105 ಗಾಲವಚರಿತಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಭಗವದ್ಯಾನ ಪರ್ವ

ಅಧ್ಯಾಯ 105

ಸಾರ

ಕೇಳಿದ ಗುರುದಕ್ಷಿಣೆಯನ್ನು ಹೇಗೆ ತರಬಲ್ಲೆ ಎಂದು ಉದ್ವಿಗ್ನನಾದ ಗಾಲವನು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿ ವಿಷ್ಣುವಿನ ಮೊರೆಹೊಗಲು, ಗರುಡನು ಬಂದು ನಿನ್ನನ್ನು ಎಲ್ಲಿ ಬೇಕಾದರಲ್ಲಿಗೆ ಕರೆದುಕೊಂಡು ಹೋಗಿ ಸಹಾಯಮಾಡುತ್ತೇನೆಂದು ಹೇಳಿದುದು (1-19).

05105001 ನಾರದ ಉವಾಚ।
05105001a ಏವಮುಕ್ತಸ್ತದಾ ತೇನ ವಿಶ್ವಾಮಿತ್ರೇಣ ಧೀಮತಾ।
05105001c ನಾಸ್ತೇ ನ ಶೇತೇ ನಾಹಾರಂ ಕುರುತೇ ಗಾಲವಸ್ತದಾ।।

ನಾರದನು ಹೇಳಿದನು: “ಧೀಮತ ವಿಶ್ವಾಮಿತ್ರನು ಹೀಗೆ ಹೇಳಲು ಗಾಲವನಿಗೆ ನಿಲ್ಲಲೂ, ಮಲಗಲೂ, ಊಟಮಾಡಲೂ ಆಗಲಿಲ್ಲ.

05105002a ತ್ವಗಸ್ಥಿಭೂತೋ ಹರಿಣಶ್ಚಿಂತಾಶೋಕಪರಾಯಣಃ।
05105002c ಶೋಚಮಾನೋಽತಿಮಾತ್ರಂ ಸ ದಹ್ಯಮಾನಶ್ಚ ಮನ್ಯುನಾ।।

ಅವನು ಸ್ವಲ್ಪವೇ ಸಮಯದಲ್ಲಿ ಚಿಂತಾಶೋಕಪರಾಯಣನಾಗಿ ಹಳದಿಯಾಗಿ, ಶೋಕಿಸುತ್ತ ಸಿಟ್ಟಿನಿಂದ ಉರಿಯುತ್ತಾ ಅಸ್ತಿಯಂತಾದನು.

05105003a ಕುತಃ ಪುಷ್ಟಾನಿ ಮಿತ್ರಾಣಿ ಕುತೋಽರ್ಥಾಃ ಸಂಚಯಃ ಕುತಃ।
05105003c ಹಯಾನಾಂ ಚಂದ್ರಶುಭ್ರಾಣಾಂ ಶತಾನ್ಯಷ್ಟೌ ಕುತೋ ಮಮ।।

“ಶ್ರೀಮಂತ ಮಿತ್ರರನ್ನು ಎಲ್ಲಿ ಹುಡುಕಲಿ? ಹಣವನ್ನು ಎಲ್ಲಿಂದ ತರಲಿ? ಉಳಿತಾಯವಾದರೂ ಎಲ್ಲಿದೆ? ಚಂದ್ರನಂತೆ ಬಿಳುಪಾದ ಎಂಟುನೂರು ಕುದುರೆಗಳನ್ನು ನಾನು ಎಲ್ಲಿಂದ ತರಲಿ?

05105004a ಕುತೋ ಮೇ ಭೋಜನಶ್ರದ್ಧಾ ಸುಖಶ್ರದ್ಧಾ ಕುತಶ್ಚ ಮೇ।
05105004c ಶ್ರದ್ಧಾ ಮೇ ಜೀವಿತಸ್ಯಾಪಿ ಚಿನ್ನಾ ಕಿಂ ಜೀವಿತೇನ ಮೇ।।

ನನಗೆ ಊಟದಲ್ಲಿ ಆಸಕ್ತಿ ಎಲ್ಲಿದೆ? ನನಗೆ ಸುಖದಲ್ಲಿ ಆಸಕ್ತಿ ಎಲ್ಲಿದೆ? ಜೀವನದಲ್ಲಿಯೇ ನನಗೆ ಶ್ರದ್ಧೆ ಎಲ್ಲಿದೆ? ನಾನಿನ್ನು ಏಕೆ ಜೀವಿಸಿರಬೇಕು?

05105005a ಅಹಂ ಪಾರಂ ಸಮುದ್ರಸ್ಯ ಪೃಥಿವ್ಯಾ ವಾ ಪರಂ ಪರಾತ್।
05105005c ಗತ್ವಾತ್ಮಾನಂ ವಿಮುಂಚಾಮಿ ಕಿಂ ಫಲಂ ಜೀವಿತೇನ ಮೇ।।

ಸಮುದ್ರದ ಆಚೆ ಹೋಗಿ ಅಥವಾ ಭೂಮಿಯ ತುದಿಗೆ ಹೋಗಿ ನನ್ನನ್ನು ಮುಕ್ತಗೊಳಿಸುತ್ತೇನೆ. ನಾನು ಜೀವಿಸಿ ಏನು ಪ್ರಯೋಜನ?

05105006a ಅಧನಸ್ಯಾಕೃತಾರ್ಥಸ್ಯ ತ್ಯಕ್ತಸ್ಯ ವಿವಿಧೈಃ ಫಲೈಃ।
05105006c ಋಣಂ ಧಾರಯಮಾಣಸ್ಯ ಕುತಃ ಸುಖಮನೀಹಯಾ।।

ಧನವಿಲ್ಲದವನಿಗೆ, ಹಣವನ್ನು ಸಂಪಾದಿಸದವನಿಗೆ, ವಿವಿಧ ಫಲಗಳಿಂದ ವಂಚಿತನಾದವನಿಗೆ, ಸಾಲವನ್ನು ಹೊತ್ತಿರುವವನಿಗೆ ಸುಖವು ಎಲ್ಲಿಂದ ಬರುತ್ತದೆ?

05105007a ಸುಹೃದಾಂ ಹಿ ಧನಂ ಭುಕ್ತ್ವಾ ಕೃತ್ವಾ ಪ್ರಣಯಮೀಪ್ಸಿತಂ।
05105007c ಪ್ರತಿಕರ್ತುಮಶಕ್ತಸ್ಯ ಜೀವಿತಾನ್ಮರಣಂ ವರಂ।।

ಸುಹೃದಯರು ಪ್ರೀತಿಯಿಂದ ನೀಡಿದ ಸಹಾಯಧನವನ್ನು ಬಳಸಿ ಅದನ್ನು ಹಿಂದಿರುಗಿಸಲು ಅಶಕ್ತನಾದವನಿಗೆ ಜೀವಿಸಿರುವುದಕ್ಕಿಂತ ಸಾಯುವುದೇ ಮೇಲು.

05105008a ಪ್ರತಿಶ್ರುತ್ಯ ಕರಿಷ್ಯೇತಿ ಕರ್ತವ್ಯಂ ತದಕುರ್ವತಃ।
05105008c ಮಿಥ್ಯಾವಚನದಗ್ಧಸ್ಯ ಇಷ್ಟಾಪೂರ್ತಂ ಪ್ರಣಶ್ಯತಿ।।

ಮಾಡುತ್ತೇನೆ ಎಂದು ಹೇಳಿ ಕರ್ತವ್ಯವನ್ನು ಮಾಡದೇ ಇದ್ದವನು ಸುಳ್ಳುಹೇಳಿದುದಕ್ಕೆ ಉರಿದು ಸಂಪೂರ್ಣವಾಗಿ ನಾಶಹೊಂದುತ್ತಾನೆ.

05105009a ನ ರೂಪಮನೃತಸ್ಯಾಸ್ತಿ ನಾನೃತಸ್ಯಾಸ್ತಿ ಸಂತತಿಃ।
05105009c ನಾನೃತಸ್ಯಾಧಿಪತ್ಯಂ ಚ ಕುತ ಏವ ಗತಿಃ ಶುಭಾ।।

ಸುಳ್ಳುಹೇಳಿದವನಿಗೆ ರೂಪವಿರುವುದಿಲ್ಲ, ಸುಳ್ಳುಹೇಳಿದವನಿಗೆ ಸಂತತಿಯಿರುವುದಿಲ್ಲ, ಸುಳ್ಳುಹೇಳಿದವನಿಗೆ ಅಧಿಕಾರವಿರುವುದಿಲ್ಲ. ಶುಭ ಗತಿಯಾದರೂ ಎಲ್ಲಿರುತ್ತದೆ?

05105010a ಕುತಃ ಕೃತಘ್ನಸ್ಯ ಯಶಃ ಕುತಃ ಸ್ಥಾನಂ ಕುತಃ ಸುಖಂ।
05105010c ಅಶ್ರದ್ಧೇಯಃ ಕೃತಘ್ನೋ ಹಿ ಕೃತಘ್ನೇ ನಾಸ್ತಿ ನಿಷ್ಕೃತಿಃ।।

ಕೃತಘ್ನನಿಗೆ ಯಶಸ್ಸು ಎಲ್ಲಿ ಸಿಗುತ್ತದೆ? ಸ್ಥಾನವೆಲ್ಲಿ? ಸುಖವೆಲ್ಲಿ? ಅಶ್ರದ್ಧೆಯುಳ್ಳವನು ಕೃತಘ್ನನೇ ಸರಿ. ಕೃತಘ್ನನಿಗೆ ಮೋಕ್ಷವಿಲ್ಲ.

05105011a ನ ಜೀವತ್ಯಧನಃ ಪಾಪಃ ಕುತಃ ಪಾಪಸ್ಯ ತಂತ್ರಣಂ।
05105011c ಪಾಪೋ ಧ್ರುವಮವಾಪ್ನೋತಿ ವಿನಾಶಂ ನಾಶಯನ್ಕೃತಂ।।

ಧನವಿಲ್ಲದಿದ್ದರೆ ಜೀವವಿಲ್ಲದಂತೆ. ಆ ಪಾಪಿಗೆ ಪಾಪದ ತಂತ್ರಣವೆಲ್ಲಿ? ಆ ಪಾಪಿಯು ಮಾಡಿದುದೆಲ್ಲವನ್ನೂ ನಾಶಪಡಿಸಿ, ನಿಶ್ಚಿತವಾಗಿಯೂ ವಿನಾಶಹೊಂದುತ್ತಾನೆ.

05105012a ಸೋಽಹಂ ಪಾಪಃ ಕೃತಘ್ನಶ್ಚ ಕೃಪಣಶ್ಚಾನೃತೋಽಪಿ ಚ।
05105012c ಗುರೋರ್ಯಃ ಕೃತಕಾರ್ಯಃ ಸಂಸ್ತತ್ಕರೋಮಿ ನ ಭಾಷಿತಂ।
05105012e ಸೋಽಹಂ ಪ್ರಾಣಾನ್ವಿಮೋಕ್ಷ್ಯಾಮಿ ಕೃತ್ವಾ ಯತ್ನಮನುತ್ತಮಂ।।

ನಾನೇ ಆ ಪಾಪಿ, ಕೃತಘ್ನ, ಕೃಪಣ, ಸುಳ್ಳುಬುರುಕನೆನಿಸಿಕೊಂಡು ಬಿಟ್ಟಿದ್ದೇನೆ. ಗುರುವಿನಿಂದ ನನ್ನ ಕೆಲಸಗಳನ್ನು ಮಾಡಿಸಿಕೊಂಡು ಅವನು ಹೇಳಿದಂತೆ ಮಾಡಲಿಕ್ಕಾಗುತ್ತಿಲ್ಲವಲ್ಲ! ಉತ್ತಮ ಪ್ರಯತ್ನವನ್ನು ಮಾಡಿ ನನ್ನ ಪ್ರಾಣಗಳನ್ನು ತೊರೆಯುತ್ತೇನೆ.

05105013a ಅರ್ಥನಾ ನ ಮಯಾ ಕಾ ಚಿತ್ಕೃತಪೂರ್ವಾ ದಿವೌಕಸಾಂ।
05105013c ಮಾನಯಂತಿ ಚ ಮಾಂ ಸರ್ವೇ ತ್ರಿದಶಾ ಯಜ್ಞಾಸಂಸ್ತರೇ।।

ಇದಕ್ಕೂ ಮೊದಲು ದೇವತೆಗಳಿಂದ ಯಾವ ಸಂಪತ್ತನ್ನೂ ಕೇಳಿರಲಿಲ್ಲ. ಎಲ್ಲಾ ತ್ರಿದಶರೂ ಇದಕ್ಕಾಗಿಯೇ ನನ್ನನ್ನು ಯಜ್ಞಗಳಲ್ಲಿ ಗೌರವಿಸುತ್ತಾರೆ.

05105014a ಅಹಂ ತು ವಿಬುಧಶ್ರೇಷ್ಠಂ ದೇವಂ ತ್ರಿಭುವನೇಶ್ವರಂ।
05105014c ವಿಷ್ಣುಂ ಗಚ್ಚಾಮ್ಯಹಂ ಕೃಷ್ಣಂ ಗತಿಂ ಗತಿಮತಾಂ ವರಂ।।

ನಾನಾದರೋ ಈಗ ವಿಬುಧಶ್ರೇಷ್ಠ, ದೇವ, ತ್ರಿಭುವನೇಶ್ವರ, ಗತಿಮತರಲ್ಲಿ ಶ್ರೇಷ್ಠ, ವಿಷ್ಣು, ಕೃಷ್ಣನ ಮೊರೆ ಹೋಗುತ್ತೇನೆ.

05105015a ಭೋಗಾ ಯಸ್ಮಾತ್ಪ್ರತಿಷ್ಠಂತೇ ವ್ಯಾಪ್ಯ ಸರ್ವಾನ್ಸುರಾಸುರಾನ್।
05105015c ಪ್ರಯತೋ ದ್ರಷ್ಟುಮಿಚ್ಚಾಮಿ ಮಹಾಯೋಗಿನಮವ್ಯಯಂ।।

ಯಾರಿಂದ ಸರ್ವ ಭೋಗಗಳು ಹುಟ್ಟಿ ಸುರಾಸುರರಲ್ಲಿ ವ್ಯಾಪಿಸಿಕೊಂಡಿವೆಯೋ ಆ ಮಹಾಯೋಗಿ, ಅವ್ಯಯನನ್ನು ತಲೆಬಾಗಿ ನೋಡಲು ಇಚ್ಛಿಸುತ್ತೇನೆ.”

05105016a ಏವಮುಕ್ತೇ ಸಖಾ ತಸ್ಯ ಗರುಡೋ ವಿನತಾತ್ಮಜಃ।
05105016c ದರ್ಶಯಾಮಾಸ ತಂ ಪ್ರಾಹ ಸಂಹೃಷ್ಟಃ ಪ್ರಿಯಕಾಮ್ಯಯಾ।।

ಹೀಗೆ ಹೇಳಲು ಅವನ ಸಖ ವಿನತಾತ್ಮಜ ಗರುಡನು ತೋರಿಸಿಕೊಂಡನು ಮತ್ತು ಸಂತೋಷಗೊಂಡು ಅವನಿಗೆ ಹಿತವಾದುದನ್ನು ಮಾಡುವ ಆಸೆಯಿಂದ ಹೇಳಿದನು:

05105017a ಸುಹೃದ್ಭವಾನ್ಮಮ ಮತಃ ಸುಹೃದಾಂ ಚ ಮತಃ ಸುಹೃತ್।
05105017c ಈಪ್ಸಿತೇನಾಭಿಲಾಷೇಣ ಯೋಕ್ತವ್ಯೋ ವಿಭವೇ ಸತಿ।।

“ನೀನು ನನ್ನ ಪ್ರಿಯ ಸಖ! ತಾನು ಸುಖದಲ್ಲಿರುವಾಗ ಸ್ನೇಹಿತನ ಆಸೆ-ಅಭಿಲಾಶೆಗಳನ್ನು ಪೂರೈಸುವುದು ಸ್ನೇಹಿತನ ಕರ್ತವ್ಯ.

05105018a ವಿಭವಶ್ಚಾಸ್ತಿ ಮೇ ವಿಪ್ರ ವಾಸವಾವರಜೋ ದ್ವಿಜ।
05105018c ಪೂರ್ವಮುಕ್ತಸ್ತ್ವದರ್ಥಂ ಚ ಕೃತಃ ಕಾಮಶ್ಚ ತೇನ ಮೇ।।

ದ್ವಿಜ! ವಿಪ್ರ! ವಾಸವನ ತಮ್ಮನೇ ನನ್ನಲ್ಲಿರುವ ಸಂಪತ್ತು. ಇದಕ್ಕೂ ಮೊದಲು ನಿನಗೋಸ್ಕರ ನಾನು ಅವನಲ್ಲಿ ಮಾತನಾಡಿದ್ದೆ. ಅವನು ನನ್ನ ಬಯಕೆಯನ್ನು ಪೂರೈಸಲು ಒಪ್ಪಿಕೊಂಡಿದ್ದಾನೆ.

05105019a ಸ ಭವಾನೇತು ಗಚ್ಚಾವ ನಯಿಷ್ಯೇ ತ್ವಾಂ ಯಥಾಸುಖಂ।
05105019c ದೇಶಂ ಪಾರಂ ಪೃಥಿವ್ಯಾ ವಾ ಗಚ್ಚ ಗಾಲವ ಮಾಚಿರಂ।।

ಬಾ! ನಾನು ಮತ್ತು ನೀನು ಒಟ್ಟಿಗೇ ಹೋಗೋಣ! ನಾನು ನಿನ್ನನ್ನು ಸುಖವಾಗಿ ಆಕಡೆ ಅಥವಾ ಭೂಮಿಯ ಅಂಚಿಗೆ ಕರೆದೊಯ್ಯುತ್ತೇನೆ. ಗಾಲವ! ತಡಮಾಡಬೇಡ!”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಲವಚರಿತೇ ಪಂಚಾಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಲವಚರಿತೆಯಲ್ಲಿ ನೂರಾಐದನೆಯ ಅಧ್ಯಾಯವು.