111 ಗಾಲವಚರಿತಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಭಗವದ್ಯಾನ ಪರ್ವ

ಅಧ್ಯಾಯ 111

ಸಾರ

ಋಷಭ ಪರ್ವತದಲ್ಲಿದ್ದ ಬ್ರಾಹ್ಮಿಣಿ ಶಾಂಡಿಲಿಯು ನೀಡಿದ ಆಹಾರವನ್ನು ಸೇವಿಸಿ ವಿಶ್ರಾಂತಿಪಡೆಯುತ್ತಿರಲು, ಅವಳನ್ನು ಎತ್ತಿಕೊಂಡು ಹೋಗಲು ಯೋಚಿಸಿದ ಗರುಡನು ಅವಳ ಶಾಪದಿಂದ ರೆಕ್ಕೆಗಳನ್ನು ಕಳೆದುಕೊಂಡಿದುದು (1-11). ಅವಳಿಂದ ಕ್ಷಮೆಯನ್ನು ಮತ್ತು ರೆಕ್ಕೆಗಳನ್ನು ಪಡೆದು ಹಿಂದಿರುಗುವಾಗ ವಿಶ್ವಾಮಿತ್ರನು ಗಾಲವನಿಗೆ ಗುರುದಕ್ಷಿಣೆಯ ಕುರಿತು ನೆನಪಿಸಿಕೊಡುವುದು (12-23).

05111001 ನಾರದ ಉವಾಚ।
05111001a ಋಷಭಸ್ಯ ತತಃ ಶೃಂಗೇ ನಿಪತ್ಯ ದ್ವಿಜಪಕ್ಷಿಣೌ।
05111001c ಶಾಂಡಿಲೀಂ ಬ್ರಾಹ್ಮಣೀಂ ತತ್ರ ದದೃಶಾತೇ ತಪೋನ್ವಿತಾಂ।।

ನಾರದನು ಹೇಳಿದನು: “ದ್ವಿಜ-ಪಕ್ಷಿಗಳಿಬ್ಬರೂ ಋಷಭದ ಶಿಖರದ ಮೇಲೆ ಇಳಿದು ಅಲ್ಲಿ ತಪೋನ್ವಿತೆ ಬ್ರಾಹ್ಮಣೀ ಶಾಂಡಲಿಯನ್ನು ಕಂಡರು.

05111002a ಅಭಿವಾದ್ಯ ಸುಪರ್ಣಸ್ತು ಗಾಲವಶ್ಚಾಭಿಪೂಜ್ಯ ತಾಂ।
05111002c ತಯಾ ಚ ಸ್ವಾಗತೇನೋಕ್ತೌ ವಿಷ್ಟರೇ ಸಮ್ನಿಷೀದತುಃ।।

ಸುಪರ್ಣನು ಅಭಿವಂದಿಸಿದನು. ಗಾಲವನೂ ಅವಳನ್ನು ಪೂಜಿಸಿದನು. ಅವಳೂ ಕೂಡ “ಸ್ವಾಗತ!” ಎನ್ನಲು ಹರಡಿದ್ದ ದರ್ಬೆಗಳ ಮೇಲೆ ಅವರು ಕುಳಿತುಕೊಂಡರು.

05111003a ಸಿದ್ಧಮನ್ನಂ ತಯಾ ಕ್ಷಿಪ್ರಂ ಬಲಿಮಂತ್ರೋಪಬೃಂಹಿತಂ।
05111003c ಭುಕ್ತ್ವಾ ತೃಪ್ತಾವುಭೌ ಭೂಮೌ ಸುಪ್ತೌ ತಾವನ್ನಮೋಹಿತೌ।।

ಬೇಗನೇ ಬಲಿ-ಮಂತ್ರಗಳಿಂದ ಕೂಡಿಸಿ ಸಿದ್ಧಪಡಿಸಲ್ಪಟ್ಟ ಅನ್ನವನ್ನು ಊಟಮಾಡಿ ಅವರಿಬ್ಬರೂ ಊಟದಿಂದ ಮೋಹಿತರಾಗಿ ಭೂಮಿಯ ಮೇಲೆ ಮಲಗಿಕೊಂಡರು.

05111004a ಮುಹೂರ್ತಾತ್ಪ್ರತಿಬುದ್ಧಸ್ತು ಸುಪರ್ಣೋ ಗಮನೇಪ್ಸಯಾ।
05111004c ಅಥ ಭ್ರಷ್ಟತನೂಜಾಂಗಮಾತ್ಮಾನಂ ದದೃಶೇ ಖಗಃ।।

ಸ್ವಲ್ಪವೇ ಸಮಯದಲ್ಲಿ ಎಚ್ಚರಗೊಂಡ ಸುಪರ್ಣನು ಹೊರಡಲು ಬಯಸಿದನು. ಆಗ ಆ ಪಕ್ಷಿಯು ತನ್ನ ರೆಕ್ಕೆಗಳು ದೇಹದಿಂದ ಕಳಚಿ ಬಿದ್ದಿರುವುದನ್ನು ನೋಡಿದನು.

05111005a ಮಾಂಸಪಿಂಡೋಪಮೋಽಭೂತ್ಸ ಮುಖಪಾದಾನ್ವಿತಃ ಖಗಃ।
05111005c ಗಾಲವಸ್ತಂ ತಥಾ ದೃಷ್ಟ್ವಾ ವಿಷಣ್ಣಃ ಪರ್ಯಪೃಚ್ಚತ।।

ಆ ಖಗನು ತಲೆ ಕಾಲುಗಳನ್ನುಳ್ಳ ಕೇವಲ ಒಂದು ಮಾಂಸದ ಮುದ್ದೆಯಂತೆ ಕಂಡನು. ಅವನನ್ನು ನೋಡಿದ ಗಾಲವನು ವಿಷಣ್ಣನಾಗಿ ಕೇಳಿದನು:

05111006a ಕಿಮಿದಂ ಭವತಾ ಪ್ರಾಪ್ತಮಿಹಾಗಮನಜಂ ಫಲಂ।
05111006c ವಾಸೋಽಯಮಿಹ ಕಾಲಂ ತು ಕಿಯಂತಂ ನೌ ಭವಿಷ್ಯತಿ।।

“ನಿನಗೇನಾಯಿತು? ಇಲ್ಲಿಗೆ ಬಂದಿದುದರ ಫಲವೇ ಇದು? ಇನ್ನು ಎಷ್ಟು ಕಾಲ ನಾವು ಇಲ್ಲಿ ಇರಬೇಕು?

05111007a ಕಿಂ ನು ತೇ ಮನಸಾ ಧ್ಯಾತಮಶುಭಂ ಧರ್ಮದೂಷಣಂ।
05111007c ನ ಹ್ಯಯಂ ಭವತಃ ಸ್ವಲ್ಪೋ ವ್ಯಭಿಚಾರೋ ಭವಿಷ್ಯತಿ।।

ನೀನು ಏನಾದರೂ ಅಶುಭವೂ ಧರ್ಮದೂಷಣವೂ ಆಗಿರುವುದನ್ನು ಮನಸ್ಸಿನಲ್ಲಿ ಯೋಚಿಸಿದೆಯೇನು? ನಿನ್ನಿಂದ ಸ್ವಲ್ಪವೂ ವ್ಯಭಿಚಾರವಾಗಿರಲಿಕ್ಕಿಲ್ಲ ತಾನೇ?”

05111008a ಸುಪರ್ಣೋಽಥಾಬ್ರವೀದ್ವಿಪ್ರಂ ಪ್ರಧ್ಯಾತಂ ವೈ ಮಯಾ ದ್ವಿಜ।
05111008c ಇಮಾಂ ಸಿದ್ಧಾಮಿತೋ ನೇತುಂ ತತ್ರ ಯತ್ರ ಪ್ರಜಾಪತಿಃ।।
05111009a ಯತ್ರ ದೇವೋ ಮಹಾದೇವೋ ಯತ್ರ ವಿಷ್ಣುಃ ಸನಾತನಃ।
05111009c ಯತ್ರ ಧರ್ಮಶ್ಚ ಯಜ್ಞಾಶ್ಚ ತತ್ರೇಯಂ ನಿವಸೇದಿತಿ।।

ಆಗ ಸುಪರ್ಣನು ವಿಪ್ರನಿಗೆ ಹೇಳಿದನು: “ದ್ವಿಜ! ಈ ಸಿದ್ಧಳನ್ನು ಇಲ್ಲಿಂದ ಎಲ್ಲಿ ಪ್ರಜಾಪತಿಯಿರುವನೋ, ಎಲ್ಲಿ ಮಹಾದೇವನಿರುವನೋ, ಎಲ್ಲಿ ಸನಾತನ ವಿಷ್ಣುವಿರುವನೋ, ಎಲ್ಲಿ ಧರ್ಮ ಮತ್ತು ಯಜ್ಞಗಳು ಇವೆಯೋ ಅಲ್ಲಿಗೆ ಕೊಂಡೊಯ್ಯಬೇಕೆಂಬ ಯೋಚನೆಯೊಂದು ನನಗೆ ಬಂದಿತ್ತು.

05111010a ಸೋಽಹಂ ಭಗವತೀಂ ಯಾಚೇ ಪ್ರಣತಃ ಪ್ರಿಯಕಾಮ್ಯಯಾ।
05111010c ಮಯೈತನ್ನಾಮ ಪ್ರಧ್ಯಾತಂ ಮನಸಾ ಶೋಚತಾ ಕಿಲ।।
05111011a ತದೇವಂ ಬಹುಮಾನಾತ್ತೇ ಮಯೇಹಾನೀಪ್ಸಿತಂ ಕೃತಂ।
05111011c ಸುಕೃತಂ ದುಷ್ಕೃತಂ ವಾ ತ್ವಂ ಮಾಹಾತ್ಮ್ಯಾತ್ಕ್ಷಂತುಮರ್ಹಸಿ।।

ನಮಸ್ಕರಿಸಿ ಭಗವತಿಯಲ್ಲಿ ನಾನು ಬೇಡಿಕೊಳ್ಳುತ್ತೇನೆ. “ಪ್ರಿಯವಾದುದನ್ನು ಮಾಡಬೇಕೆಂದು ನಾನು ನಿನ್ನನ್ನು ಕೊಂಡೊಯ್ಯಲು ಮನಸ್ಸಿನಲ್ಲಿ ಯೋಚಿಸಿದೆನಲ್ಲ! ಅದು ನಿನಗೆ ಬಹುಮಾನವನ್ನು ಕೊಡಬೇಕೆಂಬ ನನ್ನ ಬಯಕೆಯು ನಡೆಸಿತು. ಅದು ಸುಕೃತವಾಗಿರಲಿ ದುಷ್ಕೃತವಾಗಿರಲಿ ದೊಡ್ಡ ಮನಸ್ಸು ಮಾಡಿ ಕ್ಷಮಿಸಬೇಕು.”

05111012a ಸಾ ತೌ ತದಾಬ್ರವೀತ್ತುಷ್ಟಾ ಪತಗೇಂದ್ರದ್ವಿಜರ್ಷಭೌ।
05111012c ನ ಭೇತವ್ಯಂ ಸುಪರ್ಣೋಽಸಿ ಸುಪರ್ಣ ತ್ಯಜ ಸಂಭ್ರಮಂ।।

ಆಗ ಅವಳು ಆ ಪತಗೇಂದ್ರ ದ್ವಿಜರ್ಷಭರಿಬ್ಬರಿಗೂ ಹೇಳಿದಳು: “ಸುಪರ್ಣ! ಹೆದರಬೇಡ. ಸುಪರ್ಣನೆಂಬ ಸಂಭ್ರಮವನ್ನು ತೊರೆ.

05111013a ನಿಂದಿತಾಸ್ಮಿ ತ್ವಯಾ ವತ್ಸ ನ ಚ ನಿಂದಾಂ ಕ್ಷಮಾಮ್ಯಹಂ।
05111013c ಲೋಕೇಭ್ಯಃ ಸ ಪರಿಭ್ರಶ್ಯೇದ್ಯೋ ಮಾಂ ನಿಂದೇತ ಪಾಪಕೃತ್।।

ವತ್ಸ! ನಾನು ನಿನ್ನಿಂದ ನಿಂದಿತಳಾಗಿದ್ದೇನೆ. ನಿಂದೆಯನ್ನು ನಾನು ಕ್ಷಮಿಸುವುದಿಲ್ಲ. ನನ್ನನ್ನು ನಿಂದಿಸುವ ಪಾಪವನ್ನು ಮಾಡಿದವನು ಲೋಕಗಳಿಂದ ಪ್ರರಿಭ್ರಷ್ಟನಾಗುತ್ತಾನೆ.

05111014a ಹೀನಯಾಲಕ್ಷಣೈಃ ಸರ್ವೈಸ್ತಥಾನಿಂದಿತಯಾ ಮಯಾ।
05111014c ಆಚಾರಂ ಪ್ರತಿಗೃಹ್ಣಂತ್ಯಾ ಸಿದ್ಧಿಃ ಪ್ರಾಪ್ತೇಯಮುತ್ತಮಾ।।

ಎಲ್ಲ ಅಲಕ್ಷಣಗಳನ್ನು ಕಳೆದುಕೊಂಡು ಅನಿಂದಿತೆಯಾಗಿರುವ ನಾನು ಆಚಾರವನ್ನು ನನ್ನದಾಗಿಸಿಕೊಂಡು ಅಂತ್ಯದಲ್ಲಿ ಉತ್ತಮ ಸಿದ್ಧಿಯನ್ನು ಪಡೆದಿರುತ್ತೇನೆ.

05111015a ಆಚಾರಾಲ್ಲಭತೇ ಧರ್ಮಮಾಚಾರಾಲ್ಲಭತೇ ಧನಂ।
05111015c ಆಚಾರಾಚ್ಚ್ರಿಯಮಾಪ್ನೋತಿ ಆಚಾರೋ ಹಂತ್ಯಲಕ್ಷಣಂ।।

ಆಚಾರದಿಂದ ಧರ್ಮವು ಲಭಿಸುತ್ತದೆ. ಧರ್ಮಾಚರಣೆಯಿಂದ ಧನವು ಲಭಿಸುತ್ತದೆ. ಆಚಾರದಿಂದ ಶ್ರೀಯು ದೊರೆಯುತ್ತದೆ. ಆಚಾರದಿಂದ ಅಲಕ್ಷಣವು ನಾಶವಾಗುತ್ತದೆ.

05111016a ತದಾಯುಷ್ಮನ್ಖಗಪತೇ ಯಥೇಷ್ಟಂ ಗಮ್ಯತಾಮಿತಃ।
05111016c ನ ಚ ತೇ ಗರ್ಹಣೀಯಾಪಿ ಗರ್ಹಿತವ್ಯಾಃ ಸ್ತ್ರಿಯಃ ಕ್ವ ಚಿತ್।।

ಆಯುಷ್ಮನ್! ಖಗಪತೇ! ಇನ್ನು ನಿನಗಿಷ್ಟವಾದಲ್ಲಿಗೆ ಹೋಗಬಹುದು. ಕೀಳಾಗಿ ಕಾಣಲು ಅರ್ಹಳಾದರೂ ಇನ್ನುಮುಂದೆ ಯಾವ ಸ್ತ್ರೀಯನ್ನೂ ಕೀಳಾಗಿ ಕಾಣಬೇಡ!

05111017a ಭವಿತಾಸಿ ಯಥಾಪೂರ್ವಂ ಬಲವೀರ್ಯಸಮನ್ವಿತಃ।
05111017c ಬಭೂವತುಸ್ತತಸ್ತಸ್ಯ ಪಕ್ಷೌ ದ್ರವಿಣವತ್ತರೌ।।

ಮೊದಲಿನಂತೆಯೇ ನೀನು ಬಲವೀರ್ಯಸಮನ್ವಿತನಾಗುತ್ತೀಯೆ.” ಆಗ ಅವನ ರೆಕ್ಕೆಗಳೆರಡೂ ಮೊದಲಿಗಿಂತಲೂ ದೊಡ್ಡದಾಗಿ ಬೆಳೆದವು.

05111018a ಅನುಜ್ಞಾತಶ್ಚ ಶಾಂಡಿಲ್ಯಾ ಯಥಾಗತಮುಪಾಗಮತ್।
05111018c ನೈವ ಚಾಸಾದಯಾಮಾಸ ತಥಾರೂಪಾಂಸ್ತುರಂಗಮಾನ್।।

ಶಾಂಡಿಲ್ಯಳ ಅನುಮತಿಯನ್ನು ಪಡೆದು ಅವನು ಬಂದದಾರಿಯುಲ್ಲಿ ಹಿಂದಿರುಗಿದನು.

05111019a ವಿಶ್ವಾಮಿತ್ರೋಽಥ ತಂ ದೃಷ್ಟ್ವಾ ಗಾಲವಂ ಚಾಧ್ವನಿ ಸ್ಥಿತಂ।
05111019c ಉವಾಚ ವದತಾಂ ಶ್ರೇಷ್ಠೋ ವೈನತೇಯಸ್ಯ ಸನ್ನಿಧೌ।।

ದಾರಿಯಲ್ಲಿ ವಿಶ್ವಾಮಿತ್ರನು ಗಾಲವನನ್ನು ಕಂಡು ನಿಲ್ಲಿಸಿದನು. ಆ ಮಾತನಾಡುವವರಲ್ಲಿ ಶ್ರೇಷ್ಠನು ವೈನತೇಯನ ಸನ್ನಿಧಿಯಲ್ಲಿ ಹೇಳಿದನು:

05111020a ಯಸ್ತ್ವಯಾ ಸ್ವಯಮೇವಾರ್ಥಃ ಪ್ರತಿಜ್ಞಾತೋ ಮಮ ದ್ವಿಜ।
05111020c ತಸ್ಯ ಕಾಲೋಽಪವರ್ಗಸ್ಯ ಯಥಾ ವಾ ಮನ್ಯತೇ ಭವಾನ್।।

“ದ್ವಿಜ! ನನಗಾಗಿ ನೀನೇ ತೆಗೆದುಕೊಂಡಿರುವ ಪ್ರತಿಜ್ಞೆಯನ್ನು ಹಿಂದೆ ತೆಗೆದುಕೊಳ್ಳುವ ಕಾಲವು ಬಂದಂತಿದೆ. ಅಥವಾ ನಿನಗೇನಾದರೂ ಬೇರೆ ಯೋಚನೆಯಿದೆಯೇ?

05111021a ಪ್ರತೀಕ್ಷಿಷ್ಯಾಮ್ಯಹಂ ಕಾಲಮೇತಾವಂತಂ ತಥಾ ಪರಂ।
05111021c ಯಥಾ ಸಂಸಿಧ್ಯತೇ ವಿಪ್ರ ಸ ಮಾರ್ಗಸ್ತು ನಿಶಮ್ಯತಾಂ।।

ಅದನ್ನು ಪೂರೈಸಲು ಎಷ್ಟು ಸಮಯ ಬೇಕೋ ಅಷ್ಟು ಕಾಲ ನಾನು ಕಾಯುತ್ತೇನೆ. ವಿಪ್ರ! ಅದನ್ನು ಪೂರೈಸುವ ಮಾರ್ಗವನ್ನು ಸಿದ್ಧಪಡಿಸು!”

05111022a ಸುಪರ್ಣೋಽಥಾಬ್ರವೀದ್ದೀನಂ ಗಾಲವಂ ಭೃಶದುಃಖಿತಂ।
05111022c ಪ್ರತ್ಯಕ್ಷಂ ಖಲ್ವಿದಾನೀಂ ಮೇ ವಿಶ್ವಾಮಿತ್ರೋ ಯದುಕ್ತವಾನ್।।

ತುಂಬಾ ದುಃಖಿತನಾಗಿ ದೀನನಾಗಿರುವ ಗಾಲವನಿಗೆ ಸುಪರ್ಣನು ಹೇಳಿದನು: “ವಿಶ್ವಾಮಿತ್ರನು ಏನು ಹೇಳಿದನೆನ್ನುವುದನ್ನು ನಾನು ಪ್ರತ್ಯಕ್ಷವಾಗಿ ಕೇಳಿದೆ.

05111023a ತದಾಗಚ್ಚ ದ್ವಿಜಶ್ರೇಷ್ಠ ಮಂತ್ರಯಿಷ್ಯಾವ ಗಾಲವ।
05111023c ನಾದತ್ತ್ವಾ ಗುರವೇ ಶಕ್ಯಂ ಕೃತ್ಸ್ನಮರ್ಥಂ ತ್ವಯಾಸಿತುಂ।।

ದ್ವಿಜಶ್ರೇಷ್ಠ! ಗಾಲವ! ಹೋಗಿ ಒಟ್ಟಿಗೇ ಯೋಚಿಸೋಣ. ನಿನ್ನ ಗುರುವಿಗೆ ಕೊಡಬೇಕಾದ್ದುದನ್ನು ಸಂಪೂರ್ಣವಾಗಿ ಕೊಡದೇ ನೀನು ಕುಳಿತುಕೊಳ್ಳಲಿಕ್ಕಾಗುವುದಿಲ್ಲ.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಲವಚರಿತೇ ಏಕದಶಾಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಲವಚರಿತೆಯಲ್ಲಿ ನೂರಾಹನ್ನೊಂದನೆಯ ಅಧ್ಯಾಯವು.