109 ಗಾಲವಚರಿತಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಭಗವದ್ಯಾನ ಪರ್ವ

ಅಧ್ಯಾಯ 109

ಸಾರ

ಗರುಡನು ಗಾಲವನಿಗೆ ಉತ್ತರ ದಿಕ್ಕನ್ನು ವರ್ಣಿಸಿದುದು (1-26).

05109001 ಸುಪರ್ಣ ಉವಾಚ।
05109001a ಯಸ್ಮಾದುತ್ತಾರ್ಯತೇ ಪಾಪಾದ್ಯಸ್ಮಾನ್ನಿಃಶ್ರೇಯಸೋಽಶ್ನುತೇ।
05109001c ತಸ್ಮಾದುತ್ತಾರಣಫಲಾದುತ್ತರೇತ್ಯುಚ್ಯತೇ ಬುಧೈಃ।।

ಸುಪರ್ಣನು ಹೇಳಿದನು: “ಪಾಪ ಮತ್ತು ನಿಃಶ್ರೇಯಸ್ಸಿನಿಂದ ಪಾರುಮಾಡುವಂಥಹ ಉತ್ತಾರಣ ಫಲವನ್ನು ಹೊಂದಿರುವುದರಿಂದ ತಿಳಿದವರು ಈ ದಿಕ್ಕನ್ನು ಉತ್ತರ ಎಂದು ಕರೆಯುತ್ತಾರೆ.

05109002a ಉತ್ತರಸ್ಯ ಹಿರಣ್ಯಸ್ಯ ಪರಿವಾಪಸ್ಯ ಗಾಲವ।
05109002c ಮಾರ್ಗಃ ಪಶ್ಚಿಮಪೂರ್ವಾಭ್ಯಾಂ ದಿಗ್ಭ್ಯಾಂ ವೈ ಮಧ್ಯಮಃ ಸ್ಮೃತಃ।।

ಗಾಲವ! ಹಿರಣ್ಯವನ್ನುಳ್ಳ ಉತ್ತರದ ಮಾರ್ಗವು ಪಶ್ಚಿಮ-ಪೂರ್ವ ದಿಕ್ಕುಗಳ ವರೆಗೂ ಪಸರಿಸಿರುವುದರಿಂದ ಇದನ್ನು ಮಧ್ಯಮ ಎಂದೂ ಕರೆಯುತ್ತಾರೆ.

05109003a ಅಸ್ಯಾಂ ದಿಶಿ ವರಿಷ್ಠಾಯಾಮುತ್ತರಾಯಾಂ ದ್ವಿಜರ್ಷಭ।
05109003c ನಾಸೌಮ್ಯೋ ನಾವಿಧೇಯಾತ್ಮಾ ನಾಧರ್ಮ್ಯೋ ವಸತೇ ಜನಃ।।

ದ್ವಿಜರ್ಷಭ! ವರಿಷ್ಠವಾಗಿರುವ ಈ ಉತ್ತರ ದಿಕ್ಕಿನಲ್ಲಿ ಸೌಮ್ಯನಾಗಿಲ್ಲದಿರುವ, ವಿಧೇಯಾತ್ಮನಾಗಿಲ್ಲದ, ಅಧರ್ಮ ಜನರು ವಾಸಿಸುವುದಿಲ್ಲ.

05109004a ಅತ್ರ ನಾರಾಯಣಃ ಕೃಷ್ಣೋ ಜಿಷ್ಣುಶ್ಚೈವ ನರೋತ್ತಮಃ।
05109004c ಬದರ್ಯಾಮಾಶ್ರಮಪದೇ ತಥಾ ಬ್ರಹ್ಮಾ ಚ ಶಾಶ್ವತಃ।।

ಅಲ್ಲಿ ಕೃಷ್ಣ ನಾರಾಯಣ ಮತ್ತು ನರೋತ್ತಮ ಜಿಷ್ಣು, ಮತ್ತು ಬ್ರಹ್ಮರು ಬದರಿಕಾಶ್ರಮಪದದಲ್ಲಿ ಶಾಶ್ವತರಾಗಿ ನೆಲಸಿದ್ದಾರೆ.

05109005a ಅತ್ರ ವೈ ಹಿಮವತ್ಪೃಷ್ಠೇ ನಿತ್ಯಮಾಸ್ತೇ ಮಹೇಶ್ವರಃ।
05109005c ಅತ್ರ ರಾಜ್ಯೇನ ವಿಪ್ರಾಣಾಂ ಚಂದ್ರಮಾಶ್ಚಾಭ್ಯಷಿಚ್ಯತ।।

ಅಲ್ಲಿ ಹಿಮವತ್ಪರ್ವತದ ಮೇಲೆ ಮಹೇಶ್ವರನು ನಿತ್ಯವೂ ನೆಲಸಿದ್ದಾನೆ. ಅಲ್ಲಿ ಚಂದ್ರಮನನ್ನು ವಿಪ್ರರ ರಾಜ್ಯಕ್ಕೆ ಅಭಿಷೇಕಿಸಲಾಯಿತು.

05109006a ಅತ್ರ ಗಂಗಾಂ ಮಹಾದೇವಃ ಪತಂತೀಂ ಗಗನಾಚ್ಚ್ಯುತಾಂ।
05109006c ಪ್ರತಿಗೃಹ್ಯ ದದೌ ಲೋಕೇ ಮಾನುಷೇ ಬ್ರಹ್ಮವಿತ್ತಮ।।

ಬ್ರಹ್ಮವಿತ್ತಮ! ಅಲ್ಲಿ ಮಹಾದೇವನು ಗಗನದಿಂದ ಕಳಚಿ ಬೀಳುತ್ತಿದ್ದ ಗಂಗೆಯನ್ನು ಹಿಡಿದು ಮಾನುಷ ಲೋಕಕ್ಕೆ ಕೊಟ್ಟನು.

05109007a ಅತ್ರ ದೇವ್ಯಾ ತಪಸ್ತಪ್ತಂ ಮಹೇಶ್ವರಪರೀಪ್ಸಯಾ।
05109007c ಅತ್ರ ಕಾಮಶ್ಚ ರೋಷಶ್ಚ ಶೈಲಶ್ಚೋಮಾ ಚ ಸಂಬಭುಃ।।

ಅಲ್ಲಿ ಮಹೇಶ್ವರನನ್ನು ಬಯಸಿ ದೇವಿಯು ತಪಸ್ಸನ್ನು ತಪಿಸಿದಳು. ಅಲ್ಲಿ ಕಾಮ, ರೋಷ, ಶೈಲ ಮತ್ತು ಉಮ ಒಟ್ಟಿಗೇ ಬೆಳಗಿದರು.

05109008a ಅತ್ರ ರಾಕ್ಷಸಯಕ್ಷಾಣಾಂ ಗಂಧರ್ವಾಣಾಂ ಚ ಗಾಲವ।
05109008c ಆಧಿಪತ್ಯೇನ ಕೈಲಾಸೇ ಧನದೋಽಪ್ಯಭಿಷೇಚಿತಃ।।

ಗಾಲವ! ಅಲ್ಲಿ ಕೈಲಾಸದಲ್ಲಿ ರಾಕ್ಷಸ, ಯಕ್ಷ, ಗಂಧರ್ವರ ಅಧಿಪತ್ಯದಿಂದ ಧನದನು ಅಭಿಷಿಕ್ತನಾದನು.

05109009a ಅತ್ರ ಚೈತ್ರರಥಂ ರಮ್ಯಮತ್ರ ವೈಖಾನಸಾಶ್ರಮಃ।
05109009c ಅತ್ರ ಮಂದಾಕಿನೀ ಚೈವ ಮಂದರಶ್ಚ ದ್ವಿಜರ್ಷಭ।।

ದ್ವಿಜರ್ಷಭ! ಅಲ್ಲಿ ರಮ್ಯ ಚೈತ್ರರಥವಿದೆ. ಅಲ್ಲಿ ವೈಖಾನಸಾಶ್ರಮವಿದೆ. ಅಲ್ಲಿ ಮಂದಾಕಿನಿಯೂ ಮಂದರವೂ ಇವೆ.

05109010a ಅತ್ರ ಸೌಗಂಧಿಕವನಂ ನೈರೃತೈರಭಿರಕ್ಷ್ಯತೇ।
05109010c ಶಾಡ್ವಲಂ ಕದಲೀಸ್ಕಂಧಮತ್ರ ಸಂತಾನಕಾ ನಗಾಃ।।

ಅಲ್ಲಿ ನೈರೃತರಿಂದ ರಕ್ಷಿತವಾದ ಸೌಗಂಧಿಕ ವನವಿದೆ. ಅಲ್ಲಿ ಹುಲ್ಲುಗಾವಲಿದೆ, ಬಾಳೆಯ ವನವಿದೆ ಮತ್ತು ಸಂತಾನಕ ಪರ್ವತಗಳಿವೆ.

05109011a ಅತ್ರ ಸಂಯಮನಿತ್ಯಾನಾಂ ಸಿದ್ಧಾನಾಂ ಸ್ವೈರಚಾರಿಣಾಂ।
05109011c ವಿಮಾನಾನ್ಯನುರೂಪಾಣಿ ಕಾಮಭೋಗ್ಯಾನಿ ಗಾಲವ।।

ಗಾಲವ! ಅಲ್ಲಿ ಸಂಯಮಿಗಳಾದ, ಸ್ವಚ್ಛಂದರಾದ ಸಿದ್ಧರ ವಿಮಾನಗಳೂ, ಅನುರೂಪವಾದ ಕಾಮ ಭೋಗಗಳೂ ಇವೆ.

05109012a ಅತ್ರ ತೇ ಋಷಯಃ ಸಪ್ತ ದೇವೀ ಚಾರುಂಧತೀ ತಥಾ।
05109012c ಅತ್ರ ತಿಷ್ಠತಿ ವೈ ಸ್ವಾತಿರತ್ರಾಸ್ಯಾ ಉದಯಃ ಸ್ಮೃತಃ।।

ಅಲ್ಲಿ ಸಪ್ತ ಋಷಿಗಳೂ ಮತ್ತು ದೇವೀ ಅರುಂಧತಿಯೂ ಕಾಣುತ್ತಾರೆ. ಅಲ್ಲಿ ಸ್ವಾತಿಯು ಉದಯಿಸಿ ಕಾಣಿಸಿಕೊಳ್ಳುತ್ತಾಳೆ.

05109013a ಅತ್ರ ಯಜ್ಞಾಂ ಸಮಾರುಹ್ಯ ಧ್ರುವಂ ಸ್ಥಾತಾ ಪಿತಾಮಹಃ।
05109013c ಜ್ಯೋತೀಂಷಿ ಚಂದ್ರಸೂರ್ಯೌ ಚ ಪರಿವರ್ತಂತಿ ನಿತ್ಯಶಃ।।

ಅಲ್ಲಿ ಪಿತಾಮಹನು ಯಜ್ಞವನ್ನೇರಿರುತ್ತಾನೆ. ಅಲ್ಲಿ ಚಂದ್ರ, ಸೂರ್ಯ ಮತ್ತು ನಕ್ಷತ್ರಗಳು ನಿತ್ಯವೂ ತಿರುಗುತ್ತಿರುತ್ತವೆ.

05109014a ಅತ್ರ ಗಾಯಂತಿಕಾದ್ವಾರಂ ರಕ್ಷಂತಿ ದ್ವಿಜಸತ್ತಮಾಃ।
05109014c ಧಾಮಾ ನಾಮ ಮಹಾತ್ಮಾನೋ ಮುನಯಃ ಸತ್ಯವಾದಿನಃ।।

ಅಲ್ಲಿ ಧಾಮ ಎಂಬ ಹೆಸರಿನ ಮಹಾತ್ಮ, ಸತ್ಯವಾದಿ, ದ್ವಿಜಸತ್ತಮ ಮುನಿಗಳು ಗಂಗಾದ್ವಾರವನ್ನು ರಕ್ಷಿಸುತ್ತಾರೆ.

05109015a ನ ತೇಷಾಂ ಜ್ಞಾಯತೇ ಸೂತಿರ್ನಾಕೃತಿರ್ನ ತಪಶ್ಚಿತಂ।
05109015c ಪರಿವರ್ತಸಹಸ್ರಾಣಿ ಕಾಮಭೋಗ್ಯಾನಿ ಗಾಲವ।।

ಗಾಲವ! ಅವರ ಹುಟ್ಟು, ಕರ್ಮಗಳು, ಮತ್ತು ತಪಶ್ಚರ್ಯಗಳು, ಅವರು ಬಳಸುವ ಸಹಸ್ರಾರು ಪಾತ್ರೆಗಳು ಮತ್ತು ಕಾಮಭೋಗಗಳು ಯಾರಿಗೂ ತಿಳಿದಿಲ್ಲ.

05109016a ಯಥಾ ಯಥಾ ಪ್ರವಿಶತಿ ತಸ್ಮಾತ್ಪರತರಂ ನರಃ।
05109016c ತಥಾ ತಥಾ ದ್ವಿಜಶ್ರೇಷ್ಠ ಪ್ರವಿಲೀಯತಿ ಗಾಲವ।।

ದ್ವಿಜಶ್ರೇಷ್ಠ! ಗಾಲವ! ಅವರು ಹಾಕಿದ ಗಡಿಯನ್ನು ದಾಟಿ ಯಾವ ನರನು ಹೋಗುತ್ತಾನೋ ಅವನು ನಾಶಹೊಂದುವುದು ಸತ್ಯ.

05109017a ನ ತತ್ಕೇನ ಚಿದನ್ಯೇನ ಗತಪೂರ್ವಂ ದ್ವಿಜರ್ಷಭ।
05109017c ಋತೇ ನಾರಾಯಣಂ ದೇವಂ ನರಂ ವಾ ಜಿಷ್ಣುಮವ್ಯಯಂ।।

ದ್ವಿಜರ್ಷಭ! ಅವರು ಕಾಯುವ ಗಡಿಯನ್ನು ಇದೂವರೆಗೆ ಯಾರೂ - ದೇವ ನಾರಾಯಣ ಅಥವಾ ಅವ್ಯಯ ನರ ಜಿಷ್ಣುವನ್ನು ಬಿಟ್ಟು – ಹೋಗಿಲ್ಲ.

05109018a ಅತ್ರ ಕೈಲಾಸಮಿತ್ಯುಕ್ತಂ ಸ್ಥಾನಮೈಲವಿಲಸ್ಯ ತತ್।
05109018c ಅತ್ರ ವಿದ್ಯುತ್ಪ್ರಭಾ ನಾಮ ಜಜ್ಞೈರೇಽಪ್ಸರಸೋ ದಶ।।

ಅಲ್ಲಿ ಐಲವಿಲ (ಕುಬೇರ) ನ ಸ್ಥಾನವಾದ ಕೈಲಾಸವೆನ್ನುವುದಿದೆ. ಅಲ್ಲಿಯೇ ವಿದ್ಯುತ್ಪ್ರಭಾ ಎಂಬ ಹೆಸರಿನ ಹತ್ತು ಅಪ್ಸರೆಯರು ಜನಿಸಿದರು.

05109019a ಅತ್ರ ವಿಷ್ಣುಪದಂ ನಾಮ ಕ್ರಮತಾ ವಿಷ್ಣುನಾ ಕೃತಂ।
05109019c ತ್ರಿಲೋಕವಿಕ್ರಮೇ ಬ್ರಹ್ಮನ್ನುತ್ತರಾಂ ದಿಶಮಾಶ್ರಿತಂ।।

ಬ್ರಹ್ಮನ್! ಅಲ್ಲಿ ತ್ರಿಲೋಕ ವಿಕ್ರಮದಲ್ಲಿ ವಿಷ್ಣುವು ಉತ್ತರ ದಿಕ್ಕನ್ನು ತುಳಿದ ವಿಷ್ಣುಪದ ಎಂಬ ಹೆಸರಿನ ಸ್ಥಳವಿದೆ.

05109020a ಅತ್ರ ರಾಜ್ಞಾ ಮರುತ್ತೇನ ಯಜ್ಞೇನೇಷ್ಟಂ ದ್ವಿಜೋತ್ತಮ।
05109020c ಉಶೀರಬೀಜೇ ವಿಪ್ರರ್ಷೇ ಯತ್ರ ಜಾಂಬೂನದಂ ಸರಃ।।

ದ್ವಿಜೋತ್ತಮ! ವಿಪ್ರರ್ಷೇ! ಅಲ್ಲಿ ಕಾಂಚನ ಸರೋವರದ ಉಶೀರಬೀಜದಲ್ಲಿ ರಾಜಾ ಮರುತ್ತನು1 ಯಜ್ಞ-ಇಷ್ಟಿಯನ್ನು ನಡೆಸಿದನು.

05109021a ಜೀಮೂತಸ್ಯಾತ್ರ ವಿಪ್ರರ್ಷೇರುಪತಸ್ಥೇ ಮಹಾತ್ಮನಃ।
05109021c ಸಾಕ್ಷಾದ್ಧೈಮವತಃ ಪುಣ್ಯೋ ವಿಮಲಃ ಕಮಲಾಕರಃ।।

ಅಲ್ಲಿ ಮಹಾತ್ಮ ವಿಪ್ರರ್ಷಿ ಜೀಮೂತನಿಗೆ ಪುಣ್ಯ, ವಿಮಲ, ಕಮಲಾಕರ, ಪುಣ್ಯ ಹಿಮವತನು ಸಾಕ್ಷಾತ್ಕರಿಸಿದನು.

05109022a ಬ್ರಾಹ್ಮಣೇಷು ಚ ಯತ್ಕೃತ್ಸ್ನಂ ಸ್ವಂತಂ ಕೃತ್ವಾ ಧನಂ ಮಹತ್।
05109022c ವವ್ರೇ ವನಂ ಮಹರ್ಷಿಃ ಸ ಜೈಮೂತಂ ತದ್ವನಂ ತತಃ।।

ಆಗ ಜೀಮೂತನು ಆ ಮಹಾ ಧನವನ್ನು ಸಂಪೂರ್ಣವಾಗಿ ಬ್ರಾಹ್ಮಣರಿಗಿತ್ತನು. ಅನಂತರ ಮಹರ್ಷಿಯು ಆ ವನವನ್ನು ಜೈಮೂತವನವೆಂದು ಕರೆಯುವಂತೆ ಕೇಳಿಕೊಂಡನು.

05109023a ಅತ್ರ ನಿತ್ಯಂ ದಿಶಾಪಾಲಾಃ ಸಾಯಂ ಪ್ರಾತರ್ದ್ವಿಜರ್ಷಭ।
05109023c ಕಸ್ಯ ಕಾರ್ಯಂ ಕಿಮಿತಿ ವೈ ಪರಿಕ್ರೋಶಂತಿ ಗಾಲವ।।

ಗಾಲವ! ದ್ವಿಜರ್ಷಭ! ಅಲ್ಲಿ ನಿತ್ಯವೂ ಬೆಳಿಗ್ಗೆ ಮತ್ತು ಸಾಯಂಕಾಲ ದಿಕ್ಪಾಲಕರು “ಯಾರ ಕೆಲಸವು ಏನು?” ಎಂದು ಚರ್ಚಿಸುತ್ತಾರೆ.

05109024a ಏವಮೇಷಾ ದ್ವಿಜಶ್ರೇಷ್ಠ ಗುಣೈರನ್ಯೈರ್ದಿಗುತ್ತರಾ।
05109024c ಉತ್ತರೇತಿ ಪರಿಖ್ಯಾತಾ ಸರ್ವಕರ್ಮಸು ಚೋತ್ತರಾ।।

ದ್ವಿಜಶ್ರೇಷ್ಠ! ಉತ್ತರವು ಇವುಗಳಿಂದ ಮತ್ತು ಇನ್ನೂ ಇತರ ಗುಣಗಳಿಂದ ಕೂಡಿದೆ. ಎಲ್ಲ ದಿಕ್ಕುಗಳಲ್ಲಿ ಇದು ಶ್ರೇಷ್ಠವಾಗಿರುವುದರಿಂದ ಇದಕ್ಕೆ ಉತ್ತರವೆಂಬ ಹೆಸರಿದೆ.

05109025a ಏತಾ ವಿಸ್ತರಶಸ್ತಾತ ತವ ಸಂಕೀರ್ತಿತಾ ದಿಶಃ।
05109025c ಚತಸ್ರಃ ಕ್ರಮಯೋಗೇನ ಕಾಮಾಶಾಂ ಗಂತುಮಿಚ್ಚಸಿ।।

ಅಯ್ಯಾ! ಈ ರೀತಿ ನಾನು ನಿನಗೆ ನಾಲ್ಕೂ ದಿಕ್ಕುಗಳನ್ನು ಕ್ರಮಬದ್ಧವಾಗಿ ವಿಸ್ತಾರವಾಗಿ ವರ್ಣಿಸಿದ್ದೇನೆ. ಎಲ್ಲಿ ಹೋಗಲು ಬಯಸುತ್ತೀಯೆ?

05109026a ಉದ್ಯತೋಽಹಂ ದ್ವಿಜಶ್ರೇಷ್ಠ ತವ ದರ್ಶಯಿತುಂ ದಿಶಃ।
05109026c ಪೃಥಿವೀಂ ಚಾಖಿಲಾಂ ಬ್ರಹ್ಮಂಸ್ತಸ್ಮಾದಾರೋಹ ಮಾಂ ದ್ವಿಜ।।

ದ್ವಿಜಶ್ರೇಷ್ಠ! ದ್ವಿಜ! ದಿಕ್ಕುಗಳನ್ನು, ಅಖಿಲ ಪೃಥ್ವಿಯನ್ನೂ ನಿನಗೆ ತೋರಿಸಲು ನಾನು ಉತ್ಸುಕನಾಗಿದ್ದೇನೆ. ಬ್ರಹ್ಮನ್! ನನ್ನನ್ನು ಏರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಲವಚರಿತೇ ನವಾಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಲವಚರಿತೆಯಲ್ಲಿ ನೂರಾಒಂಭತ್ತನೆಯ ಅಧ್ಯಾಯವು.


  1. ರಾಜಾ ಮರುತ್ತನ ಕಥೆಯನ್ನು ಮುಂದೆ ಅಶ್ವಮೇಧ ಪರ್ವದ ಅಧ್ಯಾಯ ೪ರಲ್ಲಿ ವ್ಯಾಸನು ಯುಧಿಷ್ಠಿರನಿಗೆ ಹೇಳುತ್ತಾನೆ. ↩︎