103 ಮಾತಲಿವರಾನ್ವೇಷಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಭಗವದ್ಯಾನ ಪರ್ವ

ಅಧ್ಯಾಯ 103

ಸಾರ

ಇಂದ್ರನು ನಾಗನಿಗೆ ಆಯುಸ್ಸನ್ನು ಕೊಟ್ಟಿದ್ದುದನ್ನು ಕೇಳಿ ಕುಪಿತನಾದ ಗರುಡನು ರಭಸದಿಂದ ಇಂದ್ರನಲ್ಲಿಗೆ ಬಂದು ಅವನನ್ನು ಹೀಯಾಳಿಸಿ ತನ್ನ ಪರಾಕ್ರಮವನ್ನು ಹೇಳಿಕೊಳ್ಳುತ್ತಾ ಬಲಶಾಲಿಯು ಯಾರು ಎಂದು ನಿಶ್ಚಿತವಾಗಲಿ ಎಂದು ಪಂಥಕ್ಕೆ ಆಹ್ವಾನಿಸಿದುದು (1-17). ಆಗ ವಿಷ್ಣುವು ತನ್ನ ಬಲತೋಳನ್ನು ಗರುಡನ ಮೇಲೆ ಇಡಲು, ಅದನ್ನೂ ಹೊರಲಾರದೇ ಗರುಡನು ಕುಸಿದು ಬಿದ್ದುದು ಮತ್ತು ವಿಷ್ಣುವಿನಲ್ಲಿ ಕ್ಷಮೆ ಕೇಳಿದುದು (18-30). “ನೀನೂ ಕೂಡ ಎಲ್ಲಿಯವರೆಗೆ ಆ ವೀರ ಪಾಂಡುಸುತರನ್ನು ರಣದಲ್ಲಿ ಎದುರಿಸುವುದಿಲ್ಲವೋ ಅಲ್ಲಿಯವರೆಗೆ ಜೀವಿಸಿರುತ್ತೀಯೆ.” ಎಂದು ಕಣ್ವನು ದುರ್ಯೋಧನನಿಗೆ ಉಪದೇಶಿಸಲು ದುರ್ಯೋಧನನು ತನ್ನ ತೊಡೆಯನ್ನು ಚಪ್ಪರಿಸಿ “ಈಶ್ವರನಿಂದ ಹೇಗೆ ಸೃಷ್ಟಿಸಲ್ಪಟ್ಟಿದ್ದೇನೋ, ನನ್ನ ಭವಿಷ್ಯ ಮತ್ತು ದಾರಿಯು ಹೇಗೆ ನಡೆಸುತ್ತದೆಯೋ ಹಾಗೆಯೇ ನಾನು ಮಾಡುತ್ತೇನೆ” ಎಂದು ಉತ್ತರಿಸುವುದು (31-38).

05103001 ಕಣ್ವ ಉವಾಚ।
05103001a ಗರುಡಸ್ತತ್ತು ಶುಶ್ರಾವ ಯಥಾವೃತ್ತಂ ಮಹಾಬಲಃ।
05103001c ಆಯುಃಪ್ರದಾನಂ ಶಕ್ರೇಣ ಕೃತಂ ನಾಗಸ್ಯ ಭಾರತ।।

ಕಣ್ವನು ಹೇಳಿದನು: “ಭಾರತ! ನಡೆದುದನ್ನು – ಶಕ್ರನು ನಾಗನಿಗೆ ಆಯುಸ್ಸನ್ನು ಕೊಟ್ಟಿದ್ದುದನ್ನು - ಮಹಾಬಲ ಗರುಡನು ಕೇಳಿದನು.

05103002a ಪಕ್ಷವಾತೇನ ಮಹತಾ ರುದ್ಧ್ವಾ ತ್ರಿಭುವನಂ ಖಗಃ।
05103002c ಸುಪರ್ಣಃ ಪರಮಕ್ರುದ್ಧೋ ವಾಸವಂ ಸಮುಪಾದ್ರವತ್।।

ಪರಮಕೃದ್ಧನಾಗಿ ಖಗ ಸುಪರ್ಣನು ತನ್ನ ರೆಕ್ಕೆಗಳಿಂದ ಮಹಾ ಧೂಳನ್ನೆಬ್ಬಿಸಿ ತ್ರಿಭುವನದ ವಾಸವನ ಬಳಿ ಧಾವಿಸಿದನು.

