107 ಗಾಲವಚರಿತಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಭಗವದ್ಯಾನ ಪರ್ವ

ಅಧ್ಯಾಯ 107

ಸಾರ

ಗರುಡನು ಗಾಲವನಿಗೆ ದಕ್ಷಿಣ ದಿಕ್ಕನ್ನು ವರ್ಣಿಸಿದುದು (1-21).

05107001 ಸುಪರ್ಣ ಉವಾಚ।
05107001a ಇಯಂ ವಿವಸ್ವತಾ ಪೂರ್ವಂ ಶ್ರೌತೇನ ವಿಧಿನಾ ಕಿಲ।
05107001c ಗುರವೇ ದಕ್ಷಿಣಾ ದತ್ತಾ ದಕ್ಷಿಣೇತ್ಯುಚ್ಯತೇಽಥ ದಿಕ್।।

ಸುಪರ್ಣನು ಹೇಳಿದನು: “ಪೂರ್ವದಲ್ಲಿ ಶ್ರೌತಿ ವಿವಸ್ವತನು ಇದನ್ನು ಗುರುವಿಗೆ ದಕ್ಷಿಣೆಯನ್ನಾಗಿತ್ತನಲ್ಲವೇ? ಅದರಿಂದಲೇ ಈ ದಿಕ್ಕಿಗೆ ದಕ್ಷಿಣ ಎಂಬ ಹೆಸರು ಬಂದಿತು.

05107002a ಅತ್ರ ಲೋಕತ್ರಯಸ್ಯಾಸ್ಯ ಪಿತೃಪಕ್ಷಃ ಪ್ರತಿಷ್ಠಿತಃ।
05107002c ಅತ್ರೋಷ್ಮಪಾನಾಂ ದೇವಾನಾಂ ನಿವಾಸಃ ಶ್ರೂಯತೇ ದ್ವಿಜ।।

ಅಲ್ಲಿ ಮೂರೂ ಲೋಕಗಳ ಪಿತೃಗಳು ನೆಲೆಸಿರುತ್ತಾರೆ. ದ್ವಿಜ! ಧೂಮವನ್ನು ಕುಡಿಯುವ ದೇವತೆಗಳೂ ಅಲ್ಲಿ ನಿವಾಸಿಸುತ್ತಾರೆ ಎಂದು ಕೇಳಿದ್ದೇವೆ.

05107003a ಅತ್ರ ವಿಶ್ವೇ ಸದಾ ದೇವಾಃ ಪಿತೃಭಿಃ ಸಾರ್ಧಮಾಸತೇ।
05107003c ಇಜ್ಯಮಾನಾಃ ಸ್ಮ ಲೋಕೇಷು ಸಂಪ್ರಾಪ್ತಾಸ್ತುಲ್ಯಭಾಗತಾಂ।।

ಅಲ್ಲಿ ವಿಶ್ವೇದೇವರೂ ಕೂಡ ಪಿತೃಗಳೊಂದಿಗೆ ವಾಸಿಸುತ್ತಾರೆ. ಲೋಕಗಳಲ್ಲಿಯ ಯಜ್ಞಗಳಲ್ಲಿ ಅವರೂ ಕೂಡ ಹವಿಸ್ಸುಗಳ ಸಮಭಾಗಿಗಳು.

05107004a ಏತದ್ದ್ವಿತೀಯಂ ಧರ್ಮಸ್ಯ ದ್ವಾರಮಾಚಕ್ಷತೇ ದ್ವಿಜ।
05107004c ತ್ರುಟಿಶೋ ಲವಶಶ್ಚಾತ್ರ ಗಣ್ಯತೇ ಕಾಲನಿಶ್ಚಯಃ।।

ದ್ವಿಜ! ಇದನ್ನು ಧರ್ಮನ ಎರಡನೆಯ ದ್ವಾರವೆಂದು ಕರೆಯುತ್ತಾರೆ. ಇಲ್ಲಿರುವವರ ಕಾಲವನ್ನು ತ್ರುಟಿಶ ಮತ್ತು ಲವಶಗಳಂತೆ ಲೆಖ್ಕಮಾಡಿ ನಿಶ್ಚಯಿಸುತ್ತಾರೆ.

05107005a ಅತ್ರ ದೇವರ್ಷಯೋ ನಿತ್ಯಂ ಪಿತೃಲೋಕರ್ಷಯಸ್ತಥಾ।
05107005c ತಥಾ ರಾಜರ್ಷಯಃ ಸರ್ವೇ ನಿವಸಂತಿ ಗತವ್ಯಥಾಃ।।

ಇಲ್ಲಿ ನಿತ್ಯವೂ ದೇವ‌ಋಷಿಗಳು, ಪಿತೃಲೋಕದ ಋಷಿಗಳು ಮತ್ತು ರಾಜರ್ಷಿಗಳು ಎಲ್ಲರೂ ಗತವ್ಯಥರಾಗಿ ವಾಸಿಸುತ್ತಾರೆ.

05107006a ಅತ್ರ ಧರ್ಮಶ್ಚ ಸತ್ಯಂ ಚ ಕರ್ಮ ಚಾತ್ರ ನಿಶಾಮ್ಯತೇ।
05107006c ಗತಿರೇಷಾ ದ್ವಿಜಶ್ರೇಷ್ಠ ಕರ್ಮಣಾತ್ಮಾವಸಾದಿನಃ।।

ದ್ವಿಜಶ್ರೇಷ್ಠ! ಅಲ್ಲಿ ದರ್ಮ ಮತ್ತು ಸತ್ಯಗಳಿವೆ. ಅಲ್ಲಿ ಕರ್ಮಗಳು ಫಲವನ್ನೀಯುತ್ತವೆ. ತೀರಿಕೊಂಡವರ ಕರ್ಮಗಳ ದಾರಿಯೇ ಇದು.

05107007a ಏಷಾ ದಿಕ್ಸಾ ದ್ವಿಜಶ್ರೇಷ್ಠ ಯಾಂ ಸರ್ವಃ ಪ್ರತಿಪದ್ಯತೇ।
05107007c ವೃತಾ ತ್ವನವಬೋಧೇನ ಸುಖಂ ತೇನ ನ ಗಮ್ಯತೇ।।

ದ್ವಿಜಶ್ರೇಷ್ಠ! ಎಲ್ಲರೂ ದುಸ್ತರರಾಗುವ (ವಿಶ್ರಾಂತಿ ಪಡೆದು ಪುನಃ ಚೇತನಗೊಳ್ಳುವ) ಸ್ಥಳವೆಂದರೆ ಈ ದಿಕ್ಕು. ಕತ್ತಲೆಯಿಂದ ಆವರಿಸಲ್ಪಡುವುದರಿಂದ ಅವರು ಸುಖವನ್ನು ಹೊಂದುವುದಿಲ್ಲ.

05107008a ನೈರೃತಾನಾಂ ಸಹಸ್ರಾಣಿ ಬಹೂನ್ಯತ್ರ ದ್ವಿಜರ್ಷಭ।
05107008c ಸೃಷ್ಟಾನಿ ಪ್ರತಿಕೂಲಾನಿ ದ್ರಷ್ಟವ್ಯಾನ್ಯಕೃತಾತ್ಮಭಿಃ।।

ದ್ವಿಜರ್ಷಭ! ಅಲ್ಲಿ ಅಕೃತಾತ್ಮರು ನೋಡಲೆಂದು ಸೃಷ್ಟಿಸಲ್ಪಟ್ಟ ಬಹು ಸಹಸ್ರಾರು ನೈರೃತರು ವಾಸಿಸುತ್ತಾರೆ.

05107009a ಅತ್ರ ಮಂದರಕುಂಜೇಷು ವಿಪ್ರರ್ಷಿಸದನೇಷು ಚ।
05107009c ಗಂಧರ್ವಾ ಗಾಂತಿ ಗಾಥಾ ವೈ ಚಿತ್ತಬುದ್ಧಿಹರಾ ದ್ವಿಜ।।

ದ್ವಿಜ! ಅಲ್ಲಿ ಮಂದರದ ಕಣಿವೆಗಳಲ್ಲಿ ವಿಪ್ರರ್ಷಿಸದನಗಳಲ್ಲಿ ಗಂಧರ್ವರು ಚಿತ್ತ-ಬುದ್ಧಿಗಳನ್ನು ಅಪಹರಿಸುವ ಗೀತೆಗಳನ್ನು ಹಾಡುತ್ತಾರೆ.

05107010a ಅತ್ರ ಸಾಮಾನಿ ಗಾಥಾಭಿಃ ಶ್ರುತ್ವಾ ಗೀತಾನಿ ರೈವತಃ।
05107010c ಗತದಾರೋ ಗತಾಮಾತ್ಯೋ ಗತರಾಜ್ಯೋ ವನಂ ಗತಃ।।

ಅಲ್ಲಿಯೇ ಸಾಮದ ಹಾಡು-ಗೀತೆಗಳನ್ನು ಕೇಳಿ ರೈವತನು ಪತ್ನಿಯನ್ನು, ಅಮಾತ್ಯರನ್ನು, ಮತ್ತು ರಾಜ್ಯವನ್ನು ತೊರೆದು ವನಕ್ಕೆ ತೆರಳಿದನು.

05107011a ಅತ್ರ ಸಾವರ್ಣಿನಾ ಚೈವ ಯವಕ್ರೀತಾತ್ಮಜೇನ ಚ।
05107011c ಮರ್ಯಾದಾ ಸ್ಥಾಪಿತಾ ಬ್ರಹ್ಮನ್ಯಾಂ ಸೂರ್ಯೋ ನಾತಿವರ್ತತೇ।।

ಬ್ರಹ್ಮನ್! ಅಲ್ಲಿ ಸಾವರ್ಣಿ ಮತ್ತು ಯವಕ್ರೀತನ ಮಗನು ಸೂರ್ಯನಿಗೆ ಗಡಿಹಾಕಿ, ಅವನು ಅದನ್ನು ದಾಟದೇ ಹಿಂದಿರುಗುತ್ತಾನೆ.

05107012a ಅತ್ರ ರಾಕ್ಷಸರಾಜೇನ ಪೌಲಸ್ತ್ಯೇನ ಮಹಾತ್ಮನಾ।
05107012c ರಾವಣೇನ ತಪಶ್ಚೀರ್ತ್ವಾ ಸುರೇಭ್ಯೋಽಮರತಾ ವೃತಾ।।

ಅಲ್ಲಿ ಮಹಾತ್ಮ, ರಾಕ್ಷಸರಾಜ, ಪೌಲಸ್ತ್ಯ, ರಾವಣನು ತಪಸ್ಸನ್ನು ತಪಿಸಿ ಸುರರಿಂದ ಅಮರತ್ವವನ್ನು ಕೇಳಿದನು.

05107013a ಅತ್ರ ವೃತ್ತೇನ ವೃತ್ರೋಽಪಿ ಶಕ್ರಶತ್ರುತ್ವಮೀಯಿವಾನ್।
05107013c ಅತ್ರ ಸರ್ವಾಸವಃ ಪ್ರಾಪ್ತಾಃ ಪುನರ್ಗಚ್ಚಂತಿ ಪಂಚಧಾ।।

ಅಲ್ಲಿ ತನ್ನ ಪಾಪವರ್ತನೆಯಿಂದ ವೃತ್ರನು ಶಕ್ರನೊಂದಿಗೆ ಶತ್ರುತ್ವವನ್ನು ಬೆಳೆಸಿದನು. ಎಲ್ಲ ಜೀವಿಗಳು ಇಲ್ಲಿ ಬಂದು ಪುನಃ ಪಂಚಭೂತಗಳಲ್ಲಿ ಸೇರುತ್ತವೆ.

05107014a ಅತ್ರ ದುಷ್ಕೃತಕರ್ಮಾಣೋ ನರಾಃ ಪಚ್ಯಂತಿ ಗಾಲವ।
05107014c ಅತ್ರ ವೈತರಣೀ ನಾಮ ನದೀ ವಿತರಣೈರ್ವೃತಾ।
05107014e ಅತ್ರ ಗತ್ವಾ ಸುಖಸ್ಯಾಂತಂ ದುಃಖಸ್ಯಾಂತಂ ಪ್ರಪದ್ಯತೇ।।

ಗಾಲವ! ಇಲ್ಲಿ ದುಷ್ಕೃತಕರ್ಮಗಳನ್ನು ಮಾಡಿದ ನರರು ಪಚನವಾಗುತ್ತಾರೆ. ಇಲ್ಲಿಯೇ ವಿತರಣಗಳಿಂದ ಕೂಡಿದ ವೈತರಣೀ ಎಂಬ ನದಿಯು ಹರಿಯುತ್ತದೆ. ಇಲ್ಲಿಗೆ ಬಂದು ಜೀವಿಗಳು ಅತ್ಯಂತ ಸುಖವನ್ನೂ ಅತ್ಯಂತ ದುಃಖವನ್ನೂ ಅನುಭವಿಸುತ್ತಾರೆ.

05107015a ಅತ್ರಾವೃತ್ತೋ ದಿನಕರಃ ಕ್ಷರತೇ ಸುರಸಂ ಪಯಃ।
05107015c ಕಾಷ್ಠಾಂ ಚಾಸಾದ್ಯ ಧಾನಿಷ್ಠಾಂ ಹಿಮಮುತ್ಸೃಜತೇ ಪುನಃ।।

ಇಲ್ಲಿಗೆ ತಲುಪಿದ ದಿವಾಕರನು ಸುರಸ ನೀರನ್ನು ಸುರಿಸುತ್ತಾನೆ. ಧನಿಷ್ಠಾ ದಿಕ್ಕಿಗೆ ಹೋಗಿ ಪುನಃ ಹಿಮವನ್ನು ಸುರಿಸುತ್ತಾನೆ.

05107016a ಅತ್ರಾಹಂ ಗಾಲವ ಪುರಾ ಕ್ಷುಧಾರ್ತಃ ಪರಿಚಿಂತಯನ್।
05107016c ಲಬ್ಧವಾನ್ಯುಧ್ಯಮಾನೌ ದ್ವೌ ಬೃಹಂತೌ ಗಜಕಚ್ಚಪೌ।।

ಗಾಲವ! ಹಿಂದೆ ನಾನು ಹಸಿದು ಚಿಂತೆಯಲ್ಲಿದ್ದಾಗ ಅಲ್ಲಿಯೇ ಯುದ್ಧಮಾಡುತ್ತಿರುವ ಬೃಹದಾಕಾರದ ಗಜ-ಕಚ್ಛಪರೀರ್ವರನ್ನು ಪಡೆದಿದ್ದೆನು.

05107017a ಅತ್ರ ಶಕ್ರಧನುರ್ನಾಮ ಸೂರ್ಯಾಜ್ಜಾತೋ ಮಹಾನೃಷಿಃ।
05107017c ವಿದುರ್ಯಂ ಕಪಿಲಂ ದೇವಂ ಯೇನಾತ್ತಾಃ ಸಗರಾತ್ಮಜಾಃ।।

ಅಲ್ಲಿ ಸೂರ್ಯನಿಂದ ಶಕ್ರಧನುವೆಂಬ ಹೆಸರಿನ ಮಹಾನೃಷಿಯು ಹುಟ್ಟಿದನು. ಅವನು ನಂತರ ಕಪಿಲದೇವನೆಂದಾದನು. ಅವನಿಂದಲೇ ಸಗರಾತ್ಮಜರು ನಾಶಗೊಂಡರು.

05107018a ಅತ್ರ ಸಿದ್ಧಾಃ ಶಿವಾ ನಾಮ ಬ್ರಾಹ್ಮಣಾ ವೇದಪಾರಗಾಃ।
05107018c ಅಧೀತ್ಯ ಸಖಿಲಾನ್ವೇದಾನಾಲಭಂತೇ ಯಮಕ್ಷಯಂ।।

ಅಲ್ಲಿಯೇ ಶಿವಾ ಎಂಬ ಹೆಸರಿನ ವೇದಪಾರಂಗತರು ಸಿದ್ಧಿಯನ್ನು ಪಡೆದರು. ಅಖಿಲ ವೇದಗಳನ್ನೂ ಗೆದ್ದು ಕೊನೆಯಲ್ಲಿ ಯಮಕ್ಷಯವನ್ನು ಹೊಂದಿದರು.

05107019a ಅತ್ರ ಭೋಗವತೀ ನಾಮ ಪುರೀ ವಾಸುಕಿಪಾಲಿತಾ।
05107019c ತಕ್ಷಕೇಣ ಚ ನಾಗೇನ ತಥೈವೈರಾವತೇನ ಚ।।

ಅಲ್ಲಿ ವಾಸುಕಿ, ತಕ್ಷಕ, ನಾಗ ಐರಾವತನಿಂದ ಪಾಲಿತವಾದ ಭೋಗವತೀ ಎಂಬ ಹೆಸರಿನ ಪುರಿಯಿದೆ.

05107020a ಅತ್ರ ನಿರ್ಯಾಣಕಾಲೇಷು ತಮಃ ಸಂಪ್ರಾಪ್ಯತೇ ಮಹತ್।
05107020c ಅಭೇದ್ಯಂ ಭಾಸ್ಕರೇಣಾಪಿ ಸ್ವಯಂ ವಾ ಕೃಷ್ಣವರ್ತ್ಮನಾ।।

ನಿರ್ಯಾಣಕಾಲದಲ್ಲಿ ಅಲ್ಲಿ ಸ್ವಯಂ ಭಾಸ್ಕರನಿಂದ ಅಥವಾ ಅಗ್ನಿಯಿಂದ ಭೇದಿಸಲಸಾಧ್ಯವಾದ ಮಹಾ ಕತ್ತಲೆಯು ಸಿಗುತ್ತದೆ.

05107021a ಏಷ ತಸ್ಯಾಪಿ ತೇ ಮಾರ್ಗಃ ಪರಿತಾಪಸ್ಯ ಗಾಲವ।
05107021c ಬ್ರೂಹಿ ಮೇ ಯದಿ ಗಂತವ್ಯಂ ಪ್ರತೀಚೀಂ ಶೃಣು ವಾ ಮಮ।।

ಗಾಲವ! ತಪಸ್ಸನ್ನು ತಪಿಸಿರುವ ನೀನು ಕೂಡ ಈ ಮಾರ್ಗದಲ್ಲಿ ಪ್ರಯಾಣಿಸಬೇಕಾಗುತ್ತದೆ. ಈ ದಿಕ್ಕಿಗೆ ಹೋಗಬೇಕಾ ಹೇಳು. ಇಲ್ಲದಿದ್ದರೆ ಪಶ್ಚಿಮದ ಕುರಿತು ನನ್ನಿಂದ ಕೇಳು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಲವಚರಿತೇ ಸಪ್ತಾಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಲವಚರಿತೆಯಲ್ಲಿ ನೂರಾಏಳನೆಯ ಅಧ್ಯಾಯವು.