108 ಗಾಲವಚರಿತಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಭಗವದ್ಯಾನ ಪರ್ವ

ಅಧ್ಯಾಯ 108

ಸಾರ

ಗರುಡನು ಗಾಲವನಿಗೆ ಪಶ್ಚಿಮ ದಿಕ್ಕನ್ನು ವರ್ಣಿಸಿದುದು (1-19).

05108001 ಸುಪರ್ಣ ಉವಾಚ।
05108001a ಇಯಂ ದಿಗ್ದಯಿತಾ ರಾಜ್ಞೋ ವರುಣಸ್ಯ ತು ಗೋಪತೇಃ।
05108001c ಸದಾ ಸಲಿಲರಾಜಸ್ಯ ಪ್ರತಿಷ್ಠಾ ಚಾದಿರೇವ ಚ।।

ಸುಪರ್ಣನು ಹೇಳಿದನು: “ಇದು ಗೋಪತಿ ವರುಣ ರಾಜನ ದಿಕ್ಕು. ಸಲಿಲರಾಜನು ಸದಾ ಇಲ್ಲಿಯೇ ಪ್ರತಿಷ್ಠನಾಗಿದ್ದಾನೆ.

05108002a ಅತ್ರ ಪಶ್ಚಾದಹಃ ಸೂರ್ಯೋ ವಿಸರ್ಜಯತಿ ಭಾಃ ಸ್ವಯಂ।
05108002c ಪಶ್ಚಿಮೇತ್ಯಭಿವಿಖ್ಯಾತಾ ದಿಗಿಯಂ ದ್ವಿಜಸತ್ತಮ।।

ದ್ವಿಜಸತ್ತಮ! ದಿನದ ಪಶ್ಚಾತ್ ಸೂರ್ಯನು ಸ್ವಯಂ ಕಿರಣಗಳನ್ನು ಅಲ್ಲಿ ವಿಸರ್ಜಿಸುವುದರಿಂದ ಈ ದಿಕ್ಕು ಪಶ್ಚಿಮವೆಂದು ವಿಖ್ಯಾತವಾಗಿದೆ.

05108003a ಯಾದಸಾಮತ್ರ ರಾಜ್ಯೇನ ಸಲಿಲಸ್ಯ ಚ ಗುಪ್ತಯೇ।
05108003c ಕಶ್ಯಪೋ ಭಗವಾನ್ದೇವೋ ವರುಣಂ ಸ್ಮಾಭ್ಯಷೇಚಯತ್।।

ಜಲಚರರ ಮತ್ತು ಸಲಿಲಗಳ ರಕ್ಷಣೆಗಾಗಿ ಭಗವಾನ್ ಕಶ್ಯಪ ದೇವನು ವರುಣನನ್ನು ಇಲ್ಲಿ ಅಭಿಷೇಕಿಸಿದನು.

05108004a ಅತ್ರ ಪೀತ್ವಾ ಸಮಸ್ತಾನ್ವೈ ವರುಣಸ್ಯ ರಸಾಂಸ್ತು ಷಟ್।
05108004c ಜಾಯತೇ ತರುಣಃ ಸೋಮಃ ಶುಕ್ಲಸ್ಯಾದೌ ತಮಿಸ್ರಹಾ।।

ಅಲ್ಲಿ ವರುಣನ ಎಲ್ಲ ಆರು ರಸಗಳನ್ನು ಕುಡಿದು ತಮಸ್ಸನ್ನು ಕಳೆಯುವ ಸೋಮನು ಶುಕ್ಲಪಕ್ಷದ ಆದಿಯಲ್ಲಿ ತರುಣನಾಗಿ ಹುಟ್ಟುತ್ತಾನೆ.

05108005a ಅತ್ರ ಪಶ್ಚಾತ್ಕೃತಾ ದೈತ್ಯಾ ವಾಯುನಾ ಸಮ್ಯತಾಸ್ತದಾ।
05108005c ನಿಃಶ್ವಸಂತೋ ಮಹಾನಾಗೈರರ್ದಿತಾಃ ಸುಷುಪುರ್ದ್ವಿಜ।।

ಈ ದಿಕ್ಕಿನಲ್ಲಿ ದೈತ್ಯರು ವಾಯುವಿನಿಂದ ಕಟ್ಟಿ ಎಸೆಯಲ್ಪಟ್ಟಿದ್ದರು. ದ್ವಿಜ! ಆ ಭಿರುಗಾಳಿಗೆ ಸಿಲುಕಿ ನಿಟ್ಟುಸಿರು ಬಿಡುತ್ತಾ ಅವರು ಇಲ್ಲಿಯೇ ನಿದ್ದೆ ಮಾಡಿದರು.

05108006a ಅತ್ರ ಸೂರ್ಯಂ ಪ್ರಣಯಿನಂ ಪ್ರತಿಗೃಹ್ಣಾತಿ ಪರ್ವತಃ।
05108006c ಅಸ್ತೋ ನಾಮ ಯತಃ ಸಂಧ್ಯಾ ಪಶ್ಚಿಮಾ ಪ್ರತಿಸರ್ಪತಿ।।

ಅಲ್ಲಿ ಸಾಯಂಕಾಲದ ಸಂಧ್ಯಾ ಸಮಯವನ್ನು ಒದಗಿಸುವ ಅಸ್ತ ಎಂಬ ಹೆಸರಿನ ಪರ್ವತವು ಸೂರ್ಯನನ್ನು ಪ್ರಣಯಿಸಿ ಸ್ವೀಕರಿಸುತ್ತದೆ.

05108007a ಅತೋ ರಾತ್ರಿಶ್ಚ ನಿದ್ರಾ ಚ ನಿರ್ಗತಾ ದಿವಸಕ್ಷಯೇ।
05108007c ಜಾಯತೇ ಜೀವಲೋಕಸ್ಯ ಹರ್ತುಮರ್ಧಮಿವಾಯುಷಃ।।

ದಿವಸವು ಕಳೆದು ಹೋದಾಗ ಅಲ್ಲಿ ರಾತ್ರಿ ಮತ್ತು ನಿದ್ದೆಗಳು ಜೀವಲೋಕದ ಅರ್ಧ ಆಯುಸ್ಸನ್ನು ಕದಿಯಲು ಪಸರಿಸುತ್ತವೆ.

05108008a ಅತ್ರ ದೇವೀಂ ದಿತಿಂ ಸುಪ್ತಾಮಾತ್ಮಪ್ರಸವಧಾರಿಣೀಂ।
05108008c ವಿಗರ್ಭಾಮಕರೋಚ್ಚಕ್ರೋ ಯತ್ರ ಜಾತೋ ಮರುದ್ಗಣಃ।।

ಅಲ್ಲಿ ಗರ್ಭವನ್ನು ಧರಿಸಿ ಮಲಗಿದ್ದ ದಿತಿ ದೇವಿಯ ಗರ್ಭವನ್ನು ಶಕ್ರನು ವಿಭಜನೆ ಮಾಡಿದನು ಮತ್ತು ಅವುಗಳಿಂದ ಮರುದ್ಗಣರು ಜನಿಸಿದರು.

05108009a ಅತ್ರ ಮೂಲಂ ಹಿಮವತೋ ಮಂದರಂ ಯಾತಿ ಶಾಶ್ವತಂ।
05108009c ಅಪಿ ವರ್ಷಸಹಸ್ರೇಣ ನ ಚಾಸ್ಯಾಂತೋಽಧಿಗಮ್ಯತೇ।।

ಅಲ್ಲಿ ಹಿಮವತ್ ಪರ್ವತದ ಬೇರುಗಳು ಮಂದರ ಪರ್ವತದ ವರೆಗೂ ಶಾಶ್ವತವಾಗಿ ಪಸರಿಸಿವೆ. ಸಾವಿರ ವರ್ಷಗಳು ಪ್ರಯಾಣಿಸಿದರೂ ಈ ಬೇರುಗಳ ಕೊನೆಯನ್ನು ತಲುಪಲಾರೆವು.

05108010a ಅತ್ರ ಕಾಂಚನಶೈಲಸ್ಯ ಕಾಂಚನಾಂಬುವಹಸ್ಯ ಚ।
05108010c ಉದಧೇಸ್ತೀರಮಾಸಾದ್ಯ ಸುರಭಿಃ ಕ್ಷರತೇ ಪಯಃ।।

ಅಲ್ಲಿ ಕಾಂಚನಶೈಲದ ಕಾಂಚನ ಸರೋವರದ ತೀರವನ್ನು ಸೇರಿ ಸುರಭಿಯು ಹಾಲನ್ನು ಸುರಿಸಿದಳು.

05108011a ಅತ್ರ ಮಧ್ಯೇ ಸಮುದ್ರಸ್ಯ ಕಬಂಧಃ ಪ್ರತಿದೃಶ್ಯತೇ।
05108011c ಸ್ವರ್ಭಾನೋಃ ಸೂರ್ಯಕಲ್ಪಸ್ಯ ಸೋಮಸೂರ್ಯೌ ಜಿಘಾಂಸತಃ।।

ಅಲ್ಲಿ ಸಮುದ್ರದ ಮಧ್ಯದಲ್ಲಿ ಸೋಮ-ಸೂರ್ಯರನ್ನು ನುಂಗಲು ಕಾತರನಾಗಿರುವ ಸೂರ್ಯನಂತೆಯೇ ಇರುವ ಸ್ವರ್ಭಾನು (ರಾಹು) ವಿನ ಶಿರವಿಲ್ಲದ ದೇಹವು ಕಾಣುತ್ತದೆ.

05108012a ಸುವರ್ಣಶಿರಸೋಽಪ್ಯತ್ರ ಹರಿರೋಮ್ಣಃ ಪ್ರಗಾಯತಃ।
05108012c ಅದೃಶ್ಯಸ್ಯಾಪ್ರಮೇಯಸ್ಯ ಶ್ರೂಯತೇ ವಿಪುಲೋ ಧ್ವನಿಃ।।

ಇಲ್ಲಿ ಅದೃಶ್ಯನೂ, ಅಪ್ರಮೇಯನೂ, ಹಸಿರುಬಣ್ಣದ ಕೂದಲಿರುವವನೂ ಆದ ಸುವರ್ಣಶಿರಸನು ದೊಡ್ಡ ಧ್ವನಿಯಲ್ಲಿ ವೇದಗಳನ್ನು ಹಾಡುವುದು ಕೇಳಿಬರುತ್ತದೆ.

05108013a ಅತ್ರ ಧ್ವಜವತೀ ನಾಮ ಕುಮಾರೀ ಹರಿಮೇಧಸಃ।
05108013c ಆಕಾಶೇ ತಿಷ್ಠ ತಿಷ್ಠೇತಿ ತಸ್ಥೌ ಸೂರ್ಯಸ್ಯ ಶಾಸನಾತ್।।

ಅಲ್ಲಿ ಹರಿಮೇಧಸನ ಕುಮಾರಿ ಧ್ವಜವತೀ ಎಂಬ ಹೆಸರಿನವಳು “ನಿಲ್ಲು! ನಿಲ್ಲು!” ಎಂಬ ಸೂರ್ಯನ ಶಾಸನದಂತೆ ಅಲ್ಲಿಯೇ ನಿಂತುಬಿಟ್ಟಿದ್ದಾಳೆ.

05108014a ಅತ್ರ ವಾಯುಸ್ತಥಾ ವಹ್ನಿರಾಪಃ ಖಂ ಚೈವ ಗಾಲವ।
05108014c ಆಹ್ನಿಕಂ ಚೈವ ನೈಶಂ ಚ ದುಃಖಸ್ಪರ್ಶಂ ವಿಮುಂಚತಿ।
05108014e ಅತಃ ಪ್ರಭೃತಿ ಸೂರ್ಯಸ್ಯ ತಿರ್ಯಗಾವರ್ತತೇ ಗತಿಃ।।

ಗಾಲವ! ಅಲ್ಲಿ ವಾಯು, ಅಗ್ನಿ, ನೀರು, ಆಕಾಶ, ದಿನ, ರಾತ್ರಿಗಳು ದುಃಖಸ್ಪರ್ಷದಿಂದ ಮುಕ್ತವಾಗುತ್ತವೆ. ಅಲ್ಲಿಂದ ಮುಂದೆ ಸೂರ್ಯನ ಗತಿಯು ವಕ್ರವಾಗುತ್ತದೆ.

05108015a ಅತ್ರ ಜ್ಯೋತೀಂಷಿ ಸರ್ವಾಣಿ ವಿಶಂತ್ಯಾದಿತ್ಯಮಂಡಲಂ।
05108015c ಅಷ್ಟಾವಿಂಶತಿರಾತ್ರಂ ಚ ಚಂಕ್ರಮ್ಯ ಸಹ ಭಾನುನಾ।
05108015e ನಿಷ್ಪತಂತಿ ಪುನಃ ಸೂರ್ಯಾತ್ಸೋಮಸಂಯೋಗಯೋಗತಃ।।

ಅಲ್ಲಿ ಎಲ್ಲ ನಕ್ಷತ್ರಗಳೂ ಸೂರ್ಯಮಂಡಲವನ್ನು ಪ್ರವೇಶಿಸುತ್ತವೆ. ಭಾನುವಿನೊಂದಿಗೆ ಇಪ್ಪತ್ತೆಂಟು ರಾತ್ರಿಗಳನ್ನು ಕಳೆದು, ಸೂರ್ಯನ ಸಂಗವನ್ನು ತೊರೆದು ಪುನಃ ಸೋಮನ ಸಂಗದಲ್ಲಿ ಬರುತ್ತವೆ.

05108016a ಅತ್ರ ನಿತ್ಯಂ ಸ್ರವಂತೀನಾಂ ಪ್ರಭವಃ ಸಾಗರೋದಯಃ।
05108016c ಅತ್ರ ಲೋಕತ್ರಯಸ್ಯಾಪಸ್ತಿಷ್ಠಂತಿ ವರುಣಾಶ್ರಯಾಃ।।

ಅಲ್ಲಿ ನಿತ್ಯವೂ ಸಾಗರವನ್ನು ಹುಡುಕಿಕೊಂಡು ಹೋಗುವ ನದಿಗಳು ಹುಟ್ಟುತ್ತವೆ. ಇಲ್ಲಿ ಮೂರು ಲೋಕಗಳ ನೀರುಗಳೂ ವರುಣನ ಆಶ್ರಯದಲ್ಲಿವೆ.

05108017a ಅತ್ರ ಪನ್ನಗರಾಜಸ್ಯಾಪ್ಯನಂತಸ್ಯ ನಿವೇಶನಂ।
05108017c ಅನಾದಿನಿಧನಸ್ಯಾತ್ರ ವಿಷ್ಣೋಃ ಸ್ಥಾನಮನುತ್ತಮಂ।।

ಅಲ್ಲಿ ಪನ್ನಗರಾಜ ಅನಂತನ ಮನೆಯಿದೆ. ಅಲ್ಲಿ ಅನಾದಿನಿಧನ ವಿಷ್ಣುವಿನ ಅನುತ್ತಮ ಸ್ಥಾನವೂ ಇದೆ.

05108018a ಅತ್ರಾನಲಸಖಸ್ಯಾಪಿ ಪವನಸ್ಯ ನಿವೇಶನಂ।
05108018c ಮಹರ್ಷೇಃ ಕಶ್ಯಪಸ್ಯಾತ್ರ ಮಾರೀಚಸ್ಯ ನಿವೇಶನಂ।।

ಅಲ್ಲಿ ಅನಲಸಖ ಪವನನ ಮನೆಯಿದೆ. ಅಲ್ಲಿ ಮಹರ್ಷಿ ಕಶ್ಯಪ ಮತ್ತು ಮಾರೀಚನ ನಿವೇಶನಗಳೂ ಇವೆ.

05108019a ಏಷ ತೇ ಪಶ್ಚಿಮೋ ಮಾರ್ಗೋ ದಿಗ್ದ್ವಾರೇಣ ಪ್ರಕೀರ್ತಿತಃ।
05108019c ಬ್ರೂಹಿ ಗಾಲವ ಗಚ್ಚಾವೋ ಬುದ್ಧಿಃ ಕಾ ದ್ವಿಜಸತ್ತಮ।।

ಗಾಲವ! ದ್ವಿಜಸತ್ತಮ! ಇದು ಪಶ್ಚಿಮ ಮಾರ್ಗ. ಈ ದಿಕ್ಕನ್ನು ನಿನಗೆ ವರ್ಣಿಸಿದ್ದೇನೆ. ನಿನಗೆ ಎಲ್ಲಿಗೆ ಹೋಗುವ ಬುದ್ಧಿಯಿದೆ? ಹೇಳು!”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಲವಚರಿತೇ ಅಷ್ಟಾಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಲವಚರಿತೆಯಲ್ಲಿ ನೂರಾಎಂಟನೆಯ ಅಧ್ಯಾಯವು.