05103003 ಗರುಡ ಉವಾಚ।
05103003a ಭಗವನ್ಕಿಮವಜ್ಞಾನಾತ್ಕ್ಷುಧಾಂ ಪ್ರತಿ ಭಯೇ ಮಮ।
05103003c ಕಾಮಕಾರವರಂ ದತ್ತ್ವಾ ಪುನಶ್ಚಲಿತವಾನಸಿ।।

ಗರುಡನು ಹೇಳಿದನು: “ಭಗವನ್! ನನ್ನನ್ನು ಅಲ್ಲಗಳೆದು ನೀನು ಏಕೆ ನನ್ನ ಹಸಿವೆಗೆ ಭಂಗ ತರುತ್ತಿದ್ದೀಯೆ. ನೀನೇ ಬಯಸಿ ಕೊಟ್ಟ ವರವನ್ನು ಪುನಃ ಹಿಂದೆ ತೆಗೆದುಕೊಳ್ಳುತ್ತಿದ್ದಿಯೆ!

05103004a ನಿಸರ್ಗಾತ್ಸರ್ವಭೂತಾನಾಂ ಸರ್ವಭೂತೇಶ್ವರೇಣ ಮೇ।
05103004c ಆಹಾರೋ ವಿಹಿತೋ ಧಾತ್ರಾ ಕಿಮರ್ಥಂ ವಾರ್ಯತೇ ತ್ವಯಾ।।

ನಿಸರ್ಗದ ಸರ್ವಭೂತಗಳ ಸರ್ವಭೂತೇಶ್ವರ ಧಾತ್ರನು ನನ್ನ ಆಹಾರವನ್ನು ನಿಶ್ಚಯಿಸಿದ್ದಾನೆ. ನೀನು ಏಕೆ ಅದನ್ನು ತಡೆಯುತ್ತಿದ್ದೀಯೆ?

05103005a ವೃತಶ್ಚೈಷ ಮಹಾನಾಗಃ ಸ್ಥಾಪಿತಃ ಸಮಯಶ್ಚ ಮೇ।
05103005c ಅನೇನ ಚ ಮಯಾ ದೇವ ಭರ್ತವ್ಯಃ ಪ್ರಸವೋ ಮಹಾನ್।।

ನಾನು ಈ ಮಹಾನಾಗನನ್ನು ಮತ್ತು ಸಮಯವನ್ನು ನಿರ್ದಿಷ್ಟಗೊಳಿಸಿದ್ದೆ. ದೇವ! ಇದರಿಂದ ನಾನು ನನ್ನ ಮಹಾ ಸಂಖ್ಯೆಯ ಸಂತತಿಗೆ ಉಣಿಸುವವನಿದ್ದೆ.

05103006a ಏತಸ್ಮಿಂಸ್ತ್ವನ್ಯಥಾಭೂತೇ ನಾನ್ಯಂ ಹಿಂಸಿತುಮುತ್ಸಹೇ।
05103006c ಕ್ರೀಡಸೇ ಕಾಮಕಾರೇಣ ದೇವರಾಜ ಯಥೇಚ್ಚಕಂ।।
05103007a ಸೋಽಹಂ ಪ್ರಾಣಾನ್ವಿಮೋಕ್ಷ್ಯಾಮಿ ತಥಾ ಪರಿಜನೋ ಮಮ।
05103007c ಯೇ ಚ ಭೃತ್ಯಾ ಮಮ ಗೃಹೇ ಪ್ರೀತಿಮಾನ್ಭವ ವಾಸವ।।

ಇದರಿಂದ ನಾನು ಬೇರೆ ಯಾರನ್ನೂ ಅನ್ಯಥಾ ಹಿಂಸಿಸಲು ಬಯಸುವುದಿಲ್ಲ. ದೇವರಾಜ! ನಿನಗಿಷ್ಟಬಂದಂತೆ ಬೇಕಂತೆಲೇ ನಾನು ಮತ್ತು ಹಾಗೆಯೇ ನನ್ನ ಪರಿವಾರದವರು, ನನ್ನ ಮನೆಯಲ್ಲಿ ನೇಮಿಸಿರುವ ಸೇವಕರು ಪ್ರಾಣವನ್ನು ತೊರೆಯಬೇಕು ಎಂದು ನೀನು ಈ ಆಟವನ್ನು ಆಡುತ್ತಿದ್ದೀಯೆ! ವಾಸವ! ಅದರಿಂದ ನೀನು ಸಂತೋಷಗೊಳ್ಳುತ್ತೀಯೆ!

05103008a ಏತಚ್ಚೈವಾಹಮರ್ಹಾಮಿ ಭೂಯಶ್ಚ ಬಲವೃತ್ರಹನ್।
05103008c ತ್ರೈಲೋಕ್ಯಸ್ಯೇಶ್ವರೋ ಯೋಽಹಂ ಪರಭೃತ್ಯತ್ವಮಾಗತಃ।।

ಬಲವೃತ್ರಹನ್! ಇದಕ್ಕೆ ಮತ್ತು ಇದಕ್ಕಿಂತಲೂ ಹೆಚ್ಚಿನದಕ್ಕೆ ನಾನು ಅರ್ಹ. ತ್ರೈಲೋಕ್ಯೇಶ್ವರನಾದರೂ ನಾನು ಇತರರ ಸೇವಕಮಾತ್ರ ಆಗಿಬಿಟ್ಟಿದ್ದೇನೆ.

05103009a ತ್ವಯಿ ತಿಷ್ಠತಿ ದೇವೇಶ ನ ವಿಷ್ಣುಃ ಕಾರಣಂ ಮಮ।
05103009c ತ್ರೈಲೋಕ್ಯರಾಜ ರಾಜ್ಯಂ ಹಿ ತ್ವಯಿ ವಾಸವ ಶಾಶ್ವತಂ।।

ದೇವೇಶ! ತ್ರೈಲೋಕ್ಯರಾಜ! ವಾಸವ! ನಾನು ನಿನ್ನ ಸಮನಾಗಿದ್ದರೂ ವಿಷ್ಣುವಿನ ಕಾರಣದಿಂದ ರಾಜ್ಯವು ನಿನ್ನಲ್ಲಿದೆ.

05103010a ಮಮಾಪಿ ದಕ್ಷಸ್ಯ ಸುತಾ ಜನನೀ ಕಶ್ಯಪಃ ಪಿತಾ।
05103010c ಅಹಮಪ್ಯುತ್ಸಹೇ ಲೋಕಾನ್ಸಮಸ್ತಾನ್ವೋಢುಮಂಜಸಾ।।

ನನಗೆ ಕೂಡ ದಕ್ಷನ ಮಗಳು ಜನನಿ ಮತ್ತು ಕಶ್ಯಪನು ತಂದೆ. ನಿನ್ನಂತೆಯೇ ನಾನೂ ಕೂಡ ಸಮಸ್ತ ಲೋಕಗಳನ್ನು ಆಯಾಸಗೊಳ್ಳದೇ ಎತ್ತಿ ಹಿಡಿಯಬಲ್ಲೆ.

05103011a ಅಸಹ್ಯಂ ಸರ್ವಭೂತಾನಾಂ ಮಮಾಪಿ ವಿಪುಲಂ ಬಲಂ।
05103011c ಮಯಾಪಿ ಸುಮಹತ್ಕರ್ಮ ಕೃತಂ ದೈತೇಯವಿಗ್ರಹೇ।।

ನನಗೆ ಕೂಡ ಸರ್ವಭೂತಗಳು ಸಹಿಸಲಾಗದ ವಿಪುಲ ಬಲವಿದೆ. ದೈತ್ಯರೊಂದಿಗೆ ಯುದ್ಧದಲ್ಲಿ ನಾನೂ ಕೂಡ ಮಹಾ ಕರ್ಮಗಳನ್ನು ಮಾಡಿದ್ದೇನೆ.

05103012a ಶ್ರುತಶ್ರೀಃ ಶ್ರುತಸೇನಶ್ಚ ವಿವಸ್ವಾನ್ರೋಚನಾಮುಖಃ।
05103012c ಪ್ರಸಭಃ ಕಾಲಕಾಕ್ಷಶ್ಚ ಮಯಾಪಿ ದಿತಿಜಾ ಹತಾಃ।।

ನಾನೂ ಕೂಡ ದಿತಿಯ ಮಕ್ಕಳಾದ ಶ್ರುತಶ್ರೀ, ಶ್ರುತಸೇನ, ವಿವಸ್ವಾನ್, ರೋಚನಾಮುಖ, ಪ್ರಸಭ, ಕಾಲಕಾಕ್ಷರನ್ನು ಸಂಹರಿಸಿದ್ದೇನೆ.

05103013a ಯತ್ತು ಧ್ವಜಸ್ಥಾನಗತೋ ಯತ್ನಾತ್ಪರಿಚರಾಮ್ಯಹಂ।
05103013c ವಹಾಮಿ ಚೈವಾನುಜಂ ತೇ ತೇನ ಮಾಮವಮನ್ಯಸೇ।।

ಒಮ್ಮೊಮ್ಮೆ ನಿನ್ನ ತಮ್ಮನ ಧ್ವಜಸ್ಥಾನಕ್ಕೆ ಹೋಗಿ ನಾನು ಅವನನ್ನು ರಕ್ಷಿಸಲು ಪ್ರಯತ್ನಿಸುತ್ತೇನೆ ಮತ್ತು ಅವನನ್ನು ನಾನು ನನ್ನ ಬೆನ್ನ ಮೇಲೆ ಏರಿಸಿಕೊಂಡು ಕೊಂಡೊಯ್ಯುತ್ತೇನೆ. ಬಹುಷಃ ಈ ಕಾರಣದಿಂದಲೇ ನೀನು ನನ್ನನ್ನು ಕೀಳಾಗಿ ಕಾಣತ್ತಿದ್ದೀಯೆ.

05103014a ಕೋಽನ್ಯೋ ಭಾರಸಹೋ ಹ್ಯಸ್ತಿ ಕೋಽನ್ಯೋಽಸ್ತಿ ಬಲವತ್ತರಃ।
05103014c ಮಯಾ ಯೋಽಹಂ ವಿಶಿಷ್ಟಃ ಸನ್ವಹಾಮೀಮಂ ಸಬಾಂಧವಂ।।

ಇಂಥಹ ಭಾರವನ್ನು ಹೊರಬಲ್ಲವರು ಬೇರೆ ಯಾರಿದ್ದಾರೆ? ನನಗಿಂತಲೂ ಬಲಶಾಲಿಗಳು ಬೇರೆ ಯಾರಿದ್ದಾರೆ? ನಾನು ಇಷ್ಟು ವಿಶಿಷ್ಟನಾಗಿದ್ದರೂ ಕೂಡ ಅವನನ್ನು ಬಾಂಧವರೊಂದಿಗೆ ಹೊರುತ್ತೇನೆ.

05103015a ಅವಜ್ಞಾಯ ತು ಯತ್ತೇಽಹಂ ಭೋಜನಾದ್ವ್ಯಪರೋಪಿತಃ।
05103015c ತೇನ ಮೇ ಗೌರವಂ ನಷ್ಟಂ ತ್ವತ್ತಶ್ಚಾಸ್ಮಾಚ್ಚ ವಾಸವ।।

ವಾಸವ! ನನ್ನನ್ನ್ನು ಕಡೆಗಣಿಸಿ ನನ್ನ ಭೋಜನಕ್ಕೆ ಅಡ್ಡಿಯಾಗಿ ನೀನೂ ಕೂಡ ನಿನ್ನ ತಮ್ಮನಂತೆ ನನ್ನ ಗೌರವವನ್ನು ಕಳೆಯುತ್ತಿದ್ದೀಯೆ.

05103016a ಅದಿತ್ಯಾಂ ಯ ಇಮೇ ಜಾತಾ ಬಲವಿಕ್ರಮಶಾಲಿನಃ।
05103016c ತ್ವಮೇಷಾಂ ಕಿಲ ಸರ್ವೇಷಾಂ ವಿಶೇಷಾದ್ಬಲವತ್ತರಃ।।

ಅದಿತಿಯಲ್ಲಿ ಹುಟ್ಟಿದವರೆಲ್ಲ ಬಲವಿಕ್ರಮಶಾಲಿಗಳು. ಆದರೆ ಅವರಲ್ಲೆಲ್ಲಾ ನೀನೇ ವಿಶೇಷವಾಗಿರುವ ಬಲಶಾಲಿ.

05103017a ಸೋಽಹಂ ಪಕ್ಷೈಕದೇಶೇನ ವಹಾಮಿ ತ್ವಾಂ ಗತಕ್ಲಮಃ।
05103017c ವಿಮೃಶ ತ್ವಂ ಶನೈಸ್ತಾತ ಕೋ ನ್ವತ್ರ ಬಲವಾನಿತಿ।।

ಆದರೂ ನಾನು ನಿನ್ನನ್ನು ನನ್ನ ಒಂದೇ ಒಂದು ರೆಕ್ಕೆಯ ಮೇಲೆ ಏನೂ ಆಯಾಸವಿಲ್ಲದೇ ಹೊರುತ್ತೇನೆ. ಅಯ್ಯಾ! ಹೀಗಿರುವಾಗ ಇಲ್ಲಿ ಯಾರು ಬಲಶಾಲಿ ಎನ್ನುವುದನ್ನು ನೀನೇ ವಿಮರ್ಶಿಸಿ ಹೇಳು.””

05103018 ಕಣ್ವ ಉವಾಚ।
05103018a ತಸ್ಯ ತದ್ವಚನಂ ಶ್ರುತ್ವಾ ಖಗಸ್ಯೋದರ್ಕದಾರುಣಂ।
05103018c ಅಕ್ಷೋಭ್ಯಂ ಕ್ಷೋಭಯಂಸ್ತಾರ್ಕ್ಷ್ಯಮುವಾಚ ರಥಚಕ್ರಭೃತ್।।

ಕಣ್ವನು ಹೇಳಿದನು: “ಆ ಖಗದ ಜಂಬದ ಮಾತುಗಳನ್ನು ಕೇಳಿ ತೊಂದರೆಗಳನ್ನು ಕೊಡಬಹುದೆಂದು ತಿಳಿದು ರಥಚಕ್ರಭೃತು ವಿಷ್ಣುವು ತಾರ್ಕ್ಷನಿಗೆ ಹೇಳಿದನು.

05103019a ಗರುತ್ಮನ್ಮನ್ಯಸೇಽಆತ್ಮಾನಂ ಬಲವಂತಂ ಸುದುರ್ಬಲಂ।
05103019c ಅಲಮಸ್ಮತ್ಸಮಕ್ಷಂ ತೇ ಸ್ತೋತುಮಾತ್ಮಾನಮಂಡಜ।।

“ಗುರುತ್ಮನ್! ತುಂಬಾ ದುರ್ಬಲನಾಗಿದ್ದರೂ ನಿನ್ನನ್ನು ನೀನೇ ಬಲವಂತನೆಂದು ಏಕೆ ಪರಿಗಣಿಸುತ್ತಿರುವೆ? ಅಂಡಜ! ನಮ್ಮ ಎದಿರು ಈ ರೀತಿ ಆತ್ಮ ಸ್ತುತಿ ಮಾಡಿಕೊಳ್ಳುವುದು ನಿನಗೆ ಸರಿಯಲ್ಲ.

05103020a ತ್ರೈಲೋಕ್ಯಮಪಿ ಮೇ ಕೃತ್ಸ್ನಮಶಕ್ತಂ ದೇಹಧಾರಣೇ।
05103020c ಅಹಮೇವಾತ್ಮನಾತ್ಮಾನಂ ವಹಾಮಿ ತ್ವಾಂ ಚ ಧಾರಯೇ।।

ನನ್ನ ದೇಹವನ್ನು ಈ ಮೂರುಲೋಕಗಳು ಒಂದಾದರೂ ಹೊರಲು ಅಶಕ್ತ. ನಾನು ನನ್ನ ಮತ್ತು ನಿನ್ನ ಭಾರವನ್ನೂ ಸೇರಿ ಹೊತ್ತಿದ್ದೇನೆ.

05103021a ಇಮಂ ತಾವನ್ಮಮೈಕಂ ತ್ವಂ ಬಾಹುಂ ಸವ್ಯೇತರಂ ವಹ।
05103021c ಯದ್ಯೇನಂ ಧಾರಯಸ್ಯೇಕಂ ಸಫಲಂ ತೇ ವಿಕತ್ಥಿತಂ।।

ಬಾ! ನನ್ನ ಈ ಒಂದು ಬಲ ತೋಳನ್ನು ನೀನು ಹೊರು. ನೀನು ಈ ಒಂದನ್ನು ಹೊತ್ತೆಯೆಂದಾದರೆ ನೀನು ಹೇಳಿದ್ದುದು ಸಫಲವಾದಂತೆ.”

05103022a ತತಃ ಸ ಭಗವಾಂಸ್ತಸ್ಯ ಸ್ಕಂಧೇ ಬಾಹುಂ ಸಮಾಸಜತ್।
05103022c ನಿಪಪಾತ ಸ ಭಾರಾರ್ತೋ ವಿಹ್ವಲೋ ನಷ್ಟಚೇತನಃ।।

ಆಗ ಆ ಭಗವಾನನು ತನ್ನ್ನ ತೋಳನ್ನು ಅವನ ಭುಜದ ಮೇಲಿರಿಸಿದನು. ಅವನು ಭಾರದಿಂದ ಬಳಲಿ ವಿಹ್ವಲನಾಗಿ ಮೂರ್ಛಿತನಾಗಿ ಬಿದ್ದನು.

05103023a ಯಾವಾನ್ ಹಿ ಭಾರಃ ಕೃತ್ಸ್ನಾಯಾಃ ಪೃಥಿವ್ಯಾಃ ಪರ್ವತೈಃ ಸಹ।
05103023c ಏಕಸ್ಯಾ ದೇಹಶಾಖಾಯಾಸ್ತಾವದ್ಭಾರಮಮನ್ಯತ।।

ಪರ್ವತಗಳಿಂದ ಕೂಡಿದ ಇಡೀ ಭೂಮಿಯ ಭಾರವು ಅವನ ದೇಹದ ಒಂದು ಶಾಖೆಯಲ್ಲಿದೆ ಎಂದು ಗರುಡನು ಅರಿತನು.

05103024a ನ ತ್ವೇನಂ ಪೀಡಯಾಮಾಸ ಬಲೇನ ಬಲವತ್ತರಃ।
05103024c ತತೋ ಹಿ ಜೀವಿತಂ ತಸ್ಯ ನ ವ್ಯನೀನಶದಚ್ಯುತಃ।।

ಅಚ್ಯುತನು ಅವನನ್ನು ತನ್ನ ಬಲದಿಂದ ಇನ್ನೂ ಹೆಚ್ಚಾಗಿ ಪೀಡಿಸಲಿಲ್ಲ. ಅವನ ಜೀವವನ್ನೂ ತೆಗೆದುಕೊಳ್ಳಲಿಲ್ಲ.

05103025a ವಿಪಕ್ಷಃ ಸ್ರಸ್ತಕಾಯಶ್ಚ ವಿಚೇತಾ ವಿಹ್ವಲಃ ಖಗಃ।
05103025c ಮುಮೋಚ ಪತ್ರಾಣಿ ತದಾ ಗುರುಭಾರಪ್ರಪೀಡಿತಃ।।

ಆ ಖಗನು ಅತಿಭಾರದಿಂದ ಪೀಡಿತನಾಗಿ ವಿಹ್ವಲನಾಗಿ ದೇಹವು ಆಯಾಸಗೊಂಡು, ವಿಚೇತನನಾಗಿ ತನ್ನ ರೆಕ್ಕೆಗಳನ್ನು ಉದುರಿಸತೊಡಗಿದನು.

05103026a ಸ ವಿಷ್ಣುಂ ಶಿರಸಾ ಪಕ್ಷೀ ಪ್ರಣಮ್ಯ ವಿನತಾಸುತಃ।
05103026c ವಿಚೇತಾ ವಿಹ್ವಲೋ ದೀನಃ ಕಿಂ ಚಿದ್ವಚನಮಬ್ರವೀತ್।।

ಆ ಪಕ್ಷಿ ವಿನತಾಸುತನು ಚೇತನವನ್ನು ಕಳೆದುಕೊಂಡು ವಿಹ್ವಲನಾಗಿ ದೀನನಾಗಿ ವಿಷ್ಣುವನ್ನು ಶಿರಸಾ ನಮಸ್ಕರಿಸಿ ಇದೇನನ್ನೋ ಹೇಳಿದನು:

05103027a ಭಗವಽಲ್ಲೋಕಸಾರಸ್ಯ ಸದೃಶೇನ ವಪುಷ್ಮತಾ।
05103027c ಭುಜೇನ ಸ್ವೈರಮುಕ್ತೇನ ನಿಷ್ಪಿಷ್ಟೋಽಸ್ಮಿ ಮಹೀತಲೇ।।

“ಭಗವನ್! ಲೋಕಸಾರದ ಸದೃಶವಾಗಿರುವ, ಸುಂದರವಾದ ಈ ಭುಜದಿಂದ ಮುಕ್ತವಾಗಿ ಹೊರಚಾಚಿ ನೀನು ನನ್ನನ್ನು ಮಹೀತಲಕ್ಕೆ ಅಮುಕಿದ್ದೀಯೆ.

05103028a ಕ್ಷಂತುಮರ್ಹಸಿ ಮೇ ದೇವ ವಿಹ್ವಲಸ್ಯಾಲ್ಪಚೇತಸಃ।
05103028c ಬಲದಾಹವಿದಗ್ಧಸ್ಯ ಪಕ್ಷಿಣೋ ಧ್ವಜವಾಸಿನಃ।।

ದೇವ! ವಿಹ್ವಲನಾಗಿರುವ, ಬಲದ ಅಗ್ನಿಯಲ್ಲಿ ಸುಟ್ಟುಹೋಗಿರುವ, ನಿನ್ನ ಧ್ವಜವಾಸಿಯಾದ ಈ ಅಲ್ಪಚೇತಸ ಪಕ್ಷಿ ನನ್ನನ್ನು ಕ್ಷಮಿಸಬೇಕು.

05103029a ನ ವಿಜ್ಞಾತಂ ಬಲಂ ದೇವ ಮಯಾ ತೇ ಪರಮಂ ವಿಭೋ।
05103029c ತೇನ ಮನ್ಯಾಮ್ಯಹಂ ವೀರ್ಯಮಾತ್ಮನೋಽಸದೃಶಂ ಪರೈಃ।।

ದೇವ! ಪರಮವಿಭೋ! ನಿನ್ನ ಬಲವನ್ನು ನಾನು ತಿಳಿಯಲಿಲ್ಲ. ಆದುದರಿಂದ ನನ್ನಷ್ಟು ಮತ್ತು ನನಗಿಂತಲೂ ಹೆಚ್ಚಿನ ವೀರನು ಬೇರೆ ಯಾರೂ ಇಲ್ಲ ಎಂದು ತಿಳಿದುಕೊಂಡಿದ್ದೆ.”

05103030a ತತಶ್ಚಕ್ರೇ ಸ ಭಗವಾನ್ಪ್ರಸಾದಂ ವೈ ಗರುತ್ಮತಃ।
05103030c ಮೈವಂ ಭೂಯ ಇತಿ ಸ್ನೇಹಾತ್ತದಾ ಚೈನಮುವಾಚ ಹ।।

ಆಗ ಆ ಭಗವಾನನು ಗುರುತ್ಮತನ ಮೇಲೆ ಕರುಣೆತೋರಿದನು. ಮತ್ತು ಸ್ನೇಹದಿಂದ “ಮತ್ತೆ ಈ ರೀತಿ ಮಾಡಬೇಡ!” ಎಂದನು.

05103031a ತಥಾ ತ್ವಮಪಿ ಗಾಂಧಾರೇ ಯಾವತ್ಪಾಂಡುಸುತಾನ್ರಣೇ।
05103031c ನಾಸಾದಯಸಿ ತಾನ್ವೀರಾಂಸ್ತಾವಜ್ಜೀವಸಿ ಪುತ್ರಕ।।

ಗಾಂಧಾರೇ! ಪುತ್ರಕ! ನೀನೂ ಕೂಡ ಎಲ್ಲಿಯವರೆಗೆ ಆ ವೀರ ಪಾಂಡುಸುತರನ್ನು ರಣದಲ್ಲಿ ಎದುರಿಸುವುದಿಲ್ಲವೋ ಅಲ್ಲಿಯವರೆಗೆ ಜೀವಿಸಿರುತ್ತೀಯೆ.

05103032a ಭೀಮಃ ಪ್ರಹರತಾಂ ಶ್ರೇಷ್ಠೋ ವಾಯುಪುತ್ರೋ ಮಹಾಬಲಃ।
05103032c ಧನಂಜಯಶ್ಚೇಂದ್ರಸುತೋ ನ ಹನ್ಯಾತಾಂ ತು ಕಂ ರಣೇ।।

ಪ್ರಹರಿಗಳಲ್ಲಿ ಶ್ರೇಷ್ಠ ವಾಯುಪುತ್ರ ಮಹಾಬಲಿ ಭೀಮ ಮತ್ತು ಇಂದ್ರಸುತ ಧನಂಜಯರು ರಣದಲ್ಲಿ ಯಾರನ್ನು ತಾನೇ ಸಂಹರಿಸಲಾರರು?

05103033a ವಿಷ್ಣುರ್ವಾಯುಶ್ಚ ಶಕ್ರಶ್ಚ ಧರ್ಮಸ್ತೌ ಚಾಶ್ವಿನಾವುಭೌ।
05103033c ಏತೇ ದೇವಾಸ್ತ್ವಯಾ ಕೇನ ಹೇತುನಾ ಶಕ್ಯಮೀಕ್ಷಿತುಂ।।

ದೇವತೆಗಳಾದ ವಿಷ್ಣು, ವಾಯು, ಶಕ್ರ, ಧರ್ಮ, ಅಶ್ವಿಯರನ್ನು ನೀನು ಯಾವ ಕಾರಣದಿಂದ ಗೆಲ್ಲಲು ಬಯಸುತ್ತೀಯೆ?

05103034a ತದಲಂ ತೇ ವಿರೋಧೇನ ಶಮಂ ಗಚ್ಚ ನೃಪಾತ್ಮಜ।
05103034c ವಾಸುದೇವೇನ ತೀರ್ಥೇನ ಕುಲಂ ರಕ್ಷಿತುಮರ್ಹಸಿ।।

ನೃಪಾತ್ಮಜ! ಆದುದರಿಂದ ವಿರೋಧಿಸುವುದನ್ನು ಬಿಟ್ಟು ಶಾಂತಿಯತ್ತ ನಡೆ. ವಾಸುದೇವನ ತೀರ್ಥದಿಂದ ಕುಲವನ್ನು ರಕ್ಷಿಸಿಕೋ!

05103035a ಪ್ರತ್ಯಕ್ಷೋ ಹ್ಯಸ್ಯ ಸರ್ವಸ್ಯ ನಾರದೋಽಯಂ ಮಹಾತಪಾಃ।
05103035c ಮಾಹಾತ್ಮ್ಯಂ ಯತ್ತದಾ ವಿಷ್ಣೋರ್ಯೋಽಯಂ ಚಕ್ರಗದಾಧರಃ।।

ಈ ಮಹಾತಪಸ್ವಿ ನಾರದನು ಚಕ್ರಗದಾಧರ ಈ ವಿಷ್ಣುವಿನ ಮಹಾತ್ಮೆಗಳೆಲ್ಲವನ್ನೂ ಪ್ರತ್ಯಕ್ಷವಾಗಿ ನೋಡಿದ್ದಾನೆ.””

05103036 ವೈಶಂಪಾಯನ ಉವಾಚ।
05103036a ದುರ್ಯೋಧನಸ್ತು ತಚ್ಚ್ರುತ್ವಾ ನಿಃಶ್ವಸನ್ಭೃಕುಟೀಮುಖಃ।
05103036c ರಾಧೇಯಮಭಿಸಂಪ್ರೇಕ್ಷ್ಯ ಜಹಾಸ ಸ್ವನವತ್ತದಾ।।

ವೈಶಂಪಾಯನನು ಹೇಳಿದನು: “ಅದನ್ನು ಕೇಳಿ ದುರ್ಯೋಧನನು ನಿಟ್ಟುಸಿರು ಬಿಡುತ್ತ, ಮುಖ ಗಂಟುಮಾಡಿಕೊಂಡು, ರಾಧೇಯನನ್ನು ನೋಡಿ ಜೋರಾಗಿ ನಕ್ಕನು.

05103037a ಕದರ್ಥೀಕೃತ್ಯ ತದ್ವಾಕ್ಯಮೃಷೇಃ ಕಣ್ವಸ್ಯ ದುರ್ಮತಿಃ।
05103037c ಊರುಂ ಗಜಕರಾಕಾರಂ ತಾಡಯನ್ನಿದಮಬ್ರವೀತ್।।

ಋಷಿ ಕಣ್ವನ ಆ ಮಾತುಗಳನ್ನು ಅಲ್ಲಗಳೆದು ದುರ್ಮತಿಯು ಆನೆಯ ಸೊಂಡಿಲಿನಂತಿದ್ದ ತನ್ನ ತೊಡೆಯನ್ನು ಚಪ್ಪರಿಸಿ ಹೇಳಿದನು:

05103038a ಯಥೈವೇಶ್ವರಸೃಷ್ಟೋಽಸ್ಮಿ ಯದ್ಭಾವಿ ಯಾ ಚ ಮೇ ಗತಿಃ।
05103038c ತಥಾ ಮಹರ್ಷೇ ವರ್ತಾಮಿ ಕಿಂ ಪ್ರಲಾಪಃ ಕರಿಷ್ಯತಿ।।

“ಮಹರ್ಷೇ! ಈಶ್ವರನಿಂದ ಹೇಗೆ ಸೃಷ್ಟಿಸಲ್ಪಟ್ಟಿದ್ದೇನೋ, ನನ್ನ ಭವಿಷ್ಯ ಮತ್ತು ದಾರಿಯು ಹೇಗೆ ನಡೆಸುತ್ತದೆಯೋ ಹಾಗೆಯೇ ನಾನು ಮಾಡುತ್ತೇನೆ. ಈ ಪ್ರಲಾಪವು ಏಕೆ?””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಮಾತಲಿವರಾನ್ವೇಷಣೇ ತ್ರ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಮಾತಲಿವರಾನ್ವೇಷಣೆಯಲ್ಲಿ ನೂರಾಮೂರನೆಯ ಅಧ್ಯಾಯವು.