ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಭಗವದ್ಯಾನ ಪರ್ವ
ಅಧ್ಯಾಯ 110
ಸಾರ
ಎಲ್ಲಿಗೆ ಹೋಗಲು ಬಯಸುವೆಯೆಂದು ಗರುಡನು ಗಾಲವನಿಗೆ ಕೇಳಲು, ಅವನು ಪೂರ್ವದಿಕ್ಕಿಗೆ ಕೊಂಡೊಯ್ಯಿ ಎಂದು ಹೇಳುವುದು (1-4). ಗರುಡನನ್ನೇರಿ ಹೋಗುತ್ತಿರುವಾಗ ಅವನ ವೇಗಕ್ಕೆ ಭಯಪಟ್ಟ ಗಾಲವನು ತಾನು ಕೊಡಬೇಕಾಗಿದ್ದ ಗುರುದಕ್ಷಿಣೆಯ ಕುರಿತೂ, ತಾನು ಯೋಚಿಸುತ್ತಿದ್ದ ಆತ್ಮಹತ್ಯೆಯ ಕುರಿತೂ ಹೇಳಲು ಗರುಡನು ಕುದುರೆಗಳನ್ನು ಪಡೆಯುವ ಮೊದಲು ಋಷಭ ಪರ್ವತದ ಮೇಲೆ ಇಳಿದು ವಿಶ್ರಮಿಸೋಣ ಎಂದುದು (5-22).
05110001 ಗಾಲವ ಉವಾಚ।
05110001a ಗರುತ್ಮನ್ಭುಜಗೇಂದ್ರಾರೇ ಸುಪರ್ಣ ವಿನತಾತ್ಮಜ।
05110001c ನಯ ಮಾಂ ತಾರ್ಕ್ಷ್ಯ ಪೂರ್ವೇಣ ಯತ್ರ ಧರ್ಮಸ್ಯ ಚಕ್ಷುಷೀ।।
ಗಾಲವನು ಹೇಳಿದನು: “ಗುರುತ್ಮನ್! ಭುಜಗೇಂದ್ರಾರೇ! ಸುಪರ್ಣ! ವಿನತಾತ್ಮಜ! ತಾರ್ಕ್ಷ್ಯ! ಎಲ್ಲಿ ಧರ್ಮನ ಎರಡು ಕಣ್ಣುಗಳು ಮೊದಲು ತೆರೆದವೋ ಆ ಪೂರ್ವಕ್ಕೆ ನನ್ನನ್ನು ಕರೆದುಕೊಂಡು ಹೋಗು!
05110002a ಪೂರ್ವಮೇತಾಂ ದಿಶಂ ಗಚ್ಚ ಯಾ ಪೂರ್ವಂ ಪರಿಕೀರ್ತಿತಾ।
05110002c ದೈವತಾನಾಂ ಹಿ ಸಾಂನ್ನಿಧ್ಯಮತ್ರ ಕೀರ್ತಿತವಾನಸಿ।।
ನೀನು ಮೊದಲು ವರ್ಣಿಸಿದ ಪೂರ್ವದಿಕ್ಕಿಗೆ ಹೋಗು. ಅಲ್ಲಿ ದೈವತರ ಸಾನ್ನಿಧ್ಯವಿದೆಯೆಂದು ನೀನು ಹೇಳಿದ್ದೀಯೆ.
05110003a ಅತ್ರ ಸತ್ಯಂ ಚ ಧರ್ಮಶ್ಚ ತ್ವಯಾ ಸಮ್ಯಕ್ಪ್ರಕೀರ್ತಿತಃ।
05110003c ಇಚ್ಚೇಯಂ ತು ಸಮಾಗಂತುಂ ಸಮಸ್ತೈರ್ದೈವತೈರಹಂ।
05110003e ಭೂಯಶ್ಚ ತಾನ್ಸುರಾನ್ದ್ರಷ್ಟುಮಿಚ್ಚೇಯಮರುಣಾನುಜ।।
ಅಲ್ಲಿ ಸತ್ಯ-ಧರ್ಮಗಳು ನೆಲಸಿವೆಯೆಂದು ನೀನು ಹೇಳಿದ್ದೀಯೆ. ನಾನು ಸಮಸ್ತ ದೇವತೆಗಳನ್ನೂ ಭೇಟಿಯಾಗಲು ಬಯಸುತ್ತೇನೆ. ಅರುಣಾನುಜ! ಆ ಸುರರನ್ನೂ ನೋಡಲು ಬಯಸುತ್ತೇನೆ.””
05110004 ನಾರದ ಉವಾಚ।
05110004a ತಮಾಹ ವಿನತಾಸೂನುರಾರೋಹಸ್ವೇತಿ ವೈ ದ್ವಿಜಂ।
05110004c ಆರುರೋಹಾಥ ಸ ಮುನಿರ್ಗರುಡಂ ಗಾಲವಸ್ತದಾ।।
ನಾರದನು ಹೇಳಿದನು: “ವಿನತಾಸೂನುವು “ಏರು” ಎಂದು ದ್ವಿಜನಿಗೆ ಹೇಳಿದನು. ಆಗ ಮುನಿ ಗಾಲವನು ಗರುಡನನ್ನೇರಿದನು.
05110005 ಗಾಲವ ಉವಾಚ।
05110005a ಕ್ರಮಮಾಣಸ್ಯ ತೇ ರೂಪಂ ದೃಶ್ಯತೇ ಪನ್ನಗಾಶನ।
05110005c ಭಾಸ್ಕರಸ್ಯೇವ ಪೂರ್ವಾಹ್ಣೇ ಸಹಸ್ರಾಂಶೋರ್ವಿವಸ್ವತಃ।।
ಗಾಲವನು ಹೇಳಿದನು: “ಪನ್ನಗಾಶನ! ಹೋಗುತ್ತಿರುವ ನಿನ್ನ ರೂಪವು ಪೂರ್ವಾಹ್ಣದ ಸಹಸ್ರಾಂಶ, ವಿವಸ್ವತ ಭಾಸ್ಕರನಂತೆ ಕಾಣುತ್ತದೆ.
05110006a ಪಕ್ಷವಾತಪ್ರಣುನ್ನಾನಾಂ ವೃಕ್ಷಾಣಾಮನುಗಾಮಿನಾಂ।
05110006c ಪ್ರಸ್ಥಿತಾನಾಮಿವ ಸಮಂ ಪಶ್ಯಾಮೀಹ ಗತಿಂ ಖಗ।।
ಖಗ! ನೀನು ಎಷ್ಟು ವೇಗದಿಂದ ಹೋಗುತ್ತಿದ್ದೀಯೆಂದರೆ ನಿನ್ನ ರೆಕ್ಕೆಗಳ ರಭಸಕ್ಕೆ ಸಿಕ್ಕಿ ಉರುಳಿದ ಮರಗಳು ನಿನ್ನನ್ನೇ ಅನುಸರಿಸಿ ಬರುತ್ತಿರುವುದನ್ನು ನೋಡುತ್ತಿದ್ದೇನೆ.
05110007a ಸಸಾಗರವನಾಮುರ್ವೀಂ ಸಶೈಲವನಕಾನನಾಂ।
05110007c ಆಕರ್ಷನ್ನಿವ ಚಾಭಾಸಿ ಪಕ್ಷವಾತೇನ ಖೇಚರ।।
ಖೇಚರ! ನಿನ್ನ ರೆಕ್ಕೆಗಳ ವೇಗದೊಂದಿಗೆ ಈ ಸಾಗರ, ವನ, ಶೈಲ, ಕಾನನಗಳೊಂದಿಗೆ ಇಡೀ ಭೂಮಿಯನ್ನೇ ಎಳೆದುಕೊಂಡು ಹೋಗುತ್ತಿರುವೆಯೋ ಎಂದು ಅನ್ನಿಸುತ್ತಿದೆ.
05110008a ಸಮೀನನಾಗನಕ್ರಂ ಚ ಖಮಿವಾರೋಪ್ಯತೇ ಜಲಂ।
05110008c ವಾಯುನಾ ಚೈವ ಮಹತಾ ಪಕ್ಷವಾತೇನ ಚಾನಿಶಂ।।
ನಿನ್ನ ರೆಕ್ಕೆಗಳ ಹೊಡೆತದಿಂದ ಉಂಟಾದ ಭಿರುಗಾಳಿಯು ಮೀನು, ನಾಗ ಮತ್ತು ಮೊಸಳೆಗಳೊಂದಿಗೆ ಸಾಗರವು ಮೇಲುಬ್ಬುತ್ತಿದೆ.
05110009a ತುಲ್ಯರೂಪಾನನಾನ್ಮತ್ಸ್ಯಾಂಸ್ತಿಮಿಮತ್ಸ್ಯಾಂಸ್ತಿಮಿಂಗಿಲಾನ್।
05110009c ನಾಗಾಂಶ್ಚ ನರವಕ್ತ್ರಾಂಶ್ಚ ಪಶ್ಯಾಮ್ಯುನ್ಮಥಿತಾನಿವ।।
ಒಂದೇ ರೀತಿಯ ರೂಪವುಳ್ಳ, ಮತ್ಸ್ಯಗಳೂ, ತಿಮಿಂಗಿಲಗಳೂ, ಸರ್ಪಗಳೂ, ಮನುಷ್ಯರ ರೂಪವುಳ್ಳವುಗಳೂ ನಿನ್ನ ರಭಸಕ್ಕೆ ಸಿಲುಕಿ ನಾಶವಾಗುತ್ತಿರುವುದನ್ನು ನೋಡುತ್ತಿದ್ದೇನೆ.
05110010a ಮಹಾರ್ಣವಸ್ಯ ಚ ರವೈಃ ಶ್ರೋತ್ರೇ ಮೇ ಬಧಿರೀಕೃತೇ।
05110010c ನ ಶೃಣೋಮಿ ನ ಪಶ್ಯಾಮಿ ನಾತ್ಮನೋ ವೇದ್ಮಿ ಕಾರಣಂ।।
ಕೇಳಿಬರುತ್ತಿರುವ ಸಾಗರದ ಭೋರ್ಗರೆತವು ನನ್ನನ್ನು ಕಿವುಡುಮಾಡುತ್ತಿದೆ. ಕೇಳಲಿಕ್ಕಾಗುತ್ತಿಲ್ಲ. ನೋಡಲಿಕ್ಕಾಗುತ್ತಿಲ್ಲ. ಕಾರಣವು ನನಗೆ ತಿಳಿಯುತ್ತಿಲ್ಲ.
05110011a ಶನೈಃ ಸಾಧು ಭವಾನ್ಯಾತು ಬ್ರಹ್ಮಹತ್ಯಾಮನುಸ್ಮರನ್।
05110011c ನ ದೃಶ್ಯತೇ ರವಿಸ್ತಾತ ನ ದಿಶೋ ನ ಚ ಖಂ ಖಗ।।
ಬ್ರಹ್ಮಹತ್ಯೆಯನ್ನು ಸ್ಮರಿಸಿಕೊಂಡು ನೀನು ನಿಧಾನವಾಗಿ ಹೋಗುವುದು ಒಳ್ಳೆಯದು. ಅಯ್ಯಾ ಖಗ! ಸೂರ್ಯ, ದಿಕ್ಕು, ಆಕಾಶವು ಕಾಣುತ್ತಿಲ್ಲ.
05110012a ತಮ ಏವ ತು ಪಶ್ಯಾಮಿ ಶರೀರಂ ತೇ ನ ಲಕ್ಷಯೇ।
05110012c ಮಣೀವ ಜಾತ್ಯೌ ಪಶ್ಯಾಮಿ ಚಕ್ಷುಷೀ ತೇಽಹಮಂಡಜ।।
ಕತ್ತಲೆಯೇ ಕಾಣುತ್ತಿದೆ. ನಿನ್ನ ಶರೀರವೂ ಕಾಣುತ್ತಿಲ್ಲ. ಅಂಡಜ! ಮಣಿಗಳಂತೆ ತೋರುವ ನಿನ್ನ ಎರಡು ಕಣ್ಣುಗಳು ಮಾತ್ರ ಕಾಣುತ್ತಿವೆ.
05110013a ಶರೀರೇ ತು ನ ಪಶ್ಯಾಮಿ ತವ ಚೈವಾತ್ಮನಶ್ಚ ಹ।
05110013c ಪದೇ ಪದೇ ತು ಪಶ್ಯಾಮಿ ಸಲಿಲಾದಗ್ನಿಮುತ್ಥಿತಂ।।
ನನ್ನ ಅಥವಾ ನಿನ್ನ ಶರೀರಗಳನ್ನು ನಾನು ಕಾಣುತ್ತಿಲ್ಲ. ಪದೇ ಪದೇ ನಿನ್ನ ಸಲಿಲದಿಂದ ಎದ್ದು ಬರುವ ಬೆಂಕಿಯ ಕಿಡಿಗಳನ್ನು ಕಾಣುತ್ತಿದ್ದೇನೆ.
05110014a ಸ ಮೇ ನಿರ್ವಾಪ್ಯ ಸಹಸಾ ಚಕ್ಷುಷೀ ಶಾಮ್ಯತೇ ಪುನಃ।
05110014c ತನ್ನಿವರ್ತ ಮಹಾನ್ಕಾಲೋ ಗಚ್ಚತೋ ವಿನತಾತ್ಮಜ।।
ವಿನತಾತ್ಮಜ! ತಕ್ಷಣವೇ ನಿನ್ನ ಈ ಕಣ್ಣುಗಳ ಬೆಳಕನ್ನು ಕಡಿಮೆಮಾಡು. ನಿನ್ನ ಹೋಗುವ ಈ ವೇಗವನ್ನು ಕಡಿಮೆಮಾಡು!
05110015a ನ ಮೇ ಪ್ರಯೋಜನಂ ಕಿಂ ಚಿದ್ಗಮನೇ ಪನ್ನಗಾಶನ।
05110015c ಸಮ್ನಿವರ್ತ ಮಹಾವೇಗ ನ ವೇಗಂ ವಿಷಹಾಮಿ ತೇ।।
ಪನ್ನಗಾಶನ! ನಿನ್ನೊಡನೆ ಹೋಗುವುದರ ಪ್ರಯೋಜನವಾದರೂ ಏನು? ನಿನ್ನ ಈ ಮಹಾವೇಗವನ್ನು ಕಡಿಮೆಮಾಡು. ನಿನ್ನ ವೇಗವನ್ನು ಸಹಿಸಲಾರೆ.
05110016a ಗುರವೇ ಸಂಶ್ರುತಾನೀಹ ಶತಾನ್ಯಷ್ಟೌ ಹಿ ವಾಜಿನಾಂ।
05110016c ಏಕತಃಶ್ಯಾಮಕರ್ಣಾನಾಂ ಶುಭ್ರಾಣಾಂ ಚಂದ್ರವರ್ಚಸಾಂ।।
ನನ್ನ ಗುರುವಿಗೆ ಚಂದ್ರನ ಮುಖದಂತೆ ಬಿಳಿಯಾಗಿರುವ ಆದರೆ ಒಂದೇ ಕಿವಿಯು ಕಪ್ಪಾಗಿರುವ ಎಂಟುನೂರು ಕುದುರೆಗಳನ್ನು ತಂದು ಕೊಡುತ್ತೇನೆಂದು ಭರವಸೆಯನ್ನಿತ್ತಿದ್ದೇನೆ.
05110017a ತೇಷಾಂ ಚೈವಾಪವರ್ಗಾಯ ಮಾರ್ಗಂ ಪಶ್ಯಾಮಿ ನಾಂಡಜ।
05110017c ತತೋಽಯಂ ಜೀವಿತತ್ಯಾಗೇ ದೃಷ್ಟೋ ಮಾರ್ಗೋ ಮಯಾತ್ಮನಃ।।
ಅಂಡಜ! ಅವುಗಳನ್ನು ಒಂದುಗೂಡಿಸುವ ಮಾರ್ಗವನ್ನು ಕಾಣುತ್ತಿಲ್ಲ. ಆದುದರಿಂದಲೇ ನಾನು ಜೀವವನ್ನು ತ್ಯಜಿಸುವ ಮಾರ್ಗವನ್ನು ಕಂಡುಕೊಂಡಿದ್ದೇನೆ.
05110018a ನೈವ ಮೇಽಸ್ತಿ ಧನಂ ಕಿಂ ಚಿನ್ನ ಧನೇನಾನ್ವಿತಃ ಸುಹೃತ್।
05110018c ನ ಚಾರ್ಥೇನಾಪಿ ಮಹತಾ ಶಕ್ಯಮೇತದ್ವ್ಯಪೋಹಿತುಂ।।
ನನ್ನಲ್ಲಿ ಧನವಿಲ್ಲ. ಧನಿಕನಾದ ಸ್ನೇಹಿತನೂ ಇಲ್ಲ. ಎಷ್ಟೇ ಧನವಿದ್ದರೂ ನನಗೆ ಬೇಕಾದುದನ್ನು ಕೊಡಲಿಕ್ಕಾಗುವುದಿಲ್ಲ.””
05110019 ನಾರದ ಉವಾಚ।
05110019a ಏವಂ ಬಹು ಚ ದೀನಂ ಚ ಬ್ರುವಾಣಂ ಗಾಲವಂ ತದಾ।
05110019c ಪ್ರತ್ಯುವಾಚ ವ್ರಜನ್ನೇವ ಪ್ರಹಸನ್ವಿನತಾತ್ಮಜಃ।।
ನಾರದನು ಹೇಳಿದನು: “ಈ ರೀತಿ ದೀನನಾಗಿ ಬಹುವಿಧದಲ್ಲಿ ಹೇಳುತ್ತಿರುವ ಗಾಲವನಿಗೆ ವಿನತಾತ್ಮಜನು ತನ್ನ ವೇಗವನ್ನು ಕಡಿಮೆಗೊಳಿಸದೇ ನಗುತ್ತಾ ಉತ್ತರಿಸಿದನು.
05110020a ನಾತಿಪ್ರಜ್ಞೋಽಸಿ ವಿಪ್ರರ್ಷೇ ಯೋಽಆತ್ಮಾನಂ ತ್ಯಕ್ತುಮಿಚ್ಚಸಿ।
05110020c ನ ಚಾಪಿ ಕೃತ್ರಿಮಃ ಕಾಲಃ ಕಾಲೋ ಹಿ ಪರಮೇಶ್ವರಃ।।
“ವಿಪ್ರರ್ಷೇ! ಜೀವವನ್ನು ತೊರೆಯಲು ಬಯಸುವ ನಿನಗೆ ತಿಳುವಳಿಕೆಯಿಲ್ಲ. ಮೃತ್ಯುವು ಕೃತ್ರಿಮವಾದುದಲ್ಲ. ಕಾಲನೇ ಪರಮೇಶ್ವರ.
05110021a ಕಿಮಹಂ ಪೂರ್ವಮೇವೇಹ ಭವತಾ ನಾಭಿಚೋದಿತಃ।
05110021c ಉಪಾಯೋಽತ್ರ ಮಹಾನಸ್ತಿ ಯೇನೈತದುಪಪದ್ಯತೇ।।
ಮೊದಲೇ ನನಗೆ ಏಕೆ ನಿನ್ನ ಉದ್ದೇಶವನ್ನು ಹೇಳಲಿಲ್ಲ? ಇವೆಲ್ಲವುಗಳನ್ನೂ ಪಡೆಯುವುದಕ್ಕೆ ಒಂದು ಮಹಾ ಉಪಾಯವಿದೆ.
05110022a ತದೇಷ ಋಷಭೋ ನಾಮ ಪರ್ವತಃ ಸಾಗರೋರಸಿ।
05110022c ಅತ್ರ ವಿಶ್ರಮ್ಯ ಭುಕ್ತ್ವಾ ಚ ನಿವರ್ತಿಷ್ಯಾವ ಗಾಲವ।।
ಗಾಲವ! ಇಲ್ಲಿ ಸಾಗರದ ಬಳಿ ಋಷಭ ಎಂಬ ಹೆಸರಿನ ಪರ್ವತವಿದೆ. ಇಲ್ಲಿ ತಿಂದು ವಿಶ್ರಮಿಸಿ ನಂತರ ಹಿಂದಿರುಗುತ್ತೇನೆ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಲವಚರಿತೇ ದಶಾಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಲವಚರಿತೆಯಲ್ಲಿ ನೂರಾಹತ್ತನೆಯ ಅಧ್ಯಾಯವು.