನು ಹೇಳಿದನು:

05112011a ಅಯಂ ಮೇ ನಾಹುಷ ಸಖಾ ಗಾಲವಸ್ತಪಸೋ ನಿಧಿಃ।
05112011c ವಿಶ್ವಾಮಿತ್ರಸ್ಯ ಶಿಷ್ಯೋಽಭೂದ್ವರ್ಷಾಣ್ಯಯುತಶೋ ನೃಪ।।

“ನಾಹುಷ! ನೃಪ! ಈ ತಪಸ್ಸಿನ ನಿಧಿ ಗಾಲವನು ನನ್ನ ಸಖ. ಇವನು ಸಹಸ್ರವರ್ಷಗಳು ವಿಶ್ವಾಮಿತ್ರನ ಶಿಷ್ಯನಾಗಿದ್ದನು.

05112012a ಸೋಽಯಂ ತೇನಾಭ್ಯನುಜ್ಞಾತ ಉಪಕಾರೇಪ್ಸಯಾ ದ್ವಿಜಃ।
05112012c ತಮಾಹ ಭಗವಾನ್ಕಾಂ ತೇ ದದಾನಿ ಗುರುದಕ್ಷಿಣಾಂ।।

ಅವನಿಂದ ಹೋಗಲು ಅನುಜ್ಞಾತನಾದ ಈ ದ್ವಿಜನು ಉಪಕಾರ ಮಾಡಲು ಬಯಸಿ ಅವನಿಗೆ ಕೇಳಿದನು – “ಭಗವನ್! ನಿನಗೆ ಗುರುದಕ್ಷಿಣೆಯನ್ನಾಗಿ ಏನು ಕೊಡಲಿ?”

05112013a ಅಸಕೃತ್ತೇನ ಚೋಕ್ತೇನ ಕಿಂ ಚಿದಾಗತಮನ್ಯುನಾ।
05112013c ಅಯಮುಕ್ತಃ ಪ್ರಯಚ್ಚೇತಿ ಜಾನತಾ ವಿಭವಂ ಲಘು।।

ಇವನ ಸಂಪತ್ತು ಕಡಿಮೆಯಿದೆ ಎನ್ನುವುದನ್ನ್ನು ತಿಳಿದಿದ್ದ ಅವನು ಎನನ್ನೂ ಕೇಳಲಿಲ್ಲ. ಆದರೆ ಪುನಃ ಪುನಃ ಇವನಿಂದ ಕೇಳಲ್ಪಟ್ಟ ಅವನು ಸ್ವಲ್ಪ ಸಿಟ್ಟಿಗೆದ್ದು ಕೇಳಿದನು:

05112014a ಏಕತಃಶ್ಯ್ಯಾಮಕರ್ಣಾನಾಂ ಶುಭ್ರಾಣಾಂ ಶುದ್ಧಜನ್ಮನಾಂ।
05112014c ಅಷ್ಟೌ ಶತಾನಿ ಮೇ ದೇಹಿ ಹಯಾನಾಂ ಚಂದ್ರವರ್ಚಸಾಂ।।

“ಒಂದೇ ಕಿವಿಯು ಕಪ್ಪಾಗಿರುವ, ಚಂದ್ರವರ್ಚಸ, ಶುಭ್ರ ಬಣ್ಣದ, ಶುದ್ಧ ಜನ್ಮದ ಎಂಟುನೂರು ಕುದುರೆಗಳನ್ನು ನನಗೆ ಕೊಡು.

05112015a ಗುರ್ವರ್ಥೋ ದೀಯತಾಮೇಷ ಯದಿ ಗಾಲವ ಮನ್ಯಸೇ।
05112015c ಇತ್ಯೇವಮಾಹ ಸಕ್ರೋಧೋ ವಿಶ್ವಾಮಿತ್ರಸ್ತಪೋಧನಃ।।

ಗಾಲವ! ಗುರುವಿಗೆ ಕೊಡಬೇಕೆಂದು ಬಯಸಿದರೆ ಇದನ್ನು ಕೊಡಬೇಕು!” ಎಂದು ಕ್ರೋಧನಾದ ತಪೋಧನ ವಿಶ್ವಾಮಿತ್ರನು ಇವನಿಗೆ ಹೇಳಿದನು.

05112016a ಸೋಽಯಂ ಶೋಕೇನ ಮಹತಾ ತಪ್ಯಮಾನೋ ದ್ವಿಜರ್ಷಭಃ।
05112016c ಅಶಕ್ತಃ ಪ್ರತಿಕರ್ತುಂ ತದ್ಭವಂತಂ ಶರಣಂ ಗತಃ।।

ಅದನ್ನು ಮಾಡಲು ಅಶಕ್ತನಾಗಿ, ಮಹಾ ಶೋಕದಿಂದ ಪರಿತಪಿಸುತ್ತಿರುವ ಈ ದ್ವಿಜರ್ಷಭನು ನಿನ್ನ ಶರಣು ಬಂದಿದ್ದಾನೆ.

05112017a ಪ್ರತಿಗೃಹ್ಯ ನರವ್ಯಾಘ್ರ ತ್ವತ್ತೋ ಭಿಕ್ಷಾಂ ಗತವ್ಯಥಃ।
05112017c ಕೃತ್ವಾಪವರ್ಗಂ ಗುರವೇ ಚರಿಷ್ಯತಿ ಮಹತ್ತಪಃ।।

ನರವ್ಯಾಘ್ರ! ನಿನ್ನಿಂದ ಭಿಕ್ಷವನ್ನು ಪಡೆದು ಗತವ್ಯಥನಾಗಿ ಗುರುವಿನ ಋಣವನ್ನು ತೀರಿಸಿ ಇವನು ಮಹಾತಪಸ್ಸನ್ನು ಆಚರಿಸುತ್ತಾನೆ.

05112018a ತಪಸಃ ಸಂವಿಭಾಗೇನ ಭವಂತಮಪಿ ಯೋಕ್ಷ್ಯತೇ।
05112018c ಸ್ವೇನ ರಾಜರ್ಷಿತಪಸಾ ಪೂರ್ಣಂ ತ್ವಾಂ ಪೂರಯಿಷ್ಯತಿ।।

ಆ ತಪಸ್ಸಿನ ಒಳ್ಳೆಯ ಭಾಗವನ್ನು ನಿನಗೆ ಕೂಡ ಕೊಡುತ್ತಾನೆ. ಅದರಿಂದ ನಿನ್ನ ಸ್ವಂತ ರಾಜರ್ಷಿ ತಪಸ್ಸೂ ಪೂರ್ಣಗೊಳ್ಳುತ್ತದೆ.

05112019a ಯಾವಂತಿ ರೋಮಾಣಿ ಹಯೇ ಭವಂತಿ ಹಿ ನರೇಶ್ವರ।
05112019c ತಾವತೋ ವಾಜಿದಾ ಲೋಕಾನ್ಪ್ರಾಪ್ನುವಂತಿ ಮಹೀಪತೇ।।

ನರೇಶ್ವರ! ಮಹೀಪತೇ! ಕುದುರೆಯಲ್ಲಿ ಎಷ್ಟು ರೋಮಗಳಿವೆಯೋ ಅಷ್ಟು ಪುಣ್ಯಲೋಕಗಳು ಕುದುರೆಯನ್ನು ದಾನಮಾಡಿದವನಿಗೆ ದೊರೆಯುತ್ತದೆ.

05112020a ಪಾತ್ರಂ ಪ್ರತಿಗ್ರಹಸ್ಯಾಯಂ ದಾತುಂ ಪಾತ್ರಂ ತಥಾ ಭವಾನ್।
05112020c ಶಂಖೇ ಕ್ಷೀರಮಿವಾಸಕ್ತಂ ಭವತ್ವೇತತ್ತಥೋಪಮಂ।।

ನೀನು ದಾನವನ್ನು ನೀಡಲು ಎಷ್ಟು ಪಾತ್ರನೋ ದಾನವನ್ನು ಸ್ವೀಕರಿಸಲೂ ಕೂಡ ಇವನು ಪಾತ್ರನು. ಆದುದರಿಂದ ಶಂಖದಲ್ಲಿ ಹಾಲನ್ನು ಹಾಕಿದಂತೆ ಈ ದಾನವು ನಡೆಯಲಿ.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಲವಚರಿತೇ ದ್ವಾದಶಾಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಲವಚರಿತೆಯಲ್ಲಿ ನೂರಾಹನ್ನೆರಡನೆಯ ಅಧ್ಯಾಯವು